ರಾಷ್ಟ್ರೀಯ ಕಾನೂನು ಕಾಲೇಜು. ಇದು ದೇಶದ ಪ್ರತಿಷ್ಠಿತ ಕಾನೂನು ಕಾಲೇಜು. ನಾಗರಬಾವಿ ಮಾರ್ಗವಾಗಿ ಜ್ಞಾನಭಾರತಿ ವಿಶ್ವವಿದ್ಯಾನಿಲಯ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿದೆ. ಕಾಲೇಜಿನ ಒಳಗೆ ಹೋಗುತ್ತಿದ್ದಂತೆ ಕಿವಿಗೆ ಇಂಗ್ಲೀಷ್ ಭಾಷೆ, ಕಣ್ಣಿಗೆ ಮಾಡರ್ನ್ ಸಂಸ್ಕೃತಿ ಕಾಣುತ್ತದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ಕಾನೂನು ವಿದ್ಯಾರ್ಥಿಗಳಿಂದ ಬಡ, ಮಾಧ್ಯಮ ವರ್ಗ ದವರ ಪರ ವಕಾಲತ್ತು ವಹಿಸುತ್ತಾರಾ ಎನಿಸಿತು.
ಆದರೆ, ಇದಕ್ಕೆ ಅಪವಾದವೆಂಬಂತೆ ಅಲ್ಲಿನ ತಂಡವೊಂದು ಕೆಲಸ ಮಾಡುತ್ತಿದೆ. ಊಹೆಗೂ ಮೀರಿದ ರೀತಿಯಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಿದೆ. ಲೀಗಲ್ ಸರ್ವೀಸ್ ಕ್ಲಿನಿಕ್ ( ಎಲ್ ಎಸ್ ಸಿ) ಹೆಸರಲ್ಲಿ ಉಚಿತವಾಗಿ ಕಾನೂನಿನ ಸೇವೆ ನೀಡುತ್ತಿದೆ.
ಕಾನೂನಿನ ಹೋರಾಟದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಮತ್ತು ಕಾನೂನಿನ ಅಶಿಕ್ಷಿತ ಆಗಿರುವವರಿಗೆ ಸಮರ್ಪಕವಾದ ನೆರವು ನೀಡಲಾಗುತ್ತಿದೆ. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡವು ಕೇವಲ ನಗರ ಪ್ರದೇಶಗಳಿಗೆ ಮಾತ್ರವಲ್ಲದೆ ಗ್ರಾಮೀಣ ಭಾಗದ ಜನರಿಗೆ ಉಚಿತ ಕಾನೂನಿನ ಸೇವೆಯನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಅವಿದ್ಯಾವಂತರಿಗೂ ಕಾನೂನಿನ ನೆರವಿನ ಹಸ್ತವನ್ನು ಚಾಚಿದ್ದಾರೆ.
ಕೆಳ ನ್ಯಾಯಾಲಯದಿಂದ ಹಿಡಿದು ಹೈಕೋರ್ಟ್ ಸುಪ್ರೀಂಕೋರ್ಟ್ ವರೆಗೂ ಕಾನೂನಿನ ಸೇವೆ ಹೇಗೆ ಪಡೆದುಕೊಳ್ಳಬೇಕು ಎಂಬುದರ ಕುರಿತು ಜನತೆಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆಯನ್ನು ದಾಖಲಿಸುವ ಪ್ರಾಥಮಿಕ ಹಂತದಿಂದ ಹಿಡಿದು ವಕೀಲರನ್ನು ನೇಮಕ ಮಾಡಿಕೊಳ್ಳುವ ಹಂತದವರೆಗೆ ನೆರವು ನೀಡಲಿದೆ. ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗುವುದು. ವಕೀಲರಿಗೆ ಶುಲ್ಕ ಕೊಡಲು ಸಾಧ್ಯವಾಗದೆ ಇರುವವರಿಗೂ ನೆರವು ನೀಡಲಾಗುತ್ತದೆ. ಜನರಿಗೆ ಉಚಿತವಾಗಿ ಕಾನೂನಿನ ಸೇವೆ ನೀಡುವ ಕೆಲಸವೂ ಕಳೆದ 15 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. 2005ರಿಂದ ಕಾನೂನಿನ ಸೇವೆ ಒದಗಿಸುವ ಕೆಲಸವನ್ನು ಕಾಲೇಜಿನ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಕಾಲೇಜಿನಲ್ಲಿ ಓದಿ ಪ್ರಸ್ತುತ ವಕೀಲರಾಗಿ ವೃತ್ತಿಯಲ್ಲಿ ತೊಡಗಿರುವವರ ಮೂಲಕ ಕಾನೂನು ನೆರವು ಒದಗಿಸುವ ಕೆಲಸವನ್ನು ಒದಗಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವ ಮುನ್ನ ಕೆಲವೊಂದು ಪ್ರಾಥಮಿಕ ಕಾರ್ಯಗಳನ್ನು ಮಾಡಬೇಕಾಗುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ ಮಾರ್ಗದಲ್ಲಿ ಹೋದರೆ ಮೊಕದ್ದಮೆಗಳನ್ನು ದಾಖಲಿಸಬೇಕು ಇಂತಹ ಪ್ರಾಥಮಿಕ ಕೆಲಸಗಳನ್ನು ಉಚಿತವಾಗಿ ಜನತೆಗೆ ಹೇಳಿಕೊಡಲಾಗುತ್ತದೆ. ಪ್ರಕರಣಗಳ ಆಧಾರದ ಮೇಲೆ ದೇಶದ ವಿವಿಧೆಡೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಸಂಶೋಧನೆ ನಡೆಸಿ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಅಲ್ಲದೆ ವಕೀಲರನ್ನು ಸಂಪರ್ಕಿಸಿ ಉಚಿತವಾಗಿ ವಾದ ಮಾಡಲು ಮನವಿ ಮಾಡುವುದರ ಮೂಲಕ ಸಹಾಯವನ್ನು ಮಾಡುತ್ತಾರೆ.
ಉಚಿತವಾಗಿ ಕಾನೂನಿನ ಸಲಹೆ ನೀಡುವುದು ಮಾತ್ರವಲ್ಲದೆ ಕೌನ್ಸಲಿಂಗ್ ಸಹ ಮಾಡಲಾಗುತ್ತದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಸಲಹೆಗಳನ್ನು ನೀಡಲಾಗುತ್ತದೆ. ಕಾಲೇಜಿನ ಅವಧಿ ಮುಗಿದ ಬಳಿಕ ಈ ಎರಡು ತಾಸು ಜನರ ಸೇವೆಗಾಗಿ ಮೀಸಲಿಡಲಾಗಿದೆ.
ಕಾಲೇಜಿನ ವಿದ್ಯಾರ್ಥಿಯಾದ ಅಪೂರ್ವ ಸಿಂಗ್ ಈ ಲೀಗಲ್ ಸರ್ವಿಸ್ ಕ್ಲಿನಿಕ್ ನ ವಕ್ತಾರರಾಗಿದ್ದಾರೆ. ಅವರು ಹೇಳುವಂತೆ ಉಚಿತವಾಗಿ ಕಾನೂನು ಸೇವೆ ನೀಡುವ ತಂಡದಲ್ಲಿ 19 ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನಿನ ಪ್ರಾಥಮಿಕ ಸೇವೆಗಳನ್ನು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಒದಗಿಸಲಾಗುತ್ತಿದೆ. ಕಾನೂನಿನ ಹೋರಾಟ ಕ್ಲಿಷ್ಟಕರವಾಗಿಲ್ಲ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗುತ್ತಿದೆ. ಜನರು ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ.
ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹೇಗೆ ದಾಖಲಿಸಬೇಕು ಎಂಬ ಗೊಂದಲಗಳಿದ್ದರೆ ಹಾಗೂ ಕಾನೂನಿನ ನೆರವು ಅಗತ್ಯ ಇರುವವರು ನಾಗರಬಾವಿಯಲ್ಲಿರುವ ರಾಷ್ಟ್ರೀಯ ಕಾನೂನು ಕಾಲೇಜಿಗೆ ಭೇಟಿ ನೀಡಬಹುದು. ಒಂದು ವೇಳೆ ಕಾಲೇಜಿಗೆ ಭೇಟಿ ನೀಡುವ ಮೊದಲು ಕರೆ ಮಾಡಿ ಹೋಗಬೇಕು ಎಂದು ಬಯಸುವವರು ಮೊಬೈಲ್ ಸಂಖ್ಯೆ 7358673721 ಸಂಪರ್ಕಿಸಬಹುದು ಅಥವಾ Lsc.nlsiu@gmail.com ಇ -ಮೇಲ್ ಗೆ ಕಳುಹಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಲೇಖನ : ಪ್ರಭುಸ್ವಾಮಿ ನಟೇಕರ್