‘ನಾನು ಹೆಣ್ಣಲ್ಲವೇ?’ ಕವನ – ದೀಪಿಕಾ ಬಾಬು

‘ಅಮ್ಮ ಪಿಸುಗುಟ್ಟಳು ಹೆಣ್ಣಾಗುವ ‘ಗೋಳು’… ಮುಂದೆ ಇದ್ದೇ ಇದೆ… ಮೊದಲು ವ್ಯಕ್ತಿಯಾಗು…ನಾಲ್ಕು ಕಾಸಿಗೆ -ಮೂರು ಹೊತ್ತಿನ ಊಟಕ್ಕೆ ಶಕ್ತಿಯಾಗು’…ಕವಿಯತ್ರಿ ದೀಪಿಕಾ ಬಾಬು ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಅವ ಅಂದ
ಹೆಣ್ಣೇ ಅಲ್ಲ ನೀನು
ನಿಜ,
ಹೆಣ್ಣಾಗಿರಲಿಲ್ಲ ಇನ್ನು
ಅವನ ಸ್ಪರ್ಶ ಮಾತ್ರಕ್ಕೆ ಕಾದಿದ್ದೆ —
ಅಹಲ್ಯೇ ಅಥವಾ ಕಲ್ಲು

ಕಲ್ಲಿಗದ್ಯಾವ ಲಿಂಗ ?

ಮರೆತು ಹೋಗಿತ್ತು ಎಂದೋ
ಹಾಡಬೇಕಿದ್ದ ಹಾಡು
ಅರೆ ! ಮೂಡೆ ಇರಲಿಲ್ಲವಲ್ಲ ಅಸಲಿಗೆ
ಹೆಣ್ತನವನ್ನೆಲ್ಲ
ಒಂದೊಂದಾಗಿ ಕಳಚಿ
ಮೂಟೆಕಟ್ಟಿ ಅಟ್ಟಕೆಸೆದ ನೆನಪು…

ಕಾಲು ಗೆಜ್ಜೆ ಕುಣಿಸಲಿಲ್ಲ
ಕೈಯ ಬಳೆ ಕಿಣಿಕಿಣಿಸಲಿಲ್ಲ..
ಮೂಗು ನತ್ತು ನಗಲಿಲ್ಲ
ನೀಲ ಜಡೆಯನು ನಿದ್ದೆಕೆಡಿಸಲು ಬಿಡಲಿಲ್ಲ
ಮುಂಗುರುಳನು ತೀಡಿ
ಗಾಳಿಗೆ ಹಾರಿಸಲಿಲ್ಲ

ತುಟಿಯಂಚಿನ ನಗೆಯಲ್ಲೋ
ಕಣ್ಣ ಮಿಂಚು, ಕೆನ್ನೆ ಕೆಂಪು
ನಡಿಗೆ ಲಯದ ಲಾಸ್ಯದಲ್ಲೋ
ಯಾರನ್ನೂ ಸಂಹಾರ ಮಾಡುವ
ಹುನ್ನಾರವನ್ನಂತು
ಮಾಡಲೇ ಇಲ್ಲ …

ಕಾದಿದ್ದರು ಅಪ್ಪ
ಆಚೆ; ಬೇಲಿ ನೆಟ್ಟು
ಗಡಿ – ಹಾರದಂಗೆ..
ಗಡಿಯಾರ-ದಂಗೆ
ಸುತ್ತ ಸರ್ಪಗಾವಲು
ಮನೆ, ಮಾನ, ಮರ್ಯಾದೆ ಅಂದರೆ?

ಅಮ್ಮ ಪಿಸುಗುಟ್ಟಳು
ಹೆಣ್ಣಾಗುವ ‘ಗೋಳು’
ಮುಂದೆ ಇದ್ದೇ ಇದೆ
ಮೊದಲು ವ್ಯಕ್ತಿಯಾಗು ,
ನಾಲ್ಕು ಕಾಸಿಗೆ -ಮೂರು ಹೊತ್ತಿನ ಊಟಕ್ಕೆ
ಶಕ್ತಿಯಾಗು .

ತಲೆತುಂಬಾ ಅದೇನೇನೋ
ಹುಚ್ಚು ಆವೇಶ
ಒಳಗೊಳಗೇ
ಸುಪ್ತ ಆಮಿಷ
ಅಭಾವ ವೈರಗ್ಯವೋ ..
ಆದರ್ಶ, ಪಾವಿತ್ರ್ಯವೋ ..

ಅಂತೂ ಹೆಣ್ಣಾಗಲೇ ಇಲ್ಲ ನಾನು
ಅಲ್ಲ ಬಿಡಲಿಲ್ಲ ಅವರು
ನನ್ನ ಆಜನ್ಮ ವೈರಿಗಳು
ರಸ್ತೆ ಮೇಲೆ ಡಿಕ್ಕಿ ಹೊಡೆದೋ
ಬಸ್ನಲ್ಲಿ ಕೈತಾಗಿಸೋ
ವೈರತ್ವ ಕಟ್ಟಿಕೊಂಡರು
ಅಥವಾ ನಾನೇ ಹಾಗಂದುಕೊಂಡು ಬಿಟ್ಟೆ

ಮಾರ್ಕ್ಸ್ ಕಾರ್ಡುಗಳಲ್ಲಿ
ಎಥೇಚ್ಛ, ಬೀಳುತಿದ್ದ ಮಾರ್ಕ್ಸು
ಕಂಪ್ಯೂಟರಿನ ಕೀಲಿ ಕುಟ್ಟುತ್ತಿದ್ದ ಕೈ
ಕೆಲಸದ offeru
ಯಾವುದರಲ್ಲೂ ಸುಳಿವಿರಲಿಲ್ಲ
ಹೆಣ್ತನದ; ಸೋಂಕಿರಲಿಲ್ಲ..

ಹಾಡು-ಹಸೆ ,ಅಡಿಗೆ ಒಗ್ಗರಣೆ
ಅಂಗಳಕ್ಕೊಂದು ಚೆಂದದ ರಂಗವಲ್ಲೇ
ಒಂದು ಕಡೆ
ಸಮುದ್ರದಾಚೆಗಿನ ಕನಸು ,
ಮುತ್ತಿನ ಬಯಕೆ
ಮತ್ತೊಂದು ಕಡೆ

ಸಮಯವಾದರೂ ಯಾರಿಗಿತ್ತು, race ಅದು ?

ಕಟ್ಟಿದ ರೆಕ್ಕೆ ಸಡಿಲಿಸಿದಾಗಲು
ಹಾರಲಾರದ ಆಲಸ್ಯ
ಬಿಡುಗಡೆ ನಂತರವೂ
ಒಡಮೂಡದ ಬಯಕೆ
ಕಲ್ಲಿನ ಸ್ಥಿತಿ ಇದೇ ಇರಬೇಕು
ಹೆಣ್ಣು ಅಲ್ಲದ, ಗಂಡು ಅಲ್ಲದ …

ಅರೆ , ಬರುವನಂತೆ ಬಿಡು …ಕ್ಷಮಿಸು ಕರೆತರಿಸುತ್ತಾರಂತೆ !!!

ಅಗೋಚರ ದೇಶದ
ರಾಜಕುಮಾರ !
ಅವನ ಹುಚ್ಚು ಕುದುರೆ
ಟಕ್ಕು ಟಕ್ಕಿಗೆ
ಸಾವಿರ hertz ಗಳಿಂದಾಚೆಗೆ ಜಿಗಿವ
ನನ್ನೆದೆ ನಗಾರಿ ಢವ ಢವಾ
ಹೆಸರೇನೋ ಸಂಪ್ರದಾಯವಂತೆ

ಅಷ್ಟಕ್ಕೂ ಕಾಯುವಿಕೆ
ಅಂದರೆ ಸುಮ್ಮನೇನ ?
ಕಾಯ್ದಿರಿಸಿದ ಸಂಯಮ
ಒರೆಗಚ್ಚಿದ ತಾಳ್ಮೆ
ಬಚ್ಚಿಟ್ಟ ಕನಸು, ಬರೆಯದ ಕವನ
ಎಲ್ಲದಕ್ಕೂ ಸುಖಾಸುಮ್ಮನೆ
ಬೇನಾಮಿ ವಾರಸುದಾರ
ಇವನೇನ ?

ಅವನ ತಣ್ಣನೆ ಸ್ಪರ್ಶಕ್ಕೆ
ಬಿಸಿಯೇರಿ ಹಣ್ಣಾಗುವ ತವಕ
ಕಳ್ಳ ಕಣ್ಣ ನೋಟಕ್ಕೆ
ಕೊಲೆಯಾಗುವ ಭಯ
ಮೆಲು ದನಿಯ ಕೂಗಿಗೆ
ಪಿಸುನುಡಿವ ಮಾತಿಗೆ

ನಾಚಿ ‘ನೀರೇ’ ಆಗಿ
ಹರಿದು ಬಿಡಬಲ್ಲೆ
ಅವನೆದೆಗೆ ನೇರ
ಶಾಪ ವಿಮೋಚನೆ
ಹೆಣ್ಣಾಗಿ ಅರಳುವ ಸಂಭ್ರಮ
ಯಾರಿಗೆ ತಾನೇ ಬೇಡ ?
ಕ್ರೂರಿ ಅವನು …ಅದೇ ಜನಾಂಗ
ಆ ಜನ್ಮ ವೈರಿ
ಪುರುಷ ಷಂಡತನ
ಸೀತೆಯ ಮೇಲು ಅನುಮಾನ
ಕ್ಷಮಿಸು ರಾಮ
ಹಾರಿದ್ದು ಬೆಂಕಿಗೆ ಅಹಲ್ಯೆ ಅಲ್ಲವಲ್ಲ

ಕಡೆಗೂ ಹೆಣ್ಣಾಗಲಿಲ್ಲ – ಹೆಮ್ಮಾರಿಯಾದೆ ..
ನುಡಿಯುತ್ತಿದ್ದಾನೆ
ಹೆಣ್ಣೇ ಅಲ್ಲವಂತೆ ನಾನು – ಮೂರ್ಖ !
ಶಾಪ -ಸಂಯಮ – ಅಹಲ್ಯೆ
ಕಾಡು-ವನವಾಸ-ಸೀತೆ
ಕಡೆಗೆ ಕೊಚ್ಚಿ ಕೊಲ್ಲೋ ಕಾಳಿ
ಎಲ್ಲರಲ್ಲೂ ನಾನಿಲ್ಲವೇ?
ನಾನು ಹೆಣ್ಣಲ್ಲವೇ ?


  • ದೀಪಿಕಾ ಬಾಬು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading