ಪತಿವಾಸ ಸ್ಮಶಾನ, ಪ್ರವೇಸಿಸಿದಳು ಸತಿ ಶಿವನಿಗಿಂತ ಸರಳ, ನಿಸರ್ಗ ಸುಂದರಿ, ಓ…ಆಶೀತೋಷ… ಲೇಖಕರಾದ ಪ್ರಕಾಶ ವಸ್ತ್ರದ ಅವರ ಸತಿ ಶಿವನ ದುರಂತ ಪ್ರೇಮ ಗಾಥೆಯನ್ನು ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ಸ್ಮಶಾನ ವಾಸಿ, ಕಟಿಗೆ ಹುಲಿ ಚರ್ಮ, ಮೈತುಂಬ ಬೂದಿ
ಮನೆಯಿಲ್ಲ ಬಂಧುಗಳಿಲ್ಲ, ಸುತ್ತ ಮುತ್ತ ದೆವ್ವ ಪಿಶಾಚಿ
ಕೆಂಜೆಡೆಯಲ್ಲಿ ಗಂಗೆ, ರುದ್ರಾಕ್ಷಿ,ಸರ್ಪ ಸರ ಕೊರಳಲಿ
ವೈರಾಗ್ಯ ನಿಧಿ, ಮೈಗೆ ಬಟ್ಟೆ ಇಲ್ಲ, ನಿಸರ್ಗ ಮೈದುಂಬಿ
ಧ್ಯಾನ ಮುದ್ರೆ ಕಣ್ಣಿನ, ಜಗದ ಜಂಜಡ ಕಳಚಿದ ವಿರಾಗಿ
ಹಿಮಾಲಯದಲಿ ಮೌನ ಧ್ಯಾನಕ್ಕೆ ಕುಳಿತ, ಓ.. ಶಿವನೆ
ಅಹಂಕಾರಿ ದಕ್ಷಪ್ರಜಾಪತಿ, ಪ್ರಸೂತಿ ಮಗಳು ಸತಿದೇವಿ
ಸರ್ವಸ್ವವ ತ್ಯಜಿಸಿ, ನೋಡದ, ಸ್ಪರ್ಶಿಸದ ಶಿವನೆ ಪತಿ
ಅನುರಕ್ತಳು , ದಕ್ಷಪ್ರಜಾಪತಿ ನಿರಾಕರಿಸಿದ ಶಿವದ್ವೇಶಿ
ಸರಳ ಸತಿಗೆ, ವೈರಾಗಿ, ವಿರಾಗಿ ಸೂಕ್ತವೆಂದಳು ಪ್ರಸೂತಿ
ಭಕ್ತಿಗೆ ಮೆಚ್ಚುವ ಶಿವನ, ಸತಿ ಪ್ರೇಮ ತಪಸ್ಸಿಗೆ ಮೆಚ್ಚಿಸಿ
ಹರನ ಮನ ಗೆದ್ದಳು ದ್ರಾಕ್ಷಾಯಣಿ , ಓ.. ಸದಾಶಿವ
ಸತಿ ಶಿವ ವಿವಾಹದಿ, ಬ್ರಹ್ಮನೆ ದಕ್ಷಬ್ರಹ್ಮನ ಮನವಲಿಸಿ
ಬ್ರಹ್ಮ ಮಾಂಗಲ್ಯ ಮಂತ್ರ, ಕಿನ್ನರರು ವಾದ್ಯ ಮೊಳಗಿಸಿ
ದೇವ ನಿಸರ್ಗ ಸಮ್ಮಿಲನ, ಭಕ್ತ ಬ್ರಹ್ಮಾಂಡವೆ ನಮಿಸಿ
ಶಿವ ಸತಿ, ಸತಿ ಪತಿಗಳಾದ ವಿವಾಹ ಕ್ಷಣ ಧರೆಗೆ ಐಸಿರಿ
ಬಲಗಾಲಿಟ್ಟು, ಪತಿವಾಸ ಸ್ಮಶಾನ ಪ್ರವೇಸಿಸಿದಳು ಸತಿ
ಶಿವನಿಗಿಂತ ಸರಳ, ನಿಸರ್ಗ ಸುಂದರಿ, ಓ.. ಆಶೀತೋಷ
ದಕ್ಷನ ಯಜ್ಞಕೆ ಅವ್ಹಾನವಿಲ್ಲದೆ ಹೊರಟು ನಿಂತಳು ಸತಿ
ತನ್ನ ನಿರ್ಲಕ್ಷಿಸಿ ಆಯೋಜಿಸಿದ ಯಜ್ಞ,ಬೇಡ ದ್ರಾಕ್ಷಾಯಣಿ
ಪತಿ ಮಾತು ಮೀರಿ ಹೋಗಿ ಅವಮಾನ ಪಟ್ಟಳು ಸಖಿ
ಯಜ್ಞ ತತ್ವ ಮೀರಿ ಶಿವನ ಹೊರತು ಹೋಮದ ಆಹುತಿ
ಅವಮಾಣಿತಳ ಆತ್ಮಭಸ್ಮ,ಸತಿ ಕೆಂಡ ಹಾರಿದಳು ತಾಪದಿ
ರೌದ್ರ ಶಿವನ ಜೆಡೆ ನೆಗೆದ, ಖಡೆ,ಖಡೆ ಓ..ಹೊ ವೀರಭದ್ರ
ಮೂರು ಲೋಕ ಗಡ ಗಡಿಸಿತು,ಶಿವಭದ್ರನ ಹುಂಕಾರದಿ
ಎದುರ ಬಂದವರ ತುಳಿದ,ದಕ್ಷನ ರುಂಡ ಕಡಿದ ಖಡ್ಗದಿ
ಹೋಮ ಕೆಂಡ ಆಕಾಶ ಸೇರಿ, ಭದ್ರನ ರೌದ್ರಾವತಾರದಿ
ರೌದ್ರಭದ್ರನ ಆರ್ಭಟಕೆ ಕಡಲು,ನಭೋ ಮಂಡಲ ಏರಿ
ಭೂಮಿ ಪ್ರಳಯ ಸದೃಶ್ಯ,ವಿಶ್ರಾಂತನಾಗು ವೀರ,ಶಾಂತಿ
ಭದ್ರ ಶಾಂತನಾದ, ಪತ್ನಿ ವಿರಹ ಪ್ರೇಮಿ,ಓ.ನಟರಾಜ
ಧ್ಯಾನದಲಿ ಚಿರ ವಿರಮಿಸಿ,ಮತ್ತೇಳದ ಪ್ರಾಣಸಖಿ ಸತಿ
ಆತ್ಮ ವಿಸರ್ಜಿಸಿದ ಶವ ಕಾಯ , ಹೆಗಲ ಹೊತ್ತ ವಿರಹಿ
ದಿಕ್ಕು ತೋಚದ ಶಿವ,ಬ್ರಹ್ಮಾಂಡ ಸುತ್ತಿ ಅಲೆದ ಜೋಗಿ
ಜಗಕಾಯುವ ಯೋಗಿ,ಹೊರಟ ಗಮ್ಯದಡೆಗೆ ಭೋಗಿ
ಕೆಳಗಿಳಿಸು ಶವ ಯೋಗೇಶ್ವರನೆ,ಆತ್ಮವಿಲ್ಲದ ಸತಿದೇವಿ
ನೀನು ಹರ ನಮ್ಮಂತೆ ಪಾಮರನೇ ಓ.. ಮೃತ್ಯುಂಜಯ
.
ದಿಘ್ರಮಿಸಿತು ಬ್ರಹ್ಮಮಾಂಡ, ಪರಮಾತ್ಮನ ತಲ್ಲಣದಿ
ದೇವಾದಿಗಳು ಬಿನ್ನವಿಸಲು, ವಿಷ್ಣುವಿಗೆ ಮೊರೆ ಹೋಗಿ
ವಿಷ್ಣು,ಪರಮಾತ್ಮನ ವಿಷನ್ನತೆ ಅಳಿಯಲು ತುಂಡರಿಸಿ
ಸತಿ ದೇಹ ಸುದರ್ಶನ ಚಕ್ರದಿ,ಹರಡಿ ಭರತ ವರ್ಷದಿ
ಸತಿದೇವಿ ಸ್ಥಾಪಿತಳಾದಳು, ಶಕ್ತಿ ಪೀಠಗಳಾಗಿ ಅಲ್ಲಲ್ಲಿ
ಶಿವ ಶಾಂತನಾದ ಮರಳಿ ಹಿಮಾಲಯದಿ ಧ್ಯಾನದಲಿ
ಸತಿಪತಯೆ ಹರ ಹರ ಹರ ಶಂಭೋ.. ಮಹಾದೇವ.
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ.
