ಭಾರತದ ‘ರಾಷ್ಟ್ರ ಪಕ್ಷಿ’ ಬಗ್ಗೆ ಒಂದಷ್ಟು ಮಾಹಿತಿ…

೧೯೬೩ ರಲ್ಲಿ ಭಾರತ ಸರ್ಕಾರ ‘ನವಿಲನ್ನು ನಮ್ಮ ‘ರಾಷ್ಟ್ರ ಪಕ್ಷಿ’ಯನ್ನಾಗಿ ಘೋಷಿಸಿತು. ಅದೇ ನವಿಲು ಇಂದು ಅಳಿವಿನ ಅಂಚಿನಲ್ಲಿದೆ. ಅದರ ಬಗ್ಗೆ ಜಾಗೃತಿ ಮೂಡಿಸಿವುವ ಉದ್ದೇಶ ಕು ಶಿ ಚಂದ್ರಶೇಖರ್ ಅವರ ಲೇಖನದಾಗಿದೆ. ಓದಿ ಆದಷ್ಟು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಮತ್ತು ತಪ್ಪದೆ ಶೇರ್ ಮಾಡಿ…

‘ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ’

ಡಾ|| ದ ರಾ ಬೇಂದ್ರೆ

ನಮ್ಮ ರಾಷ್ಟ್ರ ಪಕ್ಷಿ ನವಿಲಿನ ಬಗ್ಗೆ ನಮ್ಮ ವರಕವಿ ಬೇಂದ್ರೆಯವರ ಸಾಲು. ಇತ್ತೀಚೆಗೆ ನಮ್ಮ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ನವಿಲಿನ ಜೊತೆಗಿರುವ ಚಿತ್ರಗಳು ಎಲ್ಲಾ ಮಾಧ್ಯಮದಲ್ಲೂ ಬಂದಾಗ ಅದೆಷ್ಟೋ ಜನರು ರೋಮಾಂಚಿತಗೊಂಡರು. ರಾಷ್ಟ್ರನಾಯಕನಾಗಿ ರಾಷ್ಟ್ರಪಕ್ಷಿಯ ಬಗ್ಗೆ ಅರಿವು ಮೂಡಿಸಲೆಂದೇ ಈ ಚಿತ್ರಗಳು ಬಂದದ್ದು ಹಾಗೂ ಯಾವುದೇ ರಾಜಕಾರಣದ ಅರ್ಥದಿಂದಲ್ಲ.

“ಫಾಸಿನಿಡೆ “ ಎಂಬ ಪಕ್ಷಿ ಕುಟುಂಬಕ್ಕೆ ಸೇರಿದ ನವಿಲುಗಳಲ್ಲಿ ಸಾಮಾನ್ಯವಾದ ಮೂರು ವಿಧಗಳು:

೧. ಭಾರತೀಯ ನವಿಲು

೨. ಹಸಿರು ನವಿಲು

೩. ಕಾಂಗೊ ನವಿಲು

ಮೇಲಿನ ಮೊದಲೆರಡು ವಿಧಗಳು ಆಗ್ನೇಯ ಏಶಿಯಾದಾದರೆ ಮೂರನೆಯದು ಆಫ್ರಿಕಾ ಖಂಡದ್ದು. ನವಿಲಿನ ಗುರುತುವಿಕೆ ‘ಪೀಫೌಲ್’ ಎಂದು. ಗಂಡು ನವಿಲಿಗೆ ಪೀಕಾಕ್ ಎಂದು ಹೆಣ್ಣು ನವಿಲಿಗೆ ಪೀಹೆನ್ ಎನ್ನುತ್ತಾರೆ.

ಭಾರತೀಯ ನವಿಲುಗಳು ನೀಲಿ ಬಣ್ಣದಿಂದ ಕೂಡಿದ್ದು ಗಂಡು ಹಾಗೂ ಹೆಣ್ಣು ಎರಡರ ಆಕಾರ ಸುಮಾರು ನಾಲಕ್ಕವರೆಯಿಂದ ಐದು ಅಡಿಗಳು. ಆದರೆ ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಗಳಿಂದ ಉದ್ದ ಕಾಣುತ್ತದೆ. ಜೊತೆಗೆ ಗಂಡು ನವಿಲಿಗೆ ತಲೆಯ ಮೇಲೆ ಜಂಭದ ಪ್ರತೀಕವೆಂಬಂತೆ ಕಿರೀಟ ಸಹ ಇರುತ್ತದೆ. ಇದರ ಕತ್ತಿನ ಭಾಗ ಕಡು ನೀಲಿ ಬಣ್ಣದಿಂದ ಕೂಡಿರುತ್ತದೆ.

ಫೋಟೋ ಕೃಪೆ : Taarifa Rwanda

ತನ್ನ ಈ ಮನಮೋಹಕ ಗರಿಗಳಿಂದ ಗಂಡು ನವಿಲು ಹೆಣ್ಣು ನವಿಲನ್ನು ಆಕರ್ಷಿಸಿದರೆ ಮಳೆಯ ಮುನ್ಸೂಚನೆಯಾಗಿ ಗರಿಗಳನ್ನು ೧೮೦ ಡಿಗ್ರಿ ಕೋನದಲ್ಲಿ ಎತ್ತರಿಸಿ ಹರಡಿ ಸೊಗಸಾಗಿ ಕುಣಿಯುತ್ತದೆ. ನಮ್ಮ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ‘ನವಿಲು ಧಾಮ‘ ವಿದೆ. ಸಾಧ್ಯವಾದರೆ ನೋಡಿ ಬನ್ನಿ.

ಫೋಟೋ ಕೃಪೆ : Job Of Animals

ಹಸಿರು ನವಿಲುಗಳು ಚೀನಾ, ಬಾಂಗ್ಲಾದೇಶ, ಥೈಲ್ಯಾಂಡ್, ಬರ್ಮಾ (ಮ್ಯಾನ್ಮಾರ್) ಮುಂತಾದ ಆಗ್ನೇಯ ಏಶಿಯಾ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವು ಕೂಡ ಭಾರತದ ನವಿಲಿಗಿಂತ ಸ್ವಲ್ಪ ಗಾತ್ರದಲ್ಲಿ ಹೆಚ್ಚು. ಆದರೆ ಭಾರತದ ನವಿಲಿಗಿಂತ ಗಲಾಟೆ ಕಡಿಮೆ. ಇದರ ಕತ್ತಿನ ಭಾಗ ತೆಳು ಹಸಿರಿನಿಂದ ಕೂಡಿರುತ್ತದೆ.

ಕಾಂಗೊ ನವಿಲುಗಳು ಆಫ್ರಿಕಾ ಖಂಡಗಳಲ್ಲಿ ಮುಖ್ಯವಾಗಿ ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಜೈರ್ ಹಾಗೂ ಕಾಂಗೋ ಜಲಾನಯನದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವುಗಳು ಹಸಿರು ನೇರಳೆ ಕಂದು ಸ್ವಲ್ಪ ಕಪ್ಪು ಈ ಎಲ್ಲಾ ಬಣ್ಣಗಳ ಮಿಶ್ರಣವಾಗಿರುತ್ತದೆ. ಆದರೆ ಇದರ ಗಾತ್ರ ಕೇವಲ ಮೂರರಿಂದ ಮೂರುವರೆ ಅಡಿ ಮಾತ್ರ. ಇದು ಕೂಡ ನಮ್ಮ ದೇಶದ ಹಾಗೆ,  ಕಾಂಗೊ ದೇಶಕ್ಕೂ ರಾಷ್ಟ್ರ ಪಕ್ಷಿ.

ಈ ಮೂರರ ಹೊರತು ಅತಿ ಅಪರೂಪವಾದ ಬಿಳಿ ನವಿಲುಗಳಿವೆ. ಅವು ಭಾರತದ ನವಿಲುಗಳೇ ಆದರೆ ಅನುವಂಶಿಕ ವ್ಯತ್ಯಾಸದಿಂದ ಹುಟ್ಟಿರುವುದು. ಕಾಣ ಸಿಗುವುದು ರಾಜಸ್ತಾನದ ಭರತ್ಪುರ್ ವನ್ಯಧಾಮಗಳಲ್ಲಿ.

ಫೋಟೋ ಕೃಪೆ : Hobi Ternak

ಎಲ್ಲಾ ನವಿಲುಗಳ ಮುಖ್ಯವಾದ ಆಹಾರ ಹಾವು, ಕೀಟಗಳು ಹಲ್ಲಿಗಳು ಹಾಗೂ ಎಲ್ಲಾ ರೀತಿಯ ಕಾಳುಗಳು. ಇವು ರೈತರ ಸ್ನೇಹಿತ ಹಾಗೂ ಆಹಾರದ ಕೊರತೆಯಿಂದ ಕೆಲುವೊಮ್ಮೆ ಬೆಳೆಗಳನ್ನು ಭಕ್ಷಿಸುವುದರಿಂದ ವೈರಿಯೂ ಹೌದು.

ನಮ್ಮ ವನ್ಯವಿಜ್ಞಾನಿ ಕೃಪಾಕರ್‌ ನವಿಲುಗಳ ಈ ಅಚ್ಚರಿಯ ನಡೆಯ ಬಗೆಗೊಂದು ವಿಶೇಷ ವಿವರಣೆ ನೀಡುತ್ತಾರೆ. ‘ನವಿಲುಗಳು ಹೆಚ್ಚಾಗಿ ಹೀಗೆ ಕಾಣಿಸಿಕೊಳ್ಳಲು ಮನುಷ್ಯರು ಸೃಷ್ಟಿಸಿಕೊಂಡಿರುವ ವಾತಾವರಣವೇ ಕಾರಣ. ಜೊತೆಗೆ ಕಾನೂನುಗಳು ಕೂಡಾ ಇದಕ್ಕೆ ಪೂರಕವಾಗಿವೆ. ಅದು ರಾಷ್ಟ್ರಪ್ರಾಣಿಯಾಗಿರುವ ಕಾರಣ ಯಾರೂ ಅವುಗಳನ್ನು ಮುಟ್ಟುವಂತಿಲ್ಲ. ಬೇಟೆಯಾಡುವಂತಿಲ್ಲ. ಜತೆಗೆ ಮನುಷ್ಯನ ಬದುಕಿನ ಶೈಲಿ ಅವುಗಳು ಮನೆಗಳ ಸುತ್ತ, ತೋಟಗಳಲ್ಲಿ ನಿರ್ಭಯವಾಗಿ ಇರಲು ಅನುಕೂಲವಾಗಿದೆ. ಆದರೆ ಇದು ತಾತ್ಕಾಲಿಕವಷ್ಟೇ. ಏಕೆಂದರೆ ಮನುಷ್ಯನ ಜೀವನದ ಜತೆ ಜೀವನ ಮಾಡಲು ಬರುವ ಪ್ರಾಣಿ ಪಕ್ಷಿಗಳು ಬಹಳ ಬೇಗ ಅವನತಿಯಾಗಿವೆ. ಇದಕ್ಕೆ ಉದಾಹರಣೆ  ‘ಗುಬ್ಬಿಗಳು’ ಎನ್ನುತ್ತಾರೆ ಅವರು. ಇದರ ಜೊತೆಗೆ ಜನರು ಕಾಡುಗಳನ್ನು ಕಡಿದು ಕೃಷಿಭೂಮಿಯನ್ನಾಗಿ ಮಾಡುತ್ತಿರುವುದು.  ನವಿಲುಗಳು ಮನುಷ್ಯನಿಗೆ ಹತ್ತಿರವಾಗಲು ಮುಖ್ಯ ಕಾರಣ ಎಂದು ಸಹ ಅವರು ಹೇಳುತ್ತಾರೆ.

ನಮ್ಮ ಪುರಾಣಗಳ ಪ್ರಕಾರ ನವಿಲು ಸುಬ್ರಮಣ್ಯ ಸ್ವಾಮಿಯ ವಾಹನ. ಶ್ರೀ ರಾಮಚಂದ್ರನು ಕಾಡಿನಲ್ಲಿ ಬರಿಗಾಲಿನಲ್ಲಿ ಸೀತೆಯನ್ನು ಹುಡುಕುತ್ತಿದ್ದಾಗ ನವಿಲಿನ ರಾಜ ಇದನ್ನು ನೋಡಲಾರದೆ ತನ್ನ ಸಮೂಹಕ್ಕೆ ಕಲ್ಲುಮುಳ್ಳುಗಳನ್ನು ಹೆಕ್ಕಿ ತೆಗೆದು ದಾರಿ ಸುಗುಮವಾಗುವಂತೆ ಆಜ್ಞಾಪಿಸುತ್ತಾನೆ.ಇದರಿಂದ ಸಂತುಷ್ಟನಾದ ಶ್ರೀ ರಾಮನು ಬರುವ ದ್ವಾಪರಯುಗದಲ್ಲಿ ನಿಮ್ಮ ಗರಿಗಳನ್ನು ನಿತ್ಯ ಧರಿಸುತ್ತೇನೆಂದು ವರ ನೀಡುತ್ತಾನೆ. ಮುಂದಿನ ಅವತಾರವಾದ ಶ್ರೀ ಕೃಷ್ಣನು ಅವನ ಮುಕುಟದಲ್ಲಿ ಗರಿಯನ್ನು ನಿತ್ಯ ಧರಿಸುತ್ತಾನೆ.

ಫೋಟೋ ಕೃಪೆ : Twitter

ನಮ್ಮ ಮಕ್ಕಳ ಪುಸ್ತಕದಲ್ಲೂ ನವಿಲು ಗರಿಗೆ ಪೂಜ್ಯಸ್ಥಾನವಿದೆ. ಹಾಗೂ ನವಿಲು ಗರಿ ಮರಿ ಹಾಕುತ್ತದೆಂದು ಮುಗ್ದ ನಂಬಿಕೆ. ಗಣಿತ, ವಿಜ್ಞಾನ ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟರೆ ಸರಸ್ವತಿ ತಾಯಿ ಒಲಿಯುವಳೆಂಬ ಭಕ್ತಿ ಹಾಗೂ ನಮ್ಮ ಶ್ರೀ ಕೃಷ್ಣ ಪರಮಾತ್ಮನನ್ನು ನವಿಲು ಗರಿ ಇಲ್ಲದೆ ಊಹಿಸುವುದಕ್ಕೂ ಆಗುವುದಿಲ್ಲ.

ನಮ್ಮ ರಾಷ್ಟ್ರಪಕ್ಷಿ ನವಿಲು ಹೇಗಾಯಿತು? ೧೯೬೩ ರಲ್ಲಿ ನಮ್ಮ ಘನ ಸರ್ಕಾರ ‘ನವಿಲು ನಮ್ಮ ಭಾರತೀಯ ಆಚಾರ ಪರಂಪರೆಯಲ್ಲಿ ತನ್ನ ಶ್ರೀಮಂತ ಧಾರ್ಮಿಕ ಹಾಗೂ ದಂತಕತೆಗಳಿಂದ ಗುರುತಿಸಿಕೊಂಡಿದ್ದರಿಂದ ‘ಭಾರತದ ರಾಷ್ಟ್ರೀಯ ಪಕ್ಷಿ’ ಎಂದು ಘೋಷಿಸಿತು’.

ಬೇಟೆಗಾರರ ಹಾವಳಿಯಿಂದ ಹಾಗೂ ಮಾಂಸಭಕ್ಷಕರಿಂದ ನವಿಲು ಕೂಡ ಅಳಿವಿನಂಚಿನಲ್ಲಿದ್ದು, ಎಚ್ಚೆತ್ತುಕೊಳ್ಳಬೇಕಾಗಿರುವುದು ದುರದೃಷ್ಟಕರ.

ಈ ಲೇಖನದ ಉದ್ದೇಶ ನಮ್ಮ ರಾಷ್ಟ್ರಪಕ್ಷಿ ನವಿಲಿನ ಬಗ್ಗೆ ಮೇಲಿನ ಸಾಮಾನ್ಯ ಜ್ಞಾನ ಎಲ್ಲರಲ್ಲೂ ಹರಡುವುದು.

(ಕು ಶಿ ಚಂದ್ರಶೇಖರ ಅವರು ಈಗಾಗಲೇ ಹಲವಾರು ಪ್ರಾಣಿ,ಪಕ್ಷಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಓದುಗರಿಗೆ ನೀಡಿದ್ದಾರೆ. ಚಿರತೆ, ಗುಬ್ಬಿ, ಕಾಗೆ ಓದಿಲ್ಲವಾದರೆ ಲಿಂಕ್ ಬಳಸಿ ಓದಿ…ನಿಮ್ಮೆಲ್ಲರ ಪ್ರೋತ್ಸಾಹ ಲೇಖಕರಿಗೆ ಇನ್ನಷ್ಟು ಹುಮ್ಮಸ್ಸನ್ನು ಕೊಡುತ್ತದೆ. ಮತ್ತು ಇನ್ನಷ್ಟು ಲೇಖನಕ್ಕೆ ಪ್ರೇರಣೆಯಾಗುತ್ತದೆ. ತಪ್ಪದೆ ಓದಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)


  • ಕು ಶಿ ಚಂದ್ರಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW