ಲೇಖಕ ಎಸ್ ಉಮೇಶ್ ಅವರ ‘ಸಿಯಾಚಿನ್ ‘ ಕೃತಿಯು ಜೀವನ ಪ್ರೀತಿ, ಸಾಹಸ ರಾಷ್ಟ್ರೀಯತೆ ಇವರ ಬರವಣಿಗೆಯ ಮೂಲವಸ್ತು. ಈ ಕೃತಿಯ ಕುರಿತು ಲೇಖಕಿ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಸಿಯಾಚಿನ್
ಲೇಖಕರು: ಎಸ್ ಉಮೇಶ್
ಪ್ರಕಾಶನ: ಧಾತ್ರಿ
ಬೆಲೆ: 250 ರೂಪಾಯಿ
ಲೇಖಕರ ಪರಿಚಯ :
ಎಸ್ ಉಮೇಶ್ ರವರು ಮೈಸೂರಿನ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾರದ ವಿಲಾಸ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ‘ದಿ ಲಾಸ್ಟ ಲೆಕ್ಚರ್’ ಎಂಬ ಅನುವಾದಿತ ಕೃತಿಯ ಮೂಲಕ ಕನ್ನಡಿಗರ ಗಮನವನ್ನು ಸೆಳೆದಿದ್ದಾರೆ. ಈ ಕೃತಿಗೆ ಪ್ರತಿಷ್ಠಿತ ಅರಳು ಸಾಹಿತ್ಯ ಪ್ರಶಸ್ತಿಯು ಲಭಿಸಿದೆ. ‘ಎಷ್ಟು ಸೊಗಸು ಈ ಬದುಕು’ ‘ಅಮೂರ್ತ ಸ್ಪೂರ್ತಿ’ ಮೆಲೂಹದ ಮೃತ್ಯುಂಜಯ’ ‘ನಾಗಾ ರಹಸ್ಯ’ ‘ವಾಯುಪುತ್ರರ ಶಪಥ’ ‘ರಿಚರ್ಡ್ ಬ್ರಾನ್ ಸನ್ ಆತ್ಮಕಥೆ’ ಇವರ ಜನಪ್ರಿಯ ಕೃತಿಗಳು.
ಜೀವನ ಪ್ರೀತಿ, ಸಾಹಸ ರಾಷ್ಟ್ರೀಯತೆ ಇವರ ಬರವಣಿಗೆಯ ಮೂಲವಸ್ತು. ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಭಾಷೆ ಇವರ ಆಸಕ್ತಿ ಕ್ಷೇತ್ರಗಳು, ನಿರಂತರ ಓದು ಮತ್ತು ಪ್ರವಾಸ ಇವರ ಹವ್ಯಾಸ.

ಪುಸ್ತಕ ಪರಿಚಯ :
ತಾಷ್ಕೆಂಟ್ ಡೈರಿ , ಶಿವ ಸರಣಿ ಭಾಗದ 3 ಪುಸ್ತಕಗಳ ಅನುವಾದ ಕೃತಿಗಳು , ಲಾಸ್ಟ್ ಲೆಕ್ಟ್ಚರ್ ಹಾಗೂ ಇತ್ತೀಚಿನ “ಸಿಯಾಚಿನ್ ” ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ ಹೀಗೆ ತಮ್ಮ ವಿನೂತನ ಸಾಹಸಮಯೀ ಬರಹಗಳಿಂದ ಕನ್ನಡ ಓದುಗರ ಮನಸ್ಸು ಸೆಳೆಯುತ್ತಿರುವ ಎಸ್.ಉಮೇಶ್ ಅವರು ನಾಡಿನ ನೂತನ ಪ್ರತಿಭಾವಂತ ಹಾಗೂ ಯುವಜನರ ಮೆಚ್ಚಿನ ಬರಹಗಾರರು.
ಅನುವಾದಿತ ಕೃತಿಗಲ್ಲದೆ ಇತ್ತೀಚಿನ ಬರಹ ಸಿಯಾಚಿನ್ ಅವರು ಖುದ್ದಾಗಿ ಆ ಪ್ರದೇಶಕ್ಕೆ ಭೇಟಿ ನೀಡಿ ತಮ್ಮ ಸ್ವಂತ ಅನುಭವಗಳೊಂದಿಗೆ ನೀಡಿದ ಅತ್ಯಮೂಲ್ಯ ಕೃತಿ ಕಾಶ್ಮೀರದ ತುತ್ತತುದಿಯ ಪಾಕಿಸ್ತಾನ ಚೀನಾ ಹಾಗೂ ಭಾರತದ ಗಡಿ ಸೇರುವ ಅತಿ ಸೂಕ್ಷ್ಮ ಪ್ರದೇಶ ಸಿಯಾಚಿನ್ ಸರಿಸುಮಾರು ಸಮುದ್ರಮಟ್ಟದಿಂದ 21000 ಅಡಿ ಎತ್ತರದ ಯುದ್ಧಭೂಮಿ . ಸ್ವಾತಂತ್ರ ಬಂದು ಪಾಕಿಸ್ತಾನದ ಉಗಮವಾಗಿ ನಂತರ ನಿರಂತರವಾಗಿ ಯುದ್ಧ ಭಯೋತ್ಪಾದನೆಯಲ್ಲೇ ಮುಳುಗಿದ ನೆರೆಯ ವೈರಿ ರಾಷ್ಟ ಈಗ ಚೀನಾ ಜೊತೆ ಸೇರಿ ಈ ಪ್ರದೇಶವನ್ನು ಕಸಿಯಲು ಯೋಚಿಸಿದಾಗ ಹೇಗೆ ಭಾರತದ ಸೈನಿಕರು ಪ್ರಾಣವನ್ನು ಪಣವಾಗಿಟ್ಟು ಈ ಪ್ರದೇಶವನ್ನು ಹಾಗೂ ಸುತ್ತಮುತ್ತಲ ಬೆಟ್ಟಗಳನ್ನು -50 ಡಿಗ್ರಿ ಕೊರೆಯುವ ಹಿಮ ಚಳಿ ಬದುಕಲು ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂತಹ ಗ್ಲೇಸಿಯರ್ ನ ಹಿಡಿದು ಉಳಿಸಿಕೊಂಡು ನಮಗೆ ಆಯಕಟ್ಟಿನ ಜಾಗ ಹಾಗೂ ಅನುಕೂಲತೆಯನ್ನು ಕೊಟ್ಟಿದ್ದಾರೆ . ದಿನವಹಿ ಇದನ್ನು ಹೇಗೆ ಪ್ರಾಣವನ್ನು ಪಣವಾಗಿಟ್ಟು ರಕ್ಷಿಸಿ ನಮ್ಮನ್ನು ಸುರಕ್ಷತೆಯ ಬೆಚ್ಚನೆ ಭಾವದಲ್ಲಿಟ್ಟಿದ್ದಾರೆ ಎಂದು ಉಮೇಶ್ ತಮ್ಮ ಕೃತಿಯಲ್ಲಿ ಮನೋಜ್ಞವಾಗಿ ಮೂಡಿಸಿದ್ದಾರೆ.

ಲೇಖಕರು ಅವಿರತ ಪ್ರಯತ್ನಮಾಡಿ ಸಿಯಾಚಿನ್ ಭೇಟಿಗೆ ಯಶಸ್ವಿಯಾಗಿ ಅಲ್ಲಿಯ ಉದ್ದ ಆಳ ಹಾಗೂ ಇತಿಹಾಸದ ಹಿನ್ನೆಲೆ ಜೊತೆ ಅಸಲಿ ಯುದ್ಧಭೂಮಿ ಭಾರತ ಸೈನ್ಯದ ತಾಕತ್ತು ಈ ಸೈನಿಕ ನೆಲೆಯ ಮಹತ್ವನ್ನು ತಮ್ಮ ಭಾಷೆ ಬರಹದ ಮೂಲಕ ವರ್ಣಿಸಿದ್ದಾರೆ . ಭಾರತೀಯ ಸೈನಿಕನ ಕ್ಷಾತ್ರ ತೇಜಸ್ಸನ್ನು ಬಿಚ್ಚಿಡುವ ಈ ಕೃತಿ ಪ್ರತಿಯೊಬ್ಬರೂ ಓದಬೇಕಾದ್ದಲ್ಲದೆ ಮಕ್ಕಳಿಗೆ ಪಠ್ಯಪುಸ್ತಕವಾಗಿಯೂ ಸೇರಿಸಬೇಕಾದ ಅಗತ್ಯ ಇದೆ. ಸೈನ್ಯದ ಹಿರಿಮೆ ಸಾರುತ್ತಲೇ ಭೌಗೋಳಿಕ ಸವಾಲನ್ನು ಕಟ್ಟಿಕೊಡುವ ಅಪರೂಪದ ಕೃತಿ ಸಿಯಾಚಿನ್ ಎಸ್ ಉಮೇಶ್ ರವರ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಹಾಗೂ ನಾಡಿನ ಸಾಹಿತ್ಯಕ್ಕೆ ಅವರ ಸೇವೆ ಸಲ್ಲಲಿ…
- ಚೇತನ ಭಾರ್ಗವ
