‘ಯುಗ’ ಎಂದರೆ ಕಾಲ ಅಥವಾ ಯುಗ, ‘ಆದಿ’ ಎಂದರೆ ಆರಂಭ. ಹಾಗಾಗಿ ಯುಗಾದಿ ಎಂದರೆ ಹೊಸ ಕಾಲದ ಆರಂಭ ಎಂದರ್ಥ ಆದ್ದರಿಂದ ಈ ಹಬ್ಬವನ್ನು ಹೊಸ ವರ್ಷದ ಮೊದಲ ದಿನವಾಗಿ ಆಚರಿಸಲಾಗುತ್ತದೆ. ಯುಗಾದಿ ಕೇವಲ ಧಾರ್ಮಿಕ ಹಬ್ಬವಲ್ಲ, ಇದರ ಹಿಂದೆ ವೈಜ್ಞಾನಿಕ ಅರ್ಥವೂ ಅಡಗಿದೆ. ಲೇಖಕಿ ಗೀತಾಂಜಲಿ ಎನ್ ಎಮ್ ಅವರ ಯುಗಾದಿ ಕುರಿತಾದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
ಭಾರತ ತನ್ನ ವಿಶೇಷ ಸಂಸ್ಕೃತಿ ಆಚಾರ ವಿಚಾರಗಳಿಂದ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಠ ಸ್ಥಾನ ಹಾಗೂ ಗೌರವವನ್ನು ಹೊಂದಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿ ಹಬ್ಬಗಳೂ ಧಾರ್ಮಿಕ ಸಾಂಸ್ಕೃತಿಕ ಹಿನ್ನೆಗಳ ಜೊತೆಗೆ ವೈಜ್ಞಾನಿಕ ಹಿನ್ನೆಲೆಯನ್ನು ಸಹ ಒಳಗೊಂಡಿರುತ್ತವೆ.
ಪ್ರಾಣಿ ಪಕ್ಷಿಗಳಾದಿಯಾಗಿ ಪ್ರಕೃತಿಯು ಪೂಜಿಸಲ್ಪಡುವ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ ಅವು ಜೀವನಶೈಲಿ, ಪ್ರಕೃತಿ ಮತ್ತು ಮಾನವ ಮನಸ್ಸಿನೊಂದಿಗೆ ಸಂಬಂಧ ಹೊಂದಿರುವ ಗಾಢ ಅರ್ಥಗಳನ್ನು ಒಳಗೊಂಡಿವೆ. ಅಂತಹ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಯುಗಾದಿ. ‘ಯುಗ’ ಎಂದರೆ ಕಾಲ ಅಥವಾ ಯುಗ, ‘ಆದಿ’ ಎಂದರೆ ಆರಂಭ. ಹಾಗಾಗಿ ಯುಗಾದಿ ಎಂದರೆ ಹೊಸ ಕಾಲದ ಆರಂಭ ಎಂದರ್ಥ ಆದ್ದರಿಂದ ಈ ಹಬ್ಬವನ್ನು ಹೊಸ ವರ್ಷದ ಮೊದಲ ದಿನವಾಗಿ ಆಚರಿಸಲಾಗುತ್ತದೆ.
ಈ ಹಿನ್ನಲೆಯಲ್ಲಿ ಪ್ರಕೃತಿಯೇ ಹೊಸ ಚೈತನ್ಯ ಹೊಸ ಉತ್ಸಾಹದೊಂದಿಗೆ ಹೊಸ ಚಿಗುರಿನ ಹಸಿರುಡುಗೆ ತೊಟ್ಟು, ಬಣ್ಣ ಬಣ್ಣದ ಹೂ ಗಳಿಂದ ಚಿತ್ತಾರಗೊಂಡು ,ನವ ನವೀನವಾಗಿ ಕಂಗೊಳಿಸುತ್ತ ನವ ಸಂವತ್ಸರವನ್ನು ನವಿರಾಗಿ ಸ್ವಾಗತಿಸುವ ಹಬ್ಬವಾಗಿ ‘ಯುಗಾದಿ’ ಹಬ್ಬಗಳ ರಾಜ ಎನಿಸಿಕೊಂಡಿದೆ.
ಯುಗಾದಿ ಕೇವಲ ಧಾರ್ಮಿಕ ಹಬ್ಬವಲ್ಲ, ಇದರ ಹಿಂದೆ ವೈಜ್ಞಾನಿಕ ಅರ್ಥವೂ ಅಡಗಿದೆ. ಪ್ರಕೃತಿಯ ಚಕ್ರ ಋತುಬದಲಾವಣೆ ಮತ್ತು ಮಾನವ ಜೀವನದ ಅನುಭವಗಳ ನಡುವಿನ ಸಂಬಂಧವನ್ನು ಈ ಹಬ್ಬ ಸ್ಪಷ್ಟವಾಗಿ ತೋರಿಸುತ್ತದೆ.

ಫೋಟೋ ಕೃಪೆ : ಗೂಗಲ್
ಖಗೋಳ ಶಾಸ್ತ್ರವಾಗಿ ನೋಡಿದರೆ, ಯುಗಾದಿ ಚಂದ್ರನ ಕಾಲಗಣನೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ. ಈ ಸಮಯದಲ್ಲಿ ಸೂರ್ಯನ ಕಿರಣಗಳು ಭೂಮಿಯ ಉತ್ತರ ಗೋಳಾರ್ಧದ ಮೇಲೆ ನೇರವಾಗಿ ಬೀಳುತ್ತವೆ, ಇದು ಭೂಮಿಯ ಶಕ್ತಿಯು ಹೆಚ್ಚಾಗುವ (Northern Hemisphere) ಅವಧಿಯಾಗಿದೆ ಈ ಸಮಯವು ಸಾಮಾನ್ಯವಾಗಿ ವಸಂತ ಋತುವಿನ ಆರಂಭದೊಂದಿಗೆ ಹೊಂದಿಕೆಯಾಗುತ್ತದೆ. ವಸಂತ ಕಾಲದಲ್ಲಿ ಪ್ರಕೃತಿಯಲ್ಲಿ ಹೊಸ ಚೈತನ್ಯ ಮೂಡುತ್ತದೆ ಮರಗಳು ಹೊಸ ಎಲೆಗಳಿಂದ ಕೊಂಗೊಳಿಸುತ್ತವೆ ಹೂವುಗಳು ಅರಳುತ್ತವೆ, ಕೃಷಿ ಚಟುವಟಿಕೆಗಳು ಚುರುಕಾಗುತ್ತವೆ. ಈ ಪ್ರಾಕೃತಿಕ ಪುನರುಜ್ಜೀವನವನ್ನು ಮಾನವ ಜೀವನದ ಹೊಸ ಆರಂಭದ ಸಂಕೇತವಾಗಿ ಯುಗಾದಿ ಆಚರಣೆ ರೂಪುಗೊಂಡಿದೆ.
ಎಣ್ಣೆ ಸ್ನಾನ ಬೇಸಿಗೆಯ ಶಾಖವನ್ನು ತಡೆದುಕೊಳ್ಳಲು, ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ತಲೆಗೆ ಹರಳೆಣ್ಣೆ ಸವರಿ ಸ್ನಾನ ಮಾಡುವ ಸಂಪ್ರದಾಯವಿದೆ, ಇದು
ದೇಹವನ್ನು ತಂಪಾಗಿರಿಸುತ್ತದೆ
ಈ ಹಬ್ಬದಲ್ಲಿ ಸೇವಿಸುವ ಬೇವು, ಬೆಲ್ಲ, ಹುಣಸೆ, ಉಪ್ಪು,ಮಾವಿನಕಾಯಿ ಮುಂತಾದವುಗಳು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದ್ದು ಅವುಗಳಲ್ಲಿ ಇರುವ ಪೌಷ್ಟಿಕ ಮತ್ತು ಔಷಧೀಯ ಗುಣಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತವೆ. ವಿಶೇಷವಾಗಿ ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ರೋಗನಿರೋಧಕ ಗುಣಗಳಿದ್ದು ದೇಹವನ್ನು ಸೋಂಕುಗಳಿಂದ ರಕ್ಷಿಸುವ ಗುಣ ಹೊಂದಿದೆ. ಋತು ಬದಲಾವಣೆಯ ಸಮಯದಲ್ಲಿ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯ ರಕ್ಷಣೆಗಾಗಿ ಉಪಯುಕ್ತವಾಗಿದೆ.

ಫೋಟೋ ಕೃಪೆ : ಗೂಗಲ್
ಇದಲ್ಲದೆ, ಯುಗಾದಿಯ ಸಂದರ್ಭದಲ್ಲಿ ಮನೆಗಳ ಸ್ವಚ್ಛತೆ, ಹೂವು-ಮಾವಿನ ತೋರಣಗಳಿಂದ ಅಲಂಕಾರ, ಹೊಸ ಸಂಕಲ್ಪಗಳ ಆರಂಭ, ಹೊಸಬಟ್ಟೆ ಧರಿಸುವುದು ಇತ್ಯಾದಿ ಕ್ರಮಗಳು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಸಂಸ್ಕೃತಿಯ ಭಾಗವಾಗಿವೆ. ಸ್ವಚ್ಛತೆ ಆರೋಗ್ಯದ ಮೂಲವಾಗಿದ್ದು, ಪರಿಸರವನ್ನು ಶುದ್ಧವಾಗಿಡುವ ಅಭ್ಯಾಸವನ್ನು ಈ ಆಚರಣೆ ಉತ್ತೇಜಿಸುತ್ತದೆ.ಮಾವಿನ ಎಲೆಗಳಿಂದ ಮನೆ ಅಲಂಕರಿಸುವುದು ಕೇವಲ ಸಂಪ್ರದಾಯವಲ್ಲ ಇದು ಗಾಳಿಯನ್ನು ಶುದ್ಧೀಕರಿಸುವ ಮತ್ತು ಮನೆಯೊಳಗೆ ತಾಜಾ ಆಮ್ಲಜನಕವನ್ನು ಹೆಚ್ಚಿಸುವ ವೈಜ್ಞಾನಿಕ ಅಂಶವನ್ನು ಹೊಂದಿದೆ.
ಇನ್ನು ಹೊಸ ವರ್ಷದ ಆರಂಭದ ಸಂಕೇತವಾಗಿ, ಹೊಸ ಬಟ್ಟೆಗಳನ್ನು ಧರಿಸುವುದು ಮತ್ತು ಪಂಚಾಂಗ ಕೇಳುವುದು ಹೊಸ ಆಲೋಚನೆಗಳು ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೀಗಾಗಿ ಯುಗಾದಿ ಹಬ್ಬವು ಕೇವಲ ಸಂಪ್ರದಾಯದ ಆಚರಣೆ ಮಾತ್ರವಲ್ಲದೆ, ಖಗೋಳಶಾಸ್ತ್ರ, ಪ್ರಕೃತಿ ಚಕ್ರ, ಆರೋಗ್ಯಶಾಸ್ತ್ರ ಮತ್ತು ಮಾನವ ಜೀವನದ ಸಮತೋಲನವನ್ನು ಪ್ರತಿಬಿಂಬಿಸುವ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿದೆ. ಈ ದೃಷ್ಟಿಯಿಂದ ನೋಡಿದರೆ, ಯುಗಾದಿ ನಮ್ಮ ಪೂರ್ವಜರ ಪ್ರಕೃತಿ ಅರಿವು, ಕಾಲಗಣನೆ ಮತ್ತು ಜೀವನಶೈಲಿಯ ಜ್ಞಾನವನ್ನು ಒಳಗೊಂಡಿರುವ ಸಾಂಸ್ಕೃತಿಕ ಆಚರಣೆಯಾಗಿದೆ.
ಯುಗಾದಿ ಕೇವಲ ಒಂದು ಧಾರ್ಮಿಕ ಹಬ್ಬವಲ್ಲ. ಅದು ಪ್ರಕೃತಿಯ ಚಕ್ರದೊಂದಿಗೆ ಮಾನವ ಜೀವನವನ್ನು ಹೊಂದಿಸುವ ಸಂಸ್ಕೃತಿಯ ಜ್ಞಾನವಾಗಿದೆ. ಋತುಬದಲಾವಣೆ, ಆರೋಗ್ಯಕರ ಆಹಾರ ಪದ್ಧತಿ, ಹೊಸ ಸಂಕಲ್ಪಗಳ ಆರಂಭ ಈ ಎಲ್ಲದರಲ್ಲೂ ವಿಜ್ಞಾನ ಅಡಗಿದೆ. ಹೀಗಾಗಿ ಯುಗಾದಿ ಆಚರಣೆ ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಪ್ರಕೃತಿ ಅರಿವಿನ ಸಂಕೇತವಾಗಿದೆ.ಸಂಪ್ರದಾಯದೊಳಗೆ ವಿಜ್ಞಾನವನ್ನು ಅರಿತು ಜೀವನದಲ್ಲಿ ಸಮತೋಲನವನ್ನು ತರಲು ಕಲಿಸುವ ಹಬ್ಬವಾಗಿ ಯುಗಾದಿ ಮಹತ್ವ ಪಡೆದಿದೆ.
ಹಳೆಯದನ್ನು ಅನುಭವವಾಗಿ ತೆಗೆದುಕೊಂಡು, ಹೊಸದನ್ನು ಅನಂದವಾಗಿ ಭರವಸೆಯಿಂದ ಸ್ವಾಗತಿಸುವ ಈ ಹಬ್ಬ ಸಂಪ್ರದಾಯದ ಸೊಗಸಿನಲ್ಲಿ ವಿಜ್ಞಾನವೂ ಬೆರೆತು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ವೈಜ್ಞಾನಿಕ ಹಬ್ಬವಾಗಿ ಮಹತ್ವ ಪಡೆದಿದೆ.
ಯುಗಾದಿಯ ಧಾರ್ಮಿಕ ಹಿನ್ನಲೆ
ಪುರಾಣಗಳ ಪ್ರಕಾರ ಬ್ರಹ್ಮ ದೇವರು ಈ ದಿನದಿಂದಲೇ ಸೃಷ್ಟಿಯನ್ನು ಆರಂಭಿಸಿದನೆಂದು ನಂಬಿಕೆ ಇದೆ. ಆದ್ದರಿಂದ ಯುಗಾದಿ ದಿನವನ್ನು ಹೊಸ ಯುಗದ ಆರಂಭವೆಂದು ಭಾವಿಸಿ ದೇವರ ಪೂಜೆ, ಪಂಚಾಂಗ ಶ್ರವಣ ಮತ್ತು ಶುಭಕಾರ್ಯಗಳನ್ನು ಆರಂಭಿಸುವ ಸಂಪ್ರದಾಯ ಬೆಳೆದಿದೆ. ಈ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪಂಡಿತರು ‘ಪಂಚಾಂಗ’ ವನ್ನು ಓದಿ ಆ ವರ್ಷದ ಗ್ರಹಗತಿಗಳು, ಮಳೆ, ಕೃಷಿ ಮತ್ತು ಸಮಾಜದ ಸ್ಥಿತಿಗತಿಗಳನ್ನು ವಿವರಿಸುತ್ತಾರೆ. ಇದನ್ನು ‘ಪಂಚಾಂಗ ಶ್ರವಣ’ ಎಂದು ಕರೆಯಲಾಗುತ್ತದೆ.
ಧಾರ್ಮಿಕವಾಗಿ ಬೇವು ಬೆಲ್ಲ
ಯುಗಾದಿ ದಿನ ನಾವು ತಿನ್ನುವ ವಿಶೇಷ ಪದಾರ್ಥ ಬೇವು-ಬೆಲ್ಲವು ಜೀವನದ ಸಾರವನ್ನೇ ಸೂಚಿಸುತ್ತದೆ. ಬೇವಿನ ಕಹಿ, ಬೆಲ್ಲದ ಸಿಹಿ ಇವುಗಳು ಬದುಕಿನ ಜಂಜಾಟದಲ್ಲಿ ಬರುವ ಕಹಿ-ಸಿಹಿ ಅನುಭವಗಳ ಸಂಕೇತವೆಂದು ಧಾರ್ಮಿಕವಾಗಿ ಅರ್ಥೈಸಲಾಗುತ್ತದೆ.
ಅಂದರೆ ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಪಾಠವನ್ನು ಎಲ್ಲರಿಗೂ ಕಲಿಸುವುದರ ಮೂಲಕ ಬೇವು-ಬೆಲ್ಲದ ಮಿಶ್ರಣದಂತೆ ಜೀವನದಲ್ಲಿಯೂ ಸಿಹಿ-ಕಹಿ ಅನುಭವಗಳು ಸಹಜವೆಂದು ಈ ಹಬ್ಬ ತಿಳಿಸುತ್ತದೆ.
- ಗೀತಾಂಜಲಿ ಎನ್ ಎಮ್ – ಕೊಡಗು.
