ಭವಿಷ್ಯದಲ್ಲಿ ಮನುಕುಲ ಅಪಾಯ ಕಟ್ಟಿಟ್ಟಬುತ್ತಿ..!
ಹೌದು ಎನ್ನುತ್ತವೆ ಅರಣ್ಯ ಇಲಾಖೆಯು ಮೂಲಗಳು. ಅರಣ್ಯ ಪ್ರದೇಶಗಳು ದಿನೇ ದಿನೇ ಕಣ್ಮರೆಯಾಗಿ ಆ ಜಾಗದಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತುತ್ತಿರುವುದರಿಂದ ಭವಿಷ್ಯದಲ್ಲಿ ಮನುಕುಲಕ್ಕೆ ಅಪಾಯ ಎದುರಾಗಲಿದೆ.
೧ ಕೋಟಿ ೩೦ ಲಕ್ಷ ಹೆಕ್ಟೇರ್ ಅರಣ್ಯವನ್ನು ಇತರೆ ಬಳಕೆಗಾಗಿ ಪರಿವರ್ತಿಸಲಾಗಿದೆ. ಮಾತ್ರವಲ್ಲ, ನೈಸರ್ಗಿಕ ಕಾರಣಗಳಿಂದಾಗಿ ನಾಶವಾಗುತ್ತಿದೆ. ಅರಣ್ಯ ನಾಶದಿಂದಾಗಿ ೨೮ ಸಾವಿರ ಪ್ರಬೇಧಗಳು ಮುಂದಿನ ೨೫ ವರ್ಷದಲ್ಲಿ ಅವಸಾನದ ಅಂಚಿಗೆ ಹೋಗಲಿವೆ. ೨೦೩೦ರ ಹೊತ್ತಿಗೆ ಕೇವಲ ಶೇ.೧೦ರಷ್ಟು ಮಾತ್ರ ಕಾಡುಗಳು ಉಳಿಯುವ ಭೀತಿ ಎದುರಾಗಿದೆ. ಗಿಡ-ಮರಗಳನ್ನು ಹೆಚ್ಚಾಗಿ ಕಡಿಯುವುದರಿಂದ ಮುಂದಿನ ೧೦೦ ವರ್ಷದಲ್ಲಿ ಎಲ್ಲವೂ ಕಣ್ಮರೆಯಾಗಲಿದ್ದು, ಅಚ್ಚು ಹಸಿರು ಮಾಯಾವಾಗಲಿದೆ ಎಂಬ ಆತಂಕ ಪ್ರಾರಂಭವಾಗಿದೆ.
ಅಚ್ಚರಿಯ ವಿಷಯವೆಂದರೆ ವಿಶ್ವದ ಶೇ.೧೦ರಷ್ಟು ಕಾಡುಗಳು ಮಾತ್ರ ಸಂರಕ್ಷಿತ ಪ್ರದೇಶಗಳಾಗಿವೆ. ಇದು ಸರಿ ಸುಮಾರು ಭಾರತದ ದೇಶದ ಗಾತ್ರವಾಗಿದೆ. ಮುಂದಿನ ಪೀಳಿಗೆಗೆ ಅರಣ್ಯ ಉಳಿಸಿ ಕಾಡುಪ್ರಾಣಿಗಳಿಗೆ ನೆರವಾಗಲು ಪ್ಲಾಸ್ಟಿಕ್ ನಿಷೇಧಿಸಬೇಕಾಗಿದ್ದು, ಗಿಡಬೆಳೆಸಿ, ಮರ ಉಳಿಸಬೇಕಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಈ ಭೂಮಿ ಜನ್ಮ ನೀಡಿದೆ. ಪ್ರಕೃತಿಯೇ ಮಾತೆ ಇದ್ದಂತೆ. ಇಂತಹ ಪ್ರಕೃತಿ ಮಡಿಲಲ್ಲಿ ಇರುವ ಜೀವ ಸಂಕುಲಕ್ಕೆ ಜೀವಸೆಲೆಯಾಗಿರುವುದೇ ಅರಣ್ಯ. ಕಾಡು ಇಲ್ಲದೇ ಮಳೆ ಇಲ್ಲ, ಮಳೆ ಇಲ್ಲದೇ ಬೆಳೆ ಇಲ್ಲ. ಬೆಳೆ ಇಲ್ಲದೆ ಹೋದರೆ ಮನುಕುಲದ ಅಸ್ತಿತ್ವವೇ ಶೂನ್ಯ ಎಂಬುದನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ.
ಮಾನವನ ಸ್ವಾರ್ಥ ಪ್ರಪಂಚದಲ್ಲಿ ವನ್ಯ ಸಂಪತ್ತನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಹೀಗಾಗಿ ಅರಣ್ಯ ಇಲಾಖೆಯು ಅರಣ್ಯ ರಕ್ಷಣೆಗೆ ಯೋಜನೆಗಳು ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರಲ್ಲಿ ಪ್ರಮುಖವಾಗಿರುವುದು ವನಮಹೋತ್ಸವ. ವನ್ಯ ಸಂಪತ್ತು ಉಳಿಸುವ ಸಲುವಾಗಿ ಕರ್ನಾಟಕ ಅರಣ್ಯ ಇಲಾಖೆ ಪ್ರತಿ ವರ್ಷ ವನಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದೆ. ರಾಜ್ಯದ ೧೩ ವೃತ್ತದಲ್ಲಿ ಸಂಘಸಂಸ್ಥೆಗಳು, ಶಾಲಾ-ಮಕ್ಕಳು, ಎನ್‌ಜಿಓಗಳು, ಗಣ್ಯರು ಮತ್ತು ಸಾರ್ವಜನಿಕ ಸಹಯೋಗದೊಂದಿಗೆ ಲಕ್ಷ ಲಕ್ಷ ಸಸಿ ನೆಟ್ಟು ಸಮೃದ್ಧ ಕರ್ನಾಟಕಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಿತು. ಇದರಡಿಯಲ್ಲಿ ೯೯,೬೫೬ ಸಸಿಗಳನ್ನು ತರಿಸಲಾಗಿದ್ದು, ೧,೪೭,೩೬೦ ಸಸಿಗಳನ್ನು ನೆಡಲಾಗಿದೆ. ೨,೭೨,೧೦೫ ಸಸಿಗಳನ್ನು ಪ್ರಸಕ್ತ ವರ್ಷದಲ್ಲಿ ನಡೆಯುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದ್ದು, ಜೂನ್ ತಿಂಗಳವರೆಗೆ ೧,೪೭,೩೬೦ ಸಸಿಗಳನ್ನು ನೆಡಲಾಗಿದೆ. ೨೧,೮೦೯ ಹೆಕ್ಟೇರ್ ಭೂ ಪ್ರದೇಶದಲ್ಲಿ ಸಸಿ ನಡೆಸಲಾಗಿದೆ.
ವನಮಹೋತ್ಸವದಿಂದ ಉಪಯೋಗ:
ವನಮಹೋತ್ಸವದಿಂದ ಕಾಡು, ಗ್ರಾಮಗಳ ಗೋಮಾಳಗಳಲ್ಲಿ ಹಣ್ಣುಗಳ ಬೆಳೆ ಹೆಚ್ಚಾಗುತ್ತದೆ. ಕೃಷಿಕರ ಜಮೀನಿನ ಸುತ್ತ ಆಶ್ರಯ ಪಟ್ಟಿಗಳನ್ನು ರಚಿಸುವುದಕ್ಕೆ ಸಹಾಯವಾಗಲಿದೆ. ಜಾನುವಾರುಗಳಿಗೆ ಮೇವು ಒದಗಿಸಲು ಸಹಾಯವಾಗಲಿದೆ. ಮಣ್ಣಿನ ಸಂರಕ್ಷಣೆಯನ್ನು ಹೆಚ್ಚಿಸುವ ಸಹಕಾರಿಯಾಗಲಿದೆ. ಮಣ್ಣಿನ ಸವಕಳಿಯನ್ನ ತಡೆಯುವ ಉದ್ದೇಶದಿಂದ ಸಸಿ ನೆಡಲಾಗುತ್ತದೆ.
ವನಮಹೋತ್ಸವ ಹುಟ್ಟಿಕೊಂಡಿದ್ದು ಹೇಗೆ?
೧೯೪೭ರ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು, ಇದೇ ಜುಲೈ ತಿಂಗಳಲ್ಲಿ ದೆಹಲಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವನ್ಯ ಸಂಪತ್ತು ಉಳಿಸುವ ಮೊದಲ ಕಾರ್ಯಕ್ರಮದಲ್ಲಿ ಅಂದಿನ ಕಾಂಗ್ರೆಸ್ ನಾಯಕರಾದ ಡಾ.ರಾಜೇಂದ್ರ ಪ್ರಸಾದ್, ಅಬ್ದುಲ್ ಕಲಾಂ ಅಜಾದ್, ಜವಾಹರ್‌ಲಾಲ್ ನೆಹರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಬಳಿಕ ೧೯೫೦ರಲ್ಲಿ ಇಡೀ ದೇಶದ ಸಂಪತ್ತನ್ನುಉಳಿಸಿಕೊಳ್ಳುವ ಅನಿವಾರ್ಯತೆ ಇತ್ತು. ಆಗ ಹಲವು ಯೋಜನೆಗಳ ಪೈಕಿ ಹುಟ್ಟಿಕೊಂಡಿದ್ದೆ ವನಮಹೋತ್ಸವ. ಅಂದಿನ ಕೃಷಿ ಸಚಿವರಾಗಿದ್ದ ಕನಯ್ಯಲಾಲ್ ಮುನ್ಸಿ ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಪರಿಸರ ಸಂರಕ್ಷಣೆ ಉದ್ದೇಶದಿಂದ ಒಂದು ವಾರ ಇದನ್ನು ಅರಣ್ಯ ಹಬ್ಬ ಅಥವಾ ಉತ್ಸವ ರೀತಿಯಲ್ಲಿ ಆಚರಿಸಲು ಆದೇಶ ನೀಡಿದರು.
ಜು.೧ರಿಂದ ಜು.೭ರವರೆಗೆ ನಡೆಯುವ ವನಮಹೋತ್ಸವ ಕಾಲಕ್ರಮೇಣ ದೇಶದಲ್ಲಿ ಪ್ರತಿ ವರ್ಷ ಒಂದು ಚಳವಳಿಯಾಗಿ ಮಾರ್ಪಟ್ಟಿದೆ. ಕಾಡು ಉಳಿಸುವ ಸಲುವಾಗಿ ಅರಣ್ಯ ಇಲಾಖೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ವಿಶೇಷವೆಂದರೆ ಒಂದು ಮರ ಕಡಿದರೆ ೧೦ ಸಸಿಗಳನ್ನು ನೆಡಬೇಕು ಎನ್ನುವುದು ಅರಣ್ಯ ಇಲಾಖೆಯ ಆದೇಶವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ಮತ್ತು ಜಾಗತಿಕ ತಾಪಮಾನ ಕಡಿಮೆ ಮಾಡುವುದಕ್ಕೆ ಒಂದು ಉತ್ತಮ ಮಾರ್ಗವೇ ಸಸಿಗಳನ್ನು ನೆಡುವ ಕುರಿತು ಜಾಗೃತಿ ಮೂಡಿಸುವುದಾಗಿದೆ. ಮನ್ಸೂನ್ ಋತುವಿನ ವೇಳೆ ಸಸಿಗಳನ್ನು ನೆಡುವುದರಿಂದ ಗಿಡಗಳ ಬೆಳವಣಿಗೆಗೆ ಉತ್ತಮ ಹವಾಗುಣ ಇರಲಿದೆ.
ಲೇಖನ : ಪ್ರಭು ಸ್ವಾಮಿ