ಅಪ್ಪನ ಶ್ರೀಶೈಲ ಯಾತ್ರೆಯ ಪ್ರವಾಸ ಕಥನ

ನೆನಪುಗಳು ಸಿಹಿಯಾಗಿಯೂ ಇರುತ್ತವೆ, ಕಹಿಯಾಗಿಯೂ ಇರುತ್ತವೆ. ಕಹಿ ಇರಲಿ, ಸಿಹಿ ಇರಲಿ ಅವು ನಮ್ಮ ಸ್ಮೃತಿ ಪಟಲಕ್ಕೆ ಬಂದು ಆಗಾಗ ತಟ್ಟುತ್ತಿರುತ್ತವೆ. ಬೇಡವೆಂದರು ಬಂದು ಅಳಿಸಿ ಹೋಗುತ್ತವೆ, ಅತ್ಯಾತ್ಮರ ಜೊತೆಗೆ ಕುಳಿತು ಮಾತಾಡುವಾಗ ಕ್ಷಣಕಾಲ ಕಚಗುಳಿಯಿಟ್ಟು ನಗಿಸಿಯೂ ಹೋಗುತ್ತವೆ. – ವಿರೂಪಾಕ್ಷ ಕೊರಗಲ್, ತಪ್ಪದೆ ಮುಂದೆ ಓದಿ… 

ನಾನೀಗ ಕೆದಕುತ್ತಿರುವ ನೆನಪು ತುಂಬಾ ಹಳೆಯ ನೆನಪು.ಅಂದರೆ ಸುಮಾರು ೮೦ ವರ್ಷ ಹಳೆಯ ನೆನಪು. ಆಗ ನನಗೆ ೪-೫ ವರ್ಷ ವಯಸ್ಸಿರಬೇಕು. ತಾಯಿ ಇಲ್ಲದ ಮಗನಾಗಿ ಅಪ್ಪನ ಆಶ್ರಯದಲ್ಲಿಯೇ ಇದ್ದು ಬೆಳೆಯುತ್ತಿದ್ದ ಕೂಸು. ಅದಕ್ಕೆ ಅಷ್ಟು ವಿದ್ಯಾವಂತನಲ್ಲದ ನನ್ನ ಅಪ್ಪನೆ ನನಗೆ ಮೊದಲ ಗುರುವು.೧೯೪೪ರಲ್ಲಿ ನನ್ನ ಅಪ್ಪ ಶ್ರೀಶೈಲ ಕ್ಷೇತ್ರ ದರ್ಶನಕ್ಕೆ ಹೋಗಿದ್ದರು.

ಶ್ರೀಶೈಲ ನಮ್ಮ ಊರು ಕೊಪ್ಪಳ ತಾಲೂಕಿನ ವದಗನಹಾಳದಿಂದ ಸುಮಾರು ಆರು ನೂರು ಕಿಲೋಮೀಟರು ಆದೀತು. ಅದು ಒಬ್ಬೊಬ್ಬರೇ ಪ್ರಯಾಣ ಮಾಡುವ ಕಾಲವಾಗಿರಲಿಲ್ಲ. ನಮ್ಮ ಊರಿನಿಂದ ಆಗ ಒಂದೇ ತಂಡದಲ್ಲಿ ೨೦ ಜನರು ಶ್ರೀಶೈಲಕ್ಕೆ ಹೋಗಿದ್ದರು. ಈ ೨೦ ಜನ ಪ್ರವಾಸಿಗರ ತಂಡವನ್ನು ನಮ್ಮ ಊರಿನ ಮಠದ ಅಯ್ಯನವರಾದ ಗವಿಯಯ್ಯನವರೇ ಮುನ್ನಡೆಸುವವರು. ಅವರು ಉಜ್ಜಯಿನಿಯಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದ್ದರಿಂದ ಬಹು ಭಾಷಾ ಪಂಡಿತರಾಗಿದ್ದರು. ಅದಕ್ಕೆ ಅವರಿಗೆ ನೆತೃತ್ವ ಲಭಿಸಿತ್ತು. ಅವರ ಖರ್ಚನ್ನು ತಂಡದ ಸದಸ್ಯರೇ ನೋಡಿಕೊಳ್ಳುವುದು,ಮತ್ತು ಅವರಿಗೆ ಪ್ರತಿ ದಿವಸ ಎರಡು ರೂಪಾಯಿ ಪಗಾರ.

ಆತ್ಮಕೂರು ವರೆಗೆ ರೈಲು ಅಲ್ಲಿಂದ ಮುಂದೆ ನಡೆದುಕೊಂಡೇ ಹೋಗುವುದು.೨೦ ಮಂದಿಯ ಕೈಯಲ್ಲಿಯೂ ಒಂದು ಬಿದಿರು ಬಡಿಗೆ, ಕಂಬಳಿ, ಹೊದಿಕೆ,ಹೆಗಲಿಗೆ ಒಂದು ಹಸಬಿ ಚೀಲ. ನಡುಪಟ್ಟಿಯ ಹಮ್ಮಿಣಿಯಲ್ಲಿ ಅವರವರ ಹಣ. ಎಲ್ಲಿ ನೀರಿನ ಹರಿವು ಇರುತ್ತದೆಯೊ ಅಲ್ಲಿ ಅನ್ನ ಬೇಯಿಸಿಕೊಂಡು ಉಣ್ಣುವುದನ್ನು ಮಾಡುತ್ತಾ ಹೋದರಂತೆ. ಎಲ್ಲಾ ೨೦ ಜನ ಸಾಲಾಗಿ ಹೋಗುವುದು, ಮುಂದೆ ಹೋಗುತ್ತಿದ್ದವನ ಹತ್ತಿರ ಒಂದು ಸೀಟಿ. ಅಕಸ್ಮಾತ ಎದುರಿಗೆ ನಾಲ್ಕಕ್ಕಿಂತ ಹೆಚ್ಚು ಜನರ ಅಪಾಯ ಕಂಡು ಬಂದರೆ ಆತ ಸೀಟಿ ಊದಿದ ಕೂಡಲೇ ಎಲ್ಲರೇ ಮುಂದೆ ಹೋಗಿ ಅಪಾಯವನ್ನು ಎದುರಿಸಿಬೇಕು. ಇದು ಅಯ್ಯನವರು ಕಲಿಸಿದ ಮೊದಲ ಪಾಠ. ಹೀಗೆ ಶ್ರೀಶೈಲ ತಲುಪಿ ಮಲ್ಲಿಕಾರ್ಜುನನ ದರ್ಶನ ಪಡೆದರಂತೆ.

ಭೀಮನಕೊಳ್ಳ ಇಳಿದು ಹತ್ತಿದರಂತೆ, ಪಾತಾಳ ಗಂಗೆಯಲ್ಲಿಳಿದು ಮಿಂದರಂತೆ. ಯಾವ ಅಪಾಯವೂ ಇಲ್ಲದೆ ಯಾತ್ರೆ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಂತೆಯೇ ಒಂದು ಅಪಾಯದ ಗಂಟೆ ಬಾರಿಸಿ ಬಿಟ್ಟಿತು.ಎಲ್ಲಾ ಕಡೆಗೆ ನೀರಿಗಂಟಿದ ರೋಗವಾದ ಕಾಲರಾ ಹಬ್ಬಿಬಿಟ್ಟಿತು. ಎಲ್ಲಿ ನೋಡಿದಲ್ಲಿ ದಾರಿ ದಾರಿಗೆ ಹೆಣ.ಹೆಣಗಳನ್ನು ಹೆತ್ತುವವರೇ ಇಲ್ಲ. ನಮ್ಮ ಊರಿನ ತಂಡದ ನೇತಾರರು ದೇಶ ಸುತ್ತಿ ಬಂದವರು.ಇಂಥ ಘಟನೆಗಳನ್ನು ಓದಿ, ಕೇಳಿ ತಿಳಿದವರು. ಅವರು ಎಂಟಾಣಿಗೆ ಒಬ್ಬ ಕೂಲಿಯನ್ನು ಗೊತ್ತು ಮಾಡಿ ರಸ್ತೆ ಬಿಟ್ಟು ಕಾಲು ಹಿಡಿದು ಹೋಗಿ ಬೆಟ್ಟ ಇಳಿಸಿ ನೀರಿನ ಪಸೆ ಇರುವ ಕಡೆಗೆ ಕರೆದುಕೊಂಡು ಹೊರಟು ಹೋಗಬೇಕೆಂದು ಹೇಳಿ ಹೊರಟರಂತೆ.ಆತ ಇವರ ಇಂಗಿತವನ್ನು ಅರಿತು ಬೆಟ್ಟ ಇಳಿಸಿ ಕೃಷ್ಣಾ ಕಣವಿಗೆ ಒಯ್ದು ತಲುಪಿಸಿದನಂತೆ. ಕೃಷ್ಣಾ ನದಿಗುಂಟಾ ಹೆಜ್ಜೆ ಹಾಕುತ್ತಾ, ಅನುಕೂಲವಿದ್ದಲ್ಲಿ ಒಲೆ ಹೂಡಿ ನೀರು ಕಾಯಿಸಿ ಕುಡಿಯುತ್ತಾ ಹೊರಟರಂತೆ.ಎಲ್ಲರಿಗೂ ಒಂದೊಂದು ಮಣ್ಣಿನ ಮಗಿಯನ್ನು ಕೊಂಡು, ನೇಣು ಬಿಗಿದ ಆ ಮಗಿಗಳಿಗೆ ಕಾಯ್ದಾರಿದ ನೀರು ತುಂಬಿ,ಎಲ್ಲಾ ೨೦ ಜನ ಹಿಮಾಲಯದ ಸಾಧುಗಳಂತೆ ಹೊರಟರಂತೆ.ರೈಲು ಹಿಡಿಯಲಿಕ್ಕೆ ಅವರು ಆತ್ಮಕೂರಿಗೆ ಹೋಗಲಿಲ್ಲ, ದೊಡ್ಡ ದಾರಿ ಹಿಡಿಯಲಿಲ್ಲ,ಸಮೀಪ ಊರು ಬಂದರೆ,ಅದನ್ನು ಸುತ್ತು ಹಾಕಿ ಹೋಗುವುದು, ಅಕ್ಕಿ,ಬೇಳೆ ಖರೀಧಿಸಲಿಕ್ಕೆ ಇಬ್ಬರು ಮಾತ್ರ ಹಳ್ಳಿಗೆ ಹೊಗುತ್ತಿದ್ದರಂತೆ.ನದಿಯ ದಂಡೆಯನ್ನೇ ಹಿಡಿದಿದ್ದುದರಿಂದ,ಎಲ್ಲಿ ಬೇಕೆಂದಲ್ಲಿ ಮೀಯುವುದು,ಬಟ್ಟೆ ಒಗೆಯುವುದು, ರಾತ್ರಿ ಕಾವಲಿಗೆ ನಾಲ್ಕು ಜನ ಬೆಂಕಿ ಹಾಕಿಕೊಂಡು ಕುಳಿತು ಬಯಲು ಶಯನ, ಆ ಕಾಲರಾ ಮಾರಿ ಕೃಷ್ಣೆಯನ್ನು ಮುಟ್ಟಿರಲಿಲ್ಲ. ಹೀಗೆ ಕಿರ್ನೂಲು ಮುಟ್ಟಲಿಕ್ಕೆ ೧೮ ದಿವಸ ಹಿಡಿಯಿತಂತೆ. ನಮ್ಮ ಊರಲ್ಲಿ ಅವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಅತ್ತು ಕರೆದು ಮಾಡಿದರು. ಆದರೆ ಆ ದೇವರ ದಯದಿಂದ ಅಲ್ಲಾ ಜೊತೆಗೆ ಕರೆದುಕೊಂಡು ಹೋಗಿದ್ದ ಆ ಮಾರ್ಗದರ್ಶಕ ಗವಿಯಯ್ಯ ಸ್ವಾಮಿಯೇ ಅವರನ್ನೆಲ್ಲಾ ಬದುಕಿಸಿಕೊಂಡು ಊರು ತಲುಪಿಸಿದ್ದ. ಈ ಗವಿಯಯ್ಯನವರೇ ನನಗೆ ಕನ್ನಡ ಕಲಿಸಿದ ಗುರು ಸಾರ್ವಭೌಮ.

ನಾನು ಆವಾಗ ಅಕ್ಷರ ಅರಿವಿಲ್ಲದವನಾಗಿದ್ದೆ. ಆದರೂ ನಮ್ಮ ಅಪ್ಪ ಎರಡು ಹಾಳೆಗಳನ್ನು ಮಡಚಿ ೩*೪ ಇಂಚಿನ ಒಂದು ಓವಿಯನ್ನು ತಯಾರು ಮಾಡಿ ಅದರಲ್ಲಿ ಈ ಪ್ರವಾಸ ಕಥನವನ್ನು ಚಿತ್ರಿಸಿಕೊಂಡು ಬಂದಿದ್ದ. ರಾತ್ರಿ ನಮ್ಮ ಎತ್ತಿನ ಮನೆಯ ಬಂಕದಲ್ಲಿ ಗುಡಿಹಿಂದ್ಲ ಶಿವಲಿಂಗಪ್ಪ, ಬೆದಟ್ಟಿ ಸಿದ್ದಪ್ಪ, ತೆಳಗಿನಮನಿ ನಿಂಗಪ್ಪ, ಪಿಂಜಾರ ಮರದಾನಸಾಬು, ಮಾಲ್ಮಿ ಸಂಕಪ್ಪ, ಇವರೆಲ್ಲರ ಮುಂದೆ ಈ ಪ್ರವಾಸ ಕಥನದ ಪ್ರವಚನ ನಡೆಯುತ್ತಿತ್ತು.ಈ ಪ್ರವಾಸ ಕಥನದ ೩*೪ರ ಓವಿ ಇತ್ತೀಚಿನ ವರೆಗೆ ನನ್ನ ಹತ್ತಿರ ಇತ್ತು. ಅದನ್ನು ನಾನು ನೂರಾರು ಸಲ ಓದಿದ್ದೆ. ಈಗಲೂ ಹುಡುಕಿದರೆ ಸಿಕ್ಕೀತು. ಅದು ಸಿಕ್ಕರೆ ನಮ್ಮ ತಂದೆಯ ಆ ಬೃಹದಾಕಾರದ ಅವರ ಸುವರ್ಣಾಕ್ಷರಗಳನ್ನೂ ನಿಮಗೆ ತೋರಿಸಿ ಖುಷಿಯನ್ನು ಹಂಚಿಕೊಳ್ಳುತ್ತೇನೆ.


  • ವಿರೂಪಾಕ್ಷ ಕೊರಗಲ್ – ನಿವೃತ್ತ ಗಣಿತ ಪ್ರಾಧ್ಯಾಪಕರು, ಲೇಖಕರು, ಸಾಹಿತಿಗಳು, ಹಾವೇರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW