ಭಾರತೀಯ ವಿಜ್ಞಾನದ ಬೆಳಕು – ಡಾ. ಗುರುಪ್ರಸಾದ ರಾವ್ ಹವಲ್ದಾರ್

ಸರ್ ಸಿ ವಿ ರಾಮನ್ ಅವರ ಹೆಸರು ಕೇಳದವರು ಯಾರೂ ಇಲ್ಲ. ಭಾರತ ಮಾತೆಯ ಮುಡಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿಯ ಗರಿ ಮೂಡಿಸಿದ ಏಷ್ಯಾದ ಮೊದಲಿಗರು.ಇಂದು ರಾಷ್ಟ್ರೀಯ ವಿಜ್ಞಾನ ದಿನ ಡಾ. ಗುರುಪ್ರಸಾದ ರಾವ್ ಹವಲ್ದಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ….

ಜ್ಞಾನ- ವಿಜ್ಞಾನ- ತಂತ್ರಜ್ಞಾನದಿಂದ ಇಂದು ವಿಶ್ವ ಎನ್ನುವುದು ಚಿಕ್ಕ ಗ್ರಾಮವಾಗಿ ಮಾರ್ಪಟ್ಟಿದೆ. ಜಗತ್ತಿನ ಯಾವ ಮೂಲೆಯನ್ನು ಬೇಕಾದರೂ ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದು, ತಲುಪಲುಬಹುದು. ಅಷ್ಟೇ ಅಲ್ಲದೆ ಬೇರೆ ಗ್ರಹಕ್ಕೆ ಹೋಗಿ ಬರುವ ಮಟ್ಟಕ್ಕೆ ಇಂದು ತಲುಪಿದ್ದಾನೆ ಮಾನವ. ಪ್ರಾಣಿಗಳಲ್ಲಿ ಇರುವ ಒಂದೊಂದು ಕೌಶಲ್ಯಗಳನ್ನು ತನ್ನದಾಗಿಸಿಕೊಂಡಿದ್ದಾನೆ ಆಕಾಶದಲ್ಲಿ ಹಕ್ಕಿಯಂತೆ, ಸಾಗರದಲ್ಲಿ ಮೀನಿನಂತೆ, ಚಿರತೆಯಂತೆ ಓಡುವುದನ್ನು ಕಲಿತಿದ್ದಾನೆ. ಇದೆಲ್ಲವೂ ಸಾಧ್ಯವಾದದ್ದು ವಿಜ್ಞಾನಿಗಳ ಪರಿಶ್ರಮದ ಫಲದಿಂದ.

ಅಸಾಧ್ಯವಾದುದೆಲ್ಲವನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ. ವಿಜ್ಞಾನದ ಸಹಾಯದಿಂದ ಜೀವನ ಅತ್ಯದ್ಭುತವೆನಿಸುತ್ತಿದೆ. ಆಧುನಿಕ ಮಾನವನ ಬದುಕು, ವಿಜ್ಞಾನ-ಮಿದುಳಿನ ಕನಸಿನ ಕೂಸು ಎಂದೇ ಹೇಳಬಹುದು. ನಮ್ಮಲ್ಲಿದ್ದ ಅನೇಕ ಮೌಢ್ಯತೆಗಳನ್ನು ಹೊಡೆದೋಡಿಸುವಂತೆ ಮತ್ತು ಕಂದಾಚಾರಗಳನ್ನು ಹೋಗಲಾಡಿಸುವಂತೆ ಮಾಡಿದ್ದು ವಿಜ್ಞಾನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ‘ರಾಮನ್ ಎಫೆಕ್ಟ್’ ಎಂಬ ವಿದ್ಯಮಾನವನ್ನು ಪ್ರಾಯೋಗಿಕವಾಗಿ ನಿರೂಪಿಸಿ ತೋರಿಸಿದ್ದರು ಅವರು. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು. 1986ರಿಂದ ಭಾರತದಲ್ಲಿ ಫೆಬ್ರವರಿ 28 ನ್ನು ರಾಮನ್‍ರ ಗೌರವಾರ್ಥವಾಗಿ ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ಫೋಟೋ ಕೃಪೆ : google

ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ (National Science Day Theme) ಪ್ರತಿವರ್ಷ ಒಂದೊಂದು ಘೋಷವಾಕ್ಯದಡಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನ ಎಂಬ ಥೀಮ್ನಡಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ವಿಜ್ಞಾನಕ್ಕೆ ಸಂಬಂಧಪಟ್ಟ ಉಪನ್ಯಾಸಗಳು, ಚರ್ಚಾ ಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಣೆ ಮಾಡಲಾಗುತ್ತದೆ. ವಿಜ್ಞಾದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

ಸರ್ ಸಿ ವಿ ರಾಮನ್ ಅವರ ಹೆಸರು ಕೇಳದವರು ಯಾರೂ ಇಲ್ಲ. ಭಾರತ ಮಾತೆಯ ಮುಡಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿಯ ಗರಿ ಮೂಡಿಸಿದ ಏಷ್ಯಾದ ಮೊದಲಿಗರು. ಭಾರತದ ಹೆಮ್ಮೆಯ ಪುತ್ರ. ಸರ್ ಸಿ ವಿ ರಾಮನ್‍ರವರು ನೋಬೆಲ್ ಪಾರತೋಷಕ ಪಡೆದು 90 ವರ್ಷಗಳಾದವು. ಅದರ ಸಂಭ್ರಮಾಚರಣೆಯೂ ವಿಜ್ಞಾನ ದಿನದಂದೇ ನೆರವೇರುವುದು. ವಿಜ್ಞಾನಗಳ ಸಹಯೊಗದಿಂದ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನಾಚರಿಸುವಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ‘ವಿಜ್ಞಾನವೆಂಬುದು ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರ ಕಾಣಬಾರದು. ಬದಲಾಗಿ ಇಡೀ ವಿಶ್ವದಲ್ಲಿ ಕಾಣಬೇಕು. ಆಗಸದಲ್ಲಿ ಹೊಳೆವ ನಕ್ಷತ್ರಗಳನ್ನು ಕುತೂಹಲದ ಕಂಗಳಿಂದ ನೋಡಬೇಕು. ತುಟಿ ಬಿರಿದ ಹೂವುಗಳನ್ನು ಕಣ್ತೆರೆದು ಸಂತಸದಿಂದ ನೋಡಬೇಕು. ಅಷ್ಟೇ ಅಲ್ಲ ನಮ್ಮ ಸುತ್ತಮುತ್ತಲು ನಡೆಯುವ ಎಲ್ಲ ಅದ್ಭುತಗಳನ್ನು ಬೆರಗುಗಣ್ಣುಗಳಿಂದ ಗಮನಿಸಬೇಕು. ಈ ಅಚ್ಚರಿಗಳ ಕುರಿತು ನಮ್ಮ ಮನದಲ್ಲಿ ನಾವೇ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಕೇಳಿಕೊಂಡ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಮ್ಮಲ್ಲಿಯ ಬುದ್ಧಿ ಶಕ್ತಿ ಮತ್ತು ವಿಜ್ಞಾನವನ್ನು ಬಳಸಿಕೊಳ್ಳಬೇಕು.’ಎಂದರು ಸಿ ವಿ ರಾಮನ್.

ಫೋಟೋ ಕೃಪೆ : google

1888 ರ ನವಂಬರ್ 7 ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ರಾಮನ್ ಜನಿಸಿದರು. ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ಅವರ ತಂದೆ ಚಂದ್ರಶೇಖರ್ ಅಯ್ಯರ್ ಗಣಿತ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ತೀಕ್ಷ್ಣ ಗ್ರಹಣಶಕ್ತಿ ಅಪಾರ ಬುದ್ದೀವಂತಿಕೆಯ ಫಲವಾಗಿ ಕೇವಲ 12ನೇ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದರು, ಅಷ್ಟೇ ಅಲ್ಲ; ಬಿಎ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದು ಭೌತಶಾಸ್ತ್ರಕ್ಕೆ ಮೀಸಲಿದ್ದ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು. ಎಂ ಎ ಸ್ನಾತಕೋತ್ತರ ಪರೀಕ್ಷೆಯಲ್ಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಇಂಡಿಯನ್ ಫೈನಾನ್ಸಿಯಲ್ ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿ ಬರ್ಮಾ ದೇಶದ ರಾಜಧಾನಿಯಾದ ರಂಗೂನ್ ನಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. 1917ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರೊಫೆಸರ್ ಹುದ್ದೆಗೆ ಕರೆ ಬಂದಿತು. ಹೀಗಾಗಿ ಅಧಿಕಾರಿ ಹುದ್ದೆ ಬಿಟ್ಟು ಪ್ರೊಫೆಸರ್ ಹುದ್ದೆ ಪ್ರಾರಂಭಿಸಿದರು. ನಂತರ 1933ರಿಂದ 1948ರವರೆಗೆ ಸುದೀರ್ಘ 15 ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಐಐಎಸ್‍ಸಿ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್) ಯ ನಿರ್ದೇಶಕರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು. ರಾಮನ್ ಅವರು ನೇರ ನುಡಿಗೆ ಹೆಸರುವಾಸಿ. ಐಐಎಸ್‍ಸಿ ಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಉತ್ತಮ ಭವಿಷ್ಯಕ್ಕಾಗಿ ಸರಕಾರದ ನೆರವಿನ ಅಗತ್ಯವಿದೆ ಎಂದು ನೇರವಾಗಿ ಅಂದಿನ ಪ್ರಧಾನಿ ನೆಹರುರವರನ್ನು ದಿಟ್ಟತನದಿಂದಲೇ ಕೇಳಿದ್ದರು. ಇವರ ಅಪ್ರತಿಮ ಪ್ರತಿಭೆಗೆ ಮಾರು ಹೋದ ಇಂಗ್ಲಂಡಿನ ಕೆಂಬ್ರಿಜ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗವು, ಅವರು ಬಯಸಿದಷ್ಟು ವೇತನವನ್ನು ಕೊಡುವುದಾಗಿ ಹೇಳಿತು. ಆದರೆ, ಅಪ್ಪಟ ಭಾರತಾಂಬೆಯ ಸುಪುತ್ರರಾದ ಸಿವಿ ರಾಮನ್‍ರವರು ಹಣದ ಆಸೆಗೆ ಬಲಿ ಬೀಳಲಿಲ್ಲ. ಬದಲಿಗೆ ‘ನಾನೊಬ್ಬ ಭಾರತೀಯ. ಏನೇ ಆಗಲಿ ಭಾರತವನ್ನು ಬಿಟ್ಟು ಎಲ್ಲಿಯೂ ಹೋಗಲಾರೆ. ಭಾರತಾಂಬೆಯ ಮಡಿಲಲ್ಲಿಯೇ ಸಂಶೋಧನೆಗಳನ್ನು ಮುಂದುವರೆಸುವೆ ಎಂದು ಹೇಳಿ ತಮ್ಮ ಅಪ್ರತಿಮ ದೇಶ ಭಕ್ತಿಯನ್ನು ಮೆರೆದರು.

1921ರಲ್ಲಿ ಇಂಗ್ಲೆಂಡಿಗೆ ಸಮುದ್ರ ಮಾರ್ಗವಾಗಿ ಪಯಣಿಸುತ್ತಿದ್ದ ವೇಳೆ ರಾಮನ್‍ಗೆ ಸಮುದ್ರದ ಜಲರಾಶಿ ನೀಲಿ ಬಣ್ಣದಿಂದ ಏಕೆ ಕೂಡಿದೆ? ಎಂದೆನಿಸಿತು. ಈ ವಿಷಯವಾಗಿ ಈಗಾಗಲೇ ವಿವರಿಸಿದ ವಿಜ್ಞಾನಿ ಲಾರ್ಡ್ ರ್ಯಾಲೆಯ ತತ್ವವನ್ನು ಒಪ್ಪದೇ ಪ್ರಾಯೋಗಿಕವಾಗಿ ತಮ್ಮ ತತ್ವವನ್ನು ವಿಶ್ಲೇಷಿಸಲು ಪ್ರಾರಂಭಿಸಿದರು. ಬೆಳಕಿನ ಕಿರಣ /ಶಕ್ತಿಯ ಪ್ಯಾಕೆಟ್‍ಗೆ ಪ್ರೋಟಾನ್ ಎಂದು ಕರೆಯುತ್ತಾರೆ. ಪ್ರೋಟಾನ್‍ಗಳು ರಾಸಾಯನಿಕ ದ್ರವದಲ್ಲಿನ ಅಣುವಿಗೆ ಡಿಕ್ಕಿ ಹೊಡೆದಾಗ ಪ್ರೋಟಾನ್‍ನ ಶಕ್ತಿಯಲ್ಲಿ ಉಂಟಾಗುವ ನಷ್ಟ ಮತ್ತು ತತ್ಪರಿಣಾಮವಾಗಿ ಸ್ಪೆಕ್ಟ್ರಮ್ ದಲ್ಲಿ ಉಂಟಾಗುವ ವಿಶೇಷ ರೇಖೆಗಳೇ ‘ರಾಮನ್ ಎಫೆಕ್ಟ್.

ಈ ಎಫೆಕ್ಟ್ ನಿಂದ ಘನ ದ್ರವ ಅನಿಲ ವಸ್ತುಗಳಲ್ಲಿನ ಅಣುಗಳ ವ್ಯವಸ್ಥೆಯನ್ನು ತಿಳಿದುಕೊಳ್ಳಬಹುದು. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳ ಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳುವುದನ್ನು ಕಾಣಬಹುದು. ಉದಾಹರಣೆಗೆ ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವುದು. ಹೀಗೆ ಚದುರಿದ ಬಹಳಷ್ಟು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕೆ ಬದಲಾಗಿರುತ್ತದೆ. ಇದೇ ರಾಮನ್ ಎಫೆಕ್ಟ್.

 

ಇಂಥ ಆವಿಷ್ಕಾರದ ಮೂಲಕ ರಾಮನ್ ಅವರು ಇಡೀ ಜಗತ್ತು ಭಾರತದತ್ತ ಬೆರಗಿನಿಂದ ನೋಡುವಂತೆ ಮಾಡಿತು. ಇದಾದ ಮೇಲೆ ಸಿ ವಿ ರಾಮನ್ ರನ್ನು ಅರಸಿಕೊಂಡು ಬಂದ ಪ್ರಶಸ್ತಿಗಳು ಬಿರುದು ಬಾವಲಿಗಳು ಹತ್ತು ಹಲವು ಅದರಲ್ಲಿ 1929 ರಲ್ಲಿ ಬ್ರಿಟೀಷ್ ಸರಕಾರ ಕೊಡಮಾಡಿದ ಸರ್ ಬಿರುದು ಪ್ರಮುಖವಾದುದು. 1930 ರಲ್ಲಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ, 1954ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ. ಇದಲ್ಲದೇ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಪಾರಿತೋಷಕಗಳು ಹಾಗೂ ಗೌರವ ಸದಸ್ಯತ್ವ ದೊರೆತದ್ದು ರಾಮನ್‍ರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈನ್ನಡಿಗಳಾಗಿವೆ.

ಫೋಟೋ ಕೃಪೆ : google

ಇಂತಹ ದಿನದಂದು ಜನ ಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ, ವೈಜ್ಞಾನಿಕ ಮನೋಭಾವವನ್ನು ಮೂಡಿಸುವ, ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸುವ, ಪ್ರಯೋಗಗಳ ಮೂಲಕ ಹೊಸ ಅವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸುವ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರೆಪಿಸುವ ಕಾರ್ಯಮಾಡುವುದು ಬಹುಮುಖ್ಯವಾಗಿದೆ.

ಇಂದು ನಾವು ಬಾಹ್ಯಾಕಾಶ, ಪರಮಾಣು ವಿಜ್ಞಾನ, ಮಾಹಿತಿ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲೂ ಸೇರಿದಂತೆ ದೇಶದ ವಿಜ್ಞಾನಿಗಳು ಕೊಟ್ಟಿರುವ ಕೊಡುಗೆ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲವನ್ನೂ ಹಾಲು ಕರೆಯುವ ಹಸು ಎಂದು ಕಾಣುವಂತಹ ಇಂದಿನ ವ್ಯಾಪಾರೀ ಮನೋಧರ್ಮದಲ್ಲಿ ಹೊಸ ಪೀಳಿಗೆಯ ತಲೆಮಾರುಗಳು ಸಂಶೋಧನಾ ಕ್ಷೇತ್ರಗಳತ್ತ ಮೊಗ ಮಾಡುತ್ತಿರುವುದು ಕಡಿಮೆಯಾಗುತ್ತಿದೆ ಎಂಬುದು ಸುಳ್ಳಲ್ಲ. ಹಾಗೆ ಆಸಕ್ತರಿದ್ದರೂ ಅವರು ಅನಿವಾರ್ಯವೆಂಬಂತೆ ಅಮೆರಿಕದಂತಹ ರಾಷ್ಟ್ರಗಳಿಗೆ ಜಾರುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಯಾಂತ್ರಿಕವಾಗಿ ಪ್ರಶ್ನೆ ಪತ್ರಿಕೆಗಳ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಿ ಅವರಲ್ಲಿ ಪ್ರಾಯೋಗಿಕವಾಗಿ ವಿಜ್ಞಾನದ ಚಿಂತನೆಯ ಶಕ್ತಿಯನ್ನು ಕುಂಠಿತಗೊಳಿಸುವ ಗುಡ್ಡಿಪಾಠದ ಪ್ರವೃತ್ತಿ ದೇಶದಾದ್ಯಂತ ಇಂದು ವ್ಯಾಪಿಸಿಕೊಂಡುಬಿಟ್ಟಿದೆ.

ವೈಜ್ಞಾನಿಕ ಕ್ಷೇತ್ರದ ಕೆಲವೊಂದು ನಿಲುವುಗಳು ಅನಪೇಕ್ಷಿತವಾಗಿ ರಾಜಕೀಯ ಬಣ್ಣ ತಳೆದುಕೊಂಡು, ವಿಜ್ಞಾನದ ವ್ಯವಸ್ಥೆಗಳ ಕುರಿತಾಗಿ ಅಪ್ರಬುದ್ಧ ರಾಜಕಾರಣಿಗಳ ಅನುಚಿತ ಮಾತುಗಳಿಗೆ ಕೂಡಾ ಪ್ರೇರಿತವಾಗಿರುವುದು, ವಿಜ್ಞಾನ ನಮ್ಮ ದೇಶದಲ್ಲಿ ಪಡೆದುಕೊಳ್ಳುತ್ತಿರುವ ದುರ್ಗತಿಗೆ ವಿಶ್ಲೇಷಣೆಯಾಗುತ್ತಿದೆಯೇನೋ ಎಂಬ ನಿರಾಶೆ ಕೂಡಾ ಹಬ್ಬುತ್ತಿದೆ.ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳು ಬರುತ್ತಿರುವ ಹಾಗೆಲ್ಲಾ ಮನುಷ್ಯ ಅವುಗಳ ಉಪಯೋಗಕ್ಕಾಗಿ ನಿಸರ್ಗವನ್ನು ಬರಿದು ಮಾಡುತ್ತಿದ್ದಾನೆ ಎಂಬುದು ಕೂಡಾ ಸತ್ಯವಾದ ವಿಚಾರ.

ಕುಡಿಯುವ ನೀರು, ಪೆಟ್ರೋಲ್, ಗಿಡ, ಮರ, ಬೆಟ್ಟ ಗುಡ್ಡಗಳನ್ನೆ ಅಲ್ಲದೆ ತನ್ನಂತೆಯೇ ಇರುವ ಇತರ ಮನುಷ್ಯ ಜೀವಿಗಳನ್ನೂ ಒಳಗೊಂಡಂತೆ ಎಲ್ಲ ತರಹದ ಜೀವಿಗಳನ್ನೂ ತನ್ನ ಅಹಮಿಕೆಯಲ್ಲಿ ಮರೆತು, ಶಕ್ತಿ ಮೀರಿ ಎಂಬಂತೆ ಪ್ರಾಕೃತಿಕ ಸಮತೋಲನವನ್ನು ಹಾಳುಗೆಡವಿ ವಿಶ್ವವನ್ನು ಬಿರುಸಿನಿಂದ ವಿನಾಶದೆಡೆಗೆ ಕೊಂಡೊಯ್ಯುತಿದ್ದಾನೆ. ತನ್ನ ಬಯಕೆಗಳ ಪೂರೈಕೆ ವಿಚಾರ ಬಂದಾಗ ವಿಜ್ಞಾನವನ್ನು ಪೂಜಿಸಿ ಆರಾಧಿಸುವ ಸೋಗು ಹಾಕುವ ಮಾನವ, ತನ್ನ ನಡವಳಿಕೆಗಳ ವಿಚಾರ ಬಂದಾಗ ಮಾತ್ರ ವೈಜ್ಞಾನಿಕ ಚಿಂತನೆಯನ್ನು ಪಕ್ಕಕ್ಕಿಟ್ಟು ಕೆಲಸ ಮಾಡುತ್ತಿದ್ದಾನೆ. ಇಂತಹ ವಿಜ್ಞಾನದ ದಿನಗಳು ವರ್ಷದ ಒಂದು ದಿನವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ದೈನಂದಿನದಲ್ಲಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಅಂತರ್ಗತವಾಗಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ರಾಮನ್ ಸಾಧನೆಯ ಸ್ಮರಣೆಯಲ್ಲಿ ಆಚರಿಸುವ ರಾಷ್ಟ್ರೀಯ ವಿಜ್ಞಾನ ದಿನದಂದು ನಾವೆಲ್ಲ ಮೌಢ್ಯತೆ ಮತ್ತು ಕಂದಾಚರಣೆಗಳನ್ನು ತೊರೆದು ವೈಜ್ಞಾನಿಕ ರೀತಿಯ ಆಲೋಚನೆಗಳನ್ನು ರೂಢಿಸಿಕೊಂಡರೆ ಅದು ರಾಮನ್‍ಗೆ ನಾವು ತೋರುವ ನಿಜವಾದ ಗೌರವ. ಬನ್ನಿ ನಾವೆಲ್ಲ ರಾಮನ್ ಸಾಧನೆ ಗೌರವಿಸೋಣ.


  • ಡಾ. ಗುರುಪ್ರಸಾದ ರಾವ್ ಹವಲ್ದಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW