ಮತ್ಸರವೆಂಬ ಮದ್ದಿಲ್ಲದ ಖಾಯಿಲೆ

ಮತ್ಸರದಿಂದ ನಮಗೆ ನಷ್ಟವೇ ಹೊರತು ಲಾಭವಿಲ್ಲ. ತೊಂದರೆ ಆಗುವುದು ನಮ್ಮ ಆತ್ಮಕ್ಕೆ, ಹೃದಯಕ್ಕೆ, ಮನಸ್ಸಿಗೆ ಕೊನೆಗೆ ಇದರ ಅಡ್ಡ ಪರಿಣಾಮವೆಂಬಂತೆ ದೇಹಕ್ಕೆ ತಗುಲಿ ಜೀವನವೇ ಬಲಿಯಾಗುವುದು. ಸರೋಜಾದೇವಿ ನಿನ್ನೆಕರ  ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….

ಮನುಷ್ಯನ ಅಂತರಂಗದ ಅರಿಷಡ್ವರ್ಗಗಳೆಂಬ ಖಾಯಿಲೆಗಳಲ್ಲಿ ಮತ್ಸರವು ಒಂದು ಮಹಾ ಖಾಯಿಲೆ. ಇದು ಹಲವಾರು ಹೆಸರುಗಳಿಂದ ತನ್ನ ತಲೆಎತ್ತಿ ನಿಂತಿದೆ.ಈ ರೋಗವನ್ನು ಹೊಟ್ಟೆಕಿಚ್ಚು, ದ್ವೇಷ, ಹಗೆತನ, ವೈರ, ಕರುಬು, ಜಿಗುಪ್ಸೆ, ಕೆಡುಬಯಸುವಿಕೆ ಮಾತ್ಸರ್ಯ ಅಂತಲೂ ಕರೆಯಲಾಗುವುದು.ಜಗದಲಿ ಅನಾದಿಕಾಲದಿಂದಲೂ ಮತ್ಸರ ಎಂಬ ರೋಗ ಉಳಿದು ಬೆಳೆದು ಬಂದಿದೆ.ಇದು ಭಯಾನಕ ಹಾಗೂ ಭಾವನಾತ್ಮಕ ಮಾನಸಿಕ ಖಾಯಿಲೆ ಎಂದು ಹೇಳಬಹುದು. ಇದರಿಂದ ಮನು ಕುಲದ ಮೇಲೆ, ಸಮಾಜದ ಮೇಲೆ,ಪರಿಸರದ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದಲ್ಲದೆ ಸುತ್ತ ಮುತ್ತಲಿನ ಸುಂದರ ವಾತಾವರಣವನ್ನೆ ಕುರೂಪಗೊಳಿಸುವುದು.

ಮತ್ಸರ ಅಥವಾ ಈರ್ಷ್ಯೆ ಮನದ ಶಾಂತಿ ಕೇಡಿಸುವುದರಲ್ಲಿ ಎತ್ತಿದ ಕೈ. ಮತ್ತೊಬ್ಬರ ಬಗ್ಗೆ ಯೋಚಿಸುವಂತೆ ಮಾಡಿ ನಮ್ಮ ಗುರಿ ತಪ್ಪಿಸುತ್ತದೆ. ಇದರಿಂದ ನಮಗಷ್ಟೇ ಅಲ್ಲ ಸಮಾಜಕ್ಕೂ ಕೇಡು. ಜಗದಲಿ ಈ ದ್ವೇಷ ಮತ್ಸರ ಹೆಚ್ಚಾಗಲೂ ಮಾನವನ ಅತಿ ಆಸೆಯೇ ಕಾರಣವಾಗಿದೆ ಎನ್ನಬಹುದು.ಬೇರೆಯವರ ಬಳಿಯಲ್ಲಿರುವುದು ತಮ್ಮಲ್ಲಿಲ್ಲ ಎಂದಾಗ ನಿರಾಸೆ,ಅದನ್ನು ತಾನು ಪಡೆಯಬೇಕೆಂಬ ಜಿದ್ದು, ಸಿಗದೆಯಿದ್ದಾಗ ಕಾಲೇಳೆಯುವ ಬುದ್ಧಿ, ಅಸೂಯೆ, ಕರುಬುವಿಕೆ, ಹೊಟ್ಟೆ ಕಿಚ್ಚು ಎಂಬ ಮದ್ದಿಲ್ಲದ ಖಾಯಿಲೆ ಅಂಟಿಕೊಳ್ಳುತ್ತದೆ.

ಇತ್ತಿಚೆಗೆ ಇದು ಕೆಲವೊಬ್ಬರನ್ನು ಹೊರತುಪಡಿಸಿ ಅನೇಕರಲ್ಲಿ ಕಂಡು ಬರುವ ರೋಗವಾಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ.ಚಿಕ್ಕಪುಟ್ಟ ವಿಷಯಗಳಿಗೆ ಮನಸ್ತಾಪ,ಹಗೆತನ ಕಾಣಬಹುದು. ಇದು ಯಾವುದೇ ಸಂಬಂಧವಿರಲಿ ಸಡಿಲಗೊಳಿಸಿ,ಶಾಂತಿ, ಸಮಾಧಾನ,ನೆಮ್ಮದಿ ಎಲ್ಲವನ್ನು ಕಸಿದುಕೊಳ್ಳುತ್ತದೆ ತುಂಬಾ ಭಯಂಕರ ಖಾಯಿಲೆ ಈ ಮತ್ಸರ..
ತುಂಬಾ ಅಪಾಯಕಾರಿಯಾದ ಈ ರೋಗವು ಮನುಷ್ಯನ ಪರಮ ಶತ್ರು.ಕಿಚ್ಚಿನಲ್ಲಿ ದಹಿಸಿ ನರಳಾಡಿಸುತ್ತದೆ.ಜಾತಿ ಮತ ನೋಡದೇ,ಬಡವ ಶ್ರೀಮಂತರ ಭೇಧವಿಲ್ಲದೆ,ಲಿಂಗ ಭೇದ, ವರ್ಣ ಬೇಧ ಯಾವುದು ಮಾಡದೇ ಪ್ರತಿಯೊಬ್ಬರಿಗೂ ಅಂಟಿಕೊಳ್ಳಬಹುದಾದ ಖತರ್ನಾಕ ಖಾಯಿಲೆ..ಮದ್ದಿಲ್ಲದ ಮಹಾ ಮಾರಿ ಈ ಮತ್ಸರ..

ಮನಸ್ಸನ್ನು ಅಶುದ್ಧಗೊಳಿಸಿ ತಪ್ಪು ದಾರಿ ತುಳಿಯುವಂತೆ ಪ್ರೇರೆಪಿಸುವುದು.ಕೆಲವೊಂದು ಸಲ ಜೀವ ಹಾನಿಯಂತಹ ಗಂಭೀರ ಸ್ವರೂಪದ ಕೆಲಸ ಮಾಡಿಸಲು ಹೇಸುವುದಿಲ್ಲ ಈ ದ್ವೇಷವೆಂಬ ದೆವ್ವ.

ಫೋಟೋ ಕೃಪೆ : google

ಮತ್ಸರದಿಂದ ನಮಗೆ ನಷ್ಟವೇ ಹೊರತು ಲಾಭವಿಲ್ಲ. ತೊಂದರೆ ಆಗುವುದು ನಮ್ಮ ಆತ್ಮಕ್ಕೆ, ಹೃದಯಕ್ಕೆ, ಮನಸ್ಸಿಗೆ ಕೊನೆಗೆ ಇದರ ಅಡ್ಡ ಪರಿಣಾಮವೆಂಬಂತೆ ದೇಹಕ್ಕೆ ತಗುಲಿ ಜೀವನವೇ ಬಲಿಯಾಗುವುದು.ಯಾರ ಮೇಲೆ ನಮಗೆ ಅಸೂಯೇ ಇರುವುದೊ ಆ ವ್ಯಕ್ತಿ ಮಾತ್ರ ಆರೋಗ್ಯವಾಗಿಯೇ ಇರುತ್ತಾನೆ ಆದರೆ ನಾವು ಹೊಟ್ಟೆಯ ಉರಿಯಲ್ಲಿ ಬೆಯುತ್ತಾ ನಮ್ಮ ಆರೋಗ್ಯ ಹಾಳು ಮಾಡಿಕೊಂಡು ಬಳಲಬೇಕಾಗುತ್ತದೆ. ಮತ್ಸರವೆಂಬ ಖಾಯಿಲೆ ಬಂದರೆ ಮದ್ದಿಲ್ಲ ಆದ್ದರಿಂದ ಈ ಖಾಯಿಲೆ ಬರದಂತೆ ನೋಡಿಕೊಳ್ಳಬೇಕು. ದೇವರು ಕೊಟ್ಟ ನಮ್ಮ ಸುಂದರ ಜೀವ ಮತ್ತು ಜೀವನವನ್ನು ಈ ಖಾಯಿಲೆಯಿಂದ ದೂರವಿಡಬೇಕಾದರೆ ಮನವೆಂಬ ಮಂದಿರವನು ಸಕಾರಾತ್ಮಕ ಚಿಂತನೆಗಳಿಂದ ಸುಂದರಗೊಳಿಸಿ, ಪ್ರೀತಿ, ವಿಶ್ವಾಸ, ಕರುಣೆ, ಮಮಕಾರಗಳನ್ನು ಪ್ರತಿಷ್ಠಾಪಿಸಿ ಆ ದೇವರು ಎಷ್ಟು ಕೊಟ್ಟಿರುವನೋ,ಏನನ್ನು ಕೊಟ್ಟಿರುವನೋ ಅಷ್ಟನ್ನೆ ತೃಪ್ತಿಯಿಂದ ಒಪ್ಪಿ ಅಪ್ಪಿಕೊಂಡು ಬದುಕು ಸಾರ್ಥಕಗೊಳಿಸಿಕೊಳ್ಳಬೇಕು.ಆ ದೇವರು ಎಲ್ಲವನ್ನು ಎಲ್ಲರಿಗೂ ಕೊಟ್ಟಿರುವುದಿಲ್ಲ ಇದನ್ನು ಅರಿತು ಸ್ವಚ್ಛಂದ ಭಾವನೆಯೊಂದಿಗೆ ಇನ್ನೊಬ್ಬರ ಏಳಿಗೆಯಲ್ಲಿ,ಸಂತೋಷ ದಲ್ಲಿ ಭಾಗಿಯಾಗಿ ಆನಂದಿಸಬೇಕು.ನಮಗೆ ಬೇಕಾದದ್ದನ್ನು ದೇವರಲ್ಲಿ ಪ್ರಾರ್ಥಿಸಬೇಕೆ ವಿನಃ ಇನ್ನೊಬ್ಬರಿಗೆ ಮತ್ಸರದಿಂದ ಮೋಸ ಮಾಡಿ ಪಡೆಯಬಾರದು.

ಶ್ರೇಷ್ಠ ಚಿಂತಕರಾದ ಡಾ.ರಾಜಶೇಖರ ನಾಗೂರ ವರು ಹೊಟ್ಟೆಕಿಚ್ಚಿನ ಬಗ್ಗೆ ಅದ್ಭುತ ಮಾತೊಂದು ಹೇಳಿರುವುದು ಜ್ಞಾಪಕಕ್ಕೆ ಬರುತ್ತೆ..ಯಾರ ಹೊಟ್ಟೆಯಲ್ಲಿ ಕಿಚ್ಚಿರುತ್ತೊ ಅವರ ಹೃದಯದಲ್ಲಿ ಪ್ರೀತಿಯ ನೆಲೆ ಇರುವುದಿಲ್ಲ.ಯಾರ ಹೃದಯದಲ್ಲಿ ಪ್ರೀತಿ ಇರುತ್ತೊ ಅವರ ಹೊಟ್ಟೆಯಲ್ಲಿ ಕಿಚ್ಚಿರಲ್ಲ.ಏಕೆಂದರೆ ಹೊಟ್ಟೆಯಲ್ಲಿನ ಕಿಚ್ಚು ಮೇಲ್ಮುಖವಾಗಿ ಹೃದಯದಲ್ಲಿನ ಪ್ರೀತಿಯನ್ನು ದಹಿಸಿದರೆ, ಹೃದಯದಲ್ಲಿನ ಪ್ರೀತಿ ಕೆಳಮುಖವಾಗಿ ಕಿಚ್ಚನ್ನು ನಂದಿಸುತ್ತದೆ. ಅಂದರೆ ಪ್ರೀತಿಯಿಂದ ಎಲ್ಲವನ್ನು ಎಲ್ಲರನ್ನು ಗಳಿಸಬಹುದು. ಮತ್ಸರದಿಂದ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೆ ಹೆಚ್ಚು ಇನ್ನುವರೆಗೆ ಯಾರು ಹಗೆತನದಿಂದ ಗೆದ್ದವರಿಲ್ಲ. ಹಗೆತನದ ಹಾವು ನಮ್ಮಲಿದ್ದು ನಮಗೆ ಕಚ್ಚುವುದೇ ವಿನಃ ಬೇರೆಯವರಿಗೆ ಹಾನಿ ಮಾಡದು.ಇದರಿಂದ ಹಲವಾರು ಮನೆ ಹಾಳಾಗಿವೆ.ಯಾರು ಎಂದೂ ಉದ್ಧಾರವಾಗಿಲ್ಲ,ಆಗುವುದು ಇಲ್ಲ.ಪ್ರೀತಿಯಿಂದ ಎಲ್ಲವೂ ಸಾಧ್ಯ..

ತೊಲಗಿಸು ಮನದಿಂದ ಮತ್ಸರ
ಇದುವೇ ಹೃದಯಕ್ಕೆ ಸುಖಕರ
ಮತ್ಸರಕ್ಕೆ ಮದ್ದಿಲ್ಲ ನೋಡು
ಮನವಾಗಲಿ ಒಲವಿನ ಗೂಡು..

ಮಾನವ ಬುದ್ಧಿಜೀವಿ, ಆಲೋಚನಾ ಶಕ್ತಿ ಹೊಂದಿರುವವನು ಒಳಿತು ಕೆಡುಕುಗಳ ಜ್ಞಾನ ಇರುತ್ತೆ ಆದರೂ ಕೆಲವೊಂದು ಸಲ ಅರಿವಿನ ಗುರುವನ್ನೆ ಕಳೆದುಕೊಂಡು ಅಜ್ಞಾನಿಯಾಗುತ್ತಾನೆ. ಆಗ ಅರಿಷಡ್ವರ್ಗಗಳು ಆವರಿಸುತ್ತವೆ.ಅದರಲ್ಲಿಯೂ ಈ ಹೊಟ್ಟೆ ಉರಿಯನ್ನು ಹೆಚ್ಚಿಸಿಕೊಂಡು ಬೇರೆಯವರನ್ನು ಅವಹೇಳನ ಮಾಡುತ್ತಾ ದರ್ಪದಿಂದ ಮೆರೆಯುತ್ತಾ ಹೋಗುತ್ತಾರೆ ಕೆಲವರು.  ಅಂತಹ ಸಮಯದಲ್ಲಿ ನಡೆದಾಡುವ ದೇವರಾದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಹೇಳಿದಂತೆ ನಡೆದುಕೊಳ್ಳುವುದು ಒಳಿತು..ಕುದಿಯುವವರು ಕುದಿಯಲಿ,ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು.ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ.

ಎಷ್ಟೊಂದು ಗೂಡಾರ್ಥ ಹೊಂದಿದೆ ಅಲ್ವ ಏಕೆಂದರೆ ಯಾರು ಮತ್ಸರಿಗಳಾಗಿರುತ್ತಾರೊ ಅವರೇ ಬೂದಿಯಾಗಿ ಆವಿಯಾಗಿ ಹೋಗುತ್ತಾರೆ ಇದು ಬೇರೆಯವರ ಮೇಲೆ ಯಾವ ದುಷ್ಪರಿಣಾಮ ಬೀರುವುದಿಲ್ಲ.

ತಿರುಗು ಬಾಣದಂತೆ ಮತ್ಸರಿಗಳ ಎದೆಗೆ ನಾಟುತ್ತದೆ.ಅದಕ್ಕೆ ಯಾವಾಗಲೂ ಧನಾತ್ಮಕವಾಗಿ ಯೋಚಿಸುತ್ತ ಧರೆಗೆ ಬಂದ ನಾವು ಧರೆಯಲ್ಲಿಯೇ ಹೋಗಬೇಕಾಗಿರುವುದರಿಂದ ಸ್ವಚ್ಛಂದದ ಭಾವಗಳನ್ನು ನಮ್ಮಲಿರಿಸಿಕೊಂಡು ಪ್ರೀತಿ ವಾತ್ಸಲ್ಯಗಳನ್ನು ಹಂಚುತ್ತಾ ಜೀವನ ಸಾಕಾರಗೊಳಿಸಿಕೊಳ್ಳಬೇಕು.

ಹೃದಯದಲ್ಲಿರಲಿ ಸ್ನೇಹ ಪ್ರೀತಿ
ಬಾಳಲ್ಲಿರಲಿ ನೀತಿ ಸಹಾನುಭೂತಿ
ಬಿಟ್ಟು ಬಿಡಿ ದ್ವೇಷದ ದೋಸ್ತಿ
ಶಾಂತಿ ನೆಮ್ಮದಿಯೇ ಮನದ ಆಸ್ತಿ…

ಮತ್ಸರ ಎಂಬ ರೋಗದ ಬಗ್ಗೆ ಎಷ್ಟು ಹೇಳಿದರು ಮುಗಿಯದ ಕಥೆ.ಕೊನೆಯದಾಗಿ ಹೇಳುವುದಿಷ್ಟೇ ಬಂಗಾರದಂತ ಬಾಳು ಕೆಲಸಕ್ಕೆ ಬಾರದ ದ್ವೇಷ ಅಸೂಯೇಗಳಿಂದ ಹಾಳಾಗದಿರಲಿ,ಮತ್ಸರ ಎಂಬ ವಿಷವನು ಹೊಟ್ಟೆಯಲ್ಲಿ ಇರಿಸಿಕೊಳ್ಳದೆ ಹೊರಹಾಕಿ, ಪ್ರೇಮವೆಂಬ ಅಮೃತವನ್ನು ಹೃದಯದಲ್ಲಿರಿಸಿಕೊಂಡು ತೃಪ್ತಿಕರವಾಗಿ ಜೀವನ ಸಾಗಿಸುವುದೇ

ಶ್ರೇಯಸ್ಸು…
ಈ ಬಾಳು ನಾಲ್ಕು ದಿನದ ಸಂತೆ
ಕಟ್ಟಿಕೊಳ್ಳಬೇಡ ಪಾಪದ ಕಂತೆ
ಮರೆತು ಬಿಡು ದ್ವೇಷ ಮತ್ಸರ
ಅರಿತು ನಡೆ ಬಾಳೆಲ್ಲ ಬಂಗಾರ…


  • ಸರೋಜಾದೇವಿ ನಿನ್ನೆಕರ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW