ಒಂದು ದೇಶದ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ. ಸಮಾಜದಲ್ಲಿ ಪ್ರಗತಿ, ಸಮಾನತೆ ಮತ್ತು ಜಾಗೃತಿ ಮೂಡಿಸಲು ಶಿಕ್ಷಣವು ಅತ್ಯಂತ ಶಕ್ತಿಯುತ ಸಾಧನವಾಗಿದೆ ಈ ಹಿನ್ನೆಲೆಗಳಲ್ಲಿ, ಪ್ರತಿ ವರ್ಷ ನವೆಂಬರ್ 11ರಂದು”ರಾಷ್ಟ್ರೀಯ ಶಿಕ್ಷಣ ದಿನ”ವನ್ನು ಆಚರಿಸಲಾಗುತ್ತದೆ.ಲೇಖಕಿ ಗೀತಾಂಜಲಿ ಎನ್ ಎಮ್ ಅವರು ರಾಷ್ಟ್ರೀಯ ಶಿಕ್ಷಣ ದಿನದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
“ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು. ‘ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ”
ವಿದ್ಯಾವಿಹೀನಃ ಪಶುಃ’ಅಂದರೆ ವಿದ್ಯೆ ಇಲ್ಲದವನು ಪಶುವಿಗೆ ಸಮಾನ ಎಂದು.
ಈ ಮೇಲಿನ ಹಿತೋಕ್ತಿಗಳೆಲ್ಲವೂ ವಿದ್ಯೆಗೆ ಎಷ್ಟು ಮಹತ್ವವಿದೆ ಮತ್ತು ವ್ಯಕ್ತಿಗೆ ವಿದ್ಯೆಯ ಅಗತ್ಯಗಳು ಎಷ್ಟಿವೆ ಎಂಬುದನ್ನು ಸಾರುತ್ತವೆ. ಶಿಕ್ಷಣವು ಮಾನವನ ನಿಜವಾದ ಸಂಪತ್ತು ಮತ್ತು ಮಾನವನ ಜೀವನದ ಅತ್ಯಂತ ಅವಿಭಾಜ್ಯ ಅಂಗ. ಶಿಕ್ಷಣ ವ್ಯಕ್ತಿಯ ಜೀವನವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಪ್ರಕಾಶಮಾನವಾದ ದೀಪ. ಶಿಕ್ಷಣದಿಂದ ವ್ಯಕ್ತಿ ಕೇವಲ ಓದು-ಬರಹವನ್ನಷ್ಟೇ ಕಲಿಯುವುದಿಲ್ಲ ಜೊತೆಗೆ ಆತ್ಮವಿಶ್ವಾಸ ನೈತಿಕತೆ, ಧೈರ್ಯ ಮೌಲ್ಯಗಳು, ಸಂಸ್ಕಾರ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಅರಿವನ್ನೂ ಪಡೆಯುತ್ತಾನೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಜ್ಞಾನ ಪರಿಪಕ್ವವಾಗಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯಕ. ಶಿಕ್ಷಣವಿಲ್ಲದ ವ್ಯಕ್ತಿಯ ಜ್ಞಾನ ಕತ್ತಲೆಯಲ್ಲಿ ಇರುವನಂತೆ ಇರುತ್ತದೆ ಕಾರಣ ಜ್ಞಾನವಿಲ್ಲದೆ ಜೀವನವನ್ನು ಉತ್ತಮ ಹಾಗೂ ಸುಲಲಿತವಾಗಿ ನಡೆಸುವುದು ಕಷ್ಟ.ಶಿಕ್ಷಣವು ನಮ್ಮಲ್ಲಿ ವಿಚಾರಶಕ್ತಿಯನ್ನು ಮೌಲ್ಯಯುತ ಜೀವನವನ್ನು ವಿಶ್ಲೇಷಣಾ ಸಾಮರ್ಥ್ಯವನ್ನು ಹಾಗೂ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತಾ ಉತ್ತಮ ನಾಗರಿಕನನ್ನಾಗಿ ಮಾಡುತ್ತದೆ. ನಿಜ ಹೇಳಬೇಕೆಂದರೆ ಶಿಕ್ಷಣವಿಲ್ಲದ ವ್ಯಕ್ತಿಗಳಿಗೆ ಸಮಾಜದಲ್ಲಿ ಮಾನ್ಯತೆಯೇ ಇರುವುದಿಲ್ಲ ಎನ್ನಬಹುದು.
ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಅಗತ್ಯತೆ ಇನ್ನೂ ಹೆಚ್ಚಾಗಿದೆ. ವಿಜ್ಞಾನ ತಂತ್ರಜ್ಞಾನ, ಸಾಹಿತ್ಯ ವೈದ್ಯಕೀಯ,ಕಲೆ ಹೀಗೆ ಸಮಾಜದ ಯಾವ ಕ್ಷೇತ್ರವನ್ನೇ ನೋಡಿದರೂ ಅದರ ಹಿಂದೆ ಶಿಕ್ಷಣದ ಬಲ ಇದ್ದೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರಕುವಂತೆ ಮಾಡುವುದು ನಮ್ಮ ಕರ್ತವ್ಯ ಶಿಕ್ಷಣ ಕೇವಲ ಜೀವನೋಪಾಯದ ಸಾಧನವಲ್ಲ. ಅದು ಜೀವನದ ಬೆಳಕು ಶಿಕ್ಷಣವಿಲ್ಲದ ಸಮಾಜವು ಆರೋಗ್ಯಕರವಾಗಿ ಮುನ್ನಡೆಯಲಾರದು. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣದ ಮಹತ್ವವನ್ನರಿತು ಜ್ಞಾನಮಾರ್ಗದಲ್ಲಿ ಮುಂದುವರಿದರೆ ಮಾತ್ರವೇ ಸಮಾಜದ ಪ್ರಗತಿ ಸಾಧ್ಯ, ಶಿಕ್ಷಣವೇ ನಿಜವಾದ ಸ್ವಾತಂತ್ರ್ಯ ಅದು ಮನಸ್ಸನ್ನು ಬೆಳಗಿಸುವುದರ ಜೊತೆ ದೇಶವನ್ನು ಪ್ರಗತಿಯತ್ತ ಬೆಳೆಸುತ್ತದೆ.

ಒಂದು ದೇಶದ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ. ಸಮಾಜದಲ್ಲಿ ಪ್ರಗತಿ, ಸಮಾನತೆ ಮತ್ತು ಜಾಗೃತಿ ಮೂಡಿಸಲು ಶಿಕ್ಷಣವು ಅತ್ಯಂತ ಶಕ್ತಿಯುತ ಸಾಧನವಾಗಿದೆ ಈ ಹಿನ್ನೆಲೆಗಳಲ್ಲಿ, ಪ್ರತಿ ವರ್ಷ ನವೆಂಬರ್ 11ರಂದು”ರಾಷ್ಟ್ರೀಯ ಶಿಕ್ಷಣ ದಿನ”ವನ್ನು ಆಚರಿಸಲಾಗುತ್ತದೆ ಈ ದಿನವನ್ನು ಭಾರತದ ಮೊದಲ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಮೌಲಾನಾ ಆಜಾದ್ ಸ್ವಾತಂತ್ರ್ಯ ಹೋರಾಟಗಾರರಲ್ಲದೆ ಭಾರತದ ಶಿಕ್ಷಣ ಕ್ಷೇತ್ರದ ಶಿಲ್ಪಿಯಾಗಿದ್ದರು. ಅವರು ಶಿಕ್ಷಣವು ಎಲ್ಲರಿಗೂ ಸಮಾನ ಹಕ್ಕು ಎಂಬ ವಿಚಾರವನ್ನು ಸಾರಿದರು ಭಾರತ ಸ್ವಾತಂತ್ರ್ಯ ಪಡೆದ ನಂತರ ಅವರು ಉನ್ನತ ಶಿಕ್ಷಣ ಸಂಸ್ಥೆಗಳಾದ ಯುಜಿಸಿ (UGC), ಐಐಟಿ (IITs) ಹಾಗೂ ಐಐಎಸ್ಸಿ (IISc) ಗಳ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದರು. ಅವರ ದೃಷ್ಟಿಯಲ್ಲಿ ಶಿಕ್ಷಣವು ಕೇವಲ ಜ್ಞಾನ ಸಂಪಾದನೆಗೆ ಅಲ್ಲ, ಅದು ಮಾನವೀಯ ಮೌಲ್ಯಗಳ ಬೆಳೆಸುವ ಮಾರ್ಗವೂ ಆಗಿತ್ತು.
ಇನ್ನು ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣಕ್ಕೆ ತುಂಬಾ ಪ್ರಾಮುಖ್ಯತೆ ಕೊಟ್ಟಿದ್ದರು ಅವರು ಶಿಕ್ಷಣ ದಾಸ್ಯ, ಅನ್ಯಾಯ, ಬಡತನ ಅಜ್ಞಾನ ಮತ್ತು ದಾರಿದ್ರ್ಯದಿಂದ ಹೊರಬರುವ ಏಕಮಾತ್ರ ಮಾರ್ಗ ಎಂದು ಹೇಳಿದ್ದಾರೆ. ಶಿಕ್ಷಣ ಪಡೆದ ವ್ಯಕ್ತಿಯಿಂದ ಕೇವಲ ತನ್ನ ಜೀವನ ಮಾತ್ರ ಸುಧಾರಿಸುವುದಿಲ್ಲ ಆ ವ್ಯಕ್ತಿಯ ಕುಟುಂಬದ ಜೊತೆ ಸಮಾಜ ಮತ್ತು ದೇಶದ ಅಭಿವೃದ್ಧಿಗೂ ಕಾರಣವಾಗುತ್ತದೆ ಹಾಗಾಗಿ ವ್ಯಕ್ತಿಗೆ ಶಿಕ್ಷಣ ಅನಿವಾರ್ಯ ಮತ್ತು ಅತ್ಯವಶ್ಯಕ ಶಿಕ್ಷಣ ಬೆಲೆಕಟ್ಟಲಾಗದ ಸಂಪತ್ತು.ಹಾಗಾಗಿ ಮಾನವನ ಜೀವನದ ಬಹು ದೊಡ್ಡ ಆಸ್ತಿ ಎಂದರೆ ಶಿಕ್ಷಣ.! ಶಿಕ್ಷಣವೆಂಬುದು ಜ್ಞಾನದ ದೀಪಸ್ತಂಭ ಅದು ಕತ್ತಲೆಯೆಂಬ ಅಜ್ಞಾನವನ್ನು ದೂರ ಮಾಡಿ ಬೆಳಕಿನ ಜ್ಞಾನವನ್ನು ಹರಡುವ ಉನ್ನತ ಶಕ್ತಿ ಹೊಂದಿರುವುದರಿಂದ ಜೀವನದಲ್ಲಿ ಯಶಸ್ಸು, ಸ್ವಾಭಿಮಾನ ಮತ್ತು ಉತ್ತಮ ಸಮಾಜ ನಿರ್ಮಾಣವು ಶಿಕ್ಷಣದಿಂದಲೇ ಸಾಧ್ಯವಾಗುತ್ತದೆ ಶಿಕ್ಷಣವೇ ಸಮಾಜದ ನಿಜವಾದ ಶಕ್ತಿ ಅದನ್ನು ಹಂಚುವುದು ನಮ್ಮ ಕರ್ತವ್ಯ!
ಶಿಕ್ಷಣ ದಿನವಾದ ಇಂದು ನಾವು ಪ್ರಸ್ತಾಪಿಸಲೇ ಬೇಕಾದ ವಿಷಯವೆಂದರೆ ಇಂದಿನ ಶಿಕ್ಷಣದ ಸ್ಥಿತಿ ಗತಿ! ಇತ್ತೀಚಿನ ದಿನಗಳಲ್ಲಿ ಶಿಕ್ಷಣವೂ ಒಂದು ವ್ಯಾಪಾರವಾಗುತ್ತಿದ್ದು ಇಂದಿನ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯಿದ್ದು ಶಾಲಾ ಕಾಲೇಜುಗಳು ಕೇವಲ ಡಿಗ್ರಿ ಕೊಡುವ ಕಾರ್ಖಾನೆಗಳಂತೆ ಆಗುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.ಶಿಕ್ಷಣದನಿಜವಾದ ಅರ್ಥ ಅಂಕಗಳಲ್ಲಿ ಸೀಮಿತವಾಗಿಲ್ಲ ಶಿಕ್ಷಣವೆಂದರೆ ಕೇವಲ ಪುಸ್ತಕದ ಜ್ಞಾನವೂ ಅಲ್ಲ ಅದು ಮಾನವನ ಒಳಗಿನ ಮೌಲ್ಯಗಳನ್ನು ಚಿಂತನೆ ಶಕ್ತಿ ಮತ್ತು ನೈತಿಕತೆಯನ್ನು ಬೆಳೆಸುವ ಪ್ರಕ್ರಿಯೆಯಾಗಿದೆ. ಶಿಕ್ಷಣದ ಮೂಲಕ ವ್ಯಕ್ತಿ ತನ್ನ ಕರ್ತವ್ಯಗಳನ್ನು ಅರಿತುಕೊಳ್ಳುತ್ತಾನೆ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ರೀತಿಯಲ್ಲಿ ಬದುಕಲು ಕಲಿಯುತ್ತಾನೆ.ಶಿಕ್ಷಣವು ಜೀವನದ ಅಡಿಪಾಯ.ಅದು ವ್ಯಕ್ತಿಯ ಚರಿತ್ರೆಯನ್ನು ರೂಪಿಸುತ್ತದೆ, ಸಮಾಜವನ್ನು ಬೆಳಗಿಸುತ್ತದೆ ಮತ್ತು ದೇಶದ ಪ್ರಗತಿಯನ್ನು ಬಲಪಡಿಸುತ್ತದೆ. ಆದರೆ ಇಂದು ಶಾಲೆಗಳು ಕಾಲೇಜುಗಳು ತರಬೇತಿ ಕೇಂದ್ರಗಳು ಎಲ್ಲೆಡೆ ಇವೆ ಆದರೆ ಶಿಕ್ಷಣದ ಮೂಲ ಉದ್ದೇಶವಾದ ಮಾನವೀಯ ಮೌಲ್ಯಗಳ ಬೆಳೆವಣಿಗೆ ಎಲ್ಲೋ ಮಾಯವಾಗುತ್ತಿದೆ ಎನ್ನಬಹುದು. ಅಂಕಗಳ ಹಿಂದೆ ಓಡುವ ಪೈಪೋಟಿಯಲ್ಲಿ ವಿದ್ಯಾರ್ಥಿಗಳು ‘ಮಾನವ’ ಆಗುವುದನ್ನು ಮತ್ತು ಮಾನವೀಯತೆಯನ್ನು ಮರೆಯುತ್ತಿದ್ದಾರೆ ಎಂದರೆ ತಪ್ಪಿಲ್ಲ.

ಹಿಂದಿನ ಶಿಕ್ಷಣ ಪದ್ದತಿಯಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ಮಹತ್ವವಿತ್ತು. ಗುರುಗಳು ಜ್ಞಾನ ಮಾತ್ರವಲ್ಲ,ನೀತಿ,ನಿಷ್ಠೆ, ಶ್ರದ್ಧೆ ಧೈರ್ಯ,ಸಂಸ್ಕಾರ ನಯ ವಿನಯತೆ ಜೊತೆಗೆ ಸೇವಾಭಾವನೆ ಕಲಿಸುತ್ತಿದ್ದರು. ಆದರೆ ಇಂದಿನ ಶಿಕ್ಷಣ ಸಂಪೂರ್ಣ ವ್ಯಾಪಾರಮಯವಾಗಿದ್ದು ಶಾಲೆಗಳು ಮತ್ತು ಕಾಲೇಜುಗಳು ಲಾಭದ ಸಂಸ್ಥೆಗಳಾಗಿ ಬದಲಾಗಿವೆ. ವಿದ್ಯಾರ್ಥಿ ಅಂಕಗಳ ಯಂತ್ರವಾಗಿ ಪರಿವರ್ತಿತನಾಗಿದ್ದಾರೆ ಇಂದಿನ ಪಾಠ್ಯಕ್ರಮದಲ್ಲಿ ಪುಸ್ತಕದ ಜ್ಞಾನ ಹೆಚ್ಚಾಗಿದೆ, ಆದರೆ ಜೀವನದ ಜ್ಞಾನ ಕಡಿಮೆಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಗಣಿತ ಕಲಿಯುತ್ತಾ ಬದುಕನ್ನೇ ಲೆಕ್ಕಾಚಾರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಆದರೆ ಲೆಕ್ಜಾಚಾರಗಳಾಚೆಗಿನ ಜೀವನದ ಮೌಲ್ಯಗಳಾದ ಸತ್ಯ, ಪ್ರಾಮಾಣಿಕತೆ, ಕರುಣೆ, ಸಹಾನುಭೂತಿ ಸಂಸ್ಕಾರ ಇವುಗಳ ಪಾಠಗಳು ಕಳೆದು ಹೋಗಿವೆ. ಇದರ ಪರಿಣಾಮವಾಗಿ ನಾವು ಅತಿಬುದ್ಧಿವಂತರಾದರೂ ಹೃದಯದಿಂದ ಮಾನವೀಯತೆಯಿಂದ ಬಡವರಾಗುತ್ತಿದ್ದೇವೆ.
ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ನೀಡುವುದಲ್ಲ, ಅದು ಒಳ್ಳೆಯ ನಾಗರಿಕರನ್ನು ರೂಪಿಸಬೇಕಾಗಿದೆ. ಮೌಲ್ಯವಿಲ್ಲದ ಶಿಕ್ಷಣದಿಂದ ಸಮಾಜದಲ್ಲಿ ಅನ್ಯಾಯ, ಭ್ರಷ್ಟಾಚಾರ, ಲಂಚ ಸ್ವಾರ್ಥದ ವಾತಾವರಣ ಹೆಚ್ಚುತ್ತಿದೆ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಪಠ್ಯಕ್ರಮವನ್ನು ಅಳವಡಿಸಬೇಕಾಗಿದೆ ಹಾಗೂ ಶಿಕ್ಷಣದ ನೀತಿಗಳು ಬದಲಾಗಬೇಕಿದೆ ಮೌಲ್ಯವಿರುವ ಶಿಕ್ಷಣವೇ ನಿಜವಾದ ಬೆಳಕು. ಅದು ಮನಸ್ಸಿಗೆ ಶಾಂತಿ, ಹೃದಯಕ್ಕೆ ದಯೆ ಮತ್ತು ಸಮಾಜಕ್ಕೆ ನೈತಿಕತೆ ನೀಡುತ್ತದೆ. ಇಂದಿನ ಶಿಕ್ಷಣವು ಮತ್ತೆ ಮೌಲ್ಯಗಳತ್ತ ಮುಖ ಮಾಡಬೇಕಾಗಿದೆ ಹಾಗಾದಾಗ ಮಾತ್ರ ನಮ್ಮ ಸಮಾಜ ನಿಜವಾದ ಅರ್ಥದಲ್ಲಿ ಪ್ರಗತಿಪಥದಲ್ಲಿ ಸಾಗುತ್ತದೆ.ಶಿಕ್ಷಣ ವಿವೇಕದ ಬೆಳಕನ್ನು ಹರಡುತ್ತದೆ ಶಿಕ್ಷಣ ಬದುಕಿನ ದಿಕ್ಕು ತೋರಿಸುವ ಬೆಳಕಿನ ದಾರಿಯಾಗಿದೆ ಶಿಕ್ಷಣವೇ ಬೆಳಕಿನ ಬಾಗಿಲು, ಅದರ ಚಾವಿ ನಮ್ಮ ಕೈಯಲ್ಲೇ ಇದೆ ಎಂಬ ವಾಸ್ತವವನ್ನು ಅರಿತು ಸಂಸ್ಕಾರದ ಜೊತೆ ಮೌಲ್ಯಯುತ ಶಿಕ್ಷಣಕ್ಕೆ ಸಾಕ್ಷಿಯಾಗೋಣ.ಇನ್ನಾದರೂ ಶಿಕ್ಷಣದ ವ್ಯವಸ್ಥೆ ಬದಲಾಗಲಿ ಎಂದು ಆಶಿಸೋಣ.
- ಗೀತಾಂಜಲಿ ಎನ್ ಎಮ್, ಕೊಡಗು.
