ಮೌನ ಜ್ಞಾನಿಯ ಹೆಜ್ಜೆ ಗುರುತು

ಜ್ಞಾನದ ಶಿಖರದಂತಿರುವ ಬಹುಮುಖಿ ನೆಲೆಯ ಅಧ್ಯಯನಕಾರರು, ವಿಮರ್ಶಕರು, ಸಂಸ್ಕತಿ ಚಿಂತಕರು, ಸಂಶೋಧಕರು,ಮಾರ್ಗದರ್ಶಕರು, ಪ್ರಸ್ತುತ ರಾಯಚೂರು ವಿವಿಯ ಕುಲಪತಿಗಳು ಆಗಿರುವ ಡಾ ಶಿವಾನಂದ ಕೆಳಗಿನಮನಿ‌ ಅವರ ಸಾಹಿತ್ಯ ಸಾಧನೆಯ ಒಂದು ಕಿರುನೋಟವನ್ನು ಲೇಖಕಿ ವಾಣಿ ಭಂಡಾರಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಜ್ಞಾನದ ಹಸಿವಿಗೆ ಸದಾ ನೀರು ಎರೆವ ನಿಗರ್ವಿ ನಿರಹಂಕಾರಿ.ಜ್ಞಾನ ದೇಗುಲಕ್ಕೆ ಕೈ‌ಮುಗಿದು ಬಾ ವಿದ್ಯಾರ್ಥಿಯೇ ಎನ್ನುವಂತೆ ಜ್ಞಾನದ ಕಣಜ ಹೊಂದಿರುವ ಇವರಲ್ಲಿ ವಿಧೇಯಕ ಶಿಷ್ಯರು ಎಷ್ಟು ಕಲಿತರು ಮುಗಿಯಲಾರದಷ್ಟು ಜ್ಞಾನವನ್ನು ಪೇರಿಸಿಟ್ಟುಕೊಂಡಿರುವ ಡಾ:ಶಿವಾನಂದ ಕೆಳಗಿನಮನಿ ಇವರು ವಿದ್ಯಾರ್ಥಿಗಳ ಪಾಲಿಗೆ ಎಸ್‌.ಕೆ. ಸರ್ ಎಂದೇ ಜನಜನಿತ. ೧೯೯೬ ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ವೃತ್ತಿ ಜೀವನ ಆರಂಭಿಸಿ,ತದನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸರಿ ಸುಮಾರು ೨೦೦೯ ರಿಂದ‌ ಜುಲೈ-೫- ೨೦೨೫ ರ ತನಕ ಅತ್ಯಂತ ದಕ್ಷತೆ ಪ್ರಾಮಾಣಿಕತೆ, ಪ್ರೀತಿ ಕಾಳಜಿಯಿಂದ ಕಾರ್ಯ ನಿರ್ವಹಿಸಿರುವ ಇವರು ಅತ್ಯುತ್ತಮ ಲೇಖಕ, ಕವಿ, ಸಂಶೋಧಕ, ಮಾರ್ಗದರ್ಶಕ, ವಾಗ್ಮಿ, ಜ್ಞಾನಿ,ಸಂಸ್ಕೃತಿ ಚಿಂತಕರು,ವಿದ್ವತ್ಪೂರ್ಣ ಪಾಂಡಿತ್ಯವನ್ನು ಗಳಿಸಿಕೊಂಡ ಬಹುಮುಖ ಪ್ರತಿಭೆ ಹೊಂದಿದವರು. ಮೂಲತಃ ಹಾವೇರಿ ಜಿಲ್ಲೆಯ ಸುಣಕಲ್ಲು ಬಿದರಿಯಲ್ಲಿ ಜನಿಸಿದವರು.ತಂದೆ ಬರ್ಮಪ್ಪ. ತಾಯಿ ಕಮಲಮ್ಮ ದಂಪತಿಗಳ ಕೊನೆಯ ಪುತ್ರನಾಗಿ ಕೃಷಿ ಕುಟುಂಬದಲ್ಲಿ ಜುಲೈ 14 ರಂದು ಜನಿಸಿದವರಾಗಿದ್ದು, ಪ್ರಸ್ತುತ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರಿನಲ್ಲಿ ನೂತನ ಕುಲಪತಿಗಳಾಗಿದ್ದಾರೆ.

ಉತ್ತರ ಕನ್ನಡ ಭಾಷಾ ಸೊಗಡನ್ನು ಹೊಂದಿದ್ದರೂ ಸಹ ಅಪ್ಪಟ ಮಲೆನಾಡಿನವರೇ ಎನ್ನುವಷ್ಟು ಮಲೆನಾಡನ್ನು ಅಪ್ಪಿ ಒಪ್ಪಿಕೊಂಡು ಜ್ಞಾನಕ್ಕೆ ದಾರಿದೀಪವಾಗಿ ಬೆಳಕು ನೀಡಿದ ಮೇದಾವಿ. ದೂರದೃಷ್ಟಿ, ಸೂಕ್ಷ್ಮತೆ, ತೀಕ್ಷ್ಣತೆ ,ಸರಳತೆ, ಕಾರ್ಯದಕ್ಷತೆ, ಹಠವಾದಿ, ಆದ ಇವರು, ದೂರದಿಂದ ಕಂಡವರಿಗೆ, ಸೋಮಾರಿಗಳಿಗೆ ಅಪ್ರಾಮಾಣಿಕರಿಗೆ, ನಿಷ್ಠುರವಾದಿಯಂತೆ ಕಾಣುವ ಇವರ ಚಿತ್ತ ಸದಾ ಕಲಿಕೆಯತ್ತಲೇ ಇದ್ದು ವಿದ್ಯಾರ್ಥಿಯಂತೆ ಸದಾ ಕಲಿಕೆಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಬಸವಣ್ಣ ಅಂಬೇಡ್ಕರ್,ವಿಚಾರಧಾರೆಗಳನ್ನು ಹೊಂದಿದ ಇವರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾ. ವೀರಣ್ಣ ರಾಜೂರು ಅವರ ಮಾರ್ಗದರ್ಶನದಲ್ಲಿ “ಗೋಪಾಲಕೃಷ್ಣ ಅಡಿಗ ನವ್ಯಕಾವ್ಯ; ಒಂದು ಅಧ್ಯಯನ” ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿಎಚ್ಚಿ ಪದವಿ ಪಡೆದುಕೊಂಡರು. ಶಾಸನ, ಕಾವ್ಯ ಮೀಮಾಂಸೆ, ವಚನಸಾಹಿತ್ಯ, ಲಿಂಗ್ವಿಸ್ಟಿಕ್ಸ್, ಜನಪದ, ವಿಮರ್ಶೆ, ಕನ್ನಡ ಮತ್ತು ಸಾಹಿತ್ಯ ಸಂಸ್ಕೃತಿ, ಹೀಗೆ ಹಲವು ವಸ್ತು ವಿಷಯಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು‌ .ಅನೇಕ ಸಂಶೋದನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸುಮಾರು ೭೦ ಹೆಚ್ಚು ಕೃತಿಗಳನ್ನು ರಚಿಸಿದ ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಆರಸಿ ಬಂದಿವೆ.

ಪ್ರಶಸ್ತಿ ಪುರಸ್ಕಾರಗಳು:

ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ‌ ಪ್ರಶಸ್ತಿ-೨೦೦೬,ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ-೨೦೧೬, ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾದರ ಚೆನ್ನಯ್ಯ ಬಹುಮುಖಿ ಅಧ್ಯಯನ ಕೃತಿಗೆ-೨೦೦೬, ಸ್ನೇಹಸೇತು ಪ್ರಶಸ್ತಿ-೨೦೦೯, ಅಖಿಲ ಭಾರತ ದಲಿತ ಸಾಹಿತ್ಯ ಗೌರವ ಪ್ರಶಸ್ತಿ, ಸುವರ್ಣನಗರಿ ಸುಣಕಲ್ಲಬಿದರಿ ಪುಸ್ತಕಕ್ಕೆ ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್‌ ಪುಸ್ತಕ ಬಹುಮಾನ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರಶಸ್ತಿ, ಶ್ಯಾಮ್‌ ಸುಂದರ್‌ ಪುಸ್ತಕ ಪ್ರಶಸ್ತಿ, ಗೋರಖನಾಥ ಪುರಸ್ಕಾರ,ಹೀಗೆ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಇವರು ನಾನಿನ್ನು ಕಲಿಕಾರ್ಥಿ ಎನ್ನುತ್ತಾರೆ.

ಕೃತಿಗಳ ಕಿರು ನೋಟ

  •  ಕರ್ನಾಟಕ ಮಾತಂಗಿ ಸಂಸ್ಕೃತಿ: ಮಾತಂಗಿಯು ಒಬ್ಬ ಶಕ್ತಿ ದೇವತೆಯಾಗಿ,ಶಾಕ್ತ ತಂತ್ರಗಳಲ್ಲಿ ಇರುವ ಇದರ ವಿವರಣೆ ಮತ್ತು ಮಾತಂಗಿ ಸಂಸ್ಕೃತಿಯ ಹಿಂದೆ ಇದ್ದಂತಹ ಘನ, ಹಾಗೂ ಸಿಂಧು ನಾಗರೀಕತೆಯ ಮಾತೃಪ್ರಧಾನ ಮಾತಂಗಿ ಸಂಸ್ಕೃತಿ ಕುರಿತಾದ ಸಂಶೋಧನಾತ್ಮಕ ಕೃತಿ.
  • ಕನಕದಾಸರ ಕೀರ್ತನೆಗಳ ಸಾಂಸ್ಕೃತಿಕ ಅನನ್ಯತೆ: ದಾಸ ಚರಿತ್ರೆ ಮತ್ತು ಕನಕದಾಸರ ನಡುವಿನ ಸಂಬಂಧ, ಜೀವನ ಅವರ ವ್ಯಕ್ತಿತ್ವ,ಕನಕರ ಜೀವನತತ್ವ,ಧರ್ಮ ತಾತ್ವಿಕತೆ,ಅಂದಿನ‌ ಚಾರಿತ್ರಿಕ ನಿಲುವುಗಳು,ರಾಜಕೀಯ ಒತ್ತಡಗಳು, ಜಾತಿವ್ಯವಸ್ಥೆ ಒಡ್ಡಿದ ಅನಾಹುತಗಳು,, ಕನಕ ದಾಸರ ಆಧ್ಯಾತ್ಮಿಕತೆ ಸಾಂಸ್ಕೃತಿಕ ಅನನ್ಯತೆ ಕುರಿತಾದ ಸಂಶೋಧನೆ ಕೃತಿಯಾಗಿದೆ.
  • ಮಾದಿಗ ಲಿಂಗಾಯಿತರು: ವೀರಶೈವ ಧರ್ಮದಲ್ಲೇ ಹಿಂದಿನಿಂದಲೂ ಮಾದಿಗ ಲಿಂಗಾಯತ ಜಾತಿಯೊಂದು ತನ್ನ ಅಸ್ತಿತ್ವವನ್ನು ಕಂಡುಕೊಂಡು ಬಂದಿರುವುದನ್ನು ಬಹಳ ವಾಸ್ತವವಾದಿ ನೆಲೆಗಟ್ಟಿನಿಂದ ಚಾರಿತ್ರಿಕ, ಸಾಮಾಜಿಕ, ಆರ್ಥಿಕ ನೆಲೆ,ಸಾಂಸ್ಕೃತಿಕ ನಾಯಕರಾದಿಯಾಗಿ ವಿಶ್ಲೇಷಣೆ ಮಾಡುತ್ತಾ ಸಂಶೋಧನೆಗೈದ ಕೃತಿಯಾಗಿದೆ.
  • ಮಾನಸಿಜನ ಮಾಯೆ: ಇವರು ಒಬ್ಬ ಅತ್ಯುತ್ತಮ ಕವಿ ಎನ್ನುವುದಕ್ಕೆ ಇದರಲ್ಲಿ ಅಡಕವಾದ ಹಲವಾರು ಕವಿತೆಗಳೇ ಸಾಕ್ಷಿ ಭೂತವಾಗಿ ಮನ ಸೆಳೆಯುತ್ತವೆ.ಅಮೂರ್ತ ರೂಪದ ಪ್ರೀತಿಯ ದೈವಿಕತೆಯ ನೆಲೆಯನ್ನು ವ್ಯಕ್ತಪಡಿಸುತ್ತವೆ

ಇಲ್ಲಿಯ ಕವಿತೆಗಳು :

  •  ಕಾಳಮುಖ ಪಂಥ: ಕರ್ನಾಟಕ ಸಾಹಿತ್ಯ ಅಕಾಡೆಮಿವತಿಯಿಂದ ಪಂಥಗಳ ದೇಸಿ ದರ್ಶನ ಅಧ್ಯಯನ ‌ಮಾಲೆಯಲ್ಲಿ ಕಾಳಮುಖ ಪಂಥವನ್ನು ಅಧ್ಯಯನಕ್ಕೆ ಒಳಪಡಿಸಿರುವುದು ಕಾಣಬಹುದು.

    ಕರ್ನಾಟಕ ವಿವಿಧ ಧರ್ಮಗಳಿಗೆ ಆಶ್ರಯ ನೀಡಿದಂತಹ ಜಾಗವಾಗಿತ್ತು.ಕೆಲವು ಧರ್ಮಗಳ ಭಾಗವಾಗಿ ಮೂಡಿದಂತ ತಾಂತ್ರಿಕ ಪಂಥಗಳ ಕುರಿತ ಅಧ್ಯಯನ ನಮಗೆ ಹೊಸತೊಂದು ಜಗತ್ತನ್ನು ತೆರೆದಿಡುವ ಈ ಕೃತಿ ಸಂಶೋಧನಾತ್ಮಕ ನೆಲೆಯಲ್ಲಿ ಪಾಶುಪತರು,ಸಪ್ತಮಾತೃಕೆಯರು ಗಾಣಪತ್ಯ,ಕೌಳ,ಸೌರ,ಮುಂತಾದ ವಸ್ತುವಿಷಯಗಳ ಕುರಿತಾದ ತಳಸ್ಪರ್ಶಿ ಅಧ್ಯಯನ ಹೊಂದಿದ ಸಂಶೋದನಾ ಕೃತಿ ಇದಾಗಿದೆ.

  • ಮಾದಾರ ಚೆನ್ನಯ್ಯ ಬಹುಮುಖಿ ಸಂಸ್ಕೃತಿ:
    ಮಾದಾರ ಚೆನ್ನಯ್ಯ ಒಬ್ಬ ಶರಣ.ಈ ಜನಾಂಗದ ಬಗಿಗೆನ‌ ಮೂಲ ನಿಷ್ಪತ್ತಿ, ಚಾರಿತ್ರ್ಯಿಕ ಮಹತ್ವ, ಹಾಗೂ ಮಾದಿಗರ ಒಳಪಂಗಡಗಳ ಮಾಹಿತಿ, ಸಂಬಂಧಗಳ ಕೋಡುಕೊಳ್ಳುವಿಕೆ,ಶೂನ್ಯ ಸಂಪಾದನೆಯಲ್ಲಿ ಚೆನ್ನಯ್ಯನ ಅಸ್ತಿತ್ವ ‌ಇತ್ತಾ? ಹರಿಹರ ಕಂಡಂತ ಚೆನ್ನಯ್ಯ ಯಾರು? ಇತನ ವಚನಗಳ ವಿಶೇಷತೆ ಏನು ಎಂಬುದರ ‌ಮೇಲೆ‌ ಬೆಳಕು ಚೆಲ್ಲಿದ ಸಂಶೋಧನಾ ಕೃತಿ ಇದಾಗಿದೆ.
  • ಕರ್ನಾಟಕ ಏಕೀಕರಣಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ:
    ಒಂದು ಜಿಲ್ಲೆಯ ಸಮಗ್ರತೆಯನ್ನು ಕಟ್ಟಿಕೊಡುವ ಕೃತಿಯಲ್ಲಿ ಧಾರವಾಡದ ಇತಿಹಾಸ,ಏಕೀಕರಣ, ಭಾಷಿಕ ಚಳುವಳಿ, ರಾಜರು ಆಳಿದ ಕಾಲ ಹಾಗೂ ಅವರ ಚಾರಿತ್ರಿಕ ಹಿನ್ನೆಲೆ ನರಗುಂದ ಬಂಡಾಯ,ಚಳುವಳಿಗಳ ಸೂಕ್ಷ್ಮ ನೋಟ, ಇತರೆ ಭಾಷಿಗರ ಪ್ರಭಾವ,ವಿದ್ಯಾವರ್ಧಕ ಸಂಘದ ಕೊಡುಗೆಗಳು,ಕೃತಪುರ ನಾಟಕ ಮಂಡಳಿಯ ಐತಿಹಾಸಿಕ ಮಹತ್ವ ಇಂತಹ ಮಹತ್ತರವಾದ ವಸ್ತು ವಿಷಯಗಳನ್ನು ‌ಹೊಂದಿದ ಸಂಶೋಧನಾ ಕೃತಿಯಾಗಿದೆ.
  • ಸುಣಕಲ್ಲ‌ ಬಿದರಿ ಒಂದು ಐತಿಹಾಸಿಕ ಹಿನ್ನೆಲೆ:
    ತನ್ನೂರಿನ ಕುರಿತು ನಡೆಸಿದ ಗ್ರಾಮ‌ ಅಧ್ಯಯನವೇ ಈ ಕೃತಿ, ಬಹುಶಃ ಗ್ರಾಮ ಅಧ್ಯಯನ ಎಂದ ಮಾತ್ರಕ್ಕೆ ಅದೊಂದು ಸಣ್ಣ ಕಾರ್ಯವಲ್ಲ.‌ ಕ್ಷೇತ್ರಕಾರ್ಯದ ಮೂಲಕ ಅಳಿದುಳಿದ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ‌ಚಾರಿತ್ರಿಕತೆಗೆ ದಕ್ಕೆ ಬರದಂತೆ ನಿರ್ವಹಿಸಿದ ಈ ಅಧ್ಯಯನ, ಸಾಮಾಜಿಕ ಚಿತ್ರಣ ಸಾಂಸ್ಕೃತಿಕ ಅನನ್ಯತೆ,ಕಲೆ,ಸಾಹಿತ್ಯ,ಗ್ರಾಮದ ಜನರ ನಂಬಿಕೆಗಳು, ಅಲ್ಲಿರುವಂತಹ ದೇವಾಲಯಗಳ ಐತಿಹಾಸಿಕ ಮಹತ್ವ ಇಂತಹ ಹಲವು ವಿಚಾರಗಳನ್ನಿರಿಸಿಕೊಂಡು ಸಂಶೋಧನಾತ್ಮಕವಾದ ಗ್ರಾಮ ಅಧ್ಯಯನ ಮೂಡಿಬಂದಿರುವುದು‌ ತನ್ನೂರಿನ ಬಗೆಗಿದ್ದ ಪ್ರೀತಿ ಅಭಿಮಾನವನ್ನು ಎತ್ತಿ ಹಿಡಿಯುತ್ತದೆ.
  • ಗೋಪಾಲ ಕೃಷ್ಣ ಅಡಿಗರ ನವ್ಯ ಕಾವ್ಯ:
    ಇದು ಇವರ ಪಿಹೆಚ್‌ಡಿ ಸಂಶೋಧನಾ ಕೃತಿಯಾಗಿದ್ದು, ಅಡಿಗರ ಮೇಲೆ ಅಧ್ಯಯನ ಮಾಡುವವರು ಇವರ ಈ ಕೃತಿಯನ್ನೊಮ್ಮೆ ಓದಿಯೇ ಮುಂದೆ ಸಾಗಬಹುದಾದ ಮಹತ್ತರ ಅಂಶಗಳನ್ನು ಅಡಕವಾಗಿರಿಸಿ ಅವರ ಕಾವ್ಯದ ಒಳ‌ಮಜಲುಗಳು ಇವರ ತೀಕ್ಷ್ಣವಾದ ಒಳ ನೋಟಕ್ಕೆ ಸಿಕ್ಕಿ ಪಾವನಗೊಂಡಿವೆ.
  • ಕಾಳಾಮುಖ ವ್ಯಾಸಂಗ: ಈ‌ ಕಾಳಮುಖರು ಯಾರು ಇವರ ಐತಿಹಾಸಿಕ ಹಿನ್ನೆಲೆ ಯಾವುದು,ಸಾಮಾಜಿಕ, ಧಾರ್ಮಿಕ ಚಿತ್ರಣ,ಅವರ ಸಂಸ್ಕಾರಗಳ ವಿಧಿ ವಿದಾನಗಳು,ಬಿನ್ನತೆಗಳು ಅವುಗಳ ರೂಪುರೇಷಗಳು ಮತ್ತು ಕಾಳಮುಖರ ಸಾಹಿತ್ಯಿಕ‌ ನೆಲೆಗಳು, ಹಾಗೂ ಇವರ ತಾಂತ್ರಿಕತೆಯಲ್ಲಿ ಅಡಗಿರುವ ಸಂಕೀರ್ಣತೆ,ಮತ್ತು ಶ್ರೀ ಶೈಲ ಕಾಳಮುಖ ತಾಂತ್ರಿಕ ‌ಪಂಥಗಳ ಪ್ರಮುಖ ಶಕ್ತಿ ಕೇಂದ್ರ ಎಂಬುದನ್ನು, ಕಾಶ್ಮೀರ ‌ಶೈವ,ಭಕ್ತಸ್ಥಲ,ಮಹೇಶ್ವರ ಸ್ಥಲ,ಇಂತಹ ಹಲವು ವೈಚಾರಿಕ ವಸ್ತು ವಿಚಾರಗಳನ್ನು ‌ಹೊಂದಿದ‌ ಕೃತಿ.
  • ವಚನ ಸಮಷ್ಠಿ:
    ಈ ಕೃತಿಯು ವಚನ ಸಾಹಿತ್ಯದ ಓದಿನ ಒಳಗೆ ಸಿಕ್ಕಂತಹ ಸೃಜನಶೀಲ ಚಿಂತನೆಯ ಒಳನೋಟದ ಒಂದು ಹೂರಣ ತನ್ನ ಕಾಲದ ಸಂಧರ್ಭದಲ್ಲಿ ತಾನು ಕಂಡಂತಹ ಒಂದು ಸಮಷ್ಠಿ ದೃಷ್ಟಿಕೋನದಡಿಯಲ್ಲಿ ರಚಿಸಿಕೊಂಡು, ಚನ್ನಯ್ಯನ ಮಾಹಿತಿ, ಅಲ್ಲಮನ ಕೊಡುಗೆ, ಶರಣರ ಆಂದೋಲನ,ಬಸವಣ್ಣನ ಕಾಯಕದ ‌ಕಲ್ಪನೆ,ಜನಪದ ಬಸವಣ್ಣ, ಕರಪಾಲ ಬಸವಣ್ಣ, ಶರಣು ಕಂಡ ಚೆನ್ನಯ್ಯ, ಮಠಗಳ ಪ್ರಭುತ್ವ, ಲೋಕಜ್ಣಾನಿಯಾದ ಸರ್ವಜ್ಞ, ಹೀಗೆ ವಚನ ಸಾಹಿತ್ಯದ ಒಂದು ದೃಷ್ಟಿ ವೈಚಾರಿಕಪೂರ್ಣವಾಗಿದ್ದು ವಿಮರ್ಶಾ ಕೃತಿಯಾಗಿದೆ.
  • ಅಂಬೇಡ್ಕರ್: ಸಂಸ್ಕೃತಿ ಚಿಂತನೆ:
    ಅಂಬೇಡ್ಕರ್ ಅವರ ನೋಟ, ಭಾರತ ಕುರಿತಂತೆ ಸಂಸ್ಕೃತಿ,ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಭುತ್ವ ಮಹಿಳೆ ಹೀಗೆ ಹಲವು ವಿಷಯಗಳನ್ನು ‌ಆಳವಾಗಿ ಚಿಂತನೆಗೈದ ವೈಚಾರಿಕ ‌ಕೃತಿ.
  • ಬಂಡಾಯ ಸಾಹಿತ್ಯ:
    ಬಂಡಾಯ ಸಾಹಿತ್ಯದ ಒಟ್ಟು ತಾತ್ವಿಕ ನೆಲೆಯನ್ನಿರಿಸಿಕೊಂಡೆ ಇಡೀ ಕೃತಿ ಚರ್ಚಿಸುತ್ತಾ ಸಾಗುವ ವಿಮರ್ಶಾ ಕೃತಿ.
  • ಸಾಹಿತ್ಯ ಚಿಂತನೆ:
    ಈ ಕೃತಿಯು ನವ್ಯ ಸಾಹಿತ್ಯದ‌ ಒಳಗೆ ತನ್ನ ಹುಡುಕಾಟವನ್ನು ಕಂಡುಕೊಳ್ಳುವಂತ ಸಮೃದ್ಧ ವಿಮರ್ಶೆ ಕೃತಿ ಇದಾಗಿದೆ.
  • ವಚನ ಸಾಹಿತ್ಯ ಬಹುಸಂಸ್ಕೃತಿ :

    ಈ ಕೃತಿಯಲ್ಲಿ ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ, ನಿಜಗುಣಿ ಶಿವಯೋಗಿಗಳ ತತ್ವ ದರ್ಶನ ಇಂತಹ ಹಲವು ವಿಚಾರ ಮತ್ತು ಅವರ ವಚನಗಳ ವೈಚಾರಿಕತೆ, ದೇಸಿಯತೆ ಇವೆಲ್ಲವನ್ನು ವಿಚಾರಪರತೆಯ ಒಳನೊಟದಲ್ಲಿ ಗುರುತಿಸಿ ಬರೆದಂತಹ ಮಹತ್ತರ ವಿಮರ್ಶಾ ಕೃತಿಯಾಗಿ ಗುರುತಿಸಿಕೊಂಡಿದೆ.

  • ಅರಿವಿನ‌ ಸಂಕಥನ:

    ವಚನ ಸಾಹಿತ್ಯದ ಮೇಲೆ ಇವರಿಗಿದ್ದ ಅಪಾರ ಪ್ರೀತಿ ಮತ್ತೆ ವಚನಕಾರರ ಅನುಭಾವಿಕ ನೆಲೆಯನ್ನು ತನ್ನೊಳಗೆ ಆರ್ಜಿಸಿಕೊಂಡಂತೆ ಬಸವಣ್ಣ,ಹಡಪದ ಅಪ್ಪಣ್ಣ, ಮಾದಿಗರ ವಿಶ್ವಬಂಧು ಮರುಳಸಿದ್ದ, ಹಾಗೂ ಲಿಂಗಾಯಿತ ಮತ್ತು ವೀರಶೈವರೊಳಗೆ ಇರತಕ್ಕಂತಹ ಬಿಕ್ಕಟ್ಟಿನ ‌ಕುರಿತಾದ ವೈಚಾರಿಕ ದೃಷ್ಟಿಕೋನ ಈ ಕೃತಿಯಲ್ಲಿ ಮೂಡಿದೆ.

  • ಸಕಾಲಿಕ ಸಂಕಥನ:

    ಬೇಂದ್ರೆ, ಕುವೆಂಪು, ಬ್ರೇಕ್ಟ್‌ ಅಡಿಗರ ಓದಿನಿಂದಿಡಿದು ಪು.ತಿ.ನ ಅವರ ಕಾವ್ಯದ ಓದಿನ ಕುರಿತಾಗಿ ಮೂಡಿದ ವಿಮರ್ಶಾ ಲೇಖನಗಳ ಕೃತಿ.

  • ಸಾಹಿತ್ಯ ಮತ್ತು ಪಾತಳಿ:

    ನವ್ಯರ ನಾಟಕ, ಲಂಕೇಶ್ ಸಾಹಿತ್ಯ, ಪೊನ್ನ ,ಕನಕದಾಸ,ಕುವೆಂಪು, ನಿರಂಜನ ಅಡಿಗ,ಹೀಗೆ ಎಲ್ಲರನ್ನೊಳಗೊಂಡ ವಿಮರ್ಶೆ ಬರಹವಾದ ಕೃತಿ.

  • ಸಾಹಿತ್ಯ ಸಂಸ್ಕೃತಿ ಸಂಕಥನ:

     ಸಾಹಿತ್ಯ ಪರಂಪರೆಯ ಪ್ರಜ್ಞೆ, ವರ್ತಮಾನದ ನೋಟ, ಬಂಡಾಯ ದಲಿತ ವಚನ ಸಾಹಿತ್ಯ, ಜಾತಿ ಶ್ರೇಣಿಕರಣ,ಜನಪದ ಸಾಂಸ್ಕೃತಿಕ ನಾಯಕರ ಚಿತ್ರಣ ಹೀಗೆ ಅನೇಕ ಚಿತ್ರಣವನ್ನು ಹೊತ್ತು ತಂದಿರುವಂತಹ ವಿಮರ್ಶೆ ಕೃತಿ.

  • ಕಿತ್ತೂರು ಕರ್ನಾಟಕ ಕನ್ನಡ ಪ್ರಜ್ಞೆ:

    ಭಾಷೆ, ಆ ಸೀಮೆಯ ಸ್ಥಿತಿ ಗತಿ ಕರ್ನಾಟಕ ಮತ್ತು ತಮಿಳುನಾಡು,ಭಾಷಾ ಬಾಂಧವ್ಯ ಹೀಗೆ ಹಲವಾರು ವಿಷಯಗಳನ್ನು ಕ್ರೋಡೀಕರಣಗೊಂಡು ಇವರ ಸಂಪಾದನೆ ಕೃತಿ.

  • ಬೌದ್ಧ ಮಾನವಿಕ ಸಂಪುಟ:

    ಬೌದ್ಧ ಧರ್ಮದ ಕುರಿತಾಗಿ ಇರುವ ಸಂಪಾದನ ಕೃತಿಯಾಗಿದೆ.

ಹೀಗೆ ಕೆಳಗಿನಮನಿಯವರ ಒಂದೊಂದು ಕೃತಿಯು ಹತ್ತಾರು ವೈಚಾರಿಕತೆ ದೃಷ್ಟಿಕೋನವನ್ನು ನಮ್ಮೊಳಗೆ ಹುಟ್ಟು ಹಾಕುತ್ತವೆ.

ಇವುಗಳ ಹೊರತಾಗಿಯು ಸಹ ಕೆಳವರ್ಗದ ವಚನಕಾರರ ಸಾಂಸ್ಕೃತಿಕ ಪ್ರತಿನಿಧೀಕರಣ, ಸಮಕಾಲೀನ ವೈಚಾರಿಕ ಸಂಕಲ್ಪ, ಮಾತಂಗರ ಇತಿಹಾಸ ಮತ್ತು ‌ಸಂಸ್ಕ್ರತಿ,ಮಣಿಹ ಮಂಥನ, ತಿಳಿವ ತೇಜದ ಅನುಸಂಧಾನ, ವೃಷ್ಠಿ ಮತ್ತು ಸಮಷ್ಟಿ,ಹಾವಿನಾಳ ಕಲ್ಲಯ್ಯ,ಕೀರ್ತನೆಗಳ ಸಂಗ್ರಹ, ಸಾಹಿತ್ಯ ಸಿಂಚನ,ವಿಗಡ ಚರಿತೆಯ ಬೆರಗು, ಸಾಹಿತ್ಯ ಸಂಸ್ಕೃತಿ ಮುಖಾಮುಖಿ, ಬೈರರ ಸಂಸ್ಕೃತಿಯಲ್ಲಿ ಮಹಿಳೆ,ವರ್ತಮಾನ ಶೋಧ ಸಾಹಿತ್ಯ ಚಿಂತನೆ, ಅಲ್ಲಮನ ವಚನಗಳಲ್ಲಿ ವೈಚಾರಿಕತೆ,,ಆದಿಮ‌ ಬೆಳಕು ವಾಲ್ಮೀಕಿ, ಸಾಹಿತ್ಯ ಸಮಷ್ಠಿ, ಹೀಗೆ ಎಪ್ಪತ್ತಕ್ಕೂ‌ ಹೆಚ್ಚು ಪಾಂಡಿತ್ಯ ಪೂರ್ಣ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಹೆಗ್ಗಳಿಕೆ ಇವರದು. ಯಾವ ಉತ್ಪ್ರೇಕ್ಷೆ ಇರದೆ ಹೊಗಳಿಕೆ ತೆಗಳಿಕೆ ಬೆರಗು ಬಿನ್ನಾಣಗಳನ್ನು ತಲೆಗಂಟಿಸಿಕೊಳ್ಳದ ಸೀದಾ ಸದಾ ಸರಳ ಸಜ್ಜನಿಕೆ ಹೊಂದಿದ ಕಟುವಾದಿ ವಾಸ್ತವಾದಿ ಚಿಂತಕರು. ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ನೀಡುವ ದೇಗುಲದಂತಿರುವ ಶಿವಾನಂದ ಅವರು ಆಪ್ತ ಹೃದಯಗಳಿಗೆ ಸ್ಪೂರ್ತಿಯ ಸೆಲೆ.ಎಷ್ಟೊ ಬಡ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದವರು.

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯಕ್ಕೆ ಜುಲೈ ೫ ರಂದು ನೂತನ ಕುಲಪತಿಗಳಾಗಿರುವ ಇವರು ಮತ್ತಷ್ಟು ಸಮಾಜಪರ ಚಿಂತನೆ, ಪ್ರಗತಿಪರ ಆಲೋಚನೆಯೊಂದಿಗೆ ಮುನ್ನುಗ್ಗಿ ಹೊಸತನ್ನು ಸೃಷ್ಟಿಸಲಿ.ಈ ಮೂಲಕ ಅವರ ಹೊಸ ಕಾಯಕಕಲ್ಪಕ್ಕೆ ಯಶಸ್ಸು ಸಿಗಲಿ‌. ಮತ್ತಷ್ಟು ಅತ್ಯುತ್ತಮ ಚಿಂತನರ್ಹ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ನೀಡುವಂತಾಗಲಿ ಎಂದು ಈ ಮೂಲಕ ಅವರ ಜನುಮ ದಿನದಂದು ಹೃದಯಪೂರ್ವಕ ಹಾರೈಸುತ್ತಿದ್ದೇನೆ.


  • ವಾಣಿ ಭಂಡಾರಿ – ಲೇಖಕಿ, ವಿಮರ್ಶಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW