ಮೋಹಕ ನರಕದ ಭಾಗ್ಯದ ಬಾಗಿಲು – ಸಿಗಂದೂರು ಸೇತುವೆ

ಸಧ್ಯ ಸಿಗಂದೂರು-ತುಮರಿ-ಬ್ಯಾಕೋಡು ಭಾಗಕ್ಕೆ ಸೇತುವೆ ಸಂಪರ್ಕದಿಂದ ಅನೇಶ ದಶಕಗಳ ಕಾಲ ಸಂಪರ್ಕರಹಿತವಾದ ಊರುಗಳಿಗೆ ಭಾಗ್ಯದ ಬಾಗಿಲು ತೆರೆದಿದೆ. ಈ ಕುರಿತು ನನ್ನ ಅನುಭವ ಕಥನವು ಇಲ್ಲಿದೆ. ಡಾ.ಎನ್.ಬಿ.ಶ್ರೀಧರ, ತಪ್ಪದೆ ಮುಂದೆ ಓದಿ…

೧೯೯೨-೨೦೦೨ ರ ವರೆಗೆ ೧೦ ವರ್ಷದ ಅವಧಿಯಲ್ಲಿ ಪಶುವೈದ್ಯನಾಗಿ ತುಮರಿ, ಬ್ಯಾಕೋಡು, ಕಟ್ಟಿನ ಕಾರು, ಕೋಗಾರು ಇತ್ಯಾದಿ ಗ್ರಾಮಗಳಿಗೆ ಬೈಕಿನಲ್ಲಿ ತೆರಳುವಾಗ ಆದ ತೊಂದರೆ ಅಷ್ಟಿಷ್ಟಲ್ಲ. ತುಮರಿ-ಬ್ಯಾಕೋಡು ಅಥವಾ ಸಿಗಂದೂರು ಭಾಗಕ್ಕೆ ತೆರಳುವವರಿಗೆ ಅಲ್ಲಿನ ಲಾಂಚ್ ಪ್ರಯಾಣ, ಸುತ್ತಲಿನ ಪರಿಸರ, ವಿಶಾಲವಾದ ಹಿನ್ನೀರು “ವಾವ್.. ಎಂಬ ಭಾವನೆ ತಂದರೆ ಅಚ್ಚರಿ ಇಲ್ಲ. ಆದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತ. ಅಲ್ಲೇ ಇರುವವರಿಗೆ ಇದೊಂದು “ಮೋಹಕ-ನರಕ” ಎಂದರೆ ತಪ್ಪಿಲ್ಲ. ಪಡಬಾರದ ಬವಣೆಗಳ ಅಂತ್ಯವಾಗಿದೆ.

ತುಮರಿಗೆ ಪಶುವಿನ ಮರಣೋತ್ತರೆ ಪರೀಕ್ಷೆಗೆ ತೆರಳಿ ಮರಳಿ ಬರುವಾಗ ಅಲ್ಪ ಸಮಯದಲ್ಲಿ ಲಾಂಚ್ ತಪ್ಪಿಸಿಕೊಂಡು ೯೬ ಕಿಲೋಮೀಟರ್ ಮಾರ್ಗದಲ್ಲಿ ರಾತ್ರಿ ಬರುವಾಗ ಆದ ತೊಂದರೆಯ ಬಗ್ಗೆ ಇಲ್ಲಿ ಬರೆಯಲಾಗಿದೆ. ಬಿಡುವು ಮಾಡಿಕೊಂಡು ಓದಿ.ಇದು ಸದ್ಯವೇ ನವ ಕರ್ನಾಟಕದ ಮೂಲಕ ಪ್ರಕಟವಾಗುವ “ಪಶುವೈದ್ಯನ ಪಯಣ” ಪುಸ್ತಕದಲ್ಲಿ ಬರಲಿದೆ. ನಿರೀಕ್ಷಿಸಿ.

ಫೋಟೋ ಕೃಪೆ : ಅಂತರ್ಜಾಲ

ವನವಾಸ

“ಸಾರ್, ತುಮರಿಯಿಂದ ಫೋನಿದೆ… ಬೇಗ ಬನ್ನಿ ಸಾರ್” … ಎಂದು ನನ್ನ ಶಿಷ್ಯ ಅಂದಾಗಲೇ ನಾನು ಇಹಲೋಕಕ್ಕೆ ಬಂದಿದ್ದು. ಆಗಲೇ ಜೂನ್ ಮೊದಲ ವಾರ. ಬೆಳಿಗ್ಗೆ ಸಣ್ಣಗೇ ಮಳೆ ಪ್ರಾರಂಭವಾಗಿತ್ತು. ಅಂಕದ ಚನ್ನಬಸಪ್ಪ ಶೆಟ್ಟರ ಆಕಳ ಕಾಲಿಗೆ ಹುಳವಾಗಿ ಪುತುಗುಡುತ್ತಿದ್ದವು. ನೋವಿನಿಂದ ಅದು ಕಷ್ಟ ಪಟ್ಟು ಹೆಜ್ಜೆ ಕಿತ್ತಿಡುತ್ತಿತ್ತು. ಎಂದಿನಂತೆ ಅವರು ಬಹಳ ಮೆತ್ತಗಿನ ಧ್ವನಿಯಲ್ಲಿ ” ಡಾಕ್ಟ್ರೇ..ದನದ ಕಾಲಿಗೆ ಹುಳವಾದ ಹಾಗೆ ಕಾಣ್ತದೆ. ಕಳಿಸ್ತೀನಿ” ಎಂದು ಕಳಿಸಿದ ಜರ್ಸಿ ದನವನ್ನು ಕೆಡವಿ ಅದರ ಕಾಲ್ತೊಳೆದು ಒಳಗೆ ಮಿಜಿಗಿಡುತ್ತಿದ್ದ ಹುಳುಗಳ ತಲೆಗೆ ನೇರವಾಗಿ ಚಿಮಟ ಹಾಕಿ ಒಂದೊಂದಾಗಿ ತೆಗೆಯುತ್ತಿದ್ದೆ. ಮಹಾ ಘಾಟಿಯಾದ ಹುಳಗಳು ನನ್ನ ಚಿಮ್ಮಟ ಅವುಗಳ ಕಪ್ಪು ತಲೆಯತ್ತ ಸಾಗುತ್ತಿದ್ದಂತೆ ಗಾಯದಲ್ಲಿರುವ ರಕ್ತಸಾಗರದಲ್ಲಿ ಡುಬುಕ್ ಅಂತ ಮುಳುಗಿ ಮಾಯವಾಗಿ ಬಿಡುತ್ತಿದ್ದವು. ಛಲ ಬಿಡದ ಮಲ್ಲನಂತೆ ನಾನೂ ಸಹ ಅವುಗಳ ಮೇಲೆ ಟರ್ಪೆಂಟೈನ್ ಎಣ್ಣೆ ಹೊಯ್ದು ಅವುಗಳಿಗೆ ಉಸಿರುಗಟ್ಟುವಂತೆ ಮಾಡಿ, ಅವು ಗಾಳಿಗಾಗಿ ಮಂಡೆಯನ್ನು ಹೊರ ಹಾಕಿದ ಕೂಡಲೇ ಲಬಕ್ ಎಂದು ಚಿಮ್ಮಟದಿಂದ ಹಿಡಿದು ಪಕ್ಕಕ್ಕೆ ಹಾಕುತ್ತಿದ್ದೆ. ಈ ಹುಳಗಳದ್ದು ಒಂದು ವಿಚಿತ್ರ ಕಥೆ. ಸಂಕ್ಷಿಪ್ತವಾಗಿ ಹೇಳಿಬಿಡುವೆ. ಕುರುಡು ನೊಣಗಳ ಅನೇಕ ಪ್ರಬೇಧಗಳು ಪ್ರಾಣಿಗಳ ಗಾಯದ ಮೇಲೆ ಕುಳಿತು ಪುತ.. ಪುತ.. ಎನ್ನುತ್ತಾ ಸಹಸ್ರಾರು ಮೊಟ್ಟೆಗಳನ್ನಿಡುತ್ತವೆ. ಇವು ಲಾರ್ವಾ ಹಂತವಾಗಿ ದನದ ಮಾಂಸವನ್ನು ಕೊರೆದು ಹಾಕುತ್ತವೆ. ಇವುಗಳಿಗೆ ತಿನ್ನಲು ತಾಜಾ ಮಾಂಸ ಮತ್ತು ರಕ್ತ ಬೇಕು. ಆದರೆ ಗಾಯದೊಳಗೆ ಬಹಳ ಹೊತ್ತು ಹುದುಗಿರಲಾರವು.ಆಗಾಗ ಕಪ್ಪು ತಲೆಯನ್ನು ಹೊರ ಹಾಕಿ ಗಾಳಿ ಸೇವಿಸದಿದ್ದರೆ ಅವು ಗೊಟಕ್, ಪಡ್ಚ, ಫೋನಿನಲ್ಲಿ ಆ ಕಡೆಯಿಂದ ತುಮರಿಯ ನನ್ನ ಆತ್ಮೀಯ ಗೋಪಾಲಕರೊಬ್ಬರು “ ಡಾಕ್ಟ್ರೇ.. ನೀವು ಹೇಳಿದ ಹಾಗೇ ಆಯ್ತು, ದನ ಉಳಿಲಿಲ್ಲ. ಅದರ ಮರಣೋತ್ತರ ಪರೀಕ್ಷೆ ಆಗ್ಬೇಕಲ್ಲ. ಆ ಕೆಲಸ ಒಂದು ನಿಮ್ಮ ಕಡೆಯಿಂದ ಇದೊಂದು ಕೊನೆಯ ಕೆಲಸ ಬಾಕಿ. ಎಷ್ಟೊ ಹೊತ್ತಿಗೆ ನಿರೀಕ್ಷೆ ಮಾಡಬಹುದು?” ಎಂದರು. ಬೇರೇನೂ ಉತ್ತರ ಹೇಳಲು ಆಸ್ಪದವಿಲ್ಲದ ನಾನು “ಸ್ವಲ್ಪ ಬೇಗ ವಾಪಸ್ ಬರ್ಬೇಕು. ಎರಡುವರೆ ಲಾಂಚಿಗೆ ಬಂದು ಬಿಡುವೆ” ಎಂದೆ. ಲಗುಬಗೆಯಿಂದ ದೈನಂದಿನ ಕೆಲಸಗಳನ್ನು ಮುಗಿಸಿ ಊಟದ ಶಾಸ್ತ್ರ ಮಾಡಿ ನನ್ನ ಏಕೋಪಾಧ್ಯಾಯ ಆಸ್ಪತ್ರೆಯ ಸಂಪೂರ್ಣ ಜವಾಬ್ಧಾರಿಯನ್ನು ನನ್ನ ಶಿಷ್ಯನಿಗೆ ವಹಿಸಿ ತುಮರಿಗೆ ಹೊರಡಲು ಸಿದ್ಧನಾದೆ. ಸಣ್ಣಗೇ ಮಳೆ ಶುರುವಾಗಿದ್ದರಿಂದ ನನ್ನ ಡಬಲ್ ರೇನುಕೋಟು ಸಿದ್ಧವಾಗಿತ್ತು. ಡಬಲ್ ರೇನುಕೋಟು ಅಂದರೆ ಹೊಸದೇನೂ ಅಲ್ಲ. ಎರಡು ಪ್ಲಾಸ್ಟಿಕ್ ಮಳೆ ಅಂಗಿ ಅಷ್ಟೇ. ಮಳೆಯ ರಭಸಕ್ಕೆ ಒಂದೇ ಅಂಗಿ ಹಾಕಿದರೆ ಮಳೆ ನೀರೆಲ್ಲಾ ಕಳಪೆ ಜಿಪ್ಪುಗಳ ಸಂದಿನಿಂದ ಒಳಬಂದು ಕಚಗುಳಿ ಇಟ್ಟು ಹೊರವಸ್ತ್ರ, ಒಳವಸ್ತ್ರಗಳೆಲ್ಲಾ ಒದ್ದೆಯಾಗುವುದನ್ನು ತಪ್ಪಿಸಲು ಕಂಡುಕೊಂಡ ಲೋಕಲ್ ಪದ್ದತಿ ಅಥವಾ ದೇಸಿ ಪದ್ದತಿ ಅನ್ನಬಹುದೇನೋ?

ತುಮರಿ ಮತ್ತು ಬ್ಯಾಕೋಡು ಎಂಬ ಹುಬ್ಬಳ್ಳಿ-ಧಾರವಾಡದ ತರ “ಅವಳಿ ನಗರಗಳು”. ಲಿಂಗನ ಮಕ್ಕಿ ಡ್ಯಾಮು ಕಟ್ಟುವಾಗ ಈ ತುಮರಿ ಬ್ಯಾಕೋಡುಗಳೆಲ್ಲಾ ಮುಳುಗಿ ಹೋಗುತ್ತವೆ ಎಂದು ಆಗಿನ ಇಂಜಿನಿಯರುಗಳು ತಪ್ಪು ಅಂದಾಜು ಮಾಡಿ ಕೊಂಡು ಎಲ್ಲರಿಗೂ ಪರಿಹಾರ ಕೊಟ್ಟರಂತೆ. ಆದರೆ ಡ್ಯಾಮು ಫುಲ್ಲು ತುಂಬಿದರೂ ಈ ಎರಡೂ ಮಹಾನಗರಗಳು ಮತ್ತು ಸುತ್ತಲಿನ ಹತ್ತಾರು ಹಳ್ಳಿಗಳು ಮುಳುಗಲೇ ಇಲ್ಲವಂತೆ. ಯಾರೂ ಜಾಗ ಖಾಲಿ ಮಾಡದೆ ಇದ್ದುದರಿಂದ ತಾಲೂಕು ಕೇಂದ್ರ ಸಾಗರಕ್ಕೆ ಬರಲು ಹತ್ತಿರವಾಗುವಂತೆ ಒಳನಾಡು ಮತ್ತು ಬಂದರು ಇಲಾಖೆ ಲಾಂಚು ಹಾಕಿಸಿ ಕೊಟ್ಟಿತಂತೆ. ಈ ತುಮರಿ-ಬ್ಯಾಕೋಡು ಅವಳಿ ಎಂಬ ಮಹಾದ್ವೀಪಕ್ಕೆ ತಾಳಗುಪ್ಪ ಸಾಗರ-ಹೊಳೆಬಾಗಿಲು-ಸಿಗಂದೂರು ಮಾರ್ಗವಾಗಿ ಲಾಂಚಿನಲ್ಲಿ ಹೋದರೆ ಅಂದಾಜು ೬೫ ಕಿಲೋಮೀಟರ್. ಕೊನೆಯ ಲಾಂಚು ಹೊರಟು ಹೋದ ಮೇಲೆ ಯಾರಿಗಾದರೂ ಬಸಿರು ಬಾಣಂತನದ ದಾವಂತ ಇದ್ದರೆ ಅಥವಾ ಸಿರಿಯಸ್ ಆಗಿ ಹುಶಾರು ಇಲ್ಲದಿದ್ದರೆ ಬ್ಯಾಕೋಡು-ಕೊಂಜವಳ್ಳಿ-ಅರಳಗೋಡು-ಕಾರ್ಗಲ್-ಜೋಗ-ಅಡುಕಟ್ಟಾ ಮಾರ್ಗವಾಗಿ ಹೋದರೆ ಗೂಗಲ್ಲು ಮ್ಯಾಪು ಹಿಡಿದು ಯಾವ ಕಡೆಯಿಂದ ನೋಡಿದರೂ ತಾಳಗುಪ್ಪಕ್ಕೆ ೮೪ ಕಿಲೋಮೀಟರ್ ಮತ್ತು ಸಾಗರಕ್ಕೆ ಅಂದಾಜು ೧೦೨ ಕಿಲೋಮೀಟರ್. ೧೯೯೪ ರ ಆ ಕಾಲದಲ್ಲಿ ಕಾರ್ಗಲ್, ಅರಳಗೋಡು, ಕೊಂಜವಳ್ಳಿ, ಬ್ಯಾಕೋಡು ಮತ್ತು ಈ ಸಮಸ್ಥ ಮಂಡಳಗಳ ಹಳ್ಳಿಗಳ ಜಾನುವಾರುಗಳ ದೇಖರೇಖೆ ಅವುಗಳ ಆರೋಗ್ಯ ರಕ್ಷಣೆ ತಾಳಗುಪ್ಪ ಪಶುಚಿಕಿತ್ಸಾಲಯದ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನಾದ ನನ್ನದೇ ಜವಾಬ್ಧಾರಿಯಾಗಿತ್ತು. ನಿಜ ಅರ್ಥದಲ್ಲಿ ತುಮರಿ ಬ್ಯಾಕೋಡುಗಳು ಸಾಗರ ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರಬೇಕು. ಅದು ಹ್ಯಾಗೆ ಆ ಕಡೆಯೂ ಆಲ್ಲ ಈ ಕಡೆಯೂ ಅಲ್ಲದ ತಾಳಗುಪ್ಪಕ್ಕೆ ತಗಲಿ ಹಾಕಿದರೋ ಗೊತ್ತಿಲ್ಲ. ಅಲ್ಲಿಯ ಜನ ಜೋರು ಎನ್ನುವುದು ಒಂದು ಕಾರಣವಾದರೆ ಅಲ್ಲಿ ಹೋದರೆ ಒಂದಿಡೀ ದಿನ ಗಾಯಬ್, ಪೇಮೆಂಟ್ ಕಡಿಮೆ ಎಂಬುದೂ ಮತ್ತೊಂದು ಕಾರಣ ಎಂದು ನನ್ನ ಶಿಷ್ಯನ ಅಂಬೋಣ. “ಸಾರ್, ತುಮರಿ-ಬ್ಯಾಕೊಡು ಜಂಟಿ ಮಹಾನಗರಗಳ ಜನ ಭಾರೀ ಜೋರು. ರಾಜಕೀಯ ಸಾರ್. ಸೀದಾ ಕಾಗೋಡರಿಗೆ (ಕಾಗೋಡು ತಿಮ್ಮಪ್ಪನವರಿಗೆ) ಫೋನು ಮಾಡ್ತಾರೆ.ಅದ್ಕೆ ಸಾಗರದ ದೊಡ್ಡಾಸ್ಪತ್ರೆಯವ್ರು ನಮಗೆ ತಗ್ಲಿ ಹಾಕಿರೋದು” ಎಂದು ನನ್ನ ಶಿಷ್ಯ ಹೇಳುತ್ತಿದ್ದರೆ ಅನುಭವಿಯಾದ ಆತನ ಮಾತನ್ನು ನಂಬಲೇ ಬೇಕಿತ್ತು. ಈ “ಪೇಮೆಂಟು ಕಡಿಮೆ” ಶಬ್ಧ ಇಲಾಖೆಯ ಬಹಳ ಜನರಿಗೆ ಅಲರ್ಜಿ ತಂದಿತ್ತು ಅನಿಸುತ್ತೆ. ತುಮರಿ ಬ್ಯಾಕೋಡು ಭಾಗಗಳಲ್ಲಿ ಜಾನುವಾರುಗಳ ಸಾವು ನೋವುಗಳಾದರೂ ಇಲ್ಲಿಂದ ಧಾವಿಸಬೇಕಾಗಿತ್ತು. ಅಲ್ಲಿಯೂ ಸಹ ಇರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳು ಅಟೆಂಡರುಗಳೆಂಬ ಕಾಂಪೌಂಡರುಗಳ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದ್ದವು. ಚಿಕಿತ್ಸೆಯೇನೋ ಅವರವರಿಗೆ ತಿಳಿದಂತೆ ಡಾಕ್ಟರುಗಳೆಂದು ಸ್ವಯಂ ಘೋಷಿಸಿಕೊಂಡ ಯಾರ್ಯಾರೋ ನಾಟಿವೈದ್ಯರುಗಳೆಲ್ಲಾ ಮಾಡಿಬಿಡುತ್ತಿದ್ದರು. ಆದರೆ ಈ ಮರಣೋತ್ತರ ಪರೀಕ್ಷೆಯಲ್ಲಿ ಡಾಕ್ಟರುಗಳ ಜೊತೆ ದನದ ಶವದ ಜಂಟಿ ಫೋಟೋ ಆಗಲೇ ಬೇಕಿತ್ತು. ಇಲ್ಲದಿದ್ದರೆ ಇನ್ಸುರೆನ್ಸ್ ಕಂಪನಿಯವರು ಹಣ ಕೊಡುತ್ತಿರಲಿಲ್ಲ. ತುಮರಿಯಲ್ಲಿನ ಹಳ್ಳಿಗಳಲ್ಲಿ ಒಂದಿಷ್ಟು ಜನ ಕ್ರಾಸ್ ಬ್ರೀಡ್ ಜರ್ಸಿ ಹೆಚ್ಎಫ್ ಆಕಳುಗಳನ್ನು ಸಾಕಿಕೊಂಡಿದ್ದರು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ ಒಂದಷ್ಟು ದನ ಸಾವನ್ನಪ್ಪಿ ಆರ್ಥಿಕ ತೊಂದರೆ ಆಗಿದ್ದರಿಂದ ಇನ್ಸುರೆನ್ಸ್ ಮಾಡಿಸಿಕೊಳ್ಳಿ ಎಂದು ನಾನೇ ಸಲಹೆ ನೀಡಿದ್ದೆ. ಈ ಸಲಹೆಯೇ ನಾನು ಅಲ್ಲಿಗೆ ಈ ದಿನ ಹೋಗುವಂತೆ ಮಾಡಿದ್ದು. ಆ ದಿನದ ತುಮರಿಯ ಪ್ರವಾಸಕ್ಕೂ ಇದೇ ಕಾರಣ.

ಫೋಟೋ ಕೃಪೆ : ಅಂತರ್ಜಾಲ

ಹೀಗೇ ಪರಧ್ಯಾನದಲ್ಲಿರುವಾಗಲೇ ಹೊಳೆಬಾಗಿಲು ಬಂದಾಗಿತ್ತು. ಲಾಂಚ್ ಆಗಲೇ ರಶ್ಶಾಗುತ್ತಾ ಸಾಗಿತ್ತು. ಸಿಗಂದೂರು ದೇವರನ್ನು ನೋಡಲೆಂದೇ ಬಂದ ಒಂದೆರಡು ಕಾರುಗಳು ಆಗಲೇ ಲಾಂಚನ್ನೇರಿ ನಿಂತಿದ್ದವು. ಮೊದಲ ಸಲ ಮಲೆನಾಡಿನ ದರ್ಶನ ಭಾಗ್ಯಪಡೆದ ಇಲ್ಲಿನ ಮರಸಿರಿಗಳಿಗೆ ಮನಸೋತ ಬೆಂಗಳೂರಿನಿಂದ ಬಂದ ತರುಣಿ ಲಲನೆಯರು “ ವಾಟ್ ಎ ಬ್ಯೂಟಿಫುಲ್ ಸೀನ್ ಯಾ, ಸೋ ಕ್ಯೂಟ್ ರಿಯಲಿ ಎ ಹೆವೆನ್” ಎಂದುಲಿಯುತ್ತಾ ಉದ್ದುದ್ದ ಲೆನ್ಸಿರುವ ಕ್ಯಾಮರಾದಿಂದ ಫೋಟೊ ಕಿಚಾಯಿಸುತ್ತಿದ್ದರು. ಕೇವಲ ಬೆಂಗಳೂರಿನ ರಸ್ತೆಗಳಲ್ಲಿ ಗಾಡಿ ಓಡಿಸಿದ್ದ ಕ್ಯಾಬುಗಳ ಡ್ರೈವರುಗಳು ಅವರು ರಿವರ್ಸ್ ಗೇರಿನಲ್ಲಿ ಲಾಂಚನ್ನೇರಲು ಪ್ರಯತ್ನಿಸುತ್ತಿದ್ದಾಗ ಲಾಂಚಿನ ಕಬ್ಬಿಣದ ಏಣಿ ದಡ್ಡೆಂದು ತಾಗಿದ್ದರಿಂದ ಆದ ಹಾನಿಯನ್ನು ಲೆಕ್ಕಾಚಾರ ಹಾಕುತ್ತಿದ್ದರು. ಈ ತುಮರಿ ಬ್ಯಾಕೋಡುಗಳು ಮೊದಲ ಬಾರಿಗೆ ಬರುವವರಿಗೆ ಸ್ವರ್ಗ. ದಿನವೂ ಈ ಕಷ್ಠ ಕೋಟಲೆಗಳೆನ್ನೆದುರಿಸುವ ಇಲ್ಲಿರುವ ಹವ್ಯಕ ಮಾಣಿಗಳಿಗೆ ಹೆಕ್ಟೇರುಗಟ್ಟಲೇ ಅಡಿಕೆ ತೋಟವಿದ್ದರೂ, ಕ್ವಿಂಟಲುಗಟ್ಟಲೇ ಬಂಗಾರ ಇದ್ದರೂ ಹವ್ಯಕ ಕೂಸುಗಳು ಬೆಂಗಳೂರಿನಲ್ಲಿರುವ ಟೆಕ್ಕಿಗಳಿಗೇ ಮಣೆ ಹಾಕುವುದರಿಂದ ಅಲ್ಲಿರುವವರ ವಂಶಾಭಿವೃದ್ಧಿ ಕಷ್ಟವೆಂದು ಮತ್ತು ಅವರು ಶಿವನ ಪಾದ ಸೇರಿದ ಮೇಲೆ ತರ್ಪಣ ಬಿಡಲೂ ಸಹ ಜನರಿರಲಿಕ್ಕಿಲ್ಲವೆಂದು ಹಿರಿಯ ತಲೆಯವರು ಹೇಳುತ್ತಿದ್ದದ್ದು ನೆನಪಿಗೆ ಬಂತು. ಈ ಊರುಗಳಿಗೆ “ಮೋಹಕ ನರಕ” ವೆಂಬ ಅನ್ವರ್ಥನಾಮ ಬಂದಿರುವುದು ಅದಕ್ಕೆ ಇರಬಹುದೇನೋ?

ಹಾಗೂ ಹೀಗೂ ದೊಡ್ಡ ದೊಡ್ಡ ಕಲ್ಲುಗಳೇ ಇರುವ ಒಂದಾನೊಂದು ಕಾಲದಲ್ಲಿ ಟಾರು ರಸ್ತೆಗಳಾಗಿದ್ದವುಗಳೆಂಬ ಕುರುಹು ಇರುವ ರಸ್ತೆಗಳಲ್ಲಿ ಬೈಕು ಓಡಿಸಿಕೊಂಡು ಅವರ ಮನೆ ತಲುಪಿದೆ. ಮೊದಲೇ ಸೂಚನೆ ನೀಡಿದ್ದರಿಂದ ದನದ ಮರಣೋತ್ತರ ಪರೀಕ್ಷೆಗೆ ಎಲ್ಲಾ ತಯಾರಿ ನಡೆದಿತ್ತು. ಮರಣೋತ್ತರ ಪರೀಕ್ಷೆ ಮತ್ತು ಅದರಿಂದ ರೋಗಪತ್ತೆ ಮಾಡುವುದು ನನ್ನ ಅಚ್ಚುಮೆಚ್ಚಿನ ಕಲಿಕೆಯ ವಿಷಯವಾಗಿರುವುದರಿಂದ ಸಮಯ ಹೋಗುತ್ತಿರುವುದೇ ಗೊತ್ತಾಗಲಿಲ್ಲ. ಅದರಲ್ಲೂ ತೀರಿ ಹೋಗಿರುವ ದನದ ಹೃದಯದ ಸಮೀಪ ಹಿಂಡಿಯ ಮುಖೇನ ಹೊಟ್ಟೆಯೊಳಗೆ ಹೋದ ಸೂಜಿಯ ತುಂಡೊಂದು ಸೇರಿಕೊಂಡು ದೊಡ್ಡ ಗಡ್ಡೆಯಾಗಿ ಕೀವು ತುಂಬಿಕೊಂಡು ದನ ತೀರಿಕೊಂಡಿತ್ತು. ವಿವಿಧ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬಿಗೆ ಕಳಿಸಲು ಅವುಗಳ ರಕ್ಷಣೆಗೆ ರಾಸಾಯನಿಕದಲ್ಲಿರಿಸಿಕೊಳ್ಳುವಾಗಲೇ ಐದು ಘಂಟೆಯಾಯಿತೆಂಬ ಸೂಚನೆ ಮನೆಯೊಳಗಿಂದ ಬಂತು. ಲಗುಬಗೆಯಿಂದ ಬೈಕನ್ನು ಸ್ಟಾರ್ಟ್ ಮಾಡಿ ಕಡಿದಾದ ರಸ್ತೆಯಲ್ಲಿ ವೇಗವಾಗಿಯೇ ಓಡಿಸಿಕೊಂಡು ಹೊಳೆಬಾಗಿಲಿಗೆ ಬಂದೆ.

ನನ್ನ ಮಹಾ ದುರದೃಷ್ಟ. ಕೊನೆಯ ಲಾಂಚ್ ಆಗಲೇ ನೀರಿನಲ್ಲಿ ಅರ್ಧ ದೂರ ಕ್ರಮಿಸಿಯಾಗಿತ್ತು. ನಾನು ಜೋರಾಗಿ ಕೈ ಬೀಸುತ್ತಾ ಓಡುತ್ತಾ ಕರೆದರೂ ಲಾಂಚು ದೂರ ದೂರ ಸಾಗುತ್ತಾ ಮರಿಚಿಕೆಯಾಗಿ ಹೋಯ್ತು. ಕೆಲವೊಮ್ಮೆ ಆ ಕಡೆಯಿಂದ ಪ್ರಭಾವಿಯಾದ ಯಾರಾದರೂ ಬರುವುದಿದ್ದರೆ ಲಾಂಚು ಬರುವ ಸಾಧ್ಯತೆ ಇತ್ತು. ಆದರೆ ಲಾಂಚು ವಾಪಸ್ಸು ಬರುವ ಮತ್ತು ನನ್ನನ್ನು ಕರೆದುಕೊಂಡು ಹೋಗುವ ಯಾವುದೇ ಲಕ್ಷಣ ಕಾಣಲಿಲ್ಲ. ಇನ್ನು ಬ್ಯಾಕೋಡು, ಕೊಂಜವಳ್ಳಿ, ಅರಳಗೋಡು ಕಾರ್ಗಲ್ ಮಾರ್ಗವಾಗಿ ತಾಳಗುಪ್ಪಕ್ಕೆ ಬರುವುದು ಬಿಟ್ಟರೆ ಬೇರೆ ಮಾರ್ಗ ತೋಚದೇ ಬೈಕು ತಿರುಗಿಸಿಕೊಂಡು ವಾಪಸ್ ಹೊರಟೆ. ಆಗಲೇ ೬.೩೦ ಗಂಟೆ. ಇನ್ನು ಹೆಚ್ಚು ಕಮ್ಮಿ ಯಾವುದೇ ಗೂಗಲ್ಲು ಮ್ಯಾಪು ಹಾಕಿದರೂ ೧೦೨ ಕಿಲೋಮೀಟರ್ ಸುತ್ತಿ ತಾಳಗುಪ್ಪ ತಲುಪಬೇಕಾದರೆ ರಾತ್ರಿ ಒಂಭತ್ತು ಘಂಟೆನೇ ಸರಿ ಎಂದು ನನ್ನ ಅದೃಷ್ಟವನ್ನು ಬೈದುಕೊಳ್ಳುತ್ತಾ ವಾಪಸ್ ಸಾಗಿದೆ. ಆಗಲೇ ಜಿಟಿ ಜಿಟಿ ಸಣ್ಣನೇ ಮಳೆ ಪ್ರಾರಂಭವಾಗಿ ಕತ್ತಲು ಕಾರ್ಮೋಡದಂತೆ ಕ್ರಮೇಣ ಕವಿಯುತ್ತಾ ಬಂತು. ಕೊಂಜವಳ್ಳಿಯ ಸಮೀಪ ಬರುತ್ತಿದ್ದಂತೆ ಮಳೆ ಜೋರಾಗಿ ಮುಖದ ಮೇಲೆ ಸೂಜಿ ಚುಚ್ಚಿದಂತೆ ಮಳೆಯ ನೀರು ಸರ ಬರನೆ ಸುರಿಯತೊಡಗಿತು. ಬೈಕಿನ ಕುರುಡ ಬೆಳಕು ರಸ್ತೆಯ ಮೇಲೆ ಬಿದ್ದು ಹತ್ತಡಿ ದೂರ ಮಾತ್ರ ಕಾಣುತ್ತಿತ್ತು. ಕಾವಾರಿ ತಂಪಾದ ಟಾರು ರಸ್ತೆಯನ್ನು ಇದೇ ಒಳ್ಳೆಯ ಸಂದರ್ಭ ಎಂದುಕೊಂಡು ಹಾವುಗಳು ಕ್ರಾಸ್ ಮಾಡಲಾಗದೇ ತೆವಳುತ್ತಿದ್ದವು. ಅವುಗಳ ಮೇಲೆ ಬೈಕಿನ ಟಯರ್ ಹಾಯದಂತೆ ಹುಶಾರಾಗಿ ರಸ್ತೆಯನ್ನು ಬಿಟ್ಟ ಕಣ್ಣಲ್ಲಿ ನೆಟ್ಟಗೇ ದಿಟ್ಟಿಸುತ್ತಾ ರಸ್ತೆಯ ಮೇಲೆಯೇ ದೃಷ್ಟಿಯನ್ನು ನೆಟ್ಟು ಬೈಕು ಓಡಿಸತೊಡಗಿದೆ.

ಫೋಟೋ ಕೃಪೆ : ಅಂತರ್ಜಾಲ

ಕೊಂಜವಳ್ಳಿ ದಾಟಿದ ಮೇಲೆ ಅರಳಗೋಡಿನವರೆಗೂ ದಟ್ಟ ಅರಣ್ಯದ ರಸ್ತೆ.ನಿರ್ಜನ ಪ್ರದೇಶ. ಆಗಾಗ “ತಟ್.. ತಡಲ್” ಎಂದು ಮಿಂಚಿನೊಡನೆ ಬರುವ ಗುಡುಗು ಸಿಡಿಲಿನ ಶಬ್ಧ, ಕಾಡಿನ ಅಕಾಶಚುಂಬಿ ಮರಗಳ ಕಾಂಡಗಳ ಮೇಲೆ ಕುಳಿತ ಜೀರುಂಡೆಗಳು ಹೊರಡಿಸುವ “ರೆಂವ್… ರೆಂವ್.. ರೆಂವ್’. ಶಬ್ಧ, ಕಪ್ಪೆಗಳು ಏಕತಾನತೆಯಲ್ಲಿ ಟ್ರೇಕೆ…ಟ್ರೇಕೆ ಎಂದು ಕೂಗಿಕೊಳ್ಳುವ ಶಬ್ಧ ಬಿಟ್ಟರೆ ನರಪಿಳ್ಳೆಯ ಸುಳಿವೂ ಇರಲಿಲ್ಲ. ಎರಡೆರಡು ಮಳೆ ಅಂಗಿಗಳನ್ನು ಧರಿಸಿದರೂ ಸಹ ಮೈಯೊಳಗೆ ಹೊಕ್ಕು ಆಲಿಕಲ್ಲಿನ ಐಸಿನಂತೆ ತಣ್ಣನೇ ಕಚಗುಳಿ ಇಡುವ ಮಳೆ ನೀರು. ಮುಂದೆ ಗ್ಲಾಸ್ ಇರುವ ಹೆಲ್ಮೆಟ್ಟು ಧರಿಸಿದರೂ ಸಹ ಮುಖಕ್ಕೆ ಸೂಜಿಯಂತೆ ಚುಚ್ಚುವ ಮಳೆಯ ಹನಿಗಳು. ಆದಷ್ಟು ಬೇಗ ತಾಳಗುಪ್ಪ ಮನೆ ಸೇರಿ ಎಲ್ಲರಂತೆ ನಿದ್ರೆ ಮಾಡಿದರೆ ಸಾಕೆನ್ನುವಷ್ಟು ಸುಸ್ತು. ಇನ್ನೇನು ಒಂದೈವತ್ತು ಕಿಲೋ ಮೀಟರ್ ಹೇಗಾದರೂ ಸಾಗಿದರೆ ಮನೆಯಲ್ಲಿನ ಹಂಡೆಯಲ್ಲಿನ ಬಿಸಿನೀರನ್ನು ತಲೆಯ ಮೇಲೆ ಬಸಿದುಕೊಂಡು ಹೊಗೆಯಾಡುತ್ತಿರುವ ಮೈಯನ್ನು ಬೆಚ್ಚನೇ ಟವೆಲ್ಲಿನಲ್ಲಿ ಒರೆಸಿಕೊಳ್ಳೋಣ ಎಂದುಕೊಂಡು ಮನಸ್ಸಿನಲ್ಲೇ “ ಗಗನವು ಎಲ್ಲೋ.. ಭೂಮಿಯು ಎಲ್ಲೋ ಒಂದೂ ಅರಿಯೆ ನಾ… ಎಂದು ಗುನುಗಿಕೊಳ್ಳುತ್ತಾ ಏರು ಘಟ್ಟದ ರಸ್ತೆಯನ್ನು ಬೈಕಿನ ಎರಡನೇ ಗೇರಿಗೆ ಹಾಕಿ ಕ್ರಮಿಸತೊಡಗಿದೆ.

ಕೊಂಜವಳ್ಳಿ ದಾಟಿ ಐದಾರು ಕಿಲೋಮಿಟರ್ ಅರಳಗೋಡಿನತ್ತ ಬೈಕು ಸಾಗಿರಬಹುದು. ಬೈಕು ವಾಲಾಡಿದ ಹಾಗಾಯಿತು. ನನ್ನ ಖಾಯಂ ಸ್ನೇಹಿತನಾದ ತರ ತರದ ಇಂಜೆಕ್ಷನ್ನುಗಳು, ಸಂಗ್ರಹಿಸಿದ ದನದ ಮಾದರಿಗಳು ನನ್ನ ಪ್ರಾಕ್ಟಿಸ್ ಬ್ಯಾಗಿನಲ್ಲಿ ಬೆಚ್ಚಗೇ ಕುಳಿತಿದ್ದವು. ಈ ಬ್ಯಾಗೇನಾದರು ಜಾರಿ ಬಿದ್ದಿತೆ? ಎಂದು ಕೈಯನ್ನು ಹಿಂದೆ ಆಡಿಸಿ ನೋಡಿಕೊಂಡೆ. ಬ್ಯಾಗು ಭದ್ರವಾಗಿ ನನ್ನ ಬೈಕಿನ ಹಿಂದೆ ಕುಳಿತಿತ್ತು. ಹೊಂಡ ಗುಂಡಿ ಹೊಂದಿದ ರಸ್ತೆಗಳಲ್ಲಿ ಬೈಕು ಬೀಳದಂತೆ ತೂಗಿಸಿಕೊಂಡು ಹೋಗುವುದು ಅದೂ ರಾತ್ರಿಯಲ್ಲಿ ಒಂದು ಚಾಲೆಂಜ್. ಅದರಲ್ಲೂ ಅಂಕು ಡೊಂಕಾದ ರಸ್ತೆಯ ಪಕ್ಕದಲ್ಲೇ ಇರುವ ಕಡಿದಾದ ಪ್ರಪಾತ!!!. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಪಾತ ಸೇರಿ ಶಿವನ ಪಾದ ಸೇರುವುದು ಗ್ಯಾರಂಟಿ. ಬೈಕಿನ ಮಂದ ಬೆಳಕಿನಲ್ಲಿ, ೩-೪ ಅಡಿ ದೂರವನ್ನೇ ದೃಷ್ಠಿಸುತ್ತಾ, ಹೇಗೇಗೋ ಬ್ಯಾಲನ್ಸ್ ಮಾಡುತ್ತಾ, ಸಾಗಿದೆ. ಬೈಕಿನ ಕುರುಡು ಬೆಳಕಿಗೆ ಆಕರ್ಷಿತವಾದ ವಿವಿಧ ಬಣ್ಣದ ಹುಳಗಳು, ಭೂಮಿಯ ಕಾವಿಗೆ ಮೇಲೆದ್ದು ಸಾಯಲೆಂದೇ ಹುಟ್ಟಿದ ಪತಂಗದಂತ ಹುಳಗಳು ಮತ್ತು ಈ ಕಾಡು ಹುಳಗಳನ್ನೋ ತಿನ್ನಲೆಂದೋ ಬಂದ ಅಸಹ್ಯ ರೂಪದ ಬಾವಲಿಗಳು ಆಗಾಗ ರಪ್ ಎಂದು ಮುಖಕ್ಕೆ ರಾಚಿ ಬೈಕಿನ ಬ್ಯಾಲನ್ಸ್ ತಪ್ಪಿಸುತ್ತಿದ್ದವು. “ಕುಂಬ್ಳಜ್ಜಿ” ಎಂದು ಹಳ್ಳಿ ಭಾಷೆಯಲ್ಲಿ ಕರೆಯುವ ಹಸಿರು ಕೆಂಪು ಬಣ್ಣದ ದುರ್ವಾಸನಾಯುಕ್ತ ಜೀರುಂಡೆಗಳು ಬೈಕಿನ ಕುರುಡು ಬೆಳಕಿಗೆ ಆಕರ್ಷಿತವಾಗಿ ಕೈಗೆ ತಾಕಿ ದಿನವಾದರೂ ಉಳಿಯುವ ಅದರ ಅಸಹ್ಯ ವಾಸನೆ ದೂರ ಕಳೆದಂತೆ ಗಮ್ಯ ತಲುಪುವುದು ಇನ್ನೂ ಎಷ್ಟು ಹೊತ್ತೋ? ಎಂದು ರೇಜಿಗೆ ಹುಟ್ಟಿಸಿದವು. ಕಾಡು ದಟ್ಟವಾದಂತೆ ಕಾಡಿನ ಹತ್ತು ಹಲವಾರು ಸಹಸ್ರ ಕ್ರಿಮಿ ಕೀಟ ಕೋಟಿಗಳು ಜುಗಲ್ ಬಂದಿಯಂತೆ ಹೊರಡಿಸುವ ತರತರದ ಶಬ್ಧಗಳು ಕಿವಿಯನ್ನು ಸೇರಿ ಭೈರಪ್ಪನವರ ಕಾದಂಬರಿಯನ್ನು ಓದಿದ ನಂತರ ಆಗುವ ವಿಷಾದ ಭಾವವನ್ನು ಹೆಚ್ಚಿಸಿದವು.

ಒಂದೇ ಸಮನೇ ಆಕಾಶಕ್ಕೆ ತೂತಾಗಿದೆಯೇನೋ ಎಂಬಂತೆ ಭೂಮಿ ಮುನಿಸಿಕೊಂಡಾಗ ಸಂತೈಸುವ ರೀತಿಯಲ್ಲಿ ರಪ ರಪ ಎಂದು ಒಂದೇ ಸಮನೆ ಬಿಟ್ಟು ಬಿಡದೇ ಬರುವ ಮಳೆರಾಯನ ಆರ್ಭಟ ಜೋರಾಯಿತು. ಮೇಯುವ ಡ್ಯೂಟಿ ಮಾಡಲು ಹೊರಟ ಕಾಡು ಕೋಣಗಳಿಗೇನೂ ಕೊರತೆ ಮಲೆನಾಡಿನಲ್ಲಿ ಇರಲ್ಲ. ಕಾಡುಕೋಣಗಳು ಕಾಡೆಮ್ಮೆಗಳು ನನ್ನ ಖಾಯಂ ಸ್ನೇಹಿತರು. ಅವು ಸಾಗರ-ಕಾರ್ಗಲ್ ರಸ್ತೆಯಲ್ಲಿ ಬಹಳ ಸಾಮಾನ್ಯವಾಗಿ ದರ್ಶನ ನೀಡುತ್ತಲೇ ಇರುತ್ತವೆ. ಅವುಗಳ ಪಾಡಿಗೆ ಮೇಯುತ್ತಾ ಗುಡ್ಡದ ತುದಿಯಲ್ಲಿ ಕಾಣುತ್ತಾ ಇರುವುದರಿಂದ ನಮಗೆಲ್ಲಾ ಅದು ಮಾಮೂಲಿ ದೃಶ್ಯ. ಮೈಯೆಲ್ಲ ದಷ್ಠಪುಷ್ಠವಾಗಿ ತುಂಬಿಕೊಂಡು ಸಕಲ ಜೀವಕಳೆಯನ್ನೇ ಮುಖದಲ್ಲಿ ಹೊಂದಿರುವುದನ್ನು ನೋಡಲು ಚಂದ. ಅದರಲ್ಲೂ ಕೆಲವು ಕಾಡೆಮ್ಮೆಗಳಿಗೆ ಕುತ್ತಿಗೆಯಲ್ಲಿ ಬಿಳಿಪಟ್ಟಿ, ಹಣೆಯ ಮೇಲೆ ಬಿಳಿ ಚಂದ್ರನಂತ ಗುರುತು.

ಫೋಟೋ ಕೃಪೆ : ಅಂತರ್ಜಾಲ

ಅಲ್ಲಿನ ಅಕರಾಳ ವಿಕರಾಳ ತಿರುವಿನ ಹುಡುಗಿಯು ಜಡೆಗೆ ಹಾಕುವ ಹೇರ್ ಪಿನ್ನು ತಿರುವುಗಳು ಮತ್ತು ಇದ್ದಕ್ಕಿದ್ದ ಹಾಗೇ ದುತ್ತೆಂದು ಎದುರಾಗುವ ಘಟ್ಟ ಬೈಕಿನ ವೇಗವನ್ನು ಗಣನೀಯವಾಗಿ ಕಡಿಮೆ ಮಾಡಿದವು. ಇದ್ದಕ್ಕಿದ್ದ ಹಾಗೇ ಕೊಂಜವಳ್ಳಿಗೆ ಹಿಂದೊಮ್ಮೆ ಬಂದಾಗ ಅಲ್ಲಿನ ಗೋಪಾಲಕರೊಬ್ಬರು ಹೇಳಿದ ಕಥೆ ನೆನಪಿಗೆ ಬಂತು.ಹೀಗೆಯೇ ಕತ್ತಲ ರಾತ್ರಿಯಲ್ಲಿ ಹೇರ್ಪಿನ್ ಕರ್ವ್ ನೋಡದೇ ಪೆಡಲ್ ಒತ್ತದ್ದರಿಂದ ಪ್ರಯಾಣಿಕರಿರುವ ಬಸ್ ಪ್ರಪಾತಕ್ಕೆ ಕೆಲವು ವರ್ಷಗಳ ಹಿಂದೆ ಬಸ್ಸೊಂದು ಗೆ ಬಿದ್ದು ೧೦-೧೫ ಜನ ಶಿವನ ಪಾದ ಸೇರಿದರೆಂದೂ ಮತ್ತು ಅವರ ಅತೃಪ್ತ ಆತ್ಮ ಬೈಕುಗಳ ಹಿಂದೆ ಸವಾರಿ ಮಾಡುತ್ತದೆಯೆಂದೂ ಆಗೂ ಬೈಕಿನ ಕ್ಯಾರಿಯರ್ ಹಿಡಿದು ಜಗ್ಗುತ್ತದೆಯೆಂದೂ, ಇದ್ದಕ್ಕಿದ್ದಂತೆ ಬೈಕಿನ ಮೇಲೆ ಸಹಸ್ರ ಕಿಲೋದ ಕಲ್ಲನ್ನು ಹೇರಿದಂತೆ ಭಾರವಾಗುತ್ತದೆಯೆಂದೂ ಆತ ಹೇಳುತ್ತಿದ್ದದ್ದು ನೆನಪಾಯಿತು. ಹಿಂದೆ ತಿರುಗಿದರೆ ದೆವ್ವದ ವಿಕಾರ ಮುಖ ಕಾಣುತ್ತದೆಯೆಂದೂ, ಅದು ಬೈಕಿನ ಹಿಂದೆ ಕುಳಿತು ನಾಟಿ ಕೋಳಿಯಂತೆ ಕತ್ತು ಮುರಿದು ರಕ್ತ ಕಾರಿಸಿ ಸಾಯುಸುತ್ತದೆಯೆಂದೂ ಆತ ಯಕ್ಷಗಾನದ ಮಹಿಷಾಸುರನಂತೆ ಕುಂಜಾಲು ರಾಮಕೃಷ್ಣ ನಾಯ್ಕರ ತರ ಅಂಗಚೇಷ್ಟೆಯೊಂದಿಗೆ ಅಕರಾಳ ವಿಕರಾಳ ಮುಖ ಮಾಡಿಕೊಂಡು ಹೇಳುತ್ತಿದ್ದುದು ನೆನಪಾಯಿತು.ಇದೆಲ್ಲಾ ಇದ್ದಕ್ಕಿದ್ದ ಹಾಗೇ ನೆನಪಾಗಿ ಹಿಂದೆ ತಿರುಗದೇ ಮುಂದೆ ಹೋಗತೊಡಗಿದೆ. ಆದರೆ ಹಿಂದೆ ತಿರುಗಿ ಆ ದೆವ್ವ ವಿಕಾರ ರೂಪವನ್ನು ನೋಡಲೇ ಬೇಕೆಂಬ ಅದಮ್ಯ ದುಷ್ಟ ಆಸೆಯನ್ನು ಹತ್ತಿಕ್ಕಿಕೊಂಡು ಮುಂದೆ ಗಾಡಿ ಓಡಿಸತೊಡಗಿದೆ.

ಅಷ್ಟರಲ್ಲೇ ಗಾಡಿಯನ್ನು ಹಿಂದಿನಿಂದ ಜಗ್ಗಿದಂತೆ ಆಗುವುದು ಜಾಸ್ತಿಯಾಗಿ ಮುಂದೆ ಸಾಗುವುದೇ ಕಷ್ಟವಾಯಿತು. ಉಪೇಂದ್ರನ “ಶ್” ಸಿನಿಮಾದ ದೆವ್ವದಂತೆ ಯಾರೋ ಬಲಶಾಲಿಯೊಬ್ಬರು ರಸ್ತೆಗೆ ದಿಟ್ಟನೆಯ ಗಟ್ಟಿಕಾಲು ಕಾಲು ತಾಕಿಸಿ ಬೈಕಿನ ಕ್ಯಾರಿಯರನ್ನು ಎರಡೂ ಕೈಯಲ್ಲಿ ಹಿಡಿದು ಬೈಕನ್ನು ಒಂದಿಂಚೂ ಮುಂದೆ ಸಾಗದಂತೆ ಜಗ್ಗುತ್ತಿದ್ದಂತೆ ಭಾಸವಾಯಿತು. ಸ್ವಲ್ಪ ಹೊತ್ತು ’ಡು..ಡು..ಡ”.. ಎಂದು ಕನವರಿಸಿದ ಬೈಕು “ಗುಡ.. ಗುಡ ಎಂದು ಶಬ್ಧ ಮಾಡುತ್ತಾ ಗಂಟಲು ಬೇನೆಯಿಂದ ಕೊನೆಯುಸಿರೆಳೆಯುವ ಎಮ್ಮೆ ’ಗೊರ್. ಗೊರ್.. ಎಂದು ಅಂತಿಮ ಶಬ್ಧ ಹೊರಡಿಸಿ ತಲೆಯನ್ನು ಪಕ್ಕಕ್ಕೆ ಚಲ್ಲುವಂತೆ, ಕಣ್ಣಿನ ಚಲನೆ ನಿಂತು ಕೊಟ್ಟಿಗೆಯ ತೊಲೆಯ ಮೇಲೆ ಕೀಲಿಸುವಂತೆ ನಿಂತು ಬಿಟ್ಟಿತು. ಇನ್ನು ಮುಂದೆ ಬೈಕು ಸಾಗುವುದೇ ಇಲ್ಲ ಎಂದು ಗೊತ್ತಾದ ಮೇಲೆ ಅದನ್ನು ಜಗ್ಗಿ ಹಿಡಿದ ವಸ್ತು, ವ್ಯಕ್ತಿ ಯಾರೆಂದು ನೋಡಲೇ ಬೇಕೆಂದುಕೊಂಡು ಹೆದರುತ್ತಾ ನಿಧಾನವಾಗಿ ಯಾವಾಗಲೂ ಮುಗಿಯದ “ಮನೆಯೊಂದು ಮೂರು ಬಾಗಿಲು, ಅಗ್ನಿ ಸಾಕ್ಷಿ, ಕುಲವಧು” ತರದ ನಾನಾ ಧಾರಾವಾಹಿಗಳ ಹೆಗ್ಗಣ ಇಲಿ ತಿಂದ ಬೆಕ್ಕಿನಂತೆ ತುಟಿಗೆ ಮಣ ಲಿಪ್ಪುಸ್ಟಿಕ್ಕು ಮೆತ್ತಿಕೊಂಡ ಸಣಕಲು ಹೀರೋಯಿನ್ನುಗಳು ಅತ್ತೆಯ ಕಡೆ ಇಡೀ ವಾರ ಗತ್ತಿನ ಲುಕ್ಕು ಕೊಡುವಂತೆ ಕತ್ತು ತಿರುಗಿಸಿ ಹಿಂದೆ ತಿರುಗಿಸಿ ನೋಡಿದೆ. ಏನಾಗಬಾರದು ಅಂದುಕೊಂಡಿದ್ದೆನೋ ಅದು ಆಗಿ ಹೋಗಿತ್ತು!!. ಮಹಾ ಪ್ರಮಾದ ಜರುಗಿ ಹೋಗಿತ್ತು !! ನಾನು ಊಹಿಸದ ನಡೆಯಬಾರದ ಘಟನೆ ನಡೆದು ಹೋಗಿತ್ತು..!!

ನನ್ನ ಬೈಕಿನ ಹಿಂದಿನ ಟಯರು ಪಂಕ್ಚರ್ ಆಗಿ ಮಹಾಭಾರತದಲ್ಲಿ ಕರ್ಣನ ರಥ ಯುದ್ಧಭೂಮಿಯ ರಕ್ತ ಮಿಶ್ರಿತ ಕೆಸರಿನಲ್ಲಿ ಹೂತಂತೆ ನೆಲಕ್ಕೆ ಕುಸಿದು ಕುಳಿತಿತ್ತು. ದೆವ್ವವನ್ನು ಕಲ್ಪಿಸಿಕೊಂಡು ಹಿಂದೆ ನೋಡದೇ ಬಂದಿದ್ದಕ್ಕೆ ಟಯರು ಹಾಕುವ ವೀಲು ಬೆಂಡಾಗಿ ಪಾರ್ಶ್ವ ಹೊಡೆದ ವ್ಯಕ್ತಿಯ ಸೊಟ್ಟ ಬಾಯಿಯಂತಾಗಿತ್ತು. ತಲೆಯಲ್ಲಿ ಒಮ್ಮೆಯೇ ಕಾರ್ಮೋಡ ಕವಿದು ಮನಸ್ಸಿಗೆ ಮಂಕುಬೂದಿ ಎರಚಿದಂತಾಯಿತು. ಈ ಕತ್ತಲ ರಾತ್ರಿಯಲ್ಲಿ ಧೋ…ಧೋ.. ಎಂದು ಎಡೆಬಿಡದೇ ಸುರಿಯುವ ಮಳೆಯಲ್ಲಿ ಈ ಬೈಕು ಪಂಕ್ಚರ್ ಆದರೆ ಮಹಾ ಪಜೀತಿ. ದಬ್ಬಿಕೊಂಡು ಹೋಗುವ ಹಾಗೂ ಇಲ್ಲ. ಪಂಚರ್ ಆದರೂ ಬೈಕನ್ನು ನಿಲ್ಲಿಸದೇ ಓಡಿಸಿಕೊಂಡು ಬಂದಿದ್ದರಿಂದ ಟಯರಿನೊಳಗಿರುವ ರಬ್ಬರ್ ಟ್ಯೂಬು ಚಿಂದಿ ಚಿತ್ರಾನ್ನವಾಗಿತ್ತು.

ಇದ್ದಕ್ಕಿದ್ದ ಹಾಗೇ ಬೈಕು ನಿಂತಿದ್ದರಿಂದ ಅದರ ಕುರುಡು ಬೆಳಕೂ ಸಹ ನಿಂತು ಹೋಗಿ ಕತ್ತಲು ಗವ್ವೆಂದು ಅಡರಿತು. ತಣ್ಣನೇ ಹಾವಿನಂತೆ ನೀಳವಾಗಿ ಮೈಚಾಚಿ ಮಲಗಿದ ರಸ್ತೆಯಲ್ಲಿ ಮಳೆಯ ನಿರ್ಜನ ರಾತ್ರಿಯಲ್ಲಿ ಪಂಕ್ಚರಾದ ಬೈಕಿನ ಹ್ಯಾಂಡಲ್ಲು ಹಿಡಿದುಕೊಂಡು ಮಹಾಭಾರತದ ಅಭಿಮನ್ಯುವಿನಂತೆ ಒಬ್ಬಂಟಿಯಾಗಿ ರಸ್ತೆಯ ಬದಿಗೆ ನಿಂತಿದ್ದೆ. ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದೆ. ಈ ರಸ್ತೆಯಲ್ಲಿ ಬಸ್ಸು, ಲಾರಿ, ಕಾರುಗಳು ೮ ಗಂಟೆಯ ಮೇಲೆ ಬರುವ ಮಾತೇ ಇಲ್ಲ. ಆದರೂ ಯಾರಾದರೂ ಬಂದಾರು ಎಂದು ರಸ್ತೆಯ ಬದಿಯೇ ಕಾದು ನೋಡೋಣ ಎಂದು ಬೈಕಿನ ಮುಖ್ಯ ಸ್ಟ್ಯಾಂಡ್ ಹಾಕಿ ನಿಲ್ಲಿಸಿ ನಾನು ಎಲ್ಲಿದ್ದೇನೆ? ಎಂದು ಗಮನಿಸಿಕೊಳ್ಳತೊಡಗಿದೆ. ಮಿಂಚಿನ ಬೆಳಕಾದಾಗ ಗಮನಿಸಿಕೊಂಡೆ. ಕೊಂಜವಳ್ಳಿಯಿಂದ ೮ ಕಿಲೋಮೀಟರ್ ಬಂದಿರಬೇಕು. ಮಳೆ ಬೇರೆ ಕುಂಭದ್ರೋಣವಾಗಿ ಸುರಿಯುತ್ತಿದೆ. ಸುಮಾರು ಒಂದು ಗಂಟೆ ಕಾದರೂ ಯಾವುದೇ ನರಪಿಳ್ಳೆಯ ಸುಳಿವೇ ಇಲ್ಲ. ಬಹುಶ: ಮಳೆಯ ರಭಸಕ್ಕೆ ಮನೆಯಲ್ಲೇ ಎಲ್ಲಾರೂ ಗಟ್ಟಿಯಾಗಿ ತಳವೂರಿ ಹಲಸಿನ ಬೀಜ, ಗೇರು ಬೀಜಗಳನ್ನು ಮಳೆಗಾಲದಲ್ಲಿ ಕಂಬಳಿಗಳನ್ನು ಒಣಹಾಕಲು ಬಳಸುವ ನೇತಾಡುವ ಮಂಚದಂತಿರುವ ಹೊಡಸಲಿನ ಅಡಿಯ ಬೆಂಕಿಯ ಕೆಂಡದಲ್ಲಿ ಬೇಯಿಸಿ ತಿನ್ನುತ್ತಾ ಡರ್ರ್ ಎಂದು ತೇಗಿ ಮರುದಿನ ತಾಳಗುಪ್ಪದ ಹಳೆಯ ರೈಲು ಇಂಜಿನ್ನಿನಂತೆ “ಟುಸ್.. ಟುಸ್ ಡ್ರುಸ್.. ಎಂದು ಹೂಸು ಬಿಟ್ಟು “ಹೂಸುವಾಸನೆ” ಯನ್ನು ಆಘ್ರಾಣಿಸುವುದನ್ನು ಕಲ್ಪಿಸಿಕೊಂಡು ಅವರ ಬಗ್ಗೆ ಸಿಟ್ಟು ಬಂತು. ಬೇರೆ ದಿನಗಳಲ್ಲಿ ಸುಖಾ ಸುಮ್ಮನೆ ಬೈಕನ್ನು ಕೆಲ ಹಿರಿಯರು ಹೇಳುವಂತೆ ಕುಂಡೆಯಡಿ ತುರುಕಿಕೊಂಡು ಊರೆಲ್ಲ ಇಸ್ಪೀಟಾಡಲು ಅಂಡಲೆಯುವ ಯಾರೂ ಯುವಕ ಮಹಾಶಯರು ಬರಬಾರದೇ ಅಂದುಕೊಂಡೆ. ಭಟ್ಕಳದಿಂದ ಬರುವ ಕೊನೆಯ ಬಸ್ಸೂ ಆಗಲೇ ಹೊರಟು ಹೋಗಿ ಬಹಳ ಕಾಲವಾಗಿತ್ತು.

ಫೋಟೋ ಕೃಪೆ : ಅಂತರ್ಜಾಲ

ಬೈಕನ್ನು ಸ್ಟಾರ್ಟು ಮಾಡಿ ಅದರ ಬೆಳಕಿನಲ್ಲಾದರೂ ಇದ್ದರೆ ಕಾಡು ಪ್ರಾಣಿಗಳು ದೂರ ಹೋಗಬಹುದು ಅಂದುಕೊಂಡೆ. ಐದಾರು ಸಲ ಕಿಕ್ಕು ಹಾಕಿದರೂ ಬೈಕು ಸ್ಟಾರ್ಟ್ ಆಗಲೇ ಇಲ್ಲ. ಹಾಗೆಯೇ ಬೈಕನ್ನು ಅಲುಗಾಡಿಸಿ ಅದರ ಹೊಟ್ಟೆಯಲ್ಲಿ ಪೆಟ್ರೋಲ್ ಎಂಬ ಜೀವದ್ರವ ಇದೆಯೇ ಎಂದು ನೋಡಿದೆ. ಬೈಕಿನ ಇಂಧನ ಸಂಪೂರ್ಣ ಖಾಲಿಯಾಗಿಯೇ ಅದು ನಿಂತು ಹೋಗಿತ್ತು. ಕಾರ್ಗಲ್ಲಿಗೆ ಹೋಗಿ ಯಾರಿಗಾದರೂ ದಮ್ಮಯ್ಯ ಗುಡ್ಡೆ ಹಾಕಿ ಜೀಪು ಬಾಡಿಗೆ ಮಾಡಿಸಿಕೊಂಡು ಅದರ ಟೈರು ಸರಿಪಡಿಸಿ ಒಯ್ಯಬಹುದೆಂಬ ಕೊನೆಯ ಆಸೆಯೂ ಕಮರಿ ಬತ್ತಿ ಹೋಯಿತು. ಹೀಗಿದ್ದರೂ ಲೈಟು ಹಾಕಿಕೊಂಡೇ ಯಾವುದಾದರೂ ವಾಹನ ಬರುತ್ತವೆ, ಆಗ ಕೈ ಮಾಡಿ ವಿನಂತಿಸಿ ನಿಲ್ಲಿಸಿ ಹತ್ತಿಕೊಂಡು ಕಾರ್ಗಲ್ಲು ತಲುಪಿದರಾಯಿತು. ಇದ್ದಕ್ಕಿದ್ದ ನನ್ನ ವೇಷದ ಕಡೆ ಗಮನ ಹರಿಯಿತು. ತಲೆಗೆ ಹೆಣಭಾರದ ಕಲ್ಟೋಪಿ (ಹೆಲ್ಮೆಟ್), ಎರಡೆರಡು ಮಳೆ ಅಂಗಿ, ಯಕ್ಷಗಾನದ ರಾಕ್ಷಸ ವೇಷದಂತಿತ್ತು ನನ್ನ ಅವತಾರ. ಇದನ್ನು ನೋಡಿದರೆ ಗಾಬರಿಯಾಗಿ ಯಾವುದೇ ವಾಹನ ಸವಾರರು ದೆವ್ವ ಮೆಟ್ಟಿದಂತೆ ಬಾಲ ಮೆಟ್ಟಿಸಿಕೊಂಡ ನಾಯಿಯಂತೆ ’ಕಯಕ್” ಎಂದರಚಿ ನಿಲ್ಲಿಸದೇ ಹೋಗುವುದು ಖಚಿತವಾಗಿತ್ತು. ಹಾಗಂತ ಮಳೆಯಂಗಿ ತೆಗೆದರೆ ರಪ ರಪ ಎಂದು ರಾಚುತ್ತಿರುವ ಮಳೆಗೆ ಸಿಕ್ಕಿ ಮೈಯೆಲ್ಲಾ ಒದ್ದೆ ಮಾಡಿಕೊಂಡು ಚಳಿಯಲ್ಲಿ ಗಡ ಗಡ ಎಂದು ನಡುಗಬೇಕಿತ್ತು. ಈ ಎಲ್ಲ ಕಸರತ್ತುಗಳೇ ಬೇಡ, ಬೆಳಗಿನವರೆಗೂ ಕಾಯುವುದು ಅನಿವಾರ್ಯ ಎಂದು ಬೈಕನ್ನು ಬೀದಿ ಬದಿಗೆ ಹಾಕಿ ದೊಡ್ಡ ಆಲದ ಮರದ ತರದ ಮರವೊಂದರ ಅಡಿ ಆಶ್ರಯ ಪಡೆದೆ.

ಆಗ ರಾತ್ರಿ ೯.೩೦ ರಿಂದ ೧೦ ಘಂಟೆಯಿರಬಹುದು. ಒಬ್ಬನೇ ಮನುಷ್ಯ ದಟ್ಟ ಕಾಡಿನ ಮಧ್ಯೆ ನಿರ್ಜನ ಪ್ರದೇಶದಲ್ಲಿ ವಿಶಾಲವಾದ ಮರದಡಿ ನಿಂತರೆ ಏನೇನೋ ಹಳೆಯ ಕಥೆಗಳೆಲ್ಲಾ ನೆನಪಾಗಿ ಬಿಡುತ್ತವೆ. ಅನಂತನಾಗ್ ನಟಿಸಿರುವ “ನಾನಿನ್ನ ಬಿಡಲಾರೆ” ಸಿನಿಮಾದ ದೃಶ್ಯಗಳು, ತರಾವರಿ ಹಾಲಿವುಡ್ ಹಾರರ್ ಸಿನಿಮಾದ ವಿವಿಧ ದೃಶ್ಯಗಳು ನೆನಪಿಗೆ ಬಂದು ಗಾಬರಿಗೊಳಿಸಿದವು. ಇದ್ದಕ್ಕಿದ್ದ ಹಾಗೇ ಯಾರ್ಯಾರ ಮೇಲೋ ಸಿಟ್ಟು ಉಕ್ಕಿ ಬಂತು. ಹಾಳಾದ ಬೈಕು ಈ ದಿನವೇ ಕೈಕೊಡಬೇಕೆ? ದನ ಈವತ್ತೇ ಸಾಯಬೇಕಿತ್ತೇ? ಯಾವಾಗಲೂ ನನ್ನ ಜೊತೆಯೇ ನೆರಳಾಗಿ ಇರುವ ನನ್ನ ಡಿ ದರ್ಜೆ ನೌಕರ ಶಿಷ್ಯನನ್ನು ಕರೆದುಕೊಂಡು ಬರದೇ ರಿಸ್ಕು ಮಾಡಿಕೊಂಡಿದ್ದಕ್ಕೆ ನನ್ನನ್ನೇ ಹಳಿದುಕೊಂಡೆ. ನನ್ನ ಬೈಕಿನಲ್ಲಿ ಸಾಮಾನ್ಯವಾಗಿ ಪಂಕ್ಚರ್ ಹಾಕುವ ಕೆಂಪನೇ ಘಮ ಘಮ ಎನ್ನುವ ಸೊಲ್ಯುಷನ್, ಗುಂಡಾಗಿ ಕತ್ತರಿಸಿದ ಪಂಕ್ಚರ್ ರಬ್ಬರು, ಪೆಡ್ಡಲ್ ಪಂಪ್ ಇರುತ್ತಿತ್ತು. ಆದರೆ ಡಿಕ್ಕಿ ಬಾಕ್ಸಿನಲ್ಲಿ ಅದನ್ನು ಇಟ್ಟರೆ ಅಲ್ಲಿರುವ ಇಂಜೆಕ್ಷನ್ ವಾಯಲ್ಲುಗಳು ನುಚ್ಚು ನೂರಾಗುತ್ತಿದ್ದವು. ಅದರ ಗಡ ಗಡ ಶಬ್ಧದಿಂದ “ಡಾಕ್ಟ್ರ ಚಕ್ಕಡಿ ಬುಲ್ಲೆಟ್ ಬಂತ್ರೋ..ದಾರಿ ಬಿಡ್ರೋ” ಎಂದು ಸ್ಥಳೀಯ ಪಡ್ಡೆ ಹುಡುಗರೂ ಆಡಿಕೊಳ್ಳುವಂತಾಗಿ ಆ ತರಹೇವಾರಿ ಸಾಮಗ್ರಿಗಳೆಲ್ಲಾ ಆಸ್ಪತ್ರೆಯ ಸ್ಟೋರ್ ರೂಂ ಸೇರಿದ್ದವು. ಅವೆಲ್ಲಾ ಇದ್ದರೂ ವೀಲ್ ರೀಮ್ ಹಾಳಾಗಿ ಹೋಗಿದ್ದರಿಂದ ಪಂಚರ್ ಹಾಕುವ ಸಾಧ್ಯತೆ ವಿರಳವಾಗಿತ್ತು.

ಇದ್ದಕ್ಕಿದ್ದ ಹಾಗೇ ಸಿಕ್ಕಾಪಟ್ಟೆ ಹಸಿವಾಗತೊಡಗಿತು. ಹೌದು. ಮಧ್ಯಾಹ್ನ ಲಾಂಚ್ ತಪ್ಪಿ ಹೋಗುತ್ತದೆ ಎನ್ನುವ ಭರದಲ್ಲಿ ಬೇಗ ಗಬ ಗಬನೇ ನಾಯಿ ತಿಂದ ಹಾಗೇ ತಿಂದಿದ್ದೆ. ಆದರೆ ತಿನ್ನಲು ಏನಿದೆ ಅಲ್ಲಿ? ಸ್ವಲ್ಪ ಹೊತ್ತಿನಲ್ಲಿ ಬಹುಶಃ ದೇಹದಲ್ಲಿರುವ ಅಲ್ಪ ಸ್ವಲ್ಪ ಫ್ಯಾಟ್ ಕರಗಿತು ಅನಿಸುತ್ತೆ. ಹಸಿವು ಕ್ರಮೇಣ ಮಾಯವಾಯಿತು. ದೂರದಲ್ಲೆಲ್ಲೋ ಅಬ್ಬರಿಸುವ ಶಬ್ಧ ಕೇಳಿಸಿತ್ತು. ಬಹುಶ: ಹುಲಿಯದೇ ಇರಬೇಕು. ಅಲ್ಲೆಲ್ಲ ಹುಲಿಗಳಿದ್ದವು. ಎಷ್ಟೆಂದರೂ ಶರಾವತಿ ಅಭಯಾರಣ್ಯವಲ್ಲವೇ? ಹುಲಿ, ಕಡಿವೆ, ಕರಡಿ, ಕಾಡುಕೋಣ, ಹಂದಿ, ನರಿ, ತೋಳ, ಕಿರುಬ ಇತ್ಯಾದಿ ಸಕಲ ಪ್ರಾಣಿ ಸಂಪತ್ತು ಅಲ್ಲಿದೆ ಎಂದು ಕಾರ್ಗಲ್ಲಿನ ಹತ್ತಿರ ಅರಣ್ಯ ಇಲಾಖೆಯವರು ಹಾಕಿದ ಬೋರ್ಡ್ ನೋಡಿದ ನೆನಪಾಯ್ತು. ಪ್ರಾಣಿಗಳಿಗೇನೋ ಇಲ್ಲಿ ಅಭಯ. ಆದರೆ ನನಗೆ ತುಂಬಾ ಭಯ. ಒಂದು ವಿಷಯ ನನಗೆ ಖಚಿತವಾಗಿ ಗೊತ್ತಿತ್ತು. ಕಾಡು ಪ್ರಾಣಿಗಳಿಗೆ ಮನುಷ್ಯ ತೊಂದರೆ ಕೊಡದ ಹೊರತು ಅವು ದಾಳಿ ಮಾಡಲ್ಲ ಅವುಗಳಿಗೆ ನಾಲ್ಕೈದು ದಿನದಿಂದಲೂ ಬೇಟೆ ಸಿಗದಿದ್ದರೆ ಮಾತ್ರ ವಿವೇಚನೆ ಕಳೆದುಕೊಂಡು ಮನುಷ್ಯನ ಮೇಲೆ ದಾಳಿ ಮಾಡುವುದಿದೆ. ಘರ್ಜನೆ ಮಾಡಿದ ಹುಲಿ ಹಸಿದಿದೆಯೋ ಅಥವಾ ಮನುಷ್ಯನ ತೊಂದರೆಯಿಂದ ಧೃತಿಗೆಟ್ಟಿದೆಯೋ ಯಾರಿಗೆ ಗೊತ್ತು? ಈ ಕಡೆ ಬರದಿದ್ದರೆ ಸಾಕು ಅಂದುಕೊಂಡೆ. ಅದು ಬಂದರೂ ಹೆದರಿಸಲು ನನ್ನ ಹತ್ತಿರ ಒಂದು ಚಿಕ್ಕ ಬೆಂಕಿಪೊಟ್ಟಣವೂ ಇರಲಿಲ್ಲ. ಕ್ರಮೇಣ ಹುಲಿಯ ಶಬ್ಧ ಕಡಿಮೆಯಾಗುತ್ತಾ ಮಾಯವಾಯಿತು. ಬಹುಶಃ ಅಷ್ಟು ಹೊತ್ತಿಗೆ ರಾತ್ರಿ ೧೨ ಘಂಟೆಯಾಗಿರಬೇಕು. ನನ್ನ ಕಣ್ಣುಗಳೂ ಕಾಡಿನ ಕಾರ್ಗತ್ತಲೆಗೆ ಹೊಂದಿಕೊಂಡಿದ್ದವು. ಅಲ್ಪ ದೂರದ ವರೆಗೆ ಮಸುಕು ಮಸುಕಾಗಿ ಮರ ಗಿಡಗಳ ಬುಡಗಳು ಕಾಣುತ್ತಿದ್ದವು. ಸಮಯ ಬಹಳ ನಿಧಾನವಾಗಿ ಸಾಗುತ್ತಿತ್ತು. ಕೆಲಸದಲ್ಲಿದ್ದರೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ಆದರೆ ಇಲ್ಲಿ ಪ್ರತಿಕ್ಷಣವೂ ಒಂದೊಂದು ಘಂಟೆಯಂತೆ ಭಾರಿ ನಿಧಾನದಿಂದ ಸಾಗುತ್ತಿತ್ತು. ನಿಂತು ನಿಂತು ಕಾಲುಗಳು ಕಥೆ ಹೇಳುತ್ತಿದ್ದವು. ಕುಳಿತುಕೊಂಡು ಆರಾಮವಾಗಿ ವಿರಮಿಸಲು ಅದೇನು ಪಾರ್ಕೇ? ಅಲ್ಲೇ ಇದ್ದ ಒಂದೆರಡು ಸಣ್ಣ ಸಣ್ಣ ಕಲ್ಲುಗಳನ್ನು ಕೂಡಿಸಿಕೊಂಡು ಕುಳಿತುಕೊಂಡೆ. ಇದ್ದಕ್ಕಿದ್ದ ಹಾಗೆ ಯೋಚನೆಯೊಂದು ಬಂತು. ಇಲ್ಲಿಂದ ಕಾಲ್ನಡಿಗೆಯಲ್ಲಿ ನಡೆದು ಕಾರ್ಗಲ್ಲಿನವರೆಗೆ ಹೋದರೆ ಹೇಗೇ? ಎಂದುಕೊಂಡೆ. ಆದರೆ ಕೂಡಲೇ ಇದೊಂದು ವ್ಯರ್ಥ ಕಸರತ್ತು ಎಂದು ಗೊತ್ತಾಯಿತು.ನಡೆದು ನಡೆದು ಸುಸ್ತಾಗುವುದು ಬಿಟ್ಟರೆ ಕಾರ್ಗಲ್ ಇಲ್ಲಿಂದ ಬಹಳ ದೂರವಿರುವುದರಿಂದ ತಲುಪುವ ಹೊತ್ತಿಗೇ ಬೆಳಗಾಗಿ ಬಿಡುತ್ತದೆ. ಅಲ್ಲದೇ ಯಾವುದೇ ವಾಹನ ಕಾರ್ಗಲ್ಲಿಂದ ಭಟ್ಕಳಕ್ಕೆ ಅಥವಾ ಭಟ್ಕಳದಿಂದ ಸಾಗರಕ್ಕೆ ಹೋಗುವಾಗ ನಾನಿದ್ದ ಸ್ಥಳದಿಂದಲೇ ಹೋಗಬೇಕು. ಆ ವಿಚಾರ ಬಿಟ್ಟು ಬೆಳಗಾಗುವವರೆಗೂ ಇಲ್ಲೇ ಇದ್ದು ಮುಂದೇನಾಗುತ್ತೋ ನೋಡಿಕೊಳ್ಳೋಣ ಎಂದುಕೊಂಡೆ.

ಫೋಟೋ ಕೃಪೆ : ಅಂತರ್ಜಾಲ

ಮಳೆ ಮಾತ್ರ ಬಿಡದೇ ಹೊಡೆಯುತ್ತಿತ್ತು. ಸಾಗರದ ಮಳೆಯೇ ಹಾಗೆ. ಕಾರ್ಗಲ್ಲು ದಾಟಿದ ನಂತರ ಅದರ ಸಾಂದ್ರತೆ ದಟ್ಟವಾಗುತ್ತದೆ. ಹಾಗೆಯೇ ಭಟ್ಕಳದೆಡೆ ಸಾಗುತ್ತಿರುವಂತೆ ಮಳೆ ಜಾಸ್ತಿಯಾಗುತ್ತಾ ಹೋಗುತ್ತದೆ. ನಿದ್ರೆ ಜೋರಾಗಿ ಬರುತ್ತಿತ್ತು. ನಿದ್ರೆ ಬಂದು ಬಿಟ್ಟರೆ ಕಾಡು ಪ್ರಾಣಿಗಳು ದಾಳಿ ಮಾಡುವ ಅವಕಾಶ ಜಾಸ್ತಿ ಇತ್ತು. ಆದರೆ ರಾತ್ರಿ ಕಳೆದಂತೆ ಕಣ್ಣ ರೆಪ್ಪೆಗಳು ಭಾರವಾಗಿ ಮುಚ್ಚಿಕೊಳ್ಳತೊಡಗಿದವು. ಹಾಗೆಯೇ ಕುಕ್ಕರಗಾಲಿನಲ್ಲೇ ಜೋಂಪು ತಗಲಿಯೇ ಬಿಟ್ಟಿತು. ಸ್ವಲ್ಪ ಎಚ್ಚರವಾದದ್ದು ಒಂದು “ಹೆ..ಹೆ.’ಹೆ. ಎಂದು ಕೆನೆಯುವ ತರದ ವಿಕಾರ ವಿಚಿತ್ರ ಶಬ್ಧದಿಂದ. ಸ್ವಲ್ಪವೂ ಮಿಸುಕಾಡದೇ ಶಬ್ಧದೆಡೆಗೆ ನೆಟ್ಟ ದೃಷ್ಟಿಯಿಂದ ದಿಟ್ಟಿಸಿ ನೋಡಿದೆ. ನಾಯಿಯ ಆಕಾರದ ಮಧ್ಯಮ ಗಾತ್ರದ ಪ್ರಾಣಿಯ ಹಾಗೇ ಕಾಣಿಸಿತು. ನನಗೆ ಗೊತ್ತಾಗಿ ಹೋಯಿತು ಇದೊಂದು ಕತ್ತೆ ಕಿರುಬ,ಬಹಳ ಹತ್ತಿರ ಬಂದು ಅನುಮಾನದಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಿತ್ತು. ಈ ಕಿರುಬಗಳು ಕಾಡಿನಲ್ಲಿರುವ ನರಿ ತೋಳದಂತ ಅಸಹ್ಯ ಪ್ರಾಣಿಗಳು ಮತ್ತು ಎಂಜಲು ತಿನ್ನುವ ಪ್ರಾಣಿಗಳು. ಹುಲಿ ಸಿಂಹ ಬೇಟೆಯಾಡಿ ಅರ್ಧಂಬರ್ಧ ತಿಂದ ಪ್ರಾಣಿಗಳ ಶವವನ್ನು ಕದ್ದು ತಿಂದು ಬದುಕುವುದು ಇವುಗಳ ಹವ್ಯಾಸ. ಹಳ್ಳಿಯಲ್ಲಿನ ಕುರಿ,ಆಡು ನಾಯಿಗಳನ್ನು ಹೊತ್ತೊಯ್ಯುವುದೂ ಸಹ ಇವುಗಳ ಕಳ್ಳ ದಂಧೆಗಳಲ್ಲೊಂದು. ಇವುಗಳದು ನಿಶಾಚರ ಒಂಟಿ ಜೀವನ ಮತ್ತು ಇದು ಶೂರತನದಿಂದ ಬೇಟೆಯಾಡುವ ಪ್ರಾಣಿಯಲ್ಲ. ಆದರೆ ಮನುಷ್ಯನನ್ನು ಕಂಡರೆ ಇವುಗಳಿಗೆ ಮಹಾಪುಕ್ಕಲುತನ. ಇದರ ಸ್ವಭಾವ ತಿಳಿದಿದ್ದರಿಂದ ಒಂದು ಸಣ್ಣ ಕಲ್ಲನ್ನು ಅದರೆಡೆ ತೆಗೆದೆಸೆದೆ. ಭಯದಿಂದ ಮತ್ತೊಮ್ಮೆ ವಿಕಾರವಾಗಿ ಕೂಗಿ ಕಾಲುಕಿತ್ತಿತು. ಸ್ವಲ್ಪ ಹೊತ್ತಿಗೆ ಧರಿಸಿದ್ದ ಚಪ್ಪಲು ಬಿಗಿಯಾದಂತೆ, ಬಿಸಿಯಾದಂತೆ ಚಪ್ಪಲಿಯು ಜಾರಿದಂತೆ ಭಾಸವಾಯಿತು. ಕೆಸರು ಸಿಕ್ಕಿರಬೇಕು ಎಂದು ಸುಮ್ಮನಾದೆ. ಕೈ ಅಪ್ರಯತ್ನಪೂರ್ವಕವಾಗಿ ಕಾಲಿನತ್ತ ಹೋಯಿತು. ಬಿಸಿಯಾಗಿ ಪ್ಯಾಂಟಿನಿಂದ ಬಂದು ಚಪ್ಪಲಿಗೆ ಬೀಳುತ್ತಿರುವುದು ಬಿಸಿ ರಕ್ತ ಎಂದು ತಕ್ಷಣ ಗೊತ್ತಾಯಿತು. ಇದು ಉಂಬಳದ ಮಹಿಮೆ ಎಂದು ತಕ್ಷಣ ಗೊತ್ತಾಯಿತು. ತೊಡೆಯ ಮಾಂಸಖಂಡದ ಹತ್ತಿರ ಹೆಬ್ಬಟ್ಟು ಗಾತ್ರದ ಉಂಬಳವೊಂದು ರಕ್ತಕುಡಿದು ಸುಸ್ಥಾಗಿ ಸ್ವಲ್ಪವೇ ಅಂಟಿಕೊಂಡಿತ್ತು. ಅದನ್ನು ಜಗ್ಗಿ ತೆಗೆಯಲೆತ್ನಿಸಿದೆ. ಆದರೆ ಉಡದಂತೆ ಗಟ್ಟಿಯಾಗಿ ಚರ್ಮವನ್ನು ಹಿಡಿದುಕೊಂಡ ಅದನ್ನು ರಬ್ಬರ್ ಎಳೆದಂತೆ ಎಳೆದೆ. ಕೂಡಲೇ ಕೈಗೆ ಏರಿ ಕಿರಿ ಕಿರಿ ಪ್ರಾರಂಭಿಸಿತು. ಈ ಉಂಬಳಗಳು ಮನುಷ್ಯನ ವಾಸನೆಯನ್ನು ಗ್ರಹಿಸಿ ಬಳಕುತ್ತಾ ಥಟ್ಟನೆ ಕಾಲಿಗೆ ಸೇರಿಕೊಳ್ಳುವ ಪರಿ ಮಾತ್ರ ಅಚ್ಚರಿಮೂಡಿಸುವಂತಿರುತ್ತದೆ. ಅವು ಹೆಚ್ಚಾಗಿ ಗಾಯವಿರುವ ಸ್ಥಳವನ್ನು ಹುಡುಕಿ ಕಚ್ಚುತ್ತವೆ. ಈ ಸಮಯದಲ್ಲೆಲ್ಲ ಬೆಟ್ಟ, ಗುಡ್ಡಗಳಲ್ಲಿ ಓಡಾಡಿದರಂತೂ ಮುಗಿದೇ ಹೋಯಿತು. ಒಂದಲ್ಲ ಎರಡಲ್ಲ ನಾಲ್ಕಾರು ಸಣ್ಣ, ದೊಡ್ಡ ಉಂಬಳಗಳು ಕಚ್ಚಿ ರಕ್ತಹೀರುತ್ತವೆ. ಕೆಲವೊಮ್ಮೆ ಅವು ಕಚ್ಚಿದ್ದು ಗೊತ್ತಾಗದೇ ಹೊಟ್ಟೆತುಂಬಾ ಕುಡಿದು ಅವೇ ಉದುರಿ ಬೀಳುತ್ತವೆ. ಉಂಬಳ ಕಚ್ಚಿದೊಡನೆ ಹಿರುಡಿನ್ ಎಂಬ ರಾಸಾಯಿನಿಕವನ್ನು ಮನುಷ್ಯನ ದೇಹದಲ್ಲಿ ಬೀಡುತ್ತವೆ. ಇದರಿಂದ ಕಚ್ಚಿದ ಜಾಗದಲ್ಲಿ ರಕ್ತ ಹೆಪ್ಪುಗಟ್ಟದೆ ನಿರಂತರವಾಗಿ ರಕ್ತ ಸುರಿಯುತ್ತಲೇ ಇರುತ್ತದೆ. ಹೀಗಾಗಿ ರಕ್ತ ಸೋರುವಿಕೆ ಬಂದ್ ಆಗಲು ಕೆಲ ಸಮಯ ಬೇಕಾಗುತ್ತದೆ. ಇದಕ್ಕಾಗಿ ತಕ್ಷಣ ರಕ್ತ ಹರಿಯುವದನ್ನು ನಿಲ್ಲಿಸಲು ಸ್ಥಳೀಯರು ತಂಬಾಕು, ಸುಣ್ಣ, ಉಪ್ಪಾಗೆಸೊಪ್ಪು, ಹೆಡಮಂಗಲ ಸಸಿಯ ಅಂಟು ಮುಂತಾದವನ್ನು ಹಚ್ಚಿಕೊಳ್ಳುವುದು ರೂಢಿಯುಂಟು. ಸಾಮಾನ್ಯ. ಉಷ್ಣತೆ ಇರುವ ಬಯಲು ಸೀಮೆಯಲ್ಲೂ ಉಂಬಳ ಬದುಕುವುದಿಲ್ಲ, ಚೆನ್ನಾಗಿ ಮಳೆ ಬರುವ ಪ್ರದೇಶ ಮಾತ್ರವಿದ್ದರೆ ಸಾಲದು, ಬೇಸಿಗೆಯಲ್ಲಿ ತಂಪು ವಾತಾವರಣವೂ ಈ ಜೀವಿ ಜೀವಿಸಲು ಬೇಕೆಬೇಕು. ಮಳೆಗಾಲ ಕಳೆದು ತಿಂಗಳಾಗುವುದರೊಳಗೆ ಈ ಜೀವಿ ನಾಪತ್ತೆಯಾಗುತ್ತದೆ. ಮಳೆಗಾಲದಲ್ಲೂ ಎರಡು ದಿನ ಬಿಸಿಲು ಬಿದ್ದರೆ ಈ ಜೀವಿ ನಿತ್ರಾಣಗೊಳ್ಳುತ್ತದೆ. ತುಂತುರು ಮಳೆಯೆಂದರೆ ಈ ಜೀವಿಗೆ ಸಂಜೀವಿನಿ ದೊರೆತ ಹಾಗೇ! ಒಮ್ಮೆ ರಕ್ತ ಹೀರಿದ ಉಂಬಳ ಆ ನಂತರ ವಾರಗಟ್ಟಲೇ ಆಹಾರಕ್ಕೆ ಇನ್ನೊಬ್ಬರನ್ನು ಕಚ್ಚುವುದಿಲ್ಲ. ಬೇಸಿಗೆಯಲ್ಲಿ ಬೆಟ್ಟದಲ್ಲಿ ತರಗತಿಗಳ ನಡುವೆ ಕೊರಡಾಗಿ ಬಿದ್ದ ಉಂಬಳ ಮತ್ತೆ ಜೀವ ತಳೆಯುವುದು ಮತ್ತೆ ಮಳೆ ಬಂದಾಗಲೇ!

ಸ್ವಲ್ಪ ಹೊತ್ತಿಗೆ ಇದ್ದಕ್ಕಿದ್ದಂತೆ ಮಳೆ ನಿಂತು ಸ್ವಚ್ಚ ಆಕಾಶ, ಸಹಸ್ರಾರು ನಕ್ಷತ್ರಗಳು, ಚಂದ್ರ, ಕೋಟ್ಯನುಕೋಟಿ ನಕ್ಷತ್ರಗಳು ಕಾಣತೊಡಗಿದವು. ನಾನು ಆಕಾಶದತ್ತಲೇ ನೋಡುತ್ತಾ ಮೈಮರೆತೆ. ಸ್ವಲ್ಪೇ ಹೊತ್ತಿನಲ್ಲಿ ಬಹುಶಃ ೫-೬ ಘಂಟೆಯಾಯಿತು ಅನಿಸುತ್ತದೆ. ಬಾನಿನ ಅಂಚಿನಿಂದ ಉದಯ ರವಿಯ ಆಗಮನವಾಯಿತು. ಗಜಾನನ ಕಂಪನಿಯ ಬಸ್ಸೊಂದು ಬಂತು. ಕಾರ್ಗಲ್ಲಿಗೆ ಹೋಗಿ ರೂ: ೬೦೦ ಬಾಡಿಗೆಗೆ ಒಂದು ಜೀಪನ್ನು ಬಾಡಿಗೆಗೆ ಪಡೆದು ನಾನು ಬೈಕು ಬಿಟ್ಟಿದ್ದ ಜಾಗಕ್ಕೆ ಬಂದು ಬೈಕನ್ನು ಗಾಡಿಯಲ್ಲಿ ಹಾಕಿಕೊಂಡು ಕಾರ್ಗಲ್ಲಿಗೆ ಬಂದೆ. ರೀಮು ಬೆಂಡು ತೆಗೆಸಿ ಪಂಚರ್ ಹಾಕಿಸಿ ಬೈಕಿನ ಹೊಟ್ಟೆಗೆ ಪೆಟ್ರೋಲು ಎಂಬ ದ್ರವ ಸುರಿದು ನನ್ನ ಹೊಟ್ಟೆಗೂ ಇಡ್ಲಿಯೆಂಬ ಘಟ್ಟಿ ತುಂಡುಗಳನ್ನು ಸಾಂಬಾರಿನೊಂದಿಗೆ ಇಳಿಸಿ ಎಂದಿನಂತೆ ಆಸ್ಪತ್ರೆಗೆ ಹಾಜರಾದೆ.


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,  ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ,  ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW