ಇದು ಸೀಗೆಯ ಕಾಲ – ಡಾ.ವಡ್ಡಗೆರೆ ನಾಗರಾಜಯ್ಯ




ಹಸಿ ಸೀಗೆಕಾಯನ್ನು ಒಲೆಯ ಬೆಂಬೂದಿಯಲ್ಲಿ ಸುಟ್ಟು ಸ್ನಾನ ಮಾಡುವ ಸುಖವೇ ಬೇರೆ. ಸೀಗೆಕಾಯ ಕಾಲ ಮತ್ತೆ ಶುರುವಾಗಿದೆ. ಅದರೊಂದಿಗಿನ ಹಳೆಯ ನೆನಪೊಂದನ್ನು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಮತ್ತೆ ಸೀಗೆಕಾಯಿ ಕಾಲ ಬಂದಿದೆ! ಇದು ಸೀಗೆಯ ಕಾಲ. ಸೀಗೆ ಮೆಳೆಗಳಲ್ಲಿ ಸೀಗೆಕಾಯಿಗಳು ಕೆಂಪಗೆ ಗೊಂಚಲುಗಳಾಗಿ ತೂಗಿ ತೊನೆಯುತ್ತಿವೆ. ನನ್ನ ಅಮ್ಮ ಕದರಮ್ಮ ಸೀಗೆಕಾಯನ್ನು ಗಟ್ಟಿ ಚಟ್ಣಿಯಂತೆ ಒಳಕಲ್ಲಿನಲ್ಲಿ ಚಿಕ್ಕ ಒನಕೆಯಂಥ ರುಬ್ಬುಕೋಲಿನಿಂದ (ಒನಕೆಬಂಡೆ) ನುಣ್ಣಗೆ ರುಬ್ಬಿ #ಸ್ನಾನ ಮಾಡಲು ಕೊಡುತ್ತಿದ್ದಳು. ಸೌದೆ ಹೊಂದಿಸಿ ನೀರು ಕಾಯಿಸುವ ಕೆಲಸವನ್ನು ನನ್ನ ಅಪ್ಪ ಹನುಮಂತಯ್ಯ ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದ.

ಸೀಗೆಕಾಯಿ ರುಬ್ಬುವುದನ್ನು ನೋಡುವುದೇ ಒಂದು ಸೋಜಿಗ! ನಮ್ಮೂರಿನ ತಿಗಳರ ಕೇರಿಯ ದಪ್ಪ ಕುಂಡಿಗಳ ಕಪ್ಪು ಹುಡುಗಿ ಲಕ್ಷ್ಮೀದೇವಿ, ತುಂಡು ಒನಕೆಯನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದುಕೊಂಡು, ಒಳಕಲ್ಲು ಮುಂದೆ ಅರೆತೆರೆದ ಎದೆಬಿಟ್ಟುಕೊಂಡು ಕುಳಿತು, ಕುಂಡಿ ಮೇಲಕ್ಕೆತ್ತಿ ಬೆಲ್ಲಿ ಡ್ಯಾನ್ಸ್ ಮಾಡುವಂತೆ ಗರಗರನೆ ಸೀಗೆಕಾಯಿ ರುಬ್ಬುವುದನ್ನು ಕದ್ದು ನೋಡಲು ಆಗಾಗ ಅವಳ ಮನೆಯ ಎದುರಿಗೆ ಎಡತಾಕುತ್ತಿದ್ದೆ.

This slideshow requires JavaScript.

ಆಗಿನ ದಿನಗಳಲ್ಲಿ ಪ್ರತಿ ಸೋಮವಾರ ನಮಗೆ ವಾರೊಪ್ಪತ್ತಿನ ಸ್ನಾನ ಕಡ್ಡಾಯವಾಗಿತ್ತು. ಸೋಮವಾರ ಬಂತೆಂದರೆ ಮನೆಯ ಹೊರಗೆ ಗುಡಾಣದ ತುಂಬಾ ಬಿಸಿನೀರು ಕಾಯಿಸಿ ಬೀದಿಯಲ್ಲಿ ಹುಟ್ಟು ನಿರ್ವಾಣದಲ್ಲಿ ವೀರ ಬಾಹುಬಲಿಯಂತೆ ನಿಂತುಕೊಂಡು ಸ್ನಾನ ಮಾಡುತ್ತಿದ್ದೆನು. ಸೊಂಟಕ್ಕೆ ಪುಟಗೋಸಿ ಕಟ್ಟಿಕೊಂಡು ಸ್ನಾನ ಮಾಡಲು ಪ್ರಾರಂಭಿಸಿದ್ದು ಹೈಸ್ಕೂಲು ಮೆಟ್ಟಿಲು ಹತ್ತಿದ ನಂತರವೇ…!

#ಸೋಮವಾರದ ದಿನ ನಮ್ಮೂರಿನ ಗ್ರಾಮದೇವತೆ ವಡ್ಡಗೆರೆ ನಾಗಮ್ಮನ ವಾರ. ಆ ದಿನ ಇಡೀ ಊರಿನ ಜನ ಸ್ನಾನ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ಈಗಿನಂತೆ ತರಹೇವಾರಿ ಶಾಂಪು ಲೋಷನ್ ಸಾಬೂನುಗಳು ನಮಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಸಂತೆಯಲ್ಲಿ ಬಟ್ಟೆ ಸಾಬೂನು ಮೈಸೋಪು ಇರುತ್ತಿದ್ದವೇ ಹೊರತು, ತಲೆಗೆ ಸೀಗೆಕಾಯಿ – ಸುಟ್ಟ ಬಿಲ್ವಪತ್ರೆಯ ಕಾಯಿ, ಚಿಗರೆ ಪುಡಿ, ಅಂಟುವಾಳದ ಕಾಯಿ, ಕಡಲೆ ಹಿಟ್ಟು ಮುಂತಾದವುಗಳನ್ನು ಮಾತ್ರ ಬಳಸುತ್ತಿದ್ದೆವು.

ನಮ್ಮೂರಿನ ಹುಲೇಗೌಡನ ಹೊಂಗೆ ತೋಪಿನ ಸೀಗೆಮೆಳೆಯಿಂದಲೋ…. ಹುಂಜಿನಹಳ್ಳ- ಹಿರೇಕಾಲುವೆ ದಡದ ಸೀಗೆಮೆಳೆಯಿಂದಲೋ ಅಂತೂ ನಮ್ಮ ಸ್ನಾನಕ್ಕೆ ಬೇಕಾದ ಸೀಗೆಕಾಯನ್ನು ನಾನು ಹುಡುಕಿ ತರುತ್ತಿದ್ದೆ. ಆಂಜನೇಯನ ಗುಡಿಯ ಪೌಳಿಯಲ್ಲಿದ್ದ ಬಿಲ್ವಪತ್ರೆಯ ಕಾಯಿಗಳನ್ನು ಕುಟ್ಟಿಸೀಳಿ ಸುಟ್ಟು ಸ್ನಾನ ಮಾಡಿದ ಆ ಸುಖದ ದಿನಗಳನ್ನು ನಾನು ಮರೆಯಲಾರೆ.

#ಹಸಿ_ಸೀಗೆಕಾಯನ್ನು ಒಲೆಯ ಬೆಂಬೂದಿಯಲ್ಲಿ ಸುಟ್ಟು ಸ್ನಾನ ಮಾಡುವ ಸುಖ ನನಗೆ ಮತ್ತೆ ಸಿಕ್ಕಿತು. ಮೊನ್ನೆ ನಮ್ಮೂರಿಗೆ ಹೋಗಿದ್ದಾಗ ಬಸವನ ದಿನ್ನೆಯ ಸಮೀಪದ ಮುತ್ತುಗದ ಹಳ್ಳದಲ್ಲಿರುವ ಸೀಗೆಮೆಳೆಯಲ್ಲಿ ಸೀಗೆಕಾಯಿ ಕಿತ್ತುಕೊಂಡು ದೇವರಕಟ್ಟೆ ಏರಿಮೇಲೆ ನಡೆದು ಬರುತ್ತಿರುವಾಗ ಸೀಗೆಕಾಯಿ ಅರೆಯುತ್ತಿದ್ದ ತಿಗಳರ ಕೇರಿಯ ಬೆಲ್ಲಿ ಡ್ಯಾನ್ಸ್ ಲಕ್ಷ್ಮೀದೇವಿ ನೆನಪಾದಳು. ಅಂತಹ ದಿನಗಳ ನೆನಪುಗಳ ತಂಪು ಹಿತಾನುಭವಕ್ಕೆ ಶರಣು.


  •  ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW