ಶಾಪಿಂಗ್ ಪುರಾಣ (ಲಲಿತ ಪ್ರಬಂಧ)

ಶಾಪಿಂಗ್ ಎಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಈ ಶಾಪಿಂಗ್ ನ್ನು ಇಷ್ಟಪಡದವರೆ ಇಲ್ಲ. ಎಲ್ಲರಿಗೂ ಇದು ಬೇಕೆ ಬೇಕು, ಒಂದರ್ಥದಲ್ಲಿ ನಿತ್ಯ ಜೀವನದಲ್ಲಿ ವಾರಕ್ಕೊಮ್ಮೆ ಇದಿಲ್ಲದಿದ್ದರೆ ಹೆಣ್ಣುಮಕ್ಕಳು ಮುಖ ಊದಿಸಿಕೊಂಡೆ ಬಿಡುತ್ತಾರೆ. ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ” ಮೊಬೈಲಿಲ್ಲದ ಕಿಸೆಯಿಲ್ಲ, ಶಾಪಿಂಗ್ ಬೇಡವೆನ್ನದ ಮಹಿಳೆಯರಿಲ್ಲ” ಎನ್ನುವಷ್ಟರಮಟ್ಟಿಗೆ ಶಾಪಿಂಗ್ ತನ್ನದೆ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಶಂಕರಾನಂದ ಹೆಬ್ಬಾಳ ಅವರ ಶಾಪಿಂಗ್ ಕುರಿತು ಒಂದು ಲಲಿತ ಪ್ರಬಂಧವನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ… 

ಶಾಪಿಂಗಿಗಾಗಿ ಕ್ಯಾಲೆಂಡರನಲ್ಲಿ ವಾರಕ್ಕೆ ಒಂದು ದಿನವನ್ನೆ ಮೀಸಲಿಟ್ಟಿದ್ದೇವೆ. ಹೇಗೆ ಮನೆ ದೇವರ ಜಾತ್ರೆ, ಪಲ್ಲಕ್ಕಿ ಉತ್ಸವ, ಬರ್ಥಡೆ ಹಾಗೂ ಮ್ಯಾರೆಜ್ ಎನಿವರ್ಸರಿ ಹೀಗೆ ರವಿವಾರವನ್ನು ಶಾಪಿಂಗ್ ಡೇ ಎಂದು ಫಿಕ್ಸ್ ಮಾಡಿದ್ದೇವೆ. ಅದು ಹೇಗೆಂದರೆ ರವಿವಾರ ಬಂತೆಂದರೆ ಸಾಕು, ಎಲ್ಲ ಶಾಪಿಂಗ ಮಾಲ್ ಗಳು ಭರ್ತಿಯಾಗಿ ತುಂಬಿ ತುಳುಕುವ ಡ್ಯಾಂ ಗಳಂತೆ ಕಾಣುತ್ತವೆ. ಅಷ್ಟು ಫುಲ್ ರಷ್ ನಲ್ಲಿ ಓಡಾಡುವ ಚೂಡಿದಾರದ ಮಾನಿನಿಯರು, ಚಿಕ್ಕ ಚಿಕ್ಕ ಮಕ್ಕಳು, ಸೀರೆಯುಟ್ಟ ಆಂಟಿಯರು, ಇವರಿಗಾಗಿ ಅರ್ಧ ದಿನ ಶಾಪಿಂಗ್ ನಲ್ಲಿ ಕಳೆಯುವ ಪುರುಷ ಮಹಾಶಯರು ಕಣ್ಣಿಗೆ ಅದೇ ತಾನೆ ಟ್ರೇನ್ ಸ್ಟ್ಯಾಂಡನಿಂದ ಇಳಿದು ಬರುವ ಜನಸ್ತೋಮ ಗೌಜುಗದ್ದಲದಿಂದ ತುಂಬಿ ಬರುವಂತೆ ಕಾಣುತ್ತವೆ. ಸೀರೆಗಳು ಅದರಲ್ಲೂ ಎಲ್ಲರೀತಿಯ ಸೀರೆಗಳ ತಗೆಸಿ ಗುಡ್ಡೆ ಹಾಕಿಸಿ ಒಂದೊಂದನ್ನೆ ಹೆಗಲ ಮೇಲೆ ಹಾಕಿ‌ ನೋಡೋವಾಗ ” ಚಂದಕಿಂತ ಚಂದ ನೀನೆ ಸುಂದರ , ನಿನ್ನ ನೋಡ ಬಂದ ಬಾನ ಚಂದಿರ… ಅಂದ ಅಂದ ಅಂದ ಅಂದ ಚಂದುಳ್ಳಿ ಚೆಲುವೆ, ಓ ನನ್ನ ಒಲವೆ ಎನ್ನುವ ಇಟಗಿ ಈರಣ್ಣನವರು ಬರೆದ ಹಾಡು ಮಾನಿನಿಯರಿಗೆ ಸರಿಹೊಂದುತ್ತದೆ.ಇಲ್ಲಿ ಖರೀದಿಸುವ ವಸ್ತುಗಳು ಅಷ್ಟೇನೂ ಕಾಸ್ಟ್ಲಿ(ದುಬಾರಿ) ಯಲ್ಲದ ವಸ್ತುಗಳು, ಕಾಸ್ಮೆಟಿಕ್ಸ, ದಿನಬಳಕೆಯ ವಸ್ತುಗಳು, ನೈಟಿ, ಚೂಡಿ, ಮಿಡಿ, ಪ್ರಾಕ್ , ನೈಟ ಡ್ರೆಸ್, ಗಂಡಂದಿರಿಗೆ ಬರ್ಮುಡಾ, ಬನಿಯನ್, ಮಕ್ಕಳಿಗೆ ಸ್ಕೂಲ್ ಡ್ರೆಸ್ , ಕಂಪಾಸ್ ಬಾಕ್ಸ, ಆಟಿಕೆಗಳು ಹೀಗೆ ತರ ತರಹದ ವಸ್ತುಗಳ ಖರೀದಿಗೆ ಮುಗಿಬೀಳುವುದು ಸರ್ವೇ ಸಾಮಾನ್ಯ.

ಶಾಪಿಂಗ್ ಮುಗಿಸಿ ಬರುವುದೆಂದರೆ ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿ ಮೊದಲ ಸಾಲಿನಲ್ಲಿ ನಿಂತು ಊಟ ಮಾಡಿ ಬಂದಂತೆ. ಉಶ್…! ಎಂದು ನಿಲ್ಲಲು ಪುರಸೊತ್ತು ಬೇಕು. ನಮ್ಮ ಸ್ನೇಹಿತೆಯೊಬ್ಬಳಿದ್ದಾಳೆ ಆಕೆಯಂತೂ ಶಾಪಿಂಗ್ ಪ್ರಿಯೆ ನಾವಂತೂ ಆಕೆಗೆ “ಶಾಪಿಂಗ ರಾಣಿ” ಯೆಂಬ ಬಿರುದನ್ನೆ ನೀಡಿದ್ದೇವೆ. ಅವಳು ಒಬ್ಬ ಡಿಗ್ರಿ ಕಾಲೇಜ್ ಗೆಸ್ಟ ಲೆಕ್ಚರರ್ ಅಷ್ಟೆ, ಅವಳ ಪ್ರವೃತ್ತಿ ವಾರಕ್ಕೊಮ್ಮೆ ಶಾಪಿಂಗ ಮಾಡುವುದು. ಹೀಗೆ ಮಾಡಿ ಮಾಡಿ ಮನೆಯನ್ನು ಒಂದು ಗೋಡಾನ ತರ ಮಾಡಿದ್ದಾಳೆ. ಹೀಗೂ ಶಾಪಿಂಗ್ ಮಾಡಬಹುದೆಂದು ನನಗೆ ಅಂದಾಜೆ ಇರಲಿಲ್ಲ.

ಇನ್ನು ಬೆಂಗಳೂರಿನಂತ ಊರಿನಲ್ಲಿ ಟ್ರಾಫಿಕ್ ಜಾಮ್ ಸಹಜ.ಹಂಸಲೇಖ ಬರೆದ” ಬಾರೆ ರಾಜಕುಮಾರಿ ಹೋಗೋಣ ಜಂಬೂ ಸವಾರಿ ನಮ್ಮ ಹಳೇ ಸ್ಕೂಟರನ್ನೇರಿ” ಎನ್ನುವ ಹಾಡು ನೆನಪಾಗುತ್ತದೆ. ಆ ಸಮಯದಲ್ಲಿ ಶಾಪಿಂಗಗೆ ಹೊರಟಾಗ ಮಾರ್ಗ ಮಧ್ಯದಲ್ಲಿ‌ ಸಿಲುಕಿಕೊಂಡರೆ ಮನಸಿನಲ್ಲಿ ಏನೋ ಒಂದು ಕಳವಳ.ಏನು ಮಾಡುವುದು..? ಇವರೋ ಬೇಗೆನೆ ರೆಡಿಯಾಗುವುದೆ ಇಲ್ಲ..!

ಫೋಟೋ ಕೃಪೆ : ಅಂತರ್ಜಾಲ

ಇವರ ಸಲುವಾಗಿ ಇನ್ನು ಮೇಲೆ ಶಾಪಿಂಗನ್ನೆ ಬಿಟ್ಟು ಬಿಡುತ್ತೇನೆ ಎಂದು ದ್ರೌಪದಿಯಂತೆ ಪ್ರತಿಜ್ಞೆಮಾಡಿ ಮತ್ತೆ ರವಿವಾರ ಬಂದರೆ ಅದೆ ಪ್ರವರ ಮುಂದುವರೆಸುವುದು ಹೆಣ್ಣುಮಕ್ಕಳ ವಾಡಿಕೆ.

ಇನ್ನು ಖರೀದಿಯಷ್ಟೆ ಅಲ್ಲದೆ ಹೊರಗಡೆ ಪಾನಿಪೂರಿ ತಿನ್ನುವುದು, ಮಕ್ಕಳಿಗೆ ಐಸಕ್ರಿಂ ಕೊಡಿಸುತ್ತ ಎಲ್ಲವನ್ನು‌ ಮಾಡುವುದು ಅಲೆಕ್ಸಾಂಡರ್ ಭರತಖಂಡದ ಯುದ್ದ ಕೈಗೊಂಡಂತೆ ಆತ ಗೆದ್ದನೋ ಇಲ್ಲವೋ ಇವರಂತೂ ಗೆದ್ದು ಸುಸ್ತಾಗಿ…ಮನೆಗೆ ಬಂದು ಬೀಳುವಷ್ಟರಲ್ಲಿ ಜೀವ ಸಾಕು ಸಾಕಾಗಿ ಹೋಗಿರುತ್ತದೆ. ಈ ಸಂದರ್ಭದಲ್ಲಿ ಡಾ. ರಾಜಕುಮಾರ ಅವರು ಹಾಡಿರುವ ಹಾಡು ” ವಾರ ಬಂತಮ್ಮ ರವಿವಾರ ಬಂತಮ್ಮ , ರಾಯರ ಕರೆಯಮ್ಮ ಪತಿ ರಾಯರ ಕರೆಯಮ್ಮ” ಎಂಬ ಗೀತೆ ಕಿವಿಯಲ್ಲಿ ಗುನುಗುತ್ತಿರಲು ಇವರಿಗಾಗಿ ಪುರುಷರ ಪರ್ಸ ಖಾಲಿ ಖಾಲಿಯಾಗಿ ಮತ್ತೆ “ರವಿವಾರ ಮತ್ತೆ ಬರದಿರಲಪ್ಪ” ಎಂಬ ಮೊರೆ ಕೇಳಿ ಬರುತ್ತದೆ. ಬಂದರೆ ಮತ್ತದೆ ಕಿರಿಕಿರಿ.

ಶಾಪಿಂಗಿನಲ್ಲೂ ಒಂದಷ್ಟು ಕಿರಿಕಿರಿಗಳು , ತಂಟೆ ತಕರಾರುಗಳು ಇದ್ದೆ ಇರುತ್ತವೆ. ಈಗಂತೂ ಎಲ್ಲೆಡೆಯಲ್ಲೂ ಸಿಸಿಟಿವಿ ಕಂಪಲ್ಸರಿ ಇದ್ದೆ ಇರುವುದನ್ನು ಗಮನಿಸಿದ್ದೇವೆ. ಹೀಗಿದ್ದರೂ ಶಾಪಿಂಗ ನೆಪದಲ್ಲಿ ಕಳ್ಳತನ ಮಾಡುವ ಖದೀಮರ ಗುಂಪು ಗೌಜುಗದ್ದಲದಲ್ಲಿ ನಡೆದೆ ಇರುವುದು ವಿಪರ್ಯಾಸ. ಇದೊಂದು ರೀತಿಯದಾದರೆ ಡ್ರೆಸಗಳನ್ನು ಖರೀದಿಸುವಾಗ ಹಾಕಿ ಟ್ರಯಲ್ ನೋಡಿದ್ದೆ ಒಂದು , ಹಣಕೊಟ್ಟು ತಂದಾಗ ಆಗಿದ್ದೆ ಇನ್ನೊಂದು , ಜೊತೆಗೆ ಎಲ್ಲವನ್ನು ಖರೀದಿಸಿ ಹಣ ಕೊಡಲು ಪೋನ ಪೇ ,ಗೂಗಲ್ ಪೇ, ಪೇಟಿಯಮ್ ಹೀಗೆ ಆನಲೈನ್ ಹಣ ಪಾವತಿಸುವಲ್ಲಿ ವಿಫಲತೆ, ಸ್ಕ್ಯಾನ್ ಆಗದಿರುವುದು,ಹಣ ಜಮಾ ಆಗದಿರುವುದು, ನೂರೆಂಟು ಪಡಿಪಾಟಲಿಗೆ ಸಿಲುಕಿಸುತ್ತವೆ. ಆದರೂ ಖರೀದಿಸುವುದನ್ನು ಬಿಡಲಾಗದು ಇನ್ನೊಂದು ನಿರ್ಬಂಧ “ನೋ ಎಕ್ಸಚೆಂಜ್” ಎಂಬ ಬೋರ್ಡ ಒಮ್ಮೆ ತಗೆದುಕೊಂಡರೆ ಯಾವುದೆ‌ ಕಾರಣಕ್ಕೂ ಬದಲಿಸಲಾಗುವುದಿಲ್ಲ.

ಇನ್ನು ಈ ಶಾಪಿಂಗ್ ಮಾಲ್ ಗಳಲ್ಲಿ ಆಕರ್ಷಣಿಯವಾಗುವಂತೆ ಬರಿ 18- 25 ವರ್ಷದ ಹುಡುಗಿಯರನ್ನು ಕೆಲಸಕ್ಕೆ ತಗೆದುಕೊಂಡು ಯುವಕರ ಮನಸೆಳೆಯುತ್ತಾರೆ. ಅಲ್ಲದೆ ಇಲ್ಲಿರುವ ಮಾಡಲ್ ಗೊಂಬೆಗಳು ಬರುವವರನ್ನು ವೆಲ್ಕಮ್ ಮಾಡುತ್ತವೆ. ಇಲ್ಲಿರುವ ಬಟ್ಟೆಗಳು ಸುಂದರವಾಗಿ ಕಾಣಿಸುವ ಸಲುವಾಗಿ ಹಾಕುವ ಮಿರರ್ ಗಳು ತುಂಬಾ ವಿಶೇಷವಾದವುಗಳು. ಎಂತಹ ಡ್ರೆಸ್ ಹಾಕಿದರೂ ಚಂದವೆ ಕಾಣಬೇಕು ಆ ರೀತಿ ಇರುತ್ತವೆ. ಇನ್ನು ಎರಡು ಡ್ರೆಸ್ ತಗೆದುಕೊಂಡರೆ ಒಂದು ಫ್ರೀ ಎಂಬ ಆಫರ್ ” ಬೈ ಟು ಗೆಟ್ ಒನ್” ಎಂಬ ತಂತ್ರದಿಂದ ಎಲ್ಲ ಶಾಪಿಂಗ್ ಮಾಲ್ ಗಳು ಗ್ರಾಹಕರನ್ನು ಬಹುಬೇಗ ಆಕರ್ಷಿಸುತ್ತವೆ.

ಹೆಚ್ಚಾಗಿ ಮಾಲ್ಗಳನ್ನು ಬಹು ಅಂತಸ್ತಿನಲ್ಲಿ ಕಟ್ಟಿರುತ್ತಾರೆ. ಪ್ರತಿಯೊಂದು ಅಂತಸ್ತಿಗೆ ಹೋಗಲು ಎಸ್ಕಿಲೇಟರ್ ನ ವ್ಯವಸ್ಥೆ ಇರುವುದರ ಜೊತೆಗೆ ಲಿಪ್ಟಿನ ವ್ಯವಸ್ಥೆ ಇರುತ್ತದೆ. ಕಾರಣ ಒಂದೊಂದು ಫ್ಲೋರ್ ನಲ್ಲಿ ಒಂದೊಂದು ವಯಸ್ಸಿನವರ ಬಟ್ಟೆಗಳನ್ನು ಜೋಡಿಸಿಡಲಾಗಿರುತ್ತದೆ. ಅದರಲ್ಲಿ ಪ್ರವೇಶಿಸಿದರೆ ಈಗೀಗಂತೂ ಆಷಾಢ ಮಾಸದ ಎನ್ನುತ್ತ ಐವತ್ತು ಪ್ರತಿಶತ ರಿಯಾಯಿತಿ ಕೊಡುತ್ತ ಗ್ರಾಹಕರ ಮನಸೆಳೆಯುತ್ತಾರೆ. ಹೀಗಾಗಿ ಮತ್ತಷ್ಟು ಗದ್ದಲಕ್ಕೆ ದಾರಿ ಮಾಡಿಕೊಡುತ್ತಾರೆ.

ಒಟ್ಟಿನಲ್ಲಿ ಶಾಪಿಂಗ್ ಮಾಡುವುದೆಂದರೆ‌ ಅದೊಂದು ಮುಗಿಯದ ಅಧ್ಯಾಯ. ಶಾಪಿಂಗ್ ಇರಲಿ ಹಿತ ಮಿತವಿರಲಿ ಅದೆ ಬದುಕಾಗಬಾರದು, ಬದಲಾಗಿ ಅವಶ್ಯವೆನಿಸಿದಾಗ ಬೇಕಾದ ವಸ್ತುಗಳನ್ನು ಒಮ್ಮೆ ಖರೀದಿಸಿ ತಗೆದುಕೊಂಡು ನಮ್ಮ ಶಾಪಿಂಗ್ ಪುರಾಣವನ್ನು ಮುಗಿಸೋಣ.


  • ಶಂಕರಾನಂದ ಹೆಬ್ಬಾಳ – ಕನ್ನಡ ಉಪನ್ಯಾಸಕರು, ಇಲಕಲ್ಲ, ಬಾಗಲಕೋಟ ಜಿಲ್ಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading