ವಿಶ್ವಾಸವಿಡುವುದಕ್ಕೂ, ಸಂಪೂರ್ಣ ಭರವಸೆ ಇಡುವುದಕ್ಕೂ ವ್ಯತ್ಯಾಸ ಖಂಡಿತ ಇದೆ. ನಾವು ನಮ್ಮ ಜೀವನದಲ್ಲಿ ಎಲ್ಲರನ್ನೂ ನಂಬಲು ಆಗದು. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಒಂದು ಊರಲ್ಲಿ ಒಬ್ಬ ಕಲಾವಿದ ಎರಡು ಅತಿ ಎತ್ತರದ ಕಟ್ಟಡಗಳ ಮಧ್ಯೆ ಒಂದು ಹಗ್ಗವನ್ನು ಕಟ್ಟಿ ತನ್ನ ಮಗುವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಈ ಕಟ್ಟಡದಿಂದ ಆ ಕಟ್ಟಡದ ವರೆಗೆ ಹಗ್ಗದ ಮೇಲೆ ನಡೆಯುತ್ತಾ ದಾಟಿಕೊಂಡು ಬರುತ್ತಾನೆ. ಕೆಳಗಿನಿಂದ ನೋಡುತ್ತಿದ್ದ ಸಾವಿರಾರು ಜನರು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು.
ಆ ಕಲಾವಿದ ಕೆಳಗಡೆ ಬಂದು ವೇದಿಕೆಯ ಮೇಲೆ ಮೈಕನ್ನು ಕೈಯಲ್ಲಿ ಹಿಡಿದು ಜನರಿಗೆ ಪ್ರಶ್ನೆ ಕೇಳುತ್ತಾನೆ. ನಾನು ಈ ಟಾಸ್ಕನ್ನು ಯಶಸ್ವಿಯಾಗಿ ಇನ್ನೊಮ್ಮೆ ನಿರ್ವಹಿಸಬಲ್ಲೆ ಎಂಬ ವಿಶ್ವಾಸ ನಿಮ್ಮಲ್ಲಿದೆಯೇ? ಎಲ್ಲರೂ ಒಮ್ಮತದಿಂದ ಹರ್ಷ ಭರಿತವಾಗಿ ಹೌದು, ಹೌದು ಖಂಡಿತ ವಿಶ್ವಾಸವಿದೆ ಎನ್ನುತ್ತಾರೆ.
ಆ ಕಲಾವಿದ ಮತ್ತೊಮ್ಮೆ ಆ ಜನರನ್ನು ಕೇಳುತ್ತಾನೆ ನಿಜವಾಗಿಯೂ ನಾನು ಇನ್ನೊಮ್ಮೆ ಈ ಟಾಸ್ಕ್ ನ್ನು ಮಾಡಬಲ್ಲೆನೆಂಬ ವಿಸ್ವಾಸವಿದೆಯೆ?
ಹೌದು ಹೌದು ಖಂಡಿತ ವಿಶ್ವಾಸವಿದೆ. ನೀನು ಇನ್ನೊಮ್ಮೆ ಈ ಟಾಸ್ಕನ್ನು ಯಶಸ್ವಿಯಾಗಿ ಮಾಡಬಲ್ಲೆ ಎಂದು ಏರು ಧನಿಯಿಂದ ಚೀರಿ ಚೀರಿ ಎಲ್ಲ ಜನರು ಹೇಳುತ್ತಾರೆ.

ಫೋಟೋ ಕೃಪೆ : google
ಆಗ ಆ ಕಲಾವಿದ “ಹಾಗಾದರೆ ನಿಮ್ಮೊಳಗೆ ಯಾರಾದರೂ ಒಬ್ಬರು ನಿಮ್ಮ ಮಗುವನ್ನು ನನಗೆ ಕೊಡಿ. ಆ ಮಗುವನ್ನು ನನ್ನ ಹೆಗಲ ಮೇಲೆ ಹೊತ್ತುಕೊಂಡು ಈ ಟಾಸ್ಕನ್ನು ಇನ್ನೊಮ್ಮೆ ನಿರ್ವಹಿಸುತ್ತೇನೆ” ಎನ್ನುತ್ತಾನೆ.
ಆ ನೆರೆದ ಜನ ಒಮ್ಮೆಲೆ ಸ್ಥಬ್ಧರಾಗುತ್ತಾರೆ. ಯಾರೂ ತಮ್ಮ ಮಗುವನ್ನು ಕೊಡಲು ಮುಂದೆ ಬರುವುದಿಲ್ಲ. ಹಿಂಜರಿಯುತ್ತಾರೆ.
ಆಗ ಕಲಾಕಾರ ನಕ್ಕು ಹೇಳುತ್ತಾನೆ. ನಾನು ತಮಾಷೆಗೆ ಹೇಳಿದೆ. ಹೆದರಿಕೊಂಡಿರಾ? ಈಗ ತಾನೆ ನೀವೇ ಪೂರ್ಣ ವಿಶ್ವಾಸದಿಂದ ಹೇಳಿದಿರಿ, ನಾನು ಇದನ್ನು ಇನ್ನೊಮ್ಮೆ ಮಾಡಬಲ್ಲೆನೆಂದು?
ಇದು ಕೇವಲ ನಿಮ್ಮ ಮೇಲಿನ “ನಿಮ್ಮ ವಿಶ್ವಾಸ” ಈ ಟಾಸ್ಕ್ ನ್ನು ನಾನು ಇನ್ನೊಮ್ಮೆ ಮಾಡಬಲ್ಲೆನೆಂದು. ಆದರೆ ನಿಮಗೆ ನನ್ನ ಮೇಲೆ ವಿಶ್ವಾಸವಿಲ್ಲ. ನನ್ನ ಮೇಲೆ ವಿಶ್ವಾಸವಿದ್ದಿದ್ದರೆ ನಿಮ್ಮ ಮಗುವನ್ನು ಕೊಡುತ್ತಿದ್ದಿರಿ.
ಇಲ್ಲಿ ಎರಡರಲ್ಲಿಯು ವ್ಯತ್ಯಾಸವಿದೆ. ಕೇವಲ ವಿಶ್ವಾಸವಿಡುವುದಕ್ಕೂ, ಸಂಪೂರ್ಣ ಭರವಸೆ ಇಡುವುದಕ್ಕೂ ವ್ಯತ್ಯಾಸ ಖಂಡಿತ ಇದೆ. ಕಲಾವಿದ ತನ್ನ ಮಗುವನ್ನು ಹೊತ್ತು ಹಗ್ಗದ ಮೇಲೆ ನಡೆವಾಗ ಅವನ ಮೇಲೆ ವಿಶ್ವಾಸವಿತ್ತು. ಆದರೆ ತಮ್ಮ ಮಗುವನ್ನು ಕೊಡು ಎಂದಾಗ ಅವನ ಮೇಲೆ ಭರವಸೆ ಹೊಯ್ತು.
ಒಂದು ಪುಟ್ಟ ಮಗುವನ್ನು ತಂದೆ ತಾಯಿಗಳು ಗಾಳಿಯಲ್ಲಿ ಹಾರಿಸಿದಾಗ ಆ ಮಗು ಹೆದರುವುದಿಲ್ಲ, ಸಂತೋಷಗೊಳ್ಳುತ್ತದೆ. ಏಕೆಂದರೆ ಆ ಮಗುವಿಗೆ ಸಂಪೂರ್ಣ ಭರವಸೆ ಇರುತ್ತದೆ. ಯಾವುದೇ ಕಾರಣಕ್ಕೂ ತನ್ನನ್ನು ತನ್ನ ತಂದೆ ತಾಯಿಗಳು ಖಂಡಿತ ಬೀಳಲು ಬಿಡುವುದಿಲ್ಲವೆಂದು.
ಹಾಗೆಯೇ ನಾವು ನಮ್ಮ ಜೀವನದಲ್ಲಿ ಎಲ್ಲರನ್ನೂ ನಂಬಲು ಆಗದು. ಆದರೆ ಯಾರನ್ನೂ ನಂಬುತ್ತೇವೆಯೊ, ಯಾರನ್ನು ಒಪ್ಪುತ್ತೇವೆಯೊ ಅವರಲ್ಲಿ ಸಂಪೂರ್ಣ ಭರವಸೆ ಇಡಬೇಕು, ಸಂಪೂರ್ಣ ಭರವಸೆಯಿಂದ ನೋಡಬೇಕು. ಆಗಲೇ ಬದುಕಿನ ಸಂಬಂಧಗಳ ಇನ್ನೊಂದು ಸುಂದರ ಮಗ್ಗಲು ಆ ಸಂಪೂರ್ಣ ಭರವಸೆಯಲ್ಲಿ ಕಾಣ ಸಿಗುತ್ತದೆ.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಡಾ. ರಾಜಶೇಖರ ನಾಗೂರ
