ನಾಯಕನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ- ಮಂಜುಳ ಅವರ ಸವಿನೆನಪು

ಸಪ್ಟೆಂಬರ್ ೧೨, ಕನ್ನಡ ಚಿತ್ರರಂಗ ಮರೆಯಲಾಗದ ದಿನವೆಂದೇ ಹೇಳಬಹುದು. ಏಕೆಂದರೆ ರಾಜನ್-ನಾಗೇಂದ್ರ ಮತ್ತು ೩೪ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ, ಕನಸಿನ ಕಣ್ಮಣಿ ಮಂಜುಳವರನ್ನು ಕಳೆದು ಕೊಂಡಂತಹ ದಿನವಿದು. ಮಂಜುಳಾ ಅವರ ನೆನಪನ್ನು ಲೇಖನ್ ನಾಗರಾಜ್ ಅವರ ಲೇಖನದಿಂದ ಮತ್ತೆ ಸ್ಮರಿಸುವಂತಾಗಿದೆ. ಮುಂದೆ ಓದಿ…

ಫೋಟೋ ಕೃಪೆ : Ashianet Newsable

ಕನ್ನಡದ ಪ್ರತಿಭಾನ್ವಿತ ನಟಿ ಮಂಜುಳರವರು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಬೆಳ್ಳಿತೆರೆಯಲ್ಲಿ ತನ್ನದೆ ಆದ ವಿಶಿಷ್ಟ ಅಭಿನಯದ ಮೂಲಕ ಒಂದು ಕಾಲದಲ್ಲಿ ಮನೆಮಾತಾದವರು.ಬಹುದೂರ್ ಹೆಣ್ಣಾಗಿ ಎಲ್ಲರ ಮನದಲ್ಲಿ ಉಳಿದವರು.ಎಂತಹ ಪಾತ್ರದಲ್ಲಾದರು ಪರಕಾಯ ಪ್ರವೇಶ ಮಾಡುತ್ತಿದ್ದರು. ಅಣ್ಣವ್ರ ಜೊತೆಗಿನ ಸಂಪತ್ತಿಗೆ ಸವಾಲ್ ಚಿತ್ರದ ಬಜಾರಿ ದುರ್ಗಿ ಪಾತ್ರ ಮರೆಯಲು ಸಾಧ್ಯವೆ….?ಆದರೆ,ಇಂದು ಅವರು ನಮ್ಮೊಂದಿಗೆ ಇಲ್ಲದೆ ಹೋದರು ಅವರ ಅಭಿನಯದ ಮೂಲಕ ನೆನಪಿನಲ್ಲಿದ್ದಾರೆ.ಇಂದು ಸಪ್ಟೆಂಬರ್ ೧೨ ಕ್ಕೆ ಮಂಜುಳಾರವರು ನಮ್ಮನ್ನಗಲಿ ೩೪ ವರ್ಷಗಳಾದವು. ಆದರು ಅವರ ನೆನಪು ಮಾತ್ರ ಶಾಶ್ವತ.

ಮಂಜುಳಾರವರು ಮೂಲತಃ ತುಮಕೂರಿನ ಹೊನ್ನೇನ ಹಳ್ಳಿಯವರು ೧೯೬೧ ನವೆಂಬರ್ ೮ ರಂದು ಜನಿಸಿದರು. ತಂದೆ ಶಿವಣ್ಣ ಹಾಗೂ ತಾಯಿ ದೇವಿರಮ್ಮ. ತಂದೆ ಶಿವಣ್ಣರವರು ಪೋಲಿಸ್ ಆಗಿದ್ದರು. ಬಾಲ್ಯದಲ್ಲಿಯೆ ಮಂಜುಳಾರವರು ಭರತ ನಾಟ್ಯ ಕಲೆಯಲ್ಲಿ ಜಾಣೆಯಾಗಿದ್ದರು. ಪ್ರಭಾತ್ ಕಲಾವಿದರು ತಂಡದ ಮೂಲಕ ಹೆಸರುವಾಸಿಯಾಗಿ, ೧೯೬೫ ರಲ್ಲಿ ಸಿ.ವಿ ಶಿವಶಂಕರ್ ರವರ ನಿರ್ಮಾಣದ ‘ಮನೆ ಕಟ್ಟಿ ನೋಡು’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶ ಮಾಡಿದರು.ನಂತರ ೧೯೭೨ ರಲ್ಲಿ ಎಂ.ಆರ್ ವಿಠಲ್ ನಿರ್ದೆಶನದ ‘ಯಾರ ಸಾಕ್ಷಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಟಿಯಾದರು.ಆಮೇಲೆ ಒಂದರ ಮೇಲೆ ಒಂದರಂತೆ ಮಂಜುಳಾರವರ ಪ್ರತಿಭೆಗೆ ಅವಕಾಶಗಳು ಹುಡುಕಿ ಬಂದವು.

ಫೋಟೋ ಕೃಪೆ : Chitralokha.com

ಡಾ.ರಾಜಕುಮಾರ್ ರವರೊಂದಿಗೆ ಮೂರುವರೆ ವಜ್ರಗಳು, ಹೃದಯ ಸಂಗಮ, ಸಂಪತ್ತಿಗೆ ಸವಾಲ್, ಎರಡು ಕನಸು, ಭಕ್ತ ಕುಂಬಾರ ಚಿತ್ರದಲ್ಲಿ ನಟಿಸುವ ಮೂಲಕ ಮತ್ತಷ್ಟು ಜನಪ್ರಿಯರಾದರು. ಆಮೇಲೆ ಕಿಟ್ಟು ಪುಟ್ಟು, ಸಿ೦ಗಾಪೂರಿನಲ್ಲಿ ರಾಜಾಕುಳ್ಳ, ಬೆಸುಗೆ, ಸಿ೦ಹಜೋಡಿ, ರುದ್ರಿ, ಪಾಯಿ೦ಟ್ ಪರಿಮಳ, ಸೀತಾರಾಮು ಅ೦ತಹ ಸೂಪರ್ ಹಿಟ್ ಚಿತ್ರಳಲ್ಲಿ,ನಟಿಸಿ ಹೆಸರು ಮಾಡಿದರು. ಉತ್ತಮ ಅಭಿನಯಕ್ಕೆ ಉತ್ತಮ ನಟಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಹೀಗೆ ಸ೦ಪೂರ್ಣವಾಗಿ ತಮ್ಮನ್ನು ನಟನೆಯಲ್ಲಿ ತೊಡಗಿಸಿಕೊಂಡಿರುವಾಗಲೆ ೧೯೭೬ ರಲ್ಲಿ ಬಂದಂತಹ ತಮ್ಮದೆ ನಟನೆಯ ಚಿತ್ರ ‘ಹುಡುಗಾಟದ ಹುಡುಗಿ’ ಚಿತ್ರದ ನಿರ್ದೆಶಕರಾದಂತಹ ಅಮೃತಂ ಅವರನ್ನು ೧೯೮೦ ರಲ್ಲಿ ಮದುವೆಯಾದರು.ಇವರಿಗೆ ಅಭಿಷೇಕ ಎಂಬ ಮಗನು ಹಾಗೂ ಅಭಿನಯ ಎಂಬ ದತ್ತುಪುತ್ರಿ ಕೂಡ ಇದ್ದಾರೆ.ಅಂದಿನ ಕಾಲದ ದಿಗ್ಗಜರಾದಂತಹ ಅಣ್ಣಾವ್ರು, ವಿಷ್ಣುದಾದ, ಶ್ರೀನಾಥ್, ಶಂಕರನಾಗ್, ಅಂಬರೀಷ್ ಎಲ್ಲರೊಂದಿಗು ನಾಯಕಿಯಾಗಿ, ಕಾಮಿಡಿಯಾಗಿ ಎಲ್ಲಾ ಥರದ ಪಾತ್ರಗಳಲ್ಲು ಅಭಿನಯಿಸಿದ್ದಾರೆ. ೭೦ -೮೦ ರ ದಶಕದಲ್ಲಿ ಕನ್ನಡದಲ್ಲಿ ಪ್ರಣಯ ರಾಜ ಶ್ರೀನಾಥ್ ಮತ್ತು ಮಂಜುಳಾರವರ ಜೋಡಿ ಅಭಿಮಾನಿಗಳಲ್ಲಿ ಎಷ್ಟು ಮೋಡಿ ಮಾಡಿತ್ತು ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಪ್ರಣಯ ಜೋಡಿಯೆಂದೆ ಖ್ಯಾತಿಯಾಗಿದ್ದರು. ನಾಟಕ ರಂಗದಿಂದಲು ಇವರಿಬ್ಬರದು ಅಣ್ಣ-ತಂಗಿ ಬಾಂಧವ್ಯದ ಜೋಡಿಯಾಗಿತ್ತಂತೆ.

ಫೋಟೋ ಕೃಪೆ : Ashianet Newsable

‘ಲೋ…..ಲೇ’ ಎನ್ನುವಂತಹ ಹಠಮಾರಿ ಸಂಭಾಷಣೆಯನ್ನು ಮೊದಲು ಚಿತ್ರರಂಗದಲ್ಲಿ ತಂದಿದ್ದೆ ಈ ಜೋಡಿಗಳು. ಸುಮಾರು ೩೫ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಶ್ರೀನಾಥರವರೊಂದಿಗೆ ಮಂಜುಳಾರವರು ಅಭಿನೇತ್ರಿಯಾಗಿ ಅಭಿನಯಿಸಿದ್ದಾರೆ. ಕೊನೆಯವರೆಗೂ ಅವರ ಬಾಂಧವ್ಯ ಹಾಗೆ ಇತ್ತು ಎನ್ನುತ್ತಾರೆ.

ಕನ್ನಡ, ತಮಿಳು, ತೆಲುಗು ಎಲ್ಲಾ ಭಾಷೆಯ ಚಿತ್ರಗಳಲ್ಲು ಮಂಜುಳಾರವರು ಅಭಿನಯಿಸಿದ್ದಾರೆ. ಕನ್ನಡದಲ್ಲಿ ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ೧೯೭೫ -೮೦ ರ ಅವಧಿಯಲ್ಲಿ ಮಂಜುಳಾರವರು ಎಷ್ಟು ಪ್ರಸಿದ್ಧ ನಟಿಯಾಗಿದ್ದರು ಎಂದರೆ ನಾಯಕನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರಂತೆ. ಸುಮಾರು ೧೦ ವರ್ಷಗಳ ಕಾಲ ಚಿತ್ರರಂಗದಲ್ಲಿ ಪ್ರಸಿದ್ಧ ನಟಿಯಾಗಿ ಸಕ್ರೀಯವಾಗಿದ್ದರು.ತಮ್ಮ ಹುಟ್ಟೂರಾದ ಹೊನ್ನೇನ ಹಳ್ಳಿಯಲ್ಲಿ ೧೯೭೭ ರಲ್ಲಿ ಶಿವಲಿಂಗ ದೇವಸ್ಥಾನವನ್ನು ಕಟ್ಟಿಸಿದ್ದರಂತೆ. ಇಂದಿಗೂ ಅದನ್ನು ಹೊನ್ನೇನ ಹಳ್ಳಿಯಲ್ಲಿ ನೋಡಬಹುದಾಗಿದೆ. ಶಂಕರನಾಗ್ ರವರೊಂದಿಗೆ ‘ಸೀತಾರಾಮು’ ಚಿತ್ರದಲ್ಲಿನ ಮಂಜುಳಾರವರ ಪಾತ್ರವಂತೂ ತುಂಬಾ ವಿಭಿನ್ನವಾಗಿತ್ತು, ಪ್ರಯೋಗಾತ್ಮಕವಾಗಿತ್ತು. ರೇಡಿಯೊ ಸಂದರ್ಶನವೊಂದರಲ್ಲಿ ಶಂಕರನಾಗ್ ರವರೆ ಮಂಜುಳಾ ಅವರ ಪ್ರತಿಭೆ ಬಗ್ಗೆ ಹೇಳುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಅವರ ವೈಯಕ್ತಿಕ ಜೀವನ ಅಷ್ಟೆನೂ ಚೆನ್ನಾಗಿರಲಿಲ್ಲವಂತೆ. ಕೇಳಿದಾಗ ಬೇಜಾರಾಗುತ್ತದೆ. ಮಕ್ಕಳಾದ ನಂತರ ಮಂಜುಳಾರವರು ಚಿತ್ರರಂಗದಿಂದ ಸ್ವಲ್ಪ ಕಾಲ ದೂರ ಉಳಿಯ ಬೇಕಾಯಿತು. ಅವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಹೋದಂತೆ ಜೊತೆಗೆ ಇದ್ದವರೆಲ್ಲಾ ಮಂಜುಳಾರವರಿಂದ ದೂರಾದರಂತೆ. ಕೊನೆಗೆ ಚಿಕ್ಕ-ಪುಟ್ಟ ಪೋಷಕ ಪಾತ್ರಗಳಲ್ಲೂ ನಟಿಸಿದ್ದಾರೆ.

ಫೋಟೋ ಕೃಪೆ : The movieholic

ತಮ್ಮ ಅತಿ ಕಿರಿಯ ವಯಸ್ಸಿನಲ್ಲಿಯೆ ಅಪಾರ ಹೆಸರು ಮಾಡಿದಂತಹ ಮಂಜುಳಾರವರು ಒಂದು ದಿನ ಸಪ್ಟೆಂಬರ್ ೫, ೧೯೮೬ ರಂದು ಮನೆಯಲ್ಲಿ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವಾಗ ಗ್ಯಾಸ್ ಸ್ಟೋವ್ ಸಿಡಿದು ಗಂಭೀರವಾಗಿ ಆಸ್ಪತ್ರೆಗೆ ಸೇರುತ್ತಾರೆ. ೬ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಅವರನ್ನು ಉಳಿಸಿಕೊಳ್ಳಲು ಆಗುವುದಿಲ್ಲಾ. ಸಪ್ಟೆಂಬರ್ ೧೨ ರಂದು ರಾತ್ರಿ ಅಭಿಮಾನಿಗಳಿಂದ, ಕುಟುಂಬದವರಿಂದ ದೂರವಾಗಿ ಬಾರದ ಲೋಕಕ್ಕೆ ಹೋಗುತ್ತಾರೆ. ಕೆಲವರು ಮಂಜುಳಾರವರದು ಆತ್ಮಹತ್ಯೆ ಎನ್ನುತ್ತಾರೆ. ಮತ್ತೆ ಕೆಲವರು ಇದೊಂದು ಆಕಸ್ಮಿಕ ಅವಗಢವೆಂದು ಹೇಳುತ್ತಾರೆ. ಆದರೆ,ಆವತ್ತು ನಿಜವಾಗಿ ನಡೆದಿದ್ದೇನು ಎನ್ನುವುದು ಇಂದಿಗೂ ನಿಗೂಢವಾಗಿಯೆ ಉಳಿದಿದೆ. ಮಂಜುಳಾರವರು ನಮ್ಮಿಂದ ದೂರವಾಗಿದ್ದಂತು ನಿಜಾವಾಗಿದೆ. ಒಮ್ಮೆ ಶ್ರೀನಾಥ್ ರವರು ರಮೇಶ್ ಅರವಿಂದರವರ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮವೊಂದರಲ್ಲಿ ಮಂಜುಳಾರವರ ಬಗ್ಗೆ ಹೇಳುವಾಗ, ಕೇಳಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಕೊನೆಯ ದಿನಗಳವರೆಗು ಅವರ ಜೊತೆಗೆ ಇದ್ದರಂತೆ. ತುಂಬಾ ತುಂಟಾಟದ, ಚಟುವಟಿಕೆಯ ನಟಿಯಾಗಿದ್ದರಂತೆ. ಆದರೆ, ಈ ದುರಾದೃಷ್ಟದ ದುರಂತವೆಂಬುದು ಅವರನ್ನು ಹೆಚ್ಚುದಿನ ಬಾಳಲು ಬಿಡಲಿಲ್ಲ.

ಫೋಟೋ ಕೃಪೆ : YouTube

ಇಂದು ಮಂಜುಳರವರು ಇದ್ದಿದ್ದರೆ, ಶ್ರೀನಾಥರವರೊಂದಿಗೆ ಹಿರಿಯ ಕಲಾವಿದರಾಗಿ ಮತ್ತಷ್ಟು ಚಿತ್ರಗಳಲ್ಲಿ ಉತ್ತಮ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದರೇನೊ, ಇನ್ನಷ್ಟು ಅಭಿಮಾನಿ ಬಳಗವನ್ನು ಹೊಂದುತ್ತಿದ್ದರು.

ದುರಂತವೆಂಬುದು ಅದಕ್ಕೆ ಅವಕಾಶ ನೀಡಲಿಲ್ಲ ನಿಜ. ಆದರು ಇಂದು ಮಂಜುಳಾರವರು ಅಭಿಮಾನಿಗಳ ಕಣ್ಮನದಲ್ಲಿ ಮಿನುಗು ತಾರೆಯಾಗಿ ಮಿಂಚುತ್ತಿದ್ದಾರೆ. ಅವರ ಹುಟ್ಟೂರಿನಲ್ಲಿ ಮಂಜುಳಾರವರ ಸಮಾಧಿಯನ್ನು ಇಂದಿಗೂ ನೋಡಬಹುದು. ಅಲ್ಲಿನ ಸ್ಥಳೀಯರು ಅವರ ಕುಟುಂಬದವರು ಅದನ್ನು ನೋಡಿಕೊಳ್ಳುತ್ತಿದ್ದಾರಂತೆ.


  • ಲೇಖನ್ ನಾಗರಾಜ (ಹರಡಸೆ ಹೊನ್ನಾವರ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW