ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ

ಈ ಪುಟ್ಟ ಬಾಲಕನಿಗೆ ಆಗ 12-13 ವರ್ಷವಿರಬೇಕು. ಹೊಟ್ಟೆತುಂಬಾ ತಿನ್ನಲು ಅನ್ನವಿಲ್ಲ. ತೊಡಲು ಮೈಮೇಲೆ ಬಟ್ಟೆ ಇಲ್ಲ. ಯಾರಾದರೂ ಕೆಲಸ ಮಾಡೋಣವೆಂದರೆ ಕೆಲಸ ಕೊಡಲು ಅವನಿಗೆ ವಯಸ್ಸಾಗಿಲ್ಲ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಕ್ರಿ.ಶ 1790-1800 ರಲ್ಲಿ ಅಮೇರಿಕಾದಲ್ಲಿ ಒಬ್ಬ ಬಾಲಕನಿದ್ದ. ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ತಂದೆ ಕಮ್ಮಾರನಾಗಿದ್ದು ಮಗ ಕೂಡ ತಂದೆಗೆ ಸಹಾಯ ಮಾಡುತ್ತಿದ್ದ. ತಂದೆಯ ನಿಧನದ ನಂತರ ಅವನ ತಾಯಿ ಮತ್ತು ಅವನು ಬಡತನದ ಬೇಗೆಯಲ್ಲಿ ಬೆಂದು ಹೋದರು.

ಈ ಪುಟ್ಟ ಬಾಲಕನಿಗೆ ಆಗ 12-13 ವರ್ಷವಿರಬೇಕು. ಹೊಟ್ಟೆತುಂಬಾ ತಿನ್ನಲು ಅನ್ನವಿಲ್ಲ. ತೊಡಲು ಮೈಮೇಲೆ ಬಟ್ಟೆ ಇಲ್ಲ. ಯಾರಾದರೂ ಕೆಲಸ ಮಾಡೋಣವೆಂದರೆ ಕೆಲಸ ಕೊಡಲು ಅವನಿಗೆ ವಯಸ್ಸಾಗಿಲ್ಲ. ಬಾಲಕನ ತಾಯಿಗೆ ತನ್ನ ಪುಟ್ಟ ಮಗುವಿಗೆ ಒಂದು ತುತ್ತು ಅನ್ನ ಹಾಕುವುದು ದುಸ್ತರವಾಯಿತು. ಬಟ್ಟೆ ಬರೆಗಳನ್ನು ತರುವುದು ದೂರದ ಮಾತಾಯ್ತು. ತನಗೂ ತಿನ್ನಲು ಅನ್ನವಿಲ್ಲ. ಮಗನಿಗೂ ತಿನಿಸಲು ತಾಕತ್ತಿಲ್ಲ. ಕಣ್ಣೀರಲಿ ಕೈ ತೊಳೆಯ ತೊಡಗಿದಳು.

 

ಒಂದು ದಿನ ಹರಿದ ಬಟ್ಟೆಯನ್ನು ಹಾಕಿಕೊಂಡ ತನ್ನ ಮಗನನ್ನು ನೋಡಲಾಗದೆ, ಹಸಿವು ಹಸಿವು ಎಂದು ಅಳುತ್ತಿರುವ ತನ್ನ ಮಗನನ್ನು ನೋಡಿ ಸಹಿಸಲಾಗದೆ, ಹತ್ತಿರ ಕರೆದು “ಮಗನೇ ಒಬ್ಬ ತಾಯಿಯಾಗಿ ನಿನಗೆ ಒಂದು ಹೊತ್ತಿನ ಊಟವನ್ನು ಹಾಕದ ನತದೃಷ್ಟೆ ನಾನು. ನಿನ್ನ ಹೊಟ್ಟೆಯನ್ನು ತುಂಬಿಸಲಾಗದ ಅಸಹಾಯಕ ಹೆಣ್ಣು ನಾನು. ನೀನು ನನ್ನ ಜೊತೆ ಇದ್ದರೆ ಹಸಿವಿನಿಂದಲೇ ಸಾಯುವುದು ಖಚಿತ. ಹೀಗಾಗಿ ಎಲ್ಲಾದರೂ ದೂರ ಹೊರಟು ಹೋಗು. ನಿನ್ನ ಜೀವನವನ್ನು ರೂಪಿಸಿಕೋ. ಇಂದಿನ ದಿನ ಹೊಟ್ಟೆಗೆ ಅನ್ನವಿಲ್ಲದಿರಬಹುದು. ತೊಡಲು ಬಟ್ಟೆ ಇಲ್ಲದಿರಬಹುದು. ಮುಂದೊಂದು ದಿನ ಸಾವಿರಾರು ಜನರಿಗೆ ಊಟ ಹಾಕುವ ಯಜಮಾನನಾಗು. ಸಾವಿರಾರು ಜನರ ಬದುಕನ್ನು ಕಟ್ಟಿಕೊಡುವ ಶ್ರೀಮಂತನಾಗಿ ಬಾಳು. ನಿನ್ನ ಮುಂದಿನ ಬದುಕಿಗೆ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ಹೋಗಿ ಬದುಕ ಕಟ್ಟಿಕೊ. ಇದೋ..! ತೆಗೆದುಕೋ. ಇದು ನಿನ್ನ ತಾಯಿ ನಿನಗೆ ಕೊಡುವ ಕೊನೆಯ ಕಾಣಿಕೆ” ಎಂದು ಒಂದು ಸಣ್ಣ ಹರಿದ ಬಟ್ಟೆಯಲ್ಲಿ ಅರ್ಧ ಒಣ ಬ್ರೆಡನ್ನು ಸುತ್ತಿ ಮಗನಿಗೆ ಕೊಟ್ಟು ಅವನಿಗೆ ಮುತ್ತಿಕ್ಕಿ, ಕಣ್ಣೀರಿಡುತ್ತಾ ಕಳಿಸಿಕೊಡುತ್ತಾಳೆ.

ಆ ಬಾಲಕ ಅಲ್ಲಿಂದ ಕಂಡ ದಿಕ್ಕಿನಡೆ ಹೊರಟುನಿಂತು ಎಲ್ಲೆಂದರಲ್ಲಿ ಕೆಲಸ ಮಾಡುತ್ತಾ, ತುತ್ತು ಅನ್ನ ತಿನ್ನುತ್ತಾ, ಮುಂದೆ ಮುಂದೆ ಸಾಗುತ್ತಾನೆ. ಹೀಗೆ ಸಾಗುವಾಗ ಕಟ್ಟಿಗೆಯಿಂದ ಗೋಡೆಯ ಗಡಿಯಾರಗಳನ್ನು ತಯಾರಿಸುವ ಅಮೆರಿಕಾದ ಪ್ರಸಿದ್ಧ ವ್ಯಾಪಾರಿಯ ಹತ್ತಿರ ಬಂದು ಕೆಲಸ ಮಾಡಲು ಪ್ರಾರಂಭ ಮಾಡುತ್ತಾನೆ. ಕಟ್ಟಿಗೆಯ ಗಡಿಯಾರಗಳು ತಯಾರು ಮಾಡುವಾಗ ಮಳೆಗಾಲ ಚಳಿಗಾಲದಲ್ಲಿ ಕಟ್ಟಿಗೆಯ ಆಕಾರ ಬದಲಾಗುವ ಕಾರಣದಿಂದ ಈ ಗಡಿಯಾರಗಳನ್ನು ಮಾಡುವುದು ಕಷ್ಟಸಾಧ್ಯವಾಗುತ್ತಿತ್ತು. ಕಮ್ಮಾರನ ಮಗನಾದ ಈ ಬಾಲಕ ಈ ಸಮಸ್ಯೆಗೆ ಪರಿಹಾರವಾಗಿ ಕಟ್ಟಿಗೆಯ ಬದಲಾಗಿ ಹಿತ್ತಾಳೆಯನ್ನು ಉಪಯೋಗಿಸಿ ಗಡಿಯಾರಗಳನ್ನು ಮಾಡಿದನು.

ನಮಗೆ ನಿಮಗೆ ಗೊತ್ತಿರುವಂತೆ ಈ ಡಿಜಿಟಲ್ ಯುಗ ಪ್ರಾರಂಭವಾಗುವ ಮೊದಲು ದೊಡ್ಡ ಮುಳ್ಳಿನ ಗಡಿಯಾರಗಳನ್ನು ಶ್ರೀಮಂತರ ಮನೆಯಲ್ಲಿ ಇಟ್ಟಿರುವುದನ್ನು ನೋಡುತ್ತಿದ್ದೆವು. ಮ್ಯೂಸಿಯಂ ಗಳಲ್ಲಿ ನೋಡುತ್ತಿದ್ದೆವು. ಗೋಡೆಗೆ ಹಾಕಿರುವುದನ್ನು ನೋಡುತ್ತಿದ್ದೆವು. ಈ ಗಡಿಯಾರಗಳು ಈ ಬಾಲಕನ ಅವಿಷ್ಕಾರವಾಗಿತ್ತು.

ಈ ತಂತ್ರಗಾರಿಕೆಯನ್ನು ತಾಂತ್ರಿಕವಾಗಿ ಉಪಯೋಗಿಸಿಕೊಂಡು ತನ್ನದೇ ಸ್ವಂತ ಅಂಗಡಿಯೊಂದನ್ನು ಪ್ರಾರಂಭಿಸಿದ. ಮೊದಲಿನ ಕಟ್ಟಿಗೆಯ ಗಡಿಯಾರಗಳ ಬೆಲೆಗಳು ಅರ್ಧಕ್ಕೆ ಇಳಿದು ಹಿತ್ತಾಳೆಯ ಗಡಿಯಾರಗಳು ಸಾಮಾನ್ಯ ಮನುಷ್ಯನಿಗೆ ಲಭಿಸಲು ಪ್ರಾರಂಭಿಸಿದವು. ಋತುಗಳ ಬದಲಾವಣೆಯಿಂದ ಕಟ್ಟಿಗೆ ಗಡಿಯಾರಗಳನ್ನು ಸಾಗಿಸಲು ಸಮಸ್ಯೆಯಾಗುತ್ತಿತ್ತು. ಹಿತ್ತಾಳೆಯ ಗಡಿಯಾರಗಳು ಬಂದ ಮೇಲೆ ಎಲ್ಲಿ ಬೇಕೆಂದರಲ್ಲಿ ರಪ್ತುಮಾಡಲು ಸಹಾಯಕವಾಯಿತು. ಇವನ ಬ್ರಾಂಡ್ ಮುಂದೆ ಜಗತ್ಪ್ರಸಿದ್ಧವಾಯಿತು. ಅದುವೇ ಜಗತ್ ಪ್ರಸಿದ್ಧ ‘ಜೇರೋಮ್ ಚಾನ್ಸ್’ ಗಡಿಯಾರ ಕಂಪನಿ.

ಆ ಬಡ ಬಾಲಕನೇ ಮುಂದೆ ಅತಿ ದೊಡ್ಡ ಶ್ರೀಮಂತನಾದ. ಅವನೇ ಜೇರೋಮ್ ಚಾನ್ಸ್. ಅವನ ತಾಯಿಯ ಮಾತು ಅವನ ಕಿವಿಯಲ್ಲಿ ಯಾವತ್ತೂ ರಿಂಗಣಿಸುತ್ತಿತ್ತು. ನನಗೆ ತಿನ್ನಲು ಅನ್ನವಿಲ್ಲದಿದ್ದರೂ ಮುಂದೊಂದು ದಿನ ನಾನು ಸಾವಿರಾರು ಜನರಿಗೆ ಅನ್ನದಾತನಾಗುವೆ ಎಂಬುದು. ಸ್ನೇಹಿತರೆ ಈ ಜೀವನದ ದಾರಿಯಲ್ಲಿ ಎಲ್ಲರಿಗೂ ಕಷ್ಟಗಳು ಬಂದೇ ಬರುತ್ತವೆ. ಕೆಲವರು ಆ ಕಷ್ಟಗಳಲ್ಲಿ ಕುಸಿದು ಕುಪ್ಪಳಿಸಿ ಬಿಡುತ್ತಾರೆ. ಇನ್ನು ಕೆಲವರು ಆ ಕಷ್ಟಗಳನ್ನು ದಾಟಿ ಜರ್ಜರಿತರಾಗದೆ ಮುಂದೆ ಸಾಗುತ್ತಾರೆ.

ಬೀಳುವ ಮಳೆಯಲ್ಲಿ ಚಂಬು ಹಿಡಿದರೆ ಚಂಬು ತುಂಬುತ್ತೆ. ಬಿಂದಿಗೆ ಹಿಡಿದರೆ ಬಿಂದಿಗೆ ತುಂಬುತ್ತದೆ. ಕೆರೆ ಮಾಡಿಕೊಂಡರೆ ಕೆರೆ ತುಂಬುತ್ತದೆ. ಹೀಗೇ ಎಷ್ಟು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನಮ್ಮಲ್ಲಿದೆ ಎನ್ನುವುದರ ಮೇಲೆ ನಾವು ಪಡೆದುಕೊಳ್ಳುತ್ತೇವೆ. ಹಾಗೆಯೇ ಯಾರು ಈ ಬದುಕಿನ ಬವಣೆಗಳಿಗೆ ನಿಲ್ಲದೆ ಸಾಗುತ್ತಾರೆಯೋ ಅವರಿಗೆ ನಡೆದಷ್ಟು ದಾರಿ ಇದೆ. ಪಡೆದಷ್ಟು ಭಾಗ್ಯವಿದೆ. ಈ ಜೀವನ ಎಲ್ಲವನ್ನೂ ನಮಗೆ ಕೊಡುತ್ತದೆ. ಪಡೆಯುವ ತಾಕತ್ತು ನಮ್ಮಲ್ಲಿರಬೇಕು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW