ಶಾಂತರಸರ ಜನುಮದಿನಕ್ಕೊಂದು ಕವಿತೆ

ಇಂದು ನನ್ನ ತಂದೆಯವರಾದ ದಿ.ಶಾಂತರಸರ ಜನುಮದಿನ. ಅಪ್ಪ ಹುಟ್ಟಿ ಇಂದಿಗೆ ನೂರು ವರ್ಷಗಳಾದವು. ಇಂದು ಆತನ ಜನ್ಮ ಶತಮಾನೋತ್ಸವ. ನನ್ನ ನೋವುಗಳನ್ನು ಮನೋಬಲವಾಗಿ ಬದಲಾಯಿಸಿದ, ನನಗಾಗಿ ಭರವಸೆಯ ಸಿಹಿ ಹಣ್ಣಿನ ಬುಟ್ಟಿಯನ್ನು ಹೊತ್ತು ತಂದ ನನ್ನ ಅಪ್ಪನನ್ನು ಈ ದಿನ ನೆನೆಯುತ್ತ ಆತನಿಗಾಗಿ ಈ ಕವಿತೆಗಳು.

ಮೋಡದಂಚಿನಲ್ಲಿ ಅಪ್ಪ,
ನೀ ಕಾಯುತ್ತಿರು,
ನಾನು ಬರುವವರೆಗೆ.
ಮತ್ತೆ ಪುಟ್ಟ ಮಗುವಾಗಿ,
ನಿನ್ನ ಕೈ ಹಿಡಿದು ಸಾಗುವೆ
ಚುಕ್ಕೆಗಳ ನಡುವೆ.

( “ಅವನು ಮಧು ಸಾವು” ದ್ವಿಪದಿಗಳ ಸಂಗ್ರಹದಿಂದ)

***

ನನ್ನ ಅಪ್ಪ ;
ಮುಂಜಾವಿನ ಹೊಚ್ಚ ಹೊಸ
ಸೂರ್ಯ. ಗುಡ್ಡದೋರೆಯಲ್ಲಿ
ಮೆಲ್ಲನೇ ಇಳಿಯುವ ಝರಿ.
ಗಾಳಿಮಳೆ ಬಿಸಿಲಿಗೆ
ಅಲುಗದ ಮುಗಿಲು.
ನಮ್ಮಲ್ಲಿ ಹಸಿರು ಬಿತ್ತುವವ,
ಮಳೆ ಸುರಿಸುವವ,
ಜಿಡ್ಡು ಗಟ್ಟಿದ ದೀಪ
ಒರೆಸುತ್ತ ಬಂದವ,
ಸಮುದ್ರದ ಬೆಂಕಿಯಾಗಿ
ಸಿಡಿದೆಳುವವ,
ಹೊಸ ಆಸೆ ಕನಸುಗಳ
ಬುಟ್ಟಿ ನನಗಾಗಿ
ಹೊತ್ತುತರುವವ.
ಹೊತ್ತಿ ಉರಿಯುವ
ಎದೆಯಿಂದ ಬೆಳದಿಂಗಳ
ಹರಿಸುವವ.
ನಾನು ಆತನ ಒಂದು
ತುಣುಕು. ಕನಸಿನ,
ಕಲ್ಪನೆಯ ಗೆರೆ, ರಕ್ತದ
ಒಂದು ಹನಿ.
ಕೊನೆಗೊಂದು ಹೇಳಲೇ ?
ನನ್ನ ಹಾಗೂ ಜನಗಳ
ಮಧ್ಯದ ಸೇತುವೆ ಆತ !

( ” ನಾನು ಮತ್ತು ಅವನು” ಕವನ ಸಂಕಲನದಿಂದ)

***

ನಿನ್ನ ಎಪ್ಪತ್ತೈದು ವಸಂತಗಳ
ಸುಂದರ ರೇಖೆಗಳನ್ನು
ಮುಖದ ತುಂಬ ಚಿತ್ರಿಸಿದ
ಕಲಾವಿದನಾರು?
ಆ ಸುಂದರ ಕಂಗಳಿಂದ
ಮೋಡಿ ಮಾಡುವ
ಗಾರುಡಿಗನ ಆಟ ಕಲಿತದ್ದು
ಯಾರಿಂದ? ನಿನ್ನ ಬೆಳ್ಳಿ
ಕೂದಲಿನ ಬೆಡಗಿಗೆ
ಬೆಳದಿಂಗಳೂ ನಾಚಿ, ಮಾತು
ಬಾರದೆ ಮೂಕವಾದದ್ದು
ಹೇಗೆ? ತುಂಬು ತುಟಿಗಳ
ಗುಲಾಬಿಬಣ್ಣ, ಆ ವಿನ್ಯಾಸದ
ಗುಟ್ಟು ಅರಿತವರಾರು?
ನಿನ್ನ ಅಂತರಂಗದ
ಹೊಳೆಯಲ್ಲಿ ಮರಿಮೀನಾಗಿ
ಈಸಿ, ಏಸೋ ಮುತ್ತುಗಳ,
ನಾ ಹೊರತಂದದ್ದು
ನಿನಗೇನಾದರೂ ಗೊತ್ತೆ?

(“ಕಭೀ ಕಭೀ” ಕವನ ಸಂಕಲನದಿಂದ)


  • ಎಚ್ ಎಸ್ ಮುಕ್ತಾಯಕ್ಕ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading