ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)

ಹೆಣ್ಣು ಅನಾದಿಕಾಲದಿಂದಲೂ ಸಹಿಷ್ಣುವೇ. ಅವಳ ತ್ಯಾಗಕ್ಕೆ ಸಾಟಿಯಿಲ್ಲ. ತನ್ನ ಪತಿ ಹಾಗೂ ಪತಿಗೃಹದವರ ಎಲ್ಲ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿ ಅವಿಶ್ರಾಂತವಾಗಿ ದುಡಿದರೂ ಸಫಲತೆಯ ಕಿರೀಟವೆಲ್ಲ ಪುರುಷರಿಗೇ ಮೀಸಲು. ಅದನ್ನು ಅವಳು ಪ್ರತಿಭಟಿಸುವುದಿಲ್ಲ. ಇದು ಯಾರಿಗೂ ಅಪಾಯಕಾರಿಯಲ್ಲದ ಪ್ರವೃತ್ತಿ .ವ್ಯವಸ್ಥೆಯೇ ಹಾಗಿರುವಾಗ ಅದರ ಒಂದು ಭಾಗವಾಗಿ ಇರುವುದರಲ್ಲೇ ಅವಳ ಸಂಸಾರವುಳಿಸುವ ಜಾಣತನವಿದೆ. ಜೀವನದ ತಮ್ಮ ಅನುಭವದ ಪುಟಗಳನ್ನು ಓದುಗರ ಮುಂದೆ ಸುಂದರವಾಗಿ ತೆರೆದಿಡುತ್ತಿರುವ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ …

ಜಾನಪದ ಎಂಬ ಜೀವನ ಮೌಲ್ಯ

ನಿನ್ನೆ ತಾನೆ ದೇಶದಾದ್ಯಂತ ,’ದೇಶದ ರೈತರದಿನ’ ವನ್ನು ಆಚರಿಸಿದೆವು. ನನಗಂತೂ ಅವರ ಒಡನಾಟ ಒಂದು ಪುಳಕ.ಪದಗಳಲ್ಲಿ ಬಣ್ಣಿಸಲಾರದ ಏನೋ ಸಾರ್ಥಕ ಬದುಕಿನ ಅನಾವರಣ! ಕೇವಲ ವೀಕ್ಷಣೆಯಿಂದಲೇ ಎಂತಹ ಜೀವನಪ್ರೀತಿಯ ಪರಿಚಯವಾಗುತ್ತದೆ! ನೆಲದಮ್ಮನ ಜೀವಂತಿಕೆಯನ್ನು ತಂದುಕೊಡುವ ರೈತ ಪ್ರತಿಸೃಷ್ಟಿಕಾರನೆಂದರೆ ತಪ್ಪೇನು?.
*
ಸರಕಾರಿ ನೌಕರಿಯಲ್ಲಿದ್ದ ಅಪ್ಪ ವರ್ಗಾವಣೆಯಾದಂತೆಲ್ಲ ವಸತಿ ಬದಲಾಯಿಸುವ ನನಗೆ ತುಂಬಾ ಆಕರ್ಷಕವೆನಿಸಿದ್ದು ಕಾವೇರಿ ನದೀತೀರದ ಊರಾದ ಮಲೆನಾಡ ಸೆರಗಿನಲ್ಲಿದ್ದ ಬಯಲುಸೀಮೆಯೇ…!

ಫೋಟೋ ಕೃಪೆ : google

ತರಗತಿಗೆ ಬರುತ್ತಿದ್ದ ಸಹಪಾಠಿಗಳೆಲ್ಲರೂ ಆಪ್ತಮಿತ್ರರೇ…ಶಾಲೆಯಲ್ಲಿ ಕಲಿತದ್ದಕ್ಕಿಂತಲೂ ಹೆಚ್ಚಿನ ಜೀವನಪಾಠವನ್ನು ನಾನು ರೈತಬದುಕಿನ ದಿನಚರಿಯಿಂದ ಪಡೆದು ಪ್ರಭಾವಿತಳಾಗಿದ್ದೇನೆ. ಅವರು ಬೆಳೆದ ಪ್ರತಿಧಾನ್ಯದ ಬಿತ್ತನೆ, ಕೊಯಿಲು ಸಂಸ್ಕರಣೆ, ಎಲ್ಲಕ್ಕೂ ನಾವು ಹತ್ತಿರದ ವೀಕ್ಷಕರಾಗಿ ಅಪಠಿತ ಪಠ್ಯಗಳನ್ನು ಮನಸೋ ಇಚ್ಛೆಯಿಂದ ಕಲಿತಿದ್ದೇವೆ. ಅವರು ಅನ್ನ ನೀಡುವ ಭೂಮಿತಾಯಿಗೆ ಸಲ್ಲಿಸುವ ಪ್ರತಿಹಂತದ ಕೃತಜ್ಞತೆ ನನ್ನನ್ನು ಈಗಲೂ ರೋಮಾಂಚನಗೊಳಿಸುತ್ತದೆ. ಆಚರಿಸುವ ಹಬ್ಬ ಹರಿದಿನಗಳಲ್ಲಿ ಎಂತಹ ಉತ್ಸಾಹವಿದೆ. ನೆರವಾಗುವ ಸಹಜೀವಿಗಳಲ್ಲಿ ಎಂತಹ ಮಧುರ ಬಾಂಧವ್ಯವಿದೆ. ಋತುಮಾನಗಳಿಗೆ ತಪ್ಪದೆ ನಡೆಸುವ ಕೃಷಿಕಾಯಕದಲ್ಲಿ ತಪಸ್ಸಿನಂತ ತಾದಾತ್ಮ್ಯವಿದೆ. ಅಷ್ಟಲ್ಲದೆ ರಸಋಷಿ ಕುವೆಂಪು ಅವರನ್ನು ‘ನೇಗಿಲಯೋಗಿ’ ಎಂದು ಗರ್ವದಿಂದ ಕರೆದಿದ್ದಾರೆಯೇ…?

*
ನಾನು ಬಣ್ಣಿಸ ಹೊರಟಿರುವುದು ರೈತಬದುಕಿನ ರೀತಿರಿವಾಜುಗಳನ್ನು ಮಾತ್ರವಲ್ಲ. ಅವರ ಬದುಕಿನ ಕ್ರಮ, ನಂಬಿಕೆ ಶ್ರದ್ಧೆ ಹಾಗೂ ಆಚರಣೆಗಳು ಎಷ್ಟೊಂದು ಸಾರ್ವಕಾಲಿಕ ಮೌಲ್ಯಗಳಿಗೆ ಸಾಕ್ಷಿಯಾಗಿವೆ ಎಂಬ ನನ್ನ ಬೆರಗನ್ನು ಪ್ರತಿಪಾದಿಸಲು…!

ಅದೂ ‘ನಿರಕ್ಷರಿಗಳು’ ಎಂಬ ಹಣೆಪಟ್ಟಿ ಹೊತ್ತ ಹೆಣ್ಣುಮಕ್ಕಳ ಅಪಾರ ಜೀವನಾನುಭವ ಹಾಗೂ ಗ್ರಹಣ ಸಾಮರ್ಥ್ಯದ ಬಗೆಗೆ ನನ್ನ ಅಚ್ಚರಿಯನ್ನು ಹಂಚಿಕೊಳ್ಳಲು….

*
ಹಳ್ಳಿಮನೆಯ ಒಂದು ಪಾರ್ಶ್ವದಲ್ಲೇ ಬಾಡಿಗೆಗಿದ್ದ ನಾವು,ಅವರ ದಿನನಿತ್ಯದ ಚಟುವಟಿಕೆಗಳಿಗೆ ಸಾಕ್ಷಿಯಾಗಿರುತ್ತಿದ್ದೆವು.ಕೋಳಿ ಕೂಗುವ ಮೊದಲೇ ಎದ್ದು,ಭತ್ತ ಕುಟ್ಟಿ ರಾಗಿ ಬೀಸುತ್ತಾ ಹಾಡುತ್ತಿದ್ದ ಜನಪದ ಗೀತೆಗಳ ಸುಶ್ರಾವ್ಯತೆ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿತ್ತು.

ಫೋಟೋ ಕೃಪೆ : google

ಮನೆಯಂಗಳಕ್ಕೆ ಸೆಗಣಿ ಸಾರಿಸಿ ಸುಂದರವಾದ ರಂಗೋಲಿಯನ್ನು ಬಿಡಿಸಿ ,ಹೂವು ಕುಂಕುಮ ಗಂಧದ ಕಡ್ಡಿಯನಿಟ್ಟು ದಿನವನ್ನು ಸ್ವಾಗತಿಸುತ್ತಿದ್ದ ಅವರ ಸಂಭ್ರಮ..ಜೊತೆಗೆ ಗುನುಗುನಿಸುತ್ತಿದ್ದ ದೇವರ ನಾಮಗಳು.

‘ಆಕಾಶದಡವ್ಯಾಗ ಧೂಪದ ಹೊಗೆಯೆದ್ದು
ಆಯ್ತು ಮಲ್ಲಯ್ಯಗೆ ಶಿವಪೂಜೆ
ಆಗಾಗ ಆಕಾಶದ ಘಂಟೆ ಘಳಿಲೆಂದು’

ತ್ರಿಪದಿ ಮುಕ್ತಕದ ಈ ಸಾಲುಗಳು ಎಷ್ಟೊಂದು ಮನೋಹರವಾಗಿವೆ ನೋಡಿ.

ಎಷ್ಟು ಅರ್ಥಸಂಪನ್ನತೆಯನ್ನು ಒಳಗೊಂಡಿವೆ! ಆಕಾಶದ ಅಡವಿಯಂತೆ. ಅಲ್ಲಿ ಕಾಣುವ ಧೂಪದ ಹೊಗೆ ಮೋಡಗಳ ಸಾಲಿರಬಹುದು ಅಥವಾ ಮಂಜಿನ ಮುಸುಕು
ಇರಲೂಬಹುದು.. ಆಗಾಗ ಮೊಳಗುವ ಘಂಟಾನಾದ ಹಕ್ಕಿಗಳ ಕೂಜನ ಇರಬಹುದು ಅಥವಾ ಅಪರೂಪಕ್ಕೊಮ್ಮೆ ಮೊಳಗುವ ಗುಡುಗು ಸಿಡಿಲು ಇರಬಹುದು.ಆ ಸಂದರ್ಭದಲ್ಲಿ ಅವರಿಗೆ ಆದ ಅನುಭವದ ಕಾಣ್ಕೆ ಎಷ್ಟು,ವಿಶಿಷ್ಟವಾಗಿಯೂ ಪರಿಣಾಮಕಾರಿಯಾಗಿಯೂ ಇದೆ ನೋಡಿ ಈ ವರ್ಣನೆ!

ತನ್ನ ದಿನಗಳನ್ನು ಬೆಳಕು ಮಾಡುವ ಸೂರ್ಯನಿಗೆ ವಂದಿಸುವಾಗ, ‘ಮೂಡಣದ ಕಣ್ಣರಳಿ ಕತ್ತಲೆಯು ಕಡೆಗಾಗಿ ನನ ಮಗನು ನಿದ್ದಿ ತಿಳಿದೆದ್ದ’

ಯಾರೂ ಯಾರನ್ನೂ ಏಳಿಸುವ ಅವಶ್ಯಕತೆಯಿಲ್ಲ. ಪ್ರಕೃತಿಯೇ ತನ್ನ ವಿದ್ಯಮಾನಗಳಿಂದ ಈ ಕೆಲಸವನ್ನು ಸರಿಯಾಗಿ ಮಾಡಿಸುತ್ತಾಳೆ.

ಇನ್ನು ಶಿವಪೂಜೆಗೆ ಪ್ರತ್ಯೇಕ ಸಮಯ ಮೀಸಲಾಗಿಡಬೇಕೆಂದೇನೂ ಇಲ್ಲ.ಮುಂಬಾಗಿಲು ತೆರೆದು ಹೊಸ್ತಿಲಿಗೆ ಹೊರಗೆ ಅಡಿಯಿಟ್ಟ ಒಡನೆಯೇ.. ಕಾಣುವ ದೃಶ್ಯ ಎಷ್ಟು ಆಹ್ಲಾದಕರವಾಗಿರುತ್ತದೆ ನೋಡಿ…

‘ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ/
ಮೊಗ್ಗಾಗೆ ಕಣ್ಣು ತೆರೆದಾನ ಲಿಂಗಯನ /
ನೋಡಟಿಗೆ ನಿದ್ದಿ ಬಯಲಾಗಿ/’

ಲಿಂಗ ಸ್ವರೂಪಿ ಈಶ್ವರನಿಗೆ ಈ ಬ್ರಹ್ಮಾಂಡದಲ್ಲಿ ನೈಸರ್ಗಿಕ ಪೂಜೆ ನಡೆಯುತ್ತಿದೆಯಲ್ಲ… ಎಂಥಹ ಮಧುರ ಕಲ್ಪನೆ!

‘ನೋಡಟಿಗೆ ನಿದ್ದಿ ಬಯಲಾಗಿ’ ಎಂತಹ ನಿದ್ರೆಯ ಅಮಲಿನಲ್ಲಿದ್ದರೂ ಎಲ್ಲವೂ ತಾನಾಗಿಯೇ ಮಾಯವಾಗುವ ದೈವಿಕ ದೃಶ್ಯ!

ಪ್ರಕೃತಿ ಪೂಜಕರಿಗೆ ,
ಕವಿತೆಯ ಈ ಸಾಲುಗಳು ಹೇಳುವಂತೆ,

‘ಪ್ರಕೃತಿಯೆ ಗುರು ಗಗನ ಲಿಂಗವು ಜಗವೆ ಕೂಡಲ ಸಂಗಮ
ಹುಡಿಯೇ ಭಸ್ಮವು ಹುಲ್ಲೆ ಪತ್ರೆಯು ಜಡವಿದೆಲ್ಲವೂ ಜಂಗಮ’

‘ನಾವು ಜಂಗಮರು…ಪ್ರಕೃತಿಯೆ ಗುರು’ ಎಂಬ ಸಾಲು ನೆನಪಿಗೆ ಬರುವುದಿಲ್ಲವೇ…?

ಹೆಣ್ಣು ಅನಾದಿಕಾಲದಿಂದಲೂ ಸಹಿಷ್ಣುವೇ. ಅವಳ ತ್ಯಾಗಕ್ಕೆ ಸಾಟಿಯಾವುದಿಲ್ಲ.ತನ್ನ ಪತಿ ಹಾಗೂ ಪತಿಗೃಹದವರ ಎಲ್ಲ ಕೆಲಸಕಾರ್ಯಗಳಲ್ಲಿ ಭಾಗಿಯಾಗಿ ಅವಿಶ್ರಾಂತವಾಗಿ ದುಡಿದರೂ ಸಫಲತೆಯ ಕಿರೀಟವೆಲ್ಲ ಪುರುಷರಿಗೇ ಮೀಸಲು.ಅದನ್ನು ಅವಳು ಪ್ರತಿಭಟಿಸುವುದಿಲ್ಲ.ಬದಲು ಸ್ವೀಕರಿಸುತ್ತಾಳೆ. ಜೊತೆಗೆ ತನ್ನ ಹಣೆಬರಹವನ್ನು ಸ್ವಗತವೆಂಬಂತೆ ದೂರಿಕೊಳ್ಳುತ್ತಾಳೆ. ಇದು ಯಾರಿಗೂ ಅಪಾಯಕಾರಿಯಲ್ಲದ ಪ್ರವೃತ್ತಿ .ವ್ಯವಸ್ಥೆಯೇ ಹಾಗಿರುವಾಗ ಅದರ ಒಂದು ಭಾಗವಾಗಿ ಇರುವುದರಲ್ಲೇ ಅವಳ ಸಂಸಾರವುಳಿಸುವ ಜಾಣತನವಿದೆ.
*
ಈ ಕವನ ಒಂದನ್ನು ಈಗ ಪರಿಶೀಲಿಸೋಣ.

ಹೆಣ್ಣು ಮಕ್ಕಳ ದು:ಖ ಹೆತ್ತವ್ವ ಬಲ್ಲಳು|
ಹುತ್ತದ ಒಳಗೆ ಇರೋ ಸರುಪನ ಬೇಗೆಯ|
ನೆತ್ತಿಮೇಲಿರುವ ಶಿವ ಬಲ್ಲ|’

ಹೌದಲ್ವಾ ತನಗೇ ಬದುಕನ್ನು ಸಹಿಸಲು ಇಷ್ಟು ಕಷ್ಟವಾಗುತ್ತಿರುವಾಗ ಇಷ್ಟು ದೂರ ಬಾಳಹಾದಿಯಲ್ಲಿ ಸಾಗಿದ ಅಮ್ಮನಿಗೆ ಇನ್ನೆಷ್ಟು ದುಗುಡ ದುಮ್ಮಾನಗಳು ಕಾಡಿರಬೇಡ..?

ಅಮ್ಮ ಆದರೆ ಬಿಡಿ. ಆಕೆ ಜನ್ಮದಿಂದ ಪರಿಚಿತಳು.ಆಕೆಯ ಔದಾರ್ಯದ ಪರಿ ಎಷ್ಟು ಶ್ರೀಮಂತವಾಗಿದೆ ನೋಡಿ… ಮುಂದಿನ ಸಾಲಿನಲ್ಲಿ ಆಕೆ ಹಲುಬುವುದು ಯಾರಿಗಾಗಿ ಎಂದು ತಿಳಿದರೆ,ನಾವು ಆಶ್ಚರ್ಯಚಕಿತರಾಗದಿರಲು ಸಾಧ್ಯವಿಲ್ಲ.

‘ಹುತ್ತದ ಒಳಗಣ ಸರುಪದ ಬೇಗೆಯ
ನೆತ್ತಿ ಮೇಲಿರುವೊ ಶಿವ ಬಲ್ಲ’

ಸರ್ಪ ಮೊದಲೇ ಭಯಪಡಿಸುವ,ಅಪಾಯಕಾರಿಯಾದುದೆಂದು ಪರಿಗಣಿಸಲ್ಪಡುವ ಸರೀಸೃಪ. ಅವಳಿಗೆ ಅದರ ಕಷ್ಟದ ಬಗೆಗೂ ಎಷ್ಟೊಂದು ಕಾಳಜಿಯಿದೆ! ಹುತ್ತದ ಒಳಗಿನ ಸರ್ಪದ ಬೇಗೆಯ ಪ್ರಮಾಣ ಎಷ್ಟಿರಬಹುದು?ಅದು ಸಾಕ್ಷಾತ್ ಪರಶಿವನಿಗೆ ಮಾತ್ರ ಅರಿವಾಗುವಂತಹುದು. ಗ್ರಾಮೀಣ ಮಹಿಳೆಯರ ಔದಾರ್ಯ ಈ ಪರಿಯದು.

*
ನಾನು ಹೇಳ ಹೊರಟಿರುವುದು ಜನಪದರಿಂದ ಸೃಷ್ಟಿಯಾದ ಕಥನ ಕಾವ್ಯದ ಬಗೆಗೆ! ಜನಾಂಗವೊಂದರ ಸಾಂಸ್ಕೃತಿಕ ಹಿನ್ನೆಲೆಯ ನೆಲೆಯಲ್ಲಿ ಇಂತಹ ಅನುಭವ ಕಥನಗಳ ಪಾತ್ರ ಬಹಳ ಮುಖ್ಯವಾದುದು. ರಚನಕಾರರು ಯಾರೆಂಬ ಅರಿವೇ ಇಲ್ಲದಿದ್ದರೂ ಇವು ನೀಡುವ ಜೀವನ ಸಂದೇಶ ಅವರ ಬದಕಿನ ಪಕ್ವತೆಗೆ ನಿದರ್ಶನಗಳಾಗಿವೆ. ಕೋಲಾಟದ ಪ್ರಕಾರವಾದ ಇದು ಒಂದು ಅನನ್ಯ ಜನಪದ ಕಥನಗೀತೆ,’ಕೆರೆಗೆ ಹಾರ..!’

ಫೋಟೋ ಕೃಪೆ : google

ಕಲ್ಲನಕೇರಿ ಮಲ್ಲನಗೌಡ ಕಟ್ಟಿಸಿದ ಕೆರೆ ಊರಿನ ಜನರ ನೀರಿನ ಬರವನ್ನು ಹಿಂಗಿಸುವ ಉದ್ದೇಶಕ್ಕಾಗಿ ಕಟ್ಟಿಸಲಾಗಿತ್ತು. ಎಷ್ಟು ತೋಡಿದರೂ ಹನಿ ನೀರು ಬಾರದಿದ್ದಾಗ ಕಂಗಾಲಾದ ಗೌಡರಿಗೆ ಜ್ಯೋತಿಷಿ ,’ಹಿರಿಸೊಸೆ ಮಲ್ಲವ್ವ ನನ್ನು ಕೆರೆಗೆ ಹಾರವಾಗಿ ಕೊಡಲು ಸೂಚಿಸಿದ.ಆದರೆ ಹಿರಿತನಕೆ ಯಾರಿಲ್ಲ ಎಂಬ ನೆಪವೊಡ್ಡಿ ಮನೆಯಲ್ಲಿ ,ಕಡಿ ಸೊಸಿ ಭಾಗೀರಥಿನ್ಹಾರ ಕೊಡಬೇಕು ಎಂದು ಮಾತಾಯಿತು. ಇದನ್ನು ಕೇಳಿಸಿಕೊಂಡ ಭಾಗೀರಥಿ ತವರು ಮನೆಗೆ ಹೋಗಿ ಬರುವೆನು ಎಂಬ ನೆಪವೊಡ್ಡಿ ಅಪ್ಪು, ಅಮ್ಮ,ಅಕ್ಕನ ಬಳಿ ನಿಜಾಂಶವನ್ನು ಮುಚ್ಚಿಟ್ಟು’, ತನ್ನನ್ನು ಬೇರೆ ಇಡುತಾರಂತೆ ಅತ್ತೆ ಮಾವ’ ಎಂದು ಸುಳ್ಳು ಹೇಳಿದಳು.ನಿಜವೆಂದು ಭಾವಿಸಿದ ಅವರು ಅವಳನ್ನು ಸಂತೈಸಿದರು.ತನ್ನ ಗೆಳತಿಯ ಬಳಿಯೂ ತನ್ನ ಸಮಸ್ಯೆಗೆ ಪರಿಹಾರ ದೊರೆಯದಿದ್ದಾಗ ತಾನೇ ಲೋಕಕಲ್ಯಾಣಕ್ಕಾಗಿ ಕೆರೆಗೆ ಹಾರ ಆಗುವ ನಿರ್ಧಾರಕ್ಕೆ ಬರುತ್ತಾಳೆ.

ಇಲ್ಲಿ ಅವಳ ಸ್ವಂತ ಇಚ್ಛೆಯನ್ನು ಯಾರೂ ಕೇಳುವುದಿಲ್ಲ.ಅತ್ತೆ ಮಾವನಾದಿಯಾಗಿ ಹಿರಿಯರ ತೀರ್ಮಾನವೇ ಅಂತಿಮ.ಮನೆಯಲ್ಲಿ ಅಷ್ಟು ಮಂದಿ ಸೊಸೆಯರು ಇದ್ದರೂ ಭಾಗೀರಥೀಯ ಅಳಲನ್ನು ಕೇಳುವವರು ಯಾರೂ ಇಲ್ಲ.ಗಂಗಾಪೂಜೆಯ ದಿನ ಬೇಕೆಂದೇ ಕೆರೆಯ ತಳದಲ್ಲಿ ಪೂಜಿಸಿದ ಸಾಮಗ್ರಿಗಳನ್ನು ಎಲ್ಲ ತಂದರೂ ಬಂಗಾರದ ಬಟ್ಟಲನ್ನು ಬೇಕೆಂದೇ ಮರೆತು ಬಂದಿದ್ದರು.

ಎಲ್ಲ ಸೊಸೆಯಂದಿರು ಬಟ್ಟಲು ತರಲು ಹೇಳಿದ ಅತ್ತೆಯ ಮಾತನ್ನು ನಿರಾಕರಿಸಿದಾಗ ಭಾಗೀರಥಿ ತಾನಾಗಿಯೇ ನೀರಿಗಿಳಿದು ಬಂಗಾರದ ಬಟ್ಟಲನ್ನು ಎತ್ತಿ ಐದು ಮೆಟ್ಟಿಲು ಹತ್ತುವಷ್ಟರಲ್ಲಿ ನೀರಿನ ಸೆಲೆ ಉಕ್ಕಿ ಕ್ರಮೇಣ ಭಾಗೀರಥಿಯನ್ನು ಹಾರ ತೆಗೆದಕೊಂಡಿತು. ಕೆರೆ ತುಂಬಿ ಬಂತು.
*
ಅತ್ತ ದಂಡಿನಲ್ಲಿದ್ದ ಭಾಗೀರಥಿಯ ಪತಿ ಮಹದೇವರಾಯನಿಗೆ ಏನೇನೋ ದುಃಸ್ವಪ್ನ ಗಳು ಕಾಡಲು ಆತ ಅಲ್ಲಿ ನಿಲ್ಲಲಾರದೆ ಧಾವಿಸಿ ಬಂದಾಗ ಆತನಿಗೆ ನಿಜ ಹೇಳುವವರು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಅವಳು ತವರಿನಲ್ಲಿಯೂ ಸರಿಯಾದ ಉತ್ತರ ಸಿಗದೆ ಗೆಳತಿಯಲ್ಲಿ ವಿನಂತಿಸಿದಾಗ ಆಕೆ ಹೇಳಿದ ನಿಜವನ್ನು ಕೇಳಿ ಕಣ್ಣೀರಿಡುತ್ತಾ,

‘ಸಾವಿರ ವಿರಹ ಕೊಟ್ಟರೂ ಸಿಗಲಾರದ ಸತಿ ನೀನು, ನನ್ನ ಬಿಟ್ಟು ಎಲ್ಲಿ ಹೋದೆ ?’

ಎನ್ನುತ್ತಾ ತನ್ನ ಹೆಂಡತಿಯ ಸುಸಂಸ್ಕೃತ ನಡೆಯನ್ನು ಗುಣಗಾನ ಮಾಡುತ್ತಾ ಕೆರೆಗೆ ಹಾರಿ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಇದು ಎಲ್ಲರಿಗೂ ಗೊತ್ತಿರುವ ಕತೆಯಾದರೆ ಇದರ ಹಿಂದಿರುವ ನೀತಿ ಹಾಗೂ ಮೌಲ್ಯಗಳು ಎಷ್ಟು ಸಂಪನ್ನವಾಗಿವೆ ನೋಡಿ..!ದಂಡಿನಲ್ಲಿದ್ದ ಪತಿ ತನ್ನಿಂದ ದೂರವಿದ್ದ ಪರಿಸ್ಥಿತಿಯೇ ತಾನು ಬಲಿಯಾಗಬೇಕಾದ ಅನಿವಾರ್ಯತೆಗೆ ಭಾಗೀರಥಿಯನ್ನು ದೂಡಿತೇ..?

ಸೊಸೆಯನ್ನು ಬಾಳಿಸಲಿಕ್ಕಾಗಿಯೇ ತಂದವರು ಅವಳ ಇಚ್ಛೆಯನ್ನು ಅರಿಯುವ ಪ್ರಯತ್ನ ವನ್ನೂ ಮಾಡದೆ ಬಲಿಕೊಡುವ ನಿರ್ಧಾರಕ್ಕೆ ಹಿರಿಯರ ಆತ್ಮಸಾಕ್ಷಿ ಒಪ್ಪಿತೇ?ದಂಡಿನಲ್ಲಿದ್ದ‌ ಮಗನ ಅರಿವಿಗೇ ಬಾರದಂತೆ ಇವರು ತೆಗೆದುಕೊಂಡ ‘ಆಹುತಿ’ಯಂತಹ ನಿರ್ಧಾರ ಸರಿಯೆ..?

*
ಇವೆಲ್ಲವುಗಳ ಹೊರತಾಗಿ ಈಗಲೂ ಪ್ರಚಲಿತವಿರುವ ಐತಿಹ್ಯದಲ್ಲಿ ತ್ಯಾಗ ಬಲಿದಾನದ ಪ್ರತೀಕವಾಗಿ ನಿತ್ಯ ಪೂಜಿಸಲ್ಪಡುವ ಶಾಶ್ವತ ಪದವಿಗೇರಿದವಳು ಭಾಗೀರಥಿ.ಅವಳ ಪತಿ ಅವಳಿಗಾದ ಅನ್ಯಾಯವನ್ನು ಸಹಿಸಲಾರದೆ ಅವಳನ್ನು ಸ್ವರ್ಗದಲ್ಲಿ ಯಾರೂ ಹಿಂಬಾಲಿಸುವ ನಿರ್ಧಾರಕ್ಕೆ ಬಂದುದು ಗುಣವಂತೆಯಾದ ತನ್ನ ಧರ್ಮಪತ್ನಿಯನ್ನು ಕಳೆದುಕೊಂಡು ಅನ್ಯರೊಡನೆ ಬಾಳಲಾರದ ಆತನ ಉನ್ನತ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಅಮೀರ ಪ್ರೇಮ ಸಾಕ್ಷಿಯಾಗಿ ಹೆಸರನ್ನು ಚಿರಸ್ಥಾಯಿಯಾಗಿಸುತ್ತಾನೆ.

*
ಉನ್ನತ ತರಗತಿಗಳಲ್ಲಿ ಬೋಧಿಸುವಾಗ ತಾನೂ ಕಣ್ಣೀರಾಗಿ, ವಿದ್ಯಾರ್ಥಿಗಳ ಕಣ್ಣೀರಿಗೂ ಸಾಕ್ಷಿಯಾಗಿ ಇರುತ್ತಿದ್ದ ಈ ಕತೆ ಜನಪದರ ಸೃಷ್ಟಿ ಶಕ್ತಿಯ ಮಹೋನ್ನತ ಕೊಡುಗೆ.
ವಾರ್ಷಿಕೋತ್ಸವದಂತಹ ಸಂದರ್ಭಗಳಲ್ಲಿ ತಾನೇ ಸಂಭಾಷಣೆ ಬರೆದು, ಕಂಠದಾನ ಮಾಡಿ ವಿದ್ಯಾರ್ಥಿಗಳಿಂದ ಅಭಿನಯಿಸುತ್ತಿದ್ದ ಇದರ ನಾಟಕವಂತೂ ಪ್ರೇಕ್ಷಕರ ಮನಗ ಎಲ್ಲ ಉತ್ತಇದ್ದ ಉರಲ್ಲ ಈ ಎರಡು ಮಾತಿಲ್ಲ.ಇದರೊಂದಿಗೆ ಬುದ್ಧ ಕಿಸಾಗೋತಮಿ ನಾಟಕ ಸಹ !

ಸಾಹಿತ್ಯ ಸದಾ ಮನುಷ್ಯನನ್ನು ಜೀವಂತಿಕೆಯಿಂದ ಇರಿಸುತ್ತದೆ ತನ್ನ ನೋವನ್ನು ಮರೆಯಬಲ್ಲ ಶಕ್ತಿ ನೀಡುತ್ತದೆ. ಇಂತಹ ಕತೆಗಳು ಸದಾ ಮನಸ್ಸನ್ನು ಕಾಡುತ್ತಲೇ ಇರುತ್ತವೆ.
ಆ ನಿಟ್ಟಿನಲ್ಲಿ ನಮ್ಮ ಸಾಹಿತ್ಯಕೃಷಿ ವಿನಮ್ರವಾಗಿ ಬೇಕಾದುದು ಅಗತ್ಯ.ಏಕೆಂದರೆ ವಿದ್ಯಾವಂತರೆನಿಸಿದ ನಮ್ಮಂತಹವರ ಇಂತಹ‌ದಟ್ಟ ಜೀವನಾನುಭವ ಉಳ್ಳ
ಅನಕ್ಷರಸ್ಥ ಮುಗ್ಧ ಜನರೆದುರು ನಗಣ್ಯ ಎನಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW