ಮಕ್ಕಳು ರಬ್ಬರ್ ಕಳೆದುಕೊಂಡು ಬರುತ್ತಾರೆಂದು ಎಷ್ಟೋ ಜನ ಅದನ್ನು ತುಂಡು ಮಾಡಿ ಮಕ್ಕಳಿಗೆ ಶಾಲೆಗೆ ಕೊಟ್ಟು ಕಳಿಸುತ್ತಾರೆ. ಇದಂತೂ ತುಂಬಾ ಅಪಾಯಕಾರಿ. ಏಕೆಂದರೆ, ಮಕ್ಕಳು ರಬ್ಬರ್ರನ್ನು ಮೂಗಿನೊಳಗೆ ಹಾಕಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಹೀಗೆ ಸಾಕಷ್ಟು ವಿಷಯಗಳ ಕುರಿತು ಕವಿಯತ್ರಿ ಮಂಗಳ ಎಂ ನಾಡಿಗ್ ಅವರು ಮಕ್ಕಳ ಬಗೆಗಿನ ಕಾಳಜಿಯ ಕುರಿತು ಬರೆದ ಲೇಖನವನ್ನೊಮ್ಮೆ ಓದಿ…
ಶಾಲೆಯೇನೋ ಶುರುವಾಯ್ತು. ವರ್ಷದ್ದೋ, ಆರು ತಿಂಗಳಿನದ್ದೋ ಫೀಸೂ ಕಟ್ಟಾಯ್ತು. ಹೊಸ ಸಮವಸ್ತ , ಶೂ, ಪೆನ್ಸಿಲ್, ರಬ್ಬರ್, ಪೌಚ್, ಕಲರ್ ಪೆನ್ಸಿಲ್ಸ್ ಎಲ್ಲಾ ಕೊಡ್ಸಾಯ್ತು. ಪಠ್ಯಪುಸ್ತಕ, ನೋಟ್ ಬುಕ್ಗಳಿಗೆ ಬೈಂಡೂ ಹಾಕಾಯ್ತು. ಹೇರ್ ಕಟ್ಟೂ ಮಾಡ್ಸಾಯ್ತು. ಇನ್ನೇನು ಎಲ್ಲಾ ಒಂದ್ಸಲ ಮುಗೀತಲ್ಲ ಅನ್ಕೊಂಡ್ರಾ? ಇಲ್ಲ ಕಣ್ರೀ, ಈಗ ಇನ್ನೂ ಶುರು ಆಗ್ತಿದೆ. ವರ್ಷಕ್ಕಾಗೋದೆಲ್ಲ ಹಾಗೂ ಹೀಗೂ ಒಂದ್ಲೆಕ್ಕಾಚಾರ್ದಲ್ಲಿ ಮುಗ್ದಿರ್ಬೋದು. ಆದ್ರೆ ದಿನಾ ಮಾಡೋ ಒಂದಷ್ಟು ಜವಾಬ್ದಾರಿಗಳು ಇದ್ಯಲ್ಲ, ಅದುನ್ ಮಾತ್ರ ತಪ್ಸಕಾಗೋದೇ ಇಲ್ಲ ನೋಡಿ. ಅದ್ರಲ್ಲೂ ಈಗಷ್ಟೇ ನರ್ಸರಿ, ಎಲ್ಕೆಜಿ-ಯುಕೆಜಿ, ಒಂದು, ಎರಡನೇ ಕ್ಲಾಸ್ ಮಕ್ಳಿಗೆ ಎಲ್ಲವುದಕ್ಕೂ ಜೊತೆಯಾಗಿದ್ದು ಮಾಡಲೇಬೇಕು.
ಬೆಳಿಗ್ಗೆ ಏಳ್ಸೋದ್ರಿಂದ ಶುರು ಆಗಿ ಬ್ರಶ್, ಸ್ನಾನ, ಬಟ್ಟೆ ಹಾಕೋದು, ಟೈ ಕಟ್ಟೋದು, ತಲೆ ಬಾಚದು, ತಿನ್ಸದು, ಶೂ ಹಾಕಿ ಲೇಸ್ ಕಟ್ಟಿ ಶಾಲೆಗ್ ಬಿಟ್ ಬರೋವರ್ಗೂ ಅಥ್ವಾ ಸ್ಕೂಲ್ ಬಸ್ಸು/ ವ್ಯಾನು/ಆಟೋ ಹತ್ತಿಸಿ ಟಾಟಾ ಮಾಡೋವರ್ಗೂ ಮುಂದ್ವರ್ಯುತ್ತೆ. ಆಮೇಲೆ ಮಕ್ಳಿಗೆ ಶಾಲೆ ಬಿಡೋ ಸಮ್ಯಕ್ಕೆ ಕಾದು ಅವ್ರುನ್ನ ಕರ್ಕೊಂಡು ಬರೋದ್ರಿಂದ ಹಿಡ್ದು ಬಟ್ಟೆ ಬದ್ಲಾಯ್ಸಿ, ಕೈಕಾಲ್, ಮುಖ ತೊಳ್ಸಿ, ಒರ್ಸಿ, ತಿನ್ಸಿ, ಮಲಗ್ಸಿ/ಏಳ್ಸಿ/ ಆಟ/ ಪಾಠ/ಊಟ/ನಿದ್ದೆವರ್ಗೂ ಇದ್ದದ್ದೇ.( ಶನಿವಾರ, ಭಾನುವಾರ ಬಿಟ್ಟು) ಬೆಳಗ್ಗಿನಿಂದ ರಾತ್ರಿಯವರೆಗಿನ ಈ ಎಲ್ಲದರ ಮಧ್ಯೆ ಒಂದಷ್ಟು ವಿಷಯಗಳ ಕಡೆ ಗಮನಹರಿಸುವುದು ತುಂಬಾ ಮುಖ್ಯ.

ಫೋಟೋ ಕೃಪೆ : ಅಂತರ್ಜಾಲ
ಅವುಗಳೆಂದರೆ :
- ಬೆಳಗಿನ ತಿಂಡಿಗೆ, ಮಗು ಏನನ್ನು ಇಷ್ಟಪಟ್ಟು ತಿನ್ನುತ್ತದೆಯೋ ಅದಕ್ಕೆ ಬೇಕಾದ ಸಿದ್ಧತೆಯನ್ನು ಹಿಂದಿನ ದಿನವೇ ಮಾಡಿಕೊಳ್ಳಬೇಕು. ಏಕೆಂದರೆ, ಬೆಳಗಾಗೆದ್ದು ನಮಗೆ ಸುಲಭವಾಗುತ್ತದೆ ಎಂದು ಮಾಡುವ ಎಷ್ಟೋ ತಿಂಡಿಗಳನ್ನು ಚಿಕ್ಕ ಮಕ್ಕಳು ತಿನ್ನದೇ ಇರಬಹುದು. ಖಾರ ಆಯ್ತು, ನಂಗಿದು ಬೇಡ, ಎಂದು ಸರಿಯಾಗಿ ಹೊಟ್ಟೆಗೆ ತಿನ್ನದೇ ಹೋದರೆ ಶಾಲೆಯಲ್ಲಿ ಮಗು ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ. ಆರೋಗ್ಯ ಸಮಸ್ಯೆಯೂ ಕಾಡಬಹುದು. ಹಾಗಾಗಿ ಮಗು ಇಷ್ಟಪಡುವಂತಹ ಆರೋಗ್ಯಕರವಾದ ತಿಂಡಿಯನ್ನು ತಿನ್ನಿಸಿ ಕಳಿಸುವುದು ಒಳ್ಳೆಯದು.
- ಅರೆ ನಿದ್ದೆಯಲ್ಲಿರುವ ಮಗುವಿಗೆ ಸ್ನಾನ ಮಾಡಿಸುವುದು ಒಳ್ಳೆಯದು. ಆರೇಳು ವರ್ಷ ಆಯ್ತು, ಮಗುವೇ ಮಾಡಲಿ ಎಂದು ಬಿಟ್ಟರೆ ಮಗು ಅಲ್ಲೇ ಆಡುತ್ತಾ/ನಿದ್ದೆ ಮಾಡುತ್ತಾ ಕುಳಿತುಕೊಳ್ಳಬಹುದು. ಇಲ್ಲಾ ಕಿರಿಕಿರಿಯಾಗಿ ಬೆಳಿಗ್ಗೆಯೇ ಅಳು ಶುರು ಮಾಡಬಹುದು. ಜೊತೆಯಲ್ಲಿದ್ದು ಮಗುವನ್ನು ಮಾತಾಡಿಸುತ್ತಾ ತಯಾರಿ ಮಾಡಿದರೆ ಮಗುವಿನ ಮನಸ್ಸು ಉಲ್ಲಸಿತವಾಗಿರುತ್ತದೆ.
- ಸಮವಸ್ತ್ರವನ್ನು ಹಿಂದಿನ ದಿನವೇ ಇಸ್ತ್ರಿ ಮಾಡಿಡುವುದು ಒಳ್ಳೆಯದು. ಈಗ ಮನ್ಸಿಲ್ಲ, ಸುಸ್ತಾಗಿದೆ, ನಾಳೆ ಬೆಳಿಗ್ಗೆ ಮಾಡಿದ್ರಾಯ್ತು ಅಂದ್ಕೊಂಡ್ರೆ ಅದೇ ಬೆಳಿಗ್ಗೆ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಕರೆಂಟ್ ಹೋದರಂತೂ ಇಸ್ತ್ರಿ ಮಾಡಿದ ಹಾಗೇ.
- ಇಸ್ತ್ರಿ ಮಾಡಿದ ಸಮವಸ್ತ್ರ, ಒಳ ಉಡುಪುಗಳು, ಕರ್ಚೀಫ್, ಶಾಲೆಯ ಬ್ಯಾಡ್ಜ್, ಬೆಲ್ಟ್, ಟೈ, ಸಾಕ್ಸ್ ಎಲ್ಲವನ್ನೂ ಒಂದೆಡೆ ಇಟ್ಟಿದ್ದರೆ ಬೆಳಗ್ಗೆ ತಕ್ಷಣಕ್ಕೆ ಸಿಗುತ್ತದೆ. ಅದೆಲ್ಲಿದೆ, ಇದೆಲ್ಲಿದೆ ಎಂದು ಹುಡುಕುವ ಕೆಲಸ ಇರುವುದಿಲ್ಲ. ಇನ್ನು ಶಾಲೆಯ ಬ್ಯಾಗಿನ ಒಂದು ಭಾಗವನ್ನು ಬ್ಯಾಡ್ಜ್ , ಬೆಲ್ಟ್, ಟೈಗೆಂದೇ ಮೀಸಲಿಡಬಹುದು. ಒಂದು ವೇಳೆ ಬ್ಯಾಡ್ಜ್ ಮರೆತರೂ ಶಾಲೆಯಲ್ಲಿ ಹಾಕಿಕೊಳ್ಳಬಹುದು. ಶೂ ಪಾಲಿಷ್ ಸಹ ಹಿಂದಿನ ದಿನದ ಈ ಪಟ್ಟಿಗೇ ಸೇರುತ್ತದೆ.
- ಅವರ ಟೈಮ್ ಟೇಬಲ್ ನೋಡಿ ಇಡುವುದು/ಇಟ್ಟುಕೊಳ್ಳಲು ಸಹಾಯ ಮಾಡುವುದು, ಪೆನ್ಸಿಲ್ ಶಾರ್ಪ್ ಮಾಡುವುದು, ಡೈರಿಯನ್ನು ತೆಗೆದು ನೋಡಿ ಏನಾದರೂ ಬರೆದಿದ್ದರೆ ಓದಿ ಅದಕ್ಕೆ ಸ್ಪಂದಿಸುವುದು.
- ಉಗುರು ಕತ್ತರಿಸುವುದು, ಗಾಯವಾಗಿದ್ದರೆ ಬ್ಯಾಂಡ್ ಏಡ್ ಹಾಕಿ ಕಳಿಸುವುದು.
- ರಬ್ಬರ್ ಕಳೆದುಕೊಂಡು ಬರುತ್ತಾರೆಂದು ಎಷ್ಟೋ ಜನ ಅದನ್ನು ತುಂಡು ಮಾಡಿ ಮಕ್ಕಳಿಗೆ ಕೊಟ್ಟು ಕಳಿಸುತ್ತಾರೆ. ಇದಂತೂ ತುಂಬಾ ಅಪಾಯಕಾರಿ. ಏಕೆಂದರೆ, ಮಕ್ಕಳು ರಬ್ಬರ್ರನ್ನು ಮೂಗಿನೊಳಗೆ ಹಾಕಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಪ್ರಾಮುಖ್ಯತೆ ನೀಡಲೇ ಬೇಕಾದ ಇನ್ನೊಂದು ಅಂಶವೆಂದರೆ, ಮಗು ಶಾಲೆಯಿಂದ ಬಂದ ತಕ್ಷಣ ಆ ಮಗುವಿನ ಮಾತಿಗೆ ಕಿವಿಯಾಗಿ ಸ್ಪಂದಿಸುವುದು. ಏಕೆಂದರೆ, ಶಾಲೆಯಲ್ಲಿ ನಡೆದ ಎಷ್ಟೋ ವಿಷಯಗಳನ್ನು ಮನೆಗೆ ಬಂದ ತಕ್ಷಣ ಅಮ್ಮನಿಗೆ/ ಅಪ್ಪ/ ಪೋಷಕರು/ಹೇಳಲು ಮಕ್ಕಳು ಕಾದಿರುತ್ತಾರೆ. ಅದು ಖುಷಿ, ನೋವು, ದುಃಖ, ಕಂಪ್ಲೇಂಟ್, ಅಳು, ಸಂಭ್ರಮ, ಬೇಡಿಕೆ ಏನಾದರೂ ಆಗಿರಬಹುದು. ಅದಕ್ಕೆ ಪೂರಕವಾಗಿ ಸ್ಪಂದಿಸ ಬೇಕಾಗಿರುವುದು ನಮ್ಮ ಜವಾಬ್ದಾರಿ. ಏಕೆಂದರೆ, ಮಕ್ಕಳು ನಮ್ಮನ್ನೇ ನಂಬಿರುತ್ತಾರೆ, ನಮಗಾಗಿ ಕಾದಿರುತ್ತಾರೆ, ನಮ್ಮಿಂದ ತಮಗೆ ಬೇಕಾದದ್ದು ಸಿಗುತ್ತದೆ ಎಂದೇ ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಹಾಗಾಗಿ ಅದು ತಪ್ಪು/ ಸರಿ ಏನೇ ಇರಲಿ, ಬಂದ ತಕ್ಷಣ ಮೊದಲು ಅವರ ಮಾತನ್ನು ಕೇಳಿಸಿಕೊಳ್ಳೋಣ. ನಂತರ ಅದರ ಸರಿ /ತಪ್ಪು ವಿಮರ್ಶಿಸಿ ತಿಳಿ ಹೇಳೋಣ, ತಿದ್ದೋಣ, ಪ್ರೋತ್ಸಾಹಿಸೋಣ.
ಕೆಲವು ತಾಯಂದಿರು ತಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಮಗು ಬರುವುದನ್ನೇ ಕಾಯುತ್ತಿರುತ್ತಾರೆ. ಏಕೆ ಗೊತ್ತೇ? ಮಗು ಬಂದ ತಕ್ಷಣ ಇದನ್ನು ಓದುಸ್ಬೇಕು, ಇವತ್ತು ಇಷ್ಟು ಕಲುಸ್ಬೇಕು, ಟೆಸ್ಟ್ ಇದೆ, ಎಕ್ಸಾಮ್ ಇದೆ, ತಲೆ ತುಂಬಾ ಇದೇ ಯೋಚನೆ. ಹಾಗಾಗಿ ಮಗು ಬಂದ ತಕ್ಷಣ ಬೇರೆ ಯಾವುದಕ್ಕೂ ಅವಕಾಶ ಕೊಡದೇ, ತಮ್ಮದೇ ಯೋಚನೆಗಳನ್ನು ಮಗುವಿನ ಮೇಲೆ ಹೇರುತ್ತಾರೆ. ಸ್ವಲ್ಪ ಹೊಟ್ಟೆ ತುಂಬಿಸಿ ಓದಲು ಕೂರಿಸುತ್ತಾರೆ. ಒಂದು ವೇಳೆ ಮಗು ಆಸಕ್ತಿ ತೋರಿಸದಿದ್ದರೆ ಬೈಯ್ಯುವುದು, ಹೊಡೆಯುವುದು ಮಾಡುತ್ತಾರೆ. ಇದು ಖಂಡಿತಾ ತಪ್ಪು. ಏಕೆಂದರೆ, ನಿದ್ದೆಗಣ್ಣಲ್ಲೇ ಎದ್ದು ತಯಾರಾಗಿ ಶಾಲೆಗೆ ಹೋದ ಮಗುವಿಗೆ ತಿನ್ನುವ ಸಮಯ ಬಿಟ್ಟರೆ ಶಾಲೆಗೆ ಹೋದಾಗಿನಿಂದ ಬರುವವರೆಗೂ ಬರೀ ಪಾಠ ಕೇಳುವುದು, ಬರೆಯುವುದೇ ಆಗಿರುತ್ತದೆ. ಮಧ್ಯದಲ್ಲಿ ಬೇರೆ ಚಟುವಟಿಕೆಗಳಿದ್ದರೂ ( ಆಟ, ಪಿ ಟಿ, ಇತ್ಯಾದಿ)ಅದು ಪ್ರತಿದಿನದ ಟೈಮ್ ಟೇಬಲ್ ನಲ್ಲಿ ಇರುವುದಿಲ್ಲ. ಹಾಗಾಗಿ ಮಗುವಿಗೂ ಸಾಕಾಗಿ ಹೋಗಿರುತ್ತದೆ. ಬೆಲ್ ಹೊಡೆಯಿತೆಂದು ಖುಷಿಯಿಂದ ಮನೆಗೆ ಬರುವ ಮಗುವಿಗೆ ಇಲ್ಲೂ ಅದೇ ರೀತಿ ಆದರೆ ಹಿಂಸೆ ಎನಿಸಲು ಶುರುವಾಗುತ್ತದೆ. ಅವರಿಗೂ ವಿಶ್ರಾಂತಿ, ರುಚಿ ರುಚಿಯಾದ ತಿನಿಸು ಬೇಕೆನಿಸಿರುತ್ತದೆ. ಹಿಂದಿನ ದಿನ ಬಾರ್ಬಿಗೆ ಹಾಕಿದ್ದ ಹೇರ್ ಸ್ಟೈಲ್ ಬಿಚ್ಚಿ ಬೇರೆ ಹಾಕಬೇಕಾಗಿರುತ್ತದೆ. ಕಾರು, ಬೈಕ್ ಓಡಿಸಿ, ಸೈಕಲ್ ತುಳಿದು ಖುಷಿಪಡಬೇಕಾಗಿರುತ್ತದೆ. ಗೊಂಬೆಗಳನ್ನು ತಬ್ಬಿಕೊಂಡು ಮಲಗಬೇಕೆನಿಸಿರುತ್ತದೆ. ಮುಖ್ಯವಾಗಿ ಇಷ್ಟದ ಕಾರ್ಟೂನ್ ನೋಡಬೇಕಾಗಿರುತ್ತದೆ. ಅಬ್ಬಾ! ಒಂದೇ, ಎರಡೇ ಅವುಗಳ ಪಟ್ಟಿ, ಅವುಗಳ ಕನಸು, ಆಸೆಗಳೇ ರಾಶಿ ರಾಶಿ ಇರುವಾಗ ಮನೆಗೆ ಬಂದ ತಕ್ಷಣ ಮತ್ತೆ ಓದು, ಬರಿ ಎಂದರೆ ಯಾವ ಮಗುವಿಗೆ ಇಷ್ಟವಾಗುತ್ತದೆ ಹೇಳಿ. ಹಾಗಾಗಿ ಅವರಿಗೂ ಸ್ವಲ್ಪ ಅವರದೇ ಆದ ಸಮಯ ನೀಡೋಣ. ನಂತರ ಬರೆಸುವುದು, ಓದಿಸುವುದು ಎಲ್ಲಾ ಇದ್ದದ್ದೇ.
ಮಗುವಿಗೆ ರಾತ್ರಿ 8:30-9ಗಂಟೆಗಾದರೂ ನಿದ್ದೆ ಮಾಡಿಸುವುದು ಒಳ್ಳೆಯದು. ಬೆಳಿಗ್ಗೆ 6ಗಂಟೆಯವರೆಗಾದರೂ ಮಗು ಚೆನ್ನಾಗಿ ನಿದ್ರಿಸಲಿ. ಶಾಲೆ ಹತ್ತಿರವಿದ್ದರೆ ಮಗು ಏಳು ಗಂಟೆಗೆ ಎದ್ದರೂ ಸಾಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಿದ್ದೆ ಬಹಳ ಮುಖ್ಯ ಎಂಬುದು ಇಲ್ಲಿ ಗಮನದಲ್ಲಿಡಬೇಕಾದ ಅಂಶ.
ಮುಖ್ಯವಾಗಿ ಮಕ್ಕಳು ಮಲಗುವಾಗ ಒಳ್ಳೆಯ ನೀತಿ ಕಥೆಗಳನ್ನೋ/ಪುರಾಣ ಪುಣ್ಯಕಥೆಗಳನ್ನೋ ಹೇಳಿ ಮಲಗಿಸಿದರೆ ಅದೇ ಮಕ್ಕಳ ಮನಸ್ಸಲ್ಲಿ ಉಳಿಯುತ್ತದೆ. ಮುಂದೆ ಅವರ ಬದುಕು ರೂಪಿಸಿಕೊಳ್ಳಲು ಇದೂ ಸಹ ಸಹಾಯವಾಗುತ್ತದೆ. ಅವರ ಮುಗ್ಧತೆ, ಮುದ್ದು ಮಾತುಗಳು, ನಿಷ್ಕಲ್ಮಶ ನಗು, ಅವರ ಹೆಜ್ಜೆ ಹೆಜ್ಜೆಯ ಬೆಳವಣಿಗೆ ಎಲ್ಲವುದಕ್ಕೂ ಜೊತೆಯಾಗಿ ನಿಂತು ಅದನ್ನು ಸಂಭ್ರಮಿಸೋಣ. ಏಕೆಂದರೆ, ಈ ಕಾಲ ಮತ್ತೆ ಬರುವುದಿಲ್ಲ.
( ಸುತ್ತ ಮುತ್ತ – ಲೇಖನಗಳ ಸಂಕಲನದಿಂದ)
- ಮಂಗಳ ಎಂ ನಾಡಿಗ್
