ಪ್ರತಿಭೆ ಮತ್ತು ವಿನಯ ಎರಡರ ಸಂಗಮ – ಅರುಣಿತಾ ಕಾಂಜಿಲಾಲ್

ಬೆಂಗಾಲಿ ಹುಡುಗಿ ಅರುಣಿತಾ ಕಾಂಜಿಲಾಲ್ ನನಗೆ ಬಹಳ ಬಹಳ ಅಚ್ಚುಮೆಚ್ಚು. ಅರುಣಿತಾ ಕಾಂಜಿಲಾಲ್ ಬೆಂಗಾಲಿಯವಳೋ, ಹಿಂದಿಯವಳೋ ಎನ್ನುವುದು ಮುಖ್ಯವಲ್ಲ. ಸಂಗೀತ ಕುಲ, ಕಾಲ, ನೆಲ, ಜಲಗಳನ್ನು ಮೀರಿ ಅತೀತವಾದ ಸರಸ್ವತೀ ಸಂಪನ್ನ ಶಕ್ತಿ. ಈ ಗಾಯಕಿಯ ಕುರಿತು ಡಾ.ಡಿ.ಎಸ್.ಶ್ರೀನಿವಾಸ ಪ್ರಸಾದ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಆನೋ ಭದ್ರಾನಿ ಕೃತವೋಯಂತು ವಿಶ್ವತಃ ಎಂಬ ಸೂಕ್ತಿ ಋಗ್ವೇದದಲ್ಲಿದೆ. ಇದರರ್ಥ “ಒಳ್ಳೆಯ ವಿಷಯಗಳುಎಲ್ಲಿಂದ ಬಂದರೂ ಸ್ವೀಕರಿಸಬೇಕು” ಎಂದು.

ಈ ದೃಷ್ಟಿಯಲ್ಲಿ ನನಗೆ ಬಹಳ ಬಹಳ ಅಚ್ಚುಮೆಚ್ಚಿನ ಗಾಯಕಿಯಾಗಿ ಕಂಡು ಬಂದಿದ್ದು ಕು.ಅರುಣಿತಾ ಕಾಂಜಿಲಾಲ್. ಮೂಲತಃ ಬೆಂಗಾಲಿಯಾದ ಈ ಹುಡುಗಿಯ ಹಾಡುಗಾರಿಕೆಯನ್ನು ನಾನು ನೋಡಿ ಕೇಳಿದಾಗ ಇವಳಿಗಿನ್ನೂ ೭-೮ ವರ್ಷ ಇರಬಹುದಷ್ಟೇ. ೨೦೧೦ ರಲ್ಲಿ ಟಿ.ವಿ.ಮ್ಯೂಸಿಕಲ್ ಶೋ ಒಂದರಲ್ಲಿ ಅರುಣಿತಾ ಕಾಂಜಿಲಾಲ್ ಹಾಡುತ್ತಿದ್ದದ್ದನ್ನು ಗಮನಿಸಿದ ನನ್ನ ತಾಯಿ “ಅಪ್ಪಿ, ನೋಡು ೮-೯ ವರ್ಷದ ಈ ಪುಟ್ಟ ಹುಡುಗಿ ಎಷ್ಟು ಸ್ವರಶುದ್ಧವಾಗಿ ಹಾಡುತ್ತೆ, ಏನು ಕಾನ್ಫಿಡೆನ್ಸ್ ಈ ಚಿಕ್ಕ ವಯಸ್ಸಿಗೆ. ಮುಂದೆ ಈ ಹುಡುಗಿ ಬಹಳ ದೊಡ್ಡ ಗಾಯಕಿ ಆಗೇ ಆಗ್ತಾಳೆ, ಹೆಸರೂ ಮಾಡ್ತಾಳೆ ಅಬ್ಬಬ್ಬಾ ಪುಟ್ಟ ಸರಸ್ವತಿ” ಅಂದರು. ಸ್ವತಃ ಸಂಗೀತ ಬಲ್ಲವರಾಗಿ ಬಹಳ ಚೆನ್ನಾಗಿ ಹಾಡುತ್ತಿದ್ದ ಅಮ್ಮ ಇಂದುಮತಿ ಸುಮ್ಮಸುಮ್ಮನೆ ಹಾಗೆಲ್ಲ ಯಾವತ್ತೂ ಹೊಗಳುವವರೇ ಅಲ್ಲ, ಹಾಗಾಗಿ ಅವರ ಪ್ರಶಂಸೆಯ ಮಾತುಗಳಲ್ಲಿನ ಸತ್ಯ- ತಥ್ಯವನ್ನು ಮನಗಂಡು ಅರುಣಿತಾ ಕಾಂಜಿಲಾಲ್ ಎಂಬ ೭-೮ ವರ್ಷದ ಪುಟ್ಟ ಪೋರಿಯ ಹಾಡುಗಳಿಗೆ ಕಣ್ಣಾಗಿ ಕಿವಿಯಾದೆ.

ಫೋಟೋ ಕೃಪೆ : google

ನನ್ನ ಅಮ್ಮ‌ ಆಡಿದ ನುಡಿದ ಒಂದೊಂದು ಅಕ್ಷರವೂ ನಿಸ್ಸಂದೇಹ ನಿಜವಾಗಿ ಪರಿಣಮಿಸಿತು. ಅರುಣಿತಾ ಕಾಂಜಿಲಾಲ್ ನಿಜಕ್ಕೂ ನನಗೆ ಬಹಳ ಇಷ್ಟವಾದಳು.ಹಾಗೆ ಇವಳು ಮತ್ತು ಇವಳ ಪ್ರತಿಭೆ ಇಷ್ಟವಾಗಲು ನನಗೆ ಎರಡು ಪ್ರಮುಖ ಕಾರಣಗಳಿದ್ದವು.

೧) ಲತಾ ಮಂಗೇಶ್ಕರ್ ಅವರು ಹಾಡಿ ಅಮರಗೊಳಿಸಿರುವ ಹಾಡು ಸತ್ಯಂ ಶಿವಂ ಸುಂದರಂ … ಈ ಗೀತೆಯನ್ನು ಈ ಪುಟ್ಟ ಕಂಠ ಹಾಡುತ್ತೇನೆಂದಾಗ ಮೈಕ್ ಗಿಂತ ಸ್ವಲ್ಪ ಉದ್ದ ಇರುವ ಈ ಹುಡುಗಿ ಹಾಡಲು ಸಾಧ್ಯವೇ? ಅದೂ ಲತಾ ಮಂಗೇಶ್ಕರ್ ಅವರ ಅದ್ಭುತ ಕಂಠದ ಗೀತೆ ಎಂದುಕೊಂಡೆ. ಆದರೆ ಒಮ್ಮೆ ಅರುಣಿತಾ ಕಾಂಜಿ ಲಾಲ್ ಹಾಡಲು ಶುರು ಮಾಡಿದಾಗ ದರ್ಬಾರಿ ಕಾನಡಾ ರಾಗದ ಸುಭಗತೆ, ಸುಕೋಮಲತೆ ಸರಾಗವಾಗಿ ಚೂರೂ ಕಷ್ಟಪಡದೆ ಹಾಡಿದಾಗ ತೀರ್ಪುಗಾರರೇ ರೋಮಾಂಚಿತರಾಗಿ ಕೈ ಉಜ್ಜಿ ಕೊಂಡರು. ಲತಾ ಮಂಗೇಶ್ಕರ್ ಅವರೇ ಹಾಡಿರುವ ಸುನ್ ಸಾಯ್ಬಾ ಸುನ್, ಸಾಯೋನಾರಾ…( ಮೋಹನ / ಭೂಪ್) ರಾಗದ ಗೀತೆಗಳನ್ನು ಸುನಾಯಾಸವಾಗಿ ಹಾಡಿದಾಗ ನಾನು ಸೋಲನ್ನು ಒಪ್ಪಿಕೊಂಡೆ,ಆದರೆ ಆ ಸೋಲಿನಲ್ಲಿ ನನಗೆ ಖುಷಿಯಿತ್ತು. ಬೇಸರವಿರಲಿಲ್ಲ.

೭-೮ ವರ್ಷದ ಹುಡುಗಿಯ ಅಮೋಘ ಪ್ರತಿಭೆಯನ್ನು ಕಂಡು ಅಂದಿನಿಂದ ನಾನು ಅರುಣಿತಾ ಕಾಂಜಿಲಾಲ್ ಎಂಬ ಸಣ್ಣ ವಯಸ್ಸಿನ ಗಾಯಕಿಯ ಅಭಿಮಾನಿಯಾದೆ.

೨) ಜೊತೆಗೆ ಅರುಣಿತಾ ಕಾಂಜಿಲಾಲ್ ಮಧ್ಯಮ ವರ್ಗದ ಎಲ್ಲ ನೋವು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಸಾಗಿ ಬಂದಿರಬ ಹುದಾದ ಹುಡುಗಿ. ಹೀಗಾಗಿ ನನಗೆ ಅರುಣಿತಾ ಕಾಂಜಿಲಾಲ್ ಜಂಬದ ಹುಡುಗಿಯಾಗಿ,ಸೊಕ್ಕಿನ ದನಿಯಾಗಿ ಕಾಣಿಸದೆ,ವಿನಯ ವಿನಮ್ರತೆಗಳ ಕಾರಣದಿಂದಲೂ ಬಹಳ ಸಹ್ಯವೆನ್ನಿಸಿತು.

ಅರುಣಿತಾ ಕಾಂಜಿಲಾಲ್ ಎಂಬ ೨೩ ವರ್ಷದ ಹುಡುಗಿ ನನ್ನ ವಯಸ್ಸು , ಅನುಭವ ಮತ್ತು ಅರ್ಹತೆಗಳಿಗಿಂತ ಕಿರಿಯಳು.ಆದರೆ ಗುಣಕ್ಕೆ ,ಅರ್ಹತೆಗೆ ಮತ್ತು ಅದನ್ನು ಪ್ರಾಂಜಲ ಮನಸ್ಸಿನಿಂದ ಮೆಚ್ಚಿಕೊಳ್ಳಲು ಈ ಯಾವ ಸಂಗತಿಗಳೂ ನನಗೆ ಇಂದಿಗೂ ಮುಖ್ಯವಾಗಿಲ್ಲ.

ಫೋಟೋ ಕೃಪೆ : google

ತೂನೇ ಓ ರಂಗೀಲಾ ಜೈಸಾ ಜಾದೂ ಕಿಯಾ..ಬಾಗೇಶ್ರೀ ರಾಗಾ ಧಾರಿತ ಗೀತೆ, ಖಿಲ್ ತೆಹ ಗುಲ್ ಯಹ- ದ ಅಭೇರಿ ರಾಗ, ಲಾಯಿ ವಿ ನ ಗಯ್ …ನ ಕಲ್ಯಾಣಿ ರಾಗಾಧಾರಿತ ಗೀತೆ, ಅಬ್ ಕೆ ಸಾವನ್ ಮೇಜಿ ಡರೆ..ದ ಮಾಲಗುಂಜಿ ರಾಗಾಧಾರಿತ ಗೀತೆ, ತೇರೆ ಮೇರೆ ಬೀಚ್ ಮೆ..ದ ಶಿವರಂಜಿನಿ ರಾಗ, ಏಕ್ ಮೀರಾ ಏಕ್ ರಾಧಾ..ದ ಕೀರವಾಣಿ ರಾಗಾಧಾರಿತ ಗೀತೆಗಳನ್ನು ಅದ್ಭುತವಾಗಿ ಹಾಡಿದ ಇಷ್ಟು ಚಿಕ್ಕ ವಯಸ್ಸಿನ ಹುಡುಗಿಯನ್ನು ನಾನು ಈವರೆಗೂ ಕಂಡಿಲ್ಲ. ರಾಮ್ ಲಖನ್ ಚಿತ್ರದ ಬಡಾ ದುಖ್ ದೀನಾ, ಹೀರೊ ಚಿತ್ರದ ನಿಂದಿಯಾ ಸೆ .. ಆಂಧಿ ಚಿತ್ರದ ಇಸ್ ಮೋಡ್ ಸೆ, ಸಿಲ್ ಸಿಲಾ ಚಿತ್ರದ ದೇಖಾ ಏಕ್ ಖ್ವಾಬ್… ಇವಳ ಕಂಠದಲ್ಲಿ ಆಲಿಸುವುದು ಸುಭಗತೆಯನ್ನು ಉಂಟು ಮಾಡುತ್ತದೆ.

ಯಶೋದಾ ಕಾ ನಂದಲಾಲ..ಸಹ ಸೊಗಸಾಗಿದೆ. ಲತಾ ಮಂಗೇಶ್ಕರ್ ಅವರೇ ಈ ಗಾಯಕಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆಂದರೆ ಅದಕ್ಕಿಂತ ಬೇರೆ ಯಾವ ದೊಡ್ಡ ಪ್ರಮಾಣಪತ್ರವೂ ಅರುಣಿತಾಗೆ ಅನಗತ್ಯ.ರೆಹಮಾನ್ ಅವರ ಸಮ್ಮುಖದಲ್ಲಿ ತೂಹಿರೇ ಹಾಡನ್ನು ಅತ್ಯಂತ ಮಧುರವಾಗಿ ಹಾಡಿದ ಅರುಣಿತಾ ಕಲ್ಯಾಣ್ ಜಿ – ಆನಂದ್ ಜಿ ಸಂಗೀತ ನಿರ್ದೇಶನದ ಮುಕದ್ದರ್ ಕಾ ಸಿಕಂದರ್ ಚಿತ್ರದ ದಿಲ್ ತೋ ಹೈ ದಿಲ್, ಹಾಗೇ ಸಲಾಮಿ ಇಷ್ಕ್ ಮೇರಿ ಜಾನ್( ಖವ್ವಾಲಿ) ಹಾಡುಗಳನ್ನು ಆನಂದ್ ಜಿ ಸಮ್ಮುಖದಲ್ಲಿ ಹಾಡಿ ಸೈ ಅನ್ನಿಸಿ ಕೊಂಡಿದ್ದು ಸತತ ಅಭ್ಯಾಸ, ಪರಿಶ್ರಮದ ಸ್ವಾದು ಫಲ.

ಅದರಲ್ಲೂ ಮೇರೆ ನಸೀಬ್ ಮೆ ತೂ ಹೆ… ಮತ್ತು ದಿಲ್ ತೋ ಹೆ ದಿಲ್, ಅರುಣಿತಾ ಕಾಂಜಿಲಾಲ್ ಕಂಠದಲ್ಲಿ ನನಗೆ ಸದಾ ಪ್ರಿಯ. ಎ.ಆರ್.ರೆಹಮಾನ್ ಅವರೇ ಮೆಚ್ಚಿದ “ಕೆಹೆನಾ ಹೆ ಕ್ಯಾ.. “ನನಗೆ ಅರುಣಿತಾ ಕಾಂಜಿಲಾಲ್ ಬಗ್ಗೆ , ಅವಳಲ್ಲಿನ ಶ್ರದ್ಧೆಯ ಬಗ್ಗೆ ಬಹಳ ಸಂತೋಷವನ್ನು ನೀಡಿತು.ಪ್ಯಾರೇಲಾಲ್, ಬಪ್ಪಿಲಹರಿ, ಹೇಮಾಮಾಲಿನಿ, ಅಮಿತ್ ಕುಮಾರ್ ಇಂಥವರ ಮುಂದೆಲ್ಲ ಹಾಡಿ ಮಧುರ ವಾದ ಕಂಠದ ಅರುಣಿತಾ ಕಾಂಜಿಲಾಲ್ ತೇರಿ ಮೇರಿ ತೇರಿ ಮೇರಿ…ಹಾಡನ್ನು ಹಾಡುವಾಗ ಕೆಲವು ಜಾಗಗಳಲ್ಲಿ ಮಾಡಿದ ಸೂಕ್ತ ಏರಿಳಿತವಾಗಲೀ, ಪಹಾಡಿ ರಾಗದ ಡಫಲೀ ವಾಲೆ ಡಫಲೀಬಜಾ… ಈಗಲೂ ನನಗೆ ಸದಾ ಕಾಡುತ್ತದೆ.

ಆದರೆ ವೈಯಕ್ತಿಕವಾಗಿ ಈ ವೋಟಿಂಗ್ ಫಲಿತಾಂಶದ ಮೂಲಕ ಅರುಣಿತಾ ಕಾಂಜಿಲಾಲ್ ಮೊದಲನೇ ರನ್ನರ್ ಅಪ್ ಆಗಿದ್ದು ನನಗೆ ಬಹಳ ಬೇಸರವನ್ನು ಈಗಲೂ ಇರಿಸಿದೆ. ಅವಳಿಗೆ ಪ್ರಥಮ ಸ್ಥಾನ ದೊರೆಯಬೇಕಿತ್ತೆಂಬ ಆಶಯ ನನ್ನದಾಗಿತ್ತು.

ಫೋಟೋ ಕೃಪೆ : google

ಅರುಣಿತಾ ಕಾಂಜಿಲಾಲ್ ಬೆಂಗಾಲಿಯವಳೋ, ಹಿಂದಿಯವಳೋ ಎನ್ನುವುದು ಮುಖ್ಯವಲ್ಲ, ಸಂಗೀತ ಕುಲ, ಕಾಲ ನೆಲ ಜಲಗಳನ್ನು ಮೀರಿ ಅತೀತವಾದ ಸರಸ್ವತೀ ಸಂಪನ್ನ ಶಕ್ತಿ. ಅಂಥ ಸರಸ್ವತಿಯ ವಿದ್ಯೆಯನ್ನು ಕಲಿಯುತ್ತಿರುವ ಪ್ರತಿಭಾವಂತೆ ಮತ್ತು ವಿನಯವಂತೆ ಅರುಣಿತಾ ಕಾಂಜಿಲಾಲ್ ಎಂಬ ಹದಿನೆಂಟು ವರ್ಷದ ಈ ಹುಡುಗಿ ನೂರಾರು ವರ್ಷ ಬಾಳಲಿ, ಅದಕ್ಕಿಂತ ಹೆಚ್ಚಾಗಿ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗಳನ್ನು ಮಾಡಿ ಹೆಸರುಗಳಿಸಲಿ.

ಕೊನೆಯ ಮಾತು- ಲೋಫರ್ ಚಿತ್ರದಲ್ಲಿ ಅತ್ಯಂತ ಸುಮಧುರ ಹಾಡುಗಳನ್ನು ಲಕ್ಷ್ಮಿಕಾಂತ್ ಪ್ಯಾರೆಲಾಲ್ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮೆ ತೇರೆ ಇಷ್ಕ್ ಮೆ ಮರ್ನಾ ಜಾವೂ ಕಹೀ ..ಹಾಡನ್ನು ಅರುಣಿತಾ ಪ್ಯಾರೆಲಾಲ್ ಅವರ ಮುಂದೆಯೇ ಹಾಡಿದಳು. ಮೊದಲು ಮೊದಲು ಸ್ವರಗಳ synchronization ಅರುಣಿತಾಳಿಂದ ಆಗಲಿಲ್ಲ. ಆದರೆ ಪ್ಯಾರೆಲಾಲ್ ಬಿಡಲಿಲ್ಲ, ಮೃದುವಾಗಿಯೇ ತಿದ್ದಿದರು. ಆಮೇಲೆ ಅರುಣಿತಾ ಸರಿಯಾಗಿ ಹಾಡಿದಳು.ಇದು ಗುರುಪಾಠ ಮತ್ತು ಸಂಗೀತದ ಕಲಿಕೆ.
ಬೇಖದರ್ ಬೇಖಬರ್…ಈ ಸಾಲುಗಳಲ್ಲಿ ಲತಾಜಿ ಅವರು ನೀಡಿರುವ ಗಾಯನದ ಪಲುಕುಗಳು ಸುಲಭವಾಗಿ ದಕ್ಕುವುದಿಲ್ಲ.

ಬಹುತೇಕ ಅರುಣಿತಾಗೂ ಅನ್ವಯಿಸುವ ಹಾಗೆ ಯಾರನ್ನೇ ಆಗಲಿ ಲತಾ ಮಂಗೇಶ್ಕರ್, ಕಿಶೋರ್ ಕುಮಾರ್, ರಫಿ,ಆಶಾ ಭೋಂಸ್ಲೆ ಗೆ ಹೋಲಿಸುವ ಅನರ್ಥ ಮಾಡಬಾರದು. ಹೀಗೆ ಮಾಡಿದರೆ ಉದಯಿಸುತ್ತಿರುವ ಪ್ರತಿಭಾನ್ವಿತ ಗಾಯಕ ಗಾಯಕಿಯರಿಗೆ ಕಲಿಕೆಯ ಹಾದಿಯಲ್ಲಿ ಪೂರ್ಣವಿರಾಮ ಮತ್ತು ಕಲಿತುಬಿಟ್ಟಿದ್ದೇ ವೆಂಬ ಅತಿ ಆತ್ಮವಿಶ್ವಾಸ ಬರುವ ಸಾಧ್ಯತೆ ಹೆಚ್ಚು.

ಬೇಕಾದಾಗ ತಿದ್ದಿ ತೀಡಿ ಇಂಥ ಗಾಯಕರಿಗೆ / ಕಿಯರಿಗೆ ಸಲಹೆ ನೀಡಬೇಕೇ ಹೊರತು ಚೆನ್ನಾಗಿ ಹಾಡಿದ ಮಾತ್ರಕ್ಕೇ ಅವರನ್ನು ಪಿ.ಬಿ.ಶ್ರೀನಿವಾಸ್,ಎಸ್.ಪಿ. ಜಾನಕಿ, ಪಿ.ಸುಶೀಲ, ಘಂಟಸಾಲರ ಮಟ್ಟಿಗೆ ವಿಪರೀತ ಹೊಗಳಿಕೆಯ ಬೆಟ್ಟ ಹತ್ತಿಸುವ ಹುಚ್ಚು ತೆವಲು , ಟಿ.ಆರ್.ಪಿ ಅತಿರಂಜಿತ ಮಾರ್ಗ ಎಂದಿಗೂ ತಪ್ಪು ಮತ್ತು ಅಸಹನೀಯ.
ಅರುಣಿತಾ ಕಾಂಜಿಲಾಲ್ ಮತ್ತಷ್ಟು ಎತ್ತರಕ್ಕೆ ಏರಿ ಗಾನ ಶೃಂಗ ತಲುಪಲು ಸರಸ್ವತಿಯ ಅನುಗ್ರಹ ಇರಲಿ, ವಿನಯ ,ಸರಳತೆ ಸಂಯಮ ಮರೆಯದಂತೆ ಇವಳ ಸಾಧನಾ ಪಥ ಸಾಗಿ ಮಾಗಲಿ.
ಗಾನಕೆ ನಲಿಯದ ಮನಸೇ ಇಲ್ಲ ಅಲ್ಲವೇ.


  • ಡಾ.ಡಿ.ಎಸ್.ಶ್ರೀನಿವಾಸ ಪ್ರಸಾದ್ – ಕೋಲಾರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW