ಎಣ್ಣೆ ಸೀಗೆಕಾಯಿಯ ಸಂಬಂಧ! – ಎಂ ಆರ್ ಕಮಲಾ



ದೀಪಾವಳಿಯ ದಿನ ಬೆಳಬೆಳಗ್ಗೆನೇ ಹರಳೆಣ್ಣೆ ಮೆತ್ತಿಕೊಂಡು ಬಚ್ಚಲು ಮನೆಯ ಹತ್ತಿರ ಕೂತುಕೊಳ್ಳುತ್ತಿದ್ದೆವು, ಆಮೇಲೆ ಒಬ್ಬೊಬ್ಬರಂತೆ ಅಮ್ಮ ಎಳೆದು ಸೀಗೆಕಾಯಿ ತಿಕ್ಕಿ ಸ್ನಾನ ಮಾಡಿಸುತ್ತಿದ್ದರು ಹೀಗೆ ತಮ್ಮ ಬಾಲ್ಯದಲ್ಲಿ ಕಳೆದ ಎಣ್ಣೆ ಸೀಗೆಕಾಯಿಯ ನಂಟಿನ ಬಗ್ಗೆ ಎಂ ಆರ್ ಕಮಲಾ ಅವರು ಬರೆದ ಸುಂದರ ಲೇಖನವೊಮ್ಮೆ ಓದಿ…

ಇವತ್ತೇಕೋ ಸೀಗೆಕಾಯಿ ಪುಡಿ ನೆನಪಿಗೆ ಬಂತಪ್ಪ! ಚಿಕ್ಕವರಿದ್ದಾಗ ಅಮ್ಮ ಹರಳೆಣ್ಣೆ ಒತ್ತಿ, ಮೆತ್ತಿ, ನೆತ್ತಿಯನ್ನು ನೆನೆಸಿ, ಸೀಗೆ ಕಾಯಿ ಪುಡಿಯಲ್ಲಿ ಗಸ ಗಸ ಉಜ್ಜುತ್ತಿದ್ದಳಲ್ಲ! ಆಗ ನಾವು ಬಚ್ಚಲಲ್ಲಿ ಕಿರುಚಾಡಿ, ಸೀಗೆಪುಡಿ ಕಣ್ಣಿಗೆ ಹೋಗಿ ಒಂದು ರಾಮಾಯಣವಾಗುತ್ತಿತ್ತು ! ದೀಪಾವಳಿಯ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಶುರುವಾಗ್ತಿತ್ತು ಈ ಅವಾಂತರ, ಹರಳೆಣ್ಣೆ ಮೆತ್ತಿಕೊಂಡು ಬಚ್ಚಲು ಮನೆಯ ಹತ್ತಿರ ಕೂತುಕೊಂಡು, ಕೊಟ್ಟಿಗೆ ಕರುಗಳನ್ನು ಮಾತಾಡಿಸಿಕೊಂಡು ಸರದಿಗಾಗಿ ಕಾಯುತ್ತಿದ್ದೆವು.

ಒಬ್ಬೊಬ್ಬರನ್ನೇ ಹಿಡಿದು ಬಚ್ಚಲಿಗೆ ಒಯ್ಯುವುದು, ತಲೆ ಉಜ್ಜುವುದು, ಹಂಡೆಯ ನೀರನ್ನು ಸುರಿಯುವುದು, ದಬ್ಬುವುದು. ಅದಾದ ಮೇಲೆ ಅಂಗಳದಲ್ಲಿ ನಿಂತು ಬಿಸಿಲಿನಲ್ಲಿ ಕೂದಲನ್ನು ಒಣಗಿಸಿಕೊಂಡು ಪಕ್ಕದ ಮನೆಯ ಹುಡುಗರ ಹತ್ತಿರ ಸಿನೆಮಾದ ವಿಷಯ ಮಾತಾಡೋದು, ಕಣ್ಣಿಗೆ ಸೀಗೆಕಾಯಿ ಹೋಗಿರುತ್ತಿದ್ದುದ್ದರಿಂದ ಅವತ್ತೆಲ್ಲ `ಕೆಂಗಣ್ಣಿ’ನಲ್ಲೆ ಓಡಾಟ. ನಮ್ಮ ಕಡೆ ಈ ರೀತಿ ಎಣ್ಣೆ ನೀರು ಹಾಕಿಕೊಂಡು ಸ್ನಾನ ಮಾಡೋದಕ್ಕೆ `ಎರೆಯೋದು’ ಅಂತಾರೆ. ತವರುಮನೆಗೆ ಹೋದಾಗೆಲ್ಲ ಅಮ್ಮ, `ಬಂಧಮ್ಮ ಒಳ್ಳೆಯ #ಹರಳೆಣ್ಣೆ ಮಾಡಿಕೊಟ್ಟಿದ್ದಾಳೆ, ಎರೆಕೋ’ ಅಂತಿದ್ದಳು. ಈ ಎರೆದುಕೊಳ್ಳುವ ವಿಷಯದಲ್ಲಿ ನನ್ನಂತಹ ಸೋಮಾರಿಯೇ ಬಹುಶಃ ಇಲ್ಲ. ಡಿಗ್ರಿ ಓದುತ್ತಿದ್ದಾಗಲೂ ಅಮ್ಮನ ಹತ್ತಿರ ಎಣ್ಣೆ ಹಚ್ಚಿಸಿಕೊಂಡು, ಬಚ್ಚಲಲ್ಲಿ ಆರಾಮಾಗಿ ಕೂತು ತಲೆಯುಜ್ಜಿಸಿಕೊಳ್ಳುತ್ತಿದ್ದೆ, ಅಕ್ಕಂದಿರ ಹತ್ತಿರ ಈ ಕಾರಣಕ್ಕಾಗಿ ಕೆಲವು ಬಾರಿ ಬೈಸಿಕೊಳ್ಳುತ್ತಿದ್ದೆ ಸಹ.

ಈ ಎರೆದುಕೊಳ್ಳುವ’ ಕೆಲಸದಲ್ಲಿ ಅದೆಂಥ ಅಕ್ಕರೆ , ವಾತ್ಸಲ್ಯ ಇದೆ ಎಂದು ಯೋಚಿಸುತ್ತಿದ್ದೇನೆ. ಹಳ್ಳಿಯ ಮನೆಗೆ ಯಾರೇ ಬಂದರು ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕ್ರಿಯೆಗಳಲ್ಲಿ ಊಟ, ತಿಂಡಿಯ ಜೊತೆ ಇದೂ ಸೇರಿಕೊಂಡಿತ್ತು. ತಮ್ಮನೋ, ತಂಗಿಯೋ ಮನೆಯ ಮಕ್ಕಳೋ ಬಂದರೆ ಅವರಿಗಾಗಿಯೇ ಒಲೆಯಲ್ಲಿ ನೀರನ್ನು ಕಾಯಿಸುವುದು, ಎಣ್ಣೆ ಹಚ್ಚುವುದು, ಎರೆಯುವುದು ನಂತರ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳುವುದು. ಬಾಣಂತನವೆಂದರೆ ಮುಗಿದೇ ಹೋಯಿತು. ಮಗುವಿಗೆ, ತಾಯಿಗೆ ಬರೀ ಎರೆಯುವುದೇ, ಹೊದಿಕೆ ಹೊದ್ದು ಮಲಗುವುದೇ. ಮಾತೆತ್ತಿದರೆ ಮಗು ನಿದ್ದೆಯಲ್ಲೇ ಬೆಳೆಯಬೇಕು ಎನ್ನುತ್ತಿದ್ದಳು ಅಮ್ಮ. ಹೇಳ ಹೊರಟಿದ್ದು ಇದನ್ನೆಲ್ಲ.ಇವತ್ತು ಕಾಳನನ್ನು ಕರೆದುಕೊಂಡು ಹೋಗಬೇಕಾದರೆ ಕಟ್ಟಡ ಕಾರ್ಮಿಕರ ಮಕ್ಕಳನ್ನು ಗಮನಿಸುತ್ತಿದ್ದೆ. ಕೂದಲೆಲ್ಲ ಕೆಂಚಗಾಗಿ ಹೋಗಿದೆ. ನೆತ್ತಿಗೆ ಎಣ್ಣೆಯನ್ನೇ ಕಂಡಿಲ್ಲ. ಇಂಥ ಅದೆಷ್ಟೋ ಮಕ್ಕಳನ್ನು ಕಂಡಾಗ `ಹಿಡಿದು ಎಣ್ಣೆ ಹಚ್ಚಬೇಕು’ ಅನ್ನಿಸಿದ್ದಿದೆ. ಮಗಳು ಮನೆಗೆ ಬಂದ ತಕ್ಷಣ ನನಗೆ ಅರಿವಿಲ್ಲದಂತೆ ಬರುವ ವಾಕ್ಯವೆಂದರೆ, `ಅಯ್ಯೋ, ಕೂದಲೆಲ್ಲ ಏನೇ ಹೀಗಾಗಿದೆ, ಎಣ್ಣೆ ಹಚ್ಚುತ್ತೀನಿ, ಎರಕೋ’ ! ಈ ಎಣ್ಣೆ ಅನ್ನುವ ಪದವೇ ಆಗದ ಮಗಳು ನಾನೇನೋ ಆರಾಮಾಗಿ ಇರೋಣ ಅಂತ ಬಂದರೆ ಏನು ನಿನ್ನ ಗೋಳು ಎಂದು ಬೈಯುತ್ತಾಳೆ. ಹಾಗೆ ನೋಡಿದರೆ ಕಟ್ಟಡ ಕಾರ್ಮಿಕರಿಗೆ ಎಣ್ಣೆಯನ್ನು ಕೊಂಡುಕೊಳ್ಳುವ ಶಕ್ತಿ ಬಹುಶಃ ಇಲ್ಲ. ಇದ್ದ ಮಕ್ಕಳು ಎಣ್ಣೆಯನ್ನು ಹಚ್ಚಿಕೊಳ್ಳುವುದಿಲ್ಲ. ಅವಳೇಕೆ, ನಾನು ಕೂಡ! ಹರಳೆಣ್ಣೆಯಿಂದ ಕೊಬ್ಬರಿ ಎಣ್ಣೆಗೆ, ಸೀಗೇಪುಡಿಯಿಂದ ಶಾಂಪುವಿಗೆ ಹೊರಳಿ ಎಷ್ಟೋ ವರ್ಷಗಳೇ ಆದವು. ಮಿಂದು ಬಂದ ಮೇಲೆ ಅಂಥ ಕಂಪಿನ ವಾಸನೆ ಮೈಗೂ ಇಲ್ಲ, ಮನಸ್ಸಿಗೂ ಇಲ್ಲ. ಇದು ಹಳಹಳಿಕೆಯು ಅಲ್ಲ. ವಾಸ್ತವವನ್ನು ಒಪ್ಪಿಕೊಂಡಿರುವ ಬಗೆ.

ಚಿಕ್ಕ ವಯಸ್ಸಿನಲ್ಲಿ ಸೀಗೆಕಾಯಿ ಪೊಟ್ಟಣವನ್ನು ಅರಸೀಕೆರೆಯಿಂದ ತಂದರೆ ಅದನ್ನು ಡಬ್ಬಕ್ಕೆ ಹಾಕುವುದಕ್ಕೆ ಭಾರೀ ಖುಷಿಯಿರುತ್ತಿತ್ತು. ಒಡೆದ ತಕ್ಷಣ ಅದರಿಂದ ಬರುತ್ತಿದ್ದ ಘಾಟು ಮೈ ಮನಕ್ಕೆ ಅದೆಷ್ಟು ಹಿತವೆನಿಸುತ್ತಿತ್ತು, ಕೆಲವೊಮ್ಮೆ ಸೀನು ಸಹ ಒಂದೇ ಸಮನೆ ಬರುತ್ತಿತ್ತು. ನನಗೆ ನೆನಪಿದ್ದಂತೆ ಎಸ ಆರ್ ಕೆ ಬ್ರಾಂಡ್ ನ ಸೀಗೆಪುಡಿ ಮತ್ತು ನಂಜನಗೂಡಿನ ಹಲ್ಲುಪುಡಿ ಇಲ್ಲದ ಮನೆಗಳೇ ಇರುತ್ತಿರಲಿಲ್ಲ. ಚೆನ್ನಾಗಿ ನೊರೆ ಬರಲಿ ಎಂದು ಚಿಗರೆ ಪುಡಿ, ಅಂಟುವಾಳದ ಕಾಯಿಯ ಪುಡಿಯನ್ನು ಕೆಲವರು ಸೇರಿಸುತ್ತಿದ್ದರು. ತೀರಾ ಬಡವರ ಮನೆಯಲ್ಲಿ ಹೊಲದ ದಂಡೆಯಲ್ಲಿ ಬೆಳೆಯುತ್ತಿದ್ದ ಹರಳನ್ನು ತಂದು ಕುಟ್ಟಿ, ಬಿಸಿನೀರಲ್ಲಿ ಬೇಯಿಸಿ, ಮೇಲೆ ತೇಲಿದ ಎಣ್ಣೆಯನ್ನು ತೆಗೆದು ಹಚ್ಚಿಕೊಳ್ಳುತ್ತಿದ್ದರು. ಸೀಗೆಕಾಯಿ ಪುಡಿ ಕೊಳ್ಳಲು ಆಗದಿದ್ದವರು ಬೆಂಡೆಕಾಯಿಯ ಲೋಳೆಯನ್ನು ಸೀಗೆಕಾಯಿಯಂತೆ ಉಪಯೋಗಿಸುತ್ತಿದ್ದರು. ಅಂತೂ ನಮ್ಮೂರಿನಲ್ಲಿದ್ದಾಗ ಎಣ್ಣೆ ಕಾಣದ ತಲೆಗಳನ್ನು ನೋಡಿದ್ದು ಕಮ್ಮಿ. ಇನ್ನು ಕೆಲವರು ಗಾಣದ ಹತ್ತಿರ ನಿಂತು ಸುತ್ತ ಚೆಲ್ಲಿದ್ದ ಎಣ್ಣೆಯನ್ನು ಬಂಧಮ್ಮನ ಬೈಗುಳವನ್ನು ಕೇಳಿಕೊಂಡೇ ಹಚ್ಚಿಕೊಳ್ಳುತ್ತಿದ್ದರು. `ನೆತ್ತಿ ತಂಪಾಗಿರಲಿ’ ಎಂಬ ಸದಾಶಯ ಬಹು ದೊಡ್ಡದು ಎನ್ನಿಸುತ್ತದೆ. ನೆತ್ತಿ ತಂಪಾದಾಗ ಇಡೀ ಮೈ ಕೂಡ ತಂಪಾಗಿಯೇ ಇರುತ್ತಿತ್ತು, ನಿದ್ದೆ ಚೆನ್ನಾಗಿ ಹತ್ತುತ್ತಿತ್ತು. ಒಂದು ವಾರದ ಕುಣಿತ, ದುಡಿತ ಮುಂತಾದ ಆಯಾಸಗಳೆಲ್ಲ ಪರಿಹಾರವಾಗಿ ಮುಖದಲ್ಲೊಂದು ತಾಜಾ ನಗೆ ಮೂಡುತ್ತಿತ್ತು. ಬೆಂಗಳೂರಿನ ತುಂಬಾ ಎಣ್ಣೆಯೊತ್ತಿ, ಮೈ ಕೈ ತಿಕ್ಕಿ ಹಗುರಗೊಳಿಸಲು ಅದೆಷ್ಟೋ ಮಸಾಜ್ ಸೆಂಟರ್ ಗಳಿವೆ. ಆದರೆ ಅಮ್ಮನ ಕೈಗಳಿಲ್ಲ, ಒಲೆಗಳಿಲ್ಲ, ಹಂಡೆಯಿಲ್ಲ. ಎಣ್ಣೆ ಹಚ್ಚುತ್ತ, `ತೂ, ಕೂದಲೆಲ್ಲ ಹೇಗೆ ಹಾಳು ಮಾಡಿಕೊಂಡಿದ್ದೀಯ ನೋಡು, ಸರಿಯಾಗಿ ಎಣ್ಣೆ ಹಚ್ಕೊಂಡು ಎರೆದುಕೊಂಡು ಎಷ್ಟು ದಿನ ಆಯ್ತು?’ ಅಂತ ಪ್ರೀತಿಯಲ್ಲಿ ಗದರುವವರು ಇಲ್ಲ. ಹಾಗೆ ಗದರಿ ಹಚ್ಚಲು ಹೋದಾಗ ಅದನ್ನು ಸ್ವೀಕರಿಸುವ ಮಕ್ಕಳು ಇಲ್ಲ. ಎಲ್ಲ ಯಾಂತ್ರಿಕ ಕ್ರಿಯೆಗಳ ನಡುವೆ ಈ ಅಭ್ಯಂಜನವು ಯಾಂತ್ರಿಕವಾಗಿರುವುದು ಹೀಗೆ.



ಒಬ್ಬರನ್ನು ಕಂಡರಾಗದ ಮತ್ತೊಬ್ಬರಿದ್ದರೆ ಅವರಿಬ್ಬರೂ ಎಣ್ಣೆ ಸೀಗೆಕಾಯಿ ಎನ್ನುವ ಪದವನ್ನು ಬಳಸುತ್ತೇವೆ. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದೇಕೆ, ಮತ್ತದನ್ನು ತೊಳೆಯಲು ಸೀಗೇಪುಡಿಯನ್ನು ಉಪಯೋಗಿಸುವುದೇಕೆ? ಸುಮ್ಮನೆ ಕೂದಲನ್ನು ಹಾಗೆ ಬಿಟ್ಟರಾಯಿತು ಎಂದೆಲ್ಲ ಚಿಕ್ಕ ವಯಸ್ಸಿನಲ್ಲಿದ್ದಾಗ ಮಾತಾಡುತ್ತಿದ್ದೆ. ಈಗ ಅದೇ ಮಾತನ್ನು ಮಕ್ಕಳು ಆಡುತ್ತಿವೆ ಅಷ್ಟೇ. ಎಣ್ಣೆ- ಸೀಗೆಕಾಯಿ ಎಂಬ ಪದಗಳು ಉಪಯೋಗಿಸುವವರ, ನೋಡುವವರ ಕಣ್ಣಿಗೆ ಶತ್ರುಗಳಂತೆ ಕಾಣಬಹುದು. ಅವರೆಡಕ್ಕು ಇರುವ ಅವಿನಾ ಸಂಬಂಧವೇ ಮಕ್ಕಳ ನೆತ್ತಿಯನ್ನು ತಂಪಾಗಿ ಇಟ್ಟಿದೆ. ಎಲ್ಲ ಮಕ್ಕಳು ಎಣ್ಣೆ-ಸೀಗೆಕಾಯಿ ಕಾಣುವಂತಾಗಲಿ.


  • ಎಂ ಆರ್ ಕಮಲಾ  (ಅವರ ಪೂರ್ತಿ ಹೆಸರು ಮೇಟಿಕುರ್ಕೆ ರಾಮಸ್ವಾಮಿ ಕಮಲಾ, ನಿವೃತ್ತ ಪ್ರಾಂಶುಪಾಲರು, ವೀಣಾವಾದಕರು, ಬರಹಗಾರರು), ಬೆಂಗಳೂರು

One thought on “ಎಣ್ಣೆ ಸೀಗೆಕಾಯಿಯ ಸಂಬಂಧ! – ಎಂ ಆರ್ ಕಮಲಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading