ಶ್ರೀರಾಮನವಮಿಯ ಮಹತ್ವ – ಸಂತೋಷ ಧರ್ಮಾರಾಜ್

ಶ್ರೀರಾಮನವಮಿಯು ಮಾನವನ ಆಧಿವ್ಯಾಧಿಗಳನ್ನು ನಿವಾರಿಸುವ ಮಹಾಪರ್ವ. ಈ ಆಹಾರ ಪದ್ಧತಿಗಳು ಹಾಗೂ ಆಚರಣೆಗಳು ದೇಹೇಂದ್ರಿಯಗಳಿಗೆ ಮುದವನ್ನು ನೀಡಿ ಆರೋಗ್ಯದಲ್ಲಿ ಸಮತೋಲನ ತರುತ್ತವೆ. ಸಂತೋಷ ಧರ್ಮಾರಾಜ್ ಅವರ ಸಂಗ್ರಹ ಲೇಖನವನ್ನು ತಪ್ಪದೆ ಮುಂದೆ ಓದಿ…

ಶ್ರೀರಾಮ ನವಮಿಯ ಸಂದೇಶ ಒಳ್ಳೆಯದು ಯಾವಾಗಲೂ ಕೆಟ್ಟದರ ವಿರುದ್ಧ ಗೆಲ್ಲುತ್ತದೆ. ಸೀತೆಯ ಧೈರ್ಯ, ಲಕ್ಷ್ಮಣನ ತೇಜಸ್ಸು, ಭರತನ ತ್ಯಾಗ, ಆಂಜನೇಯನ ಆದರ್ಶಮಯ ಭಕ್ತಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.

ರಾಮ ಸಾಗಿದ ಮಾರ್ಗ, ಎತ್ತಿ ಹಿಡಿದ ಆದರ್ಶ ಮತ್ತು ಅವನು ಹಾಕಿದ ಕಟ್ಟುಪಾಡು- ಅವು ಶಾಶ್ವತ ಮತ್ತು ಕಾಲಾತೀತ. ಶಕ್ತಿ, ತಾಳ್ಮೆ ಮತ್ತು ಬಲವಾದ ಇಚ್ಛೆಯ ನಿಜವಾದ ಅರ್ಥವನ್ನು ನಾವು ಶ್ರೀರಾಮನಿಂದ ಕಲಿಯುವಂತಾಗಲಿ.

ಆರೋಗ್ಯವೇ ಭಾಗ್ಯ – Health IS Wealth

ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳ ಹಬ್ಬಗಳ ಆಚರಣೆ ಆಹಾರ ಪದ್ಧತಿಗಳು, ಮಹಾ ಪರ್ವಗಳೆಲ್ಲವೂ ವಿಜ್ಞಾನಮಯವಾಗಿದ್ದು, ಇವುಗಳ ಆಹಾರ ವಿಹಾರ ಆಚಾರಗಳನ್ನು ಋತುಕಾಲದ ಅನುಸಾರವಾಗಿ ಹೆಣೆಯಲಾಗಿದೆ. ಆಯುರ್ವೇದಶಾಸ್ತ್ರದ ಶರೀರ ವಿಜ್ಞಾನದ ಸಹಾಯದಿಂದ ಈ ಎಲ್ಲಾ ವಿಚಾರಗಳನ್ನು ಅರ್ಥೈಸಿಕ್ಕೊಳ್ಳಬಹುದು.

ಪ್ರತೀ ಸಂವತ್ಸರದ ಶ್ರೀರಾಮನವಮಿಯ ಕಾಲಘಟ್ಟದ ಬಿಸಿಲು ನಮ್ಮನ್ನು ಬೆರಗುಗೊಳಿಸುವ ಕಾಲ. ಸಹಜವಾಗಿಯೇ ಸುಸ್ತು, ನೀರಡಿಕೆ, ಬಲಹೀನತೆ, ಆಯಾಸ, ತಲೆನೋವು, ತಲೆಸುತ್ತು, ಮೂತ್ರದ ಸೋಂಕು, ಲೋಳೆಯುಕ್ತ ವಾಂತಿ ಭೇದಿ ನಮ್ಮನ್ನು ಬಾಧಿಸುವವು. ಬೇಸಿಗೆಯ ಕಾಲದಲ್ಲಿ ಸಹಜವಾಗಿ ದೇಹದ ಜೀರ್ಣಶಕ್ತಿ ಕುಂದಿದ್ದು, ದೇಹಕ್ಕೆ ಬಲವನ್ನು ನೀಡಲು ಸುಲಭವಾಗಿ ಜೀರ್ಣವಾಗುವ ಹೆಸರುಬೇಳೆಯ ಕೋಸಂಬರಿಯನ್ನು ಉಪಯೋಗಿಸಿದ್ದಲ್ಲಿ ದೇಹವು ತಂಪಾಗಿ ಉದರಕ್ಕೆ ಹಿತವಾಗುವುದು. ಮಜ್ಜಿಗೆ ಹಾಗೂ ಬೇಲದ ಪಾನಕ ಸೇವನೆಯು ನೀರಡಿಕೆಯನ್ನು ನೀಗಿಸಿ ದೇಹದ ಜೀರ್ಣಶಕ್ತಿಯನ್ನು ಉತ್ತೇಜಿಸಿ, ದೈಹಿಕ ಆಯಾಸವನ್ನು ನಿವಾರಿಸಿ, ಸಣ್ಣ ಹಾಗೂ ದೊಡ್ಡ ಕರುಳುಗಳಿಗೆ ಹೊಸ ಚೈತನ್ಯವನ್ನು ತರುವುದು. ಶುಂಠಿ ಬೆಲ್ಲವನ್ನು ಸೇರಿಸಿ ತಯಾರಿಸಿದ ನಿಂಬೆಹಣ್ಣಿನ ಪಾನಕವು ಪಿತ್ತವಾತವನ್ನು ನಿವಾರಿಸಿ ಕಫವನ್ನು ಒಡೆದು, ತಂಪುಮಾಡಿ, ಜೀರ್ಣಾಗ್ನಿಯನ್ನು ಉದ್ದೀಪನಗೊಳಿಸುವುದು.

ಕಡಲೆಕಾಳು ಕೋಸಂಬರಿ ಕೂಡ ಕಫಪಿತ್ತಗಳನ್ನು ನಿವಾರಿಸಿ, ರಕ್ತಶುದ್ಧೀಕರಿಸಿ, ಉಪವಾಸದಿಂದ ಉದ್ರೇಕಗೊಳ್ಳುವ ಪಿತ್ತವನ್ನು ಶಾಂತಗೊಳಿಸುವುದು ಹಾಗೂ ಜ್ವರನಾಶಕವಾಗಿ ಕೆಲಸಮಾಡುವುದು. ಕಡಲೆಕಾಳಿನ ಒಗಚು ರುಚಿರಸವು ಉದ್ರಿಕ್ತವಾಗಿರುವ ಕಫವನ್ನು ನಿವಾರಿಸಿವುದು. ತೆಂಗಿನ ಎಳೆನೀರು ಪಾನ ಮೂತ್ರ ಸೋಂಕು, ತಲೆಸುತ್ತುವಿಕೆ, ನೀರಡಿಕೆ, ಸುಸ್ತುಗಳನ್ನು ನಿವಾರಿಸುವುದು. ಶುಂಠಿ, ಮೆಣಸು, ಜೀರಿಗೆ, ಹಿಂಗು, ಬೆಲ್ಲಗಳನ್ನು ಸೇರಿಸಿ ತಯಾರಿಸಿದ ಮಾವಿನಕಾಯಿಯ ಗೊಜ್ಜು ಜೀರ್ಣಕಾರಿ ಹಾಗೂ ಕಫ ನಿವಾರಕ. ವಸಂತ ಹಾಗೂ ಗ್ರೀಷ್ಮಋತುಗಳಲ್ಲಿ ಸಹಜವಾಗಿಯೇ ಹಸಿವು ಕ್ಷೀಣವಿದ್ದು, ದೇಹಕ್ಕೆ ಬೇಕಾಗುವ ಶಕ್ತಿಯ ಪೂರೈಕೆ ಲಘು ಆಹಾರಗಳಾದ ಪಾನಕ ಕೋಸಂಬರಿಗಳಿಂದ ಆಗುವುದಲ್ಲದೆ, ತ್ರಿದೋಷ ಸಾಮ್ಯತೆಯನ್ನು ತರುವುದರಲ್ಲಿ ರಾಮನವಮಿಯ ಆಹಾರ ಸಂಪ್ರದಾಯ ಪದ್ಧತಿಗಳ ಆಚರಣೆ ಮುಖ್ಯವಾಗುವುದು. ರಾತ್ರಿ ಜಾಗರಣೆ ಕೂಡ ವಸಂತಋತುವಿನ ಕಫದೋಷ ನಿವಾರಿಸುವುದು.


  • ಸಂಗ್ರಹ ಲೇಖನ: ಸಂತೋಷ ಧರ್ಮಾರಾಜ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading