ಎಷ್ಟೇ ಕಷ್ಟ ಬಂದರು ಸೋಮಾರಿಯಾಗಬಾರದು. ಅಪ್ಪ ಅಮ್ಮನ ದಾರಿಯಲ್ಲಿಯೇ ಮಕ್ಕಳು ನಡೆಯುತ್ತಾರೆ,ಹಾಗಾಗಿ ಅಪ್ಪ ಅಮ್ಮನು ಜಾಗೂರಕರಾಗಿ ನಡೆಯಬೇಕು ಹರಿಹರ ಬಿ ಆರ್ ಅವರ ಜೀವನಕ್ಕೊಂದು ಕತೆ ತಪ್ಪದೆ ಮುಂದೆ ಓದಿ…
ಮಕ್ಕಳಿಗೆ ಬೇಸಿಗೆಯ ರಜೆ ಇದ್ದುದ್ದರಿಂದ ದಂಪತಿಗಳಿಬ್ಬರು ತಿಂಗಳ ರಜೆ ಹಾಕಿ ಸಂಸಾರ ಸಮೇತರಾಗಿ ಹಳ್ಳಿಗೆ ಹೋದರು. ಆದರೆ ಹೋದ ಐದು ದಿನದಲ್ಲೇ ರೂಪಾ ತನ್ನ ಕಚೇರಿಯಲ್ಲಿ ತುರ್ತಾದ ಕೆಲಸದ ನಿಮಿತ್ತ ನಗರಕ್ಕೆ ಹೋಗಲೇಬೇಕಿತ್ತು. ಕೆಲಸ ಪೂರೈಸಿ ಮತ್ತೆ ಹಳ್ಳಿಗೆ ಹಿಂತಿರುಗಿದವಳೇ ತನ್ನ ಗಂಡನಿಗೆ ಕರೆ ಮಾಡಿ ಬಸ್ ನಿಲ್ದಾಣದಿಂದ ಮನೆಗೆ ಕರೆದುಕೊಂಡು ಹೋಗಲು ತಿಳಿಸಿದಳು.
ಯಮಾಹ ಫ್ಯಾಸಿನೋ ಬಂತು, ಆದರೆ ಸಣಕಲು ದೇಹದ ವ್ಯಕ್ತಿ ಬೇಕಂತಲೇ “ಅವ್ವಾ ರೂಪಾ ಅವರು ನೀವೇನಾ? ಕೂತ್ಕೊಳ್ಳಿ. ರವಿ ಬುದ್ಧಿಯವರು ಕಳಿಸವ್ರೇ…” ಎಂದು ಹೇಳಿದರು.
ಅವರ ಮಾತನ್ನು ಕೇಳಿಸಿಕೊಳ್ಳುತ್ತಾ ತನ್ನಲ್ಲೇ ‘ಗಾಡಿ ಏನೋ ನಮ್ಮದೇ ಇವರ ಮಾತನ್ನ ನಂಬಬಹುದು. ಆದರೆ ಅವರು ಒಂದು ಕರೆ ಮಾಡಿದರೆ ಬರಕ್ಕಾಗಲ್ವಾ? ಕೊಬ್ಬು ಜಾಸ್ತಿ. ಏನೂ ಬದಲಾಗೇ ಇಲ್ವಾ? ಅಪ್ಪ ಏನೋ ದೊಡ್ಡದಾಗಿ ಹೇಳಿಬಿಟ್ಟರು ‘ಹೇಳಿದ್ದೆಲ್ಲ ಕೇಳ್ತಾರೆ’ ಅಂತ. ಸುಮ್ಮನೇನಾ? ಅವರು ಯಾಕೆ ಯಾರ್ಯಾರನ್ನೋ ಕಳಿಸ್ತಾರೆ?’
“ಅವ್ವಾ ಏನು ಯೋಚಿಸ್ತೀರಿ?… ಬರ್ತೀರಾ ಇಲ್ಲ ನಾ ಹೋಗಲಾ?” ಎಂದು ಕೇಳಿದರು.
ರೂಪಾ ಅದೇ ಯೋಚನೆಯಲ್ಲಿ ಅವರು ಗಾಡಿ ಹತ್ತಿದಳು. ಮನೆ ಹತ್ತಿರ ಬಂದು ಗಾಡಿ ನಿಲ್ಲಿಸಿದರೂ ಹಾಗೇ ಕುಳಿತೇ ಇದ್ದಳು. “ಅವ್ವಾ ನಿಮ್ಮನೆ ಬಂತವ್ವಾ ಇಳ್ಕೊಳ್ಳಿ. ಮನೆ ಎಂಗೈತೋ ಅಂಗೇ ಐತೆ” ಎಂದು ನುಡಿದರು.
ರೂಪಾ ಅವಮಾನವಾದಂತೆ ಕೋಪದಿಂದ ದುಡು ದುಡು ನಡೆದು ಮನೆಯೊಳಗಡಿಯಿರಿಸಿ, ತನ್ನ ವಸ್ತ್ರ ಬದಲಿಸಿ, ಕೈಕಾಲು ತೊಳೆದವಳೇ ಅಭ್ಯಾಸದಂತೆ ಕಾಫಿಗಾಗಿ ಅಡುಗೆ ಮನೆಯೊಳಗೆ ಹೋದಳು. ಒಂದು ತಟ್ಟೆಯಲ್ಲಿ ಎಂಟು ಲೋಟ ಕಾಫಿಯೊಂದಿಗೆ ಆಚೆ ಬಂದು ಎಲ್ಲರಿಗೂ ಕೊಟ್ಟಳು. ಕೊನೆಯಲ್ಲಿದ್ದ ತನ್ನನ್ನು ಕರೆದುಕೊಂಡು ಬಂದ ವ್ಯಕ್ತಿಗೆ ಕೊಟ್ಟು, ನಂತರ ತನ್ನ ಗಂಡನನ್ನು “ರೀ ಎಲ್ಲಿದೀರಾ? ಇವರು ಏನು ಜನಾನೋ ಬೇಸರವಾಗತ್ತಪ್ಪಾ. ಯಾವಾಗಲೂ ಜಂಗಮ ಹಿಡಕೊಂಡು ಕೂತಿರೋ ಹಂಗೆ ಕೂತು ಬಿಟ್ಟಿದ್ದಾರೋ ಏನೋ” ಎಂದು ಹೇಳುತ್ತಾ ತನ್ನ ಪತಿಗಾಗಿ ಕಾಯುತ್ತಿದ್ದಳು.
ಅವರದ್ದೇ ಜಂಗಮದಲ್ಲಿ ಮುಳುಗಿದ್ದವನು ಅವರ ಮಗ “ಅಮ್ಮ ಕೊನೆಯಲ್ಲಿ ಕಾಫಿ ಕೊಟ್ಟೆಯಲ್ಲ ಅವರೇ ಅಪ್ಪಾ. ಇನ್ನೂ ಹುಡುಕ್ತಾ ಇದೀಯಲ್ಲಮ್ಮ” ಎಂದು ಹೇಳಿದ.
ಒಂದು ಕ್ಷಣ ಅವಾಕ್ಕಾದ ರೂಪಾ ತನ್ನ ಪತಿ ರವಿಯನ್ನು ಸರಿಯಾಗಿ ಗಮನಿಸುತ್ತಿದ್ದಾಗ, ಅಲ್ಲಿದ್ದ ಎಲ್ಲರೂ ಇಷ್ಟು ಹೊತ್ತು ತಡೆ ಹಿಡಿದಿದ್ದ ನಗುವನ್ನು ಕರತಾಡನದ ಜೊತೆ ಏರಿದ ದನಿಯಲ್ಲಿ ಹೊರ ಹಾಕಿದರು. ಅವಳಿಗೂ ನಗು ಬಂತಾದರೂ, ಕಣ್ಣೀರು ಹಾಕಲು ಶುರು ಮಾಡಿದಳು. ಕೈಲಿದ್ದ ತಟ್ಟೆಯನ್ನು ಮೇಜಿನ ಮೇಲಿರಿಸುತ್ತಾ, “ರೀ ಕ್ಷಮಿಸಿ… ಬಸ್ ನಿಲ್ದಾಣದಿಂದ ಇಲ್ಲಿ ತನಕ ನಿಮ್ಮ ಮೇಲೆ ಎನೇನೋ ಬೈದುಕೊಂಡೆ. ನನಗೊಂದು ಮಾತು ನಿಮ್ಮ ವಿಷಯ ಮುಂಚೆ ಹೇಳೋದಲ್ವೇ? ಯಾಕೆ ಹೀಗ್ಮಾಡ್ತೀರ? ಜೊತೆಗೆ ನಮ್ಮ ಭಾಷೆಯಲ್ಲಿ ಮಾತಾಡಿ ಹಳ್ಳಿಗನಾಗಿಬಿಟ್ಟಿರಿ ನೋಡಿ. ನೀವು ಮಾತಾಡುವಾಗಲೂ ನನಗೆ ಗೊತ್ತಾಗದೇ ಇರೋ ಹಾಗೆ ಮಾಡಿಬಿಟ್ಟಿರಿ.” ಎಂದು ಹೇಳಿ ಅವರ ಬೆನ್ನು ಗುದ್ದುತ್ತಿದ್ದಳು.
ರವಿ ನಗುತ್ತಾ, ಅವಳ ಕಣ್ಣೊರೆಸುತ್ತಾ, “ನೀನು ಬಯಸಿದ್ದು ಕೊರೋನಾ ಸಮಯದಲ್ಲಿ ದಪ್ಪಗಿದ್ದ ನಾನು ಸಣ್ಣ ಆಗಲು ಅಲ್ಲವೇ? ಎಲ್ಲ ಮರೆತು ಬಿಟ್ಟೆಯಾ? ನಿನಗೆ ಹೇಳಬೇಡ ಅಂತ ನನ್ನ ಮಾವ ಹೇಳಿಕೊಟ್ಟಿದ್ದು ಜೊತೆಗೆ ಅವರೇ ನನ್ನ ಸಣ್ಣ ಮಾಡಿದ್ದು. ಇಲ್ಲಿಗೆ ಬಂದ ಕೆಲಸ ಆಯ್ತು , ನೀನು ಕೆಲಸಕ್ಕೆ ಹೋಗುವಾಗ ಇಬ್ಬರೂ ಒಟ್ಟಿಗೆ ಹೋಗೋಣ ಆಯ್ತಾ?” ಎಂದು ಹೇಳಿ ತಟ್ಟೆಯಲ್ಲಿದ್ದ ಕಾಫಿಯನ್ನು ಅವಳ ಮುಂದೆ ಹಿಡಿದರು.
ಹಳ್ಳಿಯಿಂದ ನಗರದಲ್ಲಿದ್ದ ಮನೆಗೆ ಮೂರೂ ಜನರು ತಮ್ಮ ಕಾರಿನಲ್ಲಿ ಹಿಂತಿರುಗಿದರು.
ಮಾರನೇಯ ದಿನ ರೂಪಾ ಬೆಳಗಾಗೆದ್ದು ಕೈ ನೋಡಿಕೊಳ್ಳುತ್ತಾ ಶ್ಲೋಕ ಹೇಳಿಕೊಂಡು ಏಳುತ್ತಿದ್ದ ಪತ್ನಿಯನ್ನು ರವಿಯು ರೂಪಾಳ ಅಪ್ಪ ತನ್ನ ಹೆಂಡತಿಗೆ ಹೇಳುತ್ತಿದ್ದಂತೆ “ಹೋಗಿ ಮುಖ ತೊಳೆದುಕೊಂಡು ಬಾ ಇಬ್ಬರೂ ಕಾಫಿ ಕುಡಿಯೋಣ” ಎಂದು ಹಾಗೇ ಹೇಳಿದರು.
ರೂಪಾ ಎದ್ದು ಹೋದಳು. ರವಿಯವರು ಹಾಸಿಗೆಯ ಮೇಲೆ ಮುದುರಿದ್ದ ಹಾಸನ್ನು ಸರಿಯಾಗಿ ಹರವಿ ಕೊನೆಗಳನ್ನು ಹಾಸಿಗೆಯ ಕೆಳಕ್ಕೆ ಸಿಕ್ಕಿಸಿ, ಚೆನ್ನಾಗಿ ಕಾಣುವಂತೆ ಮಾಡಿದರು.
ಇಬ್ಬರೂ ಜೊತೆಯಾಗಿ ಕಾಫಿ ಕುಡಿದ ಕೂಡಲೇ ರವಿ ಸ್ನಾನ ಮುಗಿಸಿ, ಪೂಜೆಯನ್ನು ಮುಗಿಸಿದ್ದರು. ಅಷ್ಟು ಹೊತ್ತಿಗೆ ತಿಂಡಿ ಸಮಯಕ್ಕೆ ಸರಿಯಾಗಿ ಸಿದ್ಧವಾಗಿತ್ತು. ಹಾಜರಿದ್ದ ಪತಿಯನ್ನು ಕಂಡು ಹಾಗೂ ಈ ಮೊದಲೇ ಸ್ವಚ್ಛವಾಗಿದ್ದ ಕೊಠಡಿಯನ್ನು ಗಮನಿಸಿದ್ದ ರೂಪಾ ಆಶ್ಚರ್ಯಚಕಿತಳಾದಳು.
ರೂಪಾ ‘ಒಂದು ಕೆಲಸ ಹೇಳಲು ಪದೇ ಪದೇ ನೆನಪಿಸುತ್ತಲೇ ಇರಬೇಕಿತ್ತು. ಇಂದು ಒಂದು ಗಂಟೆ ಬೇಗನೇ ಸಿದ್ಧರಾಗಿದ್ದೇವೆ. ಇವರು ಹೀಗೇ ಇದ್ದರೆ, ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಏಳಬಹುದು. ರಾತ್ರಿ ಕೆಲಸದಿಂದ ಬಂದವರೇ, ಕೈ ಕಾಲು ತೊಳೆದೇ ಬಂದಿದ್ದರು. ಮುಂಚೆ ಹೇಗೆಂದರೆ ಹಾಗೆ ಬರುತ್ತಿದ್ದವರು ಈಗ ತುಂಬಾ ಬದಲಾಗಿದಾರೆ. ಅವರ ಪುಸ್ತಕದ ಗೂಡಿನಲ್ಲಿ ಐದಾರು ಹೊಸ ಪುಸ್ತಕಗಳಿದ್ದವು. ಅವರು ಚಿಕ್ಕವರಿದ್ದಾಗ ಅಂದರೆ ಅವರ ಅಪ್ಪನಿದ್ದಾಗಲೂ ಶಿಸ್ತು ಪಾಲಿಸುತ್ತಿದ್ದರಂತೆ, ಅವರು ಸ್ವರ್ಗಸ್ಥರಾದ ಮೇಲೆ ಅವರ ಜೊತೆಗೆ ಹೊರಟು ಹೋದಂತಾಯಿತೇನೋ ಎನ್ನುವ ಹಾಗಿತ್ತು. ಈಗ ಮತ್ತೆ ಮಾತನಾಡುವಾಗಲೂ ಸಂಯಮ, ಕೆಲಸ ಮಾಡುವಾಗ ನಾಜೂಕುಗಳು, ಶಿಸ್ತುಗಳು ಎಲ್ಲವೂ ಎದ್ದು ಕಾಣುತ್ತಿತ್ತು. ನೋಡಿದವರಿಗೆ ಹಿಂಬಾಲಿಸುವಂತಹ ಗುಣಗಳು ಬರುತ್ತಿದ್ದವು.
ಮಕ್ಕಳಿಬ್ಬರೂ ಅಪ್ಪನಂತೆಯೇ ಅಕ್ಕಪಕ್ಕದಲ್ಲಿ ಕೂಡುತ್ತಿದ್ದವರು, ಸಹವಾಸದಂತೆ ಹಳ್ಳಿಯಿಂದ ಬಂದ ಮೇಲೆ ಅಪ್ಪನಿಗಾಗಿ ಸಹಾಯ ಹಸ್ತಗಳನ್ನು ಇತ್ತಿದ್ದರು. ರೂಪಾ ಖುಷಿಯಾಗಿ ಗಂಡನನ್ನೇ ಎತ್ತಿ ಸಂತೋಷ ತೋರಿದಳು.
“ರೀ ನಾನೂ ಹಳ್ಳಿಯವಳೇ, ಆದರೆ ಹೊಲದಲ್ಲಿನ ಮತ್ತು ಮನೆಯಲ್ಲಿನ ಕೆಲಸ ಬೇರೆ ಬೇರೆ. ಆದರೆ ನೀವು ಹೇಗೆ ಅಷ್ಟೆಲ್ಲ ಶುಚಿಯಾಗಿಡುವುದನ್ನು ಕಲಿತಿರಿ.” ಎಂದು ತನ್ನ ಗಂಡ ರವಿಯಲ್ಲಿ ಕೇಳಿಕೊಂಡಳು.
“ನಿಮ್ಮ ಅಪ್ಪನಿಂದ ಕಲಿತದ್ದು ‘ಅಭ್ಯಾಸ, ಶ್ರಮ, ಧ್ಯಾನ, ಏಕಾಗ್ರತೆ, ಸ್ವಾಭಿಮಾನ ಮತ್ತು ಸೇವೆ ಅಂದರೆ ಅನುಭವದಿಂದ ತಿಳಿದುಕೊಳ್ಳಬೇಕು. ಅಲ್ಲದೇ ರಾತ್ರಿ ಮಲಗುವ ಮುಂಚೆ ಆಯಾ ದಿನದ ಹಿನ್ನೋಟ. ಇಂದು ಊಟ ಮಾಡಲು ಯೋಗ್ಯನೇ, ನನ್ನ ಕೆಲಸ ದೇವರಿಗೆ ತೃಪ್ತಿ ತಂದಿತೇ, ಎಂಬೆಲ್ಲ ತರ್ಕಗಳಿಂದ ಮಂದಹಾಸ ಎನ್ನುವುದು ಯಾಂತ್ರಿಕವಾಗಿ ಲಭ್ಯ, ಇದರ ಹಿಂದೆ ನೆಮ್ಮದಿ. ಇಷ್ಟು ಪಾಲಿಸಿದರೆ ನಿದ್ರೆ ಬರಬಹುದೇನೋ’ ಎಂದು ಮಾವನವರು ಹೇಳುತ್ತಿದ್ದರು ಹಾಗೆ ನೋಡಿದರೆ ನನ್ನ ಮಾವ ಹೆಚ್ಚು ಮಾತನಾಡುತ್ತಿರಲಿಲ್ಲ. ಕಡಿಮೆ ಮಾತನಾಡಿ ಕೆಲಸ ಮಾಡುತ್ತ ಹಿಂಬಾಲಿಸುವುದನ್ನು ಮಾಡಲು ಹೇಳುತ್ತಿದ್ದರು ಅಷ್ಟೇ. ಇದರಿಂದಾಗಿ ಅವರನ್ನು ಎಲ್ಲರೂ ಇಷ್ಟ ಪಡುವಂತಾಗುತ್ತದೆ. ನನ್ನ ಕಥೆಯೇ ತೆಗೆದುಕೋ. ನಾನು ತಿಂಗಳ ರಜೆಯ ಮೇಲೆ ಮಕ್ಕಳ ಜೊತೆ ಹೊರಟಾಗ, ಒಂದೆರಡು ದಿನ ಬೇಸರವಾಗತೊಡಗಿತು. ನಿದ್ರೆಯ ವಿಷಯ ಮಾತನಾಡಿದಾಗ ‘ಬಾ ನನ್ನ ಜೊತೆ ಮತ್ತು ಹಿಂಬಾಲಿಸು’ ಎಂದು ಹೇಳಿ ಕೆಲಸ ಮಾಡಿ ಮನೆಗೆ ಹಿಂತಿರುಗಿದೆವು. ಕೈ ಕಾಲು ತೊಳೆದು ಕಾಲು ಗಂಟೆ ದೀಪ ಹಚ್ಚಿ ಧ್ಯಾನ ನಂತರ ಹಿಂದಿನ ದಿನದ ಧನ್ಯವಾದ ಅರ್ಪಿಸಿ, ಅಂದಿನ ಕೆಲಸ ಮಾಡಿದುದನ್ನು ಹೇಳಿಕೊಂಡು ನಮಿಸಿ ಊಟ ಮಾಡಿ ನೆಮ್ಮದಿಯಾಗಿ ಮಲಗುತ್ತಿದ್ದರು. ಅನುಭವದಿಂದ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಂತಾಯಿತು. ಮಾರನೆಯ ದಿನದಿಂದ ಅವರು ಹೇಳಿದಂತೆಯೇ ಹಿಂಬಾಲಿಸಿ ಅನುಕರಿಸುತ್ತಿದ್ದೆ. ಅಭ್ಯಾಸವಿಲ್ಲದ ದೇಹಕ್ಕೆ ಒಮ್ಮೆಗೇ ಶ್ರಮ ಕೊಡದೇ ನಿಧಾನವಾಗಿ ಒಗ್ಗಿಕೊಳ್ಳುವ ವಿಷಯ ತಿಳಿಸಿದರು. ಅವರು ಹೇಳಿದಂತೆ ಮಾಡಿ, ಕ್ರಮೇಣ ಹೆಚ್ಚು ಹೆಚ್ಚು ಕೆಲಸ ಮಾಡುತ್ತಾ ಹೋದೆ. ಅಷ್ಟೇ. ಇನ್ನೊಂದು ಅವರು ಮುಂಜಾಗ್ರತೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಉಪಾಯ ಯೋಜಿಸುತ್ತಿದ್ದರು. ಅವರ ಪ್ರಕಾರ ಜಾಗ್ರತೆ ಎಂದರೆ ಮನೆಯಲ್ಲಿ ಪ್ರತಿ ಸದಸ್ಯನ ಹಾಗೂ ಫಸಲುಗಳ ರಕ್ಷಣೆ ಎಂಬುದು.” ಎಂದು ನುಡಿದರು.
“ರೀ ನಮ್ಮಪ್ಪ ಮನೆಯಲ್ಲಿದ್ದಾಗ ಹೆಣ್ಣು ಮಕ್ಕಳಾದ ನಮಗೆಲ್ಲ ಏನೂ ಹೇಳುತ್ತಿರಲಿಲ್ಲ. ಆದರೆ ಅಮ್ಮನ ಪಾಠ ಬೇರೆಯೇ ಆದರೂ, ಧ್ಯೇಯಗಳೆಲ್ಲ ಒಂದೇ ಎಂಬುದು ಇಂದು ನನ್ನ ಗಮನಕ್ಕೆ ಬರುತ್ತಿದೆ.”
“ಅದಕ್ಕೇ ಶಕ್ತ್ಯಾನುಸಾರ ಗಂಡಸು ಹೊಲದ ಕೆಲಸ, ಹೆಂಗಸು ಮನೆಯ ಕೆಲಸ. ಆದರೆ ಇಲ್ಲಿ ಮನೆಯಲ್ಲಿ ನಾವಿಬ್ಬರೂ ಕಚೇರಿಗಳ ಕೆಲಸ ಮಾಡಿ ಮನೆಯ ಕೆಲಸದಲ್ಲಿ ಹಗುರವಾದದ್ದು ನಿನಗೆ ಶ್ರಮವಾದದ್ದು ನನಗೆ ಎಂದು ಭಾಗ ಮಾಡಿ ಕೆಲಸ ಮಾಡಿಕೊಂಡು ಹೋಗುತ್ತಿರುವುದು. ಮತ್ತು ನೆಮ್ಮದಿಯಾಗಿರುವುದು.” ಎಂದು ನುಡಿದರು.
ಇಂತಹವರು ಸ್ಥಿತಪ್ರಜ್ಞತೆಯಿಂದ ಸಂಸಾರದಲ್ಲಿ ತೊಡಕಾಗದಂತೆ ನೋಡಿಕೊಂಡು ಸ್ವಾಭಿಮಾನಿಯಾಗಿ ಮೆರೆಯುತ್ತಾರಲ್ಲವೇ? ತಂದೆ ತಾಯಿಯರಿಂದ ನಾವೂ ಸಹ ಕಲಿತಿರುತ್ತೇವೆ. ಆದರೆ ಎಷ್ಟೇ ಕಷ್ಟ ಬಂದರೂ ಸೋಮಾರಿಯಾಗಬಾರದು ಅಷ್ಟೇ ಎಂಬದನ್ನು ಚೆನ್ನಾಗಿ ಮನನ ಮಾಡಬೇಕಲ್ಲವೇ?
- ಹರಿಹರ ಬಿ ಆರ್ – ಅಕ್ಷಂತಲ ಬರಹ
