ಸಾರು ತಿನ್ನೋಕೆ ರುಚಿಕರವಾಗಿದ್ರೆ ಹೊಟ್ಟೆ ಶಾಂತವಾಗುತ್ತೆ. ಶಿವ ಭಟ್ ಅವರು ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಾಡಲು ಬೇಕಾಗುವ ಪದಾರ್ಥಗಳು:
ಬೇಯಿಸಿಕೊಂಡ ಬೇಳೆ ಹಾಗೂ ಬೇಳೆಕಟ್ಟು – ಅರ್ಧ ಬಟ್ಟಲು
ಹುಣಸೆಹಣ್ಣಿನ ರಸ -1 ಬಟ್ಟಲು
ಬ್ಯಾಡಿಗೆ ಮೆಣಸಿನಕಾಯಿ -7 – 8
ಬೆಲ್ಲ -ಸ್ವಲ್ಪ
ಕರಿಬೇವು -ಸ್ವಲ್ಪ
ಧನಿಯಾ -2 ಚಮಚ
ಮೆಂತ್ಯ ಕಾಳು -7 – 8
ಸಾಸಿವೆ – ಅರ್ಧ ಚಮಚ
ಜೀರಿಗೆ -1 ಚಮಚ
ತೆಂಗಿನಕಾಯಿ ತುರಿ -ಸ್ವಲ್ಪ
ಉಪ್ಪು -ರುಚಿಗೆ ತಕಷ್ಟು
ಇಂಗು -ಚಿಟಿಕೆ
ಎಣ್ಣೆ -ಸ್ವಲ್ಪ
ಕೊತ್ತಂಬರಿ ಸೊಪ್ಪು -ಸ್ವಲ್ಪ

ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಧನಿಯಾವನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿ ಪಕ್ಕಕ್ಕಿಡಿ. ನಂತರ ಅದೇ ಬಾಣಲಿಗೆ ಸಾಸುವೆ ಹಾಗೂ ಜೀರಿಗೆಯನ್ನು ಹಾಕಿ ಫ್ರೈ ಮಾಡಿಕೊಂಡು ಮತ್ತೆ ಅದೇ ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಮೆಂತ್ಯ ಕಾಳನ್ನು ಹಾಕಿ ಫ್ರೈ ಮಾಡಿಕೊಂಡು ಮತ್ತೆ ಅದೇ ಪ್ಲೇಟಿಗೆ ಹಾಕಿಕೊಳ್ಳಿ. ಮತ್ತೆ ಅದೇ ಬಾಣಲೆಗೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಂಡು ಅದೇ ಪ್ಲೇಟಿಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಮತ್ತೊಂದು ಕಡೆ ಒಂದು ಬಾಣಲೆಗೆ ಬೇಳೆ ಹಾಗೂ ಬೆಲೆಕಟ್ಟನ್ನು ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಮಿಕ್ಸಿಯಲ್ಲಿ ಮಾಡಿಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣಿನ ರಸ, ಸ್ವಲ್ಪ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಂಡು 2 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ, ಕರಿಬೇವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ. ನಂತರ ಮತ್ತೆ ಗ್ಯಾಸ್ ಮೇಲೆ ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸ್ವಲ್ಪ ಇಂಗು, ಸಾಸಿವೆ, ಜೀರಿಗೆ, ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುದಿಯುತ್ತಿರುವ ಸಾಂಬಾರಿಗೆ ಹಾಕಿಕೊಳ್ಳಿ. ಕೊನೆಯದಾಗಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಸವಿಯಲು ಸಿದ್ದ.
- ಶಿವ ಭಟ್
