ಕಾಳಿ ಕಣಿವೆಯಲ್ಲಿ ಅಲೆಮಾರಿಗಳ ಹೆಜ್ಜೆಗಳು- ಖ್ಯಾತ ಬರಹಗಾರ ಹೂಲಿಶೇಖರ್ ರ ನೆನಪುಗಳು

ಖ್ಯಾತ ನಾಟಕಕಾರ ಮತ್ತು ಚಿತ್ರಸಂಭಾಷಣಾಕಾರ ಹೂಲಿಶೇಖರ್ ಅವರ ಕಾಳೀ ಕಣಿವೆಯ ರೋಚಕ ಕತೆಗಳು ಆಕೃತಿಕನ್ನಡದಲ್ಲಿ ಸಂಚಿಕೆಯ ರೂಪದಲ್ಲಿ ಬರಲಿವೆ. ೧೯೭೦ ರಿಂದ ಮೂರು ವರ್ಷಗಳ ಕಾಲ ಸರಕಾರದ ಅನ್ವೇಷಣಾ ಇಲಾಖೆ ಮತ್ತು ಸರ್ವೇ ಆಫ್‌ ಇಂಡಿಯಾದಲ್ಲಿಕಾರ್ಯ ನಿರ್ವಹಿಸಿದ ಅವರು, ಇಡೀ ಕಾಳೀ ಕಣಿವೆಯನ್ನು ಹೊಕ್ಕು ಸುತ್ತಾಡಿದ್ದಾರೆದಾಂಡೇಲಿಯ ಸುತ್ತಮುತ್ತಲಿನ ಪರಿಸರದ ಕತೆಗಳನ್ನು ಅವರ ಲೇಖನದ ರೂಪದಲ್ಲಿ ನಿಮ್ಮ ಮುಂದೆ ಬರಲಿವೆ.

ಹೂಲಿಶೇಖರ್ ಅವರ ಕಿರುಪರಿಚಯ :

ಹೂಲಿಶೇಖರ್ ಅವರು ಹುಟ್ಟಿ ಬೆಳೆದದ್ದು ಬಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ. ಸಣ್ಣ ವಯಸ್ಸಿನಲ್ಲಿಯೇ ಬರವಣಿಗೆಯಲ್ಲಿ ಸಾಕಷ್ಟು ಆಸಕ್ತಿಯನ್ನು ಮೂಡಿಸಿಕೊಂಡವರು. ಏಳನೇಯ ತರಗತಿಯಲ್ಲಿರುವಾಗಲೇಜೈ ಜವಾನ್, ಜೈ ಕಿಸಾನ್ಎನ್ನುವ ನಾಟಕವನ್ನು ಬರೆದು, ಜಿಲ್ಲೆಗೆ ಪ್ರಥಮ ಬಹುಮಾನವನ್ನು ತಂದುಕೊಟ್ಟರು. ಮುಂದೆ ಕೆಪಿಸಿಲ್ ನಲ್ಲಿ ಉದ್ಯೋಗದಲ್ಲಿಯೇ ಇದ್ದುಕೊಂಡೇ ರೇಡಿಯೋ ಹಾಗು ಹಲವಾರು ನಾಟಕ ತಂಡಗಳಿಗೆ ನಾಟಕಗಳನ್ನು ಬರೆದುಕೊಟ್ಟಿದ್ದಾರೆ. ಹೀಗೆ ೨೦೦ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಮೂಡಲಮನೆ ಸೇರಿದಂತೆ ೨೦ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಚಿತ್ರಕತೆಸಂಭಾಷಣೆಯನ್ನು ಬರೆದಿದ್ದಾರೆ.


೧೯೭೦ ರ ಇಸ್ವಿ. ನನಗಿನ್ನೂ ಚನ್ನಾಗಿ ನೆನಪಿದೆ

ಸಹ್ಯಾದ್ರಿಯ ದಟ್ಟ ಹಸಿರಿನ ಮಧ್ಯದಲ್ಲಿದ್ದ ವಿರಳ ಜನಸಂಖ್ಯೆಯ ಊರು ಸೂಪಾ. ಅಂದು ಅದು ಕಾರವಾರ ಜಿಲ್ಲೆಯ ತಾಲೂಕು ಸ್ಥಳ. ಕಾಳಿ ಮತ್ತು ಪಾಂಡ್ರಿ ನದಿಗಳು ಸಂಗಮ ವಾಗುವುದು ಇದೇ ಊರಿನಲ್ಲಿ. ಇಲ್ಲಿ ಆಗ ಮನೆ ಮಾತಾಗಿದ್ದ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿದ್ದರು. ಸೂಪಾ ಊರಿನ ಪೂರ್ವಕ್ಕೆ ಎರಡು ಕಿ.ಮೀ.ದೂರದಲ್ಲಿ ಎರಡು ಬೆಟ್ಟಗಳ ನಡುವೆ ಹರಿದು ಹೋಗುತ್ತಿದ್ದಳು ಕಾಳಿ. ಈ ಸ್ಥಳಕ್ಕೆ ಬೋರುಗುಂಡಿ ಎಂದು ಹೆಸರು. ಇದೇ ಜಾಗದಲ್ಲಿಯೇ ಸೂಪಾ ಆಣೆಕಟ್ಟು ಕಟ್ಟುವುದು ಎಂದು ಸರಕಾರ ನಿರ್ಧರಿಸಿತ್ತು. ಈ ಜಾಗದಲ್ಲಿ ಸರೋವರದಂಥ ದೊಡ್ಡ ನದಿಯ ಜಲರಾಶಿಯಿತ್ತು. ಅದಕ್ಕೇ ಊರಿನವರು ಬೋರಗುಂಡಿ ಎಂದು ಕರೆದು ಅಲ್ಲಿ ವರ್ಷಕ್ಕೆ ಒಂದು ಸಲ ಶೂರ್ಪನಖಿಯ ಹೆಸರಲ್ಲಿ ಜಾತ್ರೆಯನ್ನೂ ಮಾಡುತ್ತಿದ್ದರು.

ಸ್ಥಳೀಯ ಐತಿಹ್ಯದ ಪ್ರಕಾರ ಸೂಪಾ ಹಿಂದೆ ಶೂರ್ಪನಖಿಯ ಊರಾಗಿತ್ತಂತೆ. ಲಕ್ಷ್ಮಣನು ಶೂರ್ಪನಖಿಯ ಮೂಗು ಕೊಯ್ದದ್ದು ಇದೇ ದಂಡಕಾರಣ್ಯದಲ್ಲಿ ಎಂದು ಹೇಳುತ್ತಾರೆ. ಸೂಪಾ ಊರಲ್ಲಿ ಹಳೆಯ ಕಾಲದ ಮತ್ತು ಮರದ ದಿಮ್ಮಿಗಳಿಂದಲೇ ನಿರ್ಮಿತವಾದ ಶ್ರೀರಾಮನ ದೇವಸ್ಥಾನವಿತ್ತು. ಪರ್ಷಕ್ಕೊಮ್ಮೆ ಶ್ರೀರಾಮನಿಗೂ ಇಲ್ಲಿ ತೇರಿನ ಜಾತ್ರೆ ನಡೆಯುತ್ತಿತ್ತು. ಅದಕ್ಕೂ ಮೊದಲು ಸೂಪಾ ಆಣೆಕಟ್ಟಿನ ತಳದಲ್ಲಿದ್ದ ಬೋರುಗುಂಡಿ ಅರ್ಥಾತ್‌ ಶೂರ್ಪನಖಿಯ ಜಾತ್ರೆ ನಡೆಯುತ್ತಿತ್ತು. ಶೂರ್ಪನಿಖಿಗೆ ಕೋಳಿಗಳ ಬಲಿಯಾದರೆ ಶ್ರೀ ರಾಮನಿಗೆ ಪಾಯಸದ ನೈವೇದ್ಯವಾಗುತ್ತಿತ್ತು. ನಾನು ಈ ಎರಡೂ ಜಾತ್ರೆಗಳನ್ನು ನೋಡಿದ್ದೇನೆ. ಯಾವಾಗ ಶೂರ್ಪನಖಿ ನೆಲೆಸಿದ್ದ ಜಾಗದಲ್ಲಿಯೇ ಆಣೆಕಟ್ಟು ಕಟ್ಟಲಾಗುತ್ತದೆಂದು ಆಗಿನ ಮೈಸೂರು ಸರಕಾರ ಘೋಷಿಸಿತೋ ಅಂದಿನಿಂದ ಸ್ಥಳೀಯರ ವಿರೋಧದ ಕಿಡಿ ಹೊತ್ತಿಕೊಂಡಿತು.

Kali river dandeli, india

ಫೋಟೋ ಕೃಪೆ : Wikimedia Commons

ಆಗಿನ್ನೂ ನಿಗಮ ಆಗಿರಲಿಲ್ಲ. ಮೈಸೂರು ಸರಕಾರದ ಹೆಚ್.ಇ.ಸಿ.ಪಿ. [ಹೈಡ್ರೋ ಇಲೆಕ್ಟ್ರಿಕ್‌ ಕನ್‌ಸ್ಟ್ರಕ್ಸನ್‌ ಪ್ರಾಜೆಕ್ಟ] ಇಲಾಖೆ ಜಲವಿದ್ಯುತ್ತು ನಿರ್ಮಾಣ ಕುರಿತು ಅನ್ವೇಷಣಾ ಕಾರ್ಯಮಾಡುತ್ತಿತ್ತು. ಈ ಇಲಾಖೆಯ ಮುಖ್ಯ ಇಂಜಿನಿಯರ್‌ ಕಛೇರಿ ಧಾರವಾಡದಲ್ಲಿತ್ತು. ಹಿರಿಯ ಇಂಜಿನಿಯರ್‌ ಶ್ರೀ ಎನ್‌.ಜಿ.ಜೋಶಿ ಅವರು [ಮುಂದೆ ಇವರು ನಿಗಮ ಸ್ಥಾಪನೆಯಾದ ಮೇಲೆ ಇಂಜಿನಿಯರ್‌-ಇನ್‌-ಚೀಫ್‌ ಹುದ್ದೆಗೇರಿದರು. ಈಗ ಈ ಹುದ್ದೆ ಇಲ್ಲ] ಅಲ್ಲಿ ಮುಖ್ಯ ಇಂಜಿನಿರ್‌ ಆಗಿದ್ದರು. ಇವರ ಕೈಕೆಳಗೆ ಕಾಳಿ ನದಿ ವಿದ್ಯುತ್ತು ಯೋಜನೆಯ ಅನ್ವೇಷಣಾ ಕಾರ್ಯ ನೋಡಿಕೊಳ್ಳಲು ಒಂದು ಡಿವಿಜನ್‌ ಇತ್ತು. ಆಗ ನಿವೃತ್ತಿಯ ಅಂಚಿನಲ್ಲಿದ್ದ ಶ್ರೀ ಹೆಚ್‌.ಎನ್‌.ಆರ್..ಮೂರ್ತಿ ಅವರು ಈ ಡಿವಿಜನ್ನಿನ ಎಕ್ಯಿಕ್ಯುಟಿವ್‌ ಇಂಜಿನಿಯರ್‌ ಆಗಿಯೂ, ಇವರ ಕೈಕೆಳಗೆ ಎರಡು ಸಬ್‌ ಡಿವಿಜನ್‌ಗಳೂ ಇದ್ದವು. ಸಬ್‌ ಡಿವಿಜನ್‌-೧ ರ ಎ.ಇ. ಆಗಿ ಶ್ರೀ ಸಿ.ಎಸ್‌.ಹೆಬ್ಬಳ್ಳಿ ಅವರೂ [ಮುಂದೆ ಇವರು ನಿಗಮದಲ್ಲಿ ಟೆಕ್ನಿಕಲ್‌ ಡೈರೆಕ್ಟರಾಗಿ ನಿವೃತ್ತರಾದರು] ಸಬ್‌ ಡಿವಿಜನ್‌-೨ ರ ಎ.ಇ. ಆಗಿ ಶ್ರೀ ಎನ್‌. ನರಸಿಂಹಯ್ಯ ಅವರೂ ನಿಯೋಜಿತರಾಗಿದ್ದರು. ಶ್ರೀ ಹೆಬ್ಬಳ್ಳಿಯವರ ಸಬ್‌ ಡಿವಿಜನ್‌ ಸಿವಿಲ್‌ ಕಾಮಗಾರಿಗಳನ್ನು ನೋಡಿಕೊಳ್ಳುತ್ತಿತ್ತು. ಸೂಪಾ ಆಣೆಕಟ್ಟಿನ ತಳಪಾಯದಲ್ಲಿ ಮತ್ತು ಪಕ್ಕದ ಎರಡೂ ಬದಿಯ ಗುಡ್ಡ ಗಳಲ್ಲಿ ಎಂಟು ಸುರಂಗ ತೋಡಿ ಅಲ್ಲಿಯ ಮಣ್ಣಿನ ಮತ್ತು ಭೂ ಭಾಗದ ಪದರುಗಳನ್ನು ಪರೀಕ್ಷಿಸಲಾಗುತ್ತಿತ್ತು. ಅಲ್ಲದೆ ಆಣೆಕಟ್ಟು ಸ್ಥಳಕ್ಕೆ ರಸ್ತೆ ನಿರ್ಮಾಣ ಕಾರ್ಯ, ಆಣೆಕಟ್ಟೆ ಕಟ್ಟಿದಾಗ ಮುಳುಗಡೆಯಾಗುವ ಪ್ರದೇಶಗಳನ್ನು ಗುರುತಿ ಸುವುದು, ಅಂತಿಮವಾಗಿ ಕಟ್ಟೆಯಲ್ಲಿ ನಿಲ್ಲುವ ನೀರಿನ ಮಟ್ಟವನ್ನು [ಎಫ್‌.ಆರ್‌.ಎಲ್‌] ಗುರುತಿಸುವ ಸರ್ವೇ ಕೆಲಸ ಕೈಗೊಳ್ಳುವುದು, ಸೂಪಾ ಕಾಡು ಪ್ರದೇಶದಲ್ಲಿ ಬೀಳುವ ವಾರ್ಷಿಕ ಮಳೆಯನ್ನು ಅಳೆಯುವುದು, ನದಿಯ ಒಳ ಹರಿವನ್ನು ಗುರುತಿಸುವುದು, ಮುಳುಗಡೆ ಪ್ರದೇಶದಲ್ಲಿ ಭವಿಷ್ಯದಲ್ಲಿ ಭೂಕಂಪನ ಸಾಧ್ಯತೆ ಕುರಿತು ಅವಲೋಕಿಸುವುದು, ಮತ್ತು ಈದರ ಮಾಹಿತಿಗಾಗಿ ಸೆಸ್ಮಿಕ್‌ ಕೇಂದ್ರಗಳನ್ನು ಸ್ಥಾಪಿಸಿ ನಿರಂತರ ಮಾಹಿತಿ ಪಡೆಯುವುದು ಮತ್ತು ಆಣೆಕಟ್ಟಿನ ಕೆಳ ಭಾಗದಲ್ಲಿ ಸಿಬ್ಬಂದಿಗಳಿಗಾಗಿ ಕಾಲೋನಿ ನಿರ್ಮಿಸಲು ಸ್ಥಳ ಗುರುತಿಸುವುದು ಸಬ್‌ ಡಿವಿಜನ್‌ ೧ ರ ಕೆಲಸವಾಗಿತ್ತು. ನಾನು ಈ ಎಲ್ಲ ಕೆಲಸಗಳಲ್ಲಿ ಇಂಜಿನಯರುಗಳೊಂದಿಗೆ ಜೊತೆಗಿದ್ದೆ. ಈ ಸಂದರ್ಭದಲ್ಲಿ ಸೂಪಾ, ಜೋಯಿಡಾ, ಕುಂಬಾರವಾಡ, ಉಳುವಿ, ಜಗಲ್‌ಬೆಟ್ಟ, ಕ್ಯಾಸಲ್‌ರಾಕ್‌ ಇಲ್ಲೆಲ್ಲ ಟೆಂಟುಗಳನ್ನು ಹಾಕಿಕೊಂಡು ಅಲ್ಲಿಯೇ ರಾತ್ರಿಗಳನ್ನು ಕಳೆದು ಸರ್ವೇ ಕೆಲಸದಸ್ಸಿ ಭಾಗಿಯಾಗಿದ್ದು ನನ್ನ ಜೀವನದ ವಿಶೇಷವೇ ಸರಿ.

ನಾನು ಶ್ರೀ ಹೆಬ್ಬಳ್ಳಿಯವರ ಕಚೇರಿಯಲ್ಲಿ ಕಾಮಗಾರಿ ಸಹಾಯಕನಾಗಿ [ವರ್ಕ ಇನಸ್ಪೆಕ್ಟರ] ಎಂದು ದಿನಗೂಲಿ ಮೇಲೆ ನೇಮಕಗೊಂಡು ಸೂಪಾ ಡ್ಯಾಂ ಸೈಟಿಗೆ ಕಳುಹಿಸಲ್ಪಟ್ಟೆ. ಅಲ್ಲಿ ಇಲಾಖೆಯೇ ನಿರ್ಮಿಸಿದ ತಗಡಿನ ಉದ್ದದ ಶೆಡ್ಡುಗಳೇ ನಮ್ಮ ಬಂಗ್ಲೆಗಳು. ಅಂಥವು ನಾಲ್ಕಾರು ಶೆಡ್ಡುಗಳಿದ್ದವು. ಹಾಗೂ ಇಂಜಿನಿಯರುಗಳು ವಾಸಿಸಲು ಕೆಲವು ಟೆಂಟುಗಳು.

ಅದರಲ್ಲಿ ಒಂದು ಸರ್ವೇ ಉಪಕರಣಗಳು (Level Box), ಹಾರೆ, ಗುದ್ದಲಿ, ಮಂಕರಿ, ಇತರ ಉಪಕರಣಗಳನ್ನಿಡುವ ಸ್ಟೋರ್‌ ರೂಮು ಒಂದಿತ್ತು. ಉಳಿದ ಶೆಡ್ಡಿನಲ್ಲಿ ದಿನಗೂಲಿ ನೌಕರರಿದ್ದರು. ನನ್ನನ್ನೂ ಅಲ್ಲಿಯ ಒಂದು ಶೆಡ್ಡಿಗೆ ಸೇರಿಸಲಾಯಿತು. ನಾನಿದ್ದ ಶೆಡ್ಡಿನಲ್ಲಿಯೇ ದಿಗೂಲಿಯಲ್ಲಿ ಕೆಲಸಕ್ಕೆ ಸೇರಿದ ಇಬ್ಬರು ಇಂಜನಿಯರ್‌ಗಳೂ ಇದ್ದರು. ನಾವೇ ಒಟ್ಟಿಗೆ ಅಡುಗೆ ಮಾಡಿಕೊಳ್ಳುತ್ತಿದ್ದೆವು. ಪುಟ್ಟಣ್ಣ ಎಂಬ ಬಿ.ಇ. ಇಂಜಿನಿಯರ ಒಬ್ಬರು ಆರು ರೂಪಾಯಿ ದಿನಗೂಲಿಗೆ ಸೇರಿದ್ದರು. ಅವರ ತಿಂಗಳ ಸಂಬಳ ಒಂದು ನೂರಾ ಎಂಭತ್ತು ರೂಪಾಯಿ ಮಾತ್ರ. ಆಗ ಇಂಜಿನಿಯರ್‌ಗೆ ಆರು ರೂಪಾಯಿ, ಡಿಪ್ಲೋಮೋ ಇಂಜನಿಯರಗೆ ನಾಲ್ಕು ರೂಪಾಯಿ, ವರ್ಕ ಇನಸ್ಪೆಕ್ಟರಿಗೆ ಎರಡೂವರೆ ರೂಪಾಯಿ ದಿನಗೂಲಿಯನ್ನು ಇಲಾಖೆ ಕೊಡುತ್ತಿತ್ತು. ನನಗೆ ಎರಡೂವರೆ ರೂಪಾಯಿ ದಿನಗೂಲಿ. ಅಂದರೆ ತಿಂಗಳಿಗೆ ಎಪ್ಪತೈದು ರೂಪಾಯಿ ಸಂಬಳ. ಆಗ ಅರವತ್ತು ಪೈಸೆ ಕೊಟ್ಟರೆ ಒಂದು ಕೇ.ಜಿ. ಬಂಗಾರ ಕಡ್ಡಿ ಅಕ್ಕಿ ಸಿಗುತ್ತಿತ್ತು. ಡ್ಯಾಮ ಸೈಟ್‌ನಲ್ಲಿ ದಾಮೋದರನ್‌ ಎಂಬ ಕೇರಳೀಯ ಒಂದು ಪುಟ್ಟ ಹೊಟೆಲ್ಲು ಇಟ್ಟುಕೊಂಡಿದ್ದ. ಬೆಳಿಗ್ಗೆ ದೋಸೆ ಚಟ್ನಿ, ಮಧ್ಯಾನಕ್ಕೆ ಕುಚಲಕ್ಕಿ ಅನ್ನ ಸಾಂಬಾರ ಒಂದು ಪಲ್ಯ ಕೊಡುತ್ತಿದ್ದ. ಅಷ್ಟಕ್ಕೇ ಅರವತ್ತು ಪೈಸೆ ರೇಟು.

ನಾವು ಸರ್ವೇಗೆಂದು ದೂರ ಹೋಗಬೇಕಾದಾಗ ಅವನ ಹೊಟೆಲ್ಲಿನಲ್ಲಿಯೇ ದೋಸೆ ತಿಂದು, ಮಧ್ಯಾನಕ್ಕೆ ಅವನ ಹೋಟೆಲ್ಲಿನಿಂದಲೇ ಅರವತ್ತು ಪೈಸೆಯ ಊಟ ತರಿಸಿಕೊಳ್ಳುತ್ತಿದ್ದೆವು. ದಾಮೋದರ ಹೇಳುತ್ತಿದ್ದ- .ಶೇಖರಪ್ಪೋರೆ… ಇಲ್ಲಿ ಡ್ಯಾಮು ಕಟ್ತಾರೆ. ನನ್ನ ಹೋಟೆಲ್ಲು ಮುಳುಗಿ ಹೋಗುತ್ತೆ. ಈ ಊರು [ಸೂಪಾ] ಮುಳುಗೋ ಹೊತ್ತಿಗೆ ನಾನೆಲ್ಲಿ ಇರ್ತೀನೋ… ನೀವೆಲ್ಲಿ ಇರ್ತೀರೋ… ನಿಮಗೆ ಬೇಯ್ಸಿ ಹಾಕುವ ಋಣ ಇದೆ ನೋಡಿ ನನಗೆ. ಆ ನೆನಪೇ ದೊಡ್ಡ ಸಂಪತ್ತು ನನಗೆ ಅಂತಿದ್ದ. ಅದೆಂಥ ಜೀವನ ಸತ್ಯದ ಮಾತುಗಳು ಅವು. ಈಗ ನೆನಪಾದರೆ ಮನಸ್ಸು ಕಲಕುತ್ತದೆ. ಅರವತ್ತು ಪೈಸೆಗೆ ನಮ್ಮ ಸಿಬ್ಬಂದಿಗೆ ಊಟ ಹಾಕುತ್ತಿದ್ದ ಆ ದಾಮೋದರನ್ ಕುಟ್ಟಿ ಈಗ ಎಲ್ಲಿದ್ದಾನೋ ಏನಾಗಿದ್ದಾನೋ ಗೊತ್ತಿಲ್ಲ.

ಜೀವನವೇ ಹಾಗೆ. ಅಲ್ಲೇ ಹರಿಯುತ್ತಿದ್ದ ಕಾಳೀ ನದಿಯ ಹಾಗೆ. ಅದರ ಪಾತಳಿ ಯಾವತ್ತೂ ಸಮವಾಗಿರುವುದಿಲ್ಲ. ನಮ್ಮದೂ ಇಲ್ಲಿ ದಿನಗೂಲಿ ಕೆಲಸ. ಅನ್ವೇಷಣೆಯ ನಮ್ಮ ಕೆಲಸ ಮುಗಿದು ಕಟ್ಟೆಯ ಕೆಲಸ ಆರಂಭವಾದರೆ ನಾವೇ ಇಲ್ಲಿ ಇರುತ್ತೇವೆಯೋ ಇಲ್ಲೋ. ದಿನಕ್ಕೆ ಆರು ರೂಪಾಯಿ ದಿನಗೂಲಿಗೆ ಕೆಲಸ ಮಾಡುತ್ತಿದ್ದ ಇಂಜನಿಯರ್‌ ಜಯದೇವ ಅವರು ತುಮಕೂರಿನಲ್ಲಿ ಬಿ.ಇ. ಮಾಡಿದರಂತೆ. ಓದಿಗೆ ತಕ್ಕ ಕೆಲಸ ಸಿಗದೆ ಯಾರದೋ ಕೃಪೆಯಿಂದ ಇಲ್ಲಿ ದಿನಗೂಲಿಗೆ ಬಂದಿದ್ದಾರೆ. ಸಾಲದ್ದಕ್ಕೆ ಮದುವೆ ಬೇರೆ ಆಗಿದೆ. ಹೆಂಡತಿಯನ್ನು ಚಿತ್ರದುರ್ಗದಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಸೂಪಾ ಆಣೆಕಟ್ಟಿನ ಮುಳುಗಡೆ ನೀರಿನ ಪಾತಳಿ ಹಾಗೂ ಮುಳುಗಡೆ ಪ್ರದೇಶಗಳನ್ನು ಸರ್ವೇ ಮಾಡಿ ವರದಿ ಕೊಡುವ ಕೆಲಸ ಅವರದು. ಸರ್ವೇ ಕೆಲಸಕ್ಕೆ ಇಡೀ ಹಗಲು ಕಾಡಿನಲ್ಲಿಯೇ ಅಲೆಯಬೇಕು. ಅವರ ತಂಡದಲ್ಲಿ ನಾನೂ ಇದ್ದೆ. ಆಗ ಚಿತ್ರದುರ್ಗದವರೇ ಆಗಿದ್ದ ಶ್ರೀ ಹೆಚ್‌.ಎಂ. ಚನ್ನಬಸಪ್ಪ ಅವರು ಪಿ.ಡಬ್ಲೂ.ಡಿ ಮಂತ್ರಿ ಆಗಿದ್ದರು. ಅವರೇ ಹೇಳಿ ಈ ಕೆಲಸ ಕೊಡಿಸಿದ್ದಾರೆ ಎಂದು ಒಳ ಸುದ್ದಿ ಕೇಳುತ್ತಿತ್ತು.

ಇಂಜನಿಯರ್‌ ಜಯದೇವ ಅವರು ಅಡುಗೆ ಮಾಡುವುದರಲ್ಲಿ ನಿಪುಣರು. ಡಿಪ್ಲೋಮಾ ಇಂಜಿನಿಯರ ಮುರುಗೋಡರಿಗೆ ತರಕಾರಿ ಹೆಚ್ಚಿಕೊಡುವುದರಲ್ಲಿ ಆಸಕ್ತಿ. ನನಗೆ ಪಾತ್ರೆ ತೊಳೆದಿಡುವ ಕೆಲಸ. ಒಮ್ಮೊಮ್ಮೆ ಬದನೆಕಾಯಿ ಎಣ್ಣೆಗಾಯಿ ಪಲ್ಯ ನಾನು ಮಾಡುತ್ತಿದ್ದೆ. ಅದಕ್ಕೆ ಎಲ್ಲರಿಂದ ನನಗೆ ಶಬಾಸ್‌ಗಿರಿ ಬೇರೆ ಸಿಗುತ್ತಿತ್ತು.

ಆಗ ಸಹಾಯಕ ಕಾರ್ಯಪಾಲಕ ಇಂಜಿನಿಯರ ಆದ ಶ್ರೀ ನರಸಿಂಹಯ್ಯನವರ ಕಚೇರಿ ಮಾತ್ರ ಸೂಪಾದಲ್ಲಿತ್ತು. [ಸೂಪಾ ಊರು ಈಗ ಮುಳುಗಡೆಯಾಗಿದೆ] ಅವರ ಕಚೇರಿಯಲ್ಲಿ ಶ್ರೀ ಗುಪ್ತಾ , ಶ್ರೀ ರಾಮಚಂದ್ರ ರಾವ್‌, ಶ್ರೀ ಚಾಮರಾಜ ಅನ್ನುವ ಬಿ.ಇ. ಇಂಜಿನಯರರು ಇದ್ದರು. ಅವರೆಲ್ಲ ಆಗ ಸಹಾಯಕ ಇಜಿನಿಯರರು. ಅದು ಮೆಕ್ಯಾನಿಕಲ್‌ ವಿಭಾಗವಾಗಿತ್ತು. ಅಲ್ಲಿದ್ದ ಬಿ.ಇ ಇಂಜಿನಿಯರರು, ಡಿಪ್ಲೋಮಾ ಇಂಜಿನಿಯರರು, ವರ್ಕ ಇನಸ್ಪೆಕ್ಟರುಗಳು, ಕಾಂಪ್ರೇಸರ ಆಪರೇಟರರು, ಮೇಸ್ತ್ರಿಗಳು, ಕಚೇರಿಯ ಲೆಕ್ಕ ನೋಡಿಕೊಳ್ಳುವ ಸಿಬ್ಬಂದಿ ಎಲ್ಲರೂ ದಿನಗೂಲಿ ಕೆಲಸದವರೇ. ಅವರ ಗ್ರೇಡು ನೋಡಿ ಮೂರೂವರೆ ರೂಪಾಯಿ, ಎರಡೂವರೆ ರೂಪಾಯಿ ಸಂಬಳ. ಡಿಪ್ಲೋಮಾ ಇಂಜಿನಿಯರಗೆ ದಿನಕ್ಕೆ ನಾಲ್ಕೂವರೆ ರೂಪಾಯಿ ಸಂಬಳ. ಕೂಲಿ ಕೆಲಸದವರಿಗೆ ಒಂದೂವರೆ ರೂಪಾಯಿ ದಿಗೂಲಿ. ಉಳಿದವರಿಗೆ ರಾಮಚಂದ್ರರಾವ ಹಾಗೂ ಚಾಮರಾಜ ಅವರು ಮಾತ್ರ ಬೇರೆ ಇಲಾಖೆಯಿಂದ ನೇಮಕವಾಗಿ ಬಂದವರು.

ಇಲ್ಲಿ ಶ್ರೀ ನರಸಿಂಹಯ್ಯ ನವರ ಕಚೇರಿ ಬಗ್ಗೆ ಹೇಳಲೇಬೇಕು. ಸೂಪಾದಲ್ಲಿ ಕಾಳೀ ನದಿಯ ಎಡ ದಂಡೆಯ ಮೇಲೆ ಅದ್ದ ಒಂದು ಹಳೆಯ ಸರಕಾರಿ ಕಟ್ಟಡದಲ್ಲಿ ಇನ್ವಿಸ್ಟಿಗೇಶನ್‌ ಸಬ್‌ ಡಿವಿಜನ್‌ -೨ ಕಚೇರಿ ಇತ್ತು. ಅಲ್ಲಿ ಹೆಚ್ಚು ಸಿಬ್ಬಂದಿಗಳು ಇರಲಿಲ್ಲ. ಇದ್ದವರೂ ಶರಾವತಿಯಲ್ಲಿ ವರ್ಕಚಾರ್ಜನಲ್ಲಿ ನೇಮಕವಾದವರು. ನಾನೊಮ್ಮೆ ಅವರ ಕಚೇರಿಗೆ ಹೋದಾಗ ಅಚ್ಚರಿಪಟ್ಟಿದ್ದೆ. ಏನಂದರೆ ಕಚೇರಿ ತುಂಬ ಕಡತಗಳು ಹೇಗಿದ್ದವೋ ಹಾಗೆಯೇ ಅಲ್ಲಿ ಓಡಾಡುವ ಕೋಳಿಗಳೂ ಇದ್ದವು. ಎ.ಇ.ಇ ನರಸಿಂಹಯ್ಯನವರಿಗೆ ಕೋಳಿಗಳನ್ನು ಸಾಕುವ ಹುಚ್ಚಂತೆ. ಅವರಿಗೆ ಇಲಾಖೆಯಿಂದ ಪ್ರತ್ಯೇಕವಾದ ಮನೆ ನೀಡಿರಲಿಲ್ಲ. ಕಚೇರಿಯ ಒಂದು ಕೋಣೆಯೇ ಅವರ ಮನೆಯಾಗಿತ್ತು. ಅವರು ಸಂಸಾರವನ್ನು ಬೆಂಗಳೂರಲ್ಲಿ ಬಿಟ್ಟು ಇಲ್ಲಿ ಬಂದಿದ್ದರು. ಹೀಗಾಗಿ ಹತ್ತಾರು ಕೋಳಿಗಳನ್ನು ಸಾಕಿಕೊಂಡಿದ್ದರು. ಅವುಗಳಲ್ಲಿ ಹಲವು ಮೊಟ್ಟೆ ಇಡುವ ಕೋಳಿಗಳೂ ಇದ್ದವು. ಹೇಳಿಕೇಳಿ ಆಗ ಸೂಪಾ ಕಾಡೆಂದರೆ ಕಾಡು. ಪುಟ್ಟ ಮೀನು ಪೇಟೆ ಬಿಟ್ಟರೆ ಬೇರೇನೂ ಇಲ್ಲಿ ಇರಲಿಲ್ಲ. ಸಾರಿಗೆ ವ್ಯವಸ್ಥೆಯೂ ಸರಿಯಾಗಿರಲಿಲ್ಲ.ಸರಕಾರಿ ಒಂದು ಶಾಲೆ, ಒಂದು ಆಸ್ಪತ್ರೆ ಮಾತ್ರ ಇತ್ತು. ಹುಷಾರು ತಪ್ಪಿದರೆ ದಿನಗೂಲಿ ಸಂಬಳದಲ್ಲಿಯೇ ಆರೈಕೆ ಮಾಡಿಕೊಳ್ಳಬೇಕಾಗಿತ್ತು. ಅದರಿಂದ ಎಲ್ಲರೂ ಮನೆ ಮದ್ದನ್ನೇ ಹೆಚ್ಚು ನಂಬಿಕೊಂಡಿದ್ದರು.

***

ಹತ್ತೊಂಭತ್ತು ನೂರಾ ಎಪ್ಪತ್ತರಲ್ಲಿ ಸೂಪಾದಲ್ಲಿ ಕೆಲಸ ಮಾಡುತ್ತಿದ್ದ ನಮಗೆ ಹೊಸ ಸುದ್ದಿಯೊಂದು ಆಘಾತ ತಂದಿತು.. ಇನ್ನು ಮುಂದೆ ಹೆಚ್‌.ಇ.ಸಿ.ಪಿ. ಇಲಾಖೆಯನ್ನು ಸರಕಾರ ಮುಚ್ಚುತ್ತದೆಂದೂ, ಅದರ ಜಾಗದಲ್ಲಿ ಕಂಪನಿಯೊಂದನ್ನು ಸ್ಥಾಪಿಸುತ್ತದೆ ಎಂದೂ ಸುದ್ದಿ ಬಂದಿತು. ಆಗ ನಮಗೆ ಗಾಬರಿ ಆದದ್ದೂ ನಿಜ. ಇದ್ದ ಕೆಲಸವೂ ಹೋಗುತ್ತದೆಂಬ ಆತಂಕ. ಆಗ ಸೂಪಾದಲ್ಲಿ ದಿನಗೂಲಿಗೆಂದು ಬಂದು ಸೇರಿದ ನಮ್ಮಂಥವರು ಮತ್ತು ಇಂಜಿನಿಯರರೂ ಸೇರಿ ಹೆಚ್ಚೆಂದರೆ ಮೂವತೈದು ಜನರಿದ್ದರು. ಇನ್ನು ಮುಂದೆ ಇಲ್ಲಿ ಕಂಪನಿ ಯಾ ಕಾರ್ಪೋರೇಶನ್‌ ಕೆಲಸಗಾರರು ಬಂದರೆ ದಿನಗೂಲಿಗಳಾಗಿದ್ದ ನಮ್ಮನ್ನು ಮನೆಗೆ ಕಳಿಸುತ್ತಾರೆಂದು ಆಗಿನ ಸೂಪರ್‌ವೈಜರ್‌ ಶ್ರೀ ಎಸ್‌.ವೈ.ನಾಯಕರು ಹೇಳಿದಾಗ ಗಾಬರಿಬಿದ್ದೆವು. ಅವರು ಧಾರವಾಡಕ್ಕೆ ಹೋದಾಗ ಚೀಫ್‌ಇಂದಿನಿಯರ್‌ ಶ್ರೀ ಎನ್.ಜಿ.ಜೋಶಿ ಅವರ ಕಚೇರಿಯಲ್ಲಿ ಅದೇ ದೊಡ್ಡ ಸುದ್ದಿ ಆಗಿತ್ತಂತೆ. ಅದೇ ಹೊತ್ತಿಗೆ ಧಾರವಾಡದಿಂದ ಡ್ಯಾಮಸೈಟಿಗೆ ಬಂದಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ .ಶ್ರೀ ಸಿ.ಎಸ್‌.ಹೆಬ್ಬಳ್ಳಿ ಯವರಲ್ಲಿ ನಮ್ಮ ಆತಂಕ ಹೇಳಿದೆವು. ಅವರು ಕೊಟ್ಟ ಧೈರ್ಯ ನಮಗೆ ಆತ್ಮ ಶಕ್ತಿ ತುಂಬಿತು. ಇಲ್ಲಿ ಯಾರೇ ಬರಲಿ ನಿಮ್ಮ ಕೆಲಸ ಹೋಗುವುದಿಲ್ಲ. ಆ ಭರವಸೆ ನಾನು ಕೊಡುತ್ತೇನೆ ಅಂದರು. ಮುಂದೆ ಅದು ನಿಜವೂ ಆಯಿತು.

ಕೊನೆಗೆ ಹೆಚ್‌.ಇ.ಸಿ.ಪಿ ಗೆ ಬದಲಾಗಿ ಸರಕಾರ ಮೈಸೂರು ಪಾವರ್‌ ಕಾರ್ಪೋರೇಶನ್‌ ನಿ. [ಎಂ.ಪಿ.ಸಿ,ಎಲ್‌.] ಸ್ಥಾಪಿಸಿತು. ಅದರ ಮೊದಲ ಅಧ್ಯಕ್ಷರಾಗಿ ಶ್ರೀ ಎಂ.ಹಯಾತ್‌ ಅವರು ನೇಮಕವಾದರು. ಹಿರಿಯ ಐ.ಎಸ್‌.ಎ ಅಧಿಕಾರಿ ಮಾನ್ಯ ಶ್ರೀ ಪಿ.ಆರ್‌.ನಾಯಕರು ಮೊದಲ ವ್ಯವಸ್ಥಾಪಕ ನಿರ್ದೇಶಕರಾದರೆಂದು ಸುದ್ದಿ ಬಂತು. ನಮಗೆ ದುಗುಡ ಬಿಡಲಿಲ್ಲ. ಆಗ ರಾಜ್ಯದಲ್ಲಿ ರಾಷ್ಟಪತಿ ಆಳ್ವಿಕೆಯಿತ್ತು. ಮಾನ್ಯ ಶ್ರೀ ಧರ್ಮವೀರ ಅವರು ಮಾನ್ಯ ರಾಜ್ಯಪಾಲರಾಗಿದ್ದರು. ಯಾವಾಗ ಮೈಸೂರು ವಿದ್ಯುತ್‌ ನಿಗಮದ ಸ್ಥಾಪನೆಯಾಯಿತೋ ಕಾಳೀ ಜಲವಿದ್ಯುತ್‌ ಯೋಜನಾ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಿತು. ಮೊದಲ ಹಂತದ ಕಾರ್ಯಕ್ರಮವೆಂದರೆ ಬೊಮ್ಮನ ಹಳ್ಳಿ ಆಣೆಕಟ್ಟು ಕಟ್ಟು ಕಟ್ಟಿ ಅಲ್ಲಿಂದ ಒಂಭತ್ತು ಕಿ.ಮೀ. ದೂರ ಗುತ್ತಿ-ಸೈಕ್ಸಪಾಯಿಂಟ್‌ ವರೆಗೆ ಸುರಂಗ ಮಾರ್ಗ ತೋಡಿ ಅದರ ಮೂಲಕ ನೀರು ಹರಿಸುವುದು. ಸೈಕ್ಸ ಪಾಯಿಂಟ್‌ನಲ್ಲಿ ಸರ್ಜಟ್ಯಾಂಕ ನಿರ್ಮಿಸಿ ಅಲ್ಲಿಂದ ಬೆಟ್ಟದ ಕೆಳಗೆ ಭೂಗರ್ಭದಲ್ಲಿ ಆರು ಪೆನ್‌ ಸ್ಟಾಕ್‌ಗಳನ್ನು ನಿರ್ಮಿಸಿ ಅವುಗಳ ಮೂಲಕ ನಾಗಝರಿ ವಿದ್ಯುದ್ದಾಗಾರಕ್ಕೆ ನೀರು ಹರಿಸಿವುದಾಗಿತ್ತು.

ನಿಗಮ ಸ್ಥಾಪನೆಯ ನಂತರ ನಡೆದ ಪ್ರಥಮ ದೊಡ್ಡ ಕಾರ್ಯಕ್ರಮ ಕಣಿವೆಯಲ್ಲಿ ಕಾಮಗಾರಿ ಆರಂಭಗೊಳ್ಳುವ ದಿನ ಬಂತು. ಬೊಮ್ಮನಹಳ್ಳಿ ಆಣೆಕಟ್ಟಿಗೆ ಅಡಿಗಲ್ಲು ಇಡುವ ಕಾರ್ಯದ ದಿನವೂ ನಿರ್ಧಾರವಾಯಿತು. ಎಂ.ಪಿ.ಸಿ.ಎಲ್‌ ಸ್ಥಾಪನೆಯಾದ ನಂತರ ಆಯೋಜಿಸಲಾದ ಮೊಟ್ಟ ಮೊದಲ ಕಾರ್ಯಕ್ರಮ ಅದು. ಆ ಕಾರ್ಯಕ್ರಮದಲ್ಲಿ ದಿನಗೂಲಿಯಾಗಿದ್ದುಕೊಂಡು ಸಕ್ರಿಯವಾಗಿ ಭಾಗಿಯಾದ ಸೌಭಾಗ್ಯ ನನ್ನದು. ಮಾನ್ಯ ರಾಜ್ಯಪಾಲರಾದ ಶ್ರೀ ಧರ್ಮವೀರರು ಅಡಿಗಲ್ಲು ಇಡಲು ಬೊಮ್ಮನಹಳ್ಳಿಗೆ ಬಂದರು. ಅಂದು ಸುತ್ತ ಮುತ್ತಲಿನ ಊರಿನ ಜನ ಡ್ಯಾಮು ಕಟ್ಟುವ ಸ್ಥಳಕ್ಕೆ ಬಂದರು. ಸರಕಾರದ ಹಿರಿಯ ಅಧಿಕಾರಿಗಳೂ ಆಗಮಿಸಿದರು. ಕಾಡಿನಲ್ಲಿ ಕಾರುಗಳ ಓಡಾಟ ಜೋರಾಯಿತು. ಆಗ ಹಳಿಯಾಳದ ಎಮ್ಮೆಲ್ಲೆಗಳಾಗಿದ್ದ ಶ್ರೀ ಘಾಡೀ ಮಾಸ್ತರರೂ ಬಂದಿದ್ದರು. ನದೀ ತಟದಲ್ಲಿ ಮದ್ದು ಸಿಡಿಸುವ ಮೂಲಕ ಮಾನ್ಯ ಘನ ರಾಜ್ಯಪಾಲರು ಶಂಕು ಸ್ಥಾಪನೆ ಮಾಡಿದರು. ಅದನ್ನು ನಾನು ಕಣ್ಣಾರೆ ಕಂಡೆ. ಸಮಾರಂಭಕ್ಕೆ ಬಂದ ಜನಕ್ಕೆ ಊಟ ಹಾಕುವ ವ್ಯವಸ್ಥೆಯೂ ಇತ್ತು. ಆಗ ಸೂಪಾದಲ್ಲಿದ್ದ ನಮ್ಮನ್ನೆಲ್ಲ ಬೊಮ್ಮನಹಳ್ಳಿಗೆ ಕರೆ ತಂದು ಸಾರ್ವಜನಿಕ ಊಟದ ವ್ಯವಸ್ಥೆಗೆ ನಿಲ್ಲಲು ಸೂಚಿಸಲಾಯಿತು. ದೊಡ್ಡ ಸಮಾರಂಭ. ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರಿ ಪಿ. ಆರ್‌.ನಾಯಕ ಅವರು ಸ್ವಾಗತ ಭಾಷಣ ಮಾಡಿದರು. ಮಾನ್ಯ ಘನತೆವೆತ್ತ ರಾಜ್ಯಪಾಲರು ರಾಜ್ಯಕ್ಕೆ ವಿದ್ಯುತ್‌ ಯೋಜನೆಗಳ ಅವಶ್ಯಕತೆಯನ್ನು ಅಲ್ಲಿ ಮನದಟ್ಟು ಮಾಡಿದರು. ಅಂದು ಅವರ ಭಾಷಣವನ್ನು ಗಮನವಿಟ್ಟು ಕೇಳಿದೆ.

ಅವತ್ತಿನ ಕಾರ್ಯಕ್ರಮ ಮುಗಿದ ಕೂಡಲೇ ನಾವೆಲ್ಲ ಸೂಪಾ ಡ್ಯಾಮ ಸೈಟಿಗೆ ವಾಪಸಾದೆವು. ಆಗ ಬಸ್ಸು ಇತ್ಯಾದಿಗಳಿರಲಿಲ್ಲ. ದಿನಗೂಲಿ ಇಂಜಿನಿಯರು ಸೇರಿ ಫೋರ್ಡ ಲಾರಿಯಲ್ಲೇ ಕಾರ್ಯಕ್ರಮ ಸ್ಥಳಕ್ಕೆ ಹೋಗಿ ಬಂದೆವು. ಈ ಫೋರ್ಡ ಲಾರಿ ಬಗ್ಗೆಯೂ ಹೇಳಬೇಕು. ಇದು ಶರಾವತಿ ಕಾಮಗಾರಿ ನಿರ್ಮಾಣದಲ್ಲಿ ದುಡಿದು ಮುಪ್ಪಾಗಿ ಹೈರಾಣಾಗಿ ಅಲ್ಲಿ ಗ್ಯಾರೇಜಿನಲ್ಲಿ ಸುಮ್ಮನೆ ನಿಂತಿತ್ತಂತೆ. ಅದನ್ನು ಸೂಪಾಕ್ಕೆ ಕಳುಹಿಸಿ ಇಲ್ಲಿ ಸಿಬ್ಬಂದಿಗಳ ಸಾಗಾಟಕ್ಕೆ ಬಿಡಲಾಗಿತ್ತು. ತಮಿಳಿನ ಶ್ರೀ ಇಳುವರಸನ್‌ ಅದರ ಖಾಯಮ್ಮು ಚಾಲಕರು. ಆಗಲೇ ಅವರಿಗೆ ಐವತ್ತರ ಮೇಲೆ ವಯಸ್ಸು. ಅವತ್ತಿನ ಅಡಿಗಲ್ಲು ಕಾರ್ಯಕ್ರಮದ ವಿವರಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಊರಿಗೆಲ್ಲ ಊಟ ಹಾಕಿದ ನಮಗೇ ಅಲ್ಲಿ ಕೊನೆಗೆ ಊಟವಿರಲಿಲ್ಲ. ಕೊನೆಗೆ ದಾಂಡೇಲಿಯ ಫಾರೆಸ್ಟನವರು ಕರೆದು ಊಟ ಹಾಕಿ ಕಳಿಸಿದ್ದು ಮರೆಯಲಾರದಂಥದ್ದು. ಮತ್ತು ಅವತ್ತು ನಿಗಮದ ಲೋಗೋ ಬಿಡುಗಡೆ ಆಯಿತು. ಆ ಲೋಗೋ ಈಗಿನಂತಿರಲಿಲ್ಲ. ಈಗಿನದು ಬದಲಾವಣೆಗೊಂಡ ಲೋಗೋ ಆಗಿದೆ.

ಹೀಗೇ ಐವತ್ತು ವರ್ಷಗಳ ಹಿಂದಿನ ನೆನಪು ಕಾಡತೊಡಗಿದರೆ ಇನ್ನೂ ಹೇಳಬೇಕೆನಿಸುತ್ತದೆ. ಪುಟಗಳ ಮಿತಿ ಇರುವುದರಿಂದ ಇಷ್ಟಕ್ಕೇ ನಿಲ್ಲಿಸುತ್ತೇನೆ. ಮೊದಲು ಹೆಚ್‌.ಇ.ಸಿ.ಪಿ. ನಂತರ ಮೈಸೂರು ವಿದ್ಯುತ್‌ ನಿಗಮ ನಿ,. ಆಮೇಲೆ ಕರ್ನಾಟಕ ವಿದ್ಯುತ್‌ ನಿಗಮ ನಿ., ಹೀಗೆ ಇಲ್ಲಿ ಸೇವೆ ಸಲ್ಲಿಸಿದ ಅನುಭವಗಳು ಹೆಕ್ಕಿದಷ್ಟೂ ಇನ್ನೂ ಕಣ್ಮುಂದೆ ಸುಳಿಯುತ್ತವೆ.

* ಹೂಲಿ ಶೇಖರ್‌ (ನಿವೃತ್ತ ಹಿರಿಯ ಸಹಾಯಕ [ಕಾಮಗಾರಿ] ಮತ್ತು ಖ್ಯಾತ ಚಿತ್ರಸಂಭಾಷಣಕಾರ)

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW