ಮಹಿಳೆಯರ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ಆಭರಣಗಳಿಗಿಂತಲೂ ಹೆಚ್ಚು ಗೌರವದ ಸ್ಥಾನ ಸೇಫ್ಟಿ ಪಿನ್ನುಗಳಿಗಿದೆ. ಸೇಫ್ಟಿ ಪಿನ್ ಗಳು ಮಹಿಳೆಯರ ಆಪ್ತಮಿತ್ರ. ಈ ಪಿನ್ನನ್ನು ಕಂಡು ಹಿಡಿದ ವ್ಯಕ್ತಿ ೧೯ ನೆಯ ಶತಮಾನದಲ್ಲಿದ್ದ ಅಮೆರಿಕದ ಮೆಕ್ಯಾನಿಕ್ ವಾಲ್ಟರ್ ಹಂಟ್, ತಪ್ಪದೆ ಮುಂದೆ ಓದಿ ಡಾ. ಸುವರ್ಣಿನೀ ಕೊಣಲೆ ಅವರ ಲೇಖನಿಯಲ್ಲಿ ಮೂಡಿ ಬಂದ ಸೇಫ್ಟಿ ಪಿನ್ನು …
ವಾಲ್ಟರ್ ಹಂಟ್, ಇವ 19 ನೆಯ ಶತಮಾನದಲ್ಲಿದ್ದ ಅಮೆರಿಕದ ಮೆಕ್ಯಾನಿಕ್. ಭಾರತೀಯ ಮಹಿಳೆಯರು ಈ ಮಹಾಶಯನಿಗೆ ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ! ಅವನು ಅಂದು ಕಂಡುಹಿಡಿದ ‘ಪಿನ್ನು’ ಇಂದು ನಮ್ಮ ಬದುಕಿನ ಬಹುಮುಖ್ಯ ಭಾಗ. ಇಷ್ಟೇ ಪುಟ್ಟದಾದ ಈ ಸಾಧನ ಅದೆಷ್ಟೋ ದೊಡ್ಡ ದೊಡ್ಡ ಸಾಧನೆ ಮಾಡುತ್ತದೆ.
ಫೋಟೋ ಕೃಪೆ :google
ಸೀರೆಯ ನೆರಿಗೆಯನ್ನೂ ಸೆರಗನ್ನೂ ಒಪ್ಪವಾಗಿ ಹಿಡಿದಿಡುತ್ತದೆ. ದುಪಟ್ಟಾವನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಡ್ರೆಸ್ಸಿಗೆ ಅಂಟಿಸಿ ಅಂದಕಾಣಿಸುತ್ತದೆ. ಈ ಪಿನ್ನುಗಳ ಕೃಪೆಯಿಲ್ಲದೇ ಮದುಮಗಳು ಅಷ್ಟು ಚೆಂದ ಕಾಣಲುಂಟೇ?! ಹ್ಯಾಂಡ್ ಬ್ಯಾಗಿನ ಕೈ ಹರಿದುಹೋದರೆ ಎಮರ್ಜೆನ್ಸಿಯಲ್ಲಿ ಅದನ್ನು ಹಿಡಿದಿಡುತ್ತದೆ. ಕೆಲವರ ಚಪ್ಪಲಿಯನ್ನೂ ಜೋಡಿಸಿಕೊಟ್ಟು ರಕ್ಷಣೆ ಮಾಡುತ್ತದೆ. ಮೊದಲೆಲ್ಲ ಪುಟ್ಟ ಮಕ್ಕಳ ಯುನಿಫಾರ್ಮಿಗೆ ಕರ್ಚೀಫನ್ನು ಪಿನ್ ಮಾಡಲು ಪಿನ್ ಬಳಕೆಯಾಗುತ್ತಿತ್ತು, ಈಗೆಲ್ಲೂ ಅಂತಹ ದೃಶ‍್ಯ ಕಾಣಸಿಗುವುದಿಲ್ಲ. ಕಾಲಿಗೋ ಕೈಗೋ ಚುಚ್ಚಿದ ಮುಳ್ಳನ್ನು ತೆಗೆಯಲೂ ಒಂದಾನೊಂದು ಕಾಲದಲ್ಲಿ ನಾವು ಪಿನ್ನನ್ನೇ ಬಳಸುತ್ತಿದ್ದೆವು. ಹಲ್ಲಿನ ನಡುವೆ ಸಿಲುಕಿದ ಉದ್ದಿನಬೇಳೆಗೂ, ಉಗುರಿನ ಸಂದಿಯಲ್ಲಿ ಸಿಲುಕದ ಮರಳಿಗೂ ಮುಕ್ತಿ ಕೊಡುವ ಕಾರ್ಯವೂ ಇದಕ್ಕೇ ನೋಡಿ!
ಫೋಟೋ ಕೃಪೆ :google
ತುಂಬಿದ ಬಸ್ಸಿನಲ್ಲಿ ತನ್ನ ಕೈಯ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಕೆಲ ಗಂಡಸರಿಗೆ ಬುದ್ಧಿಯನ್ನೂ ಕಲಿಸುವ ಈ ಪಿನ್ ಮಹಿಳೆಯರ ಆಪ್ತಮಿತ್ರ ಎಂದರೆ ತಪ್ಪಾದೀತೆ?
ಮಹಿಳೆಯರ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ಆಭರಣಗಳಿಗಿಂತಲೂ ಹೆಚ್ಚು ಗೌರವದ ಸ್ಥಾನ ಪಿನ್ನುಗಳಿಗೇ. ಹ್ಯಾಂಡ್ ಬ್ಯಾಗಿನಲ್ಲೂ ಒಂದಷ್ಟು ಪಿನ್ನುಗಳು ಇದ್ದೇ ಇರುತ್ತವೆ. ಕೆಲವರಂತೂ ಕುತ್ತಿಗೆಯಲ್ಲಿರುವ ಸರಕ್ಕೇ ನಾಲ್ಕಾರು ಪಿನ್ನುಗಳನ್ನು ಪೋಣಿಸಿಕೊಳ್ಳುತ್ತಾರೆ. ಈ ಪಿನ್ನುಗಳನ್ನೇ ಒಂದಕ್ಕೊಂದು ಪೋಣಿಸಿ ಆಭರಣ ಮಾಡಿಕೊಂಡವರಿದ್ದಾರೆ. ಆದರೆ ನಟಿಯೊಬ್ಬಳು ಡ್ರೆಸ್ಸಿಗೆ ಪಿನ್ ಹಾಕುವ ಬದಲು ಪಿನ್ನಿನದೇ ಡ್ರೆಸ್ ಮಾಡಿಕೊಂಡದ್ದೂ ಈ ಇನ್ಸ್ಟಾಗ್ರಾಂ ಕಾಲದಲ್ಲಿ ಕಂಡಿದ್ದೇವೆ.
ವಾಲ್ಟರ್ ಹಂಟ್ (ಫೋಟೋ ಕೃಪೆ :google)
ವರ ನೀಡಲು ಪ್ರತ್ಯಕ್ಷವಾದ ಬ್ರಹ್ಮ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಮಾಯವಾಗುವಂತೆ ಡಜ಼ನ್ಗಟ್ಟಲೇ ಪಿನ್ನುಗಳು ಮಾಯವಾಗಿ ಬಿಡುತ್ತವೆ. ಸಾಸಿವೆ ಡಬ್ಬಿಯಲ್ಲಿ ಹಣವಿಟ್ಟು ಉಳಿತಾಯ ಮಾಡುವ ಬುದ್ಧಿವಂತ ಗೃಹಿಣಿಯೂ, ಸಂಸ್ಥೆಗಳನ್ನು ನಡೆಸುವ ಮಹಿಳೆಯೂ ಸೋಲುವುದು ಈ ಪಿನ್ನುಗಳ ರಕ್ಷಣೆಯಲ್ಲಿಯೇ! ಯಾವುದೇ ಮದುವೆ ಉಪನಯನ ಮುಂತಾದ ಕಾರ್ಯಕ್ರಮಗಳು ಬಂದರೂ ಹೊಸದಾಗಿ ಒಂದೆರಡು ಡಜ಼ನ್ ಪಿನ್ನುಗಳ ಖರೀದಿ ನಡೆದೇ ನಡೆಯುತ್ತದೆ. ಆದರೆ ಮಂಜುಗಡ್ಡೆ ಕರಗಿದಂತೆ ಈ ಪಿನ್ನುಗಳ ರಾಶಿ ಕೆಲವೇ ವಾರ-ತಿಂಗಳುಗಳಲ್ಲಿ ಇಲ್ಲವಾಗಿ ಬಿಡುತ್ತವೆ. ಇದಕ್ಕೆ ಪರಿಹಾರೋಪಾಯ ಇದೆಯೇ?
ಹಣ ಉಳಿಸುವುದು ಹೇಗೆ ಎಂಬ ಪುಸ್ತಕಗಳೂ ಉಪನ್ಯಾಸಗಳೂ ಇರುವ ಹಾಗೆ ‘ಪಿನ್ನುಗಳನ್ನು ಉಳಿಸಿಕೊಳ್ಳುವುದು ಹೇಗೆ?’ ಎಂಬ ಕಾರ್ಯಾಗಾರವೇನಾದರೂ ಇದ್ದರೆ ಸೀಟ್ ಫುಲ್ ಗ್ಯಾರಂಟಿ.
ಫೋಟೋ ಕೃಪೆ :google
ಪಿನ್ನಿನಂತಹ ಸಣ್ಣ ಸಾಧನ ಅದೆಷ್ಟು ಉಪಕಾರ ಮಾಡುತ್ತದೆ ನಮಗೆ. ಅದನ್ನು ಕಂಡುಹಿಡಿದವನಾರೋ ಗೊತ್ತಿರುವುದೇ ಇಲ್ಲ. ಆದರೆ ಎಲ್ಲೋ ಯಾರೋ ಯಾಕಾಗಿಯೋ ಕಂಡುಹಿಡಿದ ವಸ್ತುವೊಂದು ಇನ್ನೆಲ್ಲೋ ಇನ್ನಾರಿಗೋ ಉಪಕಾರ ಮಾಡುತ್ತಲೇ ಇರುತ್ತದಲ್ಲ!
ಪ್ರತಿಕ್ಷಣ ಇನ್ನೊಬ್ಬರ ಋಣದಲ್ಲಿಯೇ ಬದುಕುತ್ತಾ ‘ನಾನು ಯಾರಿಲ್ಲದೆಯೂ ಬದುಕಬಲ್ಲೆ’ ಎನ್ನುವ ನಮ್ಮ ಅಹಂಕಾರದ ಬುಗ್ಗೆಗೆ ಪಿನ್ ಚುಚ್ಚಬೇಕಲ್ಲವೇ!
ಇದಕ್ಕಿಂತ ಮೊದಲು ಈ ರೂಪದ ಪಿನ್ ಇರಲಿಲ್ಲ. ಆದರೆ ತಂತಿಯನ್ನು ಬಳಸಿ, ಬಟ್ಟೆಗಳನ್ನು ಒಂದಕ್ಕೊಂದು ಸೇರಿಸುವ ಸಾಧನಗಳು ಲಭ್ಯವಿದ್ದವು. ಅದನ್ನು ಸರಳವಾಗಿಸಿದ್ದು ಹಂಟ್.
- ಡಾ. ಸುವರ್ಣಿನೀ ಕೊಣಲೆ