ಮೊದ್ಲೇ ದಿನಾನ ಮಂಗಳಾರತಿ ಆತು – ಲತಾ ಜೋಶಿ



ಕತೆಗಾರ್ತಿ ಲತಾ ಜೋಶಿ ಅವರು ಮೂಲತಃ ಉತ್ತರ ಕರ್ನಾಟಕದ ಮೆಣಸಿನಕಾಯಿಗೆ ಜಗತ್ಪ್ರಸಿದ್ಧವಾದ ಬ್ಯಾಡಿಗಿಯವರು. ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯದಲ್ಲಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕನ್ನಡ ಸಾಹಿತ್ಯಾರಾಧಕಿ. ಓದುವುದು, ಕತೆ ಬರೆಯುವುದು ಅವರ ಹವ್ಯಾಸದಲ್ಲೊಂದು. ಅವರ ಬರವಣಿಗೆಯಲ್ಲಿ ಉತ್ತರಕರ್ನಾಟಕದ ಸೊಗಡು ಎದ್ದುಕಾಣಿಸುತ್ತದೆ. “ಜೀವನ ಜೋಕಾಲಿ'” ಎಂಬ ಕಿರು ಕಾದಂಬರಿಯನ್ನು ಈಗಾಗಲೇ ಹೊರಗೆತಂದಿದ್ದಾರೆ. ಹಲವಾರು ಮಾಸ ಪತ್ರಿಕೆಗಳು, ವಾರ ಪತ್ರಿಕೆಗಳು, ನಿಯತಕಾಲಿಕಗಳಲ್ಲಿಯೂ ಅವರ ಬರಹಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಅವರ ಶ್ರಮ ಅಪಾರ. ಅವರ ಸಣ್ಣಕತೆ ಆಕೃತಿಕನ್ನಡದಲ್ಲಿ ಪ್ರಕಟವಾಗಿದ್ದು, ಓದಿ ಪ್ರೋತ್ಸಾಹಿಸಿ…

ನಾವು ಕಲ್ತದ್ದು ಕನ್ನಡ ಮಾಧ್ಯಮದೊಳಗ .. 4 ನೇ ವರ್ಗದವರೆಗೂ ಪಾಟಿ ಪೇಣೆ ( ಸ್ಲೇಟು ಬಳಪ ).. ಮನೆಗೆಲಸ ಎಲ್ಲ ಅದ್ರೊಳಗ ಬರೀತಿದ್ವಿ . ಮಗ್ಗಿ , ಲೆಕ್ಕ , ಬಳ್ಳಿಗಳು , ಪ್ರಶ್ನೋತ್ತರಗಳು … ಮೊಳೆಯಿಂದ ಕೊರೆದ ಗೆರೆಗಳ ಮೇಲೆ ಮುದ್ದಾದ ಅಕ್ಷರಗಳು . ಅಕ್ಷರಗಳು ಅಳಿಸದಂತೆ ಹಿಂದೆ ಮುಂದೆ ರಟ್ಟು ಇಡ್ತಿದ್ವಿ . ಓದಲು ಮಾತ್ರ ಕೆಲವೇ ಪುಸ್ತಕಗಳು . ಈಗ ಆ ದಿನಗಳು ನೆನಪು ಮಾತ್ರ ..
4 ನೇ ವರ್ಗ ಮುಗಿದು 5 ನೇ ವರ್ಗಕ್ಕೆ ಹೋಗುವ ಖುಷಿ . ಶಾಲೆ ಬ್ಯಾರೆದು , ಬ್ಯಾರೆ ಬ್ಯಾರೆ ಗೆಳತಿಯರು , ಗುರುಗಳು . ಯುನಿಫಾರ್ಮ್ ಹಾಕ್ಕೋಬೇಕಂತ .ಪಾಟಿ ಇಲ್ಲ ಇನ್ಮ್ಯಾಲೆ , ನೋಟ್ಬುಕ್ ಸೀಸ್ ಪೆನ್ಸಿಲ್ ಅಂತ .ಒಂದೊಂದು ವಿಷಯ ಹೇಳಿಕೊಡಲಿಕ್ಕೆ ಒಬ್ಬೊಬ್ಬ ಟೀಚರ್ ಅಂತ . ಹೊಸಾ ದೊಡ್ದ್ ಸಾಲಿ , ನಮ್ಮಿಂದಾನ ಹೊಸ ಬ್ಯಾಚ್ .. ಖುಷಿನೋ ಖುಷಿ .

ನಾನು ಯಾವಾಗ ಸಾಲಿ ಸುರು ಆಗ್ತದೋ ಅಂತ ಕಾಯ್ತಿದ್ದೆ .. ಅದ್ರಗೂ ಬರೇ ಹುಡಿಗೇರು ಅಷ್ಟ ಇರೋ ಸಾಲಿ .. ಅಪ್ಪ ಅವ್ವ ಬುದ್ಹಿ ಹೇಳಿದ್ದ ಹೇಳಿದ್ದು ( ಈಗ ಇಂಜಿನಿಯರಿಂಗ್ ಮುಗಿಸಿ MS ಮಾಡ್ಲಿಕ್ಕೆ ವಿದೇಶಕ್ಕ ಹೊಂಟವರಿಗೆ ಸೈತ್ ಹೇಳಂಗಿಲ್ ಬಿಡ್ರಿ ) ನಾನು ಹಗಲು ರಾತ್ರಿ ಕಾಯ್ಲಿಕತ್ ಆ ಸುದಿನ (?) ಬಂದ ಬಿಡ್ತು . ಲಗು ಲಗು ರೆಡಿ ಆಗಿ ಅಪ್ಪನ ಜೊತಿಗೆ ಸೈಕಲ್ ಮ್ಯಾಲ್ ಕೂತು ಸಾಲಿ ಮುಟ್ಟಿದೆ . ಹೆದ್ರಿಕಿ ಆಗ್ಲಿಕ್ಕೆ ಸುರು ಆತು .. ಯಾರು ಮೊದ್ಲ ಇದ್ದ ಗೆಳತೇರು ಇಲ್ಲ . ಇಲ್ಲೇ ಟೀಚರ್ ಅಷ್ಟ , ನನ್ನ ಮೊದಲ ಸಾಲಿ ಒಳಗ್ ಬರೇ ಮಾಸ್ತರ್ ಇದ್ರೂ . ನನ್ನ 4 ನೇ ವರ್ಗದ ಮಾಸ್ತರ್ ನಿಟುವಳ್ಳಿ ಮಾಸ್ತರ್ , ಭಾರಿ ಸಿಟ್ಟಿನವರು ( ಈಗ ಸಿಟ್ಟು ಪೂರ್ತಿ ಹೋಗೆದ ಪಾಪ ವಯಸ್ ಆಗೇದ )..



ನನ್ನ ವರ್ಗ 5 A ಅಂದಿದ್ದು ನೆನಪಿತ್ತು , ಅಪ್ಪ ಹೊರಗ ಬಿಟ್ಟು ಹೋಗಿದ್ರು , ಹೆಂಗೋ ಹುಡಿಕಿ ಹೋದೆ. ಒಳಗ್ ಹೋಗಿ ನೋಡ್ತೇನಿ ಖುಷಿನೋ ಖುಷಿ .ಯಾಕಂದ್ರ ಅಲ್ಲೇ ಹೊಸ ಡೆಸ್ಕ್ ಮತ್ತ್ ಬೆಂಚ್ ಇದ್ವು ಕೂಡ್ಲಿಕ್ಕೆ . ನನಗ್ 4 ವರ್ಷ ನೆಲದ ಮ್ಯಾಲ್ ಕೂತು ರೂಢಿ . ಹಂಗ ಒಳಗ್ ಹೋಗಿ ಚೀಲ ಇಟ್ಟು ನೋಡಿದೆ. ಇಬ್ರು ಹಳೇ ಗೆಳತೇರು ಕಂಡ್ರು . ಇನ್ನೆನ್ಬೇಕ್ರಿ..

ಟೀಚರ್ ಬಂದ್ರು ಒಳಗ , ಎಲ್ಲಾರು ಎದ್ದು ನಿಂತು ‘ಗುಡ್ ಮಾರ್ನಿಂಗ್’ ಟೀಚರ್ ಅನ್ಬೇಕು ಅಂತ ಹೇಳಿ ಕೊಟ್ರು , ಹೇಳಿ ಕೂತ್ವಿ . ಹೊಸ ಯುನಿಫಾರ್ಮ್ , ಹೊಸ ಪುಸ್ತಕ್ ವಾಸ್ನಿ , ಸಾಲಿ ಹೊಸಾದು ಅದರ ಪೇಯಿಂಟ್ ವಾಸ್ನಿ .ಹೊಸ ಲೋಕಾ ಬಿಡ್ರಿ ..ಎಲ್ಲಾರ ಗಮನ ಪುಸ್ತಕ್ ಒಳಗ. ನಂಗ ಲಗು ಪುಸ್ತಕ ತಗದು ಏನಾರ ಬರೀಲಿಕ್ಕೆ ಕೈ ಚುಟು ಚುಟು ಅನ್ಲಿಕತ್ತವು .. ಹಗುರಕ ಪುಸ್ತಕ್ಕ ಮತ್ತು ಸೀಸಕಡ್ಡಿ ತಕ್ಕೊಂಡು ಹಿಂದಿನ ಪೇಜ್ ಒಳಗ್ ನನ್ನ ಮಾಮೂಲಿ ರಂಗೋಲಿ ಬಿಡ್ಸೋದು ಸುರು ಹಚ್ಗೊಂಡೆ ..

ಫೋಟೋ ಕೃಪೆ : news18

ಟೀಚರ್ ಜೋರಾಗಿ ಹೇಳಿದ್ರು , ಎಲ್ಲಾರು ನಿಮ್ಮ ನೇಮ್ ಸರ್ ನೇಮ್ ಹೇಳ್ರಿ ಅಂದ್ರು . ( ಉತ್ತರ ಕರ್ನಾಟಕದ ಕಡೆಗೆ ಹೆಸರಿನ ಮುಂದೆ ಇರುವ ಕುಟುಂಬದ ಹೆಸರಿಗೆ ಸರ್ ನೇಮ್ ಅನ್ನುವ ವಾಡಿಕೆ ). ನನ್ನ ಪಾಳೆ ಬರ್ಲಿಕ್ಕೆ ಇನ್ನು ಭಾಳ್ ಟೈಮ್ ಇತ್ತು .ಲಗು ಒಂದು 8 ಚಿಕ್ಕಿ 1 ಕ್ಕ ನಿಲ್ಲಸೋ ರಂಗೋಲಿ ಮುಗಸೋಣ ಅಂತ ಚಾಲು ಮಾಡಿದೆ .ಅಲ್ಲೇ ಪರಿಚಯ ಸಾಗಿತ್ತು. ಇಲ್ಲೇ ನನ್ನ ರಂಗೋಲಿ ಸಾಗಿತ್ತು.

ನನ್ನ ಪಕ್ಕದವಳ ಪಾಳಿ ಬರೋದಕ್ಕೂ ನಂದು ರಂಗೋಲಿ ಮುಗದು ಬುಕ್ ಮುಚ್ಚಿದೆ . ಮುಂದ ನೀ ಹೇಳಮ್ಮಾ ನಿನ್ನ ಹೆಸರು ಅಂದ್ರು ಟೀಚರ್ . ಲತಾ ರೀ ಅಂದೇ , ಸರ್ ನೇಮ್ ಅಂದ್ರು . ನಿಟುವಳ್ಳಿ ಮಾಸ್ತರ್ ಅಂದೇ ..ಆಅ ಅಂದ್ರು .ಅವರಿಗೆ ಕೇಳಿಲ್ಲ ಅನ್ಕೊಂಡು ಜೋರಾಗಿ ನಿಟುವಳ್ಳಿ ಮಾಸ್ತರ್ ರೀ ಅಂದೇ . ಅಂದ್ರೇನು ಅಂದ್ರು .4 ನೇ ಕ್ಲಾಸಿಗೆ ಅವರ ಇದ್ರರಿ ನಮಗ ಮಾಸ್ತರು ಅಂದೇ .ನಿಮ್ಮ ಮಾಸ್ತರ್ ತೊಗೊಂಡು ನಾನೇನ್ ಮಾಡ್ಲಿ ಅಡ್ರೆಸ್ ಹೇಳು ಅಂದ್ರು , ಅಳಕೋತ ಪಾಟೀಲ್ ರೀ ಅಂದೇ .. ಎಲ್ಲಾರು ಜೋರ್ ನಗ್ಲಿಕತ್ರು .

ಆತು ನೋಡ್ರಿ ಮೊದ್ಲೇ ದಿನಾನ ಮಂಗಳಾರತಿ .

ಮನಿಗ ಬಂದು ಅವ್ವಗ ಹೇಳಿ ಅಲ್ಲೂ ಬೈಸ್ಕೊಂಡೆ .

ರಂಗೋಲಿ ಸಾಲಿ ಒಳಗ್ ತಗದ್ರ ಹೊಡ್ತಾ ಬೀಳ್ತಾವು ಅಂದ್ಲು ಅವ್ವ .

ಇದು ನನ್ನ ಬಾಲ್ಯದ ಒಂದು ಮೆಲುಕು ..


  • ಲತಾ ಜೋಶಿ (ಲೇಖಕರು- ಕತೆಗಾರ್ತಿ- ಕವಿಯತ್ರಿ)

5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW