'ಶಿವಾಜಿ ಸುರತ್ಕಲ್'ಸಿನಿಮಾ ಹಾರರ್ ಅಥವಾ ಥ್ರಿಲ್ಲರ್? ಹೋಗಿ ಒಮ್ಮೆ ನೋಡಿ…

ನಾನು ಇತ್ತೀಚಿಗೆ ನೋಡಿದಂತಹ ಸಿನಿಮಾ ಶಿವಾಜಿ ಸುರತ್ಕಲ್. ಈ ಸಿನಿಮಾದ ಹೆಸರೇ ಒಂದು ಥ್ರಿಲ್ ಕೊಡುವಾಗ ಇನ್ನು ಸಿನಿಮಾ ಹೇಗಿರಬಹುದು ಎನ್ನುವ ಒಂದು ಕುತೂಹಲ ನನಗೆ ಇತ್ತು. ಆ ಕಾರಣಕ್ಕೆ ಶಿವಾಜಿ ಸುರತ್ಕಲ್ ನೋಡಲು ಹೋದೆ. ಚಿತ್ರಮಂದಿರಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿ ಕಿಕ್ಕಿರಿದ ಜನರನ್ನು ನೋಡಿ ನನ್ನ ದುಡ್ಡಿಗೆ ಮೋಸ ಇಲ್ಲ ಎಂದು ಮನಸ್ಸಿನಲ್ಲೇ ಹಿಗ್ಗಿದೆ. ಸಿನಿಮಾ ಶುರುವಾಯಿತು.

ರಣಗಿರಿಯಲ್ಲಿರುವ ಸುಂದರವಾದ ದೊಡ್ಡದೊಂದು ರೆಸಾರ್ಟ್. ಆ ರೆಸಾರ್ಟ್ ನ ಸಿಮ್ಮಿಂಗ್ ಪೂಲ್ ನ ಪಕ್ಕದಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಅದರ ಇನ್ವೆಸ್ಟಿಗೇಷನ್ ಉಸ್ತುವಾರಿಯನ್ನು ಶಿವಾಜಿ ಸುರತ್ಕಲ್ ಗೆ ನೀಡಲಾಗಿದೆ. ಈ ಸಿನಿಮಾದ ಮುಖ್ಯ ಸೂತ್ರಧಾರಿಯೇ ಶಿವಾಜಿ ಸುರತ್ಕಲ್. ಆ ಪಾತ್ರವನ್ನು ರಮೇಶ್ ಅರವಿಂದ ಅವರು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಕೊಲೆಯ ಸುತ್ತ ಕತೆಯನ್ನು ಹೆಣೆಯಲಾಗಿದೆ. ಕತೆಯಲ್ಲಿ ಬರುವ ಮೊಗ್ಗಿನ ಜಡೆಯ ರಂಗನಾಯಕಿ ದೃಶ್ಯಗಳು ಪ್ರೇಕ್ಷಕನನ್ನು ಭಯದಲ್ಲಿ ಕೂರಿಸುತ್ತವೆ. ಇನ್ನೊಮ್ಮೆ ಕುತೂಹಲವನ್ನು ಕೆರಳಿಸುತ್ತವೆ. ಇವುಗಳ ಮಧ್ಯೆ ನಾಯಕ ಕೊಲೆಯನ್ನು ಭೇದಿಸುತ್ತಾನೋ, ಇಲ್ಲವೋ ಎನ್ನುವ ಆತಂಕ ಇವೆಲ್ಲವೂ ಪ್ರೇಕ್ಷಕನನ್ನು ಒಂದೆಡೆ ಹಿಡಿದಿಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಭಯಾನಕ ಸೌಂಡ್ ಎಫೆಕ್ಟ್ ಮತ್ತು ಮೊಗ್ಗಿನ ಜಡೆಯ ರಂಗನಾಯಕಿ ದೃಶ್ಯ ಬಂದಾಗ ಖುರ್ಚಿಯಲ್ಲಿ ಕೂತ ಬಹುತೇಕ ಮಕ್ಕಳು ಹೆದರಿ ಅಪ್ಪ-ಅಮ್ಮನ ತೊಡೆಯೇರಿ ಕೂತು ಸಿನಿಮಾ ನೋಡಿದ್ದಾರೆ. ಇನ್ನು ಕೆಲವು ಮಕ್ಕಳು ಭಯವನ್ನು ತೋರ್ಪಡಿಸದೆ ಕದ್ದು-ಕದ್ದು ಸಿನಿಮಾ ನೋಡಿ ಮುಗಿಸಿದ್ದಾರೆ. ಈ ಪರೀಕ್ಷೆಯ ಸಮಯದಲ್ಲಿ ಮಕ್ಕಳನ್ನು ಓದಿಸಲು ರಂಗ ನಾಯಕಿಯನ್ನು ಅಸ್ತ್ರ ವಾಗಿಸಿಕೊಳ್ಳಬಹುದು ಎನ್ನುವ ಒಂದು ಆಲೋಚನೆಯು ನನ್ನ ತಲೆಗೆ ಬಂತು.

ಸಿನಿಮಾದಲ್ಲಿ ಎಲ್ಲವೂ ಸರಿಯಾಗಿದೆ. ಆದರೆ ಸಿನಿಮಾದ ಕೊನೆಯಲ್ಲಿ ನಾಯಕ ಒಮ್ಮಿದೊಮ್ಮಿಲೇ ಎಲ್ಲ ಅಪರಾಧಿಗಳನ್ನು ಕಂಡು ಹಿಡಿಯುತ್ತಾನೆ. ಅದುಎಲ್ಲೋ ಒಂದು ಕಡೆ ಪ್ರೇಕ್ಷಕನ ಕುತೂಹಲಕ್ಕೆ ಬೇಗನೆ ಫುಲ್ ಸ್ಟಾಪ್ ಸಿಕ್ಕಿತು ಎನ್ನಿಸಿತು. ಅದರ ಬದಲು ಪ್ರೇಕ್ಷಕರನ್ನು ಇನ್ನಷ್ಟು ಗೋಳು ಹಾಕಿಕೊಂಡಿದ್ದರೇ ಸಿನಿಮಾ ಇನ್ನಷ್ಟು ರಂಜಿಸುತ್ತಿತ್ತು ಅನ್ನುವುದು ನನ್ನ ಅನಿಸಿಕೆ .

ಮುಖ್ಯ ಭೂಮಿಕೆಯಲ್ಲಿ ರಾಧಿಕಾ ಚೇತನ್ ಮತ್ತು ಆರೋಹಿ ನಾರಾಯಣ್ ಅವರು ಅಭಿನಯಿಸಿದ್ದಾರೆ. ಶಿವಾಜಿ ಸುರತ್ಕಲ್ ಅವರ ಮಡದಿಯಾಗಿ ಹಾಗು ಅಡ್ವೊಕೇಟ್ ಆಗಿ ರಾಧಿಕಾ ಚೇತನ್ ಕಾಣಿಸಿಕೊಂಡಿದ್ದಾರೆ. ಪಾತ್ರ ಚಿಕ್ಕದಿದ್ದರೂ ಮನಸ್ಸಿನಲ್ಲಿ ಉಳಿಯುತ್ತದೆ. ಆಕಾಶ ಶ್ರೀವತ್ಸ ಅವರ ನಿರ್ದೇಶನ ಚನ್ನಾಗಿದೆ. ಜುದಹ್ ಸಂಧ್ಯ ಅವರ ಮ್ಯೂಸಿಕ್ ಚನ್ನಾಗಿದೆ. ಒಟ್ಟಿನಲ್ಲಿ ಸದ್ಯಕ್ಕೆ ಕನ್ನಡದಲ್ಲಿ ವಿಭಿನ್ನ ಕತೆಯುಳ್ಳ ಸಿನಿಮಾ ಎಂದರೆ ಶಿವಾಜಿ ಸುರತ್ಕಲ್ ಎಂದು ಹೇಳಬಹುದು.

ರಮೇಶ್ ಅರವಿಂದ ಅವರನ್ನು ತೆರೆಯ ಮೇಲೆ ನೋಡುವಾಗ ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು.ನಾನು ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಮುಂದೆ ನನ್ನ ಮದುವೆಯು ಆಯಿತು. ಮಕ್ಕಳು ಆದರು. ಈಗ ನನ್ನ ತಲೆಯಲ್ಲಿ ಬಿಳಿ ಕೂದಲುಗಳು ಕಾಣತೊಡಗಿವೆ. ಆದರೆ ರಮೇಶ್ ಅವರ ವಯಸ್ಸು ಮಾತ್ರ ಆರಕ್ಕೆ ಏರಿಲ್ಲ, ಮೂರಕ್ಕೆ ಇಳಿದಿಲ್ಲ. ಅದು ಹೇಗೆ? ಎನ್ನುವುದೇ ಒಂದು ರಹಸ್ಯಮಯ. ಅವರ ನೋಟ, ಹುರುಪು, ಸೌಂದರ್ಯ ಯಾವುದು ಕೂಡ ಮಾಸಿಲ್ಲ. ಶಿವಾಜಿ ಸುರತ್ಕಲ್ ಅವರ ಮುಂದಿನ ಇನ್ವೆಸ್ಟಿಗೇಷನ್ ರಮೇಶ ಅರವಿಂದ ಅವರ ಮೇಲೆ ನಡೆಯಬೇಕು. ಆದಷ್ಟು ಬೇಗ ಶಿವಾಜಿ ಸುರತ್ಕಲ್ ಆ ರಹಸ್ಯವನ್ನು ಕೂಡ ಭೇದಿಸಲಿ. ಚಿತ್ರತಂಡಕ್ಕೆ ಶುಭವಾಗಲಿ…

ಲೇಖನ : ಶಾಲಿನಿ ಹೂಲಿ ಪ್ರದೀಪ್

ak.shalini@outlook.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW