ಬಹುಮುಖ ಪ್ರತಿಭೆಯಾದ ಶ್ರೀಮತಿ ಮಂಗಳಗೌರಿ ಭಟ್ ಇವರು ಕನ್ನಡಮ್ಮನ ತೇರು ಬಳಗದಲ್ಲಿ ಅರಳಿ, ಸೊಗಸಾದ ‘ಕಾವ್ಯಧಾರೆ’ಯೆಂಬ ಕವನ ಸಂಕಲನವನ್ನು ಲೋಕಕ್ಕೆ ಅರ್ಪಿಸಿದ್ದಾರೆ. ‘ಕಾವ್ಯಧಾರೆ’ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಾವ್ಯಧಾರೆ
ಲೇಖಕಿ : ಮಂಗಳಗೌರಿ ಭಟ್
ಪ್ರಕಾರ : ಕವನ ಸಂಕಲನ
ಪ್ರಕಾಶನ: ಹೆಚ್ ಎಸ್ ಅರ್ ಎ
ಸರಸತಿಯಬ್ಬೆಯು
ವರವೆರೆದಿರುವಳು
ವರ ಮಂಗಳ ಗೌರಿಯನಪ್ಪಿ
ಹರಿಸುತ ಪದಗಳ
ಬರೆಸುತ ಕಾವ್ಯವ
ಪೊರೆಯುತಲಿರುವಳು ಸುತೆಯನ್ನು.
ಭಾವದೊಡಲಿನ ವರ್ಣಗಳು ಬರಹದೊಳಿಳಿದಾಗ ಅದು ಛಂದಸ್ಸಿನ ಚೌಕಟ್ಟಿನಲ್ಲಿ ಅಚ್ಚುಕಟ್ಟಾಗಿ ಅಚ್ಚಾದಾಗ ಸುಂದರ ಕಾವ್ಯ ಮೂಡುತ್ತದೆ. ಕವಿ/ಕವಯಿತ್ರಿ ತನ್ನೊಡಲೊಳಗೆ ಗುಪ್ತವಾಗಿ ಅಡಗಿರುವ ಪದ ಸಂಪತ್ತನ್ನು ಹೊರ ತೆಗೆದು ಬರೆದಾಗ ರಸಸ್ವಾದದ ಕವಿತೆಗಳು ಮೂಡುತ್ತವೆ.
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡುವರೆ ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದ್ದು, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ವಿಶ್ವದಲ್ಲೆ ಒಂದು ಉತ್ಕೃಷ್ಟ ಮೈಲಿಗಲನ್ನು ಸ್ಥಾಪಿಸಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಕರುನಾಡಿನ ಸಾಹಿತ್ಯ ವಿದ್ವಾಂಸರು. ಕನ್ನಡ ನಾಡು ಹಾಗು ಭಾಷೆ ಬಣ್ಣಿಸಿದಷ್ಟು ವಿಶಾಲ ಅಧ್ಯಯನ ಮಾಡಿದಷ್ಟು ಆಳ. ಪೂರ್ವಗನ್ನಡದಿಂದ ಹಿಡಿದು ಇಂದಿನ ನವ ಕನ್ನಡದ ವರೆಗೂ ಸಾಹಿತ್ಯ ನಿರರ್ಗಳವಾಗಿ ರಚಿಸಲ್ಪಡುತ್ತಲೆ ಇದೆ.
ನವ್ಯ ನವೋದಯದ ಬಿಗಿ ಹಿಡಿತದಲ್ಲಿ ಛಂದಸ್ಸು ಕೆಲಕಾಲ ಉಸಿರುಗಟ್ಟಿದ್ದರು ಮತ್ತೆ ಚಿಮ್ಮಿ ಬಂದು ಕಾವ್ಯಕ್ರಾಂತಿಯನ್ನೇ ಸೃಷ್ಟಿಸಿದೆ. ಛಂದಸ್ಸಿನಲ್ಲಿ ರಚಿಸಿದ ಪದ್ಯಗಳು ಹಾಡುವುದಕ್ಕೂ ಓದುವುದಕ್ಕೂ ಹಾಗು ವಾಚನಕ್ಕೂ ಸಂಯೋಜನೆಮಾಡುವುದಕ್ಕೂ ಬಹಳ ಸುಲಭವಾಗಿರುತ್ತವೆ. ಇಂತಹ ಹಲವು ಕಾವ್ಯ ರಚನಕಾರರ ನಡುವೆ ಬಹುಮುಖ ಪ್ರತಿಭೆಯಾದ ಶ್ರೀಮತಿ ಮಂಗಳಗೌರಿ ಭಟ್ ಇವರು ಕನ್ನಡಮ್ಮನ ತೇರು ಬಳಗದಲ್ಲಿ ಅರಳಿ, ಸೊಗಸಾದ ಕಾವ್ಯಧಾರೆಯೆಂಬ ಕವನ ಸಂಕಲನವನ್ನು ಲೋಕಕ್ಕೆ ಅರ್ಪಿಸಿದ್ದಾರೆ.

ಇವರು ಮಲೆನಾಡಿನ ತಪ್ಪಲಿನ ಕಲೆಗಳ ತವರೂರಾದ ಶಿರಸಿಯಲ್ಲಿ ವಾಸವಿದ್ದು ತಮ್ಮ ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಯೋಗ, ಸಂಗೀತ, ಕೃಷಿ , ಗೃಹಿಣಿಯಾಗಿ ಇದ್ದುಕೊಂಡೇ, ಕಾವ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಕರುನಾಡಿನ ಹೆಮ್ಮೆಯ ಮಗಳಾಗಿದ್ದಾರೆ. ಶ್ರೀಮತಿ ಮಂಗಳಗೌರಿ ಭಟ್ ಇವರು ಛಂದಸ್ಸಿನ ರಚನೆಗಳಿಗೆ ಹೆಚ್ಚು ಹೊತ್ತು ನೀಡಿ ಬರೆಯುವುದು ನಿಜಕ್ಕೂ ವಿಶೇಷವಾಗಿದೆ. ಇವರ ಈ ಕವನ ಸಂಕಲನದಲ್ಲಿ 70 ಕವಿತೆಗಳಿದ್ದು ಎಲ್ಲಾ ಕವಿತೆಗಳು ಹಾಡುವುದಕ್ಕೂ ಹಾಗು ವಾಚನಕ್ಕೂ ಅತ್ಯಂತ ಯೋಗ್ಯವಾಗಿವೆ.
ತಮ್ಮ ಮೊದಲ ಕವಿತೆಯಲ್ಲೇ ಕರುನಾಡನ್ನು ಹಾಡಿ ಹೊಗಳಿರುವ ಕವಯಿತ್ರಿಯ ಸಾಲುಗಳಾದ
ಕರುನಾಡ ಕಂಪೆಲ್ಲ
ಹರಡಿಹುದು ಜಗದೊಳಗೆ
ಪರಿಮಳವ ಬೀಸುತ್ತ ಸೌಗಂಧದಿ
ಕರಿನೆಲವನಾಳಿರುವ
ಕರುನಾಡ ಧೀರರಿಗೆ
ಕರಮುಗಿದು ವಂದಿಸುವೆ ಮನದಿಂದಲಿ.
ಇಲ್ಲಿ ಪ್ರಮುಖವಾಗಿ ನಾವು ಕವಯತ್ರಿಯ ನೆಲ ಜಲದ ಬಗ್ಗೆ ಇರುವ ಅಪಾರ ಗೌರವ ಹಾಗು ಅಭಿಮಾನವನ್ನು ಈ ಪದ್ಯದಲ್ಲಿ ಗಮನಿಸಬಹುದು. ಮೊದಲ ಪೂರ್ವಾರ್ಧದಲ್ಲಿ ಕರುನಾಡಿನ ಕೀರ್ತಿ ಜಗದಗಲ ಪಸರಿಸಿರುವ ರೀತಿಯನ್ನು ಬಣ್ಣಿಸಿದರೆ ಉತ್ತರಾರ್ಧದಲ್ಲಿ ಅತ್ಯಂತ ಫಲವತ್ತಾದ ಭೂಮಿ ಕರಿನೆಲವನ್ನು, ಅದನ್ನು ಆಳಿದಂತ ರಾಜಮಹಾರಾಜರನ್ನು ಸ್ಮರಿಸುವ ಮೂಲಕ ಭದ್ರ ಬುನಾದಿಯೊಂದಿಗೆ ಪ್ರಾರಂಭಿಸಿದ್ದಾರೆ.
ಹೊಳೆವ ಝರಿಯು
ಮಲೆಯ ಸಿರಿಯು
ಚೆಲುವ ನಾಡು ನಮ್ಮದು
ಅಳೆದು ತೂಗಿ
ಬೆಲೆಯ ಕೊಡುವ
ಕಲೆಯ ಬೀಡು ನಮ್ಮದು
ತಮ್ಮ ಹದಿನೇಳನೆ ಕವಿತೆಯಲ್ಲಿಯೂ ಕೂಡ ಕವಯಿತ್ರಿ ಕನ್ನಡ ನಾಡಿನ ಮೇಲ್ಮೈ ಸಿರಿಯ ಬಗ್ಗೆ ಅತ್ಯಂತ ಸೊಗಸಾಗಿ ವರ್ಣಿಸಿದ್ದಾರೆ.
ಹಿರಿಯರು ಗಳಿಸಿದ
ಮೆರುಗಿನ ಭಾವುಟ
ಕರದಲಿ ಪಿಡಿಯುತಲಾಡುವರು.
ಮೇಲಿನ ಕವಿತೆಯು ಬಾವುಟ ಎಂಬ ಶೀರ್ಷಿಕೆಯಡಿ ಬರೆದದ್ದು ಬಹಳ ಮಾರ್ಮಿಕವಾಗಿದೆ. ಹಿರಿಯರು ಗಳಿಸಿದ ಮೆರುಗಿನ ಬಾವುಟ ಅಂದರೆ ಇಂದು ಧ್ವಜಸ್ಥಂಭದಲ್ಲಿ ಹಾರುತ್ತಿರುವ ಬಾವುಟ ಹಾಗೆಯೇ ಸುಮ್ಮನೆ ಬಂದದಲ್ಲ ಹಲವಾರು ಸೇನಾನಿ ದೇಶ ಭಕ್ತರ ನೆತ್ತರಿನಿಂದ ಬಂದದ್ದು ಅಂತಹ ಬಾವುಟದ ನೆರಳಿನಲ್ಲಿ ನಾವುಗಳು ಜೀವಿಸುತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮೋಡ ಮುಸುಕಿದ ಬಾನು ನೋಡಲು
ಎಂಥ ಚೆಲುವಿನ ಹಂದರ
ನೋಡ ನೋಡುತ ಕಪ್ಪು ಕವಿಯಿತು
ಇಳೆಯು ಸೊಬಗಿನ ಮಂದಿರ.
ಇದು ಭಾಮಿನಿ ಲಯದ ಪದ್ಯವಾಗಿದ್ದು, ಮೊದಲ ಹಾಗು ಮೂರನೇ ಸಾಲಿನಲ್ಲಿ ಆದಿಪ್ರಾಸವು ಎರಡು ಹಾಗು ನಾಲ್ಕನೆ ಸಾಲಿನ ಕೊನೆಯ ಗಣಗಳಲ್ಲಿ ಅಂತ್ಯಪ್ರಾಸದೊಡನೆ ರಚಿಸಿದ್ದಾರೆ. ಪದ್ಯವು ಪದಲಾಲಿತ್ಯದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ
ಸಾವಿರ ವರುಷದ ನಾವಿಕ ಇರುವಂತೆ
ಹಾವೇರಿ ಮಣ್ಣು ಕಣವೆಲ್ಲ/ ಉಸಿರಾಯ್ತು
ಜೀವಕ್ಕೆ ಹಸಿರು ತುಂಬುತ್ತಾ.
ಮೇಲಿನ ಕವಿತೆಯು ಅಂಶಗಣ ಆಧಾರಿತ ಪದ್ಯವಾಗಿದ್ದು ವಿಶೇಷ ಅಯೋಜನೆಯಲ್ಲಿ ಹಾವೇರಿಯ ಸ್ಥಳ ಮಹಿಮೆಯನ್ನು ಇಡಿ ಪದ್ಯದಲ್ಲಿ ಬಣ್ಣಿಸಿದ್ದು ಜನಪದೀಯ ಶೈಲಿಯಲ್ಲಿ ಅಮೋಘವಾಗಿ ಮೂಡಿದೆ.
ಮಾಡಿನಾ ಸಂದಿಯೊಳು
ಗೂಡನ್ನು ಕಟ್ಟುತ್ತ
ಹಾಡನ್ನು ಹಾಡುತಲಿ ನಲಿಯುತಿದ್ದೆ
ಕಾಡೆಲ್ಲ ಬರಿದಾಯ್ತು
ನಾಡೆಲ್ಲ ಬೆಳೆಯುತ್ತ
ಬಾಡುವ ವಂಶವನು ನೋಡುತಿದ್ದೆ.
ಈ ಕವಿತೆಯಲ್ಲಿ ಕವಯಿತ್ರಿಗೆ ಗುಬ್ಬಿ ಹಾಗು ಪರಿಸರ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಒಂದಾನೊಂದು ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಸ್ವಚ್ಛಂದವಾಗಿ ಆಡಿ ಕುಣಿದು ಹಾರಿ ಸುಖಿಸುತಿದ್ದ ಗುಬ್ಬಿಗಳ ಸಂತತಿ ನಾಶವಾಗಿದ್ದು, ಇದಕ್ಕೆಲ್ಲ ಮನುಷ್ಯನ ಬೆಳವಣಿಗೆಯೆ ಕಾರಣ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಕಾವ್ಯಧಾರೆ ಕವನ ಸಂಕಲನದಲ್ಲಿ ಭಕ್ತಿಗೀತೆಗಳು, ಸೂರ್ಯ, ಚಂದ್ರ, ಪ್ರಕೃತಿ, ಮುಕ್ತಕಗಳು, ಸುಗ್ಗಿ, ಹೊಸ ವರುಷ, ವೀಣಾ ಪಾಣಿ, ಶ್ರಾವಣ, ಅಪ್ಪ, ಅಮ್ಮ ಯುಗಾದಿ, ಕಮಲ ಹೀಗೆ ಹಲವು ವಿಭಿನ್ನ ಶೈಲಿಯ ಕವಿತೆಗಳು ಹೊರಹೊಮ್ಮಿದ್ದು ಪ್ರತಿ ಕವಿತೆಯು ಛಂದಸ್ಸಿನ ಅಂಗಳದಲ್ಲಿಯೇ ರಚಿತವಾಗಿದ್ದು ಓದುಗರ ಗಮನ ಸೆಳೆಯುತ್ತವೆ.
- ಚನ್ನಕೇಶವ ಜಿ ಲಾಳನಕಟ್ಟೆ
