ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳೆ – ದೇವಿಕಾ ರಾಣಿ

ಭಾರತೀಯ ಚಿತ್ರರಂಗದ ಪ್ರಪ್ರಥಮ ಮಹಿಳೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲಿಗರು ದೇವಿಕಾ ರಾಣಿ. ಅವರ ಸಾಧನೆಯ ಕುರಿತಾದ ಕುತೂಹಲಕಾರಿ ಇನ್ನಷ್ಟು ವಿಷಯಗಳು ನಿಮ್ಮ ಮುಂದೆ. ಮತ್ತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಶೇರ್ ಮಾಡಿ…

ಕನಕಪುರ ರಸ್ತೆಯಲ್ಲಿರುವ ದೇವಿಕಾ ರಾಣಿ ಪಾಳುಬಿದ್ದ ಎಸ್ಟೇಟ್ ಮುಂದೆ ಸಾಕಷ್ಟು ಬಾರಿ, ಸಾಕಷ್ಟು ಜನ ಪ್ರತಿನಿತ್ಯ ಓಡಾಡುತ್ತಲೇ ಇರುತ್ತಾರೆ. ಕಸದ ರಾಶಿಗಳ ಮಧ್ಯೆ  ‘ರೋರಿಕ್ ಮತ್ತು ದೇವಿಕಾ ರಾಣಿ ರೋರಿಕ್’ ಎಂದು ದೊಡ್ಡದಾದ ನಾಮಫಲಕವನ್ನು ನೋಡುವಾಗ, ಇದು ಒಬ್ಬ ದೊಡ್ಡ ನಟಿಯ ಎಸ್ಟೇಟ್ , ಸಿನಿಮಾದಲ್ಲಿ ನಾಯಕಿಯಾಗಿದ್ದಳಂತೆ ಎನ್ನುವ ಉಡಾಫೆಯಿಂದ ಆ ನಾಮಫಲಕವನ್ನು ನೋಡಿದ್ದುಂಟು. ಆದರೆ ನಿಜವಾಗಿಯೂ ದೇವಿಕಾ ರಾಣಿ ಯಾರು?ಅವರ ಸಾಧನೆ ಏನು ?  ಎನ್ನುವುದು ಎಷ್ಟೋ ಜನರಿಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ದೇವಿಕಾ ರಾಣಿ ಎಸ್ಟೇಟ್ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅದನ್ನು ಫಿಲಂ ಸಿಟಿಯನ್ನಾಗಿ ಮಾಡಬೇಕೆನ್ನುವ ಪ್ರಯತ್ನಗಳು ,ಅದಕ್ಕೆ ವಿರೋಧಗಳು ಮತ್ತು ಚರ್ಚೆಗಳು ಹೆಚ್ಚಾದಾಗ ಜನರ ದೃಷ್ಟಿ ಎಸ್ಟೇಟ್ ನ ಕಡೆ ವಾಲಿತು.

ಕರ್ನಾಟಕದಲ್ಲಿ ಅದು ಬೆಂಗಳೂರಿನಲ್ಲಿದ್ದುಕೊಂಡು ನಾವು ದೇವಿಕಾರಾಣಿ ಬಗ್ಗೆ ತಿಳಿದಿಲ್ಲದಿರುವುದು ವಿಷಾದನೀಯವಾಗಿದೆ. ದೇವಿಕಾರಾಣಿ ಮಡಿವಂತಿಕೆ ಸಮಾಜದಲ್ಲಿ ಅಂದರೆ ೧೯೩೮ ರಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಕ್ಕೆ ಕಾಲಿಡುವುದೇ ಕಷ್ಟವಿದ್ದ ಕಾಲದಲ್ಲಿ, ದೇವಿಕಾ ರಾಣಿ ಭಾರತೀಯ ಚಿತ್ರರಂಗವನ್ನು ಪ್ರವೇಶಿಸಿ ಅಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಂತಹ ಪ್ರತಿಭಾನ್ವಿತ ನಟಿ. ಭಾರತೀಯ ಚಿತ್ರರಂಗವನ್ನು ಪ್ರವೇಶಿಸಿದ ಪ್ರಪ್ರಥಮ ಮಹಿಳೆ.

(ಸಂಬಂಧಿ ರವೀಂದ್ರನಾಥ್ ಠಾಗೋರ್ ಅವರ ಜೊತೆ ದೇವಿಕಾ ರಾಣಿ)

ದೇವಿಕಾ ರಾಣಿಯವರು ಮೂಲತಃ ಬಂಗಾಳಿ ಕುಟುಂಬದವರು. ಮಾರ್ಚ್ ೩೦, ೧೯೦೮ ರಂದು ವಿಶಾಖ ಪಟ್ಟಣಂ ದ ವಾಲ್ಟೈರ್ ನಲ್ಲಿ ಜನಿಸಿದರು.  ಅವರ ತಂದೆ ಎಂ. ಎನ್. ಚೌಧುರಿಯವರು ಮದ್ರಾಸ್ ರಾಜ್ಯದ ಪ್ರಥಮ ಸರ್ಜನ್ ಜನರಲ್ ಎಂದು ಪ್ರಖ್ಯಾತರಾದವರು. ಅವರ ತಾಯಿ ಲೀಲಾ. ಮತ್ತು ನೊಬೆಲ್ ಪುರಸ್ಕೃತರಾದ ರಬೀಂದ್ರನಾಥ ಠಾಗೂರ ಹತ್ತಿರದ ಸಂಬಂಧಿಕರಾಗಿದ್ದರು. ದೇವಿಕಾ ರಾಣಿಯವರು ಇಪ್ಪತ್ತರ ದಶಕದಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಮುಗಿಸಿ, ಲಂಡನ್ನಿನ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ಮತ್ತು ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನ ಪಡೆದು ರಂಗಭೂಮಿಯ ಶಿಕ್ಷಣ ಪಡೆದರು. ರಂಗಭೂಮಿಯ ಅಧ್ಯಯನದ ಜೊತೆಗೆ ಆರ್ಕಿಟೆಕ್ಚರ್, ಟೆಕ್ಸ್ಟೈಲ್ ಮತ್ತು ಡೆಕೊರ್ ಡಿಸೈನ್ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿದ್ದರು.

(ದೇವಿಕಾ ರಾಣಿ ಮತ್ತು ಪತಿ ಹಿಮಾಂಶು ರೈ ) ಫೋಟೋ ಕೃಪೆ : Veethi

ರೂಪದ ಜೊತೆಗೆ ವಿದ್ಯೆ ಇದ್ದಾಗ ಎಂತವರು ಕೂಡ ಮಾರು ಹೋಗುತ್ತಾರೆ. ಅದು ದೇವಿಕಾ ರಾಣಿಯವರ ವಿಷಯದಲ್ಲಿಯೂ ಹಾಗೆಯೆ ಆಯಿತು. ಲಂಡನ್ ನಲ್ಲಿ ಓದುವಾಗ ಅಂದಿನ ಭಾರತೀಯ ಚಿತ್ರರಂಗದ ಖ್ಯಾತ  ನಿರ್ಮಾಪಕ ಹಿಮಾಂಶು ರೈ  ಪರಿಚಯವಾಯಿತು. ಹಿಮಾಂಶು ಅವರ ನಿರ್ಮಾಣದ  ‘ದಿ ಲೈಟ್ ಆಫ್ ಏಷಿಯಾ’, ‘ಶಿರಾಜ್’, ‘ಎ ಥ್ರೋ ಆಫ್ ಡೈಸ್’ ಮುಂತಾದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದಿದ್ದವು.ಹಿಮಾಂಶು ಅವರ ಸ್ನೇಹದಿಂದ ದೇವಿಕಾರಾಣಿ ಭಾರತಕ್ಕೆ ಮರಳುವಂತಾಯಿತು. ಮತ್ತು ಅವರಿಂದಲೇ ದೇವಿಕಾರಾಣಿ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರವೇಶ ಪಡೆದರು. ದೇವಿಕಾ ರಾಣಿಯವರು ಆರಂಭದ ದಿನಗಳಲ್ಲಿ ಹಿಂದಿ ಚಿತ್ರಗಳಿಗೆ ಸಹಾಯಕ ನಿರ್ದೇಶಕಿಯಾಗಿ, ಉಡುಪು ವಿನ್ಯಾಸಗಾರ್ತಿಯಾಗಿ ಬಣ್ಣದ ಬದುಕನ್ನು ಪ್ರವೇಶಿಸಿದರು.

ಫೋಟೋ ಕೃಪೆ : wikipedia

೧೯೩೩ರಲ್ಲಿ ನಿರ್ಮಾಣವಾದ ‘ಕರ್ಮ’ ಚಿತ್ರದಲ್ಲಿ ಹಿಮಾಂಶು ರೈ ಮತ್ತು ದೇವಿಕಾರಾಣಿ ಮುಖ್ಯ ಭೂಮಿಕೆಯಲ್ಲಿ ಜೊತೆಯಾಗಿ ನಟಿಸಿದರು. ಆ ಚಿತ್ರದಲ್ಲಿದ್ದ ನಾಲ್ಕು ನಿಮಿಷದ ಚುಂಬಕ ದೃಶ್ಯಗಳು ಅಂದಿನ ದಿನಗಳಲ್ಲಿ ಸಾಕಷ್ಟು ಸಂಚಲನವನ್ನೇ ಸೃಷ್ಠಿಸಿತು. ಆದರೆ ಅದೇ ಕರ್ಮ ಚಿತ್ರವು ದೇಶ- ವಿದೇಶಗಳಲ್ಲಿ ಅಲ್ಲಿಯ ಗಣ್ಯರು ಮತ್ತು ಸಾರ್ವಜನಿಕರಿಂದ ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಂಡಿತು. ದೇವಿಕಾ ರಾಣಿಗೆ ಸ್ಟಾರ್ ಪಟ್ಟ ತಂದುಕೊಟ್ಟಂತಹ ಸಿನಿಮಾವು ಅದೇ ಆಯಿತು. ೧೯೨೮ ರಲ್ಲಿ ದೇವಿಕಾರಾಣಿ ಮತ್ತು ಹಿಮಾಂಶು ಸತಿ-ಪತಿಯಾದರು.  ಮುಂದೆ ಇಬ್ಬರು ಜೊತೆಗೂಡಿ ‘ಮುಂಬಯಿ ಟಾಕೀಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು.  ‘ಮುಂಬಯಿ ಟಾಕೀಸ್’ ಆ ದಿನಗಳಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆಯಿತು ಮತ್ತು ಸಾಕಷ್ಟು ನಟ-ನಟಿಯರು ಚಿತ್ರರಂಗಕ್ಕೆ ಪರಿಚಯಿಸಿತು.


ಫೋಟೋ ಕೃಪೆ : Amborish.com

ದೇವಿಕಾರಾಣಿಯವರು ‘ಜವಾನಿ ಕಿ ಹವಾ’, ‘ಜೀವನ್ ನಯಾ’, ‘ಸಾವಿತ್ರಿ’, ‘ಜೀವನ್ ಪ್ರಭಾತ್’, ‘ದುರ್ಗಾ’, ‘ವಚನ್’, ‘ನಿರ್ಮಲ’,’ ಇಜ್ಜತ್’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಅಪಾರ ಅಭಿಮಾನಿಗಳಿಗೆ ‘ಕನಸ್ಸಿನ ಕನ್ಯೆ’ಯಾಗಿ ಕಾಡಿದರು. ಆದರೆ ಅವರ ಅಭಿನಯದ ‘ಜೀವನ ನಯ್ಯಾ’ ಸಿನಿಮಾವು ಅವರ ಅವರ ದಾಂಪತ್ಯದಲ್ಲಿ ದೊಡ್ಡ ಅಲೆಯನ್ನೇ ಸೃಷ್ಠಿಸಿತು.  ‘ಜೀವನ ನಯ್ಯಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಹ ನಟ ಅಜಮುಲ್ ಹಾಸನ್ ಜೊತೆಗಿನ ಒಟನಾಟದಿಂದ ದೇವಿಕಾರಾಣಿಯವರ ಪತಿ ಹಿಮಾಂಶು ತನ್ನ ಹೆಂಡತಿ ಮೇಲೆ ಕೋಪಿತಗೊಂಡು, ಅವರ ಸಂಸಾರದಲ್ಲಿ ಇರುಸು-ಮುರುಸುಗಳು ಶುರುವಾದವು. ಮುಂದೆ ಇದರಿಂದಾಗಿ ಅವರ ದಾಂಪತ್ಯಕ್ಕೆ ಇಂತಿಶ್ರೀ ಹಾಡಬೇಕಾಯಿತು.

೧೯೪೦ ರಿಂದ ದೇವಿಕಾರಾಣಿ ಅವರು ಏಕಾಂಗಿಯಾಗಿಯೇ ‘ಮುಂಬಯಿ ಟಾಕೀಸ್’ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋದರು. ಈ ಸಂಸ್ಥೆಯು ಲೀಲಾ ಚಿಟ್ನಿಸ್, ದಿಲೀಪ್ ಕುಮಾರ್, ಮಧುಭಾಲಾ, ಮಮ್ತಾಜ್, ಶಾಂತಿ ಅಂತಹ ಕಲಾವಿದರು ಮತ್ತು ಹಲವಾರು ಶ್ರೇಷ್ಠ ತಂತ್ರಜ್ಞರು, ಬರಹಗಾರರನ್ನು ಬೆಳೆಸಿತು. ಆದರೆ ಮುಂದಿನ ದಿನಗಳಲ್ಲಿ ಅವರು ‘ಮುಂಬಯಿ ಟಾಕೀಸ್’ ನ ಮಾಲೀಕತ್ವಕ್ಕೆ ಶಶಧರ್ ಮುಖರ್ಜಿಯೊಂದಿಗಿನ ಹೋರಾಟ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅವರ ಸಂಸ್ಥೆಯಲ್ಲಿ ಪ್ರಮುಖ ಕಲಾವಿದರಾಗಿದ್ದ ಅಶೋಕ್ ಕುಮಾರ್ ಮತ್ತು ಹಲವಾರು ಪ್ರಮುಖ ಕಲಾವಿದರು ಮುಂಬಯಿ ಟಾಕೀಸ್ ತೊರೆದು ಅವರದೆಯಾದ ‘ಫಿಲಂಸ್ಥಾನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡರು. ಇದರ ಮಧ್ಯೆ ಹಿಮಾಂಶು ಸಾವನೊಪ್ಪಿದರು. ಗಾಯದ ಮೇಲೆ ಒಂದಾದ ಮೇಲೊಂದರಂತೆ ಬರೆಗಳ ನೋವುಗಳು ದೇವಿಕಾರಾಣಿ ಅವರಿಗೆ ನಲಗುವಂತೆ ಮಾಡಿತು. ತಾವೇ ಕಟ್ಟಿ ಬೆಳೆಸಿದ ‘ಮುಂಬಯಿ ಟಾಕೀಸ್’ಸಂಸ್ಥೆ ಕಣ್ಣ ಮುಂದೆಯೇ ಮುಚ್ಚಿ ಹೋಯಿತು.

ಫೋಟೋ ಕೃಪೆ : The Better India

೧೯೪೫ರ ವರ್ಷದಲ್ಲಿ ದೇವಿಕಾರಾಣಿಯವರು  ಡಾ. ಸ್ವೇವೆಟ್ಸಲೋ ರೋರಿಚ್ ಅವರನ್ನುಮದುವೆಯಾದರು. ಸ್ವೇವೆಟ್ಸಲೋ ರೋರಿಚ್ ಅವರು ಖ್ಯಾತ ಭಾರತೀಯ ಹಾಗು ರಷ್ಯಾದ ಚಿತ್ರಕಲಾಕಾರರಾಗಿದ್ದರು. ಮದುವೆಯಾದ ಬಳಿಕ ದೇವಿಕಾರಾಣಿಯವರು ಸಿನಿಮಾ ರಂಗವನ್ನು ತೊರೆದು ಬೆಂಗಳೂರಿನಲ್ಲಿ ತಮ್ಮ ಪತಿಯೊಡನೆ ನೆಲೆಸಿದರು.

ಮುಂದಿನ ದಿನಗಳಲ್ಲಿ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದೆ ಕೇಂದ್ರ ಸರ್ಕಾರದ ಆಡಿಯೋ ವಿಷನ್ ಶಿಕ್ಷಣ ಮಂಡಳಿಯ ಸದಸ್ಯರಾಗಿ, ದೆಹಲಿಯ ಚಲನಚಿತ್ರಗಳ ರಾಷ್ಟ್ರೀಯ ಅಕಾಡೆಮಿಗೆ ಕೇಂದ್ರ ಸರ್ಕಾರದ ನಾಮನಿರ್ದೇಶಕರಾದರು. ಹೀಗೆ ಚಿತ್ರರಂಗದಿಂದ ದೂರ ಸರಿದರು ಕೂಡ ಕಲೆಗೆ ಸಂಬಂಧಿಸಿದಂತೆ ಹಲವಾರು ಚಟುವಟಿಯಲ್ಲಿ ತಮ್ಮನ್ನು ತಾವು ತೊಡಗಿಸಿಯೇ ಕೊಂಡಿದ್ದರು. ದೇವಿಕಾರಾಣಿ ಅವರಿಗೆ ಜನವರಿ ೨೬, ೧೯೫೮ ರಲ್ಲಿ, ರಾಷ್ಟ್ರಪತಿಯಿಂದ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಲಾಯಿತು. ಮತ್ತು ನವೆಂಬರ್ ೨೧, ೧೯೭೦ ರಲ್ಲಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಿದ ವರ್ಷದಲ್ಲಿಯೇ ದೇವಿಕಾ ರಾಣಿ ಯವರಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತದ ಮೊದಲಿಗರು ದೇವಿಕಾರಾಣಿ.

ಫೋಟೋ ಕೃಪೆ : Business starderd

ಈ ದಂಪತಿಗಳು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ‘ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟಿ’ ನಲ್ಲಿ ಬಹುಕಾಲ ವಾಸವಿದ್ದರು. ಮಾರ್ಚ್ ೯, ೧೯೯೪ ರಲ್ಲಿ ದೇವಿಕಾರಾಣಿಯವರು ತಮ್ಮ ಅಪಾರ ಬಂಧು ಮಿತ್ರರು ಮತ್ತು ಸಾಕಷ್ಟು ಅಭಿಮಾನಿಗಳನ್ನು ಬಿಟ್ಟು ಬಾರದಲೋಕಕ್ಕೆ ತೆರೆಳಿದರು. ಆದರೆ ಅವರ ಹೆಸರು ಇಂದಿಗೂ ಅಮರವಾಗಿದೆ. ಅವರು ವಾಸವಿದ್ದ ಎಸ್ಟೇಟ್ ಉಳಿಸಿಕೊಳ್ಳಲು ಕಲಾವಿದರು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.

(ಡಾ. ಸ್ವೇವೆಟ್ಸಲೋ ರೋರಿಚ್ ಅವರ ಬಗ್ಗೆ ಮುಂದಿನ ಲೇಖನದಲ್ಲಿ ಓದಿ…)


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW