ರಂಗದೊಳಗಿನ ಹೀಗೊಂದು ಕಥನ (ಭಾಗ- ೩)

ಸಾಹಿರಾ ಮಾತಿಲ್ಲದೆ ಸುಮ್ಮನೆ ಕೂತಿದ್ದಳು, ಆ ಹುಡುಗಿಯ ಮುಖದೊಳಗೆ ನೋವಿನ ನೆರಳು ಮೂಡುತ್ತಿದ್ದುದ್ದನ್ನು ನಾನು ಗಮನಿಸಿದೆ. ಮುಂದೇನಾಯಿತು, ರಂಗಭೂಮಿ ನಿರ್ದೇಶಕ, ಸಂಘಟನಾಕಾರರು ಆದ ಸ್ವಾಮಿ ಮಹಾಮನೆ ಅವರ ‘ರಂಗದೊಳಗಿನ ಹೀಗೊಂದು ಕಥನ’ ದ ಮೂಲಕ ಓದುಗರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ, ತಪ್ಪದೆ ಮುಂದೆ ಓದಿ…

ಸ್ಕ್ರಿಪ್ಟ್ ಹಿಡಿದು ಕುಳಿತಿದ್ದ ದಾಸಿ ಪಾತ್ರ ಮಾಡುತ್ತಿದ್ದ ಶಾಂತಮ್ಮ ನಮ್ಮ ಬಳಿಗೆ ಓಡೋಡಿ ಬರುತ್ತಾ…

‘ ಹೋ ಸಾಬ್ರು ಹುಡ್ಗಿನಾ ‘ ಎಂದು ಕೇಳಿದರು..

‘ ಅಲ್ಲ ‘ ಉತ್ತರಿಸಿದಳು ಸಾಹಿರಾ..

‘ ಮತ್ತೇ ‘…ಮರು ಪ್ರಶ್ನೆ ಪದ್ಮಜರದು..

‘ ನಾವು ಹಿಂದೂ..ಮರಾಠಿ..ದರ್ಜಿಗಳು…ಸಾಹಿರಾಳಿಂದ ಉತ್ತರ ಬಂದಿತು ‘…

‘ ಓಹೋ..ಕಾಯ್ರೆಕಟ್ಲಾಸ್ ಅಂಗಾರೆ..’ ಕುಹಕನಗೆ ನಕ್ಕನು ಪುರು ಪಾತ್ರ ಮಾಡುತ್ತಿದ್ದ ಶೇಷಗಿರಿ…

‘ ಏಯ್ ನಿಶೇಷ ಸುಮ್ಮಿರಯ್ಯ…ಯಾಕಯ್ಯ..ಏನಯ್ಯ ಅದು ನಿಂದು ತರ್ಲೆ ‘…ನಾನು ಶೇಷಗಿರಿಯನ್ನು ಗದರಿದೆ…

‘ very interesting ಅಲ್ವಾ..’ ಕುತೂಹಲದಿಂದ ನನ್ನತ್ತ ನೋಡಿದರು ಪದ್ಮಜಾ..ನಾನು ಸಾಹಿರಾಳತ್ತ ನೋಡಿದೆ.. ಅವಳು ಸೂಕ್ಷ್ಮ ಹುಡುಗಿ..ನನ್ನ ನೋಟದ ಹಿಂಗಿತವನ್ನು ಅರ್ಥ ಮಾಡಿಕೊಂಡಳು..

‘ ನಮೈಯಂಗೆ ಸಾಹಿರಾ ಭಾನು ಅಂದ್ರೆ ಸಾನೆ ಇಷ್ವಂತೆ..ನಾನೂವೆ ಸಾಹಿರಾ ಭಾನು ಅಂಗೇಯಾ ಒಳ್ಳೇ ಕಲಾವಿದೆ ಆಗ್ಬೇಕು..ಆಯಮ್ಮನಂಗೆ ತಮ್ಮಗಳ್ನೂ ಪೇಮಸ್ ಆಕ್ಟ್ರು ಮಾಡ್ಬೇಕು ಅಂತ್ಹೇಳಿ..ನಂಗೂ ಅವ್ರ ಹೆಸ್ರಾ ಮಡುಗುದ್ರಂತೆ ಅಕ್ಕಾ ನಮೈಯಾ…’ ತನ್ನ ಹೆಸರಿನ ವೃತ್ತಾಂತವ ಮೆಲು ದನಿಯಲಿ ತಡೆದು ತಡೆದೂ ನಿರೂಪಿಸಿದಳು ಸಾಹಿರಾ..
ಸಿಹಿಯಾದ ದನಿ..ಹೆಚ್ಚೆನಿಸುವ ಹಾವಭಾವ..ಭಾಷೆಯ ಬಗೆಗೆ ನೀವೇ ನಿರ್ಧರಿಸಿ.. ನನಗೆ ಯಾಕೋ ಇಷ್ಟವಾದಳು ಸಾಹಿರಾ..

ಅಷ್ಟರಲ್ಲಿ ಕಾರಂತರ ಕ್ಯಾಂಟೀನ್ ನಿಂದ ಕಾಫೀ ತಂದನು ಬ್ಯಾಕ್ ಸ್ಟೇಜಿನ ಉಲ್ಲಾಸ..

‘ ತಗೊ ಸಾಹಿರಾ ಕಾಫೀನಾ..’ ಎಂದರು ಪದ್ಮಜಾ..

‘ ಇಲ್ಲಕ್ಕಾ ನಾ ಕಾಫೀ ಕುಡಿಯಲ್ಲ ‘ ..ಅಂದಳು ಸಾಹಿರಾ..

‘ ಮತ್ತೆ..ಟೀ ಕುಡಿತಿಯಾ ‘ ಕೇಳಿದರು ಲಕ್ಷ್ಮಿ..

‘ ಹುಊಂ…ಇಲ್ಲ..ನಾ ಏನೂ ಕುಡಿಯಾಕ್ಕಿಲ್ಲ..ನಮ್ಮನೇಲಿ ಇವೆಲ್ಲ ರೂಢಿಯಿಲ್ಲ..ಅದ್ಕೆ ನಂಗೆ ಬ್ಯಾಡ ಕಾಫಿ ಅಕ್ಕಾ ‘… ಎನ್ನುತ್ತಾ ಕಾಫಿಯ ನಿರಾಕರಿಸಿದಳು ಆ ಹುಡುಗಿ…

ನಾನು ಪದ್ಮಜಾ ಮತ್ತು ಲಕ್ಷ್ಮಿಯವರೆಡೆಗೆ ನೋಡಿದೆ…..

ನಿಶೇಷ ಬಾಯಿಬಿಟ್ಟನು…

ಶೇಷಗಿರಿಯ ಪ್ರಶ್ನೆ ‘ಮನೇಲಿ ಯ್ಯಾರ್ಯಾರಿದ್ದಿರಿ ‘..

‘ ನಾನು ಮತ್ತೇ ಅಜ್ಜಿ ಇದೀವಿ ಕಣಣ್ಣ…ಸಾಹಿರಾಳ ಉತ್ತರ..

‘ಮತ್ತೇ..ಅಪ್ಪ ..ಅಮ್ಮಾ…??? ‘ ಕೀಲಿಸಿದನು ಶೇಷಗಿರಿ..

ಕಾಫೀ ಕುಡಿಯುತ್ತಿದ್ದ ಶಂಕ್ರಪ್ಪನವರು ‘ ಸಾ ಅದೊಂದು ದೊಡ್ಕತೆ ಬುದ್ದಿ ‘.. ಅಂತ್ಹೇಳಿ ಮಾತು ಮುಂದುವರಿಸಲು ಕಾಫಿ ಲೋಟವನ್ನು ನೆಲದ ಮೇಲಿಟ್ಟು ..ನನ್ನ ಮುಂದೆ ಕುಳಿತರು…
ಆ ಹುಡುಗಿಯ ಮುಖದೊಳಗೆ ನೋವಿನ ನೆರಳು ಮೂಡುತ್ತಿದ್ದುದ್ದನ್ನು ನಾನು ಗಮನಿಸಿ…

‘ಶಂಕ್ರಪ್ಪನವರೇ..ಈಗ ಅದೆಲ್ಲ ಬೇಡ ಬಿಡಿ..ಏಯ್ ನಿಶೇಷ ..ನಿಂಗೆ ಸುಮ್ನಿರಕ್ಕಾಗಲ್ವೇನಯ್ಯಾ..’ ಎಂದ್ಹೇಳುತ್ತಾ ..ಮತ್ತೆ ಸಾಹಿರಾ ಕಡೆ ನೋಡಿದೆ..ಅವಳು ಅದೇಕೊ ಮೌನವಹಿಸಿದ್ದಳು..

ಅವಳ ಸನಿಹ ಬಂದು ಕುಳಿತ ಪದ್ಮಜಾ ..ಸಾಹಿರಾಳ ತಲೆ ನೇವರಿಸತೊಡಗಿದರು..

ತಲೆಬಗ್ಗಿಸಿ ಹಿಮಗಡ್ಡೆಯಂತೆ ಕುಳಿತ್ತಿದ್ದಳು ಸಾಹಿರಾ..

ಲಕ್ಷ್ಮಿಯೂ ಸಹ ಸಾಹಿರಾಳ ಬಳಿಗೆ ಬಂದು ಅವಳ ಬೆನ್ನ ಮೇಲೆ ಕೈಯಿಟ್ಟರು…..

ಸಾಹಿರಾ…ಬಿಕ್ಕಳಿಸತೊಡಗಿದಳು…!!!???!!!

ಮುಂದುವರೆಯುವುದು…

ಹಿಂದಿನ ಸಂಚಿಕೆಗಳು:


  • ಸ್ವಾಮಿ ಮಹಾಮನೆ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading