ಸಿನಿಮಾದ ಹಿಂದೆ ಬೆನ್ನೆತ್ತಿ ಹೊರಟ ಈ ಪ್ರತಿಭೆ

ಮಲ್ಟಿಪ್ಲಕ್ಸ್ ಸಿನಿಮಾ ಹಾಲ್ ನಲ್ಲಿ ಕೂತು ಒಂದು ಕೈಯಲ್ಲಿ ಪಾಪ್ ಕಾರ್ನ್, ಇನ್ನೊಂದು ಕೈಯಲ್ಲಿ ಕೂಲ್ ಡ್ರಿಂಕ್ಸ್ ಹಿಡಿದು ದೊಡ್ಡ ಪರದೆಯ ಮುಂದೆ ಕೂತು ಸಿನಿಮಾ ನೋಡ್ತಿದ್ರೆ ಅದರ ಮಜಾನೇ ಬೇರೆ. ಸಿನಿಮಾ ನೋಡಿ ಹೊರಗೆ ಬಂದು ಎಷ್ಟೋ ದಿನ ಕಳೆದ್ರೂ, ಕೂತ್ರು- ನಿಂತ್ರು ಸಿನಿಮಾದೇ ಗುಂಗು ನಮ್ಮನ್ನು ಕಾಡುತ್ತಿರುತ್ತದೆ. ಹಾಳಾದ್ದು, ನಮ್ಮನ್ನ ಬಿಟ್ಟು ದೂರ ಸರಿಯೋ ಮಾತೇ ಬರೋಲ್ಲ. ಸಿನಿಮಾದ ಮಾಯೆಯೇ ಹಾಗೆ ಸಿನಿಮಾದಲ್ಲಿನ ಹೀರೊನ ಎಂಟ್ರಿ, ಹೀರೋಯಿನ್ ಆ ಝಲಕ್ ಕ್ ಗಳು ಕಲ್ಪನಾ ಸುಳಿಯಲ್ಲಿ ತೇಲಿ ಬಿಡುತ್ತವೆ. ಆ ಸುಳಿಯಿಂದ ಮಿಂದೆದ್ದ ನಂತರ ನಮ್ಮಲ್ಲಿಯೂ ಹೀರೊ ಅಥವಾ ಹೀರೋಯಿನ್ ಥರ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಒಂದು ಚಿಕ್ಕ ಆಸೆಗಳು ಮನಸ್ಸಿನಲ್ಲಿ ಚಿಗುರೊಡೆಯುತ್ತದೆ. ಇದು ಆಸೆಯೋ, ಹುಚ್ಚೊ ಗೊತ್ತಿಲ್ಲ.

ಸಿನಿಮಾದ ಹಿಂದೆ ಹೋದವರೆಲ್ಲ ಯಶಸ್ಸು ಕಂಡಿದ್ದಾರೆ ಎನ್ನುವುದು ಸುಳ್ಳು. ಹಾಗೆಂದ ಮಾತ್ರಕ್ಕೆ ಕಾಣದೆ ಹೋಗಿದ್ದಾರೆ ಎನ್ನುವುದು ಕೂಡ ಸುಳ್ಳು. ಹೀಗೆ ಆಸೆಯ ಬೆನ್ನಟ್ಟಿ ಹೋದವರಲ್ಲಿ ಕೆಲವರು ದೊಡ್ಡ ಸ್ಟಾರ ನಟರಾಗಿದ್ದಾರೆ. ಕೆಲವರು ನಿಲುಕದ ದ್ರಾಕ್ಷಿ ಎಂದು ಹಿಂದೆಕ್ಕೆ ಸರಿದಿದ್ದಾರೆ. ಅದರಲ್ಲಿ ಇನ್ನು ಕೆಲವರು ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೇ ಇಲ್ಲೇ ಏನಾದರೂ ಸಾಧಿಸಿಯೇ ತೋರಿಸುತ್ತೇನೆ ಎಂದು ಹಿಡಿದ ಹಠವನ್ನು ಬಿಡದೆ ತೊಡೆ ತಟ್ಟಿ ನಿಂತಿದ್ದಾರೆ. ಇಂತಹ ಛಲ ಹಿಡಿದವರಲ್ಲಿ ಕನ್ನಡದ ಕಲಾವಿದ ಪೃಥ್ವಿ ಯಾದವ್ ಕೂಡ ಒಬ್ಬರು.

ಪೃಥ್ವಿ ಯಾದವ ಎಂದರೆ ಕನ್ನಡದ ಯಾವ ಹೀರೊ ಎಂದು ನೀವು ಊಹಿಸುತ್ತಿರಬಹುದು. ಅವರು ಯಾವ ಸಿನಿಮಾದಲ್ಲಿ ಹೀರೊನ್ನು ಅಲ್ಲ. ಯಾವ ಸಿನಿಮಾದಲ್ಲಿ ವಿಲನ್ ಅಲ್ಲ. ಆದರೆ ಕನ್ನಡದಲ್ಲಿ ಸರಿ ಸುಮಾರು ೪೦ಕ್ಕೂ ಹೆಚ್ಚು ಸಿನಿಮಾ, ತೆಲುಗುವಿನಲ್ಲಿ ೫ ಸಿನಿಮಾ ಮತ್ತು ತಮಿಳಿನಲ್ಲಿ೫ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟೆಲ್ಲ ಸಿನಿಮಾಗಳಲ್ಲಿ ನಟಿಸಿದ ಈ ಪ್ರತಿಭೆ ಯಾರಿರಬಹುದೆಂದು ತಲೆ ಕೆರೆದು ಕೊಂಡರೆ ಏನು ಉಪಯೋಗವಿಲ್ಲ. ಅವರು ಯಾರಿಗೂ ಥಟ್ ಅಂತ ನೆನಪಿಗೂ ಬರೋದಿಲ್ಲ.ಕಾರಣ ಅವರು ನಟಿಸಿದ್ದು ೪೦ ಸಿನಿಮಾಗಳಲ್ಲಾದರೂ ಅವರಿಗೆ ಸಿಕ್ಕಂತಹ ಪಾತ್ರಗಳು ಸಣ್ಣಪುಟ್ಟದ್ದು. ದೊಡ್ಡ ದೊಡ್ಡ ಸ್ಟಾರ್ ನಟರಿರುವ ಸಿನಿಮಾಗಳಲ್ಲಿ ನಾಯಕನ ಬಲಗೈ ಬಂಟನಾಗಿ, ವಿಲನ್ ಗುಂಪಿನಲ್ಲಿ ಒಬ್ಬನಾಗಿ, ನಾಯಕಿಯ ಅಣ್ಣನಾಗಿ ಹೀಗೆ ಹಲವಾರು ಸಣ್ಣ ಪಾತ್ರಗಳು ಇವರ ಪಾಲಿಗೆ ಒದಗಿ ಬಂದವು.

ಬಾಲ್ಯದಲ್ಲಿಯೇ ನಾಟಕ, ಮಿಮಿಕ್ರಿ ಮೂಲಕ ಜನರ ಗಮನ ಸೆಳೆದಿದ್ದ ಅವರು ಶಾಲೆಗೆ ಇವರೇ ಹೀರೊ. ಅವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಪ್ರಶಂಸೆಗಳು, ಚಪ್ಪಾಳೆಗಳು, ಬಹುಮಾನಗಳು, ಸನ್ಮಾನಗಳು ಸಿಕ್ಕವು. ತಮ್ಮ ಪ್ರತಿಭೆಯನ್ನು ಮುಂದೆ ಇಟ್ಟುಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು. ಉತ್ತಮ ವೇದಿಕೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದುಕೊಂಡು ಹೊರಟಿದ್ದು ಸಿನಿಮಾದತ್ತ.

ಕಲಾವಿದನಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರುವುದು ಸಹಜ. ಪೃಥ್ವಿಯವರಿಗೆ ಮೊದ ಮೊದಲು ಬಣ್ಣ ಬಣ್ಣವಾಗಿ ಕಂಡಿದ್ದ ಚಿತ್ರರಂಗ ಅನಂತರ ದಿನಗಳಲ್ಲಿ ಅದರ ನೈಜ್ಯ ಬಣ್ಣ ಕಾಣತೊಡಗಿತು. ಚಿತ್ರರಂಗದಲ್ಲಿ ಬೆಳೆಯಬೇಕೆಂದರೆ ಸ್ವತಃಹ ತಾವೇ ಹಣ ಹಾಕಿ ಸಿನಿಮಾ ಮಾಡಬೇಕು. ಅಥವಾ ಹಿರಿಯರ ನಾಮ ಬಲವಿರಬೇಕು. ಈ ಎರಡು ಬಲಗಳು ಇಲ್ಲದೆ ಹೋದರೆ ‘ಸಿನಿಮಾ’ ಎನ್ನುವುದು ಕನಸ್ಸಿನ ಲೋಕವೇ ಸರಿ ಎನ್ನುವ ಸತ್ಯದ ಅರಿವಾದಾಗ ಪೃಥ್ವಿ ಅವರ ಕೈಯಿಂದ ಸಾಕಷ್ಟು ಹಣ ಜಾರಿ ಹೋಗಿತ್ತು.

ಆ ಪರಿಸ್ಥಿತಿಯಿಂದ ಎಚ್ಛೆತ್ತುಕೊಂಡ ಅವರು ಒಂದು ಗಟ್ಟಿ ನಿರ್ಧಾರಕ್ಕೆ ಬಂದರು. ತಮ್ಮಲ್ಲಿ ಪ್ರತಿಭೆ ಇದೆ. ದುಡಿಯುವ ಶಕ್ತಿ ಇದೆ ಇನ್ನು ಮುಂದೆ ತಮ್ಮ ಕೈಯಿಂದ ಯಾವುದೇ ಹಣ ಹಾಕಬಾರದು ಹಾಗು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು ಎಂದು ತಮ್ಮ ಪಾಲಿಗೆ ಬಂದಂತಹ ಸಣ್ಣ ಪಾತ್ರಗಳನ್ನು ಪ್ರೀತಿಯಿಂದ ಒಪ್ಪಿಕೊಂಡರು. ಐರಾವತ, ಬಂಡಾರಿ, ದಂಡು, ಡೇಂಜರ್ ಜೋನ್, ಹೊಂಬಣ್ಣ ಸೇರಿದಂತೆ ೪೦ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮುಂದೊಂದು ದಿನ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಪಾತ್ರಗಳು ಸಿಕ್ಕೇ ಸುಗುತ್ತದೆ ಎನ್ನುವ ಆತ್ಮವಿಶ್ವಾಸ ಈಗಲೂ ಮನೆ ಮಾಡಿದೆ.

ಆದರೆ ಅವರ ಆಸೆ ಕನ್ನಡ ಚಿತ್ರರಂಗದಲ್ಲಿ ಈಡೇರುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಏಕೆಂದರೆ ನಮ್ಮ ಕನ್ನಡ ಚಿತ್ರರಂಗ ಪರಭಾಷಿಗರಿಗೆ ಮಣೆ ಹಾಕುವುದು ಹೆಚ್ಚು.ಈಗಾಗಲೇ ಪೃಥ್ವಿ ಅವರ ಪ್ರತಿಭೆಯನ್ನು ಕಂಡಿರುವ ತೆಲಗು, ತಮಿಳು ಚಿತ್ರರಂಗ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ಆದರೆ ಪೃಥ್ವಿಯವರಿಗೆ ಕನ್ನಡ ಸಿನಿಮಾದಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇದೆ. ವ್ಯಥೆಯೆಂದರೆ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಷ್ಟು ಒಳ್ಳೆಯ ಪಾತ್ರಗಳು ಬರುತ್ತಿಲ್ಲ.

ಆದರೆ ಇತ್ತೀಚಿಗೆ ‘ಒನ್ ರಿಪ್’, ‘ಚಿ.ತು.ಸಂಘ’,ರಘಿರ ಮತ್ತು ‘ರಿವೈ೦ಡ್’ ಎನ್ನುವ ಕನ್ನಡ ಸಿನಿಮಾಗಳಲ್ಲಿ ಮಹತ್ವದ ಪಾತ್ರ ಸಿಕ್ಕಿರುವುದು ಅವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವನ್ನು ತಂದಿದೆ. ಇನ್ನು ತೆಲುಗುವಿನಲ್ಲಿ ಎರಡು ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ನಿರ್ದೇಶಕರು ಈ ಪ್ರತಿಭೆಯತ್ತ ಬೆಳಕನ್ನು ಹರಿಸಿದರೇ ಕನ್ನಡದಲ್ಲಿ ಬಹು ಎತ್ತರಕ್ಕೆ ಬೆಳೆಯ ಬಹುದಾದಂತಹ ಪ್ರತಿಭಾವಂತ ನಟ ಪೃಥ್ವಿ ಯಾದವ್.

ಅಷ್ಟೇ ಅಲ್ಲ ಪೃಥ್ವಿ ಯಾದವ್ ಅವರಂತಹ ಸಾಕಷ್ಟು ಯುವ ಕಲಾವಿದರು ನಮ್ಮ ಕರುನಾಡಿನಲ್ಲಿದ್ದಾರೆ. ಆದರೆ ಅವರನ್ನು ಹುಡುಕಿ ತಗೆಯುವ ಕೆಲಸ ಕನ್ನಡದ ಇಂದಿನ ನಿರ್ದೇಶಕರು ಮಾಡಬೇಕಿದೆ. ಇಲ್ಲವಾದರೆ ನಮ್ಮಲ್ಲಿ ಕಬ್ಬಿಣವಾಗಿ ಕಂಡ ಪ್ರತಿಭೆಗಳು, ಪರರಾಜ್ಯದಲ್ಲಿ ಅಮೂಲ್ಯ ರತ್ನವಾಗಿ ಹೊರಹೊಮ್ಮಲಿದ್ದಾರೆ. ಈಗಾಗಲೇ ಕಿಶೋರ, ಪ್ರಕಾಶ ರೈ ರಂತಹ ಉತ್ತಮ ಕಲಾವಿದರು ಹೊರರಾಜ್ಯದಲ್ಲಿ ಮಿಂಚಿದ್ದು ಉದಾಹರಣೆಗಳಿವೆ. ನಮ್ಮಲ್ಲಿನ ಪ್ರತಿಭೆ ಬೇರೆ ಎಲ್ಲೊ ಹೋಗಿ ಮಿಂಚುವುದಕ್ಕಿಂತ ನಮ್ಮಲ್ಲಿಯೇ ದೊಡ್ಡಗಾಗಿ ಮಿಂಚಲಿ ಎನ್ನುವುದು ಆಕೃತಿ ಕನ್ನಡದ ಆಶಯ.

– ಶಾಲಿನಿ ಪ್ರದೀಪ್

ak.shalini@outlook.com

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW