ಮೂಕವೇದನೆ – ವಿಕಾಸ್. ಫ್. ಮಡಿವಾಳರ

ಕೆಲ ಭ್ರಷ್ಟಾಚಾರಿಗಳ ಸ್ವಾರ್ಥಕ್ಕೆ ಎಷ್ಟೋ ಯುವಕರ ಕನಸ್ಸು ಭಗ್ನವಾಗುತ್ತಿದೆ. ಕಷ್ಟ ಪಟ್ಟು ಓದುವ ಎಷ್ಟೋ ವಿದ್ಯಾರ್ಥಿಗಳ ಬದುಕು ಕನಸ್ಸಾಗಿಯೇ ಉಳಿದಿದೆ. ಇದಕ್ಕೆ ಅಂತ್ಯ ಯಾವಾಗ ಗೊತ್ತಿಲ್ಲ. ವಾಸ್ತವದ ಕಾಡು ಸತ್ಯವನ್ನು ವಿಕಾಸ್. ಫ್. ಮಡಿವಾಳರ ಅವರು ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಇಳಿ ಸಂಜೆಯ ವೇಳೆಯಲ್ಲಿ ಹೊಲದ ಕೆಲಸ ಮುಗಿಸಿ ಹಾಗೆ ನಮ್ಮ ಪರಿಚಯಸ್ಥ ಅಣ್ಣನ ಜೊತೆ ಹರಟೆ ಹೊಡೆಯುತ್ತಾ ಕೂತಿದ್ದೆ. ಕಾಲ ಹರಣಕ್ಕೆ ಶುರುವಾದ ಮಾತು ಸಮಾಜದ ಸಮಸ್ಯೆಯ ಬಗ್ಗೆ ಚರ್ಚಿಸುವಷ್ಟು ಬೆಳೆಯಿತು. ಹಾಗೆ ಸುಮ್ಮನೆ ” ಇತ್ತೀಚಿಗೆ ನಮ್ಮ ಯುವಕರು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ ” ಅಂದೆ. ಅದಕ್ಕೆ ಆತ “ಭ್ರಷ್ಟಾಚಾರ ಮತ್ತು ಹಗರಣಗಳು ನಿಂತರೆ ಯಾರು ಬೇಕಾದರೂ ಸಾಧನೆ ಮಾಡಬಹುದು” ಅಂತ ಹೇಳಿದ. ಅವನ ಮಾತುಗಳಲ್ಲಿ ನಗ್ನ ಸತ್ಯವಿತ್ತು. ಅವನ ಮುಖದಲ್ಲೊಂದು ವೇದನೆ, ಆ ವೇದನೆಯನ್ನು ಮುಚ್ಚಿಡುವಂತ ನಗು. ಆಳೆತ್ತರದ ಯುವಕನೊಬ್ಬ ಹಸುವಿನ ಶಗಣಿ ಬಳಿಯುತ್ತ ಸಮಾಜದ ಸಮಸ್ಯೆಗಳಿಗೆ ಧ್ವನಿ ನೀಡುತ್ತಿದ್ದ. ಆ ಧ್ವನಿಯಲ್ಲಿ ಒಂದು ಗಾಂಭೀರ್ಯವಿತ್ತು, ಸತ್ಯವಿತ್ತು. ಆ ಸತ್ಯದ ಹುಡುಕಾಟದಲ್ಲಿ ಅವನ ಬದುಕಿನ ಕತೆಯನ್ನು ಕೇಳಲು ನನ್ನ ಮನಸ್ಸು ಚಡಪಡಿಸಿತ್ತು.

ಹಳ್ಳಿಯ ಜೀವನವೆ ಹಾಗೆ, ಇಲ್ಲಿ ಓದಿಗಿಂತ ದುಡಿಯುವವರಿಗೆ ಬೆಲೆ ಜಾಸ್ತಿ. ಸೂರ್ಯ ಹುಟ್ಟೊ ಮುಂಚೆ ಎದ್ದು, ಎತ್ತುಗಳನ್ನ ಹೊಲಕ್ಕೆ ಹೊಡೆದು ದುಡಿಯುತ್ತಿದ್ದರೆ ಸಂಜೆಯವಾಗಯ್ತು ಅಂತ ಗೊತ್ತಾಗುವುದೆ ಇಲ್ಲ. ಊರಲ್ಲೊಂದು ಸಣ್ಣ ಶಾಲೆ, ಸಂಜೆ ಶಾಲೆಯಿಂದ ಬಂದ ಮಕ್ಕಳು ಕೊಟ್ಟಿಗೆಗೆ ಹೋಗಿ ಆಕಳಿನ ಹಾಲು ಹಿಂಡಿ, ಸಗಣಿ ತಗೆದು ಹೊಲಮನೆ ಕೆಲಸ ಮಾಡಿದ ಮೇಲೆಯೆ ಮನೆಯೊಳಗೆ ಕಾಲಿಡುತ್ತಾರೆ. ಅಳಿದುಳಿದ ಸಮಯ ಆ ಮನೆ ಈ ಮನೆಗೆ ಸುತ್ತಾಡಿದರೆ ರಾತ್ರಿ ಊಟದ ಸಮಯವಾಗುತ್ತದೆ. ಬೆಳಗ್ಗೆ ಎದ್ದರೆ ಶಾಲೆ ಬಾ ಬಾ ಅಂತ ಕರೆಯುತ್ತದೆ.

ಹರೀಶ್ (ಹೆಸರು ಬದಲಾಯಿಸಲಾಗಿದೆ ) ಇಂತಹ ಪರಿಸರದಲ್ಲಿ ಬೆಳೆದು ಹಾಗೋ ಹೀಗೊ ಮಾಡಿ ಎಸ್.ಎಸ್.ಎಲ್.ಸಿ ಪಾಸ್ ಮಾಡಿದ. ದೊಡ್ಡ ಕಾಲೇಜಿನಲ್ಲಿ ಓದಬೇಕೆಂಬ ಆಸೆಯಿತ್ತು ಆದರೆ ಮನೆಯ ಪರಿಸ್ಥಿತಿ ಸರಿ ಇರಲಿಲ್ಲ. ಅಲ್ಲೆ ಹತ್ತಿರದಲ್ಲಿರೊ ಗವರ್ನಮೆಂಟ್ ಕಾಲೇಜಿನಲ್ಲಿ ಪಿ.ಯು.ಸಿ ಓದಿದ. ಕಾಲ ಕಳೆಯಿತು, ಡಿಗ್ರಿ ಮುಗಿಯಿತು. ಹರೀಶನ ತಂದೆ “ನನಗೆ ವಯಸ್ಸಾಯಿತು, ಮನೆ ಜವಾಬ್ದಾರಿಯನ್ನ ನೀವೇ ನೋಡಿಕೊಳ್ಳಿರಿ ” ಅಂತ ಹೇಳಿದರು. ಹರೀಶನ ಅಣ್ಣ ಹೊಲಮನೆ ನೋಡ್ಕೊತೇನಿ ಅಂತ ಹೇಳಿದ. ಅದಕ್ಕೆ ಹರೀಶ ಬೆಂಗಳೂರು ಕಡೆ ಕಾಲು ಬೆಳೆಸಿದ.

ಫೋಟೋ ಕೃಪೆ : google

ಬೆಂಗಳೂರಿಗೆ ಬಂದ ಮೇಲೆ ಹರೀಶನಿಗೆ ತಕ್ಕ ಕೆಲಸ ಸಿಗಲಿಲ್ಲ. ಆರು ತಿಂಗಳು ಒಂದು ಕಂಪನಿಯಲ್ಲಿ ಕೆಲಸ ಮಾಡಿದರೆ, ಇನ್ನೂ ಆರು ತಿಂಗಳು ಬೇರೆ ಕಂಪನಿಯಲ್ಲಿ ಕೆಲಸ ಮಾಡಬೇಕಾಗಿತ್ತು. ಸಿಗೊ 15, 000 ರೂ ಸಂಬಳದಲ್ಲಿ ಮನೆ ಬಾಡಿಗೆ, ಊಟಕ್ಕೆ ಅಂತ 8,000 ರೂಪಾಯಿ ಖರ್ಚಾಗುತ್ತಿತ್ತು. ಅಳಿದು ಉಳಿದ ದುಡ್ಡು ಮನೆ ಸಾಲ ಆ ಖರ್ಚು ಈ ಖರ್ಚು ಅಂತ ಖಾಲಿ ಆಗ್ತಾ ಇತ್ತು.

ನಾಲ್ಕೈದು ವರ್ಷ ಕಷ್ಟಪಟ್ಟು ದುಡಿದ್ರೂ ಮನೆ ಸಾಲ ತಿರಲಿಲ್ಲ. ಕರೋನ ಬೇರೆ ಬಂತು. ಹರೀಶ ಬೆಂಗಳೂರಿನ ಸಹವಾಸ ಸಾಕು ಅಂತ ಕೈ ಮುಗಿದು ಹಳ್ಳಿ ಕಡೆ ನಡೆದ. ಹಳ್ಳಿಯಲ್ಲಿ ಒಂದು ವರ್ಷ ಕಳೆದ ಮೇಲೆ ಏನಾದ್ರು ಮಾಡಬೇಕು ಅಂತ ಆಸೆ ಆಯ್ತು. ಗವರ್ನಮೆಂಟ್ ಕೆಲಸ ಸಿಕ್ರೆ ತಮ್ಮ ಕಷ್ಟ ನಿವಾರಣೆಯಾಗುತ್ತದೆ ಅಂದುಕೊಂಡು ಓದಬೇಕು, ಪೊಲೀಸ್ ಆಗಬೇಕು ಅಂತ ಕನಸು ಕಾಣೋಕೆ ಶುರುಮಾಡಿದ.

ನಾಲ್ಕೈದು ವರ್ಷವಾದ ಮೇಲೆ ದುಡಿದ ಕೈಗಳಿಂದ ಬುಕ್  ಹಿಡಿದು ಓದುವುದು ತುಂಬಾ ಕಷ್ಟವೆನಿಸಿತು. ಕೋಚಿಂಗ್ ತಗೆದುಕೊಳ್ಳಲು ಹಣವಿರಲಿಲ್ಲ. ಹೊಲದಲ್ಲಿದ್ದ ದನದ ಕೊಟ್ಟಿಗೆಯ ಮೂಲೆಯಲ್ಲಿ ಸಣ್ಣ ರೂಮ್ ಮಾಡಿಕೊಂಡು ಓದತೊಡಗಿದ. ಮೊದಮೊದಲು ಓದುವಾಗೆಲ್ಲ ತಲೆ ಮಬ್ಬು ಹಿಡೀತಾ ಇತ್ತು. ಎಷ್ಟೋ ಸಾರಿ ಬಿಟ್ಟು ಬಿಡಬೇಕು ಅಂತ ಅನಿಸ್ತಾ ಇತ್ತು. ಆದರೆ ಹರೀಶ ತನ್ನ ಛಲ ಬಿಡಲಿಲ್ಲ. ನಿದ್ದೆ ಬಂದಾಗಲೆಲ್ಲ ಮುಖಕ್ಕೆ ನೀರು ಹೊಡ್ಕೊಂಡು ಮತ್ತೊಮ್ಮೆ ಓದೋಕೆ ಶುರು ಮಾಡ್ತಾ ಇದ್ದ. ಒಂದು ವರ್ಷ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಹಗಲು ರಾತ್ರಿ ಓದಿ ಪಿ.ಎಸ್.ಐ ಪರೀಕ್ಷೆ ಬರೆದ. ಆದರೆ ನಾಲ್ಕು ಮಾರ್ಕ್ಸ್ ನಲ್ಲಿ ಫೇಲ್ ಆದ.

ಫೋಟೋ ಕೃಪೆ : google

ರಿಸಲ್ಟ್ ನೋಡಿ ತುಂಬಾ ಬೇಸರವಾಯ್ತು. ಇದು ತನ್ನಿಂದ ಸಾಧ್ಯವಿಲ್ಲ ಅಂತ ಅನಿಸಿತ್ತು. ಆದರೆ ಹರೀಶನ ಅಣ್ಣ ಇನ್ನೊಮ್ಮೆ ಪರೀಕ್ಷೆ ಬರಿ ನಿನ್ನ ಕಡೆ ಆಗುತ್ತೆ ಅಂತ ಹುರಿದುಂಬಿಸಿದ. ಹರೀಶ ಆಗಿದ್ದು ಆಗಲಿ ಅಂತ ಮತ್ತೊಮ್ಮೆ ಪರೀಕ್ಷೆ ಬರೆಯುವ ಅಂತ ನಿರ್ಧರಿಸಿದ. ದಿನಕ್ಕೆ 8-10 ತಾಸು ಓದಿ ಪರೀಕ್ಷೆ ಕೂಡ ಬರೆದ. ಪರೀಕ್ಷೆ ಪಾಸ್ ಆಗುತ್ತೆ, ನಾನು ಪಿ.ಎಸ್.ಐ ಆಗ್ತೇನಿ ಅಂತ ಖುಷಿಯಲ್ಲಿದ್ದ. ಆದರೆ ವಿಧಿಯಾಟ ಬೇರೆ ಇತ್ತು. ಪಿ.ಎಸ್.ಐ ಪರೀಕ್ಷೆಯಲ್ಲಿ ಹಗರಣಗಳಿಗೆ ಹರೀಶ ಸೆಲೆಕ್ಟ್ ಆಗಲಿಲ್ಲ. ಪಟ್ಟ ಕಷ್ಟಕ್ಕೆ ಬೆಲೆ ಸಿಗಲಿಲ್ಲ.

ಇಂದಿಗೂ ಹರೀಶ ಪಿ.ಎಸ್.ಐ ಪರೀಕ್ಷೆ ಕರಿಯಬಹುದು… ಪಿ.ಎಸ್.ಐ ಆಗಬಹುದು… ಎಂಬ ಭರವಸೆಯಲ್ಲಿ ಇದ್ದಾನೆ. ದನದ ಕೊಟ್ಟಿಗೆಯ ಸಣ್ಣ ರೂಮಿನಲ್ಲಿ ಓದುತ್ತಾ ಇದ್ದಾನೆ. ಅವನ ತಂದೆ ತಾಯಿ ನನ್ನ ಮಗ ಸಾಧನೆ ಮಾಡುತ್ತಾನೆ ಅಂತ ಕಾಯ್ತಾ ಇದ್ದಾರೆ. ಸಂಬಂಧಿಕರು ಅವನ ಸೋಲನ್ನು ನೋಡಲು ಹಾತೋರೆಯುತ್ತಿದ್ದಾರೆ. ಹರೀಶನಿಗೆ ಆದ ಅವಮಾನಗಳನ್ನು ಎದುರಿಸುತ್ತ ನನಗೂ ಒಳ್ಳೆ ದಿನ ಬರುತ್ತೆ ಅಂತ ಕನಸು ಕಾಣ್ತಾ ಇದ್ದಾನೆ.

ಅದೆಷ್ಟೊ ಆಕಾಂಕ್ಷೆಗಳು ತಾವು ಮಾಡುತ್ತಿರೊ ಕೆಲಸಗಳನ್ನ ಬಿಟ್ಟು ಮನೆಯ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ, ಏನೊ ಸಾಧಿಸಬೇಕೆಂಬ ಛಲದಲ್ಲಿ ಸ್ಪರ್ಧಾ ಜಗತ್ತಿಗೆ ಕಾಲಿಡುತ್ತಾರೆ. ಈ ವರ್ಷ ಆಗದಿದ್ರೂ ಮುಂದಿನ ವರ್ಷ ಆಗುತ್ತೆ ಅಂತ ಕಷ್ಟ ಪಟ್ಟು ಓದುತ್ತಾರೆ. ಆದರೆ ಅವರ ಕನಸುಗಳಿಗೆ ಎಳ್ಳು ನೀರು ಬಿಟ್ಟು ಅವರ ಬದುಕಿಗೆ ಮುಳ್ಳಾಗುವುದು ಸ್ಪರ್ಧಾ ಜಗತ್ತಿನಲ್ಲಿ ಆಗುವ ಹಗರಣಗಳು. ಕೆಲ ಭ್ರಷ್ಟಾಚಾರಿಗಳ ಸ್ವಾರ್ಥಕ್ಕೆ ಆಗುವ ಮೋಸಗಳಿಂದಾಗಿ ಹಲವಾರು ಆಕಾಂಕ್ಷೆಗಳ ಬದುಕು ಬೀದಿಗೆ ಬರುತ್ತವೆ. ಹೀಗೆ ಆದ ಹಗರಣಗಳಿಂದ ತಮ್ಮ ಕನಸುಗಳನ್ನು ಹಾಳು ಮಾಡಿಕೊಂಡ ಅದೆಷ್ಟೊ ಆಕಾಂಕ್ಷೆಗಳ ಬದುಕಿನ ಮುಖವೇದನೆಗೆ ಹರೀಶನ ಕಥೆ ಒಂದು ಉದಾಹರಣೆಯಗಿದೆ.


  • ವಿಕಾಸ್. ಫ್. ಮಡಿವಾಳರ

2 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW