ತಂದೆಗೆ ಮತ್ತೆ ವರ್ಗಾವಣೆಯಾಗಿ ಅವನು ನಮ್ಮೂರಿಂದ ತಮ್ಮೂರಿನ ಕಡೆಗೆ ಹೋದರು. ಮೊಬೈಲ್ ಕೂಡ ಇಲ್ಲದ ಆ ಕಾಲವದು ಮತ್ತು ಆ ವಯಸ್ಸಿನಲ್ಲಿ ವಿಳಾಸವನ್ನು ಕೇಳಿ ಪಡೆಯದ ಮುಗ್ದತೆ ನಮ್ಮಲ್ಲಿತ್ತು. ಹೀಗಾಗಿ ಅವನು ಹೋದ ಮೇಲೆ ಎಲ್ಲಿ ಹೋದ, ಹೇಗಿದ್ದಾನೆ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು. ಮುಂದೇನಾಯಿತು ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…
“ಸವಿ ಸವಿ ನೆನಪು ಸಾವಿರ ನೆನಪು, ಸಾವಿರ ಕಾಲಕೂ ಸವೆಯದ ನೆನಪು..” ಆ ಹಾಡನ್ನು ಕೇಳುವಾಗ ಬರುವ ಬಾಲ್ಯದ ನೆನಪಿನ ಸುರುಳಿಯಿಂದ ಆ ಒಂದು ನೆನಪು ಅಚ್ಚಳಿಯದೆ ಹೆಪ್ಪುಗಟ್ಟಿದೆ.
ಬಾಲ್ಯದಲ್ಲಿ ನನಗೊಬ್ಬ ಸ್ನೇಹಿತನಿದ್ದ. ಅವನು ತನ್ನ ತಂದೆಯ ವರ್ಗಾವಣೆಯಿಂದ ನಮ್ಮೂರಿಗೆ ಬಂದಿದ್ದ. ಸುಮಾರು ವರ್ಷಗಳ ಕಾಲ ಅವನು ಮತ್ತು ನಾನು ಜೊತೆಗೆ ಓದುವುದು, ಆಡುವುದು ಚೇಷ್ಟೆ ಮಾಡುವುದು ಹೀಗೆ ತುಂಬಾ ಆತ್ಮೀಯವಾಗಿ ಬೆಳೆದು ಗೆಳೆಯರಾದೆವು. ಅವನ ತಂದೆ ತಾಯಿ ನನ್ನ ಮೇಲೆ ತುಂಬಾ ಪ್ರೀತಿ ವಾತ್ಸ್ಯಲ್ಯ ಹೊಂದಿದ್ದರು.
ಬೇಸಿಗೆ ರಜೆಯಲ್ಲಿ ಅವನು ಶಿರಸಿ ಹತ್ತಿರದ ತನ್ನ ಊರಿಗೆ ನನ್ನನು ಬಾ ಎಂದು ಕರೆಯುತ್ತಿದ್ದನು. ನಮ್ಮೂರಲ್ಲಿ ದಟ್ಟ ಕಾಡು ಇದೆ. ಆನೆಗಳ ಹಿಂಡು ಬರುತ್ತವೆ. ಕೆರೆಗಳಲ್ಲಿ ತಾವರೆಗಳು ಇರುತ್ತವೆ. ನೀನು ಬಾ ಎಂದು ಒತ್ತಾಯಿಸುತ್ತಿದ್ದ. ಬಿಸಿಲ ನಾಡು ಬಿಜಾಪುರದಲ್ಲಿದ್ದ ನನಗೆ ಕಾಡು ಮೇಡು ಅದೊಂದು ಕೌತುಕವಾಗಿತ್ತು. ನೋಡಲು ಅವನೂರಿಗೆ ಹೋಗಬೇಕು ಎಂದೆನಿಸಿತ್ತು. ಆದರೆ ಕೊನೆಗೂ ಹೊಗಲಾಗಲೇ ಇಲ್ಲ.

ಮುಂದೆ ಅವನ ತಂದೆಗೆ ಮತ್ತೆ ವರ್ಗಾವಣೆಯಾಗಿ ಅವನು ನಮ್ಮೂರಿಂದ ತಮ್ಮೂರಿನ ಕಡೆಗೆ ಹೋದರು. ಮೊಬೈಲ್ ಕೂಡ ಇಲ್ಲದ ಆ ಕಾಲವದು ಮತ್ತು ಆ ವಯಸ್ಸಿನಲ್ಲಿ ವಿಳಾಸವನ್ನು ಕೇಳಿ ಪಡೆಯದ ಮುಗ್ದತೆ ನಮ್ಮಲ್ಲಿತ್ತು. ಹೀಗಾಗಿ ಅವನು ಹೋದ ಮೇಲೆ ಎಲ್ಲಿ ಹೋದ, ಹೇಗಿದ್ದಾನೆ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು.
13 ವರ್ಷಗಳ ನಂತರ ನನಗೆ ಒಂದು ಕರೆ ಬಂತು. ಆ ಕರೆ ನನ್ನ ಮಿತ್ರನ ತಂದೆಯದ್ದಾಗಿತ್ತು. ಕಳೆದುಹೋದ ಸ್ನೇಹಿತನ ವಿಳಾಸ 13 ವರ್ಷಗಳ ನಂತರ ಸಿಕ್ಕಂತಾಯಿತು. ತುಂಬಾ ಖುಷಿಯಾಯಿತು. ಆ ಮಧ್ಯದಲ್ಲಿ ಅವನು ಕೂಡ ಆಯುರ್ವೇದಿಕ್ ಮುಗಿಸಿ ವೈದ್ಯನಾಗಿ ಸರ್ಕಾರಿ ಸೇವೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಇದ್ದ. ಹಾಗೆಯೇ ಶಿರಸಿ ನಗರದ ಪ್ರತಿಷ್ಠಿತ ನರ್ಸಿಂಗ್ ಹೋಂನಲ್ಲಿ ರಾತ್ರಿ ಡ್ಯೂಟಿಯ ವೈದ್ಯನಾಗಿ ಕೆಲಸ ನಿರ್ವಹಿಸುತ್ತಿದ್ದನೆಂದು ತಿಳಿಯಿತು.
ಹೀಗೆ ಕಳೆದುಹೋದ ಸ್ನೇಹಿತ ಮತ್ತೆ ಸಿಕ್ಕೇ ಬಿಟ್ಟ ಎನ್ನುವುದರೊಳಗೆ ಸ್ವಲ್ಪ ದಿನಗಳ ನಂತರ ಅವನ ತಂದೆಯಿಂದ ಮತ್ತೆ ಮೊಬೈಲ್ ಕರೆ ಬಂತು. ಪ್ರದೀಪನಿಗೆ ಆರೋಗ್ಯ ಸಮಸ್ಯೆಯಾಗಿದೆ ಹುಬ್ಬಳ್ಳಿ ಆಸ್ಪತ್ರೆಗೆ ಬರುತ್ತಿದ್ದೇವೆ ಎಂದು ತಿಳಿಸಿದರು. ಹುಬ್ಬಳ್ಳಿಯ ಅಂದಿನ ಲೈಫ್ ಲೈನ್ ಆಸ್ಪತ್ರೆಗೆ ಅವನನ್ನು ತಂದು ಅಡ್ಮಿಟ್ ಮಾಡಿ ನನಗೆ ತಿಳಿಸಿದರು. ನಾನು ಅವರನ್ನು ಭೇಟಿಯಾಗಿ ಅಲ್ಲಿಯ ವೈದ್ಯರಿಂದ ವಿಷಯ ತಿಳಿದಾಗ ಮಿದುಳಲ್ಲಿ Blood clots ಆಗಿ Cerebral infarction ನಿಂದ ನನ್ನ ಸ್ನೇಹಿತ ಕೋಮಾದಲ್ಲಿದ್ದ.
ಅಲ್ಲಿಯೇ ಹತ್ತಿರದಲ್ಲಿ ಮನೆಮಾಡಿಕೊಂಡಿರುವ ನಾನು ಅವನ ತಂದೆ ತಾಯಿಯನ್ನು ನನ್ನ ಮನೆಗೆ ಬಂದು ಇರಲು ತಿಳಿಸಿದೆ. ಅವರು ಬರಲು ನಿರಾಕರಿಸಿದರು. ಆಮೇಲೆ ಸತತ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಅವರು ಕಾಯ್ದು ಕಾಯ್ದು ಸಾಕಾಗಿ ಕೊನೆಗೆ ನನಗೆ ಫೋನ್ ಮಾಡಿ ಬಂದು ಕರೆದುಕೊಂಡು ಹೋಗಲು ತಿಳಿಸಿದರು. ಈ ಕೋಮಾ ಎನ್ನುವುದೇ ಹೀಗೆ ಆ ಸ್ಥಿತಿಯಿಂದ ನೈಜ ಸ್ಥಿತಿಗೆ ಯಾವಾಗ ಮರಳುತ್ತಾರೆ ಎಂಬುದು ಯಾರಿಗೂ ತಿಳಿಯದು. ಹೀಗಾಗಿ ನಾನು ಅವರಿಗೆ ಮೊದಲೇ ನನ್ನ ಮನೆಗೆ ಬರಲು ತಿಳಿಸಿದ್ದೆ. ಮುಂದೆ ಅವನ ತಂದೆ ತಾಯಿಗಳು ನನ್ನ ಮನೆಯಲ್ಲಿ ಉಳಿದರು. ಪ್ರತಿದಿನ ಆಸ್ಪತ್ರೆಗೆ ಹೋಗಿ ಅವನ ಔಷಧೋಪಚಾರಗಳನ್ನು ಆಸ್ಪತ್ರೆಯ ಸಿಬ್ಬಂದಿಗೆ ವಹಿಸಿಕೊಟ್ಟು ಅವನನ್ನು ಸಾಯಂಕಾಲದವರೆಗೆ ನೋಡಿಕೊಂಡು ಯಾರಾದರೂ ಅತಿಥಿಗಳು ಅವನನ್ನು ನೋಡಲು ಬಂದರೆ ಅವರನ್ನು ಕರೆದುಕೊಂಡು ಅವನನ್ನು ತೋರಿಸಿ ಮರಳಿ ಬರುವ ಜವಾಬ್ದಾರಿ ನನ್ನ ಮೇಲೆ ಬಿತ್ತು.
ಈ ಮಧ್ಯದಲ್ಲಿ ಆಗಾಗ ಕೋಮಾದಲ್ಲಿರುವ ಅವನನ್ನು ನಗರದ ಮಧ್ಯಭಾಗದಲ್ಲಿರುವ ಬೇರೆ ಬೇರೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ತೆಗೆದುಕೊಂಡು ಅಂಬುಲೆನ್ಸ್ ನಲ್ಲಿ ಒಬ್ಬನೆ ಹೋಗುವ ಜವಾಬ್ದಾರಿಯೂ ನನ್ನೊಬ್ಬನ ಮೇಲೆ ಇತ್ತು. ನನ್ನ ತಂದೆ ತಾಯಿಗಳ ಸರಿಸಮಾನರೆಂದು ತಿಳಿದಿದ್ದರಿಂದ ಎಲ್ಲವನ್ನು ನಾನು ಮನಸಾಪೂರ್ವಕವಾಗಿ ನಿರ್ವಹಿಸುತ್ತಿದ್ದೆ. ಹೀಗೆಯೇ ಸುಮಾರು 18 ದಿನಗಳ ಕಾಲ ನಾನು ಅವನನ್ನು ಆ ಕೋಮ ಸ್ಥಿತಿಯಲ್ಲಿರುವಾಗಲೇ ನೋಡಿಕೊಳ್ಳುವ ಪ್ರಸಂಗ ಬಂದೊದಗಿತ್ತು.

ಫೋಟೋ ಕೃಪೆ : google
ಕೊನೆಗೆ ಒಂದು ದಿನ ಸಾಯಾಂಕಾಲ 5.30 ರ ಸಮಯದಲ್ಲಿ, ವೈದ್ಯರು ನನ್ನನ್ನು ಒಳ ಕರೆದು ನಿನ್ನ ಸ್ನೇಹಿತ ಇನ್ನಿಲ್ಲ. ಆಸ್ಪತ್ರೆಯ ಬಾಕಿ fees ವ್ಯವಸ್ಥೆ ಮಾಡಿ ದೇಹವನ್ನು ತೆಗೆದುಕೊಂಡು ಹೋಗಲು ಸೂಚಿಸಿದರು. ನನಗೆ ಬರ ಸಿಡಿಲು ಬಡಿದಂತಾಯಿತು. ಸ್ನೇಹಿತನ ಮರಣವನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಯಿತು ಅಲ್ಲದೆ ಅವರ ತಂದೆತಾಯಿಗಳು ನನ್ನ ಮನೆಯಲ್ಲಿ ಇರುವುದರಿಂದ ಆ ವಿಷಯವನ್ನು ಅವರಿಗೆ ತಲುಪಿಸುವುದು ಹೇಗೆಂಬ ಚಿಂತೆ ನನ್ನದಾಯ್ತು. ಅನಿವಾರ್ಯವಾಗಿ ಅಳುತ್ತಲೇ ಓಡಿಬಂದು ಅವರ ತಂದೆತಾಯಿಗಳಿಗೆ ವಿಷಯ ತಿಳಿಸಿದಾಗ ಅವರ ಆಕ್ರಂದನ ಮುಗಿಲು ಮುಟ್ಟಿತು.
ಆಗಲೇ ಸಾಯಂಕಾಲವಾಗಿದ್ದರಿಂದ ಅವನ ದೇಹವನ್ನು ಅವರ ಸ್ವಂತ ಹಳ್ಳಿಗೆ ತೆಗೆದುಕೊಂಡು ಹೋಗುವುದು ತಡರಾತ್ರಿಯಾಗುತ್ತಿತ್ತು. ಹೀಗಾಗಿ ರಾತ್ರಿ ಅವನ ಅಂತ್ಯಸಂಸ್ಕಾರಕ್ಕೆ ಹಳ್ಳಿಯಲ್ಲಿ ಕಷ್ಟವಾಗುವುದರಿಂದ, ಮೃತ ದೇಹವನ್ನು ಬೆಳಿಗ್ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿ, ದೇಹವನ್ನು ಶವಾಗಾರದಲ್ಲಿ ಇರಿಸುವ ಜವಾಬ್ದಾರಿಯನ್ನು ಕೂಡ ಮಗನಂತೆ ಭಾವಿಸಿದ್ದ ನನಗೆ ಅವರು ವಹಿಸಿದರು.
ಅವನ ಮೃತದೇಹವನ್ನು ಆ ರಾತ್ರಿ ಯಾವುದಾದರೊಂದು ಶವಾಗಾರದಲ್ಲಿ ಇರಿಸುವ ಏರ್ಪಾಡು ಮಾಡಲು ಮತ್ತೆ ನಾನು ಆಸ್ಪತ್ರೆಗೆ ಬಂದು ಅದೇ ವೈದ್ಯರನ್ನು ಸಂಪರ್ಕಿಸಿ ಚನ್ನಮ್ಮ circle ಬಳಿಯ ಕೆಎಲ್ಇ ಆಸ್ಪತ್ರೆಯ ಒಂದು ಶವಾಗಾರ ಲಭ್ಯವಿತ್ತು. ಅಲ್ಲಿರಿಸಿ ಬೆಳಿಗ್ಗೆ ತೆಗೆದು ಕೊಂಡು ಹೋಗಲು ಒಂದು ವಾಹನ ಏರ್ಪಾಡು ಮಾಡಿದೆ. ಅವನ ಚಿಕ್ಕಪ್ಪ ಒಬ್ಬರೂ ನನ್ನೊಡನೆ ಉಳಿದರು. ಅವನ ತಂದೆ ತಾಯಿಗಳು ತಮ್ಮ ಹಳ್ಳಿಗೆ ಮುಂದಿನ ಏರ್ಪಾಡು ಮಾಡಲು ಅದೆ ರಾತ್ರಿ ತೆರಳಿ ಬಿಟ್ಟರು.
ಮರುದಿನ ಬೆಳಿಗ್ಗೆ ನಾನು ಮತ್ತು ನನ್ನ ಸ್ನೇಹಿತನ ಚಿಕ್ಕಪ್ಪ ಸೇರಿಕೊಂಡು ಈಗಾಗಲೇ ಮುಗಿಸಿರುವ ವಾಹನದೊಂದಿಗೆ ಶವಾಗಾರಕ್ಕೆ ಹೋಗಿ ಅವನ ಶವವನ್ನು ಮರು ಪಡೆದು ಅಲ್ಲಿಂದ ಅವನ ಊರಿಗೆ ಪ್ರಯಾಣವನ್ನು ಬೆಳೆಸಿದೆವು.
ಮೊದಲ ಬಾರಿ ನಾನು ಅವನ ಊರಿಗೆ ಅವನ ದೇಹವನ್ನೇ ತೆಗೆದುಕೊಂಡು ಹೋಗುವಂತಾಯಿತು. ಚಿಕ್ಕವನಿರುವಾಗ ಊರಿಗೆ ಬಾ ಊರಿಗೆ ಬಾ ಎಂದು ಕರೆಯುತ್ತಿದ್ದ ಸ್ನೇಹಿತನ ಮೃತದೇಹವನ್ನು ತೆಗೆದುಕೊಂಡು ಅದೇ ಊರಿಗೆ ಹದಿಮೂರು ವರ್ಷಗಳ ನಂತರ ತೆರಳಿದ ಪ್ರಸಂಗ ನನಗೆ ಬಂತು. ಅವನದೇ ಮೃತದೇಹವನ್ನು ಅವನದೇ ಊರಿಗೆ ತೆಗೆದುಕೊಂಡು ಹೋಗಿ ಅವನೇ ಚಿಕ್ಕವನಿರುವಾಗ ಹೇಳುತ್ತಿದ್ದ ಅದೇ ಕಾಡಿನ ಮಧ್ಯೆ ಶವ ಸಂಸ್ಕಾರವನ್ನು ಮಾಡುವಾಗ “ರಾಜ್ ನೋಡು ಇದೇ ನಮ್ಮೂರ ಕಾಡು..” ಎಂದು ಅವನೇ ಹೇಳುವಂತಿತ್ತು. ಕಣ್ಣಿರಿನ ಕೋಡಿ ಹರಿದುಹೋಯಿತು. ಅದೆಷ್ಟು ದಿನಗಳ ನಂತರ ಸ್ನೇಹಿತ ಸಿಕ್ಕರೂ ಅವನನ್ನು ಮಾತಾಡಿಸಲು ಆಗದೆ ಶವವಾಗಿ ನೋಡಿದಂತಾಯಿತು.
ಅದಾವ ಜನ್ಮದ ಋಣವಿತ್ತೊ ಅವನನ್ನು ಹದಿನೈದು ದಿನ ಆಸ್ಪತ್ರೆಯಲ್ಲಿ ನಾನು ಕೊನೆಯಬಾರಿ ನೋಡಿಕೊಂಡೆ. ಅವನಾರೋ ನಾನಾರೋ ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಎನ್ನುವ ಸಂಬಂಧ. ಜೀವ ಮಾನದ ಎಂದೆಂದೂ ಅಳಿಯದ ನೆನಪಾಗಿ ಉಳಿಯಿತು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :
- ನೀ ನನ್ನ ಮನ್ನಿಸು
- ನಿನ್ನ ನೀನು ಮರೆತರೇನು..!
- ಸಂಯುಕ್ತ ಪ್ರಗತಿಯ ಪರಿಣಾಮ
- ನೀವು ಕನಸು ಕಾಣುವವರೆ..!
- ಅಂತರಾಳದ ಮಾತು
- ಮನಸ್ಸೆಂಬ ಮನೆ
- ‘ಸೋಲೇ ಗೆಲುವಿನ ಸೋಪಾನ’
- ಬದುಕಿನಲ್ಲಿ ‘ಬದುಕಿ’ ನಲಿ
- ಕ್ಷಮಿಸುವ ಬ್ಯೂಟಿಫುಲ್ ಮನಸುಗಳು
- ಬದುಕುವ ಗತ್ತು
- ಹೀಯಾಳಿಸದಿರು ಮನವೆ!!
- ‘ಸಾವು ಬದುಕಲು ಕಲಿಸುತ್ತದೆ’
- ಪ್ರೇಮ ಭಕ್ತಿಯಾಗುವುದು ಯಾವಾಗ !
- ಇರುವಾಗ ಎಲ್ಲಾ ನೆಂಟರು, ಇರದಾಗ ಯಾರೂ ಇಲ್ಲಾ…
- ಬರಿ ವಿಶ್ವಾಸ Vs ಸಂಪೂರ್ಣ ಭರವಸೆ
- ‘ರಾಮರಾಜ್ಯ’ ವೆಂದರೆ…!
- ಋಣಾನುಬಂಧ
- ಕಷ್ಟದಲ್ಲಿಯೂ ಇಷ್ಟದ ಬದುಕು
- ರತನ್ ಮತ್ತು ಟೀಟು
- ನಿಗರ್ವಿ ಹನುಮ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ವಚನಕ್ಕೊಂದು ಕಥೆ
- ಎಂದೆಂದೂ ಮರೆಯದ ವ್ಯಕ್ತಿತ್ವ ಡಾ.ಅಬ್ದುಲ್ ಕಲಾಮ್
- ಭಾವನಾ ದ್ರವ್ಯ
- ಜೀವನದಲ್ಲಿ ಯಾರು ತೃಪ್ತರು
- ಕಣ್ಣೊಳಗಿನ ಮೊದಲ ದೃಷ್ಟಿಕೋನ
- ಸೋಲಿಲ್ಲದ ಸರದಾರ
- ನಾನೊಬ್ಬ ಮಾಡದಿರೆ ಏನಾದೀತು!!!
- ‘ತಾಳಿದವನು ಬೆಳೆದಾನು’
- ಮೂರೂವರೆ ನಿಮಿಷದ ಭಾಷಣ-ಎಲ್ಲೆಡೆ ತಲ್ಲಣ
- ಭೂ ತಾಯಿ
- ಅವನಂತಾಗೋಣ
- ಶಕ್ತಿಗೆ ಮಾತ್ರ ದೇಹ ದಾರ್ಡ್ಯತೆ, ಯುಕ್ತಿಗಲ್ಲ..
- ಒಳ್ಳೆಯದು ಒಳ್ಳೆಯವರನ್ನು ಸೆಳೆಯುತ್ತೆ
- ಡಾ. ರಾಜಶೇಖರ ನಾಗೂರ
