ಒಂದು ಕಡೆ ಭಯ, ಇನ್ನೊಂದೆಡೆ ಹಾಸ್ಯವೆನ್ನಿಸುವಂತಹ ಸನ್ನಿವೇಶ ಭಯ ಹುಟ್ಟಿ ಹಾಕಿದ ಪ್ರಸಂಗವನ್ನು ಚಿತ್ರಾ ಚಂದ್ರು ಅವರು ತಮಗೆ ಆದ ಅನುಭವನ್ನು ಲೇಖನದ ಮೂಲಕ ಕಟ್ಟಿಕೊಟ್ಟಿದ್ದಾರೆ . ಸಾಕಷ್ಟು ಕುತೂಹಲದಿಂದ ಆರಂಭವಾಗುವ ಲೇಖನ ಮುಂದೆ ಏನಾಗುತ್ತೆ ಓದಿ…
ಗಾಢ ಕಾಡಿನ ನಡುವಿನ ಹೊಂಡದಲ್ಲಿತ್ತು ದೊಡ್ಡ ಅಂಗಳದ ವಿಶಾಲವಾದ ಉಪ್ಪರಿಗೆಯ ಮನೆ, ಅಲ್ಲೊಂದು ಇಲ್ಲೊಂದರಂತೆ ಹತ್ತಿಪ್ಪತ್ತು ಮನೆಗಳಿದ್ದ ಊರಿನಲ್ಲಿ ಕರೆಂಟಿನ ಕೈಕೊಡುವಿಕೆ ತೀರಾ ಸಾಮಾನ್ಯವಾಗಿದ್ದ ದಿನಗಳವು. ಅಂತೆಯೇ ಅಂದೂ ರಾತ್ರಿ ಚುಮಣಿಬುಡ್ಡಿಯ ಬೆಳಕಲ್ಲೇ ಊಟ ಮುಗಿಸಿ ರಾತ್ರಿಯ ನಿದ್ದೆಗೆ ಜಾರಿದ್ದೆವು.
ಚಿಕ್ಕ ಚಿಕ್ಕ ಮಕ್ಕಳಾಗಿದ್ದ ನಮಗೆ ದೊಡ್ಡಮ್ಮನ ಮಗ್ಗುಲೇ ಹಿತವಾಗಿತ್ತು. ಅಪ್ಪ ( ಆ ದಿನಗಳಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿದ್ದ ಮನರಂಜನೆ ಎಂದರೆ ನಾಲ್ಕಾರು ಮಂದಿ ಬಂದು ಮನೆಯಲ್ಲಿ ಸೇರಿ ಇಸ್ಪೀಟಾಟ ಆಡುವ ಅಭ್ಯಾಸ) ಅಂದು ಪಾರಾಯಣಕ್ಕೆ ತೆರಳಿದ್ದರು. ಕಾರ್ಗತ್ತಲಿನ ರಾತ್ರಿ ನಾವು ದೊಡ್ಡಮ್ಮನೊಂದಿಗೆ ಬೆಚ್ಚಗಿನ ಮನೆಯಲ್ಲಿ ಮಲಗಿದ್ದರೆ ಅಮ್ಮ ಚಾವಡಿಯ ಕೋಣೆಯಲ್ಲಿ ಪುಟ್ಟ ತಂಗಿಯೊಂದಿಗೆ ಮಲಗಿದ್ದಳು. ಇದ್ದಕ್ಕಿದ್ದಂತೆ ತಲೆಮೇಲೆಯೇ ಕಲ್ಲು ಬಿದ್ದಂತಾ ಧಡಾರ್! ಶಬ್ದ. ಎಚ್ಚರಗೊಂಡ ದೊಡ್ಡಮ್ಮ ಏನಿಲ್ಲ ತೋಟದಲ್ಲಿ ಮರ ಬಿತ್ತೇನೋ ಅಂದ್ರು, ಸ್ವಲ್ಪ ಸಮಾಧಾನಿಸಿಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಕೇಳಿತು ಧಡಾರ್ ಶಬ್ಧ !
(ಲೇಖಕಿ ಚಿತ್ರಾ ಚಂದ್ರು ಅವರ ತವರು ಮನೆಯ ಸುಂದರ ಚಿತ್ರ)
ಹೋ… ಇದು ತೆಂಗಿನ ಮರದ ಹಿಡ್ಲು ಮತ್ತೇನಲ್ಲ ಅಂದ್ರು. ಹೌದಾ ಅಂತ ಉಸಿರೆಳೆದುಕೊಳ್ಳುತ್ತಿರುವಂತೆಯೇ ಇನ್ನೂ ಮೂರೂ ನಾಲ್ಕು ಬಾರಿ ಕೇಳಿಸಿತು, ಅದೇ ಶಬ್ದ. ಜೊತೆಗೆ ನಾಲ್ಕಾರು ಜನರ ಧ್ವನಿಗಳು ಅಷರಲ್ಲಿ ಅಮ್ಮನು ಕೋಣೆಯ ಹಿಂಬದಿಯ ಬಾಗಿಲಿನಿಂದ ನಡುಮನೆಗೆ ಗಾಬರಿಯಲ್ಲೇ ಬಂದಿದ್ದಳು. ‘ಹೋ… ಯಾಕೋ ಅಪ್ಪ ಮನೆಯಲ್ಲಿ ಇಲ್ಲದ್ದು ತಿಳಿದೇ ಕದಿಯಲು ಬಂದಿದ್ದಾರೆ ಎಂತ ಮಾಡೋದು? ಏನಾದರೂ ಆಗಲಿ ಎರೆಡೂ ಹಾಕು ಮಲ್ಲಿಕಾರ್ಜುನಂಗೆ ತುಪ್ಪದ ದೀಪ ಹೆಚ್ಚು…’ ಅಂದ್ರು ದೊಡ್ಡಮ್ಮ.
ನಮೋ ಕಳ್ಳರೇನು ಮಾಡುತ್ತಾರೋ ಎಂಬ ಹೇದಿರಿಕೆಯಲ್ಲಿ ಅಳುವೇ ಬಂದಿತು. ಕಲ್ಲನ್ನು ಎತ್ತಿ ಹಾಕುವ ಶಬ್ದ ಕಿವಿಗೆ ಅಪ್ಪಳಿಸುತ್ತಲೇ ಇತ್ತು. ಚಿಕ್ಕ ಮಕ್ಕಳೊಂದಿಗೆ ಅಮ್ಮ-ದೊಡ್ಡಮ್ಮ ದೇವರನ್ನು ನೆನೆಸುತ್ತಾ ಫೋನಿಲ್ಲದ ಆ ದಿನಗಳಲ್ಲಿ ಕ್ಷಣದಲ್ಲಿ ಕಳ್ಳರು ಮುಂಬಾಗಿಲು ಒಡೆದು ಬರುತ್ತಾರೆ ಎಂಬ ದಿಗಿಲಿನಿಂದ ಮುಡಿದಿಕೊಂಡು ಕೂತಿದ್ದೆವು. ಅಷ್ಟರಲ್ಲಿ ಅಪ್ಪನ ಬೈಕಿನ ಸದ್ದು ರಸ್ತೆಯಲ್ಲಿ ಕೇಳಿತು ನಮಗೆ ಧೈರ್ಯ ಬಂದರೆ ಅಮ್ಮ ದೊಡ್ಡಮ್ಮನಿಗೆ ಇನ್ನೂ ಗಾಬರಿಯಾಯಿತು.
ಕೃಪೆ ಫೋಟೋ : The Week
ಏನು ತಿಳಿಯದ ಅಪ್ಪ ಬಂದೊಡನೆ ಕಳ್ಳರು ಅಪ್ಪನಿಗೆ ಏನಾದರೂ ಮಾಡಿಬಿಟ್ರೆ?… ಎಂದು ನಮ್ಮ ಆತಂಕದ ನಡುವೆಯೇ ಅಪ್ಪ ಅಂಗಳದಲ್ಲಿ ಬೈಕ್ ನಿಲ್ಲಿಸಿ ಕಳ್ಳರೊಡನೆ ಮಾತನಾಡಿದ್ದು ಕೇಳಿಸಿತು. ಆಗ ಅಮ್ಮ ಧೈರ್ಯ ಮಾಡಿ ಚುಮುಣಿ ಹಿಡಿದು ನಡುಮನೆಯ ಕಿಟುಕಿಯಿಂದ ನೋಡಿದರೆ ಅಂಗಳದಲ್ಲಿ ಅಪ್ಪ ಮಾತನಾಡುತ್ತಾ ನಿಂತಿರುವುದು ಕಂಡು ಬಾಗಿಲು ತೆರೆದಳು. ಸಾಮಾನ್ಯವಾಗಿ ಎಂಬಂತೆ ಒಳಬಂದ ಅಪ್ಪ ಹೇಳಿದಿಷ್ಟು ಬಾವಿ ಕಟ್ಟಗೆಗೆ ಸೈಜುಗಲ್ಲು ಹೇಳಿದ್ದೆ. ಲಾರಿ ದಾರಿ ಮಧ್ಯೆ ಕೆಟ್ಟು ಹೊಯ್ತಂತೆ ಸರಿ ಮಾಡಿಕೊಂಡು ಈಗ ಬಂದು ಅನ್ ಲೋಡ್ ಮಾಡ್ತಿದ್ದಾರೆ ಜೀವ ಕೈಲಿಟ್ಟುಕೊಂಡು ಕೂತಿದ್ದ ನಮಗೆ ಅಳು ನಗು ಒಟ್ಟಿಗೆ ಬಂತು.
- ಚಿತ್ರಾ ಚಂದ್ರು