ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…

ಬದುಕಿರುವವವರೆಗೆ ಬದುಕನ್ನು ಪ್ರೀತಿಸೋಣ. ಸ್ಪಂದಿಸಿದವರನ್ನು ಪ್ರೀತಿಯಿಂದ ಬಂಧಿಸೋಣ. ಸ್ಪಂದನೆ ಇರದವರನ್ನು ನೆಂಟಸ್ತಿಕೆಯಿಂದ ಬಿಡುಗಡೆಗೊಳಿಸೋಣ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಈಗಾಗಲೇ ಹೇಳಿಯೇ ಬಿಟ್ಟಿದ್ದಾರಲ್ಲ “ಯಶಸ್ಸು ಸಾವಿರ ತಂದೆಯರನ್ನು ಹೊಂದಿರುತ್ತದೆ, ಸೋಲು ಮಾತ್ರ ಅನಾಥವಂತೆ”. (Success has got thousand fathers but failure is an orphan) ಗೆದ್ದಿರೋ ನಿಮ್ಮ ಹಿಂದೆ ದಂಡೋ ದಂಡು. ಸೋತಿರೋ ನಿಮ್ಮ ಬಳಿ ಯಾರೂ ಸುಳಿಯಲ್ಲ. ಬಹುತೇಕ ಸಂಬಂಧಿಕರು/ ನೆಂಟರಂತು, ನಿಮ್ಮ ಬಳಿ ಇದ್ದರೆ ಮಾತ್ರ ಇಣುಕುವ ಜಾಣರು. ಇಲ್ಲದಿದ್ದರೆ ನಿಮ್ಮ ಹತ್ತಿರ ಸುಳಿಯದ ಜಾಣ ಕುರುಡರು.

ಇದು ಬದುಕಿನ ಸತ್ಯ. ಈ ಸತ್ಯವನ್ನು ನಾವು ಮೊದಲೇ ತಿಳಿದು ಒಪ್ಪಿಕೊಂಡಿದ್ದರೆ, ಮುಂದೆ ನೆಂಟರು ನಮ್ಮನ್ನು ಕೀಳಾಗಿ ಕಂಡಾಗ ಅಷ್ಟೊಂದು ನೋವಾಗಲಾರದು. ಒಂದು ವೇಳೆ ಕಷ್ಟಕ್ಕೆ ನೆಂಟರು, ಬಂಧುಗಳು ಬರುತ್ತಾರೆನ್ನುವ ಭ್ರಮೆಯಲ್ಲಿ ಬದುಕಿದರೆ ಆಘಾತ ಕಟ್ಟಿಟ್ಟ ಬುತ್ತಿ.

ಒಂದು ವೇಳೆ ಸಂಬಂಧಿಗಳು, ಸ್ನೇಹಿತರು ಕಷ್ಟಕ್ಕೆ ಆದರೆ ಅದು ಪೂರ್ವ ಜನ್ಮದ ಪುಣ್ಯ ಎಂದುಕೊಳ್ಳೋಣ. ಅಂತವರು ಖಂಡಿತ ವಿರಳ. ಇದ್ದಾರೆ ನೂರಕ್ಕೆ ಒಬ್ಬರೋ ಇಬ್ಬರೊ. ಅವರನ್ನು ಕಾಪಾಡಿಕೊಳ್ಳೋಣ, ಆರಾಧೀಸೋಣ. ಅದಕ್ಕೆ ಜೀವನದ ಯಾವುದೇ ಕಷ್ಟದ ಸಂದರ್ಭದಲ್ಲಿ ನೀವು ಕಣ್ಣೀರು ಹಾಕುವಾಗ ಕಣ್ಣಾಲೆಗಳು ತುಂಬಿ ದೃಷ್ಟಿ ಮಂಜಾಗುತ್ತದೆ ನಿಜಾ ಆದರೆ ನಿಮ್ಮವರಾರು ಎಂಬ ದೃಷ್ಟಿಕೋನ ಸ್ಪಷ್ಟವಾಗುತ್ತದೆ.

ಹೀಗಾಗಿ ಸಂಕಷ್ಟಗಳು ಬಂದಾಗ ಕಣ್ಣೀರು ಹಾಕಿದರೂ ಚಿಂತೆಯಿಲ್ಲ ಯಾರ ನಿರೀಕ್ಷೆ ಇಟ್ಟುಕೊಳ್ಳದೆ ಈ ಕಷ್ಟ ನನ್ನದೇ, ನಾನೇ ಇದನ್ನು ನಿಭಾಯಿಸಬೇಕು. ನನ್ನ ಸಂಕಷ್ಟಕ್ಕೆ ನೆಂಟರನ್ನು ಯಾಕೆ ನಾ ಬಯಸಲಿ ಎಂದುಕೊಂಡು ಮನಸ್ಸನ್ನು ಪರಿಹಾರದ ಕಡೆ ಯೋಚಿಸುವ ನಿಟ್ಟಿನಲ್ಲಿ ಕರೆದೋಯ್ಯಬೇಕು.

ಕಷ್ಟವೇ ಬರಲಿ, ಸಂಕಷ್ಟದ ಸುರಿಮಳೆಯೇ ಇರಲಿ, ಸಮಯಕ್ಕಾಗದ ನೆಂಟರ ಸಹಾಯಕ್ಕೆ ಕೈ ಚಾಚುವುದಕ್ಕಿಂತ, ಸಹಿಸುವ ನನ್ನ ಹೆಗಲನ್ನೇ ಗಟ್ಟಿ ಮಾಡು ದೇವರೇ ಎಂದು ಭಗವಂತನಲ್ಲೇ ಪ್ರಾರ್ಥಿಸುವುದು ಒಳಿತು. ಏಕೆಂದರೆ ನೆಂಟರಿಗಿದ್ದಂತೆ, ದೇವರಿಗೆ ಜಾಣ ಕುರುಡುತನವಿಲ್ಲ.

ಫೋಟೋ ಕೃಪೆ : google

ಕೊಂಬೆಯ ಮೇಲೆ ಕೂಡುವ ಹಕ್ಕಿ ನಂಬಿರುವುದು ರೆಂಬೆ-ಕೊಂಬೆಯನ್ನಲ್ಲ. ತನ್ನ ರೆಕ್ಕೆಯ ಸಾಮರ್ಥ್ಯವನ್ನ ಮತ್ತು ತನ್ನ ಕಾಲುಗಳನ್ನ. ಹೀಗಾಗಿ ನಾವುಗಳು ಕೂಡ, ಕಷ್ಟಗಳನ್ನು ಹೊರುವ ನಮ್ಮ ಭುಜಗಳನ್ನು ನಂಬಿ ಕಷ್ಟಗಳಲ್ಲಿ ನಗುತ್ತಾ ಧೈರ್ಯವಾಗಿರೋಣ.

ಒಂದಂತೂ ಸತ್ಯ, ಕಾಲ ಗರ್ಭದಲ್ಲಿ ಎಲ್ಲರಿಗೂ ಕಷ್ಟಗಳು ತಪ್ಪಿದ್ದಲ್ಲ. ನೀವು ಕಷ್ಟಗಳಲ್ಲಿ ಒದ್ದಾಡುವಾಗ ದೂರದಿಂದ ಕುಹಕು ನಗುವ ನೆಂಟನೂ ಇದಕ್ಕೆ ಹೊರತಾಗಿಲ್ಲ. ಅವನಿಗೂ ಒಂದು ಸಮಯ ನಿಗಧಿಯಾಗಿರುತ್ತದೆ. ಅದನ್ನೇ “Every Dog has it’s own time” ಅನ್ನೋದು.

ನಿಮಗೆ ಗೊತ್ತಿರುವಂತೆ ಇಂತಹ ಜನರನ್ನು/ ನೆಂಟರನ್ನು ನೋಡಿಯೇ ಹತಾಶೆಗೊಂಡು, ಬುದ್ಧ ಬಸವರು ತಮ್ಮ ಐಷಾರಾಮಿ ಅರಮನೆಗಳನ್ನು ತೊರೆದು ಸಮಾಜ ಕಲ್ಯಾಣಕ್ಕಾಗಿ ನಿಂತಿರಬಹುದು. ಹಾಗಿದ್ದ ಮೇಲೆ, ಇರುವಾಗ ಬೆನ್ನು ಬೀಳುವ, ಇರದಾದಾಗ ಬೆನ್ನು ತೋರಿಸುವವರನ್ನು ನಂಬಿ ಬದುಕಲಾದೀತೇ! ಛೇ ಛೇ.. ಖಂಡಿತ ಇಲ್ಲ. ನಮ್ಮ ಬದುಕು ನಮ್ಮದು. ಅದು ಕಷ್ಟವೋ ಸುಖವೋ ನಮ್ಮದೇ.

 

ಬದುಕಿರುವವವರೆಗೆ ಬದುಕನ್ನು ಪ್ರೀತಿಸೋಣ. ಸ್ಪಂದಿಸಿದವರನ್ನು ಪ್ರೀತಿಯಿಂದ ಬಂಧಿಸೋಣ. ಸ್ಪಂದನೆ ಇರದವರನ್ನು ನೆಂಟಸ್ತಿಕೆಯಿಂದ ಬಿಡುಗಡೆಗೊಳಿಸೋಣ. ಒಟ್ಟಾರೆ ಹೇಗೆ ಬದುಕಬೇಕೆಂದರೆ ಕಷ್ಟದಲ್ಲಿಯೂ ನಗುವ ನಮ್ಮನ್ನು ನೋಡಿ, ಜಾಣ ಕುರುಡ ನೆಂಟರಿಗೆ ನಮ್ಮ ಬಗ್ಗೆ ಪ್ರಶ್ನೆ ಮೂಡಬೇಕು.

ಫೋಟೋ ಕೃಪೆ : google

ಕೊನೆಗೆ ಈ ಬದುಕಿಗೆ ಹೀಗೆ ಒಂದು ಸವಾಲೆಸೆದು ಬಿಡೋಣ.

“ಎಲವೋ ಬದುಕೇ! ನಾನು ಕಷ್ಟಗಳೊಂದಿಗೆ ಹೋರಾಡುವುದನ್ನು ನೀನು ಕಾಣಬಹುದು ಆದರೆ ನೀ ಕೊಡುವ ಕಷ್ಟಗಳಿಗೆ ಹೆದರಿ ಓಡುವ ನನ್ನನ್ನು ನೀ ಕಾಣಲಾರೆ. ನಿನ್ನನ್ನು ಎದುರಿಸಿಯೇ ಬದುಕುವೆ.”

ಹೀಗೆ ಬದುಕಿಗೆ ಸವಾಲು ಹಾಕಿದಮೇಲೆ, ಸಮಯಕ್ಕಾಗದ ಈ ನೆಂಟರು/ ಸಂಬಂಧಿಕರು ಯಾವ ಲೆಕ್ಕಾ ಕಣ್ರೀ.. ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ… ಎನ್ನುವ ಭಾವನೆ ನಮ್ಮ ಹತ್ತಿರದಲ್ಲೂ ಸುಳಿಯಲಾರದು. ಆಲ್ವಾ ಹೇಳಿ .

ಇನ್ನೊಂದು ಮಾತು ಹೇಳಲಾ “ಮನುಷ್ಯ ಯೋಜನೆಗಳನ್ನು (plans) ರೂಪಿಸುವಾಗ ದೇವರು ನಗುತ್ತಾನಂತೆ”. ಏಕೆಂದರೆ ಏನೇ ಯೋಜನೆಗಳನ್ನು ನೀವು ರೂಪಿಸಿದರೂ ಕೊನೆಗೆ ಅವನ ಯೋಜನೆಯಂತೆಯೇ ಆಗುವುದು. ಹೀಗಿರುವಾಗ ನಿಮ್ಮ ಕಷ್ಟದಲ್ಲಿ ನಿಮ್ಮನ್ನು ನೋಡಿ ನಗುವ ನೆಂಟರಿಗೆ ಮೇಲಿನವನ ಇನ್ನೊಂದು ಯೋಜನೆ ರೂಪುಗೊಳ್ಳುತ್ತಿರುತ್ತದೆ. ಹಾಗೆಯೇ ನಿಮ್ಮ ಒದ್ದಾಟಕ್ಕೆ ಪರಿಹಾರವಾಗಿ ಕೂಡ ಒಂದು ಯೋಜನೆ ಆ ದೇವರು ರೂಪಿಸುತ್ತಿರುತ್ತಾನೆ.

“ಒಂದು ತೆಳ್ಳನೆಯ ತೆಳು ಎಲೆಯಲ್ಲಿ ಇಡೀ ಜೀವ ಸಂಕುಲದ ಆಹಾರ ತಯಾರಿಕಾ ಘಟಕವನ್ನೇ ಬಚ್ಚಿಟ್ಟಿರುವ ದೇವರು ನಮ್ಮ ಜೀವನದ ಕಷ್ಟಗಳಿಗೆ ಪರಿಹಾರವನ್ನು ಎಲ್ಲಾದರೂ ಇಟ್ಟಿರಲಾರನೇ”!

ತಾಳ್ಮೆಯಿಂದ ನಮ್ಮ ಪರಿಹಾರ ನಾವೇ ಕಂಡುಕೊಳ್ಳೋಣವೇ ಹೊರತು ನೆಂಟರಲ್ಲಿ/ಸಮಯಕ್ಕಾಗದ ಸಂಬಂಧಿಗಳಲ್ಲಿ ಅಥವಾ ಸ್ನೇಹಿತರಲ್ಲಿ ನಿರೀಕ್ಷಿಸುವುದು ಬೇಡ. ಆಗಲೇ ನಮ್ಮ ಸ್ವಂತಿಕೆಗೆ ಒಂದು ಬೆಲೆ ಬರೋದು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

5 1 vote
Article Rating

Leave a Reply

1 Comment
Inline Feedbacks
View all comments

[…] ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ&… December 2, 2023 […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW