ಮೃಣಾಲ್ ಹಾಗೂ ಶಿರೀಷ್ ಇಬ್ಬರದೂ ಹಿರಿಯರು ನೋಡಿ ಮಾಡಿದ ಮದುವೆ. ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರುಗಳಾಗಿದ್ದರು. ಆಫೀಸ್ ನಲ್ಲಿ ಶಿರೀಷ್ ನಿಗೆ ಬಾಸ್ ನಿಂದ ಕಿರುಕುಳ ಹೆಚ್ಚಾದಾಗ ಕೆಲಸಕ್ಕೆ ಗುಡ್ ಬೈ ಹೇಳಿ ಮನೆಯಲ್ಲಿ ಕೂಡುತ್ತಾನೆ. ಇವತ್ತಿಲ್ಲ ನಾಳೆ ಶಿರೀಷ್ ಏನಾದ್ರೂ ಕೆಲಸ ಹುಡುಕಿ ಕೊಳ್ಳುತ್ತಾನೆ ಎಂಬ ನಂಬಿಕೆ ಅವಳಿಗೆ ಹೆಂಡತಿ ಮೃಣಾಲ್ ಳಿಗೆ. ಮುಂದೇನಾಗುತ್ತದೆ ಕತೆಗಾರ್ತಿ ಪುಷ್ಪಾ ಹಾಲಭಾವಿ ಅವರ ಈ ಸಣ್ಣಕತೆಯನ್ನು ತಪ್ಪದೆ ಓದಿ …
ಆಫೀಸ್ ಕೆಲಸ ಮುಗಿಸಿಕೊಂಡು ಮೃಣಾಲ್ ಮನೆಗೆ ಬಂದಾಗ ಸಂಜೆ ಆರು ಗಂಟೆ. ಅಡುಗೆ ಮನೆಯಲ್ಲಿ ಗಂಡ ಶಿರೀಷ್ ಹಾಗೂ ಮಕ್ಕಳಾದ ಅಥರ್ವ ಹಾಗೂ ಅನಿಕಾರ ನಗು, ಮಾತು ಜೋರಾಗಿ ಕೇಳುತಿತ್ತು. ಅಥರ್ವ … ‘ಅಪ್ಪಾ ನೀನು ಮಾಡಿದ ಶ್ಯಾವಿಗೆ ಉಪ್ಪಿಟ್ಟು ಸಕತ್ತಾಗಿದೆ, ಉದ್ದುದ್ದ ಎಳೆಯ ಪಾಸ್ತಾ ಟೇಸ್ಟ ಸೂಪರ್ ‘ಎಂದಾಗ ತಂಗಿ ಅನಿಕಾ ‘ಹೌದು ಅಪ್ಪಾ ನನಗೆ ನಾಳೆ ಡಬ್ಬಿಗೆ ಇದನ್ನೇ ಮಾಡಿ ಹಾಕು’ ಎಂದಾಗ ಶಿರಿಷ್ ಇಬ್ಬರೂ ಮಕ್ಕಳಿಗೆ ಹೈ ಫೈ ಕೊಟ್ಟಿದ್ದ. ಈ ಮಾತುಗಳನ್ನು ಕೇಳುತ್ತಲೇ ಮೃಣಾಲ್ ರೂಮಿನಲ್ಲಿ ಬಟ್ಟೆ ಬದಲಿಸಿ ಅಡುಗೆ ಮನೆಗೆ ಬಂದಾಗ ಮಕ್ಕಳು ಅಮ್ಮಾ ಬಂದ್ಲೂ ಅಂತ ಓಡಿ ಬಂದು ತಬ್ಬಿಕೊಂಡಾಗ ಮೃಣಾಲ್ ಮುಖದಲ್ಲಿ ಶಿರೀಷನ ಪ್ರತಿ ಕೃತಜ್ಞತೆಯ ನೋಟವಿತ್ತು. ‘ಓ! ಮೃಣಾಲ್ ಬಾ ಬಾ ಕಾಫಿ ಮಾಡಿದ್ದೀನಿ ಶ್ಯಾವಿಗೆ ಸಕತ್ತಾಗಿದೆಯಂತೆ ನಿನ್ನ ಮಗ ಸರ್ಟಿಫಿಕೇಟ್ ಕೊಟ್ಟಿದ್ದಾನೆ ನೀನೂ ತಿಂದು ಹೇಗಿದೆ ಹೇಳು ‘ಎಂದು ತಮ್ಮಿಬ್ಬರಿಗೂ ಶ್ಯಾವಿಗೆ ಉಪ್ಪಿಟ್ಟು ಹಾಕಿಕೊಂಡು ಡೈನಿಂಗ್ ಟೇಬಲ್ ಗೆ ಬಂದಿದ್ದ.ಶ್ಯಾವಿಗೆ ಉಪ್ಪಿಟ್ಟು ತಿಂದ ಮೃಣಾಲ್ ಗೂ ಮಾಮೂಲಿ ಉಪ್ಪಿಟ್ಟಿಗಿಂತ ತುಂಬಾ ರುಚಿ ಅನಿಸಿತ್ತು.
‘ಶಿರೀಷ.. ನಿಜವಾಗ್ಲೂ ತುಂಬಾ ರುಚಿಯಾಗಿದೆ ನೀನು ನಮ್ಮನೆಯ ಮಾಸ್ಟರ್ ಶೆಫ್ ‘ಎಂದು ಮೃಣಾಲ್ ನುಡಿದಾಗ ಶಿರೀಷ್ ನಾಟಕೀಯವಾಗಿ ಬಗ್ಗಿ ಥ್ಯಾಂಕ್ಯೂ ಮೇಡಂ ಎಂದಾಗ ಮನೆಯಲ್ಲಿ ನಗೆ ಬುಗ್ಗೆ ಉಕ್ಕಿತ್ತು.

ಫೋಟೋ ಕೃಪೆ : ಅಂತರ್ಜಾಲ
ಆರು ತಿಂಗಳ ಹಿಂದೆ ಬತ್ತಿ ಹೋಗಿದ್ದ ‘ ನಗು’ವಿನ ಸೆಲೆ ಮತ್ತೆ ಚಿಮ್ಮಿತ್ತು . ಮನೆಯಲ್ಲಿ ಶಾಂತಿ, ಸಮಾಧಾನದ ವಾತಾವರಣ ಮೆಲ್ಲನೆ ಅಡಿ ಇಡುತ್ತಿತ್ತು. ಮೃಣಾಲ್ ಹಾಗೂ ಶಿರೀಷ್ ಇಬ್ಬರದೂ ಹಿರಿಯರು ನೋಡಿ ಮಾಡಿದ ಮದುವೆ. ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರುಗಳೇ. ಒಳ್ಳೆಯ MNC ಕಂಪನಿಯಲ್ಲಿ ಕೆಲಸಕ್ಕಿದ್ದ ಇಬ್ಬರಿಗೂ ಒಳ್ಳೆಯ ಸಂಬಳವಿತ್ತು. ಆರು ವರ್ಷದಲ್ಲಿ ಇಬ್ಬರು ಮಕ್ಕಳೂ ಆಗಿದ್ದರು. ಗಂಡ, ಹೆಂಡತಿ ಇಬ್ಬರೂ ಅನುಸರಿಸಿಕೊಂಡು ಮಕ್ಕಳನ್ನು ಬೆಳೆಸಿದ್ದರು. ತೀರಾ ಅನಿವಾರ್ಯವಿದ್ದಾಗ ಶಿರೀಷ ತನ್ನ ಅಮ್ಮನನ್ನೋ, ಇಲ್ಲವೇ ಮೃಣಾಲ್ ತನ್ನ ತಾಯಿ, ತಂದೆಯನ್ನೋ ಕರೆಸಿ ಕೊಳ್ಳುತ್ತಿದ್ದಳು. ಯಾವುದೇ ತೊಂದರೆ ಇಲ್ಲದೆ ಬದುಕು ಸರಾಗವಾಗಿ ನಡೆದಿದೆ ಎನ್ನುವಾಗಲೇ ಶಿರೀಷ್ ಗೆ ಆಫೀಸ್ನಲ್ಲಿ ಹೊಸದಾಗಿ ಬಂದ ಬಾಸ್ನಿಂದ ಕಿರುಕುಳ ಪ್ರಾರಂಭವಾಗಿತ್ತು. ಚಿಕ್ಕ, ಪುಟ್ಟ ವಿಷಯಕ್ಕೆಲ್ಲ ಶಿರೀಷನನ್ನು ಟಾರ್ಗೆಟ್ ಮಾಡಿ ಎಲ್ಲರ ಮುಂದೆ ಅವಮಾನ ಮಾಡುವುದು, ಹೆಚ್ಚಿನ ಕೆಲಸ ಕೊಟ್ಟು , ಇಷ್ಟು ದಿನದಲ್ಲೇ ಕೆಲಸ ಮುಗಿಸ ಬೇಕು ಎಂಬ ಗಡವೂ ವಿಧಿಸಿದಾಗ ಶಿರೀಷ್ ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದ.ಎಷ್ಟೇ ಅನುಸರಿಸಿಕೊಂಡು ಹೋದರೂ ‘ಒಲ್ಲದ ಗಂಡನಿಗೆ ಮೊಸರನ್ನದಲ್ಲಿ ಕಲ್ಲು’ ಎನ್ನುವಂತೆ ಏನೋ ಒಂದು ತಪ್ಪು ಹುಡುಕುತ್ತಿದ್ದ ಬಾಸ್ನ ಕಂಡರೆ ಸಿಡಿದೇಳುವಂತೆ ಆಗ್ತಿತ್ತು ಶಿರೀಷನಿಗೆ.ಅಂದು ಹೀಗೆ ಯಾವುದೋ ಒಂದು ಕಾರಣಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಗಿತ್ತು. ಆ ದಿನ ಮನೆಗೆ ಬಂದ ಶಿರೀಷ್ ಮೃಣಾಲ್ ಮುಂದೆ ಎಲ್ಲ ಹೇಳಿ …ನಾನು ಈ ಕೆಲಸ ಬಿಡುತ್ತೇನೆ ನನಗೆ ಕೆಲಸ ಮಾಡಲಾಗುತ್ತಿಲ್ಲ ಎಂದಾಗ ಮೃಣಾಲ್… ಅವನನ್ನು ಸಮಾಧಾನ ಪಡಿಸಿ ‘ಇದೆಲ್ಲಾ ಎಲ್ಲಾ ಕಡೆ ಮಾಮೂಲು ನೀನು ಒಂದು ತಿಂಗಳು ರಜಾ ಹಾಕಿ ಸ್ವಲ್ಪ ರೆಸ್ಟ ಮಾಡು ನಂತರ ಮತ್ತೆ ಹೋಗುವಿಯಂತೆ’ ಎಂದಾಗ ಶಿರೀಷ್ ..’ಸಾಧ್ಯವೇ ಇಲ್ಲ ನಾನಂತೂ ಕೆಲಸಕ್ಕೆ ಹೋಗೋದಿಲ್ಲ’ ಅಂತ ಖಡಾ ಖಂಡಿತವಾಗಿ ಹೇಳಿದಾಗ ಮೃಣಾಲ್ ದಿಗ್ಮೂಢಳಾಗಿದ್ದಳು.
ಒಂದು ತಿಂಗಳು ಮೃಣಾಲ್ ಏನೂ ಮಾತನಾಡಲಿಲ್ಲ. ಒಂದು ತಿಂಗಳಾದರೂ ಕೆಲಸದ ಬಗ್ಗೆ ಆಸಕ್ತಿ ತೋರದಾದಾಗ ಅವಳಿಗೆ ಚಿಂತೆಯಾಗ ತೊಡಗಿತು.ಅಂದು ಭಾನುವಾರ ರಜೆ. ವಾರದಿಂದ ಉಳಿದ ಕೆಲಸಗಳನ್ನು ಮಾಡುತ್ತ ಮೆಲ್ಲನೆ ಶಿರೀಷನನ್ನು ಮಾತಿಗೆಳೆದಳು.
‘ಶಿರೀಷ್ ನೀನು ಕೆಲಸ ಬಿಟ್ಟು ಒಂದು ತಿಂಗಳಾಯಿತು. ಬೇರೆ ಕಂಪನಿಗೆ ಟ್ರೈ ಮಾಡು. ಅಪ್ಲಿಕೇಶನ್ ಹಾಕು’.
‘ಇಲ್ಲ ನನಗೆ ಈ ಐಟಿ ಬಿಟಿ ಕೆಲಸದಲ್ಲಿ ಆಸಕ್ತಿ ಇಲ್ಲ. ಬೇರೆ ಯಾರದೋ ಕೈ ಕೆಳಗೆ ಕೆಲಸ ಮಾಡಲು ನಾನು ತಯಾರಿಲ್ಲ’.
‘ಹಾಗಿದ್ರೆ ಏನು ಮಾಡ್ತೀಯಾ, ಹೀಗೆ ಸುಮ್ಮನೆ ಕುಳಿತರೆ ಡಿಪ್ರೆಶನ್ ಗೆ ಹೋಗ್ತೀಯಾ. ನನಗೆ ಅಡುಗೆ, ಮಕ್ಕಳು, ಆಫೀಸ್ ಕೆಲಸ ಎಲ್ಲವನ್ನೂ ಮ್ಯಾನೇಜ್ ಮಾಡುವುದರಲ್ಲಿ ಸಾಕಾಗ್ತಿದೆ. ಮೊದಲೆಲ್ಲ ನನಗೆ ಸಹಾಯ ಮಾಡುತ್ತಿದ್ದ ನೀನು ಈಗ ಏನೂ ಮಾಡ್ತಾ ಇಲ್ಲ. ನಿನಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಇದು ಒಳ್ಳೆಯ ಲಕ್ಷಣ ಅಲ್ಲ’.
‘ಹೌದು ನನಗೂ ಗೊತ್ತಾಗುತ್ತೆ, ನಾನೂ ಅದೇ ಯೋಚನೆಯಲ್ಲಿ ಇದ್ದೇನೆ. ನನಗೆ ಈಗೀಗ ಸಿಟ್ಟು ಜಾಸ್ತಿ ಬರ್ತಾ ಇದೆ. ಮಕ್ಕಳ ಮೇಲೆ, ನಿನ್ನ ಮೇಲೆ ಸುಮ್ಮ ಸುಮ್ಮನೆ ರೇಗ್ತೀನಿ. ಯಾವುದರಲ್ಲೂ ಉತ್ಸಾಹ ಇಲ್ಲ. ಎಂಜಿನಿಯರಿಂಗ್ ಓದಿದ ಕಾರಣ ಅದೇ ಕೆಲಸ ಮಾಡಬೇಕಾ? ನನಗೆ ಆ ಕೆಲಸಾ ಅಂದ್ರೆ ಉಸಿರು ಕಟ್ಟೋ ಥರಾ ಆಗ್ತಾ ಇದೆ. ಒಂದೇ ಸಮನೆ ಆ ಕಂಪ್ಯೂಟರ್ ಮುಂದೆ ಕೂತು ಕೂತು ಹುಚ್ಚು ಹಿಡಿಯೋ ತರ ಆಗುತ್ತೆ. ಬೇರೆ ಯಾವ ಕೆಲಸ ಮಾಡಬೇಕು ಅಂತ ತಿಳೀತಾ ಇಲ್ಲ. ನಾನು ಬದುಕಿನಲ್ಲಿ ಸೋತು ಹೋದೆನೇನೋ ಅಂತ ಅನ್ನಸ್ತಾ ಇದೆ. ಮುಂದೆ ಏನು ಮಾಡಬೇಕು ಅಂತ ಯೋಚನೆ ಮಾಡಲು ನನಗೆ ಸ್ವಲ್ಪ ಟೈಮ್ ಕೊಡು. ಒಂದು ಆರು ತಿಂಗಳು ನನ್ನಷ್ಟಕ್ಕೇ ನನ್ನ ಬಿಟ್ಟು ಬಿಡು.ನಾನು ಮನೆ ಕೆಲಸ, ಅಡುಗೆ, ಮಕ್ಕಳ ಕಾಳಜಿ, ಅವರ ಓದು ಎಲ್ಲ ನಿಭಾಯಿಸ್ತೇನೆ. ನೀನು ಆಫೀಸಿಗೆ ಹೋಗಿ ಬಾ’ ಎಂದಾಗ ಮೃಣಾಲ್ ಗೆ ಇದೇನು ಹೊಸ ವರಸೆ ಎನ್ನುವಂತಾಯ್ತು.
ನಮ್ಮ ಭಾರತೀಯ ಸಮಾಜದಲ್ಲಿ ಗಂಡಸಿಗೆ ಒಂದು ವಿಶಿಷ್ಟ ಸ್ಥಾನಮಾನ. ಗಂಡಸು ಮನೆ ಯಜಮಾನ ಅವನು ಹೊರಗೆ ದುಡಿದು ತಂದರೆ ಹೆಂಡತಿಯಾದವಳಿಗೆ ಮನೆ, ಮಕ್ಕಳು, ಹಿರಿಯರು, ನೆಂಟರನ್ನು ನೋಡಿಕೊಳ್ಳುವ ಜವಾಬ್ದಾರಿ. ಬದಲಾದ ಸನ್ನಿವೇಶದಲ್ಲಿ ಹೆಣ್ಣು ಗಂಡಿನಂತೆ ಹೊರಗೂ ದುಡಿಯುತ್ತ ಮನೆಯನ್ನೂ ಸಂಭಾಳಿಸುತ್ತಾಳೆ. ಆದರೆ ಗಂಡು ಮಾತ್ರ ಹೊರಗೆ ದುಡಿದು ಬರುವ ಅವನು ಹೆಣ್ಣಿನಂತೆ ಮನೆಯನ್ನು ಸಂಭಾಳಿಸಲಾರ, ಒಂದು ವೇಳೆ ಸಂಭಾಳಿಸಿದರೂ ಸಮಾಜ ಅವನನ್ನು ನೋಡುವ ರೀತಿಯೇ ಬೇರೆ. ಗಂಡನಾದವನು ಮನೆಯಲ್ಲಿ ಅಪ್ಪಿ ತಪ್ಪಿ ಏನಾದರೂ ಮನೆಯ ಕೆಲಸ ಮಾಡಿದರೆ ಆಗಲೇ ಅಕ್ಕ ಪಕ್ಕದವರ ಗುಸು ಗುಸು… ಪಾಪದ ಗಂಡ ಅವನು. ಹೆಂಡತಿ ತುಂಬಾ ಜೋರಾಗಿದ್ದಾಳೆ ಗಂಡನ ಕೈಯಲ್ಲಿ ಸಾಕಷ್ಟು ಕೆಲಸಾ ಮಾಡಿಸ್ತಾಳೆ, ಕುಳಿತಲ್ಲೇ ಆರ್ಡರ್ ಮಾಡ್ತಾಳೆ ….ಇಷ್ಟೇ ಅಲ್ಲದೆ ಅಮ್ಮಾವ್ರ ಗಂಡ ಎಂಬ ಬಿರುದು ದಯಪಾಲಿಸುತ್ತಾರೆ ಆ ಬಡಪಾಯಿಗೆ. ತಮ್ಮ ಸಂಸಾರಕ್ಕೆ ಗಂಡ, ಹೆಂಡತಿ ಪರಸ್ಪರ ತಿಳುವಳಿಕೆಯಿಂದ ಹೊಂದಿಕೊಂಡು ಹೋದರೆ ಅಕ್ಕಪಕ್ಕದವರಿಗೆ ನೋಡಲಾಗುವುದಿಲ್ಲ ಎಂಬ ಸತ್ಯ ಮೃಣಾಲ್ ಕಣ್ಣೆದುರು ಬಂದು ಹೋಯಿತು. ಇನ್ನು ಪೂರ್ತಿ ಕೆಲಸ ಬಿಟ್ಟು ಅಡುಗೆ ಮಾಡಿ ಮನೆಯನ್ನೂ ಮೆಂಟೇನ್ ಮಾಡ್ತೀನಿ ಎನ್ನುವ ಶಿರೀಷನ ಮಾತಿಗೆ ಏನೆನ್ನ ಬೇಕೋ ತಿಳಿಯದಾಗಿತ್ತು ಅವಳಿಗೆ.
ಈ ವಿಷಯವನ್ನು ಶಿರೀಷನಿಗೆ ಹೇಳಿದಾಗ.. ಅನ್ನುವವರು ಸಾವಿರ ಅನ್ತಾರೆ ಅನ್ನಲಿ ಬಿಡು. ಜನ ಆಡಿಕೋತಾರೆ ಅಂತ ನಮಗೆ ಅನುಕೂಲ ಯಾವುದೋ ಅದನ್ನು ಮಾಡದಿದ್ದರೆ ನಮ್ಮ ಸಮಸ್ಯೆಯನ್ನು ಅವರು ಬಂದು ಬಗೆಹರಿಸುತ್ತಾರಾ? ನೀನಿದಕ್ಕೆ ತಲೆ ಕೆಡಿಸಿಕೋ ಬೇಡ ಎಂದಾಗ ನಿರುತ್ತರಳಾಗಿದ್ದಳು.
ಮೃಣಾಲ್ಗೆ ತಾನು ಕೆಲಸಕ್ಕೆ ಹೋಗುವುದು ..ಶಿರೀಷ ಕೆಲಸ ಬಿಟ್ಟು ಮನೆಯಲ್ಲಿದ್ದು ಮನೆ ಕೆಲಸ ಮಾಡುವುದು ಅವಳಿಗೆ ಮುಜುಗರ ತರುತ್ತಿತ್ತು.ಆದರೆ ಸಂಸಾರ ಸಾಗಿಸಲು ಅವಳು ಕೆಲಸಕ್ಕೆ ಹೋಗಲೇ ಬೇಕಿತ್ತು. ಬೆಳಗಿನ ಶಿಫ್ಟ ಇಲ್ಲದಿದ್ದಾಗ ಶಿರೀಷ ಜೊತೆಗೂಡಿ ಅಡುಗೆ ಮಾಡಿ, ಹೆಚ್ಚುವರಿ ಕೆಲಸಗಳಿಗೂ ಗಮನ ಕೊಡುತ್ತಿದ್ದಳು.ಆದರೆ ಸಮಾಜದ ಕೊಂಕು ನುಡಿಗಳು
ಅವಳ ಮನೋ ಸ್ಥೈರ್ಯ ವನ್ನು ಕುಂಠಿತ ಗೊಳಿಸುತ್ತಿದ್ದವು. ನೋಡ ನೋಡುತ್ತಲೇ ಆರು ತಿಂಗಳು ಕಳೆದಿತ್ತು. ಅಕ್ಕ ಪಕ್ಕದವರು ಮೃಣಾಲ್ ಕಂಡಾಗೊಮ್ಮೆ
“ನೀವೇ ಪುಣ್ಯವಂತರು ಬಿಡ್ರಿ ಎಂಥಾ ಒಳ್ಳೆಯ ಗಂಡನನ್ನು ಪಡೆದಿದ್ದೀರಿ ಅಡುಗೆ ಮಾಡುತ್ತಾರೆ, ಮಕ್ಕಳನ್ನೂ ನೋಡಿ ಕೊಳ್ಳುತ್ತ , ಮನೆ ಕೆಲಸವನ್ನೂ ಮಾಡುತ್ತಾರೆ. ನಿಮಗೆ ಮನೆಯ ಬಗ್ಗೆ ಚಿಂತೇನೇ ಇಲ್ಲ. ಆರಾಮಾಗಿ ಆಫೀಸಿಗೆ ಹೋಗಿ ಬರ್ತೀರಿ” ಎನ್ನುವ ಕೊಂಕು ಮಾತಿಗೆ ಮೃಣಾಲ್ ಗೆ ಮೈ ಪರಚಿಕೊಳ್ಳುವಂತಾಗುತ್ತಿತ್ತು. ಬಲವಂತವಾಗಿ ಅವನನ್ನು ಕೆಲಸಕ್ಕೆ ಕಳಿಸಲು ಸಾಧ್ಯವಿದ್ದಿಲ್ಲ. ಕೆಲಸದ ಬಗ್ಗೆ ಅವನಿಗೆ ಕಿರಿ ಕಿರಿ ಮಾಡಿದ್ರೆ ಮನೆ ರಣರಂಗವಾಗುತ್ತಿತ್ತು. ಅವಳಿಗೆ ಮನೆ ಶಾಂತಿ ಮುಖ್ಯವಾಗಿತ್ತು. ಇವತ್ತಿಲ್ಲ ನಾಳೆ ಶಿರೀಷ್ ಏನಾದ್ರೂ ಕೆಲಸ ಹುಡುಕಿ ಕೊಳ್ಳುತ್ತಾನೆ ಎಂಬ ನಂಬಿಕೆ ಅವಳಿಗೆ. ಆದರೆ ಶಿರಿಷ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೇ ಅಡುಗೆಯಲ್ಲಿ ತನಗಿದ್ದ ಆಸಕ್ತಿಯನ್ನು ಬೇರೆ ಬೇರೆ ರೀತಿಯ ಅಡುಗೆಗಳನ್ನು ಕಲಿಯುತ್ತ, ಮಾಡುತ್ತ ಮಕ್ಕಳು, ಹೆಂಡತಿಗೆ ಉಣ ಬಡಿಸಿ ಅವರಿಂದ ಮೆಚ್ಚುಗೆಯ ಮಾತು ಬಂದಾಗ ಸಾರ್ಥಕತೆಯಿಂದ ಖುಷಿ ಪಡುತ್ತಿದ್ದ.
ಅವನ ಈ ಪಾಕಶಾಸ್ತ್ರದ ಖಯಾಲಿಗೆ ಕಾರಣ … ಚಿಕ್ಕವನಿದ್ದಾಗ ಮನೆಯ ಆರ್ಥಿಕ ಪರಿಸ್ಥಿತಿ. ಅಂದು ಮನೆಯ ಖರ್ಚು ತೂಗಿಸಲು ಶಿರೀಷನ ತಾಯಿ ಭಾಗ್ಯಮ್ಮ ಸಣ್ಣ, ಪುಟ್ಟ ಸಮಾರಂಭಗಳಿಗೆ ಮನೆಯಲ್ಲೇ ಅಡುಗೆ ಮಾಡಿ ಕೊಡುತ್ತಿದ್ದರು. ಆ ಸಮಯದಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದ ಶಿರೀಷನಿಗೆ ಅಡುಗೆಯ ಬಗ್ಗೆ ಸಾಕಷ್ಟು ಮಾಹಿತಿ ಇತ್ತು. ಅದು ಈಗ ಅವನಿಗೆ ಉಪಯೋಗಕ್ಕೆ ಬಂದಿತ್ತು. ಅಮ್ಮನಂತೆಯೇ ತಾನೂ ಏಕೆ ಊಟ ತಯಾರಿಸಿ ಸಣ್ಣ ಪುಟ್ಟ ಸಮಾರಂಭಗಳಿಗೆ ಕೊಡಬಾರದು ಎಂಬ ವಿಚಾರ ಬಂದಾಗ ಮೃಣಾಲ್ ಗೆ ತನ್ನ ಮನದಿಂಗಿತವನ್ನು ತಿಳಿಸಿದ್ದ . ಗಂಡನ ಈ ಮಾತು ಕೇಳಿ ಮೃಣಾಲ್…’ಸಾಫ್ಟವೇರ್ ಎಂಜಿನಿಯರ್ ಆಗಿ ಅಡುಗೆ ಮಾಡಿ ಮಾರಿ ಅಡುಗೆ ಭಟ್ಟನಾಗುವ ಕರ್ಮ ನಿನಗೇಕೆ ಬೇಕು?
ಸುಮ್ಮನೆ ಬೇರೆ ಕೆಲಸ ಹುಡುಕು’ ಎಂದಾಗ …
ಶಿರೀಷ್… ‘ಭೀಮಸೇನ ಅಡುಗೆ ಭಟ್ಟನಾಗಿದ್ದ, ರುಚಿಯಾದ ಅಡುಗೆ ಸವಿದಾಗ ನಳಪಾಕ ಅಂತೀರಿ ಇವರಿಬ್ಬರೂ ಗಂಡಸರೇ ಅಲ್ಲವೇ? ಮದುವೆ ಮನೆಗಳಲ್ಲಿ ದೊಡ್ಡ ದೊಡ್ಡ ಅಡುಗೆಯನ್ನು ಗಂಡಸರೇ ಮಾಡುತ್ತಾರಲ್ಲವೇ? ಬೊಂಬಾಟ ಭೋಜನದ ಸಿಹಿ ಕಹಿ ಚಂದ್ರು, ಮುರಳಿ ಮಾಸ್ಟರ್ ಶೆಫ್ಗಳಾದ ಸಂಜೀವ ಕಪೂರ , ವಿಕಾಸ ಖನ್ನಾ ಇವರೂ ಗಂಡಸರಲ್ಲವೇ?ಟಿ.ವಿಯಲ್ಲಿ ಅವರು ಮಾಡುವ ಅಡುಗೆಗಳನ್ನು ಬಾಯಿ ಬಿಟ್ಕೊಂಡು ನೋಡಿ ನೀವೂ ಫಾಲೋ ಮಾಡ್ತೀರಿ,ಅದು ಗಂಡಸು ಮಾಡಿದ ಅಡುಗೆ ಅಂತ ತಾತ್ಸಾರ ಮಾಡ್ತೀರಾ…ಇಲ್ಲವಲ್ಲ. ಇವರೆಲ್ಲರೂ ಅಡುಗೆ ಮಾಡಿಯೇ ಫೇಮಸ್ ಶೆಫ್ಗಳಾಗಿಲ್ಲವೇ? ಅದು ಅವರವರ ಫ್ಯಾಷನ್.. ಆಸಕ್ತಿ. ಈಗ ಗಂಡು, ಹೆಣ್ಣು ಎಂಬ ಬೇಧ ಭಾವವಿಲ್ಲದೆ ಹೋಟೆಲ್ ಮ್ಯಾನೇಜ್ಮೆಂಟ್ ಕಲಿಯುತ್ತ ತಮ್ಮ ಇಷ್ಟವಾದ ಕ್ಷೇತ್ರ ಕುಕಿಂಗ್ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗ ನಾನು ಎಂಜಿನಿಯರ್ ಆದ್ರೆ ಏನಾಯ್ತು ನನ್ನ ಪ್ಯಾಷನ್ ಅಡುಗೆ ಮಾಡುವುದು ಆಗಿದೆ.ಇದರಲ್ಲಿ ಒಂದು ಪ್ರಯತ್ನ ಮಾಡುತ್ತೇನೆ,ನೋಡೋಣ ಭವಿಷ್ಯ ಹೇಗಿದೆಯಂತ ಎಂದಿದ್ದ.
ಈಗ ಚಿಕ್ಕದಾಗಿ….’ಮನೆಯಲ್ಲೇ 10ರಿಂದ 20 ಜನರಿಗೆ ಅಡುಗೆ ಮಾಡಿ ಕೊಡಲಾಗುತ್ತದೆ, ಮೊದಲೇ ಆರ್ಡರ್ ಕೊಡಬೇಕು ‘ ಅಂತ ಬೋರ್ಡ್ ಹಾಕಿದ್ರಾಯ್ತು. ಸಣ್ಣ , ಪುಟ್ಟ ಸಮಾರಂಭಕ್ಕೆ, ಹೆಣ್ಣು ಮಕ್ಕಳ ಕಿಟಿ ಪಾರ್ಟಿಗೆ ಊಟ ಬೇಕಾಗುವವರು ಆರ್ಡರ್ ಮಾಡಿ ತೆಗೆದು ಕೊಂಡು ಹೋಗುತ್ತಾರೆ. ಇದು ಕ್ಲಿಕ್ ಆದರೆ ಮತ್ತೆ ದೊಡ್ಡದಾಗಿ ಮಾಡಬಹುದು ಎಂದವನು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಪ್ರಾರಂಭಿಸಿದ.

ಫೋಟೋ ಕೃಪೆ : ಅಂತರ್ಜಾಲ
ಒಳ್ಳೆಯ ಮುಹೂರ್ತದಲ್ಲಿ ಮನೆಯ ಮುಂದೆ ‘ಅನ್ನಪೂರ್ಣೇಶ್ವರಿ’ (ರುಚಿ-ಶುಚಿ) ಬೋರ್ಡ್ ಹಾಕಿ ಅದಕ್ಕೆ ಅರಿಷಿಣ, ಕುಂಕುಮ ಹಚ್ಚಿ ಹೂ ಮಾಲೆ ಹಾಕಿ ದಂಪತಿಗಳು ಪೂಜೆ ಮಾಡಿದ್ದರು. ಮಕ್ಕಳು ಓಣಿಯ ತುಂಬ ಓಡಾಡಿ ನಮ್ಮಪ್ಪ ಅಡುಗೆ ಮಾಡಿ ಕೊಡ್ತಾರೆ ಅಂತ ಫ್ರೀ ಅಡ್ವರ್ಟೈಸ್ ಮೆಂಟ ಮಾಡಿ ಬಂದರು. ಓಣಿಯ ಜನರಿಗೆ ಅಚ್ಚರಿ..ಒಬ್ಬ ಸಾಫ್ಟ್‌ವೇರ್
ಎಂಜಿನಿಯರ್ ಒಳ್ಳೆಯ ಸಂಬಳದ ಕೆಲಸ ಬಿಟ್ಟು ಅಡುಗೆ ಕೆಲಸಕ್ಕೆ ನಿಂತಿದ್ದು ಅವರ ಹುಬ್ಬೇರುವಂತೆ ಮಾಡಿತ್ತು.ಜೊತೆ ಜೊತೆಗೆ ಇದೇನು ಹುಚ್ಚು ಅಂತ ಮೂಗು ಮುರಿದವರೂ ಇದ್ದರು. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲವೆಂಬ ಸ್ಥಿತ ಪ್ರಜ್ಞತೆ ಶಿರೀಷನದು.
ಮೃಣಾಲ್ನ ಅಪ್ಪ, ಅಮ್ಮ, ಅಣ್ಣ , ತಂಗಿ, ಬಳಗದವರಿಂದ.. ಇದೇನು ಮೃಣಾಲ್ ? ಶಿರೀಷಗೆ ತಲೆ ಗಿಲೆ ಕೆಟ್ಟಿದೆಯಾ ? ಲಕ್ಷ ಲಕ್ಷ ಸಂಬಳ ಪಡೆಯುವ ಅವನಿಗೆ ಅಡುಗೆ ಮನೆಯಲ್ಲಿ ಗ್ಯಾಸ್ ಮುಂದೆ ಹೆಂಗಸರ ಹಾಗೆ ಒಲೆ ಮುಂದೆ ಬೇಯುವ ದರ್ದು ಯಾಕೆ? ದುಡಿಯಲು ನೂರೆಂಟು ದಾರಿಗಳಿವೆಯಲ್ಲಾ…. ಅವರಿಗೆಲ್ಲಾ ಮೃಣಾಲಳ ಉತ್ತರ …ಅದು ಅವನ ಪ್ಯಾಷನ್ …ಏನೋ ಹೊಸದೊಂದು ಮಾಡುವ ಹುಮ್ಮಸ್ಸು.ಇರಲಿ ಬಿಡಿ.. ಮಾಡಲಿ ..ಅವನಿಗೆ ಖುಷಿಕೊಡುವ ಹಾಗಿದ್ದರೆ ಎನ್ನುವ ಅವಳ ತಣ್ಣನೆಯ ಉತ್ತರಕ್ಕೆ ಅವರಿಂದ ಬೇರೆ ಮಾತಿಲ್ಲ.
ಬೋರ್ಡ ಹಾಕಿ ಇಪ್ಪತ್ತು ದಿನವಾದರೂ ಯಾರಿಂದಲೂ ಆರ್ಡರ ಬರದಾದಾಗ ಶಿರೀಷನ ಮನದಲ್ಲಿ ಕೊಂಚ ಹೊಯ್ದಾಟ.ಇಪ್ಪತ್ತೊಂದನೇ ದಿನ ಹೆಂಡತಿ,ಮಕ್ಕಳನ್ನು ಆಫೀಸು ,ಶಾಲೆಗೆ ಕಳಿಸಿ ಹೊಸ ರುಚಿಯ ಆವಿಷ್ಕಾರದಲ್ಲಿದ್ದಾಗ ಡೋರ್ ಬೆಲ್ಲ ಬಡಿದುಕೊಂಡಿತ್ತು.ಗ್ಯಾಸ್ ಆರಿಸಿ ಹೊರಗೆ ಬಂದು ಬಾಗಿಲು ತೆರೆದಾಗ ಕಂಡು ಬಂದ ಇಬ್ಬರು ಮಧ್ಯವಯಸ್ಕ ಹೆಣ್ಣು ಮಕ್ಕಳು
‘ಮೇಡಂ ಇದ್ದಾರಾ’
‘ಇಲ್ಲ ಆಫೀಸಿಗೆ ಹೋಗಿದ್ದಾರೆ ‘.
‘ಹೌದಾ? ಹೊರಗೆ ಬೋರ್ಡ್ ನೋಡಿ ಬಂದೆವು… ಸರಿ ಬಿಡಿ ಮೇಡಂ ಇದ್ದಾಗ ಬರ್ತೀವಿ ‘
‘ಅಡುಗೆ ಮೇಡಂ ಮಾಡುವುದಿಲ್ಲ ನಾನೇ ಮಾಡುವುದು ಏನು ಹೇಳಿ’
ಎಂದಾಗ ಆ ಇಬ್ಬರೂ ನಾರೀ ಮಣಿಗಳು ಮುಖ ಮುಖ ನೋಡಿಕೊಂಡು ….
‘ನಮಗೆ ನಾಡಿದ್ದು ಒಂದು ಹದಿನೈದು ಜನಕ್ಕೆ ಆಗುವಷ್ಟು ಊಟ ಬೇಕು’ ಎಂದು ತಮ್ಮಿಷ್ಟದ ಮೆನು ಹೇಳಿ ಅಡ್ವಾನ್ಸ ಕೊಟ್ಟು ಹೋಗಿದ್ದರು. ಮನೆ ಕೆಲಸ ಮಾಡುವ ಸುಧಾಳ ಸಹಾಯದಿಂದ ಹದಿನೈದು ಜನಕ್ಕೆ ಬೇಕಾಗುವಷ್ಟು ಅಡುಗೆ ಮಾಡಿ ಅವರು ತಂದ ಡಬ್ಬಿಗೆ ಹಾಕಿ ಕೊಟ್ಟು ನಿಮ್ಮ ಫೀಡ್ ಬ್ಯಾಕ ಕಳಿಸಿ ಮೇಡಂ ಎಂದು ಅಡ್ರೆಸ್ ಕೊಟ್ಟಿದ್ದ.
ಎರಡು, ಮೂರು ದಿನ ಫೀಡ್ ಬ್ಯಾಕ್ ಬಂದಿದೆಯೇನೋ ಅಂತ ನೋಡುವ ಕೆಲಸವೇ ಆಯ್ತು ಅವನಿಗೆ. ನಾಲ್ಕನೇ ದಿನ ಫೀಡ್ ಬ್ಯಾಕ ನೋಡಿದಾಗ ಮೊದಲನೇ ಬಾಲ್ಗೆ ಕೊಹ್ಲಿ ಸಿಕ್ಸರ್ ಬಾರಿಸಿದಷ್ಟು ಖುಷಿಯಾಗಿತ್ತು ,ನಾಲ್ಕು ನಕ್ಷತ್ರಗಳು ಕಣ್ಣು ಮಿಟುಕಿಸುತ್ತ ಕಿಲ ಕಿಲ ಎನ್ನುತ್ತಿದ್ದವು.ಒಟ್ಟು ಇಪ್ಪತ್ತು ಫೀಡ್ ಬ್ಯಾಕ್ ಗಳು ಇವನ ಅಡುಗೆಗೆ ಬಹು ಪರಾಕ್ ಹೇಳುತ್ತ ಸೂಪರ್, ಡೆಲಿಷಿಯಸ್ಸ, ವಾವ್!, ಫಿಂಗರ್ ಲಿಕ್ಕಿಂಗ್, ನೈಸ್ ಬಹಳ ರುಚಿಯಾದ ಅಡುಗೆ ಎನ್ನುವ ಕಾಮೆಂಟ್ಸ ನೋಡಿ ಶಿರೀಷ ಹುಚ್ಚನಂತೆ ಕುಣಿದಾಡಿದ್ದ.
ಮೃಣಾಲ್ ಕೆಲಸದಿಂದ ಬಂದಾಗ ಅವಳನ್ನು ಅಪ್ಪಿ, ಮುದ್ದಾಡಿ ನಾನು ಗೆದ್ದೆ ,ಗೆದ್ದೆ ಎನ್ನುತ್ತಾ ಮಕ್ಕಳನ್ನೂ ಅಪ್ಪಿ ಮುದ್ದಾಡಿದ್ದ. ವರ್ಷದಿಂದ ಅವನು ಪಟ್ಟ ಪರಿಶ್ರಮಕ್ಕೆ ಸಿಕ್ಕ ಕೊಡುಗೆಯಾಗಿತ್ತು. ಇದು ಅವನ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಇದೇ ಕ್ಷೇತ್ರದಲ್ಲಿ ಮುನ್ನಡೆಯಲು ಬೂಸ್ಟರ್ ಡೋಸ್ ಆಗಿತ್ತು.
ಇವನ ಅಡುಗೆಯ ರುಚಿ ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನಲ್ಲಿ, ಫೇಸ್ ಬುಕ್ಕಲ್ಲಿ, ಇನ್ಸ್ಟಾಗ್ರಾಮ್ನಲ್ಲಿ, ವಾಟ್ಸಪ್ಪಲ್ಲಿ ಹೆಚ್ಚು ಹೆಚ್ಚು ಜನರಿಗೆ ಮುಟ್ಟಿದಂತೆ ತಿಂಡಿ, ಊಟಕ್ಕೆ ಆರ್ಡರ್ ಗಳು ಬರ ತೊಡಗಿದಾಗ ಮನೆ ಹತ್ತಿರವೇ ಮೇನ್ ರೋಡಿನಲ್ಲಿ ಎರಡು ರೂಮಿನ ಮನೆ ಬಾಡಿಗೆಗೆ ಹಿಡಿದು ಕೆಲಸಕ್ಕೆ ಇಬ್ಬರು ಹೆಣ್ಣಾಳುಗಳನ್ನು ತನ್ನ ಸಹಾಯಕ್ಕೆ ಇಟ್ಟು ಕೊಂಡು ನಮ್ಮ ಪಾರಂಪರಿಕ ಅಡುಗೆಯ ಜೊತೆ ಜೊತೆಗೆ ಉತ್ತರ ಭಾರತದ ತಿನಿಸು,ಅಡುಗೆಗೂ ಪ್ರಾಶಸ್ತ್ಯ ಕೊಡ ತೊಡಗಿದ.ದರ್ಶಿನಿ ತರಹ ವ್ಯವಸ್ಥೆ ಮಾಡಿ ಒಂದು ನಾಲ್ಕು ಟೇಬಲ್ ಹಾಕಿ ಪ್ರತಿಯೊಂದಕ್ಕೂ ನಾಲ್ಕು ಕುರ್ಚಿಯ ವ್ಯವಸ್ಥೆ ಮಾಡಿದ್ದ. ಹೋಮ್ ಡೆಲಿವರಿ ಜೊತೆಗೆ ಅಲ್ಲಿಯೇ ಬಂದು ಕುಳಿತು,ನಿಂತು ತಿಂದು ಹೋಗುವವರೂ ಜಾಸ್ತಿಯಾದರು. ದಿನ ದಿನಕ್ಕೆ ಪ್ರವರ್ಧಮಾನಕ್ಕೆ ಬಂದ ಇವನ ಈ ಉದ್ಯೋಗದಿಂದ ಶಿರೀಷನಿಗೆ ಕೆಲಸದ ಒತ್ತಡ ಜಾಸ್ತಿಯಾಗ ತೊಡಗಿತು.ಇದು ಮೃಣಾಲ್ ಗಮನಕ್ಕೂ ಬಂದಿತ್ತು. ಅಂದು ಅವಳು …’ಶಿರೀಷ್ ನಿನಗೆ ಕೆಲಸದ ಒತ್ತಡ ಜಾಸ್ತಿಯಾಗ್ತಾ ಇದೆ. ನಿನಗೆ ಯಾರಾದರೂ ಸಹಾಯಕರು ಬೇಕು, ಆ ಸಹಾಯಕಿ ನಾನೇ ಏಕೆ ಆಗಬಾರದು? ನಿನ್ನ ಈ ಹೋಟೆಲ್ ಉದ್ಯಮ ಲಾಭದತ್ತಲೇ ಇದೆ. ನಾನು ಈಗ ಕೆಲಸ ಬಿಟ್ಟರೂ ಸಂಸಾರ ತೂಗಿಸಿಕೊಂಡು ಹೋಗಲು ಯಾವ ತೊಂದರೆಯೂ ಇಲ್ಲ’ ಎಂದಾಗ ಶಿರೀಷ್ ಸಂತೋಷದಿಂದ ಅವಳನ್ನು ಬರಸೆಳೆದು ಮುತ್ತಿಟ್ಟು
‘ನನ್ನ ಮನದ ಮಾತು ಅರಿತ ನೀನು ನಿಜವಾಗಲೂ ನನ್ನ ಮನದನ್ನೆಯೇ’ ಐ ಲವ್ ಯೂ … ಐ ವೆಲ್ಕಮ್ ಯೂ ಆಸ್ ಮೈ ಬಿಜಿನೆಸ್ ಪಾರ್ಟರ್ನರ್ ಎನ್ನುತ್ತ ಅವಳನ್ನು ಮತ್ತೆ ಮತ್ತೆ ಚುಂಬಿಸಿದಾಗ .. ಮೃಣಾಲ್ ತಾನು ತೆಗೆದುಕೊಂಡ ನಿರ್ಧಾರ ಸರಿಯಾಯಿತಲ್ಲ ಎಂದು ನೆಮ್ಮದಿಯ ಉಸಿರು ಬಿಟ್ಟಿದ್ದಳು.
ಮೃಣಾಲ್ ಅಡುಗೆಗೆ ಬೇಕಾಗುವ ದಿನಸಿ, ತರಕಾರಿ, ಮಸಾಲೆ ಸಾಮಾನುಗಳು, ಮತ್ತಿತರ ಸರಂಜಾಮುಗಳನ್ನು ಪೂರೈಸುವುದು, ಬ್ಯಾಂಕಿನ ಕೆಲಸ, ಹೋಟೆಲ್ನ ಸ್ವಚ್ಚತೆ ,ಕೆಲಸದವರ ಮೇಲೆ ನಿಗಾ ಇಡುತ್ತ ಶಿರೀಷ್ ಗೆ ಬೆನ್ನೆಲುಬಾಗಿ ನಿಂತಳು. ಮೃಣಾಲಳ ಸಹಕಾರದಿಂದ ಶಿರೀಷ ತನ್ನೆಲ್ಲ ಲಕ್ಷ್ಯವನ್ನು ಅಡುಗೆಯ ಕಡೆಗೆ ನೀಡುವಂತಾಯಿತು. ಇಂದಿನ ಪಡ್ಡೆ ಹೈಕಳುಗಳ ಆದ್ಯತೆಯಾದ ಫಾಸ್ಟ ಫುಡ್ ಸಹ ಪರಿಚಯಿಸಿದ. ಈ ಎಲ್ಲ ಕೆಲಸಗಳಿಗೆ ಅಡುಗೆಯಲ್ಲಿ ಪರಿಣಿತಿ ಹೊಂದಿದವರನ್ನು ಕೆಲಸಕ್ಕೆ ಇಟ್ಟುಕೊಂಡು ಅವರಿಗೆ ತನ್ನ ಗುಣಮಟ್ಟದ ರುಚಿಯ ಜೊತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೆ ರುಚಿಕರವಾದ ಅಡುಗೆ ಮಾಡುವ ಟ್ರೇನಿಂಗ್ ಕೊಟ್ಟಿದ್ದ. ಇದಲ್ಲದೆ ಬಾಂಬೆ, ದಿಲ್ಲಿಗೆ ಹೋಗಿ ಕುಕ್ಕಿಂಗ್ನಲ್ಲಿ ಹೆಚ್ಚಿನ ತರಬೇತಿ ಪಡೆದು ಸ್ಪರ್ಧೆಯಲ್ಲಿ ‘ಬೆಸ್ಟ ಶೆಫ್ ‘ ಎಂಬ ಬಿರುದು ಮುಡಿಗೇರಿಸಿಕೊಂಡಿದ್ದ.
ಐದು ವರ್ಷದಲ್ಲಿ ತಮ್ಮದೆ ಸ್ವಂತ ಹೋಟೆಲ್ ಬಿಜಿನೆಸ್ ಪ್ರಾರಂಭ ಮಾಡಿದ್ದರು ದಂಪತಿಗಳು. ಇಂದು ಹೊಸ ಹೋಟೆಲ್ ಅನ್ನಪೂರ್ಣೇಶ್ವರಿ (ರುಚಿ-ಶುಚಿ) ಯ ಪೂಜಾ ಸಮಾರಂಭ. ಹೊಸ ವಿನ್ಯಾಸದ ಎಲ್ಲ ಅನುಕೂಲತೆಗಳನ್ನು ಹೊಂದಿದ್ದ ಹೋಟೆಲ್ನ ಪ್ರಾರಂಭೋತ್ಸವದ ಸಮಾರಂಭಕ್ಕೆ ಗಣ್ಯವ್ಯಕ್ತಿಗಳ ಜೊತೆಗೆ ತನ್ನ ಏಳಿಗೆಗೆ ಕಾರಣರಾದ ಕೊಂಕು ಮಾತಿನ ಶೂರರನ್ನೂ ಆಮಂತ್ರಿಸಿದ್ದ. ‘ಸಾಫ್ಟ್‌ವೇರ್ ಉದ್ಯೋಗಿ ಶಿರೀಷ್ ಮಾಡಿದ ಈ ಚಮತ್ಕಾರದ ಹಿಂದೆ ಒಬ್ಬ ಮಹಿಳೆ… ಹೆಂಡತಿ ಮೃಣಾಲಳೇ ಕಾರಣ ಎನ್ನುವ ಉದ್ಗಾರ ಎಲ್ಲರಿಂದಲೂ. ‘There is a woman behind every successful man’…
ಎನ್ನುವಂತೆ ಮೃಣಾಲ್ ಗಂಡನ ಆಸೆಗೆ ತಣ್ಣೀರು ಎರಚದೆ, ಸಮಾಜದ ಕೊಂಕು ನುಡಿಗೆ ಧೃತಿಗೆಡದೆ ಅವನಿಗೆ ಸಹಕಾರ ನೀಡಿ ಅವನ ಉತ್ಕರ್ಷಕ್ಕೆ ಕಾರಣಳಾಗಿದ್ದಳು. ಅಂದು ರಾತ್ರಿ ಮನೆಯ ಹಾಲ್ನಲ್ಲಿ ತುಂಬಿದ್ದ ನೆಂಟರಿಷ್ಟರನ್ನು ಉದ್ದೇಶಿಸಿ ಮಾತನಾಡುತ್ತ ಶಿರೀಷ್.. ಮೃಣಾಲಳ ಕೈ ಹಿಡಿದು ಕಣ್ಣಿಗೊತ್ತಿಕೊಂಡು ‘ನೀನು ನನ್ನ ಪಾಲಿನ ‘ಸುಧಾ ಮೂರ್ತಿ’, ನನ್ನ ಯಶಸ್ಸು ನಿನಗೇ ಸಲ್ಲಬೇಕು, ನೀನು ನನಗೆ ಸಹಕರಿಸದಿದ್ದಿದ್ದರೆ ನಾನು ಈ ಎತ್ತರಕ್ಕೆ ಬೆಳೆಯಲು ಆಗುತ್ತಿದ್ದಿಲ್ಲ ‘ಎನ್ನುತ್ತಾ ಅವಳ ಹಣೆಗೆ ಚುಂಬಿಸಿದಾಗ ನೆರೆದವರೆಲ್ಲರೂ ವೆಲ್ ಡನ್ ಶಿರೀಷ್ .. ವೆಲ್ ಡನ್ ಮೃಣಾಲ್… ಎಂದು ಕಿವಿಗಡುಚಿಕ್ಕುವಂತೆ ಚಪ್ಪಾಳೆ ತಟ್ಟಿದಾಗ ಇಬ್ಬರ ಮೊಗದಲ್ಲೂ ಸಾರ್ಥಕತೆಯ ಸಂತಸದ ಬೆಳದಿಂಗಳು ಪಸರಿಸಿತ್ತು.
- ಪುಷ್ಪಾ ಹಾಲಭಾವಿ – ಧಾರವಾಡ.
