ಕವಿ ಮೇಗರವಳ್ಳಿ ರಮೇಶ್ ಅವರ ‘ಸ್ಪಂದನ’ ವು ಹದಿನೇಳು ಲೇಖನಗಳನ್ನು ಒಳಗೊಂಡಿದ್ದು ಪುಸ್ತಕದ ಕುರಿತು ಗಣೇಶ್ ವಂದಗದ್ಧೆ ಅವರು ಬರೆದಿರುವ ತಮ್ಮ ಅನಿಸಿಕೆಯನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಸ್ಪಂದನ
ಲೇಖಕರು : ಮೇಗರವಳ್ಳಿ ರಮೇಶ್
ಪ್ರಕಾರ : ಲೇಖನ
ಮೇಗರವಳ್ಳಿ ರಮೇಶ್ ಅವರು ಬಾಲ್ಯದಿಂದಲೂ ಕವಿತೆ, ಕವನ, ವಿಮರ್ಶೆ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈ ಆಡಿಸುತ್ತಾ ಬಂದವರು. ಗೋಪಾಲಕೃಷ್ಣ ಅಡಿಗರ ಪ್ರೀತಿಯ ಶಿಷ್ಯರಾದ ಇವರ ಅನೇಕ ಕವನಗಳಲ್ಲಿ ಅಡಿಗರ ಪ್ರಭಾವ ಬೀರಿರುವುದನ್ನು ಕಾಣಬಹುದು. ಅಡಿಗರು ಹಾಗೂ ಅವರ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಕುಳಿತರೆ ಇವರಿಗೆ ಸಮಯ ಕಳೆದಿರುವುದೇ ಗೊತ್ತಾಗುವುದಿಲ್ಲ. ಆದರೆ ಯಾಕೋ ಏನೋ ಕವನಗಳ ಮೇಲೆ ಕವನಗಳನ್ನು ಬರೆಯುತ್ತಾ ಬಂದಿದ್ದರೂ ಅವುಗಳನ್ನು ಪ್ರಕಟಿಸುವ ಗೋಜಿಗೇ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಅವರ ಕವನ ಸಂಕಲನಗಳು, ವಿಮರ್ಶಾ ಕೃತಿಗಳು ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳು ಒಂದಾದ ಮೇಲೆ ಒಂದರಂತೆ ಹೊರಬರುತ್ತಿವೆ.
ಪ್ರಸತ್ತ ವಿಶ್ಲೇಷಣಾ ಕೃತಿ ’ಸ್ಪಂದನ’ವು ಹದಿನೇಳು ಲೇಖನಗಳನ್ನು ಒಳಗೊಂಡಿದೆ. ಇಂಗ್ಲಿಷ್ ಸಾಹಿತ್ಯದಿಂದ ತುಂಬಾ ಪ್ರಭಾವಿತರಾದ ಶ್ರೀಯುತರು ಅನೇಕ ಇಂಗ್ಲಿಷ್ ಕವನಗಳನ್ನು, ಅದರಲ್ಲೂ ಮುಖ್ಯವಾಗಿ ಟಿ.ಎಸ್ ಈಲಿಯಟ್ಟಿನ ಕವನಗಳನ್ನು ಅತ್ಯುತ್ತಮವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕೇವಲ ಅವುಗಳ ಹೂರಣವನ್ನು ಮಾತ್ರವಲ್ಲ, ಜೊತೆ ಜೊತೆಯಲ್ಲಿ ಆ ಕವನಗಳ ಭಾವನೆಗಳನ್ನು, ಗೂಡಾರ್ಥಗಳನ್ನು, ದ್ವಂದಾರ್ಥಗಳನ್ನು ಕೂಡಾ ಬಟ್ಟಿ ಇಳಿಸಿದ್ದಾರೆ. ಹಾಗಾಗಿ ಆ ಕವನಗಳನ್ನು ಓದುತ್ತಾ ಹೋದರೆ ನಾವೇನು ಕನ್ನಡದ ಕವನಗಳನ್ನೇ ಓದುತ್ತಿದ್ದೇವೋ ಏನೋ ಅನಿಸುವುದು ಸಹಜ.

ಲೇಖಕರೇ ಹೇಳುವಂತೆ ಹೆಚ್ಚ್.ಎಸ್.ಕೆ ಅವರ ಮಹಾಕಾವ್ಯ ಬುದ್ಧ ಚರಣ ಇವರ ಮೇಲೆ ತುಂಬಾ ಪ್ರಭಾವ ಬೀರಿದೆ. ಆ ಕಾವ್ಯವನ್ನು ಸಮಗ್ರವಾಗಿ ಓದಿ ಅದನ್ನು ಜೀರ್ಣಿಸಿಕೊಂಡು ಆ ಬಗ್ಗೆ ಒಂದು ಉತ್ತಮವಾದ ವಿಮರ್ಶೆಯನ್ನು ಬರೆದಿದ್ದಾರೆ. ತಾನು ಬುದ್ಧನ ವ್ಯಕ್ತಿತ್ವಕ್ಕೆ ಹೇಗೆ ಮಾರು ಹೋಗಿದ್ದೇನೆ ಎಂಬುದನ್ನು ಎಷ್ಟೊಂದು ಅರ್ಥಪೂರ್ಣವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ ನೋಡಿ
ಇರಲಿಲ್ಲ ನನ್ನೊಳಗೆ ಬುದ್ದ
ಬುದ್ಧ ಚರಣದಿಂದೆದ್ದು ಬಂದ
ಆ ಬುದ್ಧ ತನ್ನ ಚರಣಗಳ ಗುರುತು ಮೂಡಿಸುತ್ತ
ಹೋಗಿದ್ದಾನೆ ನನ್ನಂತರಂಗದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ
ಎಚ್ ಎಸ್ ವಿ ಅವರ ಕಾವ್ಯ ಕುಸುರಿಯ ಪೀಠದಲ್ಲಿ
ಕಾರುಣ್ಯಪೂರ್ಣ ನಗೆ ಸೂಸುತ್ತಾ
ಹೆಚ್.ಎಸ್.ವಿ ಯವರು ಮಹಾ ಕಾವ್ಯದಲ್ಲಿ ಸಂಪೂರ್ಣವಾಗಿ ಬುದ್ಧ ಚರಿತವನ್ನು ಬರೆದಂತೆ, ಲೇಖಕರು ಅದನ್ನು ಆಳುವಾಗಿ ಅಧ್ಯಯನ ಮಾಡಿ, ಈ ತಮ್ಮ ಚಿಕ್ಕ ವಿಮರ್ಶೆಯಲ್ಲೇ ಅದರ ಒಳ ಹೊರಗನ್ನು ಅಷ್ಟೇ ಸುಂದರವಾಗಿ ವಿಶ್ಲೇಷಿಸಿದ್ದಾರೆ.
ಟಿ.ಎಸ್‌ಏಲಿಯಟ್ ಒಬ್ಬ ಅಸಾಧಾರಣ ಕವಿ, ಅವನನ್ನು ಅರ್ಥ ಮಾಡಿಕೊಳ್ಳುವುದೇ ತುಂಬಾ ಕಷ್ಟ. ಅಂತಹುದರಲ್ಲಿ ರಮೇಶ್ ಅವರು ಅವನ ಅನೇಕ ಕವನಗಳನ್ನು ಸಮರ್ಪಕವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.. ಅವನ ಪ್ರಸಿದ್ಧ ಕವನಗಳ ಒಂದಾದ ಲವ್ ಸಾಂಗ್ ಆಫ್ ಜೆ ಆಲ್ಫ್ರಡ್ ಪ್ರಫ್ರಾಕ್ ಪತ್ರಿಕೆ ಒಂದರಲ್ಲಿ ಪ್ರಕಟವಾದಾಗ ಓದುಗರು ಆಶ್ಚರ್ಯ ಚಿಕಿತರಾಗಿ ಹುಬ್ಬೇರಿಸುತ್ತ ಅದೊಂದು ಪದ್ಯವೇ ಅಲ್ಲ ಎಂದು ಅಲ್ಲ ಗೆಳೆದರು. ಆದರೆ ಎಜ್ರಾಫೌಂಡ್ ಎಂಬ ವಿಮರ್ಶಕನು ಈ ಕವಿತೆಯನ್ನು ವಿಮರ್ಷಿಸುತ್ತ ಕವಿತೆಯ ಶಿಲ್ಪದಲ್ಲಿರುವ ನಾವಿನ್ಯತೆಯನ್ನು, ಹೊಸ ವಸ್ತುವನ್ನು, ಹೊಸ ವಸ್ತು ವಿನ್ಯಾಸವನ್ನು ತೋರಿಸಿಕೊಟ್ಟ. ಮುಂದಿನ ದಿನಗಳಲ್ಲಿ ಆ ಕವಿ ಏಲಿಯಟ್ ನೋಬೆಲ್ ಪಾರಿತೋಷಕಕ್ಕೆ ಒಳಗಾದದನ್ನು ಲೇಖಕರು ನೆನಪಿಸಿಕೊಳ್ಳುತ್ತ ಅವನನ್ನು ಶ್ಲಾಘಿಸುತ್ತಾರೆ.
ಗಂಗಾಧರ ಚಿತ್ತಾರರ ಕಾಮಸೂತ್ರವನ್ನು ಬಗ್ಗೆ ಬರೆಯುತ್ತಾ ಮಗು ಭೂಮಿಗೆ ಬಿದ್ದ ಕ್ಷಣದಲ್ಲಿ ಅದರ ಜೊತೆಯಲ್ಲಿ ಕಾಮ ಹೇಗೆ ಹುಟ್ಟುತ್ತದೆ, ಹುಟನಿಂದ ಸಾಯುವವರೆಗೂ ಈ ಕಾಮ ಮನುಷ್ಯನನ್ನು ಹೇಗೆ ಕಾಡುತ್ತಾ ಹೋಗುತ್ತದೆ ಎಂಬುದನ್ನು ಬಹಳ ದೀರ್ಘವಾಗಿ ಚರ್ಚಿಸುತ್ತಾರೆ. ಅವರ ವಿಶ್ಲೇಷಣೆಯನ್ನು ಕೊಡುವುದರ ಜೊತೆಗೆ ಲೇಖಕರ ಆ ಇಡೀ ಕವನವನ್ನು ವಿಮರ್ಶೆಯ ಜೊತೆಯಲ್ಲಿ ಲಗ್ತಿಸುತ್ತಾರೆ. ನನಗೆ ರಮೇಶ್‌ರವರ ಬರಹ ಇಷ್ಟವಾಗುವುದು ಏಕೆಂದರೆ ಅವರು ಕೇವಲ ವಿಮರ್ಶೆಯನ್ನು ಮಾತ್ರ ಹೇಳುವುದಿಲ, ಜೊತೆ ಜೊತೆಯಲ್ಲಿ ಮೂಲ ಕವನವನ್ನು ಅಥವಾ ಇಂಗ್ಲಿಷ್ ಕವನವಾದರೆ ಅದರ ಅನುವಾದವನ್ನು ನಮ್ಮ ಎದುರು ತೆರೆದಿಡುತ್ತಾರೆ. ಹಾಗಾಗಿ ನಾವು ಆ ಪಠ್ಯವನ್ನು ಹಾಗೂ ವಿಮರ್ಶೆಯನ್ನು ಒಟ್ಟಿಗೇ ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.

ಪು.ತಿ.ನ ಅವರ ಅಹಲ್ಯ ನಾಟಕವನ್ನು ನಾನು ಕೂಡ ಲೇಖಕರ ಜೊತೆಗೆ ಅಭ್ಯಾಸ ಮಾಡುತ್ತಿದ್ದೆ. ನಾಟಕದ ಪಾತ್ರಧಾರಿಗಳು ಅಹಲ್ಯಾ ಮತ್ತು ಗೌತಮರು ಆದರೂ ಅವರನ್ನು ಕಾಡುತ್ತಿದ್ದ ಕಾಮ ಮಾತ್ರ ಇಡೀ ನಾಟಕದಲ್ಲಿ ಎಲ್ಲಿಯೂ ಪ್ರತ್ಯಕ್ಷವಾಗಿ ಕಾಣಿಸದೆ ಇಬ್ಬರ ಮನಸ್ಸಿನಲ್ಲೂ ಕೋಲಾಹಲವನ್ನು ಎಬ್ಬಿಸಿ ನಾಟಕೀಯ ಬೆಳವಣಿಗೆಗೆ ಕಾರಣನಾಗುತ್ತದೆ.. ಈ ನಾಟಕದ ಬೆಳವಣಿಗೆಗೆ ಕಾರಣವಾದ ಆ ಕಾಮ ಮನುಷ್ಯರಲ್ಲಿ ಹೇಗೆ ಬರಬೇಕು ಎಂಬುದನ್ನು ಕವಿ ಪು.ತಿ.ನರವರು ಹೀಗೆ ವ್ಯಕ್ತಪಡಿಸುತ್ತಾರೆ.
ಹುಲು ಬಯಕೆ ಬಾಯೆನಲು ಓಂ ಎಂದು ಬಾರದಿರು
ವಾತಾಪಿಯಂದದೊಲು ಬಾಳ ನೊಡೆದು
ಮೊಗ್ಗಿನಳು, ಕಂಪಂತೆ ಚೇತದೊಳು ಬೆಳೆಯುತ್ತಾ
ಸಮಯವರಿತರಳಿ ಬಾ ಒಲವೆ ನಲಿದು
ಅಪ್ರಾಪ್ತ ಬಾಲಕಿಯರ ಮೇಲೆ ಹಾಗೂ ಮಹಿಳೆಯರ ಮೇಲೆ ಈ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಪು.ತಿ.ನ ಅವರ ಈ ನಾಂದಿ ಪದ್ಯ ಎಷ್ಟೊಂದು ಪ್ರಾಮುಖ್ಯ ಎಂಬುದು ಅರಿವಾಗುತ್ತದೆ. ಕಾಮ ಎಂಬುದು ಮನುಷ್ಯನಲ್ಲಿ ವಾತಾಪಿಯ ರೀತಿಯಲ್ಲಿ ಬಾಳನ್ನು ಒಡೆಯಬಾರದು, ಮೊಗ್ಗಿನೊಳಗೆ ಕಂಪು ತುಂಬಿ ಬರುವಂತೆ ಸಮಯವರಿತು ಮನಸ್ಸಿನಲ್ಲಿ ಪರಿಪಕ್ವಾಗಿ ಮೂಡಿ ಬರಬೇಕು. ಆಗ ಮಾತ್ರ ನಾವು ಸುಂದರ, ಸರಸಮಯ ಬದುಕನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.
ಗೋಪಾಲಕೃಷ್ಣ ಅಡಿಗರ ಪ್ರೀತಿಯ ಶಿಷ್ಯಂದಿರಾದ ಮೇಗರವಳ್ಳಿ ರಮೇಶ್, ಅಡಿಗರ ಬಗ್ಗೆ ಬರೆಯುತ್ತಾ ಹೋದರೆ ತಮ್ಮನ್ನು ತಾವೇ ಮರೆತುಬಿಡುತ್ತಾರೆ. ಅವರ ಮೋಹನ ಮುರಳಿಯ ಬಗ್ಗೆ ಬರೆಯುತ್ತಾ ಅದು ಹೇಗೆ ನಮ್ಮನ್ನು ಲೌಕಿಕದಿಂದ ಅಲೌಕಿಕದ ಹತ್ತಿರ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಒಬ್ಬ ಸಾಮಾನ್ಯ ಓದುಗರೂ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಕವನದಲ್ಲಿ ಬರುವ ಹೂವು ಹಾಸಿಗೆ, ಚಂದ್ರ, ಬೇಲಿ, ಇವೆಲ್ಲ ಲೌಕಿಕತೆಯ ಪ್ರತಿಮೆಗಳಾದರೆ, ಮೋಹನ ಮುರಳಿ, ಬೃಂದಾವನ, ಮಿಂಚಿನ ಕೈಗಳು ಮುಂತಾದವುಗಳು ಅಲೌಕಿಕತೆಯ ಪ್ರತಿಮೆಗಳಾಗಿರುತ್ತವೆ. ಮನದೊಳಗಿನ ಬೆಂಕಿ ಆತೃಪ್ತಿಯ ಸಂಕೇತವಾದರೆ, ಸಪ್ತಸಾಗರ ಮತ್ತು ಸುಪ್ತ ಸಾಗರಗಳು ಮನಸ್ಸಿನ ಒಳಪ್ರಜ್ಞೆಗಳನ್ನು ದ್ವನಿಸುವ ಪ್ರತಿಮೆಗಳಾಗುತ್ತವೆ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ?” ಎಂದು ಕವಿ ಪರವಶತೆಯನ್ನು ಪ್ರಶ್ನೆಗಳ ಮೂಲಕವೇ ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವುದನ್ನು ಓದುಗರಿಗೆ ಬಿಡುತ್ತಾ ಕವನದ ಮೌಲ್ಯವನ್ನು ಹೆಚ್ಚಿಸುತ್ತಾರೆ..
ಶ್ರೀಯುತ ಎಸ್ ದಿವಾಕರ್ ಅವರ “ಕಥೆಯೊಳಗಿನ ಡೈನೋಸರ್ ಕಥೆಯಾದದ್ದು” ಕಥೆಯ ಬಗ್ಗೆ ಬರೆಯುತ್ತಾ ಮನುಷ್ಯನೊಳಗಿನ ಮೃಗೀಯ ಸ್ವಭಾವವನ್ನು ಈ ಡೈನೋಸರ್ ಸೂಚಿಸುತ್ತದೆ ಎಂಬುದನ್ನು ವ್ಯಾಖ್ಯಾನಿಸುತ್ತಾರೆ. ಮಾನವ ತನ್ನ ಬದುಕಿನ ಸುದೀರ್ಘ ಪಯಣದ ನಂತರ ಅಜ್ಞಾನದ ಕತ್ತಲಿಂದ ಹೊರಬಂದು ಜ್ಞಾನದ ಬೆಳಕಿನಲ್ಲಿ ನಾಗರಿಕತೆಯನ್ನು ರೂಡಿಸಿಕೊಳ್ಳುತ್ತಾನೆ. ಆದರೆ ತಾನು ನಾಗರಿಕ ಎಂದು ಅವನು ಹೇಳುತ್ತಿದ್ದರೂ ಈ ಡೈನೋಸರ್ ಅವನ ಒಳಗೆ ಇರುತ್ತದೆ ಅದು ಅವನಲ್ಲಿರುವ ಮೃಗತ್ವವನ್ನು ಎತ್ತಿ ತೋರಿಸುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸುತ್ತಾರೆ.
ನನ್ನ ಅನುವಾದಿತ ಕವನ ಸಂಕಲನವಾದ “ಇಂಗ್ಲಿಷ್ ಕವನಗಳ” ಬಗ್ಗೆ ಬರೆಯುತ್ತಾ ಇದೊಂದು ಅತ್ಯುತ್ತಮವಾದ ಅನುವಾದಿತ ಕೃತಿ ಎಂದು ಪ್ರಶಂಶಿಸಿದ್ದಾರೆ. ಅನುವಾದಕರಿಗೆ ಇರಬೇಕಾದ ಎಲ್ಲ ಎಚ್ಚರಗಳನ್ನು ಉಳಿಸಿಕೊಂಡು ಕವಿತೆಗಳನ್ನು ಗ್ರಹಿಸಿ ತಮ್ಮದೇ ಆದ ರಚನೆಗಳು ಅನ್ನುವಷ್ಟರ ಮಟ್ಟಿಗೆ, ಈ ಅನುವಾದಗಳು ಕಂಡು ಬರುತ್ತದೆ ಎಂದು ಶ್ಲಾಘಿತ್ತಾರೆ. ಜೊತೆ ಜೊತೆಯಲ್ಲಿ ಕೆಲವು ಕವನಗಳ ಸಾಲುಗಳನ್ನು ಹೆಸರಿಸುತ್ತಾ ಅವುಗಳ ಬಗ್ಗೆ ಸೂಕ್ತ ಆರೋಗ್ಯಕರವಾದ ಮಾಹಿತಿಗಳನ್ನು ನೀಡಿದತ್ತವೆ ಎಂಬುದನ್ನು ಚರ್ಚಿಸುತ್ತಾರೆ
ಈ ಕೃತಿಯಲ್ಲಿ ನಾನು ಹೇಳಿದಂತೆ ಹದಿನೇಳು ಲೇಖನಗಳಿದ್ದು ವಿವಿಧ ಲೇಖನಗಳನ್ನು ವಿವಿಧ ಆಯಾಮಗಳಲ್ಲಿ ಅವರು ವಸ್ತುನಿಷ್ಠವಾಗಿ ಚರ್ಚಿಸುತ್ತಾ ಹೋಗಿದ್ದಾರೆ. ಅವುಗಳಲ್ಲಿ ಕೆಲವೇ ಕೆಲವು ಲೇಖನಗಳನ್ನು ಆರಿಸಿಕೊಂಡು ನಾನು ಇಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಉಳಿದವುಗಳನ್ನು ಓದುಗರ ವಿಮರ್ಶೆಗೆ ಬಿಡುತ್ತಿದ್ದೇನೆ. ಒಟ್ಟಿನಲ್ಲಿ ಇದು ಎಲ್ಲರೂ ಓದಲೇ ಬೇಕಾದ ಉತ್ತಮ ವಿಮರ್ಶಾ ಕೃತಿ ಎಂದು ಧಾರಾಳವಾಗಿ ಹೇಳಬಹುದು.
ಈ ಕೃತಿಯು ಗಾಯತ್ರಿ ಎಂಟರ್ಪ್ರೈಸಸ್ ೨೮೫/ಈ-೬, ೫ನೇ ವೆಸ್ಟ್ ಕ್ಲಾಸ್ ಉತ್ತರಾದಿ ಮಠ ರಸ್ತೆ ಮೈಸೂರು ಇವರಿಂದ ಪ್ರಕಟಿಸಲ್ಪಟ್ಟಿರುತ್ತದೆ. ೧೧೦ ಪುಟಗಳನ್ನು ಹೊಂದಿರುವ ಈ ಕೃತಿಯ ಬೆಲೆ ನೂರು ರೂಗಳು. ಆಸಕ್ತರು ಕೃತಿಯನ್ನು ಪ್ರಕಾಶಕರಿಂದ ಅಥವಾ ಮೇಗರಳ್ಳಿ ರಮೇಶ್, ದೂ. ೯೯೮೬೧೪೬೦೪೫ ಇವರಿಂದ ಪಡೆಯಬಹುದು
- ಗಣೇಶ್ ವಂದಗದ್ಧೆ