ಶೋಷಣೆಯ ಮತ್ತೊಂದು ಮುಖ

ದೇವದಾಸಿಯ ಮಗಳು ಎಂಬ ಕಾರಣಕ್ಕಾಗಿ ಹಾಸ್ಟೆಲ್ ನಲ್ಲಿ ಆಕೆಯನ್ನು ಹೀಯಾಳಿಸುತ್ತಿದ್ದರು. ಇದರಿಂದ ನೊಂದುಕೊಂಡ ಆಕೆ ಹಾಸ್ಟೆಲ್ ವಾಸವನ್ನು ಕೈ ಬಿಟ್ಟು ಸುಮಾರು 40 ಕಿಲೋ ಮೀಟರ್ ಪ್ರತಿದಿನ ಕಾಲೇಜಿಗೆ ಓಡಾಡಲಾರಂಭಿಸಿದಳು. ಆಕೆಯ ಬದುಕು ಮುಂದೇನಾಯಿತು ವೀಣಾ ಹೇಮಂತ್ ಗೌಡ ಪಾಟೀಲ್ ಅವರು ದೇವದಾಸಿಯ ಕುರಿತಾದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಆಕೆ ಸಮಾಜದ ಅತ್ಯಂತ ಕೆಳ ವರ್ಗದಲ್ಲಿ ಜನಿಸಿದ ಹೆಣ್ಣುಮಗಳು. ಮೂರು ಜನ ತಂಗಿಯರು, ಇಬ್ಬರು ತಮ್ಮಂದಿರನ್ನು ಹೊಂದಿದ ಆಕೆಯನ್ನು ಅವರ ಜಾತಿಯ ಸಾಮಾಜಿಕ ನಿಯಮಾವಳಿಗಳಂತೆ ಆಕೆ ಹುಟ್ಟಿದ ಕೆಲವೇ ವರ್ಷಗಳಲ್ಲಿ ದೇವರಿಗೆ ದಾಸಿಯನ್ನಾಗಿಸಿ, ಋತುಮತಿಯಾದ ನಂತರ ಆಕೆಗೆ ಮುತ್ತು ಕಟ್ಟಿಸಿ ದೇವದಾಸಿ ವೃತ್ತಿಗೆ ಅರ್ಪಿಸಿದರು.

 

ಕೇವಲ 14ರ ಹರೆಯದಲ್ಲಿ ಹಾಗೆ ಮುತ್ತು ಕಟ್ಟಿಸಿಕೊಂಡ ಆಕೆ ಮುಂದಿನ ಒಂದೆರಡು ವರ್ಷಗಳಲ್ಲಿ ಮಗುವನ್ನು ಪಡೆದ ನಂತರ ತನ್ನ ವೃತ್ತಿಗೆ ತಿಲಾಂಜಲಿ ಹೇಳಿದಳು, ಐದು ಜನ ಸೋದರ ಸೋದರಿಯರ ಜವಾಬ್ದಾರಿ ಆಕೆಯ ಮತ್ತು ಆಕೆಯ ತಾಯಿಯ ಮೇಲಿತ್ತು. ಬಡತನ ಮತ್ತು ಅನಾರೋಗ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಆರು ಜನ ಮಕ್ಕಳಿಗೆ ಅಡುಗೆ ಮಾಡುವುದು ಗೃಹ ಕೃತಗಳ ಜೊತೆ ಜೊತೆಗೆ ಕುಟುಂಬದ ವೃತ್ತಿಯಾದ ಕಡ್ಡಿಯ ಕಸಬರಿಗೆಯನ್ನು ಮಾಡಿ ತಾಯಿ ಸಂಪಾದಿಸಿದರೆ ಮಗಳು ಉಳ್ಳವರ ಮನೆಯ ಅಂಗಳದ ಕಸ ಗುಡಿಸಿ ಅವರ ಮನೆಯ ಶೌಚಾಲಯ ತೊಳೆದು ಸಂಪಾದಿಸುತ್ತಾಳೆ. ಆಕೆಯ ಸಹೋದರಿಯರು ಕೂಡ ಒಬ್ಬೊಬ್ಬರಾಗಿ ದಲಾಲಿ ಅಂಗಡಿಗಳಲ್ಲಿ ಚೀಲವನ್ನು ತುಂಬುವ ಸಮಯದಲ್ಲಿ ಕಾಳುಕಡಿಗಳನ್ನು ಆಯ್ದುಕೊಳ್ಳುವ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ರೈತರು ಮತ್ತು ದಲಾಲಿ ಅಂಗಡಿಯವರು ಹೀಗೆ ಕೆಳಗೆ ಬಿದ್ದ ಕಾಳುಗಳನ್ನು ಆಯ್ದುಕೊಳ್ಳಲು ಅನುಮತಿ ನೀಡುವ ಕಾರಣ ಅದಕ್ಕೆ ಪ್ರತಿಯಾಗಿ ಅಂಗಡಿಕಾರರ ಮನೆಗಳಲ್ಲಿ ಇವರು ಉಚಿತವಾಗಿ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

ತನ್ನ ನಂತರದ ಇಬ್ಬರು ಸಹೋದರಿಯರಿಗೆ ಸಾಲ ಸೋಲ ಮಾಡಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ ಆಕೆ ಇನ್ನೋರ್ವ ಸಹೋದರಿ ಮಂದಮತಿಯಾಗಿದ್ದ ಕಾರಣ ಆಕೆಯ ಮದುವೆಯ ಗೊಡವೆಗೆ ಹೋಗದೇ ಶಾಲೆಯೊಂದರ ಕಸ ಗುಡಿಸುವ ನೆಲ ಒರೆಸುವ ಶೌಚಾಲಯಗಳನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಕಳುಹಿಸಿದಳು. ಅಷ್ಟೇನು ಜಾಣೆ ಅಲ್ಲದಿದ್ದರೂ ತನ್ನ ಕೆಲಸವನ್ನು ಮಾತ್ರ ಚೊಕ್ಕವಾಗಿ ಮಾಡುತ್ತಿದ್ದ ತಂಗಿ ತಾನು ಮಾಡುವ ಕೆಲಸದ ಮನೆಯ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದರೆ ಮನೆಯ ಮತ್ತು ಸಹೋದರಿಯರ ಭಾರವನ್ನು ಹೊತ್ತ ಸ್ವಭಾವತಹ ಮೈಗಳ್ಳತನವನ್ನು ಗಯ್ಯಾಳಿತನವನ್ನು ರೂಢಿಸಿಕೊಂಡ ಅಕ್ಕನನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯವರು ಅನಿವಾರ್ಯವಾಗಿ ಸಹಿಸಿಕೊಂಡಿದ್ದರು.

ಇಬ್ಬರು ತಮ್ಮಂದಿರಲ್ಲಿ ಓರ್ವ ತಮ್ಮ ದುಡಿಯದೇ ಹೋದರೂ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದಾನೆ. ಆ ಮಕ್ಕಳನ್ನು ಕೂಡ ಈ ಇಬ್ಬರು ಅಕ್ಕತಂಗಿಯರೇ ಜೋಪಾನ ಮಾಡಬೇಕು. ತನಗೆ ಕುಡಿಯಲು ಹಣವನ್ನು ಬೇಡುತ್ತಾ ಅಕ್ಕಂದಿರನ್ನು ಆತ ಪೀಡಿಸುತ್ತಾನೆ. ಮಕ್ಕಳನ್ನು ಹೆರುವುದೇ ಕೆಲಸವನ್ನಾಗಿಸಿಕೊಂಡ ಆತನ ಪತ್ನಿ ಆಗಾಗ ಮಕ್ಕಳನ್ನು ಇವರ ಬಳಿ ಬಿಟ್ಟು ತವರು ಮನೆಗೆ ಹೋದರೆ ಅತ್ತ ಮನೆ ಕೆಲಸ ತ್ತು ಕೆಲಸದ ಮನೆಗಳನ್ನು ತೂಗಿಸಿಕೊಂಡು ಶಾಲೆಯ ಕೆಲಸ ಮಾಡುವುದರಲ್ಲಿ ಅಕ್ಕ-ತಂಗಿಯರು ಹೈರಾಣು ಬಿದ್ದು ಹೋಗುತ್ತಾರೆ,ಇದರ ಜೊತೆಗೆ ಮಕ್ಕಳಿಗೆ ತಿನ್ನುಣ್ಣಿಸಿ ಶಾಲೆಗೆ ಡಬ್ಬಿ ಕಟ್ಟಿ ಕಳುಹಿಸುವ ಕೆಲಸ ಬೇರೆ. ಇನ್ನೋರ್ವ ತಮ್ಮ ಇದ್ದುದರಲ್ಲಿಯೇ ಚೆನ್ನಾಗಿ ಓದಿ ಹುಬ್ಬಳ್ಳಿಯ ಹತ್ತಿರದ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಒಂದು ಬಾರಿ ರಜೆಯಲ್ಲಿ ಊರಿಗೆ ಮರಳಿ ಬರುವಾಗ ಉಂಟಾದ ಅಪಘಾತದಲ್ಲಿ ದೈಹಿಕ ಪೆಟ್ಟುಗಳಿಗೀಡಾಗಿ ಸುಮಾರು ಒಂದು ತಿಂಗಳ ಆರೈಕೆ ಪಡೆದು ಅಂತಿಮವಾಗಿ ಕೊನೆ ಉಸಿರೆಳೆದ ಆತ ಇವರೆಲ್ಲರ ಕನಸುಗಳ ಮೇಲೆ ತಣ್ಣೀರೆರಚಿದ. ತಮ್ಮನ ಚಿಕಿತ್ಸೆಗಾಗಿ ಮಾಡಿದ ಸಾಲ ಹಾಗೆಯೇ ಉಳಿಯಿತು.

ಶಾಲೆಯಲ್ಲಿ ತನ್ನ ಚಿಕ್ಕಮ್ಮ ಕೆಲಸ ಮಾಡುತ್ತಿದ್ದರಿಂದ ಅಕ್ಕನ ಮಗಳಿಗೆ ಕೂಡ ಅಲ್ಲಿ ಉಚಿತ ಶಿಕ್ಷಣ ದೊರೆತಿತ್ತು. ಶೈಕ್ಷಣಿಕವಾಗಿ ಅಷ್ಟೇನೂ ಉತ್ತಮವಾಗಿ ಮುಂದುವರೆಯದಿದ್ದರೂ ತನ್ನೊಂದಿಗಿನ ಸ್ನೇಹಿತರ ಉಡುಗೆ ತೊಡುಗೆಗಳಿಂದ ಪ್ರಭಾವಿತಳಾದ ಆ ಹುಡುಗಿ ತಾನು ಅಂತೆಯೇ ಇರಬೇಕೆಂದು ಬಯಸಿದ್ದರಲ್ಲಿ ಯಾವುದೇ ತಪ್ಪು ಇರಲಿಲ್ಲ. ಕೊರೋನಾ ಸಮಯದಲ್ಲಿ ಶಾಲೆಯ ಪಾಠ ಕೇಳಲು ಮೊಬೈಲ್ ಫೋನ್ ಬೇಕೆಂದು ಹಠ ಮಾಡಿ ಖರೀದಿಸಿದ್ದು ಆಕೆ ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗಿದ್ದಳು ಕೂಡ.
ಕೆಲವೊಮ್ಮೆ ತನ್ನ ತಾಯಿಯ ಗೈರು ಹಾಜರಿಯಲ್ಲಿ ಕಸ ಗುಡಿಸಲು ಬರುವ ಆಕೆ ಗುಡಿಸುವಷ್ಟು ಸಮಯವೂ ಫೋನಿನಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ಕಳೆಯುತ್ತಿದ್ದಳು. ಎಸ್ ಎಸ್ ಎಸ್ ಎಲ್ ಸಿಯಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದರೂ ನರ್ಸಿಂಗ್ ತರಬೇತಿಗೆ ಸೇರಲೇಬೇಕೆನ್ನುವ ಅದಮ್ಯ ಇಚ್ಛೆಯಿಂದ ಆಕೆ ಪಕ್ಕದ ಜಿಲ್ಲಾ ಕೇಂದ್ರದ ಕಾಲೇಜಿನಲ್ಲಿ ಪ್ರವೇಶ ಪಡೆದಳು. ಒಂದು ಬಾರಿ ಆಕೆಗೆ ಹಾಸ್ಟೆಲ್ನ ಆಹಾರದಿಂದ ಉಂಟಾದ ವಾಂತಿಬೇಧಿಯಿಂದ ಆಸ್ಪತ್ರೆಗೆ ಸೇರುವಂತಾದಾಗ ಸಾಲ ಸೋಲ ಮಾಡಿ ಆಕೆಯ ತಾಯಿ ಆಕೆಯ ಚಿಕಿತ್ಸೆಗೆ ಹಣ ಒದಗಿಸಿದಳು.

ತದನಂತರ ಆಕೆಯ ಸಹಪಾಠಿಗಳು ದೇವದಾಸಿಯ ಮಗಳು ಎಂಬ ಕಾರಣಕ್ಕಾಗಿ ಈಕೆಯನ್ನು ಹೀಯಾಳಿಸಲಾರಂಭಿಸಿದರು. ಇದರಿಂದ ನೊಂದುಕೊಂಡ ಆಕೆ ಹಾಸ್ಟೆಲ್ ವಾಸವನ್ನು ಕೈ ಬಿಟ್ಟು ಸುಮಾರು 40 ಕಿಲೋ ಮೀಟರ್ ಪ್ರತಿದಿನ ಕಾಲೇಜಿಗೆ ಓಡಾಡಲಾರಂಭಿಸಿದಳು.

ಮಗಳಾದರೂ ಓದಿ ತಮ್ಮ ಬದುಕನ್ನು ಹಸನಗೊಳಿಸುತ್ತಾಳೆ ಎಂಬ ಆಶಯದಲ್ಲಿ ಆ ಅಕ್ಕ-ತಂಗಿಯರು ವೃದ್ಧ ತಾಯಿಯನ್ನು, ತಮ್ಮನ ಕುಟುಂಬವನ್ನು ನೋಡಿಕೊಂಡು ಬದುಕುತ್ತಿದ್ದಾರೆ. ಸರ್ಕಾರ ಕೊಡ ಮಾಡಿರುವ ಸ್ವಂತ ಮನೆ ಈ ಅಕ್ಕತಂಗಿಯರಿಗೆ ಇದ್ದರೂ ಮುಂಜಾನೆಯಿಂದ ಸಂಜೆಯವರೆಗೆ ತಾಯಿಯ ಮನೆಯಲ್ಲಿ ಮತ್ತು ಕೆಲಸದ ಮನೆಗಳಲ್ಲಿ ಕೆಲಸ ಮಾಡಿ ರಾತ್ರಿ ಮಲಗಲು ಮಾತ್ರ ತಮ್ಮ ಮನೆಗೆ ಈ ಸಹೋದರಿಯರು ಹೋಗುತ್ತಾರೆ.

ಆಕೆಗೆ ದೇವದಾಸಿಯ ವೇತನ, ಆಕೆಯ ತಾಯಿಗೆ ವಿಧವಾ ವೇತನ ಬರುತ್ತಿದೆಯೇನೋ ನಿಜ…. ಆದರೆ ತಮ್ಮ, ಆತನ ಹೆಂಡತಿ ಮತ್ತು ನಾಲ್ಕು ಜನರ ಹೆಚ್ಚುವರಿ ಖರ್ಚು ಇವರ ಬದುಕಿಗೆ ಹೊರೆಯಾದರೂ ಅನಿವಾರ್ಯವಾಗಿ ನಿರ್ವಹಿಸುವ ಕರ್ಮ ಇವರದು. ಹೀಗೆ ದೀಪದ ಕೆಳಗೆ ಕತ್ತಲು ಎಂಬಂತಹ ಸ್ಥಿತಿಯಲ್ಲಿ ಸಾವಿರಾರು ಜನ ಹೆಣ್ಣು ಮಕ್ಕಳು ತಮ್ಮದೇ ಕುಟುಂಬದ ಜನರಿಂದ ಶೋಷಣೆಗೊಳಗಾಗುತ್ತಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳು ಕೇವಲ ಹೆಣ್ಣು ಮಕ್ಕಳ ಸೊತ್ತೆ? ಉತ್ತರವಿಲ್ಲದ ಪ್ರಶ್ನೆಗಳು ನೂರಿವೆ.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW