‘ಎನ್ನ ಪಾಡೆನಗಿರಲಿ’ ಆತ್ಮ ಕಥನ ಪರಿಚಯ

೨೦ ವರ್ಷ ಕಾಲೇಜು ರಂಗಭೂಮಿ ಸೇವೆ, ಪ್ರೌಢ ಪ್ರಬಂಧ ಮೊದಲ ಕವಿತೆ, ಮೊದಲ ಕವನ ಸಂಕಲನ ಹೀಗೆ ಸಾಕಷ್ಟು ಸಾಧನೆ ಮಾಡಿರುವ ಡಾ. ಎಸ್ ವಿ ಪ್ರಭಾವತಿ ಅವರ ‘ಎನ್ನ ಪಾಡೆನಗಿರಲಿ’ ಆತ್ಮಕಥನ ಕುರಿತು ಅವರ ಮಾತು, ತಪ್ಪದೆ ಮುಂದೆ ಓದಿ…

ಪುಸ್ತಕ : ಎನ್ನ ಪಾಡೆನಗಿರಲಿ
ಲೇಖಕರು : ಡಾ. ಎಸ್ ವಿ ಪ್ರಭಾವತಿ
ಪ್ರಕಾರ : ಆತ್ಮ ಕಥನ

‘ಎನ್ನ ಪಾಡೆನಗಿರಲಿ’… ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ. ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ಎನಗೆ… ಎಂಬ ಬೇಂದ್ರೆಯವರ ಕವಿತೆಯ ಸಾಲಿನ ಮೊದಲೆರಡು ಪದಗಳನ್ನು ಹೆಸರಾಗಿ ಹೊತ್ತು ಬಂದಿರುವ ಈ ಪುಸ್ತಕಕ್ಕೆ ಆತ್ಮಕಥೆ ಎಂಬ ಉಪ ಶೀರ್ಷಿಕೆಯನ್ನೇನೋ ಕೊಟ್ಟಾಗಿದೆ. ಆದರೆ ನಾನು ಆತ್ಮಕಥೆ ಬರೆಯುವಷ್ಟು ದೊಡ್ಡವಳೇ ಎಲ್ಲ ಅರ್ಥದಲ್ಲಿಯೂ ಎಂಬ ಸಂದೇಹ ಕಾಡುತ್ತದೆ.

ನೆನಪಿನ ದೋಣಿಯಲ್ಲಿ, ಹೋರಾಟದ ಬದುಕು, ಹೋರಾಟದ ಹಾದಿ, ನೆನಪು ಸಿಹಿ ಕಹಿ, ಕುದಿಯೆಸರು, ಆಡಾಡತ ಆಯುಷ್ಯ, ಭಿತ್ತಿ ಇವುಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದುತ್ತಿದ್ದ ನನಗೆ ನಾನೂ ಬರೆಯಬೇಕೆಂಬ ಭಾವನೆ ಎಂದೂ ಬಂದಿರಲಿಲ್ಲ. ಅಷ್ಟು ಸಣ್ಣವಳಾಗಿ ಹುಟ್ಟಿ ಬೆಳೆದ ನಾನು ಅಷ್ಟು ಎತ್ತರಕ್ಕೇರಿ ಮತ್ತೆ ಅಷ್ಟೇ ಪಾತಾಳಕ್ಕೆ ಬಿದ್ದು ಹೋದ ಮೇಲೆ, ಬದುಕಿನ ಎಲ್ಲ ದೊಡ್ಡ ದೊಡ್ಡ ಬಾಗಿಲುಗಳೂ ದಡಾರನೆ ಮುಚ್ಚಿ ಕೊಂಡ ಮೇಲೆ ನರಕವೆಂದರೇನೆಂದು ಇಲ್ಲೇ ಕಂಡ ಮೇಲೆ ದಾಖಲಿಸಬೇಕೆನಿಸಿತು.

ಇದೇನೋ ಮಹಾ ಗ್ರಂಥವೆಂದಾಗಲೀ ಹಲವಾರು ಜನರಿಗೆ ದಾರಿ ತೋರುತ್ತದೆಂದಾಗಲೀ ಭ್ರಮೆಯಿಂದ ಅಲ್ಲ. ಇದನ್ನು ಬರೆಯುವ ಮೂಲಕ ನನಗೆ ನಾನೇ ಒಂದು ಹೊರದಾರಿಯನ್ನು
(outlet) ಕಂಡುಕೊಳ್ಳಬಹುದೆ ಎಂಬ ದೂರದ ಆಸೆಯಿಂದ. ೨೦೧೭ರಲ್ಲಿ ಬರೆದು ಮುಗಿಸಿ ಮುದ್ರಣಕ್ಕೆ ಹೋದ ಮೇಲೆ ಕಳೆದ ಐದು ವರ್ಷಗಳ ಹಿಂದೆಯೇ ಲಾಕ್ ಡೌನ್ ಆಗಿದ್ದ ನನ್ನ ಬದುಕು ಕರೋನಾ ಕಾರಣದಿಂದ ಸಕಲ ಸಮಸ್ತರ ಜೊತೆಗೆ ಮತ್ತೊಮ್ಮೆ ಲಾಕ್ ಆಯಿತು. ಈಗ ಭಗವಂತ ಮುಖಪುಟ ಫೇಸ್ಬುಕ್ ಎಂಬ ಸಣ್ಣ ಕಿಟಕಿಯನ್ನು ನನಗಾಗಿ ತೆರೆದ. ತಣ್ಣನೆಯ ಗಾಳಿ ಬೀಸತೊಡಗಿತು. ಪಾತಾಳದಲ್ಲಿ ಬಿದ್ದಿದ್ದ ನನಗೆ ಅನೇಕ ಸ್ನೇಹ ಹಸ್ತಗಳು ಕೈ ಚಾಚಿ ನನ್ನನ್ನು ಕೊಂಚಮಟ್ಟಿಗೆ ಮೇಲೆತ್ತಿದವು. ಈಗ ಬರೆಯಲೊಂದು ವೇದಿಕೆ. ಓದಲೊಂದಷ್ಟು ಕಣ್ಣು, ಕೇಳಲೊಂದಷ್ಟು ಕಿವಿ ದೊರೆತವು. ಬದುಕು ಸತ್ತಿಲ್ಲ ಹಾಗಾದರೆ ಅನಿಸಿತು. “ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು… ನಾವು ಋಣಿಯೋ …ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ ” ಎಂಬ ಜಿ ಎಸ್ ಎಸ್ ಅವರ ಕವಿತೆಯ ಸಾಲು ನೆನಪಾಗುತ್ತದೆ. ಇದುವರೆಗೂ ಹೆಸರು ಕೂಡ ಕೇಳಿರದಿದ್ದ ವೀಣಾ ನಾಯಕ್, ಶೈಲಜಾ ಸುರೇಶ್ , ವಿನುತಾ ಹಂಚಿನಮನಿ, ವಿದ್ಯಾ ಶಿರಹಟ್ಟಿ, ರೂಪಾ ಜೋಷಿ , ವಿಭಾ ಪುರೋಹಿತ, ಮಧುರಾ ಕರ್ಣಂ, ಶ್ರೀ ಲಕ್ಷ್ಮೀ , ಉಮಾಶಂಕರ , ಅಬ್ಬಬ್ಬಾ ಎಷ್ಟೊಂದು ಹೆಸರುಗಳು ಎಷ್ಟೊಂದು ಆತ್ಮೀಯತೆ.

ಬೇಸರಗೊಂಡು ಒಂದು ಸಾಲು ಬರೆದರೂ ಕೆಟ್ಟದ್ದನ್ನು ಬಯಸಬೇಡಿ ಎನ್ನುವ ವೀಣಾ ನಾಯಕ ಅವರು. ವೇದಿಕೆ ಕೊಟ್ಟು ಮಾತಾಡಿ ಎನ್ನುವ ಶೈಲಜಾ ಸುರೇಶ್ ವಿಶಾಲಾ ಆರಾಧ್ಯ . ಕೊನೆಗೆ ನನ್ನದೇ ಯೂಟ್ಯೂಬ್ ಚಾನಲ್ ತೆರೆಯಲು ಸಹಕರಿಸಿ ನನ್ನ ಪಾಠ ಮಾಡುವ ಚಟಕ್ಕೆ ನೀರೆರೆದು ಬೆಳೆಸಿ ಗಿಡವಾಗಿಸಿದ ಮಹೇಶ್ ಕುಂಚಿಗನಾಳ್ , ಆ ಪಾಠಗಳನ್ನು ಮೆಚ್ಚಿ ಉದ್ಗಾರ ತೆಗೆಯುವ ವಿದ್ಯಾರ್ಥಿಗಳು. ಗಂಗಾನಂದ, ಧವಳ ಚಂದ್ರಿಕಾ, ಸುಮಲತಾ, ಭುವನೇಶ್ವರಿ, ಗಿರೀಶ, ಪ್ರಬಂಧ ಒಬ್ಬರೇ ಇಬ್ಬರೇ…!! ಎನ್ನ ಪಾಡೆನಗಿರಲಿ ಭಾಗ -೨ ಎಂದು ಇದರ ಬಗ್ಗೆಯೇ ಬರೆದರೆ ಇನ್ನೊಂದು ಪುಸ್ತಕವಾಗುವಷ್ಟಿದೆ.

ಇರಲಿ. ಇಲ್ಲಿ ಇಷ್ಟೊಂದು ಜನರ ಹೆಸರು ಹೇಳಿದೆ. ಆದರೆ ಆ ಪುಸ್ತಕದಲ್ಲಿ ನಾನು ಯಾರ ಹೆಸರನ್ನೂ ಹೇಳದಿರುವುದಕ್ಕೆ ಕಾರಣ – ನಾನು ಇಲ್ಲಿ ಹುಟ್ಟಿದೆ ಇಲ್ಲಿ ಬೆಳೆದೆ ಇವನನ್ನು ಮದುವೆಯಾದೆ ಮಕ್ಕಳಾದವು ಮದುವೆ ಮುಂಜಿ ಇತ್ಯಾದಿ ಹೊರ ಕವಚದಲ್ಲಿಯೇ ಅಡಗಿ ಕೂರುವ ಅಂತರಂಗದ ಭಾವನೆಗಳನ್ನು ಮುಚ್ಚಿಟ್ಟು ಬಚ್ಚಿಟ್ಟು ಗಾಂಭೀರ್ಯ ದ ಸೆರಗು ಹೊದ್ದು ಗೌರಮ್ಮ ನಂತಾಡುವ ಮತ್ತು ವಿಮರ್ಶಕರು ಯಾವಾಗಲೂ ಅಲ್ಲಗಳೆಯುವ ಪುಸ್ತಕವಾಗಬಾರದು ಎಂಬ ನಿರ್ಧಾರ ಮತ್ತು ನಾನು ನಂಬಿದ ಮೌಲ್ಯಗಳು .ಬಾಲ್ಯದ ವಿವರಗಳನ್ನು ಯಾವ ಆತ್ಮ ಕಥೆ ಬರೆಯುವವರೂ ಬರೆಯದಿರುವುದು ಸಾಧ್ಯವಿಲ್ಲ. ಹೀಗಾಗಿ ನನ್ನ ಬಾಲ್ಯದ ದಿನಗಳನ್ನು ಹೊಸಹೊಳಲು ಮಂಡ್ಯ ಮೈಸೂರು ಎಂದು ಬರೆಯುವ ವೇಳೆಗೆ ಬದುಕು ಒಂದು ಹಂತಕ್ಕೆ ಬಂತು . ಇಲ್ಲಿ ಯೇ , ಇಲ್ಲಿ ಯೇ ನಮ್ಮ ಹೆಣ್ಣು ಮಕ್ಕಳು ಪುರುಷ ಮಾದರಿಯಲ್ಲಿ ಬರೆದು ಆತ್ಮ ವಂಚನೆ ಮಾಡಿಕೊಳ್ಳುವುದು . ನಾನು ಅದಾಗಲೇ ಸ್ತ್ರೀವಾದೀ ಲೇಖಕಿ ಎಂದು ಹೆಸರಾಗಿದ್ದೆ. ಆದ್ದರಿಂದ ನನ್ನ ಬದುಕನ್ನು ರೂಪಿಸಿದ ಮತ್ತು ಸಾರಸ್ವತ ಲೋಕದಲ್ಲಿ ನನಗೆ ಒಂದು ಸ್ಥಾನ ಕಲ್ಪಿಸಿದ ಸಾಹಿತ್ಯ ಲೋಕದ ಬಗ್ಗೆಯೇ ಬರೆಯುವುದು ವಿವೇಕದ ಮಾರ್ಗ ಎಂದು ತೀರ್ಮಾನಿಸಿದೆ. ನನಗೆ ಕನ್ನಡ ಬೇರೆ ಯಲ್ಲ ಪಾಠ ಮಾಡುವುದು ಬೇರೆ ಯಲ್ಲ ಬರೆಯುವುದು ಬೇರೆ ಯಲ್ಲ

ಪಾಠ ಮಾಡುವುದು ಅಂದೆ. ಅದಕ್ಕೆ ಮೊದಲ ಪ್ರಾಶಸ್ತ್ಯ. ಎಷ್ಟೆಂದರೆ ಸಹೋದ್ಯೋಗಿಗಳು ಹೊಟ್ಟೆ ಕಿಚ್ಚು ಪಡುವಷ್ಟು. ಅನಂತರ ಮೌಲ್ಯ ಮಾಪನ . ನಾನು ಪಿಹೆಚ್ ಡಿ ಮಾಡಿದ್ದು ನನ್ನ ಮಾರ್ಗದರ್ಶನದಲ್ಲಿ ಹದಿನಾರು ವಿದ್ಯಾರ್ಥಿಗಳು ಪಿಹೆಚ್ ಡಿ ಮಾಡಿದ್ದು. ಕಾಲೇಜು ರಂಗಭೂಮಿಗೆ ೨೦ ವರ್ಷ ಮಣ್ಣು ಹೊತ್ತದ್ದು , ಶಿವಮೊಗ್ಗದಲ್ಲಿ ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಪ್ರೌಢ ಪ್ರಬಂಧ ಮೊದಲ ಕವಿತೆ , ಮೊದಲ ಕವನ ಸಂಕಲನ , ಮೊದಲ ಕಾದಂಬರಿ , ಮೊದಲ ಪ್ರಬಂಧ ಸಂಕಲನ. ಮೊದಲ ವಿಮರ್ಶಾ ಸಂಕಲನ, ಅನಂತರದ ದಿನಗಳಲ್ಲಿ ಸಮಗ್ರ ಕಾದಂಬರಿ , ಸಮಗ್ರ ಕಾವ್ಯ , ಸಮಗ್ರ ವಿಮರ್ಶೆ ….ಸಾಲುಗಟ್ಟಿ ಬಂದ ಪ್ರತಿಷ್ಠಿತ ಪ್ರಶಸ್ತಿಗಳು..ಈ ಹಂತದಲ್ಲಿ ಬದುಕು ತೆಗೆದುಕೊಂಡ ಅಸಹನೀಯ ತಿರುವುಗಳು , ಅವನ್ನು ದಾಟಿಸಲೆಂದೇ ಚಾಚಿದ ಸಹಾಯ ಹಸ್ತಗಳು. ಹೀಗೆ ಕರೋನಾ ಕಾಲಘಟ್ಟದ ವರೆಗೆ ಬಂದು ನಿಂದ ಕೇವಲ ೧೨೦ ಪುಟಗಳ ಈ ಪುಟ್ಟ ಪುಸ್ತಕ ಕ್ಕೆ ಮುಖಪುಟದಲ್ಲಿ ಸಿಕ್ಕ ಪ್ರಸಂಶೆ ಅಪಾರ . ಇಲ್ಲಿ ಪ್ರಕಟವಾದ ವಿಮರ್ಶೆ ಗಳನ್ನು ಓದಿ ಯೇ ಅನೇಕ ರು ಪುಸ್ತಕ ಕೊಂಡರು . ನಮ್ಮ ಪತ್ರಿಕೆ ಗಳು ಪುಸ್ತಕ ವಿಮರ್ಶೆ ಯನ್ನು ನಿಲ್ಲಿಸಿರುವ ಈ ಹೊತ್ತಿನಲ್ಲಿ ಇದು ಎಷ್ಟು ಮುಖ್ಯ ಎಂದು ಮತ್ತೆ ಹೇಳಬೇಕಾದುದಿಲ್ಲ.

ಅಂತರಂಗದ ಹಾಡು ಹಾಡಾಗಿಯೇ ಹರಿಯಲಿ. ಅದು ಗುಪ್ತ ಗಾಮಿನಿಯಾಗುವುದು ಬೇಡ. ಅದರಲ್ಲಿ ಮಿಂದು ಪಾವನವಾಗುವವರೆಲ್ಲಾ ಪಾವನರಾಗಲಿ. ಮಡಿವಂತಿಕೆ ಬೇಡ . ಹಾಗೆ ಆಗುವವರು ವಿದ್ಯಾರ್ಥಿಗಳಿರಬಹುದು, ನನ್ನ ಮಕ್ಕಳಿರಬಹುದು, ಹಿರಿಯರಿರಬಹುದು, ಗೆಳೆಯ ಗೆಳತಿಯರಿರಬಹುದು, ಇನಿಯರಿರಬಹುದು, ಪಾಪ ಒಮ್ಮೊಮ್ಮೆ ಈ ಗಂಡನೂ ಇರಬಹುದು, ಇರಲಿ. ಉಪಯುಕ್ತವಾಗಬಹುದಾದ ಈ ಬದುಕನ್ನು ಕಂದಾಚಾರಗಳಿಂದ ಕಟ್ಟಿ ಚೌಕಟ್ಟಿನೊಳಗೆ ಬಂಧಿಸಿ ಇತರರು ಕೆಟ್ಟ ಆನಂದ ಪಡುವುದಕ್ಕೆ ನಾವು ಹೆಣ್ಣು ಮಕ್ಕಳು ಅವಕಾಶ ಕೊಡಬಾರದು. ಅನಿವಾರ್ಯವಾಗಿ ಒಮ್ಮೊಮ್ಮೆ ಮಣಿಯಬೇಕಾಗಬಹುದು, ಸಮಾಜದ ಕುಟುಂಬದ ಸ್ವಾಸ್ಥ್ಯವನ್ನು ಪರಿಗಣಿಸಿ. ಆದರೆ ಮತ್ತೆ ಪುಟಿದೇಳುವ ಸಾಮರ್ಥ್ಯ ನಮಗಿದ್ದೇ ಇದೆ. – ಇದಿಷ್ಟೇ ನನ್ನ ಆತ್ಮ ಕಥೆಯ ಉದ್ದೇಶ . ಇದರ ಬಗ್ಗೆ ಇಷ್ಟೊಂದನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟ ಈ ವೇದಿಕೆ ಗೊಂದು ಕೃತಜ್ಞತೆ ಯ ಸಲಾಂ


  • ಡಾ. ಎಸ್ ವಿ ಪ್ರಭಾವತಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW