ನೆನಪಿನಂಗಳದಲ್ಲಿ ಶ್ಯಾಮ್ : ರಾಜೇಶ್ ಶೆಟ್ಟಿ

ನನಗೆ ಇನ್ನೆಷ್ಟು ಸಾಯಂಕಾಲಗಳು ಉಳಿದಿವೆ. ಸಂಜೆ ಹೊತ್ತು ಶ್ಯಾಮ್ ಸರ್‌ ಫೋನ್ ಮಾಡಿದರೆ ಇದೇ ಮಾತು ಹೇಳುತ್ತಿದ್ದರು. ಜೊತೆಗೆ ಒಂದು ದೊಡ್ಡ ನಗು. ಶ್ಯಾಮ ಸರ್ ನೆನಪು ಕಾಡುತ್ತಿದೆ, ಪತ್ರಕರ್ತ ರಾಜೇಶ್ ಶೆಟ್ಟಿ ಅವರ ನೆನಪಿನಂಗಳದಲ್ಲಿ ಶ್ಯಾಮ್ …

ನನಗೆ ಇನ್ನೆಷ್ಟು ಸಾಯಂಕಾಲಗಳು ಉಳಿದಿವೆ. ಸಂಜೆ ಹೊತ್ತು ಶ್ಯಾಮ್ ಸರ್‌ ಫೋನ್ ಮಾಡಿದರೆ ಇದೇ ಮಾತು ಹೇಳುತ್ತಿದ್ದರು. ಜೊತೆಗೆ ಒಂದು ದೊಡ್ಡ ನಗು. ಯಾವ್ಯಾವುದೋ ಕಾರ್ಯಕ್ರಮದಲ್ಲಿ, ಕನ್ನಡಪ್ರಭದ ಇತಿಹಾಸದ ಪುಟಗಳಲ್ಲಿ, ಜಯನಗರದ ಜಾವಾ ಸಿಟಿಯ ಮೂಲೆ ಟೇಬಲ್ಲಿನಲ್ಲಿ ಯಾವಾಗ್ಯಾವಾಗಲೋ ಸಿಗುತ್ತಿದ್ದ ಶ್ಯಾಮ್‌ ಸರ್ ಜೊತೆಗಿನ ಒಡನಾಟ ಅವರು ವಿದ್ಯಾಪೀಠ ಮನೆಗೆ ಬಂದ ಮೇಲೆ ಜಾಸ್ತಿಯಾಯಿತು.

ಒಂದೋ ಜೋಗಿ ಸರ್‌ ಜೊತೆ ಅಥವಾ ಒಮ್ಮೊಮ್ಮೆ ನಾನೊಬ್ಬನೇ ಅವರ ಮನೆಗೆ ಹೋಗುತ್ತಿದ್ದೆ. ಅವರು ಒಂದು ರುಚಿಕರವಾದ ಕೋಸಂಬರಿ ಮಾಡಿಡುತ್ತಿದ್ದರು. ಅಡುಗೆ ಮನೆಯಲ್ಲಿ ಕೋಸಂಬರಿ ಮಾಡಿಟ್ಟಿದ್ದೀನಿ, ತಿನ್ನು ಅಂದ್ರೆ ಅದೇನೋ ನೆಮ್ಮದಿ. ಅ‍ವರ ಅಡುಗೆ ಮನೆ ನೋಡಬೇಕಿತ್ತು. ಫಳ ಫಳ ಫಳ. ಅಲ್ಲಿ ಹೊಸ ಹೊಸ ಥರದ ಪಾತ್ರೆ ಪಗಡಿಗಳಿದ್ದವು. ಅವರಿಗೆ ಖುಷಿಯಾದರೂ ಬೇಜಾರಾದರೂ ಸುಮ್ಸುಮ್ನೆಯಾದರೂ ಜಯನಗರದ ಸಾರಥಿ ಅಂಗಡಿಗೆ ಹೋಗಿ ಏನಾದರೊಂದು ಪಾತ್ರೆ ಸಾಮಾನು ತರುತ್ತಿದ್ದರು. ಅವರ ಅಡುಗೆ ಮನೆಯಲ್ಲಿ ಇಲ್ಲ ಎಂಬುದೇ ಏನೂ ಇರಲಿಲ್ಲ. ಜೋಗಿ ಸರ್‌ ಅಲ್ಲಿ ಅಡುಗೆ ಮಾಡುವಾಗ ಅದೊಂದು ಪಾತ್ರೆ ಇದೆಯೇ ಎಂದು ಕೇಳಿದರೆ ಶ್ಯಾಮ್ ಥಟ್ ಥಟ್ ಥಟ್ ಅಂತ ಬಂದು ಅದ್ಯಾವುದೋ ಮೂಲೆಯಿಂದ ಆ ಪಾತ್ರೆ ಎತ್ತಿ ಕೊಡುತ್ತಿದ್ದರು. ಅಕ್ಷಯ ಪಾತ್ರೆ ಒಂದಿರಲಿಲ್ಲ ಅನ್ನುವುದು ಬಿಟ್ಟರೆ ಬೇರೆಲ್ಲವೂ ಇತ್ತು. ಮಜಾ ಎಂದರೆ ಅವರಿಗೆ ಅಡುಗೆ ಮಾಡಲು ಸಮಯವೇ ಸಿಗುತ್ತಿರಲಿಲ್ಲ. ಅವರು ಜಾಸ್ತಿ ತಿನ್ನುತ್ತಲೂ ಇರಲಿಲ್ಲ. ರುಚಿಗೆ ತಕ್ಕಷ್ಟೇ. ರುಚಿ ಮೀರಿದರೆ ಶ್ಯಾಮ್ ತಿನ್ನುವುದು ನಿಲ್ಲಿಸುತ್ತಿದ್ದರು. ಆದರೆ ಇನ್ನೊಬ್ಬರಿಗೆ ಯಾವತ್ತೂ ಏನೂ ಕಡಿಮೆ ಆಗಲು ಬಿಡುತ್ತಿರಲಿಲ್ಲ. ಯಾರೋ ಮನೆಗೆ ಬರುತ್ತಾರೆ ಎಂದರೆ ಅವಶ್ಯ ಇರುವುದು, ಇಲ್ಲದ್ದು ಎಲ್ಲವನ್ನೂ ತಂದು ಅವರ ಫ್ರಿಜ್‌ ತುಂಬಿಸಿಟ್ಟಿರುತ್ತಿದ್ದರು.

ಅವರು ಭಯಂಕರ ಧಾರಾಳಿ. ಶ್ಯಾಮ್ ಮನೆಯಲ್ಲಿ ನಾನು ಅಡುಗೆ ಮಾಡುವಾಗ ಈರುಳ್ಳಿ ಕತ್ತರಿಸುವ ಕೆಲಸ ವಹಿಸಿಕೊಳ್ಳುತ್ತಿದ್ದೆ. ಶ್ಯಾಮ್ ನನಗೆ ಈರುಳ್ಳಿ ಕತ್ತರಿಸಲು ಹೇಳಿಕೊಟ್ಟಿದ್ದರು. ಅವರು ಈರುಳ್ಳಿಯ ಬುಡವನ್ನು ಅರ್ಧದಷ್ಟು ಕಟ್‌ ಮಾಡುತ್ತಿದ್ದರು. ನಾನು ಅದೇ ಶೈಲಿಯಲ್ಲಿ ಊರಿಗೆ ಹೋದಾಗ ಒಂದ್ಸಲ ಅಮ್ಮನ ಹತ್ತಿರ ಒಳ್ಳೆಯನಾಗುವ ಹಂಬಲದಿಂದ ಇ‍ವತ್ತು ನಾನು ಈರುಳ್ಳಿ ಕಟ್‌ ಮಾಡುತ್ತೇನೆ ಎಂದು ಒಂದು ಈರುಳ್ಳಿ ಶ್ಯಾಮ್ ಸ್ಟೈಲಲ್ಲಿ ಕಟ್‌ ಮಾಡಿದೆ. ಅಮ್ಮ ನೋಡಿದವರೇ ನೀನು ನನ್ನ ಮನೆ ಮುಳುಗಿಸುತ್ತಿ ಮಗನೇ ಎಂದು ನನ್ನ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದರು. ಶ್ಯಾಮ್‌ ಸರ್‌ ಬಳಿ ಹೇಳಿದಾಗ ಜೋರಾಗಿ ನಕ್ಕಿದ್ದರು.

ಶ್ಯಾಮ್‌ ಸೊಗಸುಗಾರ. ನಾನು ಅವರನ್ನು ಕೋಟ್‌ ಇಲ್ಲದೆ ನೋಡಿದ್ದು ಬಹಳ ಕಡಿಮೆ ಸಲ. ಸಾಮಾನ್ಯ ಯಾವುದೇ ಕಾರ್ಯಕ್ರಮ ಇದ್ದರೂ ಕೋಟ್‌ ಹಾಕಿಕೊಂಡು ಬರುತ್ತಿದ್ದರು. ಕೈಯಲ್ಲಿ ಕರ್ಚೀಫ್ ಇಲ್ಲದೆ ಆಚೆ ಹೊರಡುತ್ತಲೇ ಇರಲಿಲ್ಲ. ಅಷ್ಟು ಶಿಸ್ತು. ನಾವು ಪ್ರವಾಸ ಹೋಗುವಾಗಲೂ ಅವರ ಶಿಸ್ತು ನೋಡಿ ಗಾಬರಿ ಬೀಳುತ್ತಿದ್ದೆವು.

ಅವರಿಗೆ ಗೊತ್ತಿಲ್ಲದ ವಿಷಯವೇ ಇರಲಿಲ್ಲ. ಒಂದು ಪದ ಹೇಳಿದರೆ ಹತ್ತು ವಿಚಾರ ತೆಗೆಯುತ್ತಿದ್ದರು. ಅಮೆರಿಕಾದ ಯಾವುದೇ ಗಲ್ಲಿಯಿಂದ ಹಿಡಿದು ಸಾಗರದ ಉಪ್ಪಿನಕಾಯಿ ಭಟ್ರವರೆಗೆ ಲೀಲಾಜಾಲವಾಗಿ ಹೃದಯಕ್ಕೆ ನಾಟುವಂತೆ ಬರೆಯಬಲ್ಲವರಾಗಿದ್ದರು. ಒಂದು ಪದವೂ ದುಂದುವೆಚ್ಚ ಮಾಡುತ್ತಿರಲಿಲ್ಲ. ಒಂದ್ಸಲ ರಾತ್ರಿ ಹೊತ್ತು ನಾನು ಡ್ರೈವಿಂಗ್ ಮಾಡಿಕೊಂಡು ಬಂದ ಮೇಲೆ ಅವರನ್ನು ಹೇಗಿತ್ತು ಡ್ರೈವಿಂಗ್ ಎಂದು ಕೇಳಿದ್ದೆ. ಅವರದ್ದು ಒಂದೇ ಪದ impeccable. ಅವರು ಹೀಗೇ ಆಗಾಗ ಶಶಿ ತರೂರ್ ಶೈಲಿಯಲ್ಲಿ ಒಂದೇ ಪದದಲ್ಲಿ ಉತ್ತರ ಕೊಡುತ್ತಿದ್ದರೆ ನಾನು ಆ ಪದದ ಅರ್ಥ ಹುಡುಕಬೇಕಾಗಿತ್ತು. ಅವರ ಇಂಗ್ಲಿಷ್ ಜ್ಞಾನ ಅಗಾಧವಾಗಿತ್ತು. ಇಂಗ್ಲಿಷ್ ಸಾಹಿತ್ಯ ಓದಿಕೊಂಡಿದ್ದರು. ಇಂಗ್ಲಿಷ್‌ನ ಹಳೆಯ ಸಿನಿಮಾಗಳನ್ನು ನೋಡಿದ್ದರು. ಆ ಕುರಿತು ಎಷ್ಟು ಬೇಕಾದರೂ ಮಾತನಾಡುತ್ತಿದ್ದರು.

ಅವರು ಯಾವತ್ತೂ ತಾನೊಬ್ಬ ದೊಡ್ಡ ಸಂಪಾದಕ ಎಂಬಂತೆ ವರ್ತಿಸಲಿಲ್ಲ. ನನ್ನಂತಹ ಕಿರಿಯರ ಜೊತೆಗೆ ಬಹಳ ಪ್ರೀತಿಯಿಂದ ಬೆರೆಯುತ್ತಿದ್ದರು. ನಗುತ್ತಿದ್ದರು, ನಗಿಸುತ್ತಿದ್ದರು ಅಂತರಂಗಕ್ಕೆ ಬೆಳಕಿನ ಕಿಡಿಯೊಂದನ್ನು ಹಾಯಿಸುತ್ತಿದ್ದರು. ಅವರು ಒಬ್ಬ ಒಳ್ಳೆಯ ಕ್ಯಾಪ್ಟನ್‌. ಎಲ್ಲರನ್ನೂ ಸರಿತೂಗಿಸಿಕೊಂಡು ಹೋಗುತ್ತಿದ್ದರು. ಟೀಮ್‌ ಮ್ಯಾನ್ ಆಗಿದ್ದರು. ಹಾಗಾಗಿ ಅವರು ಎಲ್ಲೆಲ್ಲಿ ಇದ್ದರೋ ಅಲ್ಲಿ ಗೆಲುವು ಇರುತ್ತಿತ್ತು.

ಸಂಜೆ ಹೊತ್ತು ಯಾರಾದರೂ ಒಂದು ಒಳ್ಳೆ ಮಾತನಾಡಿದರೆ ಸಾಕು ಈ ಸಂಜೆ ನನ್ನ ಟೇಬಲ್ ಗೆ ದೀಪ ಹಚ್ಚಿದಿರಿ ಎನ್ನುತ್ತಿದ್ದರು. ಮನಸಾರೆ ಮೆಚ್ಚಿಕೊಳ್ಳುತ್ತಿದ್ದರು. ಕಿರಿಯರಿಗೆ ಜಾಸ್ತಿ ಮಾತನಾಡಲು ಪ್ರೋತ್ಸಾಹಿಸುತ್ತಿದ್ದರು. ಏನೋ ಒಂದು ಹೇಳಿದರೆ ಅ‍ವರು ಆ ಚರ್ಚೆಯನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದರು.

ತಾನು ಏನೋ ಸಾಧನೆ ಮಾಡಿದ್ದೇನೆ ಎಂಬಂತೆ ಅವರು ಇರಲಿಲ್ಲ. ಆದರೆ ಅವರು ಕಂಪ್ಯೂಟರ್‌ ಬಲ್ಲ ಒಂದಿಡೀ ಪೀಳಿಗೆಯನ್ನು ಕನ್ನಡಕ್ಕೆ ಕೊಟ್ಟರು. ಒಂದು ತಲೆಮಾರನ್ನು ಬರಹದಲ್ಲಿ ಬೆಳೆಸಿದರು. ದಾಟ್ಸ್‌ ಕನ್ನಡ ಈಗ ಇಲ್ಲದೇ ಇದ್ದರೂ ಆ ಹೆಸರು ಮಾತ್ರ ಅದೆಷ್ಟೋ ಮನಸ್ಸುಗಳಲ್ಲಿ ಹಾಗೇ ಅಚ್ಚಾಗಿಬಿಟ್ಟಿದೆ. ಅದಕ್ಕೆ ಮೊದಲ ಮತ್ತು ಏಕೈಕ ಕಾರಣ ಶ್ಯಾಮ್‌.
ಅವರು ಕಡು ನಿಷ್ಟುರ. ನೇರಾನೇರ ಮಾತು. ಆಗಲ್ಲ ಎಂದರೆ ಆಗಲ್ಲ. ಇಷ್ಟವಾಯಿತು ಎಂದರೆ ಎದೆಯಲ್ಲಿ ಕೂರಿಸಿ ಬಿಡುತ್ತಿದ್ದರು. ಅದ್ಯಾಕೋ ತುಂಬಾ ಹತ್ತಿರಾದರು ಅನ್ನಿಸಿದ ತಕ್ಷಣ ಮೌನವಾಗುತ್ತಿದ್ದರು. ಅವರ ಮೌನ ತುಂಬಾ ಕಾಸ್ಟ್ಲಿ. ಸದಾ ಮಾತನಾಡುತ್ತಿದ್ದ, ಸದಾ ಓಡಾಡುತ್ತಿದ್ದ, ಸದಾ ಸಂಭ್ರಮಿಸುತ್ತಿದ್ದ ಶ್ಯಾಮ್ ಬಹುಶಃ ಎದೆಯಲ್ಲಿ ಸುಡು ಸುಡು ಕೆಂಡವನ್ನು ಅಡಗಿಸಿಟ್ಟುಕೊಂಡಿದ್ದರು. ಅವರು ಮಾತಾಡುತ್ತಿದ್ದರು. ಆದರೆ ಎದೆಯೊಳಗೊಂದು ಮೌನ ಜ್ವಾಲಾಮುಖಿಯಿತ್ತು. ಅವರು ಸಿಡಿ ಸಿಡಿ ಎನ್ನುತ್ತಿದ್ದರು. ಅವರ ಎದೆಯೊಳಗೊಂದು ಆರದ ಗಾಯವಿತ್ತು. ಅವರು ಥಟ್ ಅಂತ ಬಾಂಧವ್ಯ ದಾರ ಕಡಿದುಕೊಳ್ಳುತ್ತಿದ್ದರು. ಬಹುಶಃ ಅವರಿಗೆ ವಿದಾಯ ತಡೆದುಕೊಳ್ಳುವ ಶಕ್ತಿಯೇ ಇರಲಿಲ್ಲ. ಇನ್ನೊಬ್ಬರು ದೂರಾಗುವ ಮೊದಲೇ ತಾನೇ ದೂರಾಗುತ್ತಿದ್ದರು. ಮುಚ್ಚಿದ ಬಾಗಿಲು ತೆರೆಯುವುದು ಕಷ್ಟವಿತ್ತು.

ಅವರು ಅಗಾಧ ಪ್ರತಿಭೆಯ ಅಂತಃಕರಣದ ಮನುಷ್ಯ. ಅವರಿಗೆ ನೋಯಿಸುವುದು ಗೊತ್ತಿತ್ತು, ಪ್ರೀತಿಸುವುದೂ ತಿಳಿದಿತ್ತು. ಅವರು ಅವರನ್ನೇ ಕನ್ಫ್ಯೂಸ್‌ ಮಾಡುವಂತೆ ಬದುಕಿದರು. ಅವರು ಯಾವತ್ತೂ ಕೊರಗಲಿಲ್ಲ. ಕೊರಗುವವರ ಜೊತೆ ನಿಲ್ಲಲೂ ಇಲ್ಲ. ಅವರದು ಹುಮ್ಮಸ್ಸಿನ ಆತ್ಮ. ಲವಲವಿಕೆಯ ಜೀವ.

ನನ್ನ ಕತೆಯಲ್ಲೊಂದು ಅವರ ಪಾತ್ರವನ್ನು ತಂದಿದ್ದೆ. ನನಗೂ ನಿನಗೂ ಸಾವಿರ ಲೀಟರ್ ಕಣ್ಣೀರುಗಳ ಅಂತರ ಕಣೋ ಹುಡುಗಾ ಎನ್ನುತ್ತದೆ ಆ ಪಾತ್ರ. ಶ್ಯಾಮ್‌ ಸರ್‌ ಯಾವತ್ತೂ ವೈಯಕ್ತಿಕವಾದದ್ದನ್ನು ಏನೂ ಹೇಳಿಕೊಳ್ಳಲಿಲ್ಲ. ಅವರು ಮಾತನಾಡಿದ್ದೆಲ್ಲಾ ಜಗತ್ತಿನ ಕುರಿತೇ. ಮಾತಾಡುತ್ತಾ ಮಾತಾಡುತ್ತಾ ಅವರೇ ಜಗತ್ತಾಗಿ ಬಿಟ್ಟಿದ್ದರು. ಅಗಾಧವಾಗಿದ್ದರು.
ಅವರು ಸಂಜೆ ಹೊತ್ತು ಫೋನ್ ಮಾಡಿ ನಗುತ್ತಲೇ ನನಗೆ ಇನ್ನೆಷ್ಟು ಸಾಯಂಕಾಲ ಬಾಕಿ ಉಳಿದಿವೆ ಎನ್ನುತ್ತಿದ್ದರು. ಆ ಬಾಕಿ ಇರುವ ಸಾಯಂಕಾಲ ದೀಪ ಹಚ್ಚಲು ಬರುವೆ ಎನ್ನುತ್ತಿದ್ದೆ. ಅವರ ಮನೆಗೆ ಹೋಗಿ ಕತೆ ಹೇಳಿಕೊಂಡು ನಾನು ಊಟ ಮುಗಿಸಿ ಹೊರಡುವಾಗ ಅವರು ಹಳೇ ಹಿಂದಿ ಹಾಡುತ್ತಾ ಕುಳಿತಿರುತ್ತಿದ್ದರು. ನಾನು ಮಾತಿಲ್ಲದ ಶ್ಯಾಮ್‌ರನ್ನು ನೋಡಿದ್ದು ಬಹಳ ಅಪರೂಪ. ಅವರು ದಿವ್ಯ ಮೌನಕ್ಕೆ ಶರಣಾಗುತ್ತಿದ್ದದ್ದು ಹಳೇ ಹಿಂದಿ ಹಾಡು ಕೇಳುವಾಗ ಮಾತ್ರ. ಅವರು ಹಾಡು ಕೇಳುತ್ತಾ ಕೇಳುತ್ತಾ ಕಿಟಕಿ ಹೊರಗೆ ನೋಡಿಕೊಂಡು ಕೂತಿರುತ್ತಿದ್ದರು. ನಾನು ಹೊರಡುತ್ತಿದ್ದೆ.

ಈಗ ಹಾಡು ಮುಗಿದಿದೆ. ಧ್ವನಿ ಮಾತ್ರ ಕಾಡುತ್ತಿದೆ.


  • ರಾಜೇಶ್ ಶೆಟ್ಟಿ – ಪತ್ರಕರ್ತರು, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW