ವಿಜ್ಞಾನಿ, ಲೇಖಕರಾದ ಪ್ರಸನ್ನ ಸಂತೇಕಡೂರು ಅವರ “ಸು” ಕಾದಂಬರಿಯ ಕಥೆ, ಅದರ ಹುಟ್ಟು, ಬೆಳವಣಿಗೆ ಮತ್ತು ಅದರ ಜನಪ್ರಿಯತೆಯ ಬಗ್ಗೆ ಹೇಳಿದಾಗಿನಿಂದ ಓದುವ ಕುತೂಹಲವಂತೂ ಇತ್ತು. ಲೇಖಕಿ ಸುಮಾ ಭಟ್ ಅವರು ಈ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಶೀರ್ಷಿಕೆ: ಸು
ಲೇಖಕರು: ಪ್ರಸನ್ನ ಸಂತೇಕಡೂರು
ಮುದ್ರಣ: ೨೦೨೦
ಪ್ರಕಾಶಕರು: ಸಂವಹನ
ಬೆಲೆ: ೭೫
ಪುಟಗಳು: ೮೦
ಅರ್ಬುದ….ಕ್ಯಾನ್ಸರ್ ಇಂತಹಾ ಹೆಸರುಗಳಿಂದ ಗುರುತಿಸಲ್ಪಡುವ ಖಾಯಿಲೆಯೊಂದು ಮನುಷ್ಯನನ್ನು ತನ್ನ ಕಂಬಂಧ ಬಾಹುಗಳಲ್ಲಿ ತೆಗೆದುಕೊಳ್ಳುತ್ತಲೇ ಸಾಗಿರುವುದು ಇಂದಿನ ದಿನಗಳಲ್ಲಿ ಬಹು ಚರ್ಚಿತ ವಿಷಯ. ಮನುಜ ಕುಲದ ಮಾರಣ ಹೋಮಕ್ಕೆ ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಿಗಳೇ ಹೆಚ್ಚು ಸಮಿತ್ತುಗಳಾಗುತ್ತಿದ್ದಾರೆ. ಇಂತಹಾ ಕ್ಯಾನ್ಸರ್ ರೋಗದ ಗುಣ ಲಕ್ಷಣಗಳು… ಅದರ ಮೇಲೆ ನಡೆಯುತ್ತಿರುವ ಸಂಶೋಧನೆಗಳು…ಅದರ ನಿರ್ಮೂಲನೆಗೆ ಪ್ರಪಂಚದಾದ್ಯಂತ ಶ್ರಮಿಸುತ್ತಿರುವ ವಿಜ್ಞಾನಿಗಳ ವೃಂದ…ಆ ರೋಗ ಹರಡುವ ದೇಹದ ವಿವಿಧ ಭಾಗಗಳು ಇವುಗಳ ಬಗ್ಗೆ ನಡೆದಿದ್ದ ಸಂಶೋಧನೆಗಳು ಮಾತ್ರವಲ್ಲದೇ ವಂಶವಾಹಿನಿಗಳು (Genes), ತಳಿಶಾಸ್ತ್ರ (Genetics), ವರ್ಣತಂತು (Chromosomes) ಮುಂತಾದ ವಿಜ್ಞಾನದ ವಿವಿಧ ಕ್ಷೇತ್ರ, ವಿಷಯಗಳು ಹೀಗೆ ಎಲ್ಲವೂ ಈ ಕಾದಂಬರಿಯಲ್ಲಿ ಅಡಗಿದೆ.
ಲೇಖಕರನ್ನು ನಾನು ಇತ್ತೀಚೆಗೆ ಭೇಟಿಯಾದಾಗ ಅವರು ಸಂಕ್ಷಿಪ್ತವಾಗಿ “ಸು” ಕಾದಂಬರಿಯ ಕಥೆ, ಅದರ ಹುಟ್ಟು, ಬೆಳವಣಿಗೆ ಮತ್ತು ಅದರ ಜನಪ್ರಿಯತೆಯ ಬಗ್ಗೆ ಹೇಳಿದಾಗಿನಿಂದ ಓದುವ ಕುತೂಹಲವಂತೂ ಇತ್ತು. ಆದರೆ ಅದಕ್ಕೆ ಸರಿಯಾದ ಸಮಯ ಒದಗಿರಲಿಲ್ಲಾ, ಪುಸ್ತಕವೂ ನನ್ನ ಕೈ ಸೇರಿರಲಿಲ್ಲಾ. ಕಥೆ ಕೇಳಿದಾಗ ಕಥೆ ಹೇಗೆಲ್ಲಾ ಸರಿಯಬಹುದೆಂಬ ಕಲ್ಪನೆ ಸರಿಯಾಗಿ ನನ್ನಲ್ಲಿ ಮೂಡಿರಲಿಲ್ಲಾ, ಆದರೆ ಕಾದಂಬರಿಯ ಒಳಹೊಕ್ಕು ಓದಿದಾಗ ಕಥೆಯ ಉದ್ದೇಶ, ಕಾದಂಬರಿಗಾರನ ಭಾವನೆಗಳು ಇವುಗಳ ಬಗ್ಗೆ ಸ್ಪಷ್ಟ ನಿಲುವು ದೊರೆಯಿತು.ಇನ್ನು ಈ ಕಾದಂಬರಿ ಮಲೆಯಾಳಂ ಭಾಷೆಗೆ ಸಹಾ ತರ್ಜುಮೆಯಾಗಿ ಅಲ್ಲಿಯೂ ಹೆಚ್ಚಿನ ಪ್ರಶಂಸೆ ಗಳಿಸಿದೆ.

ಸು ಎಂಬ ಒಂದಕ್ಷರದ ಈ ಕಾದಂಬರಿಯಲ್ಲಿ ಸು ಎಂಬ ವ್ಯಕ್ತಿಯ ಪೂರ್ಣ ಹೆಸರು ಝವ್ ಜೊಂಗ್ ಸು. ಅವನು ತನ್ನ ಮಾನವೀಯತೆ, ವಿಜ್ಞಾನದ ಆಳವಾದ ಅಧ್ಯಯನ, ಕ್ಯಾನ್ಸರ್ ರೋಗದ ಬಗೆಗಿನ ವಿಶಿಷ್ಟ ಸಂಶೋಧನೆ, ಅವನು ತನ್ನ ಕಾರ್ಯರಂಗಕ್ಕೆ ನೀಡಿದ ಕೊಡುಗೆ, ನಿಸ್ವಾರ್ಥತೆಯಿಂದ ಇಡೀ ಕಾದಂಬರಿಯ ಉಸಿರಾಗಿದ್ದಾನೆ. ಚೀನಾದಲ್ಲಿ ಹುಟ್ಟಿ ತನ್ನ ಜೀವನ ಪಯಣದಲ್ಲಿ ಹಲವೆಡೆ ಸಂಚರಿಸುವ ಸು ಮತ್ತು ಭಾರತದ ಶಿವಮೊಗ್ಗದ ಪ್ರಕಾಶ ಇಬ್ಬರೂ ಅಮೇರಿಕಾ ಸಂಸ್ಥಾನದ ಪ್ರಸಿದ್ಧ ರಿಚ್ಮಂಡ್ ನಗರದ ವಿಶ್ವವಿದ್ಯಾನಿಲಯದ ಪ್ರಯೋಗಾಲಯದಲ್ಲಿ ಸಂಧಿಸುತ್ತಾರೆ. ಕಾದಂಬರಿಯಲ್ಲಿ ಸು ಮತ್ತು ಪ್ರಕಾಶನ ಬಾಲ್ಯ ಮತ್ತು ಗುರಿಗಳು, ಸಾಧನೆಗಳು ಇವುಗಳ ಬಗ್ಗೆ ಸಮಾನಾಂತರವಾಗಿಯೇ ಲೇಖಕರು ಹೇಳುತ್ತಾ ಸಾಗುತ್ತಾರೆ.
ಸು ಹುಟ್ಟಿ ಬೆಳೆದದ್ದು ಚೀನಾದ ಚೀಡಾಂಗ್ ಸಮೀಪದ ಯಾಂಗ್ ಜೀ ನದಿ ತೀರದ ಚಿಕ್ಕ ಹಳ್ಳಿಯಲ್ಲಿ, ಬಾಲ್ಯದ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸುತ್ತಾನೆ. ಸು ಕಾಲೇಜು ವಿದ್ಯಾಭ್ಯಾಸಕ್ಕೆ ಶಾಂಘಾಯ್ ಮಹಾನಗರಕ್ಕೆ ತೆರಳಿ ನಂತರ ಚೀಡಾಂಗ್ ಗೆ ಮರಳಿ ಕಾಲೇಜಿನ ಉಪನ್ಯಾಸಕನಾಗಿ ಅಲ್ಲಿನ ರೈತನ ಮಗಳು ಚೆಲುವೆ ಮಿಯಾನ್ ಎಂಬ ಯುವತಿಯನ್ನು ಪ್ರೇಮಿಸಿ ಮದುವೆಯಾಗಿ ಗಂಡು ಮಗು ಪಡೆದು ಸಂತಸವಾಗಿದ್ದ. ಆದರೆ ಮಿಯಾನ್ ಗರ್ಭಕಂಠದ ಕ್ಯಾನ್ಸರ್(Cervical cancer) ರೋಗಕ್ಕೆ ಗುರಿಯಾಗಿ ಮರಣಿಸುತ್ತಾಳೆ. ಮಡದಿಯ ಮರಣದಿಂದ ಸು ಕ್ಯಾನ್ಸರ್ ರೋಗಕ್ಕೆ ಔಷಧ ಕಂಡು ಹಿಡಿಯಲು ನಿರ್ಧರಿಸಿದ, ಆದರೆ ನೊಂದು ಹೋದ ಮನ ಶಾಂತವಾಗಿಸಲು ಟಿಬೆಟ್ಟಿನ ರಾಜಧಾನಿ ಲ್ಹಾಸಾ ತಲುಪುತ್ತಾನೆ.
ಈ ಹಂತದಲ್ಲಿ ಸು ಬುದ್ಧ ತತ್ವಗಳಿಗೆ ಮಾರು ಹೋದ ಸು, ಟಿಬೆಟ್ಟಿನ ಹವಾಗುಣ, ಜನಜೀವನ ,ಟಿಬೆಟಿಯನ್ನರ ಅವರ ನಾಡಲ್ಲಿ ಬಂಧಿತರಾಗಿರುವ, ಆ ದುರ್ಗಮ ಹಾದಿ ಸು ಸವೆಸಿದ ಪಯಣವನ್ನು ಲೇಖಕರು ಓದುಗರಿಗೆ ವಿಭಿನ್ನವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸು ಟಿಬೆಟಿನ ಸಾಕ್ಯ ವಿಹಾರದ ತೇನ್ಸಿಂಗ್ ನೊರ್ಬು ಮಗಳು ನೊರ್ಝೋಮ್ ಎಂಬ ನೀಲಿ ಮಿಶ್ರಿತ ಹಸಿರು ಕಣ್ಣುಗಳ ಚೆಲುವೆಯಲ್ಲಿ ಅನುರಕ್ತನಾಗುತ್ತಾನೆ. ಆದರೆ ಅವಳೂ ಸಹಾ ದೊಡ್ಡ ಕರುಳಿನ ಕ್ಯಾನ್ಸರ್ (Large Intestine Cancer) ಬಲಿಯಾಗಿ ಅಸು ನೀಗುತ್ತಾಳೆ. ಇಲ್ಲಿ ಟಿಬೆಟಿಯನ್ನರು ವಿಚಿತ್ರ ಸಂಪ್ರದಾಯದಂತೆ ನೊರ್ಬುಳ ಅಂತ್ಯ ಸಂಸ್ಕಾರ ನಡೆಸಿದಾಗ, ಅವಳ ದೇಹದ ಮೂಳೆಗಳು ಮಾತ್ರ ಉಳಿಯುವುದರ ವಿವರಣೆ ನೀಡಲಾಗಿದೆ.
ತನ್ನ ಬಾಳಿನಲ್ಲಿ ಬಂದ ಆತ್ಮೀಯರಿಬ್ಬರು ಕ್ಯಾನ್ಸರ್ ತೆಕ್ಕೆಗೆ ಬಲಿಯಾದಾಗ ಸು ಧೃಢ ನಿರ್ಧಾರ ಮಾಡಿ ಬೆಲ್ಜಿಯಂನಲ್ಲಿ ಹತ್ತು ವರ್ಷ ಮೆದುಳಿನ ಕ್ಯಾನ್ಸರ್ ಮೇಲೆ ಸಂಶೋಧನೆ ನಡೆಸುತ್ತಾನೆ. ನಂತರ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ತನ್ನ ಸಂಶೋಧನೆ ಮುಂದುವರೆಸಿ ತನ್ನ ಶ್ರಮದಿಂದ ವಂಶವಾಹಿನಿ (Genes) ಯೊಂದನ್ನು ಕಂಡು ಹಿಡಿದು ಅದಕ್ಕೆ ಎಇಜಿ-೧ ಎಂದು ಹೆಸರಿಡುತ್ತಾನೆ. ನಂತರ ಸು ಚೀನಾದ ಸಂಬಂಧಿಕರ ಬಳಿ ಇದ್ದ ಮಗ ಡಾಂಗ್ ನನ್ನು ಅಮೇರಿಕಾಗೆ ಕರೆಸಿಕೊಂಡು ಓದಿಸಿ ಮದುವೆ ಮಾಡುತ್ತಾನೆ. ತಾನು ಮಾತ್ರ ನಿರಂತರವಾಗಿ ಕ್ಯಾನ್ಸರ್ ಸಂಶೋಧನೆಯಲ್ಲಿ ಹಗಲಿರುಳೆನ್ನದೆ ತೊಡಗಿಕೊಳ್ಳುತ್ತಾನೆ.
ಲೇಖಕರು ಚೀನಾದ ಸು ನ ಬಗ್ಗೆ ವಿವರಣೆ ನೀಡಿ ನಂತರ ಸಮಾನವಾಗಿ ಭಾರತ ದೇಶದ ಶಿವಮೊಗ್ಗದ ಹೊಸನಗರದ ಪ್ರಕಾಶನ ಬಗ್ಗೆ ವಿವರಿಸುತ್ತಾ ಸಾಗುತ್ತಾರೆ. ಪ್ರಕಾಶನ ತಂದೆ ಯಕೃತ್ತಿನ ಕ್ಯಾನ್ಸರ್(Liver Cancer) ನಿಂದ ಸಾವನ್ನಪ್ಪಿದ್ದರು. ಅವನ ತಾತ ಚೀನಾ ಯುದ್ಧದಲ್ಲಿ ಸಾವನ್ನಪ್ಪಿದ್ದು, ಹಿಮಾಲಯನ್ ಬ್ಲಂಡರ್ ಓದಿ ಚೀನಾದ ಮೇಲುಂಟಾದ ದ್ವೇಷ, ಅವನ ಗಾಯತ್ರಿ ಟೀಚರ್ ಹೇಳಿದ ಚೀನಾದವರ ಕ್ರೌರ್ಯದಿಂದ ಚೀನಾ ಮತ್ತು ಅಲ್ಲಿನವರ ಬಗೆಗೆ ಪ್ರಕಾಶನಿಗೆ ದ್ವೇಷವಿತ್ತು. ಶಿವಮೊಗ್ಗದಲ್ಲಿ ಪದವಿ ಗಳಿಸುವ ಪ್ರಕಾಶ ಮೈಸೂರಿನಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ನಂತರ ಮೈಸೂರಿನ ವಿವಿಯಲ್ಲಿ ಪಿ.ಎಚ್.ಡಿ ಕ್ಯಾನ್ಸರ್ ವಿಷಯದಲ್ಲಿ ಮಾಡುತ್ತಾನೆ. ಅವನು ಕ್ಯಾನ್ಸರ್ ಜೀವಕೋಶಗಳ ಮೇಲೆ ಮಾಡುತ್ತಿದ್ದ ಕೆಲಸ ಅವನ ಪ್ರತಿಭೆ ಗುರುತಿಸಿ, ಅವನಿಗೆ ಆನಂದ್ ಎಂಬುವರಿಂದ ಅಮೇರಿಕಾದ ರಿಚ್ಮಂಡ್ ನಗರದ ಹೆಸರಾಂತ ವಿವಿ ಯಲ್ಲಿ ಸಂಶೋಧನೆಗೆ ಆಹ್ವಾನ ದೊರಕುತ್ತದೆ.
ಅಮೇರಿಕಾದ ಆ ವಿಶ್ವವಿದ್ಯಾನಿಲಯದಲ್ಲಿ ಪ್ರಕಾಶ್ ತಾನು ದ್ವೇಷಿಸುವ ಚೀನಾ ದೇಶದವನಾದ ಸು ನನ್ನು ಸಂಧಿಸಿ ಅವನ ವಿಚಾರಧಾರೆ, ಕಾರ್ಯತತ್ಪರತೆ ಶ್ರಮಜೀವಿತದಿಂದ ಸು ನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ. ಸ್ನೇಹಿತರಾದ ಪ್ರಕಾಶ್ ಮತ್ತು ಸು ಅದೊಂದು ದಿನ ಸೌತ್ ಬೋಸ್ಟನ್ ಬಳಿ ಇರುವ ಹೆನ್ರಿಯಾಟ್ಟಾ ಲ್ಯಾಕ್ಸ್ ಸಮಾಧಿ ನೋಡಲು ಹೋಗುತ್ತಾರೆ. ಅದರ ವಿವರಣೆ ಹೇಳುವಾಗ ಲೇಖಕರು ಅವರ ಪಯಣದಲ್ಲಿ ನಡೆದ ಪಂಜಾಬಿ ದಂಪತಿಗಳ ಕಥೆ, ಆ ಸಮಾಧಿ ಇದ್ದ ದುರ್ಗಮ ಸ್ಥಳ ತಲುಪಿದ ಬಗೆ ಮುಂತಾದ ಹಲವು ಆಸಕ್ತಿಕರ ಘಟನೆಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಹೆನ್ರಿಯಾಟ್ಟಾ ಲ್ಯಾಕ್ಸ್ ಗರ್ಭಕಂಠದ ಕ್ಯಾನ್ಸರ್ ನಿಂದ ಅಸು ನೀಗಿದರೂ ಅವಳ ಅಂಗಾಂಶದಿಂದ ಪಡೆದ ಜೀವಕೋಶಗಳಾದ ಹೇಲಾ ಜೀವಕೋಶಗಳ ಮಹತ್ವ ಅದನ್ನು ಉಪಯೋಗಿಸಿಕೊಂಡು ಪೋಲಿಯೋಗೆ ಲಸಿಕೆ ಕಂಡುಹಿಡಿದಿದ್ದು ಮುಂತಾದವುಗಳ ಸವಿವರ ಕಾದಂಬರಿಯ ಪುಟಗಳಲ್ಲಿ ಸಿಗುತ್ತದೆ.

ಇನ್ನು ಸ್ನಾತಕೋತ್ತರ ಪದವಿ ಗಳಿಸುವಾಗ ಪ್ರಕಾಶ ಗೆಳೆಯ ತೇನ್ಜಿನ್ ಗೇಡನ್ ಇದ್ದ ಬೈಲುಕುಪ್ಪೆ ಸಂದರ್ಶಿಸಿದ್ದು, ಅಲ್ಲಿಯ ಬೌದ್ಧರ ಆಹಾರ ಪದ್ಧತಿ, ಇಲ್ಲಿ ನೆಲೆಸಿದರೂ ಟಿಬೆಟ್ ಸ್ವತಂತ್ರವಾಗಲು ಅವರು ಇಲ್ಲಿದ್ದು ಮಾಡುತ್ತಿದ್ದ ಕಸರತ್ತು ಮುಂತಾದ ವಿಷಯಗಳು ಇಲ್ಲಿ ಅನಾವರಣವಾಗುತ್ತದೆ. ಇವುಗಳ ಮಧ್ಯೆ ಕ್ಯಾನ್ಸರ್ ರೋಗದ ಬಗ್ಗೆ ಹಲವು ವರ್ಷ ಹಗಲಿರುಳೆನ್ನದೆ ಸಂಶೋಧನೆ ನಡೆಸಿದ ಸು ಯಕೃತ್ ಕ್ಯಾನ್ಸರ್ (Liver Cancer)ಗೆ ತುತ್ತಾಗಿ ವಿಷಯ ತಿಳಿದಾಕ್ಷಣ ಅವನ ಗೆಡ್ಡೆಯಲ್ಲಿದ್ದ ಜೀವಕೋಶಗಳನ್ನು ಸಂಶೋಧನೆಗೆ ಆನಂದ ಬಳಿ ಸು ಕಳಿಸುವುದನ್ನು ಓದುವಾಗ ಅವನ ಬಗ್ಗೆ ಒಂದೆಡೆ ಹೆಮ್ಮೆ ಮೂಡುತ್ತದೆ. ಕಾಕತಾಳೀಯವೆಂಬಂತೆ ಸು ಸಹಾ ಹೇಲಾ ಕ್ಯಾನ್ಸರಿಗೆ ತುತ್ತಾಗಿ ನರಳಿದ ರಿಚ್ಮಂಡ್ ನಗರದ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿಯ ಅದೇ ಬೆಡ್ ಮೇಲೆ ಮಲಗಿರುತ್ತಾನೆ.
ತನ್ನ ಕೊನೆ ದಿನಗಳನ್ನು ತನ್ನ ಮಾತೃಭೂಮಿ ಚೀನಾಗೆ ಬರುವ ಸು ತನಗೆ ಕ್ಯಾನ್ಸರ್ ಬಂದ ಮೂಲ ಹುಡುಕಿ ತನ್ನ ಹಳ್ಳಿಗೆ ಹೋಗುತ್ತಾನೆ. ಈ ಪ್ರಯತ್ನದಲ್ಲಿ ಸು ಮತ್ತೆ ತನ್ನ ಬಾಲ್ಯ ಕಳೆದ ಜಾಗಕ್ಕೆ ಹೋದಾಗ ಅವನಿಗೆ ತನಗೆ ಕ್ಯಾನ್ಸರ್ ಬಂದಿದ್ದು ಹೇಗೆಂದು ತಿಳಿಯುತ್ತದೆ. ಇದರೊಂದಿಗೆ ಸು ನಲ್ಲಿ ವಿಶೇಷವಾಗಿದ್ದ ವಿಷಯವೆಂದರೆ ಅವನಿಗೆ ಒಂದು ಕಣ್ಣು ನೀಲಿ ಮತ್ತೊಂದು ಹಸಿರು ಬಣ್ಣದ ಕಣ್ಣಿತ್ತು, ಇದನ್ನು ವೈಜ್ಞಾನಿಕವಾಗಿ ಹೇಟಿರೋಕ್ರೊಮಿಯಾ ಇರಿಡಮ್ ಎಂದು ಕರೆಯಲಾಗುತ್ತದೆ. ಅದೇ ರೀತಿ ಕಣ್ಣುಗಳಿದ್ದ ಬೆಕ್ಕಿನ ಮತ್ತು ಸು ನ ಒಡನಾಟದ ಚಿತ್ರಣವನ್ನು ಲೇಖಕರಿಲ್ಲಿ ಓದುಗನಿಗೆ ನೀಡುತ್ತಾರೆ.

ನಂತರ ಸು ಚೈನಾದಿಂದ ಅಮೇರಿಕಾಗೆ ತೆರಳಿ ಮಗನ ಸಂಸಾರ, ಗೆಳೆಯರನ್ನು ಕಂಡಿದ್ದು ಅವನ ಆತ್ಮಾವಲೋಕನ, ಸುನ ಕೊನೆಯ ದಿನಗಳು ಹೇಗಿದ್ದವು ಎಂಬುದರ ವಿವರಣೆ ಪುಸ್ತಕದಲ್ಲಿದ್ದು ಅದನ್ನು ಓದಿಯೇ ಅರ್ಥೈಸಿಕೊಳ್ಳಬೇಕು. ಹೇಲಾಳ ಸಮಾಧಿಯ ಮುಂದೆ ಸು ಮತ್ತು ಪ್ರಕಾಶ್ ನಿಂತಂತೆ…ಸು ನ ಸಮಾಧಿಯ ಮುಂದೆ ನಿಂತುಕೊಳ್ಳುವ ಪ್ರಕಾಶನ ಮನದಲ್ಲಿ ಮೂಡುವ ಭಾವನೆಗಳನ್ನು ಲೇಖಕ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ಕಳ್ಳೇಕಾಯಿ ಮೇಲೆ ಬರುವ ಶಿಲೀಂಧ್ರಗಳು ಮತ್ತು ಅದರಿಂದಾಗುವ ದುಷ್ಪರಿಣಾಮಗಳು ಮತ್ತು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕರುಳಿನ ಕರೆ ಚಲನಚಿತ್ರದ ಕಲ್ಪನಾ ಅಭಿನಯಿಸಿದ ಕಳ್ಳೇಕಾಯೀ ಕಳ್ಳೇಕಾಯೀ ಹಾಡಿನ ಉಲ್ಲೇಖ ಮುಂತಾದ ವಿವರಣೆಗಳು ಕಾದಂಬರಿಯಲ್ಲಿ ಚಂದವಾಗಿ ಮೂಡಿ ಬಂದಿದೆ.
ಸು ಭೇಟಿ ನೀಡಿದ ಟಿಬೆಟ್ ಹೇಗಿತ್ತು ಮತ್ತು ಟಿಬೆಟಿನ ಜನರ ವಸ್ತುಸ್ಥಿತಿ ವಿವರಣೆ ಕಾದಂಬರಿಯಲ್ಲಿ ಹೇಗೆ ಮೂಡಿ ಬಂದಿದೆ??? ಟಿಬೆಟಿಯನ್ನರಲ್ಲಿ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ಯಾವ ರೀತಿ ನಡೆಯುತ್ತದೆ??? ಶಿವಮೊಗ್ಗದ ಪ್ರಕಾಶ್ ಚೀನಿಯರನ್ನು ದ್ವೇಷಿಸಲು ಕಾರಣವಾದ ಅವನ ಬಾಲ್ಯದ ನೆನಪುಗಳೇನು???

ಪ್ರಕಾಶ್ ಓದುವ ಸಮಯದಲ್ಲಿ ಬೈಲುಕುಪ್ಪೆಗೆ ಭೇಟಿ ನೀಡಿದಾಗ ಆದ ಅನುಭವಗಳೇನು??? ಸು ಕಂಡು ಹಿಡಿದ ವಂಶವಾಹಿನಿಯ ವಿವರಗಳೇನು??? ಹೇಲಾಳ ಜೀವಕೋಶ ಮನುಕುಲಕ್ಕೆ ನೀಡಿರುವ ಅಪಾರ ಕೊಡುಗೆಯೇನು???
ಸು ತಾನು ಕ್ಯಾನ್ಸರ್ ರೋಗಕ್ಕೆ ತುತ್ತಾಗಲು ಕಾರಣವೆನೆಂದು ತನ್ನ ಮಾತೃಭೂಮಿ ಚೀನಾಗೆ ಹೋದಾಗ ಕಂಡು ಹಿಡಿದ ಬಗೆ ಹೇಗೆ??? ಹೇಟಿರೋಕ್ರೊಮಿಯಾ ಇರಿಡಮ್ ಇದ್ದ ಬೆಕ್ಕು ಮತ್ತು ಸು ನ ಬಾಂಧವ್ಯದ ಬಗ್ಗೆ ಕಾದಂಬರಿಯ ಪುಟಗಳು ಏನು ಹೇಳುತ್ತದೆ???
ಸುನ ಆತ್ಮಾವಲೋಕನ ಮತ್ತು ಅವನ ಕೊನೆಯ ದಿನಗಳು ಹೇಗೆ ಮೂಡಿ ಬಂದಿದೆ??? ಸು ತನ್ನ ಸಂಶೋಧನೆಗಳ ಮೂಲಕ ನೀಡಿದ ಕೊಡುಗೆಗಳಲ್ಲದೆ…ತಾನು ಕ್ಯಾನ್ಸರ್ ಗೆ ತುತ್ತಾದರೂ ತಾನು ಕ್ಯಾನ್ಸರ್ ಸಂಶೋಧನಾ ರಂಗಕ್ಕೆ ನೀಡಿದ ಮಹತ್ತರ ಕೊಡುಗೆಗಳೇನು???
ಹೇಲಾಳ ಜೀವಕೋಶಗಳಂತೆ ಸು ನ ಜೀವಕೋಶಗಳು ಯಾವ ರೀತಿ ಉಪಯೋಗವಾಯಿತು??? ಸು ನ ಸಮಾಧಿಗೆ ಪ್ರಕಾಶ ಭೇಟಿ ನೀಡಿದಾಗ ಅವನ ಮನದಲ್ಲಿ ಮೂಡುವ ಭಾವನೆಗಳೇನು??? ಚೀನಾದಿಂದ ಹಿಂದಿರುಗುವಾಗ ಪ್ರಕಾಶ್ ವಿಮಾನದಲ್ಲಿ ಯಾವ ಯಾವ ನೆನಪುಗಳಿಗೆ ಜಾರುವುದನ್ನು ಲೇಖಕರು ಓದುಗರಿಗೆ ನೀಡಿದ್ದಾರೆ??? ಈ ಕುತೂಹಲ ತಣಿಯಲು ಅರಿಯದ ವೈಜ್ಞಾನಿಕ ಮಾಹಿತಿಗಳೊಂದಿಗೆ ಚೀನಾ, ಟಿಬೆಟ್, ಅಮೇರಿಕಾ, ಭಾರತ ಮುಂತಾದ ದೇಶಗಳ ಹತ್ತು ಹಲವು ವಿಷಯಗಳನ್ನು ತಿಳಿಸೋ ಪ್ರಸನ್ನರವರ “ಸು“ ಕಾದಂಬರಿ ಓದಿ ನೋಡಿ.
ಲೇಖಕರು ಸ್ವತಃ ವಿಜ್ಞಾನಿಯಾದ ಕಾರಣದಿಂದ ಕಾದಂಬರಿಯ ಮೇಲೆ ಇಂತಹಾ ಹಿಡಿತ ದೊರಕಿತೋ ಇಲ್ಲಾ ಅವರು ಹತ್ತಿರದಿಂದ ಕಂಡ ವ್ಯಕ್ತಿಗಳ ಮತ್ತು ಒಡನಾಡಿಯಾಗಿದ್ದ ಪರಿಸರದಲ್ಲಿ ಹೆಚ್ಚು ಕಾಲ ಕಳೆದ ಕಾರಣ ಲೇಖಕ ಪ್ರಸನ್ನ ಅವರು ಈ ಕಾದಂಬರಿಯ ಮೇಲೆ ಪ್ರಭುತ್ವ ಸಾಧಿಸಿಲಾಯಿತೋ ಎಂಬುದನ್ನು ನನಗೆ ನಿರ್ಧರಿಸಲಾಗಲಿಲ್ಲಾ. ಆದರೆ ನಾನು ಮೆಚ್ಚುವ ಜೀವ ರಸಾಯನ ಶಾಸ್ತ್ರದ ಹಲವು ವಿಷಯಗಳು.
ಮಾನವತಾವಾದಿತನ…ನನಗೆ ಕುತೂಹಲವಿರುವ ಕ್ಯಾನ್ಸರ್ ಖಾಯಿಲೆಯ ಬಗೆಗಿನ ವಿಸ್ತೃತವಾದ ವಿಷಯಗಳ ವಿವರವಿದೆಯೆಂದೋ ಒಟ್ಟಿನಲ್ಲಿ ಈ ವರ್ಷದ ನನ್ನ ಓದಿನ ಮುಕ್ತಾಯ ಹಂತಕ್ಕೆ ಸಮೀಪಿಸಿದಾಗ ನನ್ನ ಓದಿಗೊಂದು ತೃಪ್ತ ಭಾವ ನೀಡಿದ ಪುಸ್ತಕವಿದು ಎಂದು ಹೇಳಿದರೆ ಅತಿಶಯವಲ್ಲಾ. ಈ ಪುಸ್ತಕ ಹಲವಾರು ಕಾರಣಕ್ಕೆ ಇಷ್ಟವೆನಿಸಿದೆ, ಹಾಗಾಗಿ ಇಂತಹ ಒಂದೇ ಕಾರಣಕ್ಕೆ ಇಷ್ಟವಾಯಿತೆಂದು ನನಗೆ ಹೇಳಲು ಸಾಧ್ಯವಾಗುತ್ತಿಲ್ಲ…ಆದರೆ ನೀವೂ ಓದಿ ನಿಮಗೇಕೆ ಇಷ್ಟವಾಯಿತೆಂದು ಹೇಳುತ್ತೀರಾ ನೋಡಿ….
- ಸುಮಾ ಭಟ್
