‘ಈಗಲ್ಸ್ ಲೈನ್’ ಪುಸ್ತಕ ಪರಿಚಯ – ಡಾ. ಬಿ. ಜನಾರ್ಧನ ಭಟ್

ರಾಜೇಶ್ ಕುಮಾರ್ ಕಲ್ಯಾ ಅವರ ‘ಈಗಲ್ಸ್ ಲೈನ್’ ಕಾದಂಬರಿ ಕುರಿತು ಡಾ. ಬಿ. ಜನಾರ್ಧನ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ….

ಪುಸ್ತಕ : ಈಗಲ್ಸ್ ಲೈನ್
ಪ್ರಕಾರ : ಕಾದಂಬರಿ
ಲೇಖಕರು: ರಾಜೇಶ್ ಕುಮಾರ್ ಕಲ್ಯಾ
ಪ್ರಕಾಶಕರು: ವೀರಲೋಕ, ಬೆಂಗಳೂರು.
ಮೊದಲ ಮುದ್ರಣ:2023
ಪುಟಗಳು : 184
ಬೆಲೆ: ರೂ. 220

ರಾಜೇಶ್ ಕುಮಾರ್ ಕಲ್ಯಾ ಅವರು ವೃತ್ತಿಯಲ್ಲಿ ಇಂಜಿನಿಯರ್. ಪರಿಸರ ಪ್ರಿಯರು. ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿ. ಅವರು ತಮ್ಮ ಪ್ರಥಮ ಕಾದಂಬರಿ ‘ಈಗಲ್ ಲೈನ್’ ಅನ್ನು ತೇಜಸ್ವಿಯವರಿಗೆ ಅರ್ಪಿಸಿದ್ದಾರೆ. ಕಾದಂಬರಿಯೂ ದಟ್ಟವಾಗಿ ತೇಜಸ್ವಿಯವರ ಪ್ರಭಾವವನ್ನು ತೋರಿಸುತ್ತದೆ.

ಕಾದಂಬರಿಯ ನಾಯಕ ಪರಿಸರಾಸಕ್ತ. ತನ್ನ ಹಿರಿಯರು ಆಸ್ತಿಯನ್ನು ಹೊಂದಿದ್ದ ಮಾಳದ ಸಮೀಪದ (ಉಡುಪಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಕ್ಕೆ ತಾಗಿಕೊಂಡಂತಿದೆ) ಹಳ್ಳಿಗೆ ಅಧ್ಯಯನಕ್ಕೆಂದು ಬರುತ್ತಾನೆ. ಪಶ್ಚಿಮ ಘಟ್ಟಗಳ ಉಪಯುಕ್ತ ಸಸ್ಯಗಳ ಕುರಿತಾದ ಪಿಎಚ್ಡಿ ಅಧ್ಯಯನ ಅವನದು‌. ಊರಲ್ಲಿ ಅವನಿಗೆ ಆಳುಗಳಾಗಿ ದೊರಕುವ ಮೊರೋಣಿ ಮತ್ತು ಮಾಣಿಗ ಎಂಬ ಹಳ್ಳಿಗರು ಹಳ್ಳಿಯ ಬದುಕಿನ ಅಗಾಧ ಜ್ಞಾನ ಹೊಂದಿರುವವರು. ಬೇಟೆಯಲ್ಲಿ ನುರಿತವರು ಮತ್ತು ಕಾಡಿನ ಸಂಪತ್ತುಗಳ ಗುಟ್ಟುಗಳನ್ನು ಅರಿತವರು‌.

ನಾಯಕನ ದಿನಚರಿಯಲ್ಲಿ ಹಳ್ಳಿಯ ಮತ್ತು ಕಾಡಿನ ವಿಸ್ಮಯಗಳು ತೆರೆದುಕೊಳ್ಳುವುದೇ ಕಥಾನಕದ ಪ್ರಯಾಣಕ್ಕೆ ಇಂಧನವಾಗಿದೆ. ಮಾಳ ಪರಿಸರದ ಕಾಡು, ಹಳ್ಳಿಗರ ಮುಗ್ಧತೆ, ಅವರ ಸರಳ ಬದುಕು, ಕುಡಿತ, ಹುಂಬತನ, ಒಂದೆರಡು ದಶಕಗಳ ಹಿಂದಿನದೆನ್ನಬಹುದಾದ ಜನರ ಜೀವನ ಕ್ರಮ, ನಂಬಿಕೆಗಳಿಗೆ ಕಥಾನಾಯಕ ಎದುರಾಗುತ್ತಾ ಹೋಗುತ್ತಾನೆ. ಅವನ ಮೂಲಕ ಆಧುನಿಕ ಪರಿಸರಪ್ರೇಮಿ ಮನಸ್ಸೊಂದು ಹಳೆಯ ಬದುಕಿಗೆ ಮುಖಾಮುಖಿಯಾಗುತ್ತದೆ. ಇಲ್ಲಿ ಚಿತ್ರಿಸಿರುವ ಕೆಲವು ವೈಚಿತ್ರ್ಯಗಳು ನಿಜವಾಗಿ ಇವೆಯೆಂದು ಲೇಖಕರು ನನ್ನ ಮಾಹಿತಿಗಾಗಿ ತಿಳಿಸಿದ್ದಾರೆ. ಉದಾಹರಣೆಗೆ- ಹುಲಿಯನ್ನು ಖೆಡ್ಡದಂತಹ ಬೇಟೆಯಲ್ಲಿ ಬೋನಿನಂತಹ ಕಲ್ಲಿನ ರಚನೆಯೊಳಗೆ ಕೆಡವಿ ಕೊಲ್ಲುವ ಕ್ರಮ. ಇದರ ಕುರುಹು ಇನ್ನೂ ಇದೆಯಂತೆ. ಹುಲಿಕೊಂದ ಹಳ್ಳಿಗರು ಅದರ ಚರ್ಮ ಮತ್ತು ಉಗುರುಗಳನ್ನು ತಮಿಳುನಾಡಿನ ಮಧ್ಯವರ್ತಿಗಳಿಗೆ ಮಾರುತ್ತಾರೆ. ಈ ಹಳ್ಳಿಗರು ಹುಲಿನಾಶ ಮಾಡಿ ಮೂರು ಕಾಸು ಪಡೆದು ಹಿಂದಿನಂತೆಯೆ ಗುಡಿಸಲುಗಳಲ್ಲಿ ಬಡವರಾಗಿ ಬಾಳುತ್ತಿರುವುದನ್ನು ನಾಯಕ ಗಮನಿಸುವುದು ಒಟ್ಟು ಕಾದಂಬರಿಯ ಆಶಯವನ್ನೂ ಸೂಚಿಸುವಂತಿದೆ.

ಕಾದಂಬರಿಯ ಕೊನೆಯಲ್ಲಿ ಪಿಎಚ್ಡಿ ಪಡೆದ ನಾಲ್ಕು ವರ್ಷಗಳ ನಂತರ ನಾಯಕ ಮತ್ತೊಮ್ಮೆ ಆ ಊರಿಗೆ ಬಂದಾಗ ಆ ಪ್ರದೇಶವೂ ಆಧುನಿಕ ತೋಟಗಾರಿಕೆಗೆ ಬಲಿಯಾಗಿದೆ ಮತ್ತು ಮೊರೋಣಿಯಾಗಲಿ ಮಾಣಿಗನಾಗಲಿ ಆ ಪರಿಸರದಲ್ಲಿ ಉಳಿದಿಲ್ಲ. ನಾಯಕನ ಪರಿಸ್ಥಿತಿ ‘ಕಾಂತಾರ’ ಚಲನಚಿತ್ರವನ್ನು ನೋಡಿ, ಈಗ ಅದರ ಚಿತ್ರೀಕರಣ ನಡೆದ ಜಾಗಕ್ಕೆ ಹೋಗಿ ನೋಡಿದಾಗಿನ ಅನುಭವವನ್ನು ಹೋಲುತ್ತದೆ!

ನಿರೂಪಣೆ ಅತ್ಯಾಕರ್ಷಕವಾಗಿದೆ. ತುಳು ಭಾಷೆಯ ನುಡಿಗಟ್ಟುಗಳು ಉದ್ದಕ್ಕೂ ಎದುರಾಗುತ್ತವೆ. ಬೇರೆ ಪ್ರದೇಶದವರಿಗೆ ಅವುಗಳ ವಿವರಣೆ ಇದ್ದರೆ ಉಪಯುಕ್ತವಾದೀತು. ಮುಂದಿನ ಮುದ್ರಣದಲ್ಲಿ ಅದರ ಬಗ್ಗೆ ಗಮನಹರಿಸಬಹುದು.

ರಾಜೇಶ್ ಕುಮಾರ್ ಕಲ್ಯಾ ಅವರಿಂದ ಮುಂದೆಯೂ ಪ್ರಾದೇಶಿಕ ಸೊಗಡಿನ ಕೃತಿಗಳು ರಚಿತವಾಗಲಿ.


  • ಡಾ. ಬಿ. ಜನಾರ್ದನ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW