‘ಆಶಯ’ ಕವನ : ಶಿವದೇವಿ ಅವನೀಶಚಂದ್ರ

ಬೇವು ಹೊಂಗೆಯ ಕರದಲಿವೆ, ಬೀಸಣಿಗೆಗಳು ಬೀಸಿಕೊ…ಹೊಸ ಸಂವತ್ಸರ ಬಂದಿದೆ… ಯುಗಾದಿ ಕುರಿತು ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ವಿಶೇಷ ಕವನವನ್ನು ತಪ್ಪದೆ ಮುಂದೆ ಓದಿ…

ಪತ್ರಪತ್ರದಿ ಹೆಸರು ಬರೆದಿದೆ
ಬರುವ ಚೈತ್ರನ ಹಾದಿಗೆ
ಮಾಮರದೊಡಲಲಿ ಪಿಕವು ಉಲಿದಿದೆ
ಪಂಚಮದಿ ಹಿತವ ತಂದಿದೆ ಮನಸಿಗೆ

ಹಸಿರು ಹಸಿರು ಹಸಿರ ತೋರಣ
ನಡೆಯ ಹಾದಿಯ ಉದ್ದಕೂ
ಉಸಿರು ಉಸಿರು ಉಸಿರುತಿದೆ
ತನ್ನ ಗುಟ್ಟನು ಪವನಕೆ

ರಾಗದೋಕುಳಿ ಹೊಮ್ಮಿನಿಂತಿದೆ
ಗಿಡಮರಗಳ ಮೊಗದಲಿ ಏತಕೋ
ಬೇವು ಹೊಂಗೆಯ ಕರದಲಿವೆ
ಬೀಸಣಿಗೆಗಳು ಬೀಸಿಕೊ

ಕಹಿಗೂ ಸಿಹಿ ರುಚಿ ಬಂದಿದೆ
ಬೆಲ್ಲದೊಟನಾಟದಿ
ಪರಿಮಳವೆ ತುಂಬಿದೆ ಇಲ್ಲಿ
ಮಧುಕರಿಗಳ ಹಿಗ್ಗಿನ ನಾಟ್ಯದಿ

ಹೊಸ ಸಂವತ್ಸರ ಬಂದಿದೆ
ಸುಗ್ಗಿಯ ತೇರೆಳೆದಿದೆ
ಹಿಗ್ಗು ಮನೆಮಾಡಿದೆ
ಹೋಳಿಗೆಯ ಘಮಲನು
ತರುತಿದೆ

ತರಲಿ ಹೊಸಸಂಭ್ರಮವ ಯುಗಾದಿ
‌‌ನರರ ಹಗೆತನ ನೀಗಲಿ
ಭ್ರಾತೃಪ್ರೇಮದ ಬಂಧ ಬೆಸೆಯಲಿ
ಶಾಂತಿ ಕಹಳೆಯು ಮೊಳಗಲಿ…


  • ಶಿವದೇವಿ ಅವನೀಶಚಂದ್ರ – ಕವಿ, ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading