ಸ್ವತಂತ್ರ ಹೋರಾಟಗಾರ ಉದಮ್ ಸಿಂಗ್ ಅವರ ಜನ್ಮ ದಿನ

ಅವತ್ತು ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲೆಂದು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಅವತ್ತಿನ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ  379.ಇದು ಅಂದಿನ ಬ್ರಿಟಿಷ್ ಸರ್ಕಾರ ಕೊಟ್ಟ ಕಾಟಾಚಾರದ ಲೆಕ್ಕಾಚಾರ. ಅಸಲಿಗೆ ಅವತ್ತು ಬ್ರಿಟಿಷರ ಗುಂಡಿಗೆ ಬಲಿಯಾದವರ ಸಂಖ್ಯೆ 1200 ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ತಪ್ಪದೆ ಮುಂದೆ ಓದಿ ಡಾ.ಗುರು ಪ್ರಸಾದ ರಾವ್ ಹವಲ್ದಾರ್ ಅವರು ಶಾಹಿದ್-ಇ-ಅಜೀಮ್ ಸರ್ದಾರ್ ಉದಮ್ ಸಿಂಗ್ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಅದು ಭಾರತೀಯರು ಬ್ರಿಟಿಷ್ ರ ಅಧೀನದಲ್ಲಿ ನಲುಗುತ್ತಿದ್ದ ದಿನಗಳು ,ಸ್ವಾತಂತ್ರ್ಯದ ಪ್ರತಿಯೊಬ್ಬರಲ್ಲಿ ಮೇಳೈಸಿ ಹೋರಾಟ ತೀವ್ರಗೊಂಡಂತಹ ಸಮಯ, ಹಬ್ಬ, ಜಾತ್ರೆಗಳನ್ನದೆ ಜನರು ಸೇರುವಂತಹ ಸ್ಥಳಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹರಡುತ್ತಿತ್ತು.

1919 ರ ಏಪ್ರಿಲ್ 13 ರಂದು ಪಂಜಾಬ್ ನ ಜಲಿಯನ್ ವಾಲಾಬಾಗ್ ಉದ್ಯಾನದಲ್ಲಿ ಅವತ್ತು ಸಾವಿರಾರು ಮಂದಿ ಬೈಸಾಕಿ ಹಬ್ಬ ಆಚರಿಸಲು ಸೇರಿದ್ದರು. ಬೈಸಾಕಿ ಹಬ್ಬ ಸಿಕ್ ರ ಸಂಭ್ರಮದ ದಿನಗಳಲ್ಲೊಂದು. ಹಬ್ಬಕ್ಕೆ ಅಂತ ಸೇರಿದ್ದ ಜನರಲ್ಲಿ ಬ್ರಿಟೀಷರ ವಿರುದ್ಧದ ಆಕ್ರೋಶ ಇತ್ತು. ಹಾಗಾಗಿಯೇ ಉದ್ಯಾನವನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಸಾವಿರಾರು ಮಂದಿ. ಈ ಜನರಿಗೆ ಸೇವೆ ನೀಡುವ ಸಲುವಾಗಿ ಅನೇಕ ಯುವಕರು ಕಾರ್ಯನಿರ್ವಹಿಸುತ್ತಿದ್ದರು.ಅದರಲ್ಲಿ ಒಬ್ಬ ಯುವಕ ಸ್ವಯಂ ಸೇವಕನಾಗಿ ನೀರು ನೀಡುವ ಕಾಯಕದಲ್ಲಿ ತೊಡಗಿದ್ದ, ಅಂದು ಸಂಜೆ ಐದೂ ಹದಿನೈದರ ಸಮಯ. 90 ಸೈನಿಕರೊಂದಿಗೆ ಉದ್ಯಾನಕ್ಕೆ ರಕ್ತಪಿಪಾಸುವಂತೆ ಬಂದವನು ಜನರಲ್ ಡಯರ್. ಒಳಬಂದವನೇ ಒಂದಿನಿತೂ ಯೋಚಿಸದೇ ಸೈನಿಕರಿಗೆ ಗುಂಡಿನ ಮಳೆಗರೆಯುವಂತೆ ಆಜ್ಞೆಯಿತ್ತಿದ್ದ. ಸುಮಾರು 15 ನಿಮಿಷಗಳ ಕಾಲ ಗುಂಡಿನ ಬೋರ್ಗರೆತ. ಅಷ್ಟೇ ಉದ್ಯಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಉಸಿರನ್ನ ಇಷ್ಟು ಬರ್ಭರವಾಗಿ ನಿಲ್ಲಿಸಲಾಗಿತ್ತು. ಅವತ್ತು ಗುಂಡಿನ ಬೋರ್ಗರೆತದಿಂದ ತಪ್ಪಿಸಿಕೊಳ್ಳಲೆಂದು ಉದ್ಯಾನದಲ್ಲಿದ್ದ ಭಾವಿಗೆ ಬಿದ್ದು ಪ್ರಾಣಬಿಟ್ಟವರ ಸಂಖ್ಯೆಯೇ 120 ಕ್ಕೂ ಹೆಚ್ಚು. ಅವತ್ತಿನ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ  379. ಇದು ಅಂದಿನ ಬ್ರಿಟಿಷ್ ಸರ್ಕಾರ ಕೊಟ್ಟ ಕಾಟಾಚಾರದ ಲೆಕ್ಕಾಚಾರ. ಅಸಲಿಗೆ ಅವತ್ತು ಬ್ರಿಟಿಷರ ಗುಂಡಿಗೆ ಬಲಿಯಾದವರ ಸಂಖ್ಯೆ 1200 ಕ್ಕೂ ಹೆಚ್ಚು ಅನ್ನುತ್ತದೆ ಇತಿಹಾಸ. ಮಕ್ಕಳೂ ಮಹಿಳೆಯರೂ ಅನ್ನೋದನ್ನೂ ನೋಡದೇ ನಿರ್ಧಯವಾಗಿ ಮಾರಣಹೋಮ ನಡೆಸಲಾಗಿತ್ತು. ಕಾನೂನು ಬಾಹಿರವಾಗಿ ಇಷ್ಟೊಂದು ದೊಡ್ಡ ಹತ್ಯಾಕಾಂಡ ನೆಡಸಲಾಗಿತ್ತು.

ಹಬ್ಬದ ಸಂಭ್ರಮದಲ್ಲಿದ್ದವರನ್ನ ಮಾರಣ ಹೋಮ ಮಾಡಿದ್ದನ್ನ ಆ ಸ್ವಯಂ ಸೇವಕ ಯುವಕ ಕಣ್ಣಾರೆ ನೋಡಿದ್ದ. ಅವತ್ತು ತನ್ನವರನ್ನೆಲ್ಲಾ ಕಳೆದುಕೊಂಡು ಗುಂಡೇಟಿನಿಂದ ಗಾಯಗೊಂಡಿದ್ದ, ಈ ಹತ್ಯಾಕಾಂಡಕ್ಕೆ ಪ್ರತೀಕಾರದ ಪಣ ತೊಟ್ಟು ಜಲಿಯನ್ ವಾಲಾಬಾಗ್ ನಲ್ಲಿನ ಮಣ್ಣನ್ನ ಮನೆಗೆ ಕೊಂಡೊಯ್ದು, ತನ್ನ ಜೀವಿತಾವಧಿವರೆಗೆ ಜತೆಗೇ ಇಟ್ಟುಕೊಂಡು , ಸಾವಿರಾರು ಜನ ಭಾರತೀಯರನ್ನು ಹತ್ಯೆಗೆ ಕಾರಣನಾದ ಬ್ರಿಟಿಶ್ ಅಧಿಕಾರಿ ಮೈಕಲ್ ಓಡ್ವೈರ್​ ನನ್ನು ಸುಮಾರು 21 ವರ್ಷಗಳ ಕಾಲ ಕಾಯ್ದು ಆ ಅಧಿಕಾರಿಯನ್ನು ಹತ್ಯೆ ಮಾಡಿದ ಅಪ್ರತಿಮ ಕ್ರಾಂತಿಕಾರಿ ಈ ಸರ್ದಾರ್ ಉದಮ್ ಸಿಂಗ್.

ಸರ್ದಾರ್ ಉದಮ್ ಸಿಂಗ್ ರ ಹೆಸರು ಭಾರತಿಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಚ್ಚಳಿಯದ ಹೆಸರು. 26 ಡಿಸೆಂಬರ್ 1899 ರಲ್ಲಿ ಸಂಗ್ರೂರ್ ಜಿಲ್ಲೆಯ ಸುನಮ್ ಎಂಬ ಗ್ರಾಮದಲ್ಲಿ ಉಧಮ್ ಸಿಂಗ್ ಜನಿಸಿದರು. ಅವರ ತಂದೆಯ ಹೆಸರು ತಹಲ್ ಸಿಂಗ್ ಮತ್ತು ತಾಯಿ ನಾರಾಯಣ ಕೌರ್. ಅಸಲಿಗೆ ತಾಯಿ-ತಂದೆ ಅವರಿಗೆ ಇಟ್ಟ ಹೆಸರು ಶೇರ್ ಸಿಂಗ್. ಉಧಮ್ ಹುಟ್ಟಿದ ಎರಡು ವರ್ಷಗಳ ನಂತರ ಅವರ ತಾಯಿ ತೀರಿಕೊಂಡರು. ಕೆಲವೇ ವರ್ಷಗಳ ನಂತರ ಅಂದರೆ 1907 ರಲ್ಲಿ ಅವರ ತಂದೆಯೂ ನಿಧನರಾದರು. ಸಂಪೂರ್ಣವಾಗಿ ಅನಾಥರಾಗಿದ್ದ ಅವರು ತಮ್ಮ ಸಹೋದರನೊಂದಿಗೆ ಅನಾಥಾಶ್ರಮವೊಂದನ್ನು ಸೇರಿದರು. ಅವರಿಗೆ ಉಧಮ್ ಸಿಂಗ್ ಹೆಸರು ಸಿಕ್ಕಿದ್ದು ಅದೇ ಅನಾಥಾಶ್ರಮದಲ್ಲಿ.

ಸರ್ದಾರ್ ಉಧಮ್ ಸಿಂಗ್ ಅವರ ಸಹೋದರ 1917 ರಲ್ಲಿ ನಿಧನ ಹೊಂದಿದ ನಂತರ 1919 ರಲ್ಲಿ ಉಧಮ್ ಅನಾಥಾಶ್ರಮದಿಂದ ಹೊರಬಿದ್ದರು. ಅದೇ ವರ್ಷದ
1919 ರಲ್ಲಿ ಬೈಸಾಖಿ ಹಬ್ಬದಂದು ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ನಡೆದ ಹತ್ಯಾಕಾಂಡ ಕಣ್ಣಾರೆ ಕಂಡ ಉದಮ್ ತನ್ನ ಬದುಕನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣರಾದ ಅಪರಾಧಿಗಳನ್ನು ಕೊಲ್ಲಲು ಅವರು ನಿರ್ಧರಿಸಿದರು.

ಹತ್ಯಾಕಾಂಡದ ರೂವಾರಿಗಳು:

ಜನರಲ್​ ಡಯರ್​ ಗೆ ಹಾಗೆ ಜನರ ಮೇಲೆ ಗುಂಡಿನ ಮಳೆ ಸುರಿಸುವಂತೆ ಆದೇಶ ಕೊಟ್ಟಿದ್ದನಲ್ಲ ಆತನ ಹೆಸರು ಮೈಕಲ್. ಜಲಿಯನ್​ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಪಂಜಾಬ್​ನ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದವನು ಈ ಮೈಕಲ್. ಮೈದಾನದಲ್ಲಿ ಸೇರಿದ್ದ ಜನರ ಮೇಲೆ ಸಾಮೂಹಿಕವಾಗಿ ಗುಂಡಿಕ್ಕಲು ಈತನ ಆದೇಶವೇ ಕಾರಣ ಅನ್ನೋದು ಬಹಿರಂಗವಾಗಲು ತುಂಬಾ ದಿನಗಳೇನು ಹಿಡಿಯಲಿಲ್ಲ. ಈ ಬಗ್ಗೆ ಮಾತನಾಡಿದ್ದ ಮೈಕಲ್ ಹತ್ಯಾಕಾಂಡ ನಡೆಸಿದ್ದು ಸರಿಯಾದ ಕ್ರಮವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದ. ಜನರಲ್​ ಡಯರ್​ಗೆ ಹತ್ಯಾಕಾಂಡ ನಡೆಸುವಂತೆ ಲೆಫ್ಟಿನೆಂಟ್ ಗೌವರ್ನರ್​ ಆಗಿದ್ದ ಮೈಕಲ್​ ಸ್ವತಃ ಸೂಚನೆ ನೀಡಿದ್ದ ಅನ್ನೋದು ಆತನ ಈ ಹೇಳಿಕೆಯಿಂದ ಸ್ಪಷ್ಟವಾಗಿ ಹೋಗಿತ್ತು.

ಜಲಿಯನ್​ ವಾಲಾಬಾಗ್​ನಲ್ಲಿ ಮಾರಣಹೋಮ ನಡೆಸಿದ್ದ ಜನರಲ್​ ಡಯರ್​ ನನ್ನ ಅವನು ಮಾಡಿದ ಪಾಪವೇ ಬಲಿತೆಗೆದುಕೊಂಡಿತ್ತು.  1200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಎಂಟೇ ವರ್ಷಕ್ಕೆ ಜನರಲ್​ ಡಯರ್ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದ. ಅದಾದ ನಂತರ ಕೊನೆಯ ದಿನಗಳಲ್ಲಿ ಆತನಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಮಾಡಿದ ಘೋರ ಅಪರಾಧಕ್ಕೆ ಶಿಕ್ಷೆ ಅನುಭವಿಸಿದವನಂತೆ ಜನರಲ್​ ಡಯರ್ 1927ರ ಒಂದು ದಿನ ಮಲಗಿದ್ದಲ್ಲೇ ಕಣ್ಣು ಮುಚ್ಚಿದ. ಅಲ್ಲಿಗೆ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ಸೃಷ್ಟಿಗೆ ಕಾರಣವಾಗಿದ್ದವನ ಕತೆ ಅಂತ್ಯವಾಗಿತ್ತು.

ಹೇಗಾದರೂ ಮಾಡಿ ಹತ್ಯಾಕಾಂಡ ನಡೆಸಲು ಕಾರಣನಾಗಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ನನ್ನ ಹತ್ಯೆ ಮಾಡೋದು ಉದಮ್ ಸಿಂಗ್ ನ ಗುರಿಯಾಗಿತ್ತು. ಆ ಗುರಿಯ ಸಾಕಾರಕ್ಕಾಗಿ ಉದಮ್ ಸಿಂಗ್ ಹೋರಾಟ ನಡೆಸಿದ್ದು ಬರೊಬ್ವರಿ ಇಪ್ಪತ್ತೊಂದು ವರ್ಷ.

ಬ್ರಿಟೀಷರ ವಸಾಹತುಶಾಹಿ ಆಡಳಿತವನ್ನು ಉರುಳಿಸಲು ವಿದೇಶದಲ್ಲಿ ಭಾರತೀಯರನ್ನು ಸಂಘಟಿಸ ತೊಡಗಿದರು. ಇದಕ್ಕಾಗಿ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕಾರ್ಮಿಕನಾಗಿ ಸೇರಿ ವಿದೇಶ ಪ್ರವಾಸ ಮಾಡಿದರು.

ವಿದೇಶಿ ಪ್ರವಾಸಗಳ ಸಮಯದಲ್ಲಿ, ಸರ್ದಾರ್ ಉಧಮ್ ಸಿಂಗ್ ಅನೇಕ ಹೆಸರುಗಳನ್ನು ಬದಲಾಯಿಸಿಕೊಂಡರು. ವಿದೇಶಗಳಲ್ಲಿ ಅವರು ಫ್ರಾಂಕ್ ಬ್ರೆಜಿಲ್, ಉದಯ್ ಸಿಂಗ್, ಉಧನ್ ಸಿಂಗ್ ಮತ್ತು ಮೊಹಮ್ಮದ್ ಸಿಂಗ್, ಆಜಾದ್ ಮೊದಲಾದ ಹೆಸರುಗಳಿಂದ ಗುರುತಿಸಿಕೊಂಡಿದ್ದರು.

ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ಡ್ವಯರ್

ಉಧಮ್ ಸಿಂಗ್ 1920 ರ ದಶಕದ ಆರಂಭದಲ್ಲಿ ಗದರ್ ಚಳವಳಿಗೆ ಸೇರಿದರು. ಹಾಗೆಯೇ ಅವರು ಲಂಡನ್ ಮೂಲದ ವರ್ಕರ್ಸ್ ಅಸೋಸಿಯೇಷನ್‌ ಸದಸ್ಯತ್ವ ಕೂಡ ಪಡೆದರು.
1927 ರಲ್ಲಿ ಭಗತ್ ಸಿಂಗ್ ಅವರ ಆದೇಶದ ಮೇರೆಗೆ ಭಾರತಕ್ಕೆ . ನಿಷೇಧಿತ ಸಾಹಿತ್ಯದ ಪುಸ್ತಕಳೊಂದಿಗೆ ಮತ್ತು 25 ಸಹವರ್ತಿಗಳೊಂದಿಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಿದರು.
ಉದಮ್ ಸಿಂಗ್ ನನ್ನ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬ್ರಿಟೀಷ್ ಇಂಡಿಯಾ ಸರ್ಕಾರ ಬಂಧಿಸಿತ್ತು. ಬ್ರಿಟೀಷರ ಹಿಂಸಾತ್ಮಕ ಅಂತ್ಯಕ್ಕಾಗಿ ಹೋರಾಡುತ್ತಿದ್ದೇನೆ ಅಂತ ಕೋರ್ಟ್ ನಲ್ಲಿ ದಿಟ್ಟತನದಿಂದ ಹೇಳಿದ್ದ ಉದಮ್ ಸಿಂಗ್.

ಪರವಾನಗಿ ಪಡೆಯದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಆ ವರ್ಷದ ಆಗಸ್ಟ್ 30 ರಂದು 5 ವರ್ಷಗಳ ಕಾಲ ಜೈಲುಕಂಬಿಯ ಹಿಂದೆ ತಳ್ಳಿತ್ತು ಬ್ರಿಟೀಷ್ ಸರ್ಕಾರ. ಸೆರೆವಾಸ ಅನುಭವಿಸುವ ಸಂದರ್ಭದಲ್ಲಿ ಉದಮ್ ಸಿಂಗ್ ಗೆ ಬ್ರಿಟೀಷರ ಮೇಲಿನ ದ್ವೇಷದ ಜ್ವಾಲೆ ಇನ್ನಷ್ಟು ಹೆಚ್ಚಾಗಿತ್ತು. ಹತ್ಯಾಕಾಂಡಕ್ಕೆ ಕಾರಣವಾದವನ ರಕ್ತ ಹರಿಸಲೇಬೇಕು ಎಂದು ಉದಮ್​ ಸಿಂಗ್ ನಿರ್ಧರಿಸಿದ್ದ. ಇದೇ ಸಮಯದಲ್ಲಿ ಭಗತ್ ಸಿಂಗ್ ಅವರ ಸಾವು ಮತ್ತು ಅವರ ಹುತಾತ್ಮತೆಯಿಂದ ಸ್ಫೂರ್ತಿ ಪಡೆದು ಡಯರ್ ವಿರುದ್ಧ ಪ್ರತೀಕಾರವನ್ನು ತೆಗೆದುಕೊಳ್ಳಲು ಬಯಸಿ, ಸೆರೆವಾಸ ಅನುಭವಿಸಿದ ನಂತರ 23 ಅಕ್ಟೋಬರ್, 1931 ರಂದು ಜೈಲಿನಿಂದ ಬಿಡುಗಡೆ ಹೊಂದಿದರು. ಪೊಲೀಸರ ಹದ್ದಿನ ಕಣ್ಣು ಅವರ ಮೇಲೆ ನಿರಂತರವಾಗಿತ್ತು. ಆದರೆ ಅವರನ್ನು ಕ್ರಾಂತಿಕಾರಿ ಚಟುವಟಿಕೆಗಳನ್ನು ರಹಸ್ಯವಾಗಿ ನಡೆಸುವುದರಿಂದ ತಡೆಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಪ್ರತಿಕಾರಕ್ಕಾಗಿ ವಿದೇಶಕ್ಕೆ ಪ್ರಯಣ :

ಹೇಗಾದರೂ ಮಾಡಿ ಇಂಗ್ಲೆಂಡ್ ತಲುಪಿ ಬಿಡುವ ನಿರ್ಧಾರ ಮಾಡಿಬಿಟ್ಟಿದ್ದ. 1934 ರಲ್ಲಿ ಕಾಶ್ಮೀರ ಮೂಲಕ ಇಸ್ಲಾಮಾಬಾದ್, ಕಾಬೂಲ್ ದಾಟಿ ಜರ್ಮನಿ ಸೇರಿಕೊಂಡ. ಕೆಲಕಾಲ ಜರ್ಮನಿಯಲ್ಲಿದ್ದ ಉದಮ್ ಸಿಂಗ್ ಆ ನಂತರ ಇಂಗ್ಲೆಂಡ್ ಮುಟ್ಟಿದ್ದ.ಅವಕಾಶಕ್ಕಾಗಿ ತಾಳ್ಮೆಯಿಂದ ಹೊಂಚುಹಾಕಲಾರಂಭಿಸಿದ್ದರು. ಲಂಡನ್‌ನಲ್ಲಿ ಅವರು ಭಾರತೀಯ ಕಾರ್ಮಿಕರ ಸಂಘಕ್ಕೆ ಸೇರ್ಪಡೆಗೊಂಡರು.

ಲಂಡನಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಲ್ಲದೇ ಸುಮಾರು 6 ವರ್ಷಗಳ ಕಾಲ ಡಯರ್ ಅವರ ಚಲನವಲನಗಳನ್ನು ಗಮನಿಸತೊಡಗಿದರು. ಈ ಮಧ್ಯೆ ಬಂದೂಕನ್ನು ಕೊಂಡು ಕೊಂಡಿದ್ದಲ್ಲದೇ, ಅದನ್ನು ಬಳಸುವ ಕಲೆಯನ್ನು ಕರಗತ ಮಾಡಿಕೊಂಡರು.

ಜನರಲ್​ ಡಯರ್

ಲಂಡನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮೈಕೆಲ್ ನ ಹತ್ಯೆಗೆ ಸಂಚು ಮಾಡುತ್ತಲೇ ಇದ್ದ. ಆ ದಿನ ಬಂದೇ ಬಿಟ್ಟಿತ್ತು, ಅದು 1940 ಮಾರ್ಚ್ 13 ನೇ ತಾರೀಕಿನ ದಿನ. ಹತ್ಯಾಕಾಂಡಕ್ಕೆ  ಪ್ರತೀಕಾರ ತೆಗೆದುಕೊಳ್ಳುವ ಅವಕಾಶ ಉದಮ್ ಸಿಂಗ್ ಗೆ ಸಿಕ್ಕಿಬಿಟ್ಟಿತ್ತು. ಲಂಡನ್ ನ ಕ್ಯಾಕ್ ಸ್ಟನ್ ಹಾಲ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಲೆಫ್ಟಿನೆಂಟ್ ಗೌವರ್ನರ್  ಮೈಕಲ್​ ಬಂದಿದ್ದ. ಈ ಹಾಲ್ನಲ್ಲಿ ಮಾತನಾಡಲು ಬರುತ್ತಿರುವುದನ್ನು ತಿಳಿದುಕೊಂಡ ಉಧಮ್ ಸಿಂಗ್ ಪುಸ್ತಕವೊಂದರ ಒಳಗೆ ಬಂದೂಕಿನ ಆಕಾರದಲ್ಲಿ ಕೊರೆದು ಅದರೊಳಗೆ ಬಂದೂಕನ್ನು ಅಡಗಿಸಿಟ್ಟುಕೊಂದು ಆಲ್ಲಿಗೆ ಹೋಗಿ ಮುಂದಿನ ಸಾಲಿನಲ್ಲಿಯೇ ಕುಳಿತುಕೊಂಡರು. ಭಾಷಣವೆಲ್ಲವೂ ಮುಗಿದು ಇನ್ನೇನೂ ಅತಿಥಿಗಳೆಲ್ಲರೂ ಹೊರಡಬೇಕು ಎನ್ನುವಷ್ಟರಲ್ಲಿ ಉಧಮ್ ಸಿಂಗ್ ತಮ್ಮ ಬಂದೂಕಿನಿಂದ ಹಾರಿಸಿದ ಎರಡು ಗುಂಡು ನೇರವಾಗಿ ಡ್ವೈಯರ್ನ ಹೃದಯ ಮತ್ತು ಶ್ವಾಸಕೋಶಕ್ಕೆ ತಗುಲಿ ಡ್ವಯರಿನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿ ಹೋಗುವ ಮುಖಾಂತರ ತನ್ನ ನೆಲದಲ್ಲಿ ಮಾರಣ ಹೋಮ ನಡೆಸಿದವನನ್ನ ಅವನದ್ದೇ ನೆಲಕ್ಕೆ ನುಗ್ಗಿ ಕೊಂದು ಹಾಕಿದ್ದ ಉದಮ್ ಸಿಂಗ್. ಅವತ್ತು ಜಲಿಯನ್ ವಾಲಾಬಾಗ್ ನಲ್ಲಿ ರಕ್ತ ಚೆಲ್ಲಿದ ಸಾವಿರಾರು ಜನರ ಆತ್ಮಗಳ ಆರ್ತನಾದಕ್ಕೆ ಅಂತ್ಯ ಸಿಕ್ಕಿತ್ತು. 21 ವರ್ಷಗಳ ಹೋರಾಟದ ನಂತರ ಉದಮ್ ಸಿಂಗ್ ಮೈಕೆಲ್​ನನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದ. ಡಯರ್ ನನ್ನು ಹತ್ಯೆಗೈದನಂತರ ಉದಂಸಿಂಗ್ ರನ್ನು ತಕ್ಷಣ ಬಂಧಿಸಿತು.

ಉಧಮ್ ಸಿಂಗ್ ಸ್ವಲ್ಪವೂ ಹೆದರದೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ತಾನೇ ಕೃತ್ಯವನ್ನು ಒಪ್ಪಿಕೊಂಡ . ಅವನನ್ನು ಬ್ರಿಕ್ಸ್ಟನ್ ಜೈಲಿನಲ್ಲಿರಿಸಲಾಯಿತು. ಕಾನೂನು ರೀತಿಯಲ್ಲಿ ಮೊಕದ್ದಮೆ ನಡೆಯಿತು. ಜೂನ್ ೫ ರಂದು ಅವನ ಅಂತಿಮ ಹೇಳಿಕೆಯನ್ನು ಪಡೆಯಲಾಯಿತು.

ಈ ಸಮಯದಲ್ಲಿ ಉಧಮ್ ಸಿಂಗ್ : ‘ನನ್ನ ಜನಗಳ ರಕ್ತ ಕುಡಿದವನನ್ನ ನಾನು ಕೊಂದು ಹಾಕಿದೆ. ನನಗೀಗ ಆನಂದವಾಗಿದೆ, ಇದು ತಾಯ್ನಾಡಿಗಾಗಿ ನಾನು ಮಾಡಿದ ಕರ್ತವ್ಯ. ಪ್ರಾಣ ತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ..?’ “ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ಹಗೆ. ಅದನ್ನು ಅವನು ಬರಮಾಡಿಕೊಂಡ. ಅವನೇ ನಿಜವಾದ ತಪ್ಪಿತಸ್ಥ. ನನ್ನ ಜನಗಳ ತೇಜೋವಧೆ ಮಾಡಲು ಅವನು ಬಯಸಿದ್ದ ಹಾಗಾಗಿ ನಾನು ಅವನನ್ನು ಅಳಿಸಿಹಾಕಿದೆ. ಒಟ್ಟು 21 ವರ್ಷದಿಂದ ನಾನು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕೊನೆಗೂ ನಾನು ಯಶಸ್ವಿಯಾದುದ್ದಕ್ಕೆ ನನಗೆ ಆನಂದವಾಗಿದೆ. ನಾನು ನನ್ನ ದೇಶಕ್ಕಾಗಿ ಸಾಯುತ್ತಿದ್ದೇನೆ. ನನ್ನ ಜನರು ಬ್ರಿಟಿಷರ ಆಳ್ವಿಕೆಗೆ ತುತ್ತಾಗಿ ಭಾರತದಲ್ಲಿ ಸಾಯುತ್ತಿರುವುದನ್ನು ನೋಡಿದ್ದೇನೆ. ಇದನ್ನು ವಿರೋಧಿಸಿದ್ದೇನೆ, ಅದು ನನ್ನ ಕರ್ತವ್ಯ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನು ಸಿಗಲು ಸಾಧ್ಯ ನನಗೆ.” ಎಂಬ ದಿಟ್ಟ ಮಾತುಗಳನ್ನಾಡಿದ್ದ.

ಈ ಘಟನೆ ನಡೆದ ಮೂರು ತಿಂಗಳಲ್ಲೇ ಭಾರತಮಾತೆಯ ವೀರ ಪುತ್ರ ಉದಮ್ ಸಿಂಗ್ ಅವರನ್ನು 1940 ಜುಲೈ 31 ರಂದು ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು.ಅದು 30 ವರ್ಷಗಳ ಹಿಂದೆ ಮದನ್ ಲಾಲ್ ಡಿಂಗ್ರಾರನ್ನು ಗಲ್ಲಿಗೇರಿಸಿದ್ದ ಪೆಂಟೋವಿಲ್ಲೇ ಸೆರೆಮನೆಯಲ್ಲಿ ಸರ್ದಾರ್ ಉಧಮ್ ಸಿಂಗ್ನನ್ನು ಗಲ್ಲಿಗೇರಿಸಲಾಯಿತು. ವಿಶ್ವದೆಲ್ಲೆಡೆ ಅದರದೇ ಚರ್ಚೆಯಾಯಿತು. ಜರ್ಮನ್ ಪತ್ರಿಕೆಯೊಂದರಲ್ಲಿ ಅವನನ್ನು ಭಾರತದ ಸ್ವಾತಂತ್ರ್ಯದ ಕನಸಿನ ಹೊಸ ಬೆಳಕು ಎಂದು ಹೊಗಳಿ ಬರೆದರು.

ಭಾರತಾದ್ಯಂತ ಈ ಸುದ್ದಿಯನ್ನು ಕೇಳಿ, ಸ್ವಾತಂತ್ರ್ಯ ಹೋರಾಟಗಾರರು ಜನರು ಕಂಬನಿಗೆರೆದರು .

ನೇಣಿಗೇರಿದ ಸರ್ದಾರ್ ಉಧಮ್ ಸಿಂಗ್ ಅವರ ದೇಹವನ್ನು ಜೈಲಿನಲ್ಲಿ ಸಮಾಧಿ ಮಾಡಲಾಯಿತು. 1974 ರಲ್ಲಿ, ಅಂದಿನ ಪಂಜಾಬ್ ಮುಖ್ಯಮಂತ್ರಿ ಗ್ಯಾನಿ ಜೈಲ್ ಸಿಂಗ್ ಅವರು ಉಧಮ್ ಸಿಂಗ್ ಅವರ ಚಿತಾಭಸ್ಮವನ್ನು ತಮ್ಮ ಸ್ವಂತ ಪ್ರಯತ್ನದಿಂದ ಭಾರತಕ್ಕೆ ತಂದರು. ಚಿತಾಭಸ್ಮವನ್ನು ಭಾರತಕ್ಕೆ ಬಂದಾಗ ಹುತಾತ್ಮರಿಗೆ ದಕ್ಕುವ ಗೌರವದೊಂದಿಗೆ ಅದನ್ನು ಸ್ವಾಗತಿಸಲಾಯಿತು.

ಆಗಸ್ಟ್ 2, 1974 ರಂದು ಅಂತಿಮ ಸಂಸ್ಕಾರ ನಡೆಸಿ ಐದು ಅಸ್ಥಿಕಲಶಗಳಲ್ಲಿ ಚಿತಾಭಸ್ಮ ತುಂಬಿಸಲಾಗಿತ್ತು. ಒಂದು ಕಲಶದಲ್ಲಿದ್ದ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಮುಳುಗಿಸಿದರೆ, ಮತ್ತೊಂದನ್ನು ಹುತಾತ್ಮರ ಸ್ಮಾರಕವಾಗಿ ಜಲಿಯನ್ ವಾಲಾಬಾಗ್ ನಲ್ಲಿ ಇರಿಸಲಾಯಿತು. ಉಳಿದ ಮೂರು ಚಿತಾಭಸ್ಮದ ಕಲಶಗಳನ್ನು ಹಿಂದೂ, ಮುಸ್ಲಿಂ ಮತ್ತು ಸಿಕ್ಖರ ಪವಿತ್ರ ಸ್ಥಳಗಳಲ್ಲಿ ಸಮಾಧಿ ಮಾಡಲಾಯಿತು.

ಪರ್ಸ್​ನಲ್ಲಿ ಭಗತ್ ಸಿಂಗ್ ಭಾವಚಿತ್ರ!

ಸರ್ದಾರ್ ಉಧಮ್ ಸಿಂಗ್ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಪಣತೊಟ್ಟಿದ್ದ ಅವರು. ಚಿಕ್ಕ ವಯಸ್ಸಿನಲ್ಲೇ ಭಗತ್ ಸಿಂಗ್ ರಿಂದ ಭಾರಿ ಪ್ರಭಾವಕ್ಕೊಳಗಾಗಿದ್ದ ಅವರು ಸದಾ ತಮ್ಮ ಪರ್ಸ್ನಲ್ಲಿ ಭಗತ್ ಸಿಂಗ್ ಚಿತ್ರ ಇಟ್ಟುಕೊಂಡಿರುತ್ತಿದ್ದರು.

ಅಂದು ಧೀರ ಉದಮ್ ಸಿಂಗ್ ತೋರಿದ ದೈರ್ಯ ಸಾಹಸ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ಈ ಘಟನೆ ನಡೆದ ಏಳು ವರ್ಷಗಳ ನಂತರ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು. ಇಂದಿಗೂ ಸಹ ಅಮೃತಸರದಲ್ಲಿರುವ ಜಲಿಯನ್ ವಾಲಾಬಾಗ್ ಗೋಡೆಗಳ ಮೇಲಿರೋ ಗುಂಡಿನ ದಾಳಿಯ ಗುರುತುಗಳು ಸಾವಿರಾರು ಜನರ ಆರ್ತನಾದದ ಕಥೆ ಹೇಳುತ್ತಿವೆ.


  • ಡಾ.ಗುರು ಪ್ರಸಾದ ರಾವ್ ಹವಲ್ದಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW