ಮಂಜುನಾಥ್ ಕುಣಿಗಲ್ ಅವರ ಶಿವಾಜಿ ಟೆಂಟ್ ಕೃತಿಯ ಕುರಿತು ಲೇಖಕಿ ಹೆಚ್ ವಿ ಮೀನ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮನಕಲಕುವ 10 ಕಥೆಗಳು ಸತ್ಯಕ್ಕೆ ಹತ್ತಿರವಾದ ಕಥೆಗಳು. ಎಲ್ಲರೂ ಓದಬೇಕಾದ ಪುಸ್ತಕ ” ಶಿವಾಜಿ ಟೆಂಟ್. ತಪ್ಪದೆ ಮುಂದೆ ಓದಿ….
ಪುಸ್ತಕ : ಶಿವಾಜಿ ಟೆಂಟ್
ಲೇಖಕರು : ಮಂಜುನಾಥ್ ಕುಣಿಗಲ್
ಪ್ರಕಾಶನ : ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್
ಮೋ ಸಂಖ್ಯೆ : 7899315930
7022122121
ಬೆಲೆ : 230/-
“ಶಿವಾಜಿ ಟೆಂಟ್” ಕಥಾ ಸಂಕಲನಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ತು ‘ ಕೊಡುವ 2022ನೇ ಸಾಲಿನ “ನೀಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ” ಪ್ರಶಸ್ತಿ ದೊರಕಿದೆ. “ವಿಜಯ ಕರ್ನಾಟಕ ಹಾಗೂ ವೀರಲೋಕ ಪ್ರಕಾಶನ” ಆಯೋಜಿಸಿದ್ದ 2022ರ ಎರಡೂ ವರುಷದ ದೀಪಾವಳಿ ಕಥಾ ಸ್ಪರ್ಧೆಗಳಲ್ಲಿ ಮೆಚ್ಚುಗೆ ಬಹುಮಾನ ಪಡೆದಿದೆ. ಆನಂದ್ ಪಬ್ಲಿಕೇಷನ್, ತುಮಕೂರು ಆಯೋಜಿಸಿದ್ದ 2023ರ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದೆ. ಈ ಕೃತಿಯು ಇವರ ಎರಡನೇ ಕೃತಿ ಆಗಿದೆ. ಶ್ರೀ ಮಂಜುನಾಥ್ ಕುಣಿಗಲ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನಮ್ಮ ಬೆಳವಣಿಗೆಗೆ ಬಾಲ್ಯದ ನೆನಪುಗಳು ಅತ್ಯಅವಶ್ಯಕ. ಕೆಲವೊಂದು ಸತ್ಯ ಘಟನೆಗಳು ನಮ್ಮನ್ನು ಸದಾಕಾಲ ಕಾಡುತ್ತಲೇ ಇರುತ್ತವೆ. ನಮ್ಮ ಭೂತಕಾಲದ ನಂಟು ವಾಸ್ತವ ಹಾಗೂ ಭವಿಷ್ಯದ ಸಕಾರಾತ್ಮಕ ಅಥವಾ ನಕಾರಾತ್ಮಕ ನಿರ್ಧಾರಗಳಿಗೆ ಪರಿಣಾಮ ಬೀರುತ್ತವೆ. ಪಾಪ ಪ್ರಜ್ಞೆ ಅಥವಾ ತೃಪ್ತಿಯ ಆತ್ಮ ಅವಲೋಕನಗಳ ಮಂಥನವು ಪ್ರತೀ ಕ್ಷಣ ನಮ್ಮನ್ನು ಕಾಡದೇ ಬಿಡಲಾರವು…
“ನಮ್ಮ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಅತೀ ಸೂಕ್ಷ್ಮ ಹಾಗೂ ಬದುಕಿನ ಪರಿವರ್ತನಾ ಹಂತಗಳು”. ಹಾಗಾಗಿ ಬನ್ನಿ…. ಶ್ರೀ ಮಂಜುನಾಥ್ ಕುಣಿಗಲ್ ಅವರು, ಅವರೇ ಹೆಣೆದ ಅವರ ಬಾಲ್ಯದ ಸತ್ಯ ಘಟನೆಗಳ ಪುಟಗಳು ಹೇಗಿತ್ತು! ಎಂದು ತಿಳಿಯೋಣ.

ಆಗ ಸುಮಾರು 80-90ರ ದಶಕ. ರಂಗಪ್ಪ ಹಾಗೂ ತಾಯಮ್ಮನ ಮಗನಾದ ಗಣಪನಿಗೆ ಬಣ್ಣದ ಲೋಕದ ಹುಚ್ಚು. ಅಪ್ಪನ ಮುದ್ದಿನ ಮಗನಾಗಿದ್ದ ಗಣಪನಿಗೆ ರಂಗಪ್ಪ ಎಂದೂ ಹೊಡೆದಿದ್ದಿಲ್ಲ. ಸಿನಿಮಾದ ಗೀಳಿಗಾಗಿ ಸಾವಿನ ಸೂತಕದ ಸಮಯದಲ್ಲೂ ಗಣಪ ಅಮ್ಮನ ಚೀಲದಲ್ಲಿದ್ದ ಹಣವನ್ನು ಕದ್ದುಬಿಡುತ್ತಾನೆ. ಕದ್ದ ಹಣದಿಂದ ಶಿವಾಜಿ ಟೆಂಟ್ ಅವನ ಅಡ್ಡವಾಗುತ್ತವೆ. ಈ ವಿಷಯ ಎಲ್ಲಿ ಮನೆಯವರಿಗೆ ಗೊತ್ತಾಗಿಬಿಡುತ್ತದೆಯೋ ಎಂಬ ಆತಂಕ ಅವನಲ್ಲಿ ಇದ್ದರೂ ಧೈರ್ಯ ಮಾಡಿ ಕೆಲವೊಮ್ಮೆ ಆಂಗ್ಲ ಭಾಷೆಯ A ಪಿಕ್ಚರ್ ಗಳನ್ನು ನೋಡಲು ಪ್ರಯತ್ನಿಸುತ್ತಾನೆ. ಕದ್ದ ದುಡ್ಡಿನಿಂದ ಈಗಾಗಲೇ ನೋಡಿದ್ದ ” ಗೆದ್ದ ಮಗ “ಎಂಬ ಸಿನಿಮಾವನ್ನು ಮತ್ತೆ ನೋಡಲು ಹೋದಾಗ ಅಪ್ಪನ ಕೈಗೆ ಸಿಕ್ಕಿ ಬೀಳುತ್ತಾನೆ. ಅದೆಷ್ಟೋ ಬಾರಿ ಸ್ನೇಹಿತರೊಂದಿಗೆ ಟೆಂಟಿನ ಹಿಂದೆ ಹೋಗಿ ಟೆಂಟಿನ ದಬ್ಬೆಗಳನ್ನು ಕಿತ್ತು, ಕಿಂಡಿಯಿಂದ ಟೆಂಟ್ ಒಳಗೆ ನುಗ್ಗಿ, ಸಿನಿಮಾ ನೋಡಿ ಬಂದು ಅಲ್ಲಿನ ಕೆಲಸಗಾರರ ಕೈಗೆ ಸಿಕ್ಕಿಹಾಕಿಕೊಂಡದ್ದೂ ಉಂಟು. ಈ ವಿಷಯ ಶಾಲೆಯ ಸ್ನೇಹಿತರ ಕಿವಿಗೂ ಬಿದ್ದು ಆ ಸ್ನೇಹಿತರು ಗಣಪನನ್ನು ಬ್ಲಾಕ್ ಮೇಲ್ ಮಾಡುತ್ತಾ ತಮ್ಮ ನೋಟ್ಸ್ ಬರೆಸಿಕೊಳ್ಳುತ್ತಿದ್ದರು. ಈ ಕಾರಣದಿಂದ ಸ್ವಲ್ಪ ದಿನಗಳ ಮಟ್ಟಿಗೆ ಸಿನಿಮಾ ನೋಡುವ ಹವ್ಯಾಸಕ್ಕೆ ತೆರೆ ಬೀಳುತ್ತದೆ. ಆದರೇ ಸಿನಿಮಾ ನೋಡುವ ಹುಚ್ಚು ಅವನನ್ನು ಬಿಡಲಿಲ್ಲ. ಯಾರು “ವಿಸಿಪಿ” ಕ್ಯಾಸೆಟ್ ಗಳನ್ನು ಬಾಡಿಗೆಗೆ ಕೊಂಡು ಕೊಳ್ಳುವರೋ ಅವರನ್ನು ಹಿಂಬಾಲಿಸಿ,ಅವರ ಮನೆಗೆ ಹೋಗಿ, ತಾನೂ ಕೂಡ ಅವರ ಮನೆಯಲ್ಲಿ ಸಿನಿಮಾ ವೀಕ್ಷಿಸಿ ಬರುತ್ತಿದ್ದನು.
ಕದ್ದ ಹಣದಿಂದ ಸಿನಿಮಾ ನೋಡಿ ಬಂದು ಸಿಕ್ಕಿಹಾಕಿಕೊಂಡಾಗ ಅಪ್ಪನಿಗೆ ತಾನು ಹಣ ಕದ್ದಿಲ್ಲ ಎಂದು ಹೇಳಿ ನಂಬಿಸಿ ಗೆದ್ದ ಗಣಪನಿಗೆ ಕಳ್ಳತನದ ವಿಧಾನ ಸುರಕ್ಷಿತ ಎಂದು ಅನ್ನಿಸಲು ಶುರುವಾಗುತ್ತದೆ…… ಹೀಗೆ ಅವನ ಬಾಲ್ಯ ಕಳ್ಳನನ್ನಾಗಿ ಪರಿವರ್ತಿಸುತ್ತದೆ. ತನ್ನ ಮಗ ಕಳ್ಳತನ ಮಾಡುತ್ತಿಲ್ಲ ಎಂದು ಕೊನೆಯ ತನಕವೂ ನಂಬಿದ್ದ ರಂಗಪ್ಪ ಸಾವಿನ ಸೂತಕದ ದಿನದಂದು ಮಗ ತಾಯವ್ವನ ಹಣವನ್ನು ಕದ್ದಿದ್ದನ್ನು ನೋಡಿಬಿಡುತ್ತಾನೆ. ತಂಗಿಯ ಗಂಡ ಸತ್ತ ಎಂಬ ದುಃಖಕಿಂತ ತನ್ನ ಮಗ ಕಳ್ಳನಾದ ಎಂಬ ದುಃಖದಿಂದ ನೊಂದ ರಂಗಪ್ಪ ಕುಪಿತಗೊಂಡು ಗಣಪನ ಕೈಗಳಿಗೆ ಹಗ್ಗ ಕಟ್ಟಿ ಚಾವಣಿಯ ತೀರಿಗೆ ಉಲ್ಟಾ ನೇತುಹಾಕಿ ನೆಲದ ಮೇಲೆ ನಿಗಿ ನಿಗಿ ಉರಿಯುತ್ತಿದ್ದ ಕೆಂಡಕ್ಕೆ ಒಣ ಮೆಣಸಿನಕಾಯಿ ಹಾಕಿ ಹೊಗೆ ಇಡುತ್ತಾನೆ. ಅಂದು ಅಪ್ಪನ ಕ್ರೂರತನವನ್ನು ನೋಡಿದ ಗಣಪ ನರಕಯಾತನೆ ಅನುಭವಿಸುತ್ತಾನೆ. ತಾಯವ್ವನ ಕೂಗಿಗೆ ಅಕ್ಕ ಪಕ್ಕದವರು ಓಡಿ ಬಂದು ಚಾವಣಿಯ ತೀರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಗಣಪನನ್ನು ಕೆಳಗೆ ಇಳಿಸುತ್ತಾರೆ. ಅಂದಿನಿಂದ ರಂಗಪ್ಪ ತನ್ನ ಮುದ್ದಿನ ಮಗನೊಂದಿಗೆ ಮಾತನಾಡುವುದನ್ನ ನಿಲ್ಲಿಸಿಬಿಡುತ್ತಾನೆ. ಈ ವರ್ತನೆ ಇಂದ ಬೇಸರಗೊಂಡಿದ್ದ ಗಣಪ ಈ ವಿಷಯವನ್ನು ತನ್ನ ತಾಯಿಯ ಬಳಿ ಹೇಳಿಕೊಂಡು ಸಂಕಟ ಪಟ್ಟು ಕ್ಷಮೆಯಾಚಿಸಿದಾಗ …..
“ಸಾವಿನ ಸೂತಕದ ದಿನ ನೀನು ಮಾಡಿದ ಕಳ್ತನ ನಿಮ್ಮಪ್ಪ ನೋಡಿಬಿಟ್ಟ. ನೀನು ಕದ್ದು ಸಿನಿಮಾ ನೋಡಿದ ವಿಷಯ ಅಪ್ಪಂಗೆ ತಿಳಿದಾಗಿನಿಂದಲೂ ನಿನ್ನ ಅಪ್ಪನಿಗೆ ನಿನ್ನ ಮೇಲೆ ಕಣ್ಣು ಇದ್ದೇ ಇತ್ತು ನೀನು ಮೈ ಮರೆತಿದ್ದೆ ಅಷ್ಟೇ. ನಿನ್ನಪ್ಪ ನಿನಗೆ ಶಿಕ್ಷೆಕೊಟ್ಟ ದಿನವೇ ನಿನ್ನ ಕ್ಷಮಿಸಿ ಬಿಟ್ರು ಕಣೋ. ‘ಮಗ ದೊಡ್ಡೋನಾಗೌನೆ. ಅವನಿಗೆ ಸಿನಿಮಾ ನೋಡಲು ಹಣ ಕೊಡು’ ಎಂದು ನನಗೆ ಹೇಳುದ್ರು”. ಅಮ್ಮನ ಮಾತನ್ನು ಕೇಳಿ ಗಣಪನಿಗೆ ಗಂಟಲು ಉಬ್ಬಿ ಬಂದು ಮಾತನಾಡಲು ಧ್ವನಿ ಬಾರದೆ ಬಿಕ್ಕುತ್ತಾ ಕುಸಿದು ಕೂತಾಗ ತಾಯವ್ವ ಮಮತೆಯಿಂದ ಅವನ ತಲೆ ನೇವರಿಸುತ್ತಾಳೆ.
“ಅವ್ವನ ನೋಟಕ್ಕೆ ಎದುರುಗೋಡಲಾಗದೆ ಮೋಸ ಮಾಡಿದ
ಪಾಪಪ್ರಜ್ಞೆಯಿಂದ ಬೆಂದು ಕುಬ್ಜನಾಗಿ ಹೋಗುತ್ತಾನೆ ಗಣಪ”.
ವಿಪರ್ಯಾಸವೇನೆಂದರೆ…..ಗಣಪ ಕಳ್ಳತನದಲ್ಲಿ ನೋಡಿದ ಕೊನೆಯ ಸಿನಿಮಾದ ಹೆಸರು ” ಗೆದ್ದ ಮಗ “.
ಹೀಗೆ ಗಣಪನ ಬಾಲ್ಯ ಮುಂದುವರೆಯುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದ್ದ ಗಣಪನಿಗೆ ತನ್ನ ಕಾಲೇಜಿನ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಈ ಪರಿಸ್ಥಿತಿ ಇದ್ದಾಗ ಮುಂದಿನ ಬೆಂಚನ್ನು ಬಿಟ್ಟು ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳಲು ರೂಢಿಸಿಕೊಳ್ಳುತ್ತಾನೆ. ಒಮ್ಮೆ…..ರೇಖಾಗಣಿತದ “ಸರ್ವೇ ” ವಿಷಯದ ಕ್ಲಾಸ್ ನಲ್ಲಿ ತೂಕಡಿಸುತ್ತಾ ಕುಳಿತಿದ್ದ ಗಣಪನನ್ನು ಗಮನಿಸಿದ ಮೇಷ್ಟ್ರು.
“ಹೇ ಯು, ವಾಟ್ ಈಸ್ ದ ಪ್ರಿನ್ಸಿಪಲ್ ಆಫ್ ಸರ್ವೇ? ” ಎಂದು ಪ್ರಶ್ನಿಸಿದಾಗ……ಗಣಪನ ಉತ್ತರ……..
“ಅವರ್ ಕಾಲೇಜ್ ಪ್ರಿನ್ಸಿಪಾಲ್ ರಾಜಪ್ಪ ಸಾರ್, ನೋ ಸರ್ವೇ ಪ್ರಿನ್ಸಿಪಾಲ್ ಸಾರ್….” ಎಂದು ತನಗೆ ತಿಳಿದ ಇಂಗ್ಲಿಷ್ ನಲ್ಲಿ ಉತ್ತರಿಸುತ್ತಾನೆ. ತರಗತಿಯ ಹುಡುಗ ಹುಡುಗಿಯರು ಗೊಳ್ಳನೆ ನಗುತ್ತಾರೆ. ಮೇಷ್ಟ್ರು ಗಣಪನ ಕೆನ್ನೆಗೆ ರಪ್ಪನೆ ಬಾರಿಸಿ ಮೇಜಿನ ಮೇಲೆ ನಿಲ್ಲಲು ಹೇಳುತ್ತಾರೆ.
” ಇದು ಗಣಪನ ಕಲಿಕೆಯ ದಿನಗಳಲ್ಲಿ ಆದ ಮೊದಲ ಮಹಾ ಅವಮಾನ!”
ತನ್ನ ಸ್ಥಿತಿ ಪ್ರಜ್ಞೆಯನ್ನು ಕಳೆದುಕೊಂಡ ಗಣಪ ಅವಮಾನ ಕೋಪ ತಡಯಲಾರದೆ… ಚಂಗನೆ ಎಗರಿ ತನ್ನ ಕೈನಲ್ಲಿದ್ದ ಪುಸ್ತಕಗಳನ್ನು ಮೇಷ್ಟ್ರ ಮುಖಕ್ಕೆ ರೊಯ್ಯನೆ ತೂರಿ…. “ಹೋಗೊಲೇ….ನಿನ್ನ ಕಿತ್ತೋದ ಲೆಕ್ಕಾಚಾರ ಯಾರಿಗೆ ಬೇಕು… ಹಾಳಾಗ್ ಹೋಗ್ ಸಾಯ್ರಿ ನೀವೆಲ್ಲಾ…. ” ಎಂದು ಆವೇಶದಿಂದ ಕೂಗಿ ಅಲ್ಲಿಂದ ಎದ್ದು ಹೊರಗೆ ಬರುತ್ತಾನೆ.
“ಸರ್ವೇ ಮೇಷ್ಟ್ರ ತುಟಿಯು ಹರಿದು ರಕ್ತ ಜಿನುಗುತ್ತದೆ…….”
ಗಣಪನ ಊರಿನಲ್ಲಿ ಒಂದು ಗಿಣಿಯು ಇಬ್ಬರ ಕೈಗೊಂಬೆ ಆದ ಸನ್ನಿವೇಶಗಳು ನನಗೆ ಬಹಳ ದುಃಖವನ್ನು ತರಿಸಿತು. ಗಣಪನ ಅಮ್ಮನಿಗೆ ಗಿಣಿಯ ಮೇಲಿದ್ದ ಪ್ರೀತಿಯು ಪಕ್ಕದ ಬೀದಿಯ ಕೆಂಪಣ್ಣನ ಹೆಂಡತಿಯೊಡನೆ ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ … ಕೊನೆಗೆ ಹಕ್ಕಿಯ ಕಾಲುಗಳು ತುಂಡಾಗುತ್ತದೆ. ನೆಲಕ್ಕೆ ಉರುಳಿದ ಗಿಣಿಯು ವಿಲ ವಿಲನೆ ಒದ್ದಾಡಿ ರಕ್ತ ಸಿಕ್ತವಾಗಿದ್ದ ತನ್ನ ಒಂಟಿ ಕಾಲಿನಲ್ಲಿ ನಡೆಯುತ್ತಾ ಮೂಲೆಯಲ್ಲಿ ಹೋಗಿ ಕುಳಿತುಕೊಳ್ಳುತ್ತದೆ.
ಮೂಕ ಪಕ್ಷಿಗಳ ಸಂಕಟ ಮನುಷ್ಯನಿಗೆ ಅರ್ಥವಾಗುವುದ್ದಿಲ್ಲ…. ಅರ್ಥವಾದರೂ ಮನುಷ್ಯ ಪ್ರಾಣಿ ಪಕ್ಷಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಹಂಬಲಿಸುತ್ತಾನೆ.
ಡ್ರಾಗನ್ ಚಿಟ್ಟೆಗಳನ್ನು ಹಿಡಿದು ನೋವನ್ನು ಕೊಡುವ ಮಕ್ಕಳಾಟವನ್ನು ನೆನೆದು ಭಾವುಕನಾದ ಗಣಪ ಶಾಲೆಯಲ್ಲಿ ಕಪ್ಪೆಯನ್ನು ಕುಯ್ದು ಅದರ ದೇಹದ ಭಾಗಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಂತೆ ಗಣಪನು ಕೂಡ ತನ್ನ ಸ್ನೇಹಿತರೊಂದಿಗೆ ಕಪ್ಪೆಯನ್ನು ಹಿಡಿದು ಅದರ ನಾಲ್ಕು ಕಾಲುಗಳನ್ನು ಗೋಡೆಗೆ ಹಿಡಿದು ಮೊಳೆ ಹೊಡೆದು ಬ್ಲೇಡಿನಲ್ಲಿ ಅದರ ಮಧ್ಯ ಭಾಗವನ್ನು ಕತ್ತರಿಸಿ, ದೇಹವನ್ನೆಲ್ಲಾ ಜಾಲಾಡಿಸಿ ಕೊನೆಗೆ ದಾರದಿಂದ ಕತ್ತರಿಸಿದ ಜಾಗವನ್ನು ಹೊಲೆದು ಮತ್ತೆ ಹೊಂಡದಲ್ಲಿ ಬಿಡುತ್ತಿದ್ದನು. ಆ ಕಪ್ಪೆ ಬದುಕಲು ಸಾಧ್ಯವೇ!? ….ತಾಯವ್ವ ಹೇಳಿದ್ದ ಶಾಪದ ಕಥೆಯನ್ನು ನೆನಪಿಸುಕೊಂಡು..
“ನರಕದಲ್ಲಿ ನನಗೆ ಎಂತೆಂತಹ ಶಿಕ್ಷೆ ಕಾದಿದೆಯೋ ಎಂಬ ಹೆದರಿಕೆ ಗಣಪನಲ್ಲಿ ಮೂಡುತ್ತದೆ ”
ಒಂದು ದಿನ ಎಲ್ಲಿಂದಲೋ ಬಂದ ಎಳೇ ಪ್ರಾಯದ ತಿಳಿಗಪ್ಪು ಬಣ್ಣದ ಗೌರಿಯು ಕೆಂಪಮ್ಮನ ಮನೆಯ ಪೌಳಿಯ ಒಳಗಿದ್ದ ಗಾರೆ ಜಗುಲಿಯ ಮೇಲೆ ಕೂತು ತೂಕಡಿಸುತ್ತಿದ್ದಳು…….ಅವಳು ಬಸುರಿ ಎಂದು ಅರಿತ ಕೆಂಪಮ್ಮ ಗೌರಿಯ ಪರಿಸ್ಥಿತಿಗೆ ಕರಗಿ ಅವಳಿಗೆ ಅಲ್ಲೇ ಇರಲು ಆಶ್ರಯ ಕೊಡುತ್ತಾಳೆ.
ಒಮ್ಮೊಮ್ಮೆ ಅರೆ ಬರೇ ಬಟ್ಟೆಯಲ್ಲಿ ರಸ್ತೆಯ ನಡುವೆ ನಿಂತು ಅಳುತ್ತಾ ಹುಚ್ಚಿಯ ಹಾಗೆ ಬಡ ಬಡಿಸುತ್ತಿದ್ದ ಗೌರಿಗೆ ಊರಿನ ಜನರು “ಹುಚ್ಚಿಯ” ಪಟ್ಟವನ್ನು ಕಟ್ಟಿ ಅವಳನ್ನು ಅಲ್ಲಿಂದ ಊರಿನಾಚೆ ಅಟ್ಟಲು ಪ್ರಯತ್ನಗಳು ನಡೆಯುತ್ತವೆ. ಆದರೇ…..ಗೌರಿಯ ಸ್ನೇಹವನ್ನು ಬಯಸಿದ್ದು ಗಣಪ ಸಾಕಿದ್ದ ನಾಯಿ “ರಾಣಿ “ಮಾತ್ರ.

ದಿನಗಳು ಕಳೆದಂತೆ ಗೌರಿಯು ದುಂಡಗಿದ್ದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.
“ಮೇಲಿಂದ ಮೇಲೆ ಹೆಣ್ಣು ಮಕ್ಕಳನ್ನೇ ಹೆರುತ್ತಿದ್ದ ಕೆಲ ಬೀದಿ ಹೆಂಗಸರು ಅನಾಥೆ ಗೌರಿಗೆ ಗಂಡು ಮಗು ಹುಟ್ಟಿದ ವಿಷಯ ತಿಳಿದು ಹೊಟ್ಟೆ ಉರಿ ಪಟ್ಟದ್ದು ನಿಜ.”
ಜೀವನದ ಕಷ್ಟಗಳನ್ನು ಅನುಭವಿಸಿ ಅನಾಥಳಂತೆ ಬದುಕುತ್ತಿದ್ದ ಗೌರಿಗೆ …. ಒಂದು ಜೀವವನ್ನು ಪೊರೆಯುವ ಸಹಜ ಜಾಗರೂಕ ಮಾತೃ ಭಾವನೆ ಹಾಗೂ ಶಕ್ತಿಯು ಅವಳಲ್ಲಿ ಇರಲಿಲ್ಲ ಎಂದೆಸುತ್ತಿತ್ತು. ಅವಳ ಎದೆ ಹಾಲು ಸೋರಲಿಲ್ಲ. ಮಗುವಿಗೆ ಹಸು ಹಾಲನ್ನು ಕುಡಿಸುತ್ತಿದ್ದರು. ಕೆಂಪಮ್ಮ ಗೌರಿಯ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಂಡಳು. ನಂತರ ಕೆಂಪಮ್ಮನ ಆರೈಕೆಗೆ ಸ್ಪಂದಿಸಿದ ಗೌರಿಯ ಎದೆ ತುಂಬಿ ಬಂದು ಹಾಲು ಜಿನುಗಲು ಪ್ರಾರಂಭಿಸಿತು. ಎದೆ ಭಾರ ತಡೆಯಲಾರದೆ ನೋವಿನಿಂದ ಅಳುತ್ತಿದ್ದ ಗೌರಿಯು ಕೆಂಪಮ್ಮನ ಸಲಹೆಯಂತೆ ತನ್ನ ಭಾರವಾದ ಎದೆಯನ್ನು ಹಿಂಡಿ ಹಾಲನ್ನು ತೆಗೆದು ಪ್ಲಾಸ್ಟಿಕ್ ಜಗ್ಗಿನಲ್ಲಿ ತುಂಬಿಸಿ “ರಾಣಿ”ಯನ್ನು ಕೂಗಿ ಕರೆದು ಕುಡಿಯಲು ಕೊಡುತ್ತಿದ್ದಳು.
“ಗಣಪನ ನಾಯಿ “ರಾಣಿ”ಗೆ ಗೌರಿಯ ಮೇಲೆ ಮಾತೃ ಪ್ರೀತಿಯ ಬಂಧನ ಬೆಸೆ ಯುತ್ತದೆ.”
ಆ ಊರಿನಲ್ಲಿ ಆಡೋ ವಯಸ್ಸಿನಲ್ಲಿ ದುಡಿಮೆಗೆ ಇಳಿದು ಕಾಸಿನ ರುಚಿಯನ್ನು ಕಂಡಿದ್ದ ಬಹುಪಾಲು ಮಕ್ಕಳು ಪೋಲಿಬಿದ್ದು ಹಾಳಾಗಿದ್ದರು. ಇಂತವರಲ್ಲಿ ಉಕ್ಕುವ ಹರೆಯದ “ಲೋಕಿ” ಹಾಗೂ “ಮೂಗ” ಇದ್ದರು.
ಬಾಣಂತಿ ಗೌರಿಯು ತನ್ನ ಎದೆ ಹಾಲನ್ನು ಕರೆಯುವಾಗ ಅಲ್ಲೇ ಕಾದು ಕುಳಿತಿರುತ್ತಿದ್ದ ಕೆಂಪಮ್ಮನ ಮಗ ಲೋಕಿಯ ಕಣ್ಣುಗಳು ಗೌರಿಯ ದೇಹವನ್ನು ಭೇದಿಸಿ ನೋಡುತ್ತಿತ್ತು. ಕೆಂಪಮ್ಮನಿಗೆ ಇದರ ಸುಳಿವು ಸಿಕ್ಕಿದಾಗ ಗೌರಿಯನ್ನು ಅಲ್ಲೇ ಹತ್ತಿರದಲ್ಲಿ ಪಾಳುಬಿದ್ದಿದ್ದ ಮನೆಒಂದರಲ್ಲಿ ಇರಲು ವ್ಯವಸ್ಥೆಯನ್ನು ಮಾಡಿದಳು. ಗೌರಿ ಪಾಳು ಮನೆಯನ್ನು ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಪ್ರತೀನಿತ್ಯ ಬೀದಿ ತುಂಬಾ ಅವಳ ಮಗುವಿನ ರಚ್ಚೆಯ ಅಳುವೇ ತುಂಬಿಹೋಗುತ್ತಿತ್ತು. ಯಾರ ದೃಷ್ಟಿ ತಗುಲಿತೋ ಎನೋ.
“ಮಗು ಹುಟ್ಟಿದ ವಾರದಲ್ಲೇ ಸತ್ತು ಹೋಯಿತು”.
ಒಂದು ದಿನ… ಬೀದಿಯ ಮಧ್ಯದಲ್ಲಿ ನಿಂತು ತನ್ನ ಸೀರೆಯನ್ನು ಕೊಡವಿ ರವಿಕೆಯನ್ನು ಇದ್ದಕ್ಕಿದ್ದಂತೆ ಬಿಚ್ಚಿ….. ಬನ್ರೋ, ಬನ್ನಿ…… ನಿಮಗೂ ಹಾಲ್ಬೇಕಾ?…… ಎಂದು ಜೋರಾಗಿ ಕೂಗುತ್ತಾ…. ಲೋಕಿ, ಮೂಗನ ಹೆಸರನ್ನು ಎತ್ತಿ ಅವರು ಅವಳ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ಬಗ್ಗೆ ಚೀರುತ್ತಾ ಹೇಳುತ್ತಾಳೆ.
ಕೆಂಪಮ್ಮನಿಗೆ ತನ್ನ ಮಗ ಲೋಕಿಯ ನಡೆತೆಯ ಬಗ್ಗೆ ಗೊತ್ತಿದ್ದರೂ ಅಂದು ತನ್ನ ಮಗನಪರ ವಹಿಸಿಕೊಂಡು ಗೌರಿಯ ಮೇಲೆ “ಇವಳು ರಂಡೆ, ಬೋಸೊಡಿ, ಹುಚ್ಚಿ” ಎಂದು ಛೀಮಾರಿ ಹಾಕುತ್ತಾಳೆ. ಲೋಕಿ ಹಾಗೂ ಮೂಗನ ಹೇಯ ಕೃತ್ಯಗಳ ಬಗ್ಗೆ ಊರಿನವರಿಗೆಲ್ಲರಿಗೂ ತಿಳಿದುಹೋಗುತ್ತದೆ. ಅವಮಾನ ತಡೆಯಲಾರದೇ ಕೋಪಗೊಂಡ ಲೋಕಿ ಹಾಗೂ ಮೂಗನ ಕೋಪಕ್ಕೆ ಗೌರಿ ಬಲಿ ಆಗಿ, ಅತ್ಯಾಚಾರಕ್ಕೆ ಒಳಪಡುತ್ತಾಳೆ. ಗೌರಿ ನೋವಿನಿಂದ ನರಳಿ ಅಳುತ್ತಾಳೆ. ಆ ಕ್ರೂರ ಕೃತ್ಯ ಜರುಗುವ ವೇಳೆ ಗೌರಿಯನ್ನು ರಕ್ಷಿಸಲು ಬರುತ್ತಿದ್ದದ್ದು ಮೂಕ ಪ್ರಾಣಿ “ರಾಣಿ” ಒಬ್ಬಳೇ. ಮೂಗ ತನ್ನ ತೇವಲನ್ನು ತೀರಿಸಿಕೊಳ್ಳಲು ಅಲ್ಲಿಗೆ ಬಂದಾಗಲೇಲ್ಲಾ ಅವನ ಮೇಲೆ ಎಗರಿ ಕಚ್ಚಲು ಬರುತ್ತಿದ್ದ “ರಾಣಿ”ಯನ್ನು ಮೂಗ ಕಲ್ಲಿನಿಂದ ಹೊಡೆದು ನೋವಿಸುತ್ತಿದ್ದನು.
ಅದೆಷ್ಟೋ ಬಾರಿ ಲೋಕಿ ಪಾಳು ಮನೆಗೆ ನುಗಿದ್ದನ್ನು ಮೂಗ ನೋಡಿದ್ದ. ಅವನು ಕೂಡ ಅಂದು ಭಂಡ ಧೈರ್ಯದಿಂದ ಪಾಳು ಮನೆಯೊಳಗೆ ನುಗ್ಗಿದ. ರಾಣಿ, ಗೌರಿಯ ಜೊತೆ ಮಲಗಿದ್ದನ್ನು ನೋಡಿ ಮೆಲ್ಲನೆ ಗೌರಿಯ ಬಳಿ ಬಂದು ಅವಳನ್ನು ಸ್ಪರ್ಶಿಸಿದ. ಅವನ ಒರಟು ಸ್ಪರ್ಶಕ್ಕೆ ಹೆದರಿ ಎದ್ದು ಕುಳಿತು….. “ನೋವಾಗತ್ತೆ…. ಬೇಡಣ್ಣ ” ಎಂದು ಜೋರಾಗಿ ಅಳತೊಡಗುತ್ತಾಳೆ. ತಕ್ಷಣವೇ ಗೌರಿಗೆ ಎನೋ ತೊಂದರೆ ಆಗುತ್ತಿದೆ ಎಂದು ಗ್ರಹಿಸಿದ ರಾಣಿ, ಮೂಗನನ್ನು ನೋಡಿ ಜೋರಾಗಿ ಬೊಗಳುತ್ತಾ ನಿಂತಿದ್ದನ್ನು ನೋಡಿ ಮೂಗ ಅಲ್ಲೇ ಬಿದಿದ್ದ ದೊಡ್ಡ ಮಣ್ಣಿನ ಹೆಂಟೆಯನ್ನು ಹೆಕ್ಕಿ ರಾಣಿಯ ಮೇಲೆ ಎಸೆಯುತ್ತಾನೆ. ನೋವಿನಿಂದ ಕೆರಳಿದ ರಾಣಿ ಮೂಗನ ಮೇಲೆ ಎರಗಿ ಮೀನ ಖಂಡಕ್ಕೆ ಬಾಯಿಹಾಕುತ್ತದೆ. ಮೂಗ ನೋವು ಸಹಿಸಲಾಗದೆ ಜನರು ಮನೆಯಿಂದ ಹೊರಗೆ ಬಂದು ಇಣುಕಿ ನೋಡಿದ್ದನ್ನು ಕಂಡು ಅಲ್ಲಿಂದ ಓಡಿ ಹೋಗುತ್ತಾನೆ.
ಅಂದು ಕೂಡ ಕೆಟ್ಟ ರಾತ್ರಿ…. ಗೌರಿಯ ಪಕ್ಕದಲ್ಲಿ ಮಲಗಿದ್ದ ರಾಣಿಯ ತಲೆಯ ಮೇಲೆ ದಪ್ಪನೆಯ ಚಪ್ಪಡಿಗಲ್ಲನ್ನು ಎತ್ತಿ ಹಾಕಿ ಮೂಗ ಓಡಿ ಹೋಗುತ್ತಾನೆ.
“ಮನುಷ್ಯನ ವಿಕೃತ ಮನಸ್ಸಿನ ಆಟಗಳ ಸುಳಿಗೆ ಸಿಲುಕಿದ ಮೂಕ ಪ್ರಾಣಿ “ರಾಣಿ”ಯು ನರಳಿ ಸತ್ತಿದ್ದಳು”.
ಗೌರಿ ಮತ್ತೆ ಬಸುರಾಗುತ್ತಾಳೆ!
ಓರ್ವ ಹೆಣ್ಣಿಗೆ ಪ್ರೀತಿಸುವ, ಗೌರವಿಸುವ ರಕ್ಷಿಸುವ ಪೋಷಕರು ಹಾಗೂ ಒಡ ಹುಟ್ಟಿದವರು ಇಲ್ಲದೇ ಹೋದಲ್ಲಿ ಅನೇಕ ಹೆಣ್ಣು ಮಕ್ಕಳು ಅನಾಥರಾಗಿ ಮಾನಸಿಕ ಆರೋಗ್ಯದ ಅಸ್ವಸ್ಥತೆಗಳಿಂದ ಬಳಲುವ ಗೌರಿಯಂತೆ ಪುರುಷನೆಂಬ ಭಕ್ಷಕನ ಕೈಗೆ ಸಿಕ್ಕಿ ಪಡಬಾರದ ಕಷ್ಟಗಳನ್ನು ಅನುಭವಿಸುವ ಈ ನೈಜ್ಯ ಕಥೆಯನ್ನು ಓದುತ್ತಾ ನನ್ನ ಹೃದಯ ನೋವಿನಿಂದ ಅತ್ತು ಗೌರಿಯ ಅಸಹಾಯಕತೆಗೆ ಕಣ್ಣು ತುಂಬಿ ಬಂದವು. ಇಂತಹ ಮನಕಲಕುವ 10 ಕಥೆಗಳು ಸತ್ಯಕ್ಕೆ ಹತ್ತಿರವಾದ ಕಥೆಗಳು. ಎಲ್ಲರೂ ಓದಬೇಕಾದ ಪುಸ್ತಕ ” ಶಿವಾಜಿ ಟೆಂಟ್.
ಮಂಜುನಾಥ್ ಕುಣಿಗಲ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದವರು. ಇವರು ವೃತಿಯಲ್ಲಿ ಕನ್ಸಲ್ಟೆಂಟ್ ಇಂಜಿನೀಯರ್. ಕೆಲಸದ ನಿಮಿತ್ತ ಇವರು ಯುದ್ಧ ಪೀಡಿತವಾಗಿದ್ದ ಆಫ್ಘಾನಿಸ್ಥಾನ್ ಮತ್ತು ಇರಾಕ್ ಸೇರಿದಂತೆ ಇತರೇ ಗಲ್ಫ್ ರಾಷ್ಟ್ರಗಳು, ಯುರೋಪ್ ಮತ್ತು ಆಮೇರಿಕ ದೇಶಗಳನ್ನು ಸುತ್ತಿ ಬಂದಿದ್ದು,” ಕುಣಿಗಲ್ ಟು ಕಂದಹಾರ್ ” ಎಂಬ ಚೊಚ್ಚಲ ಕೃತಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಂಜುನಾಥ್ ಕುಣಿಗಲ್ ಅವರ ಮೊದಲ ಕಥೆ “ಗಿಳಿಯು ಮಾತನಾಡುವುದಿಲ್ಲ”. ಇದು ಕೂಡ ಮೆಚ್ಚುಗೆ ಬಹುಮಾನವನ್ನು ಪಡೆದಿದೆ.
ಮಂಜುನಾಥ್ ಕುಣಿಗಲ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ ಪುಸ್ತಕ ಪರಿಚಯವನ್ನು ಮುಗಿಸುತ್ತೇನೆ.
ಧನ್ಯವಾದಗಳು
- ಹೆಚ್ ವಿ ಮೀನ – ಬೆಂಗಳೂರು.
