ಸೌಂದರ್ಯ ನಿಧನರಾಗಿ ಇಂದಿಗೆ ೨೧ ವರ್ಷ. ಪ್ರತಿಭೆ, ಚೆಲುವು, ಪರಿಶ್ರಮಗಳ ತ್ರಿವೇಣಿಸಂಗಮದಿಂದ ಪರಭಾಷೆಗಳಲ್ಲೂ ಝಗಮಗಿಸಿ ಬೆಳಗಿ, ಮತ್ತಷ್ಟು ಬೆಳೆಯುವ ಹೊತ್ತಿನಲ್ಲೆ ಆಕಾಶವಾಹನದಲ್ಲಿ ಹೊತ್ತಿ ಉರಿದು ದಹಿಸಿಹೋದ ದುರಂತ ನಾಯಕಿ ಸೌಂದರ್ಯ. ಅವರ ಕುರಿತು ಡಾ.ಶ್ರೀನಿವಾಸ ಪ್ರಸಾದ್ ಅವರ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…
ನಿಧನ – ಏಪ್ರಿಲ್ ೧೭,೨೦೦೪
ಪ್ರತಿಭೆ, ಚೆಲುವು, ಪರಿಶ್ರಮಗಳ ತ್ರಿವೇಣಿಸಂಗಮದಿಂದ ಪರಭಾಷೆಗಳಲ್ಲೂ ಝಗಮಗಿಸಿ ಬೆಳಗಿ, ಮತ್ತಷ್ಟು ಬೆಳೆಯುವ ಹೊತ್ತಿನಲ್ಲೆ ಆಕಾಶವಾಹನದಲ್ಲಿ ಹೊತ್ತಿ ಉರಿದು ದಹಿಸಿಹೋದ ದುರಂತ ನಾಯಕಿ ಸೌಂದರ್ಯ. ಜನ್ಮನಾಮ ಕೆ.ಎಸ್.ಸೌಮ್ಯ ಅಚ್ಚಗನ್ನಡದ ಪ್ರತಿಭೆ.
ತಂದೆ ಕೆ.ಎಸ್.ಸತ್ಯನಾರಾಯಣ ಅವರು ಆರ್.ನಾಗೇಂದ್ರ ರಾಯರ ಆರೆನ್ನಾರ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು. ಜಯಲಲಿತಾ ಅವರನ್ನು ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿಸಿದ ನನ್ನ ಕರ್ತವ್ಯ ಚಿತ್ರದ ಸಹ ನಿರ್ಮಾಪಕರೂ ಆಗಿದ್ದವರು. ಶ್ರೀನಾಥ್, ಮಂಜುಳ, ಅಭಿನಯದ ಧನಲಕ್ಷ್ಮಿ ಸಿನಿಮಾದ ನಿರ್ದೇಶಕರೂ ಆಗಿದ್ದ ಸತ್ಯನಾರಾಯಣ ಈ ಚಿತ್ರಕ್ಕೆ ರಚಿಸಿದ ” ನಿಲ್ಲೇ ನೀನಲ್ಲೇ.. ಎಂಬ ಇಂದಿಗೂ ಬಹಳ ಜನಪ್ರಿಯವಾದ ಹಾಡಿನ ಮೂಲಕವೂ ನೆನಪಿನ ಕದ ತಟ್ಟುತ್ತಾರೆ. ಕೆ.ಎಸ್.ಸೌಮ್ಯ ಅವರ ತಾಯಿ ಮಂಜುಳ, ಅಣ್ಣ ಅಮರನಾಥ್.

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ
ಕನ್ನಡದಲ್ಲಿ ಶಶಿಕುಮಾರ್ ನಾಯಕರಾಗಿದ್ದಗಂಧರ್ವ, ದೇವರಾಜ್ ನಾಯಕರಾಗಿದ್ದ ನನ್ನ ತಂಗಿ ಚಿತ್ರಗಳಲ್ಲಿ ನಟಿಸಿದ್ದರೂ ಸಹ ತೆಲುಗಿನಲ್ಲಿ ಸೌಂದರ್ಯ ಅವರ ಯಶಸ್ಸಿನ ತೋರುಹಾದಿಗೆ ಹಸಿರು ಹಾಸಿಗೆಯ ಸ್ವಾಗತ ದೊರಕಿತು.
ಹಿರಿಯನಟ ಕೃಷ್ಣ ಅವರೊಂದಿಗೆ ರೈತಭಾರತಂ ನಿಂದ ಮುಂದೆ ಸಾಗಿದ ಸೌಂದರ್ಯರ ವೃತ್ತಿಜೀವನಕ್ಕೆ ರಾಜೇಂದ್ರುಡು ಗಜೇಂದ್ರುಡು, ಅಮ್ಮಾ ನೀ ಕೋಡಲು, ನಂಬರ್ ಒನ್, ಇನ್ ಸ್ಪೆಕ್ಟರ್ ಝಾನ್ಸಿ, ಹಲೋ ಬ್ರದರ್, ಅಲ್ಲರಿ ಪ್ರೇಮಿಕುಡು..ಹೀಗೆ ಸಾಲುಸಾಲು ಯಶಸ್ವೀ ಚಿತ್ರಗಳು ಸೌಂದರ್ಯ ಅವರ ಮುಡಿ ಸೇರಿದವು. ಚೂಡಾಲನಿ ಉಂದಿ, ಅಮ್ಮೋರು, ಪವಿತ್ರಬಂಧಂ , ಇಂಟ್ಲೊ ಇಲ್ಲಾಲು ಒಂಟಿಂಟ್ಲೊ ಪ್ರಿಯರಾಲು,ಪುಟ್ಟಿಂಟಿ ಗೌರವಂ, ಶ್ರೀ ರಾಮುಲಯ್ಯ, ಅಂತಃಪುರಂ ಇಂಥ ಚಿತ್ರಗಳಿಂದ ಸೌಂದರ್ಯ ತೆಲುಗು ಚಿತ್ರಪ್ರೇಮಿಗಳ ಮನಗೆದ್ದರು.
ತಮಿಳಿನಲ್ಲೂ ಸಹ ಅರುಣಾಚಲಂ, ಹೊನ್ನುಮಣಿ ಮುತ್ತು ಕಾಳೈ,ಪಡೆಯಪ್ಪ,ಚೊಕ್ಕತಂಗಂ..ಚಿತ್ರಗಳಲ್ಲಿ ಅನುನಯದ ಯದ ಅಭಿನಯ ನೀಡಿದ ಸೌಂದರ್ಯ ಅಂಗಾಂಗ ಪ್ರದರ್ಶನ,ಸಭ್ಯತೆಯ ಗೆರೆಯಿಂದಾಚೆ ಇರುವ ಪಾತ್ರಗಳಿಂದ ಅಂತರ ಕಾಯ್ದುಕೊಂಡು ಆಚೆಯೇ ಉಳಿದರೂ ಅಂಥ ಪಾತ್ರಗಳಿಗಾಗಿ ಬೇರೆ ನಟಿಯರನ್ನು ಹಾಕಿಕೊಳ್ಳುವಷ್ಟು ಸೌಂದರ್ಯ ಸಂಯಮ, ಗಾಂಭೀರ್ಯಗಳನ್ನು ಉಳಿಸಿ ಕೊಂಡರು.
ಹಿಂದಿಯಲ್ಲಿ ಸಹ ಅಮಿತಾಭ್ ಬಚ್ಚನ್ ಜೊತೆ ಸೂರ್ಯ ವಂಶಂನಲ್ಲಿ ಅಭಿನಯಿಸಿದ ಸೌಂದರ್ಯ “ಅಮಿತಾಭ್ ಒಂದು ವಿಶ್ವವಿದ್ಯಾಲಯವಿದ್ದಂತೆ,ಆ ವಿಶ್ವವಿದ್ಯಾಲಯದಲ್ಲಿ ನಾನು ಬಹಳಬಹಳ ಕಲಿತು ಬಂದೆ” ಎಂದು ದೊಡ್ಡ ಕಲಾವಿದನ ಬಗ್ಗೆ ದೊಡ್ಡ ಮಾತುಗಳನ್ನೇ ಮನಃಪೂರ್ವಕ ವಾಗಿ ಆಡಿದ್ದರು.
ತೆಲುಗಿನಲ್ಲಿ ಹೆಸರಾಂತ ನಟಿ ಆಮನಿ, ನಟ ಶ್ರೀಕಾಂತ್ ರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದ ಸೌಂದರ್ಯ ತೂಗುವೆ ಕೃಷ್ಣನಾ ಚಿತ್ರದಲ್ಲಿ ಶ್ರೀನಾಥ್,ಅನಂತನಾಗ್ ಅವರಂಥ ಹಿರಿಯಕಲಾವಿದರೊಂದಿಗೆ ಆ ಚಿತ್ರದಲ್ಲಿ ಹುಚ್ಚಿಯಲ್ಲದಿದ್ದರೂ ಹುಚ್ಚಿಯಂತೆ ನಟಿಸುವ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದರು. ಶ್ರೀ ರೇಣುಕಾದೇವಿ,ಶ್ರೀ ಮಂಜುನಾಥ, ನಾನೂ ನನ್ನ ಹೆಂಡ್ತೀರು, ವಿಜಯದಶಮಿ ಸಿಪಾಯಿ, ಇಲ್ಲೆಲ್ಲ ಮಿಂಚಿದ್ದರು.
ಆದರೆ ದ್ವಾರಕೀಶ್ ಅವರಿಗೆ ಪುನಶ್ಚೇತನ ನೀಡಿದ ಆಪ್ತಮಿತ್ರ ದ ನಾಗವಲ್ಲಿಯಾಗಿ ಅದರಲ್ಲೂ ರಾ.ರಾ ..ಸರಸಕು ರಾರಾ (ಸಾಹಿತ್ಯ ದಿ.ಗೋಟೂರಿ, ಸಂಗೀತ -ಗುರುಕಿರಣ್, ಹಾಡಿನ ಅವರ ರೌದ್ರ ನೃತ್ಯಾಭಿನಯ ಚತುರತೆಗೆ ಚಿತ್ರತಂಡವೇ ಬೆಕ್ಕಸಬೆರಗಾಗಿ ಶಹಬ್ಬಾಷ್ ಎಂದಿತ್ತು.

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ
ದ್ವೀಪ ಚಿತ್ರವನ್ನು ನಿರ್ಮಿಸಿ, ಅಭಿನಯಿಸಿ, ಅತ್ಯುತ್ತಮ ನಟಿ ,ರಾಜ್ಯಪ್ರಶಸ್ತಿ, ನಿರ್ಮಾಣಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಸೌಂದರ್ಯ ದೋಣಿ ಸಾಗಲಿ ಚಿತ್ರದಲ್ಲೂ ಬಹಳ ಸಲೀಸಾಗಿ ಅಭಿನಯಿಸಿದ್ದಾರೆ.
ತೆಲುಗಿನಲ್ಲಿ ೪ ಫಿಲ್ಮ್ ಫೇರ್ ಪ್ರಶಸ್ತಿ,೩ ನಂದಿ ಪ್ರಶಸ್ತಿಗೆ ಭಾಜನರಾದ ಸೌಂದರ್ಯ ರಾಷ್ಟ್ರೀಯ ಪಕ್ಷವೊಂದರ ಮತ ಪ್ರಚಾರಕ್ಕಾಗಿ ಏಪ್ರಿಲ್೧೭, ೨೦೦೪ ರಂದು ಹೆಲಿಕಾಫ್ಟರ್ ಏರಿ ಕೆಲವೆ ಸಮಯದಲ್ಲಿ ಅಣ್ಣ ಅಮರನಾಥ್ ಜೊತೆಗೆ ತಾವೂ ಸುಟ್ಟು ಕ್ಷಣಾರ್ಧದಲ್ಲಿ ಕರಕಲಾಗಿ ಹೋದರು.
ಹೆಚ್ಚಿನದನ್ನು ಸಾಧಿಸುವ ವಯಸ್ಸು ಹುಮ್ಮಸ್ಸು ಈಕೆಗಿತ್ತು. ಆದರೆ ಅಷ್ಟರಲ್ಲೆ ಯಮ ಸೌಂದರ್ಯರ ಬಾಳಿಗೆ ಏಪ್ರಿಲ್ ೧೭ ೨೦೦೪ ರಂದೇ ಜಕ್ಕೂರು ಜಾಗದಲ್ಲಿ ಪೂರ್ಣವಿರಾಮ ಹಾಕಿಬಿಟ್ಟಿದ್ದ. ಸೌಂದರ್ಯ ,ಅಮರನಾಥ್ ಸಾವಿಗೆ ಭಾರತೀಯ ಚಿತ್ರರಂಗವೇ ಅಪಾರ ದುಃಖದಲ್ಲಿ ಮುಳುಗಿತು ನಿಜ,ಆದರೆ ಗಂಡನನ್ನು ಕಳೆದುಕೊಂಡು ಮಕ್ಕಳ ಮೂಲಕ ನಗೆಯ ಘಳಿಗೆಗಳನ್ನು ಕಾಣುತ್ತಿದ್ದ ಸೌಂದರ್ಯ -ಅಮರನಾಥರ ಅಮ್ಮ ಮಂಜುಳ ಅವರು ಆ ಸಮಯದಲ್ಲಿ ಆ ಹೆತ್ತ ಒಡಲಿನ ಉರಿಬೆಂಕಿಯ ಕರುಳ ಸಂಕಟವನ್ನು ಅದು ಹೇಗೆ ಸಹಿಸಿಕೊಂಡರೋ ಎನ್ನುವ ಆ ಮಾತೃಹೃದಯದ ಮಾಯಲಾರದ ಗಾಯವನ್ನು ಅಕ್ಷರಗಳಲ್ಲಿ,ಪದಗಳಲ್ಲಿ ಖಂಡಿತವಾಗಿ ಹಿಡಿದಿಡುವುದಾಗಲೀ ಬರೆದಿಡಲಾಗಲೀ ಸಾಧ್ಯವಿಲ್ಲ. ಅವರ ತಾಯಿ ಮಂಜುಳ ಅವರೂ ಈಗ ಇಲ್ಲ.
ಸೌಂದರ್ಯ ಅವರ ಬದುಕಿನ ಪರದೆ ಮುಚ್ಚಿ ೨೧ ವರ್ಷವೇ ಆಗಿ ಹೋದರೂ ಪದೇಪದೇ ಕಾಡುವ ಅಭಿನೇತ್ರಿಯಾಗಿ ಸೌಂದರ್ಯ ಅವರ ಸ್ಮೃತಿಗೆ ವಿಸ್ಮೃತಿ ಖಚಿತವಾಗಿಯೂ ಇಲ್ಲ.
ಇರುವಿಕೆ ಕಾಣಬೇಕು,ಇಲ್ಲದಿರುವಿಕೆ ಕಾಡಬೇಕು ಎಂದರೆ ಇದೇ ಏನು??!!
- ಡಾ.ಶ್ರೀನಿವಾಸ ಪ್ರಸಾದ್
