ಕಾಳೀ ಕಣಿವೆಯ ಕತೆಗಳು, ಭಾಗ- ೧೯

ಸೂಪಾ ಡ್ಯಾಮ ಸೈಟ್‌ (೧೯೭೦ ಮಾರ್ಚ)
ಒಳಗೆ ಕಟ್ಟಿಗೆಯ ಒಲೆ ಉರಿಯುತ್ತಿತ್ತು. ಹಾಗೇ ಲಾಟೀನಿನ ಮಾದಕ ಬೆಳಕೂ ಚೆಲ್ಲಿತ್ತು. ಸಕ್ಕೂಬಾಯಿಯ ಖಾನಾವಳಿಯಲ್ಲಿ ಕಂಡ ಆ ಸುಂದರಿ ಯಾರು? ರೋಚಕ ಕತೆಯನ್ನು ಮುಂದೆ ಓದಿ…

ನನಗೆ ಈ ಊರೇ ವಿಚಿತ್ರವಾಗಿ ಕಂಡಿತು. ನಮ್ಮ ಬಯಲು ಸೀಮೆಯಲ್ಲಿ ಬದುಕುವ ರೀತಿಯೇ ಬೇರೆ. ಅಲ್ಲಿ ಯಾಮ ಮನೆಯ ಹೆಣ್ಣು ಮಕ್ಕಳೂ ಹೊರಗೆ ಗಂಡಸರೆದುರು ನಿಂತು ಮಾತಾಡುವುದಿಲ್ಲ. ಹೆಂಗಸರು ಅಲ್ಲಿ ಊರಿನ ಸಮಾಜದ ನಿಯಂತ್ರಣದಲ್ಲಿರುತ್ತಾರೆ. ಹಿರಿಯರು, ಕಿರಿಯರು ಎಂಬ ಭಕ್ತಿ, ಮುಜುಗುರ, ಭಯದಲ್ಲಿರುತ್ತಾರೆ. ಎಲ್ಲೋ ಒಂದೆರಡು ಕಡೆ ವಯಸ್ಸಾದ ವಿಧವೆಯರು ಉಪಜೀವನಕ್ಕಾಗಿ ಕಿರಾಣಿ ಅಂಗಡಿಯನ್ನೋ, ಇಲ್ಲ ಚಹದ ಅಂಗಡಿಯನ್ನೋ ಇಟ್ಟುಕ್ಕೊಂಡಿದ್ದು ಕಾಣುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಹೆಂಗಸರೇ ಇಲ್ಲಿ ಮುಂದು. ಹಾಗೆ ನೋಡಿದರೆ ಗಂಡಸರೇ ಅವರ ಸೆರಗಿನ ಹಿಂದೆ ಇರುತ್ತಾರೆ. ಆ ಕಾರಣಕ್ಕಾಗಿಯೇನೋ ನನಗೆ ಪ್ರತಿಯೊಂದು ಸಲ ಹೀಗೆ ಬೇರೆಬೇರೆ ಹೆಂಗಸರು, ಹುಡುಗಿಯರನ್ನು ಕಂಡಾಗ ಅದು ನಮ್ಮದಲ್ಲದ ಸಂಸ್ಕೃತಿಯೊಂದರ ದರ್ಶನ ಆಗುತ್ತಲೇ ಇರುತ್ತದೆ. ಅದು ಡ್ಯಾಮಿನಲ್ಲಿ ಗೋಮ್ಸಿಯನ್ನು ಕಂಡಾಗಲೂ ಅಷ್ಟೇ. ಇತ್ತ ಸೂಪಾದಲ್ಲಿ ಪಾನ್‌ ಅಂಗಡಿಯ ಫ್ಲೋರಿನಾ, ಯತ್ಥೇಚ್ಛವಾಗಿ ಮಾತಾಡುವ ಪರಿಮಳಾ, ಈಗ ಖಾನಾವಳಿಯ ಸಕ್ಕೂಬಾಯಿ ಮತ್ತು ಇಲ್ಲಿಯ ಹುಡುಗಿಯನ್ನು ನೋಡಿದಾಗಲೂ ಅಷ್ಟೇ. ನನ್ನ ಸೀಮಿತ ಅನುಭವವು ನನ್ನನ್ನೇ ಗೊಂದಲಕ್ಕೆ ಕೆಡವುತ್ತದೆ. 

ಕಟ್ಟಿಗೆಯ ಒಲೆ ಉರಿಯುತ್ತಿತ್ತು. ಹಾಗೇ ಲಾಟೀನಿನ ಮಾದಕ ಬೆಳಕೂ ಅಲ್ಲಿ ಚೆಲ್ಲಿತ್ತು

ಇವ್ರು ಕಾನಡೀ ಜನ.  ನಮ್‌ ಧಾರವಾಡೀ ಮಂದಿ. ನೀ ಇವ್ರ ಜೋಡೀ ಕಾನಡೀಯೊಳಗ ಮಾತಾಡು. 

ಫೋಟೋ ಕೃಪೆ : outlookindia

ನಮ್ಮನ್ನು ಕಂಡದ್ದೇ ತಡ. ಸಕ್ಕೂಬಾಯಿ ನಗುತ್ತ ಎದುರು ಬಂದವಳು. ‘’ಯೇವೋ… ಸಾಹೇಬ್‌. ಆಜೂನ್‌ ಪೇಶಲ್‌ ಜೇವನ್‌ ತಯ್ಯಾರ ಅಸಾ…’’ಅಂದಳು. ಆಕೆಗೆ ಚಾಂದಗುಡೆಯವರ ಪರಿಚಯ ಮೊದಲೇ ಇದ್ದಿರಬೇಕು. ನಾನು ಹೊಸಬನಾದ್ದರಿಂದ ನನ್ನನ್ನು ನಗುತ್ತ ನೋಡಿದ ಆಕೆ ಕೇಳಿದಳು. 

‘’ಕೋನ್‌ ತೇ ಸಾಬ್‌? ಜೇವನ್‌ ಪಾಹಿಝೆ ಕಾಯ್‌’’ ಈ ಸಾಹೇಬರು ಯಾರು? ಊಟಕ್ಕ ಬಂದಾರೇನು ಎಂದು ಕೇಳಿದಳು. ಚಾಂದಗುಡೆ ತಲೆ ಅಲ್ಲಾಡಿಸಿ ನಕ್ಕರು. 

‘’ಹ್ಹಹ್ಹಹ್ಹ… ಸಕ್ಕೂಬಾಯೀ… ಇವ್ರು ಕಾನಡೀ ಜನ. ನಮ್ಮ ಧಾರವಾಡೀ ಮಂದಿ. ನೀನು ಕಾನಡೀ ಒಳಗನ ಮಾತಾಡು’’ ಎಂದರು.

‘’ಹೌಂದ್ರೀ…? ಯಾವಂದೂರು ನಿಮ್ದು. ಪೈಹಿಲಾ ಸಲಾ  ನೋಡೇನಿ ನಿಮ್ಮನ್ನ. ಅದಕ್ಕ ಗುರತಾ ತಗೊಂಡಿಲ್ಲ. ನಂದೂ ಕಾನಡೀ ಛುಲೋ ಇಲ್ಲ.  ಅರ್ಧಾ ಆಯುಷ್‌ ಮುಂಬೈದಾಗನ ಹೋತು. ಯಾನ್‌ ಹೆಸ್ರು ನಿಮ್ದೂ?’’

ಅದೂ ನಮ್ದಽಽ ಪೋರಿ ಅದ ತಗೋರಿ. ಧಿಡೀರಾಗಿ ಹನುಮಂತ್ಯಾನ ನೆನಪು

ನಾನು ಬಾಯಿ ಬಿಡುವ ಮೊದಲೇ ಚಾಂದಗುಡೆಯವರು ತಮ್ಮನ್ನೇ ಕೇಳಿದಳೆಂದು ಮುಂದೆ ಬಿದ್ದು ಮಾತಾಡಿದರು. 

‘’ಹ್ಹಹ್ಹಹ್ಹ… ಇವ್ರ ಹೆಸ್ರು… ಶೇಖರ ಅಂತ. ನಮ್ಮ ಡ್ಯಾಮ ಕೆಲಸದಾಗ ನಮ್ಮ ಜೋಡೀನ ನೌಕರೀ ಮಾಡಾಕ ಹತ್ಯಾರ. ಇನ್ನೂ ಲಗ್ನಾ- ಪಗ್ನಾ ಆಗಿಲ್ಲ. ಭಾಳ ಶಾಣ್ಯಾ ಅದಾರವಾ ಮತ್ತ. ಹೂಂ… ಪೇಪರಿನಾಗ ಕತೀನೂ ಬರೀತಾರ. ಹೂಂ ‘’

‘’ಹೌಂದ್ರೀ… ಈಗೇನ ಮತ್ತ ಇಲ್ಲೆ ನನ್ನ ಕತೀ ಬರೀತೇನಿ ಅಂತ ಬಂದ್ರೀ?  ಹಿಂದಕ್‌ ಒಬ್ಬಾಂವ ಮುಂಬೈದಾಗ ಹಿಂಗ಼ಽ ಬಂದಿದ್ದ. ನನ್ನ ಫೋಟೋ ಹಾಕಿ ಕತೀ ಬರೀತೀನಿ ಅಂತ. ಸುಡುಗಾಡ ಸುಂಟಿ. ಅದೇನ ಕತೀ ಬರದ್ನೋ ಬಿಟ್ನೋ. ಫುಕ್ಕಟ್‌ ಬಂದು ಹ್ವಾದ ಅಷ್ಟ…’’

ಅವಳ ಮಾತು ನನಗೆ ಯಾಕೋ ಸರಿ ಅನಿಸಲಿಲ್ಲ. ಈಕೆ ಎಷ್ಟೊಂದು ನೇರವಾಗಿ ಮಾತಾಡುತ್ತಾಳಲ್ಲ ಅನಿಸಿತು. ಚಾಂದಗುಡೆ ‘ಹ್ಹಹ್ಹಹ್ಹ’ ಎಂದು ನಗುತ್ತಿದ್ದರು.  

‘’ಇಲ್ಲ…ಆಯೀ. ನಾನು ನಿಮ್‌ ಖಾನಾವಳಿಯಾಗ ಊಟಾ ಮಾಡೂನು ಅಂತ ಬಂದೇನಿ. ಅಲ್ಲಿ ಫ್ಲೋರಿನಾ ಅದ್ದಾಳಲ್ಲ ಪಾನ್‌ ದುಕಾನದಾಗ. ಅಕೀ ಹೇಳಿ ಕಳಿಸಿದ್ಲು. ಇಲ್ಲಿ ಊಟಾ ಛುಲೋ ಕೊಡತಾರಂತ….’’. ಅಂದೆ.

‘’ಅಯ್ಯ…. ನಮ್ಮ ಫ್ಲೋರಿನಾ ಕಳಿಸ್ಯಾಳ? ಗೆಣೆತನಕ್ಕ ಭಾಳ ಛುಲೋ ಹುಡುಗಿ ಐತಿ ಅದು. ಅದೂನೂ ನಮ್ದನ ಪೋರಿ ಐತಿ ತಗೋರಿ. ಹಾಂ! ನೀವು ಡ್ಯಾಮಿನಾಗ ನೌಕ್ರೀ ಮಾಡತೀರಿ? ಹಂಗಿದ್ರ ಅಲ್ಲಿ ನಮ್ಮ ಹುಡುಗ ನಿಮಗೇನರ ಸಿಕ್ಕಾನೇನು. ಈ ಕಾಕಾಗ ಹೇಳ ಹೇಳಿ ಸಾಕಾತು. ನೋಡೇ ಇಲ್ಲಾ ಅಂತಾರು…’’.

ನನಗೆ ಅಚ್ಚರಿಯಾಯಿತು. ಈಕೆಯ ಹುಡುಗ ಅಂದರೆ ಯಾರು? ಮಗ ಇರಬಹುದೇನೋ. ನಾನೂ ಈಗ ಡ್ಯಾಮಿನಲ್ಲಿ ಹೊಸಬ. ಸರಿಯಾಗಿ ಇನ್ನೂ ಯಾರೂ ಪರಿಚಯ ಆಗಿಲ್ಲ. ಆದರೂ ಹುಡುಗ ಯಾರು ಅಂತ ಕೇಳೋಣ ಅನಿಸಿತು. ಆದರೆ ಚಾಂದಗುಡೆ ಬಿಡಬೇಕಲ್ಲ. ಅದನ್ನೂ ಅವರೇ ಹೇಳಿದರು. 

ಹದಿನೈದು ವರ್ಷದ ಹಿಂದೆ ಗೋವಾಕ್ಕೆ ಹೋಗಿ ನಾಪತ್ತೆಯಾಗಿದ್ದ ಹನುಮಂತ್ಯಾನ ತಾಯಿಯ ಸುಳಿವು ಸಿಕ್ಕಿತು

ಫೋಟೋ ಕೃಪೆ : Reddit

‘’ಹ್ಹಹ್ಹಹ್ಹ… ಶೇಖರವರ… ಇವರ ಹುಡುಗ ಅಂದ್ರ ಮಗಾರೀ. ಹದಿನೆಂಟು ವರ್ಷಾತಂತ ಅವನ ಮಾರೀ ನೋಡದ. ಇಲ್ಲೇ ಸೂಪಾದಾಗ ಕಾಮತೀ ಹೊಟೆಲ್ಲಿನಾಗ ಕೆಲಸಕ್ಕ ಹಚ್ಚಿ ಇವ್ರು ಗೋವಾ ಕಡೆ ಹ್ವಾದರಂತ. ಆಮ್ಯಾಲ ಬಂದು ನೋಡಿದ್ರ ಹುಡುಗ ಇಲ್ಲಿ ಎಲ್ಲೂ ಇಲ್ಲ. ಎಲ್ಲಿ ಹೋಗ್ಯಾನ ಅಂತ ಯಾರೂ ಹೇಳಿಲ್ಲ. ಗುರುತಾ-ಕೂನಾ ಬೇಕಲ್ಲ. ಮಗನ ಸಲುವಾಗಿ ಹೆಣಮಗಳು ಭಾಳ ಹೈರಾಣ ಆಗ್ಯಾಳು. ಎಲ್ಲಾ ಕಡೆ ಹುಡುಕಿದ್‌ ಮ್ಯಾಲ ಯಾರೋ ಹೇಳಿದರಂತ. ಅಂವಾ ಡ್ಯಾಮ್‌ ಕೆಲಸಕ್ಕ ಹತ್ಯಾನಂತ. ಅಲ್ಲಿ ನೋಡಿದರ ನನ್ನ ನಜರೀಗೂ ಬಿದ್ದಿಲ್ಲ’’

‘’ಹುಡುಗನ ಹೆಸರು ಏನಂದ್ರಿ? ಎಷ್ಟು ವಯಸ್ಸು ಅಂವಗ?’’

‘’ಇಪ್ಪತ್ತಕ್ಕ ಯಾಡ್‌ ವರ್ಷ ಕಡಿಮಿ ನೋಡ್ರಿ. ಅವನ ಹೆಸ್ರು ಹನುಮಂತ್ಯಾ ಅಂತ…. ಕಾಮತೀ ಹೊಟೆಲ್ಲಿನಾಗ ಲೋಟಾ ತೊಳಿಯಾಕ್‌ ಹಚ್ಚಿ ಹ್ವಾದ್ನಿ ಅಷ್ಟ. ಮುಂದ ನನಗೂ ಬರಾಕ್‌ ಆಗ್ಲಿಲ್ಲ. ಅವ್ನೂ ನನ್ನ ಹತ್ರ ಬರಲಿಲ್ಲ. ಇಲ್ಲಿ ಅದಾಳ ನೋಡ್ರಿ ಈಕಿ ರತ್ನಾ. ಈಕೀನೂ ನನ್ನ ಮಗಳ಼ಽ ಆಗಬೇಕು. ಹಂಗ ನೋಡಿದ್ರ ಫ್ಲೋರಿನಾನೂ ನನ್ನ ಮಗಳ ಆಗಬೇಕು. ಹನುಮಂತ್ಯಾಗ ಇದು ಯಾವುದೂ ಗೊತ್ತ ಇಲ್ಲ’’’ 

ನನಗೆ ನೆಲ ನಡುಗಿದಂತಾಯಿತು. ಆ ಹುಡುಗನ ಹೆಸರು ಹನುಮಂತ್ಯಾ. ಅಂದ್ರ ನಮ್ಮ ಸರ್ವೇ ತಂಡದಲ್ಲಿದ್ದ ಮತ್ತು ಶಿರೋಡ್ಕರರಿಗೆ ಹತ್ತಿರದವನಾಗಿದ್ದ ಹನುಮಂತ್ಯಾನೇ ಇರಬೇಕು. ಅಂದರೆ ಸಕ್ಕೂಬಾಯಿ ಅವನ ತಾಯಿ. ತನ್ನ ತಾಯಿಯ ಈ ಕತೆಯನ್ನು ಒಮ್ಮೆ ಸರ್ವೇ ಕ್ಯಾಂಪಿನಲ್ಲಿದ್ದಾಗ ಆತ ನನಗೆ ಹೇಳಿದ್ದ. 

 ಓ! ಮೈ ಗಾಡ್‌ !

ಕುಣಿಲಾಬಾಯಿ ಬಗ್ಗೆ ಈಗಾಗಲೇ ಹೇಳಿದ್ದೇನೆ.ಆಕೆ ಸಕ್ಕೂಬಾಯಿಗೆ ಗೋವಾದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಕರೆದೊಯ್ದು ಅಲ್ಲಿ ಯಾರಿಗೋ ಮಾರಾಟ ಮಾಡಿಬಿಟ್ಟಿದ್ದಳು. ಕುಣಿಲಾಬಾಯಿಯ ಕೆಲಸವೇ ಅಂಥದ್ದು. ಈಗಾಗಲೇ ಆಕೆ ಜಗಲಬೇಟ್‌, ಲೋಂಡಾ, ಸೂಪಾ, ಜೊಯಡಾ, ಕುಂಬಾರವಾಡಾ ಮುಂತಾದ ಕಡೆಯಿಂದ ಅದೆಷ್ಟೋ ಹುಡುಗಿಯರನ್ನು ಹೀಗೆ ಗೋವೆಗೆ ಕರೆದೊಯ್ದು ನಾಪತ್ತೆ ಮಾಡಿಬಿಟ್ಟಿದ್ದಳು. 

ಹೀಗೆ ಗೋವಾಕ್ಕೆ ಕರೆದೊಯ್ದು ಅಲ್ಲಿಂದ ಮುಂಬಯಿ ಕಾಮಾಟೀಪುರಕ್ಕೆ ತಲುಪಿಸುವ ವ್ಯವಸ್ಥೆಯೊಂದಿತ್ತು. ಆ ಸುಳಗೆ ಸಿಕ್ಕವರು ಮತ್ತೆ ಹೊರಬರಲಾಗದೆ ಒದ್ದಾಡುತ್ತಿದ್ದರು. ಇದಕ್ಕೆಲ್ಲ ಸೂತ್ರಧಾರಿಣಿ ಸೂಪಾದಲ್ಲಿದ್ದ ಕುಣಿಲಾಬಾಯಿ. ಆದರೆ ಆಕೆಯೀ ಮುಖವಾಡ ಕೆಲವರಿಗಷ್ಟೇ ಗೊತ್ತಿತ್ತು. ಆಕೆ ಹೊರಗೆ ಹೀಗೆಂದು ಬಾಯಿ ಬಿಟ್ಟಿರಲಿಲ್ಲ. ತಾನಾಯಿತು. ತನ್ನ ಗೋವಾ ಮದ್ಯ ಮಾರಾಟವಾಯಿತೆಂದು ಎಂದು ತೋರಿಸಿಕೊಂಡಿದ್ದಳು.

ಬಾಲಕನಾಗಿದ್ದ ಹನುಮಂತ್ಯಾ ತನ್ನ ತಾಯಿ ಸಕ್ಕೂಬಾಯಿಯನ್ನು ಕಾಣದೆ ಹಲುಬಿ ಕೊನೆಗೆ ತಣ್ಣಗಾಗಿದ್ದ. ಒಪ್ಪೊತ್ತಿನ ಊಟಕ್ಕಾಗಿ ಕಾಮತಿ ಹೊಟೆಲ್ಲು, ಅಲ್ಲಿಂದ ಮೂಸಾಕಾಕನ ಹೊಟೆಲ್ಲು, ಅಲ್ಲಿಂದ ಒದೆಸಿಕೊಂಡು ಈಗ ನಮ್ಮ ಸರ್ವೇ ತಂಡಕ್ಕೆ ಬಂದಿದ್ದಾನೆ. ಹನುಮಂತ್ಯಾನ ಬಗ್ಗೆ ಚಾಂದಗುಡೆಯವರಿಗೆ ಗೊತ್ತಿಲ್ಲ. ಅವರು ಅವನ್ನು ನೋಡಿಯೂ ಇಲ್ಲ.  ಮೂಸಾ ಕಾಕಾಕನ ಹೋಟೆಲ್ಲಿ ನೋಡಿದ್ದರೂ ಅವನ ಬಗ್ಗೆ ಏನೂ ಗೊತ್ತಿರಲಿಲ್ಲ.

ಇಲ್ಲಿ ಕಾಳೀ ಕಣಿವೆಯೊಂದೇ ನಿಗೂಢವಾಗಿಲ್ಲ

ಕವಳಾ ಗುಹೆ ( ಫೋಟೋ ಕೃಪೆ : Deccan Chronicle)

ನಾನು ಯೋಚಿಸಿದೆ. ಹನುಮಂತ್ಯಾ ಸರ್ವೇ ತಂಡದಲ್ಲಿ ಆರಾಮಾಗಿದ್ದಾನೆ. ಅಲ್ಲಿಯೇ ಸ್ವಲ್ಪ ದಿನ ಇರಲಿ. ಇಲ್ಲಿ ಸಕ್ಕೂ ಬಾಯಿಯ ವ್ಯವಹಾರಗಳನ್ನು ನೋಡಿ ನಾನೇ ಕರೆಸಿಕೊಳ್ಳುತ್ತೇನೆ. ಅವನು ಬರದಿದ್ದರೆ ನಾನೇ ಸಕ್ಕೂಬಾಯಿಯನ್ನು ಅಲ್ಲಿಗೆ ಕರೆದೊಯ್ಯುತ್ತೇನೆ ಎಂದುಕೊಂಡೆ. ಇಲ್ಲಿ ಸಕ್ಕೂಬಾಯಿಗೂ ಒಂದು ಜೀವನವಿದೆ. ಉಪಜೀವನಕ್ಕೆ ಆಕೆ  ಏನಾದರೂ ಮಾಡಬೇಕಲ್ಲ. ಈ ಖಾನಾವಳಿ ಇಟ್ಟಿದ್ದಾಳೆ. ಆದರೆ ನಿಜವಾಗಲೂ ಇಲ್ಲಿರುವ ರತ್ನಾ ಅನ್ನುವ ಹುಡುಗಿ ಯಾರೋ. ಇವರ ಕತೆಯೇ ಗೂಢ. ಕಾಳೀ ಕಣಿವೆ ಬರೀ ನದಿಯೊಂದೇ ನಿಗೂಢವಾಗಿಲ್ಲ. ಇಲ್ಲಿಯ ಜನರ ಕತೆಯೂ ನಿಗೂಢವಾಗಿದೆ.  ನಾನು ಮತ್ತೆ ಮಾತಾಡದೆ ಊಟಕ್ಕೆ ಕೂತೆ. 

ರತ್ನಾಳೇ ಪ್ಲೇಟು ತಂದು ಇಟ್ಟಳು. ಒಂದು ಚಪಾತಿ, ಒಂದು ಪಲ್ಯ, ಅನ್ನ, ಸಾಂಬಾರು, ಹಪ್ಪಳ, ಉಪ್ಪಿನಕಾಯಿ. ಐವತ್ತು ಪೈಸೆಗೆ ಪ್ಲೇಟು ಊಟ. ಹುರಿದ ಮೀನೂ ಅದೆ ಅಂದಳು ರತ್ನಾ. ಆಹಾ… ಜೇನು ದನಿ. ಅವಳ ಕನ್ನಡ ಅದೆಷ್ಟು ಇಂಪಾಗಿತ್ತೆಂದರೆಇನ್ನೊಮ್ಮೆ ಕೇಳಬೇಕು ಅನಿಸಿತು. ಅಂಥ ಸ್ಪಷ್ಟತೆ ಇದ್ದು ದನಿಯಲ್ಲಿ. ಇವಳು ಸಕ್ಕೂಬಾಯಿಯ ಮಗಳಾಗಿರಲು ಸಾಧ್ಯವೇ ಇಲ್ಲ ಅಂದುಕೊಂಡೆ. ತರ್ಲಾ ಮೀನೂ…? ರತ್ನ ಮತ್ತೆ ಕೇಳಿದಾಗ ನಾನು ತಿನ್ನುವುದಿಲ್ಲ ಎಂದು ಹೇಳಿದೆ. ಆಕೆ ನಕ್ಕು ಹೋದಳು ಒಲೆಯ ಕಡೆಗೆ. 

ಕವಳಾ ಗುಹೆ ( ಫೋಟೋ ಕೃಪೆ : YouTube )

ಆದರೆ ಚಾಂದಗುಡೆಯವರು ಮಾತ್ರ ಎರಡು ಫ್ರೈ ಮಾಡಿದ ಬಾಂಗಡೀ ಮೀನು ಮನೆಗೆ ಪಾರ್ಸೆಲ್ಲು ತಗೆದುಕೊಂಡರು. ಒಂದೊಂದಕ್ಕೆ ಒಂದು ರೂಪಾಯಿ. ಇಲ್ಲಿಯೂ ರೋಖಡಿ ಇರಲಿಲ್ಲ. ಸಕ್ಕೂ ಬಾಯಿ ನನ್ನ ಹೆಸರಲ್ಲಿ ನೋಟುಬುಕ್‌ ನಲ್ಲಿ ಉದ್ದರೀ ಖಾತೆ ಬರೆದುಕೊಂಡಳು. ಹೊರಗೆ ಬರುವಾಗ ಬಾಗಿಲ ಕಡೆಗೆ ನೋಡಿದ ರತ್ನ ನನ್ನತ್ತ ನೋಡಿ ನಕ್ಕು ಕಂಬದ ಮರೆಗೆ ಹೋದಳು. ನಾನು ಗೊತ್ತಾಗದೇ ತಪ್ಪಿ ಯಾವುದೋ ರೈಲು ಹತ್ತುತ್ತಿರುವಂತೆ  ಭಾಸವಾಯಿತು. 

‘’ಹನುಮಂತ್ಯಾ ಎಲ್ಲೆರ ಸಿಕ್ರ ಹೇಳ್ರಿ ಸಾಹೇಬ್‌’’

ಹಾಗೆ ಹೇಳುವಾಗ ಸಕ್ಕೂಬಾಯಿಯ ಕಣ್ಣಲ್ಲಿ ನೀರಿತ್ತು. ಮನಸ್ಸು ಕುಟುಕಿತು. ಆದರೆ ಆ ಕ್ಷಣ ಯಾಕೋ ನಾನು ಬಾಯಿ ಬಿಡಲಿಲ್ಲ. ಸಕ್ಕೂಬಾಯಿಯ ಕತೆಯ ಜೊತೆ ಹನುಮಂತ್ಯಾನೂ ನಿಗೂಢವಾದ. 

ಎರಡು ಪಾರ್ಸಲ್ಲುಗಳು, ಎರಡು ಮನೆಗಳು

ಆಗಲೇ ಜನಸಂಚಾರ ವಿರಳವಾಗಿತ್ತು. ಕತ್ತಲ್ಲಿ ನದಿಯ ಸೇತುವೆ ದಾಟಿ ನಮ್ಮ ಚಾಳಕ್ಕೆ ಬಂದೆವು. ಹಾಗೆ ಬರುವಾಗ ಬ್ರಿಟಿಷ್‌ ಬಂಗಲೆ, ನರಸಿಂಹಯ್ಯನವರ ಆಫೀಸು ಕಂ ಮನೆಯತ್ತ ನೋಡಿದೆವು.  ಒಳಗೆ ಬರೀ ಲೈಟುಗಳು ಕಂಡವು. ಬ್ರಟಿಷ್‌ ಬಂಗಲೆಯಲ್ಲಿ ವಸತಿ ಮಾಡಿರುವ ಜಿಯಾಲಿಜಿಸ್ಟಗಳಾದ ಶೇಷಗಿರಿ ಮತ್ತು ಮಂಗಾರಾಮರು ಇಲ್ಲಿ ಊಟಮಾಡುತ್ತಿರಬೇಕು ಅಂದುಕೊಂಡೆ.

ಕವಳಾ ಗುಹೆ ( ಫೋಟೋ ಕೃಪೆ : New York times )

ಚಾಳದ ಹತ್ತಿರ ಇಬ್ಬರೂ ಬರುತ್ತಲೂ ಹೊರಗೆ ಹೋಗಿದ್ದ ಭೈರಾಚಾರಿಯವರು ಎದುರು ಬಂದರು. ಕೈಯಲ್ಲಿ ಒಂದು ಸಣ್ಣ ಚೀಲ ಹಿಡಿದಿದ್ದರು. 

‘’ಓಹ್‌…! ಹೊರಗೆ ಹೋಗಿದ್ರಾ? ಮತ್ತೆ ಕಾಕಾ ಹೋಟೆಲ್ಲಲ್ಲಿ ಕಾಣ್ಲಿಲ್ಲ ನೀವು?’’  

ತಮಗೆ ಅರಿವಿಲ್ಲದೆ ತಾವೀಗ ಮಲಯಾಳೀ ಮೂಸಾ ಕಾಕಾನ ಹೊಟೆಲ್ಲಿನಂದ ಬರುತ್ತಿದ್ದೇನೆ ಎಂದು ಪರೋಕ್ಷವಾಗಿ ಹೇಳಿದರು. 

‘’ಹ್ಹಹ್ಹಹ್ಹ… ಓಹೋ.. ಭೈರಾಚಾರಿಯವ್ರು ಕಾಕಾ ಹೊಟೆಲ್ಲಿಗೆ ಹೋಗಿದ್ರು ಅಂದಂಗಾತು. ನಾವು ಸಕ್ಕೂಬಾಯೀ ಖಾನಾವಳೀಗೆ ಹೋಗಿದ್ವಿ. ಶೇಖರವರಿಗೆ ಅಲ್ಲಿ ಊಟಾ ಮಾಡ್ಸಿ ಉದ್ದರೀ ಲೆಕ್ಕಾ ಬರೆಸೂದಿತ್ತು’’ 

ಅಂದು ನನ್ನ ಮಾನ ಹರಾಜು ಹಾಕಿದರು. ಅಲ್ಲದೆ ಅವರ ಕೈಯಲ್ಲಿಯ ಚೀಲ ನೋಡಿ ‘ಅದೇನು ಪಾರ್ಸೆಲ್ಲು ತಂದೀರಿ?’ ಎಂದೂ ಕೇಳಿದರು.

‘’ಏನಿಲ್ಲ ಪರೋಟ ಸೇರ್ವಾ ಅಂದ್ರೆ ನಮ್ಮನೆಯವ್ರಿಗೆ ಪ್ರಾಣ. ಅದ್ಕೇ ತರೋಕ್‌ ಹೋಗಿದ್ದೆ’’  

ಅಂದರು.  ನಾನು ಮನಸ್ಸಿನಲ್ಲಿಯೇ ಅಂದುಕೊಂಡೆ. ಅವರು ಹೆಂಡತಿಗಾಗಿ ಕಾಕಾ ಹೊಟೆಲ್ಲಿನಂದ ಪರೋಟಾ ಒಯ್ಯುತ್ತಿದ್ದಾರೆ.ಇವರು ಮೀನು ಒಯ್ಯತ್ತಿದ್ದಾರೆ. ನಮ್ಮಂಥ ಬ್ರಹ್ಮಚಾರಿಗಳಿಗೆ ಪಾರ್ಸೆಲ್‌ ಒಯ್ಯುವ ಪ್ರಮೇಯವೇ ಇರುವುದಿಲ್ಲ. ಸಿಕ್ಕದ್ದನ್ನು ಹೊಟ್ಟೆಗೆ ಹಾಕಿಕೊಂಡು ಬಂದರಾಯಿತು ಅಷ್ಟೆ. 

ಬಂತು ಬೆಂಗಳೂರಿನಿಂದ ಸ್ಫೋಟಕ ಸುದ್ದಿ. ಇಲಾಖೆಯನ್ನು ವಿಸರ್ಜಿಸಿ ಅದನ್ನು ಕಂಪನಿಯನ್ನಾಗಿ ಮಾಡುತ್ತಾರಂತೆ.

ಮೈಸೂರು ಮಹಾರಾಜರ ಕಾಲದಿಂದ ವಿದ್ಯುತ್‌ ಅನ್ವೇಷಣಾ ಕಾಮಗಾರಿ ಇಲಾಖೆಯಾಗಿದ್ದ ಹೆಚ್‌.ಇ.ಸಿ.ಪಿ ಇನ್ನುಮುಂದೆ ಸಾರ್ವಜನಿಕ ಕಂಪನಿ ಆಗುತ್ತದಂತೆ

ಮೈಸೂರು ವಿದ್ಯುತ್‌ ನಿಗಮನಿ. ( ಫೋಟೋ ಕೃಪೆ : IndiaMART )

ಚಾಂದಗುಡೆಯವರಿಗೆ ನನ್ನ ಅರಿವಿಗೂ ಬಾರದ ಕುತೂಹಲವೊಂದಿತ್ತು. ಅದನ್ನು ಕೇಳಿಯೇ ಬಿಟ್ಟರು. 

‘’ನಿಮ್ಮ ಸಾಹೇಬ್ರು ಬೆಂಗಳೂರಿಂದ ಬಂದ್ರಲ್ಲ. ಏನರ ಹೊಸಾ ಸುದ್ದೀ ತಂದಾರೇನು?  ಡ್ಯಾಮು ಕಟ್ಟೂ ಕೆಲಸ ಯಾವಾಗ ಸುರೂ ಮಾಡ್ತಾರಂತ ಏನರ ಗೊತ್ತಾತೇನ್ರಿ’’ 

ಎಂದು ಮದುವೇ ಮನೆ ಸುದ್ದಿ  ಕೇಳುವಂತೆ ಕೇಳಿದರು. ನನಗೂ ಅದರ ಬಗ್ಗೆ ಕುತೂಹಲವಾಯಿತು. ಡ್ಯಾಮು ಕೆಲಸ ಸುರುವಾದರೆ ಸರ್ವೇ ಕ್ಯಾಂಪಿನಿಂದ ಅಪ್ಪೂ ಕುಟ್ಟಿಯನ್ನು ಇಲ್ಲಿಗೇ ಕರೆಸಿಕೊಳ್ಳಬೇಕು ಎಂದೂ ಅಂದುಕೊಂಡೆ. 

‘’ನಿಮ್ಗೆ ಹೇಳ್ಲಿಲ್ಲ ಅಂತ ಕಾಣುತ್ತೆ. ಹೆಚ್‌.ಇ.ಸಿ.ಪಿ.ಇಲಾಖೇನ ಸರಕಾರದವ್ರು ಕ್ಲೋಜು ಮಾಡ್ತಾರಂತೆ. ಇನ್ನು ಮುಂದೆ ಈ ಇಲಾಖೇನೇ ಇರೋದಿಲ್ವಂತೆ. ಡ್ಯಾಮು ಕಟ್ಟೋಕ್‌ ಮುಂಚೇನೇ ಇಲಾಖೆ ಮುಳುಗೋಯ್ತಾ ಇದೆ’’ 

ಅವರು ಹಾಗಂದಾಗ ಇಬ್ಬರೂ ಗಾಬರಿಬಿದ್ದೆವು. ಚಾಂದಗುಡೆಯವರಂತೂ ಹೆದರಿ ಹೋದರು. 

‘’ಮತ್ತ….ಮತ್ತ… ಏನ್‌ ಹೇಳಾಕ್‌ ಹತ್ತೀರೆಪಾ ನೀವು? ಡ್ಯಾಮು ಕಟ್ಟೂದು ಸುಳ್ಳಾತ? ಹಂಗಾದ್ರ ನಮ್ಮ ಎಂಪ್ಲಾಯಿಗೂಳ ಗತೀ ಹೆಂಗರೀ ಭೈರಾಚಾರಿಯವ್ರ’’  

ಎಂದು ಕೇಳಿದರು. ನನಗೂ ಒಳಗೇ ಭಯ ಸುರುವಾಯಿತು. ಇಲ್ಲಿ ಡ್ಯಾಮು ಕೆಲಸ ಇಲ್ಲಾಂದ್ರೆ ಹೋಗುವುದೆಲ್ಲಿಗೆ. ಎಲ್ಲರೂ ಬಂದಿರುವುದು ಡ್ಯಾಮು ಕೆಲಸ ನಂಬಿಕೊಂಡೇ. ಅದೇ ಇಲ್ಲವೆಂದರೆ ಹೇಗೆ. ಅದುವರೆಗೆ ತಲೆಯಲ್ಲಿ ಸಕ್ಕೂಬಾಯಿ ಹೋಟೆಲ್ಲು, ಪಾನ್‌ ಅಂಗಡಿಯ ಫ್ಲೋರಿನಾ, ರತ್ನಿ, ಪರಿಮಳಾ, ಗೋಮ್ಲಿಯರೇ ತುಂಬಿಕೊಂಡಿದ್ದರು. ಈ ಸುದ್ದಿ ಕೇಳಿದ್ದೇ ತಡ. ಮರದಲ್ಲಿರುವ ಹಕ್ಕಿಗಳು ಪುರ್‌ ಎಂದು ಹಾರಿಹೋದಂತೆ ಇವರೆಲ್ಲ ತಲೆಯಿಂದ ಹಾರಿ ಹೋದರು. ಹಸಿದ ಹೊಟ್ಟೆಯಲ್ಲಿ ಯಾರೂ ದೇಶ ಭಕ್ತರಾಗುವುದಿಲ್ಲ ಎಂದು ಕೇಳಿದ್ದೆ. ಆದರೆ ಹಸಿದ ಹೊಟ್ಟೆಯಲ್ಲಿ ಯಾರೂ ರಸಿಕರಾಗುವುದಿಲ್ಲ ಎಂದು ಈಗ ತಿಳಿದೆ 

ಇನ್ಮುಂದೆ ನಿಮಗೆ ಕೆಲಸದ ಭದ್ರತೆ ಇರೋದಿಲ್ಲ. ಯಾಕಂದ್ರೆ ಇನ್ಮುಂದೆ ನೀವು ಸಾರ್ವಜನಿಕ ಕಂಪನೀ ನೌಕರರು ಆಗಿರ್ತೀರಿ 

( ಫೋಟೋ ಕೃಪೆ : Daily Mail )

‘’ಹಂಗೇನೂ ಆಗೂದಿಲ್ಲ. ಇಲಾಖೇನ ವೈಂಡಪ್‌ ಮಾಡಿ ಇದನ್ನ ಪಬ್ಲಿಕ್‌ ಕಂಪನೀ ಮಾಡ್ತಾರಂತ. ಡ್ಯಾಮ ಕಟ್ಟೋದಕ್ಕೆ ಹಣ ಬೇಕು ನೋಡಿ. ಸರಕಾರದ ಹತ್ರ ದುಡ್ಡಿಲ್ಲ. ಅದಕ್ಕೆ ಹೊರಗೆ ಸಾಲ ಎತ್ತೋಕೆ ಇದೊಂದು ಕಾರಣ ಅಷ್ಟೇ. ಹೆದ್ರೋ ಕಾರಣ ಇಲ್ಲ. ಈಗ ಇರೋ ಜನಕ್ಕೆ ಏನೂ ತೊಂದ್ರೆ ಆಗೋದಿಲ್ಲ. ಡ್ಯಾಮು ಅಂತೂ ಕಟ್ತಾರೆ. ನಿಲ್ಸೋದಿಲ್ಲ. ಆದ್ರೆ ಇನ್ನು ಮುಂದೆ ಇಲ್ಲಿರೋರು ಯಾರೂ ಸರಕಾರೀ ನೌಕರರಸ್ಥರು ಆಗಿರೋದಿಲ್ಲ. ಪಬ್ಲಿಕ್‌ ಕಂಪನಿ ನೌಕರರು ಆಗ್ತಾರೆ ಅಷ್ಟೇ. ಯೂ ಆರ್‌ ಇನ್‌ ಪಬ್ಲಿಕ್‌ ಸೆಕ್ಟಾರ್‌ ಓನ್ಲಿ. ನಾಟ್‌ ಗೌರ್ನಮೆಂಟ ಸರ್ವೆಂಟ್. ನಮ್ಮದೇನೋ ಬಿಡಿ. ನಾವು ಪಿ.ಡಬ್ಲು.ಡಿ ಅಪಾಯಂಟ್ಮೆಂಟು. ಇಲ್ಲಿ ಬೇಡಾಂದ್ರೆ ನಾಳೇನೇ ವಾಪಸ್ಸು ನಮ್ಮ ಮದರ್‌ ಡಿಪಾರ್ಟ್ಮೆಂಟಿಗೆ ಹೋಗ್ತೀವಿ. ನಾವು ಯಾವತ್ತಿದ್ರೂ ಸರಕಾರೀ ನೌಕರರೇ. ಆದ್ರೆ ನೀವು ಹಾಗಲ್ಲ. ಮುಂದೆ ನಿಮ್ಗೆ ಕೆಲಸದ ಭದ್ರತೆ ಹೇಗಿರುತ್ತೋ ಗೊತ್ತಿಲ್ಲ’’ 

ಎಂದು ಇನ್ನೊಂದು ಬಾಂಬು ಹಾಕಿದರು.  ಆಗ ಚಾಂದಗುಡೆಯವರ ಮುಖ ಅವರ ಕೈಲಿದ್ದ ಮಸಾಲೆ ಹಚ್ಚಿ ಹುರಿದ ಬಂಗಡಾ ಮೀನುಗಳಂತೆ ಆಯಿತು. ಅರ್ಧ ವಯಸ್ಸಾಗಿದೆ. ಇಂಥ ಹೊತ್ತಲ್ಲಿ ಏನೋ ಆಗಿ ಡ್ಯಾಮು ಕಟ್ಟುವುದು ನಿಂತೋದ್ರೆ ತನ್ನ ಕೆಲಸದ ಗತಿಯೇನು? 

‘’ಇಲಾಖೇನ ಮುಚ್ಚಿ ಅದನ್ನ ಕಂಪನೀ ಮಾಡೂದು ಹೆಂಗ ಸಾಧ್ಯರೀ? ಬ್ಯಾಡಂತ ಯಾರೂ ಅನ್ನೂದಿಲ್ಲ?’’ 

‘’ಯಾರ್‌ ಅಂತಾರೆ? ಯಾರೂ ಅನ್ನೋದಿಲ್ಲ. ನಾಳೆ ಸರಕಾರನ್ನೇ ಮುಚ್ಚಿ ಅದನೂ ಕಂಪನೀ ಮಾಡಿದ್ರೆ ನೀವೇನ್‌ ಮಾಡೋರು ಇದೀರಿ ಹೇಳಿ’’

‘’ಅಬಬಬ… ಭಾರೀ ಧೈರ್ಯದ ಮಾತ ಮತ್ತ. ಮುಂದ ಹೆಂಗ್ರಪಾ ನಮ್ಮ ಭವಿಷ್ಯ?’’ 

ಮೈಸೂರು ವಿದ್ಯುತ್‌ ನಿಗಮ ನಿಯಮಿತ [ಎಂ.ಪಿ.ಸಿ.ಲಿ] ಅನ್ನೋ ಕಂಪನಿ ರಿಜಿಸ್ಟರ ಆಯ್ತು ಕಣ್ರೀ. ನೀವು ಇನ್ನು ಆ ಕಂಪನೀ ನೌಕರರಷ್ಟೇ. ಸರಕಾರಕ್ಕೂ ನಿಮಗೂ ಸಂಬಂಧವೇ ಇಲ್ಲ 

‘’ದೇವ್ರಿದಾನೆ ತಗೊಳ್ಳಿ. ಕಾಳೀಕಾಂಬೆ ಇಲ್ವಾ. ಏನಾದ್ರೂ ದಾರೀ ತೋರಿಸ್ತಾಳೆ. ನಾನಂತೂ ವಾಪಸ್ಸು ಪಿ.ಡಬ್ಲು.ಡಿಗೆ ಹೋಗ್ತೀನಿ. ಈಗಾಗ್ಲೇ ಮೈಸೂರು ಪವರ್‌ ಕಾರ್ಪೋರೇಶನ್‌ ಲಿಮಿಟೆಡ್‌ ಅಂತ ಕಂಪನೀ ಆಕ್ಟಿನಲ್ಲಿ ರಿಜಿಸ್ಟರೂ ಆಗೋಯ್ತಂತೆ. ಈ ಕಂಪನೀಗೆ ಅದ್ಯಾರೋ ಎಂ.ಹಯಾತ್‌ ಅನ್ನೋವ್ರನ್ನ ಚೇರ್ಮನ್ನರೂ ಅಂತ ಮಾಡಿದ್ರಂತೆ. 

ಅಷ್ಟೇ ಅಲ್ಲ.  ಪಿ.ಆರ್‌.ನಾಯಕ್‌ ಅನ್ನೋ ಆಯ್.ಎ.ಎಸ್‌. ಅಧಿಕಾರೀನ ಎಂ.ಡಿ ಅಂತ ನೇಮಕಾನೂ ಮಾಡಿದ್ರಂತೆ. ಇನ್‌ ಮೇಲೆ ಅವ್ರೇ ಕಂಪನೀ ನಡೆಸ್ತಾರಂತೆ. ಕಂಪನೀ ಅಂದ್ಮೇಲೆ ಮುಗೀತು. ಇಲ್ಲಿ ಹಾರ್ಡ್‌ ಕೆಲಸ ಮುಗಿಯೋತನಕ  ನಿಮ್ಮನ್ನ ಇಟ್ಕೋತಾರೆ. ಆಮೇಲೆ ಬಿಸಾಕಿ ಬೇರೇಯೋರನ್‌ ತಂದು ಕೂಡಸ್ತಾರೆ ಅಷ್ಟೇ. ಕಂಪನೀ ಅಲ್ವಾ…’’

ಭೈರಾಚಾರಿಯವರು ಭಯಂಕರವಾದುದನ್ನೇ ಹೇಳಿ ಹೆದರಿಸಿದರು. ಚಾಂದಗುಡೆಯವರ ಗಂಟಲು ಒಣಗಿತು. ‘’ಅಬಬಬ… ಹೌದೇನ್ರೀ… ಕಂಪನೀ ಅಂದ್ರ ನಮ್ಮನ್ನಽ ಯಾಕ ಇಟಗೋತಾರ? ಬಾವೀ ತೋಡಾವ್ರು ಒಬ್ಬರು. ನೀರು ಕುಡ್ಯಾವ್ರು ಇನ್ನೊಬ್ರು. ಭಾರೀ ಮಾಹಿತಿ. ಯಾಕ್ರೀ ಶೇಖರವರ…?’’ 

‘’ನೋಡಿ ನಮ್ಮ ಸಾಹೇಬ್ರು ಬೆಂಗಳೂರಿಗೆ ಹೋಗಿ ಇಷ್ಟೆಲ್ಲಾ ಮಾಹಿತಿ ತಂದೀದಾರೆ. ಅಂಥವ್ರಿಗೆ ಜನ ಸುಮ್ನೇ ಕೋಳೀ ಸಾಹೇಬ್ರು ಅಂತ ಕರೀತಾರ. ಅಲ್ಲ.. ಇವತ್ತು ಡ್ಯಾಮ ಸೈಟಿಗೆ ನಿಮ್ಮ ಇ.ಇ. ಸಾಹೇಬ್ರು ಬಂದ್ರು, ನಿಮ್ಮ ಹೆಬ್ಲೀ ಸಾಹೇಬ್ರೂ ಬಂದೋದ್ರು. ಒಬ್ಬರಾದ್ರೂ ಈ ಥರದ್ದು ಸುದ್ದೀ ಹೇಳಿದ್ರಾ. ಅವ್ರಿಗೂ ಇದು ಗೊತ್ತಿರೋದೇ. ಆದ್ರೆ ನಮ್ಮ ಸಾಹೇಬ್ರು ನೋಡಿ. ವಿಧಾನ ಸೌಧದೊಳಗೆ ಒಂದ್‌ ಗಂಟೇ ಸದ್ದಾದ್ರೂ ಇಲ್ಲಿ ಕೂತು ಏನಾಗ್ತದೆ ಅಂತ ಹೇಳಿ ಬಿಡ್ತಾರೆ’’ 

ಹೀಗೆ ಹೇಳಿದ ಭೈರಾಚಾರಿಯವರು ನಗುತ್ತ ಮನೆಯ ಕಡೆ ತಿರುಗಿ ಮತ್ತೆ ಹೇಳಿದರು. 

‘’ಚಾಂದಗುಡೆಯವರೇ….ಕೂಲ್‌ ಡೌವ್ನ… ಕೂಲ್‌ ಡೌವ್ನ…ಏನೂ ಆಗೋಲ್ಲ. ನಾನು ಇವತ್ತು ಒಂದ್‌ ಸ್ವಲ್ಪ ಹೊರಗೇ ಕುಡ್ದು ಬಂದೆ. ಮನೇಲಿ ನಮ್ಮೆಂಗಸ್ರು ನಾನ್ವೆಜ್ಜು ಕೇಳಿದ್ರು. sorry…ನಮ್ದು ತಿನ್ನೋ ಜಾತಿ ಅಲ್ಲ. ಆದ್ರೂ sumtime  ತಿಂತೀವಿ. ಗುಡ್‌ ನೈಟ್‌….’’ 

ಆಗಲೇ ತುಸು ಕುಡಿದಿದ್ದ ಭೈರಾಚಾರಿಯವರು ಅಲ್ಲಿ ನಿಲ್ಲದೆ ಮೆಲ್ಲಗೆ ಮನೆಯೊಳಗೆ ನುಸುಳಿಕೊಂಡು ಬಿಟ್ಟರು. ನಾವಿಬ್ಬರೂ ಅವರು ಹೋಗುವುದನ್ನೇ ನೋಡುತ್ತ ಅಲ್ಲೇ ನಿಂತೆವು. ಚಾಂದಗುಡೆಯವರು ತಲೆಯ ಮೇಲೆ ಬಂಡೆ ಬಿದ್ದವರಂತೆ ನಿಂತುಬಿಟ್ಟರು. 

ಸರಕಾರ ಏನರ ನಿರ್ಧಾರ ತಗೊಳ್ಲಿ. ಅದರ ಹಿಂದ ಒಂದು ಒಳ್ಳೇ ಉದ್ದೇಶ ಇರತದರೀ. ನಾವು ಬೇಡಿಕೊಳ್ಳೂದೇನಂದ್ರ

ಆದಷ್ಟು ಲಗೂನ ಇಲ್ಲಿ ಡ್ಯಾಮು ಬರಲೆಪಾ. ಸಾವಿರಾರು ಮಂದೀಗೆ ಅನ್ನಾ ಹಾಕೂ ಯೋಜನಾ ಅದು. ನಮಗ ಖಾಯಂ ನೌಕರಿ ಇರಲಿ. ಏನಂತೀರೀ…

ವಿಧಾನ ಸೌಧದ ಚಿತ್ರ ( ಫೋಟೋ ಕೃಪೆ : Pinterest )

 ‘’ಅವ್ರು ಹೇಳಿದ್ದು ಖರೇನ ಇರಬೇಕು ಶೇಖರವರ. ನಿಮಗೇನೋ ಮದುವೀ-ಮುಂಜಿವಿ-ಮಕ್ಕಳು ಇಲ್ಲ. ಬೈರಾಗಿ ಥರಾ ಅದೀರೆಪಾ. ಆದ್ರ ನಮ್ಮ ಗತಿ ಹೇಳ್ರಿ.

‘’ಏನೂ ಆಗೂದಿಲ್ಲ. ಸರಕಾರದ ಯೋಜನಾ ಇದು. ಹುಡುಗಾಟಿಕೀ ಮಾಡೂದಲ್ಲ. ಇಷ್ಟೆಲ್ಲ ಖರ್ಚು ಮಾಡಿ ಯೋಜನಾ ಕಟ್ಟೂ ಕೆಲಸಕ್ಕ ಕೈ ಹಾಕ್ಯಾರಂದ್ರ ಸುಮ್ನ ಅಲ್ಲ. ಸರಕಾರ ಏನ಼ ಮಾಡಿದ್ರೂ ಅದರ ಹಿಂದ ಒಂದ್‌ ಒಳ್ಳೇ ಉದ್ದೇಶನ ಇರತೈತಿ. ಭೈರಾಚ್ರಿಯವ್ರು ಹೇಳಿದ್ರು. ಕಾಳೀ ತಾಯಿ ಆಸರೆಗೆ ಬಂದೀವಿ ಅಂತ. ಖರೇ ಐತಿ ಅದು. ಅಕೀನ್ನ  ನಂಬೂನು. ಈಗ ನೀವು ಮಲಕ್ಕೋ ಹೋಗ್ರಿ. ಹಾಂ…! ಕೈಯೊಳಗಿನ ಚೀಲಾ ಗಟ್ಯಾಗಿ ಹಿಡ್ಕೋರಿ. ಮಸಾಲೀ ಹಚ್ಚಿದ ಮೀನು ತಳಗ ಬಿದ್ದು-ಗಿದ್ದಾವು’’  

ಸಮಾಧಾನ ಹೇಳಿದೆ. ಒಬ್ಬ ಮನುಷ್ಯನಿಗೆ ಅನ್ನದ ದಾರಿಗೆ ಕಲ್ಲು ಬೀಳುತ್ತದೆ ಅಂದಾಗ ಆತ ಪರಿತಪಿಸುವ ರೀತಿ ಚಾಂದಗುಡೆಯವರ ಮುಖದಲ್ಲಿತ್ತು. ಮನೆಯ ಬಾಗಿಲ ಬಳಿ ನಿಲ್ಲುತ್ತ ಮತ್ತೆ ಹೇಳಿದರು. 

‘’ಅವ್ರು ಕುಡಿದು ಮಾತಾಡಿದ್ರು. ನಿಶೇದಾಗಿನ ಮಾತು ಕಿಸೇದಾಗ ಅಂತಾರ. ಅವ್ರು ಹೇಳಿದ್ದು ಸುಳ್ಳೂ ಇರಬಹುದು. ದೇವರ ದಯದಿಂದ ಇಲ್ಲಿ ಆದಷ್ಟು ಲಗೂ ಡ್ಯಾಮು ಬರಲೆಪಾ. ಸಾವಿರ ಮಂದೀಗೆ ಅನ್ನಾ ಹಾಕೂ ಯೋಜನಾ ಇದು’’ ಅಂದರು. ಅದೇ ಗುಂಗಿನಲ್ಲಿ ಮನಸ್ಸು ಸಣ್ಣದು ಮಾಡಿಕೊಂಡು ಒಳಗೆ ಹೋದರು. 

ನನಗೆ ಅನಿಸಿತು. ಅಷ್ಟು ಪ್ರೀತಿಯಿಂದ ಸಕ್ಕೂಬಾಯಿ ಖಾನಾವಳಿಯಿಂದ ತಂದ ಆ ಮೀನುಗಳನ್ನು ಇವತ್ತು ಇವರು ತಿನ್ನುವುದಿಲ್ಲ ಎಂದು. 

ನಾನು ಇಲ್ಲಿ ಖೋಲೆಯ ಬಾಗಿಲ ಬೀಗ ತಗೆಯುವದಕ್ಕೂ ಅಲ್ಲಿ ಪಾಯಖಾನೆಯ ಬಾಗಿಲು ತೆರೆಯುದಕ್ಕೂ ಸರಿ ಹೋಯಿತು

( ಫೋಟೋ ಕೃಪೆ : FactChecker)

ಈಗ ನಾನೂ ನನ್ನ ಖೋಲೆಯತ್ತ ಬಂದೆ. ಹಾಗೆ ಹಾದು ಬರುವಾಗ ಗಟ್ಟಿಯಾಗಿ ಬಾಗಿಲು ಹಾಕಿಕೊಂಡಿದ್ದ ಪೋಲೀಸ ಮನೆಯಿಂದ ಹೆಂಗಸಿನ ಕಿಲಕಿಲ ನಗು, ಬಳೆಗಳ ಸದ್ದು ಹೊರಗೆ ಢಾಳಾಗಿ ಕೇಳಿಸುತ್ತಿತ್ತು.  

ನಾನು ಬೀಗ ತಗೆಯಲು ಬಾಗಿಲ ಬಳಿ ನಿಲ್ಲುತ್ತಿದ್ದಂತೆ ಪಾಯಖಾನೆಯ ಬಾಗಿಲೊಂದು ತೆರೆಯಿತು. ಅಲ್ಲಿಂದ ಗುಬ್ಬಿ ಲಾಟಾನು ಹಿಡಿದ ಸ್ಕರ್ಟ ಹಾಕಿದ ಇನ್ನೊಂದು ಮನೆಯ ಹೆಂಗಸು ಹೊರಗೆ ಬಂದಳು. ನನ್ನನ್ನು ನೋಡಿ ‘’ಜೇವನ್‌ ಝಾಲಾ ಕಾಯ್‌…’’ ಎಂದು ಕೇಳಿದಳು. ನಾನು ‘’ಆಯ್ತುರೀ… ನಿಮ್ಮದು?’’ ಎಂದೆ ನನಗರಿವಿಲ್ಲದೆ. ಆಕೆ 

ಇಷ್ಟೊತ್ತಿನ ತನಕ ಇದೇ ಆಯ್ತು. ಈಗ ಹೋಗಿ ಮಾಡ್ಬೇಕು ಎಂದು ನಗುತ್ತ ಮುಂದೆ ಹೋದಳು. ನನಗೆ ಬೇಡವೆಂದರೂ ನಗು ಬಂತು. ಹೌದು. ಇಷ್ಟೊತ್ತಿನ ತನಕ ಪಾಯಖಾನೆ ಆಯ್ತು. ಇನ್ನು ಮೇಲೆ ಊಟ ಅಂದುಕೊಳ್ಳುತ್ತ ಬಾಗಿಲ ಬೀಗ ತಗೆಯತೊಡಗಿದೆ. ಅದೆಲ್ಲಿತ್ತೋ ಎರಡು ಹಂದೀ ಮರಿಗಳು ಗುದ್ದಾಡುತ್ತ ನನ್ನ ಕಾಲಡಿ ನುಗ್ಗಿ ನನ್ನನ್ನು ಕೆಳಗೆ ಕೆಡವಿಯೇ ಬಿಟ್ಟವು. ಪಾಯಖಾನೆಗೆ ಹೋಗಿದ್ದ ಸ್ಕರ್ಟು ಹೆಂಗಸು ಹಿಂದಿರುಗಿ ನೋಡಿ ಅರರರೇ… ಅನ್ನುತ್ತ ಕೈಯಲ್ಲಿಯ ಬಕೆಟ್ಟು ಅಲ್ಲೇ ಇಟ್ಟು ಓಡಿ ಬಂದು  ನನ್ನನ್ನು ಅನಾಮತ್ತಾಗಿ ಎತ್ತಿ ನಿಲ್ಲಿಸಿದಳು. ಮೀನು-ಮಾಂಸ ತಿಂದ ದೇಹ ಅದು. ಬಲಿಷ್ಠವಾಗಿದ್ದಳು. ‘’ಪೀಲಾ ಕಾಯ್‌? ‘’ ಎಂದು ನಕ್ಕು ಆಕೆ ಮನೆ ಕಡೆಗೆ ಹೋದಳು ನನಗೆ ನಾಚಿಕೆಯಾಯಿತು. ಬಟ್ಟೆ ಒರೆಸಿಕೊಳ್ಳುತ್ತ ಎದ್ದು ಒಳಗೆ ಹೋದೆ. 

ಬಸವಣ್ಣನ ಮಾತು ನೆನಪಾಯಿತು. ಬಾರದು ಬಪ್ಪದು. ಬಪ್ಪುದು ತಪ್ಪದು  

ಚಾಪೆ ಬಿಡಿಸಿ ದಿಂಬು ಇಟ್ಟುಕೊಂಡು ಸೋಲಾಪುರೀ ಚದ್ದರ ಬದಿಗೆ ಇಟ್ಟುಕೊಂಡು ಹಾಗೇ ಕೂತೆ. ಜೀವನ ನಾವು ಅಂದುಕೊಂಡಂತೆ ಇರುವುದಿಲ್ಲ. ಬಸವಣ್ಣ ಹೇಳಿದ್ದಾನೆ ‘ಬಾರದು ಬಪ್ಪದು. ಬಪ್ಪುದು ತಪ್ಪದು’ ಅಂತ. ಯಾವುದಕ್ಕೂ ನಾವು ಸಿದ್ಧವಾಗಿರಬೇಕು. ಇಲ್ಲಿ ಕೆಲಸದ ಅಭದ್ರತೆ ಇದ್ದರೆ ಇನ್ನೊಂದು ಕಡೆಗೆ ನೌಕರಿ ಹುಡುಕುವುದು ಒಳ್ಳೆಯದೇ. 

ಗೊವಾ ಚೌಗುಲೆ ಶಿಪ್ಪಿಂಗ ಕಂಪನಿ ಚಿತ್ರ ( ಫೋಟೋ ಕೃಪೆ : http://www.chowgulelavgan.com)

ಗೋವಾದ ಪೋಂಡಾದಲ್ಲಿ ಮ್ಯಾಂಗನೀಸ್‌ ಕಂಪನಿಯೊಂದಿದೆಯಂತೆ. ದೊಡ್ಡ ವ್ಯವಹಾರ ನಡೆಸುವ ಕಂಪನಿ ಅದು. ಗೋವಾದಿಂದ ವಿದೇಶಕ್ಕೂ ಪರಿಷ್ಕರಿಸಿದ ಅದಿರು ಕಳಿಸುತ್ತಾರಂತೆ. ಅಲ್ಲಿ ಸಂಬಳವೂ ಜಾಸ್ತಿ. ಬೇಕಿದ್ರೆ ಹೇಳಿ. ಅಲ್ಲಿ ನನ್ನ ಸಂಬಂಧಿಯೊಬ್ಬರಿದ್ದಾರೆ. ಅವರು ಮೆಸರ್ಸ್ ಚೌಗಲೆ ಶಿಪ್ಪು ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಅವರಿಗೆ ಹೇಳಿದರೆ ಕೆಲಸ ಕೊಡಿಸುತ್ತಾರೆ ಎಂದು ಚಾಂದಗುಡೆಯವರೇ ಒಮ್ಮೆ ಹೇಳಿದ್ದರು. ಯಾವುದಕ್ಕೂ ಒಮ್ಮೆ ಚಾಂದಗುಡೆ ಯವರನ್ನು ಕರೆದುಕೊಂಡು ಗೋವಾಕ್ಕೆ ಹೋಗಿ ಬರಬೇಕು ಅಂದುಕೊಂಡೆ.

ಯಾಕೋ ನಿದ್ದೆಯೇ ಬರಲಿಲ್ಲ. ಮತ್ತೆ ಮತ್ತೆ ಹಂದಿಗಳು ಬಂದು ಗುದ್ದಿದಂತೆ ಭಾಸವಾಗತೊಡಗಿತು

ಆದರೂ ನಿದ್ದೆ ಬರಲಿಲ್ಲ. ಇವತ್ತು ಖಾನಾವಳಿಯಲ್ಲಿ ರತ್ನಾಳನ್ನು ಬೇರೆ ನೋಡಿದ್ದೆ. ಸ್ಕರ್ಟು ಹೆಂಗಸು ನನ್ನನ್ನು ಎತ್ತಿ ನಿಲ್ಲಿಸಿದ್ದು ಅತಿಯಾಗಿತ್ತು. ನಾನೇ ಏಳುವವನಿದ್ದೆ. ಆದರೆ ಆಕೆ ನನ್ನ್ನು ಏಳಲು ಬಿಡಲಿಲ್ಲ. ಒತ್ತಾಯದಿಂದ ಗಟ್ಟಿಯಾಗಿ ಹಿಡಿದು ತಬ್ಬಕೊಂಡು ಎಬ್ಬಿಸಬೇಕಾಗಿರಲಿಲ್ಲ. ಚಾಳದಲ್ಲಿ ಬೇರೆ ಸಂಸಾರಗಳು ಇರುವಾಗ ಹಾಗೆ ಮಾಡುವುದೇ. ಎಲ್ಲ ಸಿನಿಮಾದಂತೆ ನಡೆಯುತ್ತಿದೆ ಇಲ್ಲಿ. ನಾಳೆ ಬೆಳಿಗ್ಗೆ ಡ್ಯಾಮು ಕೆಲಸಕ್ಕೆ ಬೇಗ ಹೋಗಬೇಕು. ಅಲ್ಲಿ ಎಲ್ಲರೂ ಇರುತ್ತಾರೆ. ಏನೋ ಒಂದು ವಿಷಯ ತಿಳಿಯುತ್ತದೆ. 

( ಫೋಟೋ ಕೃಪೆ : http://www.wikimedia Commons)

ಹಾಗೇ ಚಾಪೆಯ ಮೇಲೆ ಉರುಳಿದೆ. ಕಣ್ಣ ಮುಂದೆ ಮತ್ತೆ ಪರಿಮಳಾ ಅವರು ಬಂದರು. ನನ್ನ ಕತೆಯನ್ನುಓದಿ ಹೇಳಿದ ಮಾತುಗಳು. ಸ್ಪರ್ಧೆಗೆ ಅದನ್ನು ತಾವೇ ಕಳಿಸುತ್ತೇನೆ ಅಂದದ್ದು ನೆನಪಾಯಿತು. ಹಾಗೇ ಸಕ್ಕೂಬಾಯಿಯ ಬಗ್ಗೆ ಕತೆ ಬರೆಯಬೇಕು.ಅಷ್ಟೇ ಅಲ್ಲ ಹನುಮಂತ್ಯಾನನ್ನು ಇಟ್ಟುಕೊಂಡು ಒಂದು ಸಿನಿಮಾ ಕೂಡ ಮಾಡಬಹುದು ಆದರೆ ಅದು ನನ್ನಿಂದ ಸಾಧ್ಯವಿಲ್ಲ. ಅಷ್ಟು ಅನುಕೂಲ ನನಗಿಲ್ಲ ಎಂದುಕೊಂಡೆ. ಆದರೆ ಕನಸು ಕಾಣುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲವಲ್ಲ. ಎಲ್ಲವನ್ನೂ ರೆಪ್ಪೆಯಲ್ಲಿ ತುಂಬಿಕೊಂಡು ಹಾಗೇ ಕಣ್ಣು ಮುಚ್ಚಿದೆ. ಯಾವಾಗಲೋ ನಿದ್ದೆ ಆವರಿಸಿತ್ತು.

[ಮುಂದಿನ ಶನಿವಾರ ಮತ್ತೆ ಓದಿರಿ. ಇದು ವಿದ್ಯುತ್‌ ನಿಗಮದ ನಿವೃತ್ತನ ನೆನಪಿನ ಮಾಲೆ. ಬೆಳಕು ತಂದವರ ಕತ್ತಲ ಬದುಕಿನ ಕತೆ. ತಪ್ಪದೆ ಓದಿರಿ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)
hoolishekhar

    

0 0 votes
Article Rating

Leave a Reply

2 Comments
Inline Feedbacks
View all comments
ಲಕ್ಷ್ಮೀ ನಾಡಗೌಡ

ಒಂದೇ ಉಸಿರಿಗೆ ಒದಿದೆ… ಸೂಪರ್

Prashant

Such a good old days, everyday was filled with adventure but yet so cool calm and enjoyable. Great work sir, hats off to your enthusiasm energy and consistency in you work. We look forward for unleashing of many more stories from your memory

Home
News
Search
All Articles
Videos
About
2
0
Would love your thoughts, please comment.x
()
x
%d bloggers like this:
Aakruti Kannada

FREE
VIEW